ಕವಿಗಳ ಮನದಳಲು
ರಸ್ತೆಗಳಿಗೆ ಸಾಹಿತಿಗಳ ನಾಮ
ಅಲ್ಲವೆ ಸರ್ವೇ ಸಾಮಾನ್ಯ
ರಾಜಕಾರಿಣಿಗಿದು ಕೊಟ್ಟರೂ ಹಿತ
ಇದಕೇನು ಕವಿಗಳ ಅಭಿಮತ?
ಶಾಕುಂತಲೆ, ಉಪಮೆಗಳೆನಗೆ ಸಾಕೆಂದ ಕಾಳಿದಾಸ
ನನ್ನ ಸಾಹಿತ್ಯಕಾಗದೆ ಆಭಾಸ ಎಂದರೆ ಭಾಸ
ಸಂನ್ಯಾಸಿಗೇಕೆ ಚಿಂತೆಯೆಂದರು ವೇದವ್ಯಾಸ
ಹಾಡೊಳು ಅಪಸ್ವರ ಬೇಡವೆಂದ ಕುಮಾರವ್ಯಾಸ
ವಚನಕಾರರಿಗಿದು ಸಲ್ಲದೆಂದರೆ ಬಸವ
ಬನವಾಸಿಯಿಂದೆನ್ನ ಬೇರ್ಪಡಿಸದಿರಿ ಎಂದ ಪಂಪ
ಭೀಮನ ಗದಾ ಚಳಕದಿಂದ ಬೆಂಗಳೂರಾ? ಕನಲಿದರೆ ರನ್ನ
ರಗಳೆ ಮಾಡುವ ನನಗೇಕೀ ಉಸಾಬರಿಯೆಂದ ಹರಿಹರ
ದಾಸರಿಗೆಂತ ಮೋಹವೆಂದರು ಕನಕರು
ಸಂತರಿಗೇಕೆ ಸನ್ಮಾನವೆಂದರೆ ಮೀರಾ,
ನನಗಿದು ಹಿಡಿಸದೆಂದಳು ವಾಣಿ
ಸ್ತ್ರೀ ಉನ್ನತಿಗಿದು ಮದ್ದಲ್ಲವೆಂದಳು ತ್ರಿವೇಣಿ
ಈ ವರಸೆ ಬೇಡವೆಂದರೆ ಭೈರಪ್ಪ
ಮಲೆನಾಡ ಕಂಪಿಲ್ಲವೆಂದರು ಕುವೆಂಪು
ಇದೆಂಥ ಪಿರಿಪಿರಿಯೆಂದರೆ ಕಡಲ ತೀರದ ಭಾರ್ಗವ
ಇದರೊಳೇನಿದೆ ಶ್ಯಾಣೆತನ? ಎಂದರು ಬೇಂದ್ರೆ
ಈ ಬಾಲಿಶ ತೊರೆದು ವಾಚಿಸೆಂದಿತು ಕವಿಗಣ.
-ಗುವಿಚರಾ
Rating