"ನನ್ನ" ಜನ ಮಾತ್ರ ನನ್ನ ಮಾನ ಪ್ರಾಣ ಧನ ???

"ನನ್ನ" ಜನ ಮಾತ್ರ ನನ್ನ ಮಾನ ಪ್ರಾಣ ಧನ ???

ಚಿಂತಕ ಡಿ. ಆರ್. ನಾಗರಾಜ್ ಕನ್ನಡಪ್ರಭದ ತಮ್ಮ "ವಾಗ್ವಾದ" ಅಂಕಣದಲ್ಲಿ ಬಹುಶಃ ಒಂದೆರಡು ದಶಕದ ಹಿಂದೆ ಬರೆದದ್ದಿದು: "(ಕನ್ನಡ ಸಂಶೋಧನೆಯ) ಈಗಿನ ನಿಜವಾದ ಸಮಸ್ಯೆ ಎಂದರೆ, ಸಂಶೋಧನಾಕಾಂಕ್ಷಿಗಳನ್ನು ತರಬೇತುಗೊಳಿಸುವ ಜತೆಗೆ ಅವರ ಮಾರ್ಗದರ್ಶಕರಿಗೂ ತರಬೇತು ನೀಡಬೇಕಾದ ಅಗತ್ಯ. ... ಮಾರ್ಗದರ್ಶಕರ ಅರ್ಹತೆಗಳನ್ನು ನಿಷ್ಠುರವಾಗಿ ಮೌಲ್ಯಮಾಪನ ಮಾಡುವ ಸ್ಥಿತಿಯೇ ಇಲ್ಲ. ... ಕರ್ನಾಟಕದ ವಿಶ್ವವಿದ್ಯಾಲಯಗಳಲ್ಲಿ ಇರುವ ಅನೇಕಾನೇಕ ಅಂಗೀಕೃತ ಪಿ‌ಎಚ್.ಡಿ., ಗೈಡ್‌ಗಳು ತಮ್ಮ ಇಡೀ ಜೀವಮಾನದಲ್ಲಿ ಒಂದು ಲೇಖನವನ್ನು ಬರೆದಿಲ್ಲ. ಇನ್ನು ಪುಸ್ತಕಗಳ ಮಾತು ದೂರವೇ ಆಯಿತು. ಈ ಮಂದಿಯನ್ನು ಕೂಡಾ ನಾವು ಹಂಗಿಸಿ ಫಲವಿಲ್ಲ. ಆಕಾಂಕ್ಷಿಗಳ ಒತ್ತಡಕ್ಕೆ ಶರಣಾಗಿ ಅರ್ಜಿಗಳ ಮೇಲೆ ಅವರು ರುಜು ಹಾಕ ಬೇಕಾಗುತ್ತದೆ. ಪರಸ್ಪರ ಅಸಹಾಯಕತೆಯ ವಿಷವರ್ತುಲದಲ್ಲಿ ಅಧ್ಯಾಪಕರು, ವಿದ್ಯಾರ್ಥಿಗಳು, ವಿಶ್ವವಿದ್ಯಾಲಯ ಎಲ್ಲವು ಬಿದ್ದು ನರಳುತ್ತಿವೆ." ('ಸಂಸ್ಕೃತಿ ಕಥನ' ಪುಟ-೬೮.)

ಈಗಲೂ ನಮ್ಮ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಯ ಮಟ್ಟ ಹೇಗಿದೆ ಎನ್ನುವುದರ ಬಗ್ಗೆ "ಜ್ಞಾನದ ವಿಜ್ಞಾನದ ಕಲೆಯೈಸಿರಿ ಸಾರೋದಯ ಧಾರಾನಗರಿ"ಯಲ್ಲಿನ ಕರ್ನಾಟಕ ವಿಶ್ವವಿದ್ಯಾಲಯಕ್ಕೆ "ವಿಶ್ವವಿನೂತನ ವಿದ್ಯಾಚೇತನ ಸರ್ವಹೃದಯ ಸಂಸ್ಕಾರಿ" ಎಂಬ ಘಟಿಕೋತ್ಸವ ಗೀತೆ ಬರೆದ ಕವಿ ಚೆನ್ನವೀರ ಕಣವಿಯವರಿಗೆ ಯಾರೇನೂ ಹೇಳಬೇಕಿಲ್ಲ. ಅರ್ಥಶಾಸ್ತ್ರ-ತಂತ್ರಜ್ಞಾನ-ವಿಜ್ಞಾನ-ಗಣಿತ

ಮುಂತಾದ "ಆಧುನಿಕ" ವಿಷಯಗಳ ಬಗ್ಗೆ ಕನ್ನಡದಲ್ಲಿ ಸಂಶೋಧನೆ ಆಗುತ್ತಿದೆಯೆ ಎನ್ನುವುದು ಯಾರಿಗಾದರೂ ಸಂದೇಹವೆ. ಕನ್ನಡದಲ್ಲಿ ಸಂಶೋಧನೆ ಅಂತೇನಾದರೂ ಆಗುತ್ತಿದ್ದರೆ ಅದು ಸಾಮಾಜಿಕ ಮತ್ತು ಸಾಹಿತ್ಯ-ಕಲೆ-ಸಂಸ್ಕೃತಿ ಇತ್ಯಾದಿಗಳಿಗೆ ಸಂಬಧಿಸಿದ ವಿಷಯಗಳ ಮೇಲೆಯೆ ಇರುತ್ತದೆ. ಆ ಸಂಶೋಧನೆಗಳ ಬಗ್ಗೆಯಾದರೂ ಸಾರಸ್ವತ ಲೋಕದಲ್ಲಿ ಗಂಭೀರ ಚರ್ಚೆ ಆಗುತ್ತಿದೆಯೆ ಎಂದರೆ ಆದೂ ಸಂದೇಹವೆ.

ಸಮಕಾಲೀನ ಸಂಶೋಧನೆಯ ದುಸ್ಥಿತಿ ಹೀಗಿರುವಾಗ, ಸಾಮಾಜಿಕ ಕೆಲಸದಲ್ಲಿ ತೊಡಗಿಸಿಕೊಂಡ ಒಬ್ಬ ಲೇಖಕ ಒಂದು ಸಂದೇಹದ ಎಳೆಯನ್ನು ಆಧರಿಸಿ ಬರೆದ ಸಂಶೋಧನೆ ಎನ್ನಬಹುದಾದ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಲು ಕವಿ ಕಣವಿಯಂತವರು ಒತ್ತಾಯಿಸುತ್ತಾರೆ ಮತ್ತು ಮುಟ್ಟುಗೋಲು ಹಾಕಿಕೊಂಡ ಸರ್ಕಾರದ ಕ್ರಮವನ್ನು ಸ್ವಾಗತಿಸುತ್ತಾರೆ ಎಂದರೆ ಅದಕ್ಕಿರಬಹುದಾದ ಒಂದೆ ಕಾರಣ, "ತಮ್ಮ ಜಾತಿಯ ಮೇಲ್ಗಾರಿಕೆಗೆ ಇದು ಸವಾಲು" ಎಂಬ "ಜಾತಿವಾದಿ ಕಾರಣ" ಮಾತ್ರ. ಆದರೆ ತಮ್ಮ ಜಾತಿವಾದವನ್ನು ಮಾತೆ ಮಹಾದೇವಿ, ಖಂಡ್ರೆಯರಂತೆ ಪ್ರಾಮಾಣಿಕವಾಗಿ ಒಪ್ಪಿಕೊಳ್ಳಲೂ ಅಗದ ಕಣವಿಯವರು ವಿಕ್ರಾಂತದ "ಮಲ್ಲಿ" ಜಾತಿಯ ದುರ್ವಾಸನೆಯಿಂದ ಕೂಡಿದ್ದಾರೆ ಎಂದು ಪತ್ರ ಬರೆಯುತ್ತಾರೆ!!!

ಕಣವಿಯವರು ಕಳೆದ ವಾರ ನಮ್ಮ ಪತ್ರಿಕೆಗೆ ಬರೆದ ಪತ್ರದಲ್ಲಿ, ನಮ್ಮ ಪತ್ರಿಕೆಯಲ್ಲಿಯೆ ಪ್ರಕಟವಾದ ಡಿ.ಎಸ್. ನಾಗಭೂಷಣ್‌ರವರ ಲೇಖನವೊಂದನ್ನು ಉಲ್ಲೇಖಿಸಿದ್ದಾರೆ. ಬಂಜಗೆರೆಯವರು ತಮ್ಮ "ಆನು ದೇವಾ ಹೊರಗಣವನು" ಪುಸ್ತಕವನ್ನು ಹಿಂತೆಗೆದುಕೊಂಡಿದ್ದಕ್ಕೆ ಕೊಟ್ಟ ಕಾರಣಗಳ ಪ್ರಾಮಾಣಿಕತೆಯ ಬಗ್ಗೆ ನಾಗಭೂಷಣರವರು ಆ ಲೇಖನದಲ್ಲಿ ಸಂದೇಹ ವ್ಯಕ್ತಪಡಿಸಿದ್ದರು. ಆದರೆ, ನಮ್ಮ ಕನ್ನಡನಾಡಿನ ಪ್ರಸಿದ್ಧ "ಡಿಬೇಟರ್‌ಗಳು" ಮಾಡುವಂತೆ, ಆ ಲೇಖನದಲ್ಲಿ ತಮಗೆ ಬೇಕಾದ ವಾದವನ್ನು ಮಾತ್ರ ಕಣವಿಯವರು ಉಲ್ಲೇಖಿಸಿದ್ದಾರೆ. ನಾಗಭೂಷಣ್‌ರವರು ಈ ಮುಂಚೆಯೆ ಆನು ದೇವಾದ ಬಗ್ಗೆ ವಿಕ್ರಾಂತ ಕರ್ನಾಟಕದಲ್ಲಿ ವಿಮರ್ಶಾತ್ಮಕ ಲೇಖನ ಬರೆದು, "ಬಂಜಗೆರೆಯವರ ಅಧ್ಯಯನದಲ್ಲಿ ಯಾವುದೋ ಒಂದು ಬಹುಮುಖ್ಯ ಆಯಾಮ ಪರಿಶೀಲನೆಯಿಂದ ತಪ್ಪಿಸಿಕೊಂಡಂತಿದೆ ಎಂದೆನ್ನಿಸದಿರದು. ಆದರೆ ಈ ಯಾವ ಕೊರತೆಯೂ ಬಂಜಗೆರೆಯವರ ವಾದದ ಆಶಯವನ್ನು ಅನುಮಾನಾಸ್ಪದಗೊಳಿಸಲಾರದು." ಎಂದು ಹೇಳಿದ್ದಾರೆ. ಅಷ್ಟಾದರೂ, ಈ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವರೆಲ್ಲೂ ಬೆಂಬಲಿಸಿಲ್ಲ. ಆದರೆ ನಾಗಭೂಷಣ್‌ರ ಆಶಯವನ್ನು ನಿರ್ಲಕ್ಷಿಸಿ ಅವರ ಲೇಖನದ ಒಂದು ವಾಕ್ಯವನ್ನು ತಮ್ಮ ವಾದದ ಸಮರ್ಥನೆಗೆ ಬಳಸಿಕೊಳ್ಳುವ ಕಣವಿಯವರದು ಡಿಬೇಟರ್‌ಗಳ ತಂತ್ರವಲ್ಲದೆ ಬೇರೆ ಆಗಲು ಸಾಧ್ಯವೆ?

ಯಾರಾದರೂ ಜಾತಿವಾದಿಗಳಾಗಿದ್ದರೆ ಅದಕ್ಕೆ ಕಾರಣ ಅವರಿಗೆ ತಮ್ಮ ಜಾತಿಯ ಬಗ್ಗೆ ಅಹಂಕಾರದಿಂದ ಪ್ರೇರಿತ ಹೆಮ್ಮೆ ಮತ್ತು ಜಾತಿಬಲದಿಂದ ತನ್ನಿಂತಾನೆ ಬರುವ ಕೆಲವು ಅನುಕೂಲಗಳು. ಈಗ ಹಿಂದುಳಿದವರು, ದಲಿತರೂ ಸಹ ಉಗ್ರ ಜಾತಿವಾದಿಗಳಾಗುತ್ತಿದ್ದರೆ ಅದಕ್ಕೂ ಕಾರಣ ದುರ್ಬಲ ವರ್ಗಗಳಿಗೆ ಕೊಡಲಾಗುತ್ತಿರುವ ಕೆಲವು ಸವಲತ್ತುಗಳೆ. ಆದರೆ, ದೇಶದಲ್ಲಿನ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಯ ರಭಸ ನೋಡಿದರೆ ಈ ಸವಲತ್ತುಗಳ ಆಯಸ್ಸು ಇನ್ನು ೨೦-೩೦ ವರ್ಷ ಇದ್ದರೆ ಹೆಚ್ಚು. ಹಾಗಾಗಿ, ಇವರ ಜಾತಿವಾದ ತಾತ್ಕಾಲಿಕವಾದದ್ದು. ಆದರೆ, ಸುಲಭ ಜೀವನದ ಆಶೆ ಮತ್ತು ಅಹಂಕಾರಗಳನ್ನು ಕಳೆದುಕೊಳ್ಳದೆ ಇದ್ದರೆ ಸವರ್ಣೀಯರು ಮತ್ತು ಮೇಲ್ಜಾತಿ ಎನ್ನಿಸಿಕೊಂಡವರ ಸುಪಿರಿಯಾರಿಟಿ ಜಾತಿವಾದಕ್ಕೆ ಸಾವಿಲ್ಲ.

ಮುಕ್ಕಾಲು ಶತಮಾನದ ಹಿಂದಿನ ಈ ಅಹಂಕಾರ ಮತ್ತು ಮೌಢ್ಯದ ಬಗ್ಗೆ ಕುವೆಂಪು ಹೀಗೆ ಬರೆಯುತ್ತಾರೆ: "ನಾನು ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ ಬರೆದಾಗ ಎಂತೋ ಅಂತೆಯೇ ಅಮಲನ ಕಥೆ ಬರೆದಾಗಲೂ (೧೯೨೪) ಕೆಲವು ಬ್ರಾಹ್ಮಣರು ನಾನು ಬ್ರಾಹ್ಮಣನೆ ಇರಬೇಕೆಂದು ವಾದಿಸಿದರಂತೆ. ಅವರ ಪ್ರಕಾರ ಬ್ರಾಹ್ಮಣ ಜಾತಿಯಲ್ಲಿ ಹುಟ್ಟದವನಿಗೆ ಕಾವ್ಯ ಬರೆಯುವುದು ಸಾಧ್ಯವೇ ಇಲ್ಲ. .... ಬ್ರಾಹ್ಮಣನಲ್ಲದವನಿಗೆ ಅಂತಹ ವ್ಯಕ್ತಿತ್ವವಾಗಲಿ, ಕಾವ್ಯರಚನಾ ಶಕ್ತಿಯಾಗಲಿ, ಅಲಭ್ಯವೆಂದು ಆಗಿನ ಕಾಲದವರ, ಅದರಲ್ಲಿಯೂ ಉಚ್ಚವರ್ಗದವರ ಭಾವನೆಯಾಗಿತ್ತು. .... ಕೆಲವರು ನನ್ನನ್ನು ಅಯ್ಯಂಗಾರಿ ಎಂದು ಮತ್ತೆ ಕೆಲವರು ಸಾಹಿತ್ಯ ರಚನೆ ಬ್ರಾಹ್ಮಣನಲ್ಲದವನಿಗೆ ಸಾಧ್ಯವಿಲ್ಲವಾದ್ದರಿಂದ ನಾನು ಬ್ರಾಹ್ಮಣನೇ ಇರಬೇಕೆಂದು ಭಾವಿಸಿದ್ದರು." ('ಅನಿಕೇತನ' ಪುಟ-೫೩೨)

ಇದಾದ ಮುಕ್ಕಾಲು ಶತಮಾನದ ನಂತರವೂ ನಮ್ಮ ಜಾತಿ ಅಹಂಕಾರಗಳು ಕಮ್ಮಿ ಆಗಿಲ್ಲ. ಸ್ಯಾನ್ ಪ್ರಾನ್ಸಿಸ್ಕೋದ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿರುವ ಕನ್ನಡಿಗ ಪೃಥ್ವಿದತ್ತ ಚಂದ್ರಶೋಭಿ ನಮ್ಮ ಪತ್ರಿಕೆಯ ಓದುಗರಿಗೂ ಪರಿಚಿತರೆ. ಪೃಥ್ವಿಗೆ ಮತ್ತು ನನಗೆ ಇಬ್ಬರಿಗೂ ಗೊತ್ತಿರುವ ಒಬ್ಬ ಕನ್ನಡಿಗ ಇಲ್ಲಿ ಅಮೇರಿಕದಲ್ಲಿದ್ದಾನೆ. ಆತ ಕನ್ನಡ, ಇಂಗ್ಲಿಷ್ ಚೆನ್ನಾಗಿ ಓದಿಕೊಂಡಂತೆ ಕಾಣಿಸುತ್ತದೆ. ಸಾಪ್ಟ್‌ವೇರ್ ತಂತ್ರಜ್ಞನಾದ ಆತ ಇಲ್ಲಿಯೆ ಮಾಸ್ಟರ್ ಡಿಗ್ರಿ ಸಹ ಮಾಡಿದ್ದಾನೆ. ಪೃಥ್ವಿಯ ಪಾಂಡಿತ್ಯದ ಬಗ್ಗೆ ಆತನಿಗೆ ವಿಪರೀತ ಗೌರವ ಇತ್ತು ಎಂದು ಕಾಣಿಸುತ್ತದೆ. ಆತ ಒಮ್ಮೆ ಮೈಸೂರಿನಲ್ಲಿಯ ಪರಿಚಿತರ ಮನೆಗೆ ಹೋಗಿದ್ದಾನೆ. ಆ ಮನೆಯವರು ಅದೂ ಇದೂ ಮಾತನಾಡುತ್ತ ಅಮೇರಿಕದಲ್ಲಿರುವ ಪೃಥ್ವಿ ತಮ್ಮ ನೆಂಟ ಎಂದು ಹೇಳಿದ್ದಾರೆ. ಅದನ್ನು ಕೇಳಿದ ಈತ, "ಹೌದೇನ್ರಿ? ಸಾಧ್ಯಾನೇ ಇಲ್ಲ. ಆ ಇಂಟೆಲಿಜೆನ್ಸ್/ಪಾಂಡಿತ್ಯ ಬ್ರಾಹ್ಮಣನಲ್ಲದೆ ಬೇರೆಯವರಿಗೆ ಬರೋದಿಕ್ಕೆ ಸಾಧ್ಯಾನೆ ಇಲ್ಲ," ಎಂದನಂತೆ!!! ಈತ ಈ ಆಧುನಿಕ ಸಮಾಜದ ಸ್ಯಾಂಪಲ್ಲು...

ಬಹುಶ: ಬಂಜಗೆರೆಯವರು ಕುವೆಂಪುರವರು ಹೇಳಿದ್ದರ ಬಗ್ಗೆ ಮತ್ತು ಅಂಬೇಡ್ಕರ್ ಕುರಿತೂ ಜನ ಹೀಗೆಯೆ ಮಾತನಾಡಿಕೊಳ್ಳುತ್ತಿದ್ದ ಬಗ್ಗೆ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿರಬಹುದು. ಅದನ್ನೆ ಆಧರಿಸಿ ಪುಣ್ಯಾತ್ಮರೊಬ್ಬರು "ಬಂಜಗೆರೆಯವರು ಕುವೆಂಪು ಮತ್ತು ಅಂಬೇಡ್ಕರ್‌ರ ಹುಟ್ಟಿನ ಬಗ್ಗೆ ಕೀಳಾಗಿ ಬರೆದಿದ್ದಾರೆ. ಅವರೆಲ್ಲ ಅಕ್ರಮ ಸಂತಾನಕ್ಕೆ ಹುಟ್ಟಿದವರು ಎನ್ನುವ ರೀತಿಯಲ್ಲಿ ಹೇಳುತ್ತಾರೆ," ಎಂದೆಲ್ಲ ಪಿತೂರಿಯ ಲೇಖನವನ್ನು ಬರೆದು ಕನ್ನಡದ ದಿನಪತ್ರಿಕೆಗೆ ಕಳುಹಿಸುತ್ತಾರೆ. ಆ ಪತ್ರಿಕೆಯವರು ಬೇಜವಾಬ್ದಾರಿಂದ ಅದನ್ನು ಸೆಂಟರ್ ಪೇಜ್‌ನಲ್ಲಿ ಪ್ರಕಟಿಸುತ್ತಾರೆ. ಆ "ಸಂಶೋಧನಾತ್ಮಕ ಲೇಖನ"ಕ್ಕೆ ಕಣವಿಯಂತವರು ಆ ಪತ್ರಿಕೆಗೆ ಮರು ಉತ್ತರ ಬರೆದದ್ದಾಗಲಿ, ಅದು ಪ್ರಕಟವಾಗಿದ್ದಾಗಲಿ ಕಾಣಲಿಲ್ಲ.

ತಾವು ಜಾತಿವಾದಿ ಅಲ್ಲ ಎನ್ನುತ್ತ ಪತ್ರಿಕೆಗೆ ಪ್ರತಿಕ್ರಿಸಿದ ಕಣವಿಯವರು ಈ ಪ್ರಕರಣದಲ್ಲಿ ಒಂದು ಅಂಶವನ್ನು ಮರೆತಂತೆ ಕಾಣಿಸುತ್ತದೆ: ಮುಟ್ಟುಗೋಲಿನ ವಿರುದ್ದ ಬರೆದ ಮತ್ತು ಮಾತನಾಡಿದ ಕನ್ನಡದ ಕೆಲವು ವಾರಪತ್ರಿಕೆಗಳ ಸಂಪಾದಕರು ಮತ್ತು ಹಲವಾರು ಪ್ರಮುಖ ಲೇಖಕರು "ಲಿಂಗಾಯತ"ರೆ ಆಗಿದ್ದರು. ತಮ್ಮ ಪ್ರೀತಿಯ ಕವಿ ಕಣವಿಯವರ ವೈಚಾರಿಕ ದಾರಿದ್ರ್ಯದ ಬಗ್ಗೆ ಬೇಸರದಿಂದ, ಸಿಟ್ಟಿನಿಂದ ಬರೆದ ವಿಕ್ರಾಂತ ಕರ್ನಾಟಕದ "ಮಲ್ಲಿ"ಯ ಪೂರ್ವಜರು ಸಹ ಬಸವಣ್ಣನನ್ನು ಒಪ್ಪಿಕೊಂಡವರೆ. ಬಸವಣ್ಣ ಹೇಗೆ ತನ್ನದೆ ಸಮಾಜದ ಕ್ಷುಲ್ಲಕ ನಡವಳಿಕೆಯ ವಿರುದ್ದ ಹೋರಾಡಿದ ಎಂಬ ಪ್ರಚಲಿತ ಕತೆಯಂತೆಯೆ ಇವರೂ ಸಹ ತಮ್ಮದೇ (?) ಸ್ವಜಾತಿ ಮತಾಂಧರ ವಿರುದ್ದ ಧ್ವನಿಯೆತ್ತಿದವರು. ಬಸವಣ್ಣನ ನಿಜ ವಾರಸುದಾರರಿದ್ದರೆ ಅವರು ಇವರೆ.


ವಿಚಾರಮಂಟಪ.ನೆಟ್‌ಗೆ ಸಾವಿರಾರು ವಚನಗಳನ್ನು ಅಪ್‍ಲೋಡ್ ಮಾಡುತ್ತ ಮೂರ್‍ನಾಲ್ಕು ತಿಂಗಳು ಕಳೆದಿದ್ದ ನನಗೆ ಬಸವಣ್ಣ ಯಾವ ಜಾತಿಯಾದರೂ ಹೆಚ್ಚಿಲ್ಲ, ಕಮ್ಮಿಯಿಲ್ಲ. ಹೇಳಬೇಕೆಂದರೆ, ಬಸವಣ್ಣ (ಬ್ರಾಹ್ಮಣನಲ್ಲದೆ ಹೋದರೂ ಇತರ ಸವರ್ಣೀಯ) ಮೇಲ್ಜಾತಿಯವನಾಗದೆ ಇದ್ದಿದ್ದರೆ ಈಗಿನಷ್ಟು ಉದಾರವೂ ಸಹನಶೀಲವೂ ಆಗಿರದಿದ್ದ ಆಗಿನ ಕಾಲದಲ್ಲಿ ತನ್ನ ಮುವ್ವತ್ತರ ವಯಸ್ಸಿಗೆಲ್ಲ ಆ ಮಟ್ಟದ ಸಾಮಾಜಿಕ ಕ್ರಾಂತಿ ಉಂಟು ಮಾಡಲು ಅಸಾಧ್ಯವಿತ್ತೇನೊ ಎನ್ನುವ ಅಭಿಪ್ರಾಯ ನನ್ನದು. ಇದು ಕುವೆಂಪುರವರ ಪ್ರತಿಭೆಯ ಬಗ್ಗೆ ಎತ್ತಿದ ಪ್ರಶ್ನೆಯಂತಲ್ಲ. ಬದಲಿಗೆ ಬಸವಣ್ಣನ ಕಾಲದ ಸಾಮಾಜಿಕ ಪರಿಸ್ಥಿತಿಯ ಬಗೆಗಿನ ಪ್ರಶ್ನೆ. ಹಾಗಾಗಿ, ಬಂಜಗೆರೆಯವರ ವಾದ ನಿಜವಾದರೆ ಅದನ್ನು ಒಪ್ಪಿಕೊಳ್ಳಲು ನನಗ್ಯಾವ ಸಮಸ್ಯೆ ಇಲ್ಲವಾದರೂ, ಅದು ಸತ್ಯ ಎಂದು ಸಾಬೀತಾಗುವ ತನಕ ಬಸವಣ್ಣ ಬ್ರಾಹ್ಮಣನೆ ಇರಬೇಕು ಎನ್ನುವ ನಂಬಿಕೆ ಮತ್ತು ಬಂಜಗೆರೆಯವರ ವಾದದ ಮೇಲಿನ ನನ್ನ ಸಂದೇಹ ಮುಂದುವರೆಯುತ್ತದೆ. ಈ ಕಾರಣದಿಂದಲೆ ಕಳೆದ ಹದಿನೈದು ವರ್ಷಗಳಿಂದ ವಚನಸಾಹಿತ್ಯದ ಅಧ್ಯಯನದಲ್ಲಿ ತೊಡಗಿರುವ ಪೃಥ್ವಿಯವರ ಅಭಿಪ್ರಾಯ ಕೇಳಲು ನಾನು ಕಾತುರನಾಗಿದ್ದೆ.

ಪೃಥ್ವಿ ಎರಡು ತಿಂಗಳ ಹಿಂದೆ ಮೈಸೂರಿಗೆ ಹೊರಟಿದ್ದರು. ಆ ಸಮಯದಲ್ಲಿ ಅವರನ್ನು, "ಬಸವಣ್ಣ ಮಾದಿಗನಾಗಿರಲು ಸಾಧ್ಯವೆ? ನಿಮ್ಮ ಇಲ್ಲಿಯತನಕದ ಅಧ್ಯಯನದ ಆಧಾರದ ಮೇಲೆ ಏನನ್ನಿಸುತ್ತದೆ?" ಎಂದು ಕೇಳಿದ್ದೆ. ಆಗ ಅವರು ಆನುದ್ ಏವಾವನ್ನು ಇನ್ನೂ ಓದಿರಲಿಲ್ಲ. "ಆ ಸಾಧ್ಯತೆಗಳಿಲ್ಲ. ಮೈಸೂರಿನ ನನ್ನ ಪರಿಚಿತರು ಸಹ ಬಂಜಗೆರೆ ಹೇಳುವುದು ನಿಜ ಅನ್ನಿಸುತ್ತದೆ, ವಾದ ಕಂಪೆಲ್ಲಿಂಗ್ ಆಗಿದೆ ಎಂದು ಹೇಳುತ್ತಿದ್ದಾರೆ. ಆದರೆ ನನಗೆ ಹಾಗನ್ನಿಸುವುದಿಲ್ಲ. ಮೈಸೂರಿಗೆ ಹೋದ ತಕ್ಷಣ ಅದನ್ನು ಓದಿ ವಿಕ್ರಾಂತ ಕರ್ನಾಟಕದಲ್ಲಿ ದೀರ್ಘವಾಗಿ ಬರೆಯುತ್ತೇನೆ," ಎಂದರು. ಮೈಸೂರಿಗೆ ಬಂದ ಮೇಲೆ ಅದನ್ನು ಮೂರ್ನಾಲ್ಕು ಸಲ ಓದಿ, ವಿಜಯ್ ಟೈಮ್ಸ್‌ನ ಮಾಜಿ ಸಂಪಾದಕ ಕೃಷ್ಣ ಪ್ರಸಾದ್‌ರ "ಚುರುಮುರಿ.ಕಾಮ್" ಬ್ಲಾಗಿನಲ್ಲಿ ಪುಟ್ಟ ವಿಡಿಯೊ ಅಭಿಪ್ರಾಯ ದಾಖಲಿಸಿದರು. ಅವರ ಪ್ರಕಾರ:

"ಬಂಜಗೆರೆಯವರು ಇತಿಹಾಸದ ಬಗ್ಗೆ, ಅದರಲ್ಲೂ ಬಸವಣ್ಣ, ವಚನಸಾಹಿತ್ಯ, ವಚನಚಳವಳಿಗಳ ಹಿನ್ನೆಲೆಯಲ್ಲಿ ಒಂದು ಐತಿಹಾಸಿಕ ನಂಬಿಕೆಯನ್ನು ಇಟ್ಟುಕೊಂಡು ತಮ್ಮ ಅಧ್ಯಯನವನ್ನು ಅದಕ್ಕೆ ಫ್ರೇಮ್ ಮಾಡಲು ಬಳಸಿಕೊಳ್ಳುತ್ತಿದ್ದಾರೆ. ಭಾರತದ ನಾಗರೀಕತೆ, ಹಿಂದೂ ಧರ್ಮ, ಜಾತಿವ್ಯವಸ್ಥೆ ಮುಂತಾದುವುಗಳಲ್ಲಿ ಪ್ರತಿಕ್ರಿಯೆ, ಪ್ರತಿರೋಧ, Social Criticism ಇವೆಲ್ಲಾ ಬಂದಿರುವುದು ಮತ್ತು ಸಾಧ್ಯ ಆಗಿರುವುದು ಹಿಂದುಳಿದ ಜನಾಂಗಗಳಿಂದ ಮಾತ್ರ ಎನ್ನುವ ನಂಬಿಕೆಯನ್ನಿಟ್ಟುಕೊಂಡು ಅವರು ಅಧ್ಯಯನವನ್ನು ಪ್ರಾರಂಭಿಸುತ್ತಿದ್ದಾರೆ. ಆ ಕಾರಣದಿಂದಲೆ ಅವರ ಮಿಕ್ಕೆಲ್ಲ ಪ್ರಶ್ನೆಗಳು, ಅಧ್ಯಯನಗಳನ್ನೆಲ್ಲ ಆ ಒಂದು ನಂಬಿಕೆಗೆ ಸೇರಿಸಿ ಸಮಾಗಮ ಮಾಡುವ ಒಂದು ಸರ್ಕಸ್ ತರದಲ್ಲಿ ನಮಗೆ ಬಹಳ ಸಲ ಕಾಣಿಸುತ್ತದೆ. ...

...ಬಂಜಗೆರೆಯವರು ಕೇವಲ ಸೆಕೆಂಡರಿ ಆಧಾರಗಳನ್ನೆ ಬಳಸಿ, ಅವುಗಳಲ್ಲಿನ ಕೆಲವು ಸಮಸ್ಯೆಗಳನ್ನೆ ಆಧಾರವಾಗಿ ಇಟ್ಟುಕೊಂಡಿದ್ದಾರೆಯೆ ವಿನಹ ಬಸವಣ್ಣನ ಬದುಕಿನ ಬಗೆಗಿನ ಯಾವುದೆ ಕಥಾನಕವನ್ನು ತಮ್ಮ ವಾದಕ್ಕೆ ಬಳಸಿಕೊಂಡಿಲ್ಲ. ಅದರಿಂದಾಗಿ ಇಡೀ ಪುಸ್ತಕದಲ್ಲಿ ಹಲವಾರು ಕಡೆ ಸಮಸ್ಯಾತ್ಮಕ ಹೇಳಿಕೆಗಳು ಕಂಡು ಬರುತ್ತವೆ. .... ಜಾಳುಜಾಳಾದ ಹೇಳಿಕೆಗಳನ್ನು ಇಡೀ ಪುಸ್ತಕದುದ್ದಕ್ಕೂ ಪ್ರತಿಪುಟದಲ್ಲೂ ಗುರುತಿಸುತ್ತ ಹೋಗಬಹುದು. ಇದರ ಜೊತೆಗೆ, ಸ್ವಲ್ಪಮಟ್ಟಿಗೆ ಅವಸರದ ಬರವಣಿಗೆಯಂತೆ, ಬಹಳ ಕಡೆ ಆಧಾರಗಳಿಲ್ಲದೆ, Speculative Claims ಮಾಡಿರುವ ಹಾಗೆ ಕಾಣಿಸುತ್ತದೆ. ನನ್ನ ಹದಿನೈದು ವರ್ಷಗಳ ಅಧ್ಯಯನದ ಹಿನ್ನೆಲೆಯಲ್ಲಿ ಹೇಳಬಹುದಾದರೆ, ಬಂಜಗೆರೆಯವರ ವಾದ ಕೆಲವು ಸಲ ಬೇಜವಾಬ್ದಾರಿ ಚಿಂತನೆಯ (Sloppy thinking), ಗೊಂದಲಕಾರಿ ತರ್ಕದ, ಹಲವಾರು ಕಡೆ ತಪ್ಪು ಊಹೆ ಎನ್ನುವಂತವುಗಳ ಕಾಂಬಿನೇಷನ್ ತರಹ ಕಾಣಿಸುತ್ತದೆ.

ಇಷ್ಟೆಲ್ಲ ಹೇಳಿದರೂ ಎರಡು ಅಂಶಗಳನ್ನು ಇಲ್ಲಿ ಪ್ರಸ್ತಾಪ ಮಾಡಬೇಕು. ಮೊದಲನೆಯದು: ಬಂಜಗೆರೆಯವರ ಮುಖ್ಯವಾದ ಪ್ರಾರಂಭಿಕ ಅಂಶದ ಬಗ್ಗೆ ನನಗೆ ಸಹಾನುಭೂತಿ ಇದೆ. ಇತಿಹಾಸದ ಮೇಲಿನ ನನ್ನ ವಿಶ್ಲೇಷಣೆಯಲ್ಲೂ ಬಹಳ ಮುಖ್ಯವಾದ ಅಂಶವದು. ಅದು, ವೀರಶೈವ ಜನಾಂಗ, ವೀರಶೈವ ಇತಿಹಾಸ, ವಚನ ಚಳವಳಿ, ಇವುಗಳ ಸಾಂಸ್ಕೃತಿಕ ಸ್ಮೃತಿ ಹೇಗಿರಬೇಕು ಅನ್ನುವುದು. ಎರಡನೆಯದು: ಅಭಿವ್ಯಕ್ತಿ ಸ್ವಾತಂತ್ರ್ಯದ ಒಂದೇ ಕಾರಣದಿಂದ ಇದು ಚರ್ಚೆ ಆಗಬೇಕು ಎನ್ನುವ ಕಾರಣಕ್ಕಷ್ಟೆ ಅಲ್ಲದೆ ಈ ತರಹದ ಚರ್ಚೆಗಳು ನಮ್ಮಲ್ಲಿ ವಿವರವಾಗಿ ನಡೆಯಬೇಕು. ಈ ಹಿನ್ನೆಲೆಯಲ್ಲಿ, ಈ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎನ್ನುವ ಬೇಡಿಕೆಗಳು, ಡಿಮ್ಯಾಂಡ್‌ಗಳು ಸಾಧುವಲ್ಲ ಎಂದು ನಾವು ಸ್ಪಷ್ಟವಾಗಿ ಹೇಳಬೇಕು. ಕೆಟ್ಟ ಪುಸ್ತಕ, ಬೇಜವಾಬ್ದಾರಿ ಬರವಣಿಗೆ ಆಗುತ್ತಿದೆ ಎಂದು ಅನ್ನಿಸುತ್ತಿದ್ದಾಗಲೂ ಸಹ ಅವುಗಳಿಗೆ ತಾರ್ಕಿಕ ವಿಧಾನಗಳಿಂದ ಪ್ರತಿಕ್ರಿಯಿಸಬೇಕೆ ಹೊರತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನೆ, ಪುಸ್ತಕ ಬರೆಯುವ ಹಕ್ಕನ್ನೆ ಕಸಿದಿಟ್ಟುಕೊಳ್ಳಬೇಕು ಎನ್ನುವುದು ಸರಿಯಾದ ಬೇಡಿಕೆ ಆಗುವುದಿಲ್ಲ. ಒಂದು ಆರೋಗ್ಯಪೂರ್ಣ ಚರ್ಚೆ ಹೇಗೆ ಮುಂದುವರೆಯಬೇಕು ಎನ್ನುವುದರ ಬಗ್ಗೆ ನಮ್ಮೆಲ್ಲರ ಗಮನ ಇರಬೇಕೆ ಹೊರತು ಲೇಖಕರನ್ನೆ ಹೊಡೆಯುವುದು, ಅವರ ಮೇಲೆ ಹಲ್ಲೆ ಮಾಡುವುದು, ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಅಲ್ಲ." (churumuri.com, ೧೩/೦೬/೦೭)

ಬಂಜಗೆರೆಯವರ ವಾದ ತಪ್ಪಾಗಿದ್ದರೆ ಅದನ್ನು ಸಾಬೀತು ಪಡಿಸಲು ಈ ರೀತಿಯ ದಾರಿಗಳಿವೆ; ಸಮಯವಿದೆ. ಆದರೆ, ಮುಟ್ಟುಗೋಲಿನ ಉತ್ತರಾರ್ಧದ ಸಂದರ್ಭದಲ್ಲಿ ಮುಖ್ಯವಾಗಿರುವುದು ಮುಟ್ಟುಗೋಲು ಸರಿಯೆ, ತಪ್ಪೆ, ಎಂದಷ್ಟೆ. "ನನ್ನ ಮಾನ ಪ್ರಾಣ ಧನ ನನ್ನ ದೇಶದ ಜನರು" ಎಂದ ಕವಿ ಕಣವಿ ಮುಟ್ಟುಗೋಲಿನ ಪರ ಇದ್ದಾರೆ. ಅವರು ಯಾಕೆ ಇದ್ದಾರೆ ಎನ್ನುವುದು ಇಲ್ಲಿ ಅಪ್ರಸ್ತುತ. ಅವರು ಯಾವ ಅರ್ಥದಲ್ಲಿ ಏನನ್ನು ಹೇಳಿದರೂ ಅವರು ಮತಾಂಧರ ಪರ ಇರುವುದು ಬದಲಾಗುವುದಿಲ್ಲ.


ಸಂಶೋಧನೆಯ ಮೊದಲ ಹಂತವೆ ವಿಷಯ ಮಂಡನೆ. ನಂತರ ಅದರ ಸರಿತಪ್ಪುಗಳ ವಿಶ್ಲೇಷಣೆ ಮತ್ತು ಪರಿಷ್ಕರಣೆ. ವಿಷಯ ಮಂಡನೆಗೇ ಈ ರೀತಿ ಅಡ್ಡಿಪಡಿಸಿದರೆ, ಸಂಶೋಧನೆ ಎನ್ನುವುದು ಎಂದಾದರೂ ಸಾಧ್ಯವೆ? ಪ್ರಪಂಚಕ್ಕೆಲ್ಲ ಬೆಳಕಾದರೂ ನಮಗೆ ಬೆಳಕು ಬೇಡ ಎನ್ನುವ ಕಗ್ಗಾಡಿನವರಾಗ್ಗುವುದಿಲ್ಲವೆ ನಾವು? ಕಣವಿಯವರು ಕನ್ನಡದ ಸಂಶೋಧನೆಯ ಎರಡು "ಆದರ್ಶಪ್ರಾಯ" ಘಟನೆಗಳ ಬಗ್ಗೆ ಬರೆಯುತ್ತಾರೆ. ಆದರೆ ಆನು ದೇವಾಗೆ ಸಂಬಂಧಪಟ್ಟ ವಿಚಾರದಲ್ಲಿ ಮುಟ್ಟುಗೋಲಿನ ಪರ ಇರುವವರ ಪ್ರತಿಕ್ರಿಯೆಗಳೆಲ್ಲ ಸಿಟ್ಟಿನ, ಉದ್ರೇಕಕಾರಿ ಪ್ರಕಟಣೆಗಳು; ಹೇಳಿಕೆಗಳು. ಇವರಲ್ಲಿ ಎಷ್ಟೋ ಜನ ಪುಸ್ತಕ ಓದಿದಂತೆಯೆ ಕಾಣಿಸುವುದಿಲ್ಲ. ಪುಸ್ತಕವನ್ನು ಹಲವಾರು ಸಲ ಓದಿ, ಬಂಜಗೆರೆಯವರ ವಾದದಲ್ಲಿ ಲೋಪಗಳಿವೆ ಎಂದು ಪ್ರತಿಕ್ರಿಸಿದ ನಾಗಭೂಷಣ್, ಪೃಥ್ವಿ, ಮುಂತಾದವರೆಲ್ಲ ಮುಟ್ಟುಗೋಲಿನ ವಿರುದ್ದ ಇರುವವರು. "ಬಸವಪಥ" ಪತ್ರಿಕೆಯಲ್ಲಿನ ಲೇಖನಗಳು "ಆನು ದೇವಾದಲ್ಲಿನ ಆಧಾರರಹಿತ ಸಂಗತಿಗಳನ್ನು ಸಂಶೋಧನಾತ್ಮಕವಾಗಿ ಎತ್ತಿ ತೋರಿಸುತ್ತವೆ," ಎನ್ನುತ್ತಾರೆ ಕವಿ. ಸರಿ, ಹಾಗೆಂದ ಮಾತ್ರಕ್ಕೆ ಒಂದು ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎನ್ನುವುದು ಎಷ್ಟು ಸರಿ? ಈಗ ಲೇಖಕರು ಹಿಂತೆಗೆದುಕೊಂಡಿರುವುದು ತಮ್ಮ ವಾದದಲ್ಲಿ ತಪ್ಪಿದೆ ಎಂದು ಬೇರೆಯವರು ಪ್ರಮಾಣಪೂರ್ವಕವಾಗಿ ತೋರಿಸಿದ್ದಾರೆ ಎಂಬ ಕಾರಣಕ್ಕಾಗಿ ಅಲ್ಲ; ಬದಲಿಗೆ ಉಕ್ಕೇರುತ್ತಿರುವ ಅಸಹನೆಯನ್ನು ಶಮನಗೊಳಿಸಲು ಮತ್ತು ಕೆಲವರು ಈ ಘಟನೆಯಿಂದ ದುರ್ಲಾಭ ಪಡೆದುಕೊಳ್ಳದೆ ಇರಲು. ಕಣವಿಯವರಿಗೆ ಇವು ಯಾವುವೂ ಮುಖ್ಯವಾಗುವುದಿಲ್ಲ. ಅವರಿಗೆ ಪುಸ್ತಕದ ಮುಟ್ಟುಗೋಲಿನ ಮೇಲೆ ಆಸಕ್ತಿದೆಯೆ ಹೊರತು ಲೇಖಕರು ಯಾವ ಸಂದರ್ಭದಲ್ಲಿ, ಯಾವ ಕಾರಣಕ್ಕಾಗಿ ಹಿಂತೆಗೆದುಕೊಂಡರು ಎನ್ನುವುದಲ್ಲ.

ನನ್ನ ದೇಶ ನನ್ನ ಜನ
ನನ್ನ ಮಾನ ಪ್ರಾಣ ಧನ
...
...
ಮೈಕೊಡವಿದೆ ಮೂಕ ಜನ
ಕೈಹಿಡಿಯಿರಿ ನಾಕು ಜಣ
ಎದ್ದೇಳಲಿ ಎಲ್ಲ ಗುಣ
ಸಮೃದ್ಧ ಬಾಳಿಗೆ....

ಎಂದ ಕವಿಗೆ ಆನು ದೇವಾದ ಮುಟ್ಟುಗೋಲಿನ ಬೇಡಿಕೆ/ಸಮರ್ಥನೆ ಯೋಗ್ಯವಲ್ಲ.
(ವಿಕ್ರಾಂತ ಕರ್ನಾಟಕ - ಆಗಸ್ಟ್ 31, 2007 ರ ಸಂಚಿಕೆಯಲ್ಲಿನ ಬರಹ)


ವಿಡಿಯೊ ಪ್ರಸ್ತುತಿ - ಭಾಗ ೧

ವಿಡಿಯೊ ಪ್ರಸ್ತುತಿ - ಭಾಗ ೨

Rating
No votes yet

Comments