ಜಾಗತೀಕರಣವೂ, ನಾಗರಿಕ ಪರಮಾಣು ಒಪ್ಪಂದವೂ...
ಜಾಗತೀಕರಣವೂ, ನಾಗರಿಕ ಪರಮಾಣು ಒಪ್ಪಂದವೂ...
ಜಾಗತೀಕರಣವನ್ನು ಬರೀ ಟೀಕಿಸುವುದರಿಂದ ಏನು ಪ್ರಯೋಜನ? ಸರ್ಕಾರಿ ವಲಯದ ವೈಫಲ್ಯದ ಫಲವಾಗಿ, ಜಾಗತೀಕರಣವೆಂಬ ಮದ್ದಾನೆ ಈಗಾಗಲೇ ಭಾರತವನ್ನು ಪ್ರವೇಶಿಸಿಯಾಗಿದೆ. ಅದನ್ನು ಚೀನಾ ಹಾಗೂ ಕೊರಿಯಾಗಳಂತೆ ನಮ್ಮ ಬಡತನದ ವಜೆಗಳನ್ನೆತ್ತಲು ಬಳಸಿಕೊಳ್ಳಬಾರದೇಕೆ? ಇದು 3.8.07ರಂದು ಸಾಗರದಲ್ಲಿ ನಾನು ಎಚ್.ಗಣಪತಿಯಪ್ಪನವರ 81ನೇ ಹುಟ್ಟು ಹಬ್ಬದಾಚರಣೆಯ ಸಂದರ್ಭದಲ್ಲಿ ಆಡಿದ ಮಾತುಗಳಿಗೆ ಸ್ಥಳೀಯ ಕೃಷಿಕರಾದ ಗಿರಿ ಎನ್ನುವವರು, ಸಮಾರಂಭದ ನಂತರ ನನ್ನ ಪ್ರತಿಕ್ರಿಯೆಗಾಗಿ ನೀಡಿದ ಚೀಟಿಯ ಒಕ್ಕಣೆಯ ಸಾರಾಂಶ. ಸ್ವತಃ ಗಿರಿಯವರು ತಾತ್ವಿಕವಾಗಿ ಸಮಾಜವಾದಿ ಹಿನ್ನೆಲೆಯಿಂದ ಬಂದವರಾದರೂ, ಸಮಾಜವಾದ ಹೊಸ ಜಾಗತಿಕ ಸಂದರ್ಭಕ್ಕೆ ತಕ್ಕಂತೆ ತನ್ನ ನೀತಿಯನ್ನು ಪರಿಷ್ಕರಿಸಿಕೊಳ್ಳಬೇಕೆಂದು ಬಯಸುವವರು. ಅವರ ಬಯಕೆಯೇ ನನ್ನ ಬಯಕೆಯೂ ಆಗಿದೆ ಎಂದು ಹೇಳಿದ ನಾನು, ಜಾಗತೀಕರಣವನ್ನು ಕೇವಲ ಒಂದು ಆರ್ಥಿಕ ವಿದ್ಯಮಾನವಾಗಿ, ವಿದೇಶಿ ಬಂಡವಾಳದ ಸಾಗಣೆ ವಾಹನದಂತೆ ನೋಡುವುದು ತಪ್ಪು ಎಂದು ತಿಳಿಸಿದೆ. ಹಾಗೇ ಈ ಸಂದರ್ಭದಲ್ಲಿ ಚೀನಾ ಮತ್ತು ಕೊರಿಯಾಗಳ ಉದಾಹರಣೆಗಳೊಂದಿಗೆ ಯೋಚಿಸುವುದೂ ತಪ್ಪು ಎಂದೆ. ಏಕೆಂದರೆ, ಅಲ್ಲಿನ ಪ್ರಯೋಗಗಳನ್ನು ಆಯಾ ದೇಶಗಳ ರಾಜಕೀಯ ವ್ಯವಸ್ಥೆಯ ಭಾಗವಾಗಿಯೇ ನೋಡಬೇಕಾಗುತ್ತದೆ; ಹಾಗಾಗಿ ಆ ದೇಶಗಳ ಏಕ ಪಕ್ಷ ಪ್ರಜಾಪ್ರಭುತ್ವ(?)ವ್ಯವಸ್ಥೆಯನ್ನು ಒಪ್ಪುವವರು ಮಾತ್ರ ಅಲ್ಲಿನ ಪ್ರಯೋಗಗಳ ಯಶಸ್ಸನ್ನು ಮೆಚ್ಚಬಲ್ಲರು ಎಂದು ವಿವರಿಸಿದೆ.
ಆದರೂ, ಅಷ್ಟೇನೂ ಸಮಾಧಾನಗೊಳ್ಳದ ಗಿರಿಯವರು, ನಮಗೊಂದು ಮಧ್ಯಮ ಮಾರ್ಗದ ಅವಶ್ಯಕತೆ ಇದೆಯಂದರು. ನಾನು ಈ ಹಿಂದಿನ ಒಂದು 'ವಾರದ ಒಳನೋಟ' ಅಂಕಣದಲ್ಲಿ 'ಸೆಕ್ಯುಲರಿಸಂ' ಕುರಿತಂತೆ ಅಂತಹ ಮಧ್ಯಮ ಮಾರ್ಗದ ಅನ್ವೇಷಣೆ ಮಾಡಿರುವುದಾಗಿಯೂ, ಜಾಗತೀಕರಣ ಕುರಿತಂತೆಯೂ ಅಂತಹ ಒಂದು ಮಧ್ಯಮ ಮಾರ್ಗವನ್ನು ಅನ್ವೇಷಿಸುವ ಪ್ರಯತ್ನ ಮಾಡಬೇಕಾಗಿದೆಯೆಂದೂ ಸೂಚಿಸಿದರು. ಅಲ್ಲದೆ, ನಾನು ಸಾಹಿತ್ಯ ವಿಮರ್ಶೆಯ ಜೊತೆಗೆ ರಾಜಕಾರಣದ ಬಗ್ಗೆಯೂ ಬರೆಯುತ್ತಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದ್ದಕ್ಕಿದ್ದಂತೆ 'ವಿಕ್ರಾಂತ ಕರ್ನಾಟಕ'ದ ನನ್ನ ಅಂಕಣದ ಓದುಗರೊಬ್ಬರು ಸಿಕ್ಕ ಖುಷಿಯಲ್ಲಿ ನಾನು, ಜಾಗತೀಕರಣ ಕುರಿತ ನನ್ನ ಬರಹಗಳೆಲ್ಲವೂ ಇಂತಹ ಅನ್ವೇಷಣೆಯ ಪ್ರಯತ್ನಗಳೇ ಆಗಿವೆ ಎಂದು ಹೇಳಿ ಅವನ್ನು ಓದುವಂತೆ ಕೋರಿ ಅವರೊಂದಿಗಿನ ನನ್ನ ಮಾತುಕತೆಯನ್ನು ಮುಗಿಸಿದೆ.
ನಂತರ ನಾನು ಅಂದು ಸಭೆಯಲ್ಲಿ ಆಡಿದ ಮಾತುಗಳನ್ನು ವಿವರವಾಗಿ ನೆನಪಿಸಿಕೊಂಡೆ. ಗಿರಿಯಂತಹವರು, ನಾನೇಕೆ ಜಾಗತೀಕರಣವನ್ನು ನಿಷ್ಕಾರಣವಾಗಿ ವಿರೋಧಿಸುತ್ತಿದ್ದೇನೆ ಎಂದುಕೊಳ್ಳುವರು ಎಂದು ಯೋಚಿಸಿದೆ. ಬಹುಶಃ ನಾನು ಜಾಗತೀಕರಣವೆಂದರೇನು ಎಂದು ವಿವರಿಸದೆ, ಅದರ ದುಷ್ಪರಿಣಾಮಗಳ ಬಗ್ಗೆ ಮಾತ್ರ ಮಾತಾಡತೊಡಗುವುದು ಈ ತಪ್ಪು ತಿಳುವಳಿಕೆಗೆ ಕಾರಣವಿರಬಹುದು ಎಂದುಕೊಂಡೆ. ಬಹುಶಃ ನನ್ನ ಹಲವು ಬರಹ ಹಾಗೂ ಭಾಷಣಗಳಲ್ಲಿ ಜಾಗತೀಕರಣದ ಸ್ವರೂಪವನ್ನು ವಿವರಿಸಿರುವ ದಟ್ಟ ನೆನಪು ನನ್ನ ಮನಸ್ಸಿನಲ್ಲಿರುವುದರಿಂದ, ಪ್ರತಿ ಭಾಷಣದಲ್ಲೂ ಅದನ್ನು ಪುನಾರವರ್ತಿಸುವುದು ಆಯಾಸವೆನ್ನಿಸಿ, ನಾನು ನೇರವಾಗಿ ಜಾಗತೀಕರಣದ ದುಷ್ಪರಿಣಾಮಗಳ ಬಗ್ಗೆ ಮಾತನಾಡಲು ಹೋಗುತ್ತೇನೇನೋ! ಆದರೆ, ಆ ದುಷ್ಪರಿಣಾಮಗಳನ್ನು ಹೇಳುವಾಗ, ಸಭೆಯ ಸಂದರ್ಭಕ್ಕೆ ತಕ್ಕಂತೆ ಅದರ ವಿವಿಧ ಆಯಾಮಗಳನ್ನು ಕುರಿತಂತೆ ಮಾತನಾಡುವ ಪ್ರಯತ್ನ ನನ್ನದು.
ಅದೇನೇ ಇರಲಿ, ಗಿರಿಯಂತಹವರು ಜಾಗತೀಕರಣವನ್ನು ಭಾರತದಂತಹ ದೇಶಕ್ಕೆ ಬಯಸದೇ ಬಂದ ಭಾಗ್ಯವೆಂಬಂತೆ ಭಾವಿಸುವರು? ಅದನ್ನು ಅವರು ಮದ್ದಾನೆ ಎಂದು ಸರಿಯಾಗಿಯೇ ಕರೆದಿದ್ದಾರೆ. ಆದರೆ ಆ ಮದ್ದಾನೆ ತನ್ನ ಮಾವುತನೊಂದಿಗೇ ಪೂರ್ವ ನಿಯೋಜಿತ ಕಾರ್ಯಕ್ರಮಗಳೊಂದಿಗೆ ಬಂದಿದೆ ಎಂಬುದು ಅವರಿಗೆ ತಿಳಿದಂತಿಲ್ಲ! ಹಾಗಾಗಿಯೇ ಅವರು, ಈ ಮದ್ದಾನೆಯಿಂದ ನಾವೇಕೆ ನಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಬಾರದು ಎಂದು ಕೇಳಿದ್ದಾರೆ. ಕುವೆಂಪು ಕುರಿತ ಇತ್ತೀಚಿನ ಬರಹವೊಂದರಲ್ಲಿ ನಾನು, 'ಮಲೆಗಳಲ್ಲಿ ಮದುಮಗಳು' ಕಾದಂಬರಿಯಲ್ಲಿ ಮಲೆನಾಡಿಗೆ ಮಿಷನರಿಗಳ ಪ್ರವೇಶವನ್ನು ಕುವೆಂಪು ವರ್ಣಿಸಿರುವ ಒಂದು ಅಧ್ಯಾಯದಲ್ಲೇ, ಕನ್ನಡ ಸಮಾಜದ ಮಟ್ಟಿಗೆ ಜಾಗತೀಕರಣದ ಮೊದಲ ಸೂಚನೆ ದೊರೆತಿದೆ ಎಂದಿದ್ದೇನೆ. ಪೂರ್ವವನ್ನು ಎಲ್ಲ ರೀತಿಯಲ್ಲೂ ಪಶ್ಚಿಮ ಮಾಡುವ ರಾಜಕೀಯ ಪ್ರಯತ್ನದ ಆತ್ಯಂತಿಕ ರೂಪವೇ ಜಾಗತೀಕರಣ. ಕ್ರಿಶ್ಚಿಯನ್ ಧರ್ಮ ಒಂದು ಧರ್ಮವಾಗಿ ಮಾತ್ರವಲ್ಲ; ಒಂದು ಜೀವನ ದೃಷ್ಟಿಯಾಗಿ, ಒಂದು ಜೀವನ ಕ್ರಮವಾಗಿ, ಕೀಳರಿಮೆಯನ್ನು ಬಿತ್ತುತ್ತಲೇ ಬಂತು. ಹಾಗೇ ನಂತರದ ದಿನಗಳಲ್ಲಿ ಅದು, ಈ ಕೀಳರಿಮೆಯನ್ನು ಕಿತ್ತೆಸೆಯುವ ಸಾಧನವಾಗಿ ಆಧುನೀಕರಣದ ಹೆಸರಿನಲ್ಲಿ, ಹೊಸ ವಿಜ್ಞಾನ - ತಂತ್ರಜ್ಞಾನಗಳ ರೂಪದಲ್ಲಿ ಬಂತು. ಇವೆಲ್ಲವೂ ಕಾಲಕ್ರಮದಲ್ಲಿ ಸ್ಥಳೀಯ ಜೀವನ ದೃಷ್ಟಿ, ಕ್ರಮ, ಜ್ಞಾನರೂಪಗಳು ಹಾಗೂ ಕೌಶಲ್ಯಗಳನ್ನು ಅಪ್ರಸ್ತುತಗೊಳಿಸಿ ಸೃಷ್ಟಿಸಿದ ಬಿಕ್ಕಟ್ಟು, ಹಣಕಾಸಿನ ಬಂಡವಾಳದ ಕೊರತೆಯ ರೂಪದಲ್ಲಿ ಕಾಣಿಸಿಕೊಂಡಾಗಲೇ, ಆರ್ಥಿಕ ಸುಧಾರಣೆ, ಉದಾರೀಕರಣ, ಖಾಸಗೀಕರಣಗಳ ಘೋಷಣೆಗಳೊಂದಿಗೆ ಆಧುನೀಕರಣವು ಜಾಗತೀಕರಣ ಎಂಬ ಅಕರ್ಷಕ ಅಭಿದಾನದೊಂದಿಗೆ ನಮಗೆ ಎದುರಾದದ್ದು. ಹೀಗಾಗಿ ಜಾಗತೀಕರಣ ಎಂಬುದು ಹೊಸ ವಿದ್ಯಮಾನವೇನೂ ಆಗಿರದೆ, ನಾವು ಕೀಳರಿಮೆಯನ್ನು ನಿವಾರಿಸಿಕೊಳ್ಳಲು ಅಳವಡಿಸಿಕೊಂಡ ಆಧುನೀಕರಣದ ಆವೃತ್ತಿಯ ಆತ್ಯಂತಿಕ ರೂಪವೇ ಆಗಿದೆ!
ಹಣಕಾಸಿನ ರೂಪದ ಬಂಡವಾಳಕ್ಕಿಂತ ಹೆಚ್ಚಾಗಿ ವಿಶ್ವಾಸದ, ಸಹಕಾರದ, ಹೊಂದಾಣಿಕೆಯ ಸಾಂಸ್ಕೃತಿಕ ಬಂಡವಾಳವನ್ನು ನೆಚ್ಚಿ ಸಾಗಿದ್ದ ನಮ್ಮ ಗ್ರಾಮ ಮೂಲದ instinctsಗಳನ್ನಾಧರಿಸಿದ ಮಿತಿಯುಳ್ಳ ಬದುಕಿನ ನಮ್ಮ ಆರ್ಥಿಕತೆಯನ್ನು, ಪಶ್ಚಿಮದ ಭೌತವಾದಿ ನಾಗರೀಕತೆಯ ಮಿತಿಯಿಲ್ಲದ ಬದುಕಿನ ಆರ್ಥಿಕತೆಯನ್ನಾಗಿ ಪರಿವರ್ತಿಸುವ ಪಶ್ಚಿಮದ ಹುನ್ನಾರವೇ ಇಂದು ಜಾಗತೀಕರಣವೆನಿಸಿದೆ. ನಿಜ, ಗ್ರಾಮ ಮೂಲದ ನಮ್ಮ ಮಿತಿಯುಳ್ಳ ಈ ಬದುಕಿನ ಜೀವನ ದರ್ಶನವನ್ನು ಜಾತಿ ಪದ್ಧತಿ, ವಿಶೇಷವಾಗಿ ಅಸ್ಪೃಶ್ಯತಾ ಆಚರಣೆ ಕಳಂಕಗೊಳಿಸಿತ್ತು. ಆದರೆ ಅದನ್ನು ನಿವಾರಿಸಿಕೊಳ್ಳುವ ಸಾಮಾಜಿಕ ಹಾಗೂ ಸಾಂಸ್ಕೃತಿಕ ಆಂದೋಲನವೊಂದು ಗಾಂಧಿ - ಅಂಬೇಡ್ಕರ್ - ಲೋಹಿಯಾ ಅನುಸಂಧಾನದ ಮೂಲಕ ಆರಂಭವಾಗಿತ್ತಾದರೂ, ಪಶ್ಚಿಮದ ಆಧುನಿಕ - ಅಂದರೆ ಸ್ಥೂಲವಾಗಿ ಹೊಸ ವೈಜ್ಞಾನಿಕ ಹಾಗೂ ತಂತ್ರಜ್ಞಾನಾಧಾರಿತ - ಜೀವನ ವಿಧಾನದ ಅಳವಡಿಕೆಯೇ ಜಾತಿ ಪದ್ಧತಿ ಸೃಷ್ಟಿಸಿದ್ದ ಸಾಮಾಜಿಕ - ಆರ್ಥಿಕ ವೈರುಧ್ಯಗಳನ್ನು ಸರಿಪಡಿಸುವವೆಂಬ ನಂಬಿಕೆ, ನೆಹರೂ ಪಂಥದ ಸೆಕ್ಯುಲರಿಸಂನ ಪ್ರಭಾವದಿಂದಾಗಿ ಪ್ರಬಲಗೊಂಡಿತು. ಇದರಿಂದಾಗಿ, ಪಶ್ಚಿಮದ ಆಧುನಿಕತೆ ಭಾರತದ ಆರ್ಥಿಕ ಸಮಸ್ಯೆಗಳನ್ನಲ್ಲದೆ, ಸಾಮಾಜಿಕ ವೈರುಧ್ಯಗಳನ್ನೂ ನಿವಾರಿಸುವ ದಿವ್ಯೌಷಧವಾಗಿ ಪರಿಗಣಿತವಾಯಿತು. ಆದರೆ, ಇಷ್ಟೆಲ್ಲದರ ನಂತರವೂ ನಮ್ಮ ಸಮಾಜದಲ್ಲಿ ಜಾತಿ ಸಂಘರ್ಷ ನಿಂತಿದೆಯೇ; ಹೋಗಲಿ, ಕಡಿಮೆಯಾಗಿದೆಯೇ ಎಂಬ ಪ್ರಶ್ನೆ ಇದ್ದೇ ಇದೆ . ಈ ಎಲ್ಲ ಗೊಂದಲದ ಹಿಂದೆ ಇದ್ದುದು ನಮ್ಮ ಜೀವನ ದೃಷ್ಟಿ ಹಾಗೂ ವಿಧಾನದ ಬಗೆಗಿದ್ದ - ಸ್ಥಗಿತಗೊಂಡಿದ್ದ - ನಮ್ಮ ಆಲೋಚನೆಯ ದಾರಿದ್ರ್ಯ ಹಾಗೂ ಪಶ್ಚಿಮದ ಆಧುನಿಕತೆ ಕುರಿತಂತೆ ಕೀಳರಿಮೆ ತುಂಬಿದ ನಮ್ಮ ಕುತೂಹಲ. ಇದರ ಪರಿಣಾಮವಾಗಿ ಪಶ್ಚಿಮದ ಆಧುನಿಕತೆಯ ವಿರುದ್ಧ ತಮ್ಮದೇ ಕ್ರಾಂತಿಕಾರಿ ಆಲೋಚನೆಗಳ ಮೂಲಕ ಸಮರ ಸಾರಿದ್ದ ಗಾಂಧಿ ಕೂಡ ಕ್ರಮೇಣ ಜನಸಾಮಾನ್ಯರ ಕಣ್ಣಿನಲ್ಲಿ ಅಪ್ರಸ್ತುತರಾಗಿ ಹೋದರು. ಲೋಹಿಯಾ ಹಿಂದೊಮ್ಮೆ ಕಮ್ಯುನಿಸಮ್ಮನ್ನು ಕ್ರಿಶ್ಚಿಯಾನಿಟಿ ನಂತರ ಪಶ್ಚಿಮವು ಏಷ್ಯಾದ ಮೇಲೆ ಪ್ರಯೋಗಿಸಿರುವ ಅಸ್ತ್ರವೆಂದು ಬಣ್ಣಿಸಿದ್ದರು. ಈಗ ಜಾಗತೀಕರಣವನ್ನೂ ಆ ಪಟ್ಟಿಗೆ ಸೇರಿಸಬಹುದಾಗಿದೆ.
ಹೀಗಾಗಿ ಜಾಗತೀಕರಣವೆಂಬುದು ತನ್ನ ಹೆಚ್ಚುವರಿ ಬಂಡವಾಳದ (ಇದು ಉತ್ಪತ್ತಿಯಾದದ್ದೂ ವಸಾಹತುಶಾಹಿಯಿಂದಾಗಿಯೇ) ಲಾಭದಾಯಕ ಹೂಡಿಕೆಗಾಗಿ ಹೊಸ ಹೊಸ ಮಾರುಕಟ್ಟೆಯನ್ನು ಸೃಷ್ಟಿಸುವ, ಕಂಡುಕೊಳ್ಳುವ ಪಶ್ಚಿಮದ ತಂತ್ರವೇ ಆಗಿದೆ. ನಮ್ಮ ಜೀವನ ದೃಷ್ಟಿಯೇ ತಪ್ಪಾಗಿದೆ, ನಮ್ಮ ಜೀವನ ಕ್ರಮವೇ ಅರ್ಥಹೀನವಾಗಿದೆ ಎಂದು ನಂಬುವ ಹುಂಬರು ಮಾತ್ರ ಜಾಗತೀಕರಣದ ಈ ಆವೃತ್ತಿಯನ್ನು ವರವೆಂದು ಪರಿಗಣಿಸಿಯಾರು. ಹೀಗೆ ಭಾರತೀಯ ಮನಸ್ಸುಗಳಿಗೆ ಅಸಮಧಾನದ, ಅತೃಪ್ತಿಯ ಬೆಂಕಿ ಹಚ್ಚಿ ಅದರ ತಳಮಳದಲ್ಲಿ ಮೈಕಾಯಿಸಿಕೊಳ್ಳುವ ಪಶ್ಚಿಮದ ತಂತ್ರವಾಗಿರುವ ಜಾಗತೀಕರಣವನ್ನು ನಿಯಂತ್ರಿಸುವುದು ಹೇಗೆ? ಅದನ್ನು ಗಿರಿಯವರು ಸೂಚಿಸಿರುವಂತೆ ನಮ್ಮ ಆದ್ಯತೆಯ ಕ್ಷೇತ್ರಗಳ ಸುಧಾರಣೆಗಾಗಿ ಬಳಸಿಕೊಳ್ಳುವುದು ಹೇಗೆ? ಅವರು ಬಂಡವಾಳ ತೊಡಗಿಸುವುದೇ, ಷರತ್ತುಗಳ ಮೇಲೆ. ನಾವೂ ಷರತ್ತುಗಳನ್ನೂ ಹಾಕುತ್ತಿರುವೆವಾದರೂ, ಮೂಲತಃ ಅವರ ಅಭಿವೃದ್ಧಿ ಮಾದರಿಯನ್ನು - ಕೈಗಾರೀಕೀಕರಣ ಮತ್ತು ನಗರೀಕರಣವನ್ನು ಆಧರಿಸಿದ ಗ್ರಾಹಕ ಸಮಾಜವೊಂದನ್ನು ಸೃಷ್ಟಿಸುವುದು - ಒಪ್ಪಿಕೊಂಡೇ, ಆಡಳಿತಾತ್ಮಕ ನೆಲೆಯ ಷರತ್ತುಗಳನ್ನಷ್ಟೇ ಹಾಕುವ ಅವಕಾಶವನ್ನು ನಾವು ಹೊಂದಿದ್ದೇವೆ. ಇದರ ಪರಿಣಾಮಗಳನ್ನು ಎರಡು ಉದಾಹರಣೆಗಳ ಮೂಲಕ ವಿಷದೀಕರಿಸಬಹುದು. ಒಂದು ಅತಿ ಚಿಕ್ಕ ಆದರೆ ಸೂಕ್ಷ್ಮ ಉದಾಹರಣೆ: ಜಾಗತೀಕರಣ ಉದ್ಯೋಗ ಸೃಷ್ಟಿಯ ಹೆಸರಲ್ಲಿ ದೊಡ್ಡ ಪ್ರಮಾಣದಲ್ಲಿ ತಂದಿರುವ ಕಾಲ್ ಸೆಂಟರ್ಗಳಲ್ಲಿ ಭಾರತದ ಭವಿಷ್ಯವನ್ನು ರೂಪಿಸಬೇಕಾದ ನಮ್ಮ ಮಕ್ಕಳು, ತಮ್ಮ ಭಾಷಾ ವೈಖರಿಯನ್ನಷ್ಟೇ ಅಲ್ಲದೆ (ಇದನ್ನು ಬೇಕಾದರೆ, ಒಂದು ಕೌಶಲ್ಯವೆಂದು ಪರಿಗಣಿಸಬಹುದು) ತಮ್ಮ ಹೆಸರುಗಳನ್ನೂ ಬದಲಾಯಿಸಿಕೊಳ್ಳಬೇಕಾದ ಒತ್ತಡದ ಪರಿಣಾಮಗಳಾದರೂ ಎಂತಹುದು? ತಮ್ಮ ಹಗಲುಗಳನ್ನು ಕಳೆದುಕೊಂಡ ಅವರು ಏನಾಗಿದ್ದಾರೆ ಎಂಬ ಬಗ್ಗೆ ನಡೆದಿರುವ ಸಮೀಕ್ಷೆಗಳ ಬಗ್ಗೆ ಯಾರಾದರೂ ತಲೆ ಕೆಡಿಸಿಕೊಂಡಿದ್ದಾರೆಯೇ? ಉದ್ಯೋಗ ಸೃಷ್ಟಿ ಆಗಬೇಕಾಗಿರುವುದು, ರಾಷ್ಟ್ರವನ್ನು ಕಟ್ಟಲೇ ಹೊರತು, ಕೆಡವಲಲ್ಲ ಅಲ್ಲವೇ?
ಇನ್ನೊಂದು ದೊಡ್ಡ ಉದಾಹರಣೆ: ಇತ್ತೀಚೆಗೆ ವಿವಾದಕ್ಕೆ ಸಿಕ್ಕಿ ಕೇಂದ್ರ ಸರ್ಕಾರದ ಅಸ್ತಿತ್ವವನ್ನೇ ಅಲುಗಾಡಿಸುತ್ತಿರುವ ಅಮೆರಿಕಾದೊಡನೆಯ ನಾಗರಿಕ ಪರಮಾಣು ಒಪ್ಪಂದ. ಅದರ ತಾಂತ್ರಿಕ ಅನುಕೂಲಗಳು ಹಾಗೂ ಅನಾನುಕೂಲಗಳು ಏನೇ ಇರಲಿ - ಅದೀಗ ರಾಷ್ಟ್ರಾದ್ಯಂತ ಬಿಸಿ ಬಿಸಿ ಚರ್ಚೆಯಾಗುತ್ತಿದೆ - ಅದನ್ನು ಸಮರ್ಥಿಸಲು ನಮ್ಮ ಪ್ರಧಾನಿ ನೀಡಿರುವ ಎರಡು ಕಾರಣಗಳನ್ನು ಗಮನಿಸಿ. ಒಂದು ಈ ಒಪ್ಪಂದವಿಲ್ಲದೆ ನಾವು ಜಾಗತಿಕ ಶಕ್ತಿಯಾಗಲೂ ಸಾಧ್ಯವಿಲ್ಲ. ಎರಡು: ಅಮೆರಿಕಾದ ಈವರೆಗಿನ ಅಧ್ಯಕ್ಷರ ಪೈಕಿ ಬುಷ್ರೇ ಭಾರತದ ಬಗ್ಗೆ ಅತ್ಯಂತ ಸ್ನೇಹ ಪ್ರದರ್ಶಿಸಿರುವವರು! ಈ ಎರಡೂ ಎಷ್ಟು ಅನಾಹುತಕಾರಿ ಸಮರ್ಥನೆಗಳೆಂದರೆ, ನಮ್ಮ ಕುಲಗೆಟ್ಟ ರಾಜಕಾರಣಿಗಳ ಮಧ್ಯೆ ತಮ್ಮ ಶುದ್ಧ ಹಸ್ತ ಹಾಗೂ ಸಭ್ಯ ವರ್ತನೆಯ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ಮನಮೋಹನ ಸಿಂಗರು, ಗೊತ್ತಿದ್ದೋ ಗೊತ್ತಿಲ್ಲದೆಯೋ, ಭಾರತದ ಪರ ಅಮೆರಿಕಾದ ಎಂತಹ ದಲ್ಲಾಳಿಯಾಗಿದ್ದಾರೆ ಎಂಬ ಆಘಾತಕಾರಿ ಸಂಗತಿ ಸ್ಪಷ್ಟವಾಗುತ್ತದೆ. ಈ ಪರಮಾಣು ಒಪ್ಪಂದದ ಹಿನ್ನೆಲೆಯಲ್ಲಿ ಜಾಗತಿಕ ಶಕ್ತಿ ಎಂಬುದರ ಅರ್ಥವಾದರೂ ಏನು? ಅಮೆರಿಕಾದಂತಹ 'ದೊಡ್ಡಣ್ಣ'ನಿಗೆ ತಮ್ಮಣ್ಣನಾಗುವುದು ಎಂದೇ? ಇಡೀ ಜಗತ್ತಿನಿಂದ ಹಲವಾರು ಕಾರಣಗಳಿಗಾಗಿ ಹಿಡಿಶಾಪ ಹಾಕಿಸಿಕೊಳ್ಳುತ್ತಿರುವ ಬುಷ್ ನೀಡುತ್ತಿರುವ ಸ್ನೇಹ ಹಸ್ತದ ಹಿಂದಿನ ಉದ್ದೇಶಗಳನ್ನು ನಾವು ಸಂಪೂರ್ಣವಾಗಿ ವಿಶ್ಲೇಷಣೆ ಮಾಡಿದ್ದೇವೆಯೇ? ಈ ಮನಮೋಹನ ಸಿಂಗರು ಈ ಒಪ್ಪಂದದ ಮೇಲೆ ತಮ್ಮ ರಾಜಕೀಯ ಜೀವನವನ್ನೇ ಏಕೆ ಪಣವಾಗಿಡಲು ಹೊರಟಿದ್ದಾರೆ? ಈ ಪರಮಾಣು ಒಪ್ಪಂದದ ಹಿಂದೆ ಮಧ್ಯಪಾಚ್ಯ ಹಾಗೂ ಚೀನಾ ಸೇರಿದಂತೆ ಪೂರ್ವ ಏಷ್ಯಾದ ಮೇಲೆ ರಾಜಕೀಯ ನಿಯಂತ್ರಣ ಸಾಧಿಸಲು ಭಾರತವನ್ನು ತನ್ನ ಒಂದು ಮಿಲಿಟರಿ ಏಜೆಂಟನನ್ನಾಗಿ ರೂಪಿಸುವ ದೀರ್ಘಕಾಲಿಕ ತಂತ್ರವಿಲ್ಲವೇ? ಈ ಬೆಳವಣಿಗೆ ಜಾಗತಿಕ ರಾಜಕಾರಣದ ಸದ್ಯದ ಸಮೀಕರಣಗಳ ಮಧ್ಯೆ ಭಾರತವನ್ನು ಯಾವ ಸ್ಥಿತಿಗೆ ದೂಡಬಹುದು? ಅದರ ರಾಜಕೀಯ ಸ್ವಾಯತ್ತತೆ ಎಷ್ಟರ ಮಟ್ಟಿಗೆ ಭಂಗಗೊಳ್ಳಬಹುದು? ಮಾರುಕಟ್ಟೆಯನ್ನು ಝಗಝಗಿಸುವ ವೈವಿಧ್ಯಮಯ ವಸ್ತುಗಳಿಂದ ಸಮೃದ್ಧಗೊಳಿಸಿ, ಮನುಷ್ಯರನ್ನು ಚಪಲಚಿತ್ತರನ್ನಾಗಿ ಮಾಡುವ ಮೂಲಕ ಇಂತಹ ಮುಖ್ಯ ಪ್ರಶ್ನೆಗಳನ್ನೇ ಮರೆಸಿಬಿಡುವ ಜಾಗತೀಕರಣವನ್ನು ಇಡಿಯಾಗಿ ಒಪ್ಪಿಕೊಳ್ಳುವುದು ಸಾಧ್ಯವೇ?
ಹೀಗಾಗಿ ಇಂದು ಮಧ್ಯಮ ಮಾರ್ಗವೆಂದರೆ, ವಿದೇಶಿ ಬಂಡವಾಳ ಎನ್ನುವುದು ಪಡೆಯುವವರ ಅಗತ್ಯದಷ್ಟೇ ಕೊಡುವವರ ಅಗತ್ಯವೂ ಆಗಿದೆ ಎನ್ನು ರೀತಿಯಲ್ಲಿ ಅದರ ಮೇಲಿನ ಷರತ್ತುಗಳನ್ನು ನಮ್ಮ ಅಭಿವೃದ್ಧಿ ನೀತಿಗನುಗುಣವಾಗಿ ರೂಪಿಸುವ ತಾಕತ್ತುಳ್ಳ ದೇಶೀ ಪ್ರಜ್ಞೆಯ ರಾಜಕಾರಣವನ್ನು ಕಟ್ಟುವುದೇ ಆಗಿದೆ. ಇದನ್ನು ಇಂದಿನ ರಾಜಕಾರಣ ಸಮರ್ಥಿಸುತ್ತಿರುವ ಜಾಗತೀಕರಣದ ಆವೃತ್ತಿಯ ಅನಾಹುತಗಳನ್ನು ಜನರಿಗೆ ಹೇಳುವ ಮೂಲಕವೇ ಆರಂಭಿಸಬೇಕಾಗಿದೆ. ಇದು ಕಷ್ಟದ ದಾರಿ; ಆದರೆ ಅನಿವಾರ್ಯದ ದಾರಿಯೂ ಹೌದು. ಈ ದಾರಿಯಲ್ಲೇ ರಾಜಕಾರಣದ ಪರ್ಯಾಯ ಮಾದರಿಗಳು ಮೂರ್ತ ರೂಪ ಪಡೆಯುವುವು ಎಂಬ ನಂಬಿಕೆ ನನ್ನದು. ಗಿರಿಯವರಂತಹ ಪ್ರಗತಿಪರ ರೈತರೂ ಜಾಗತೀಕರಣದ ವಿರೋಧವನ್ನು ತಪ್ಪಾಗಿ ಅರ್ಥಮಾಡಿಕೊಳ್ಳುವ ಪರಿಸ್ಥಿತಿ ಬಗ್ಗೆ ಚಿಂತಿತನಾಗಿ ಈ ಬಗ್ಗೆ ಇಷ್ಟು ವಿಸ್ತಾರವಾಗಿ ಬರೆಯಬೇಕಾಯಿತಷ್ಟೆ.
ಅಂದಹಾಗೆ: ಈ ಪರಮಾಣು ಒಪ್ಪಂದದ ಗಲಾಟೆಯಲ್ಲಿ ಅರ್ಜೆಂಟೈನಾದಲ್ಲಿ ಬಂಧಿತನಾಗಿದ್ದ ಬೋಫರ್ಸ್ ಲಂಚ ಪ್ರಕರಣದ ಅಪರಾಧಿ ಕ್ವಟ್ರೋಚಿ ಅಲ್ಲಿನ ನ್ಯಾಯಾಲಯದಿಂದ ಬಿಡುಗಡೆ ಹೊಂದಿ ತನ್ನ ಸ್ವದೇಶ ಇಟಲಿಗೆ ಹಾರಿದ್ದಾನೆ. ಇದಕ್ಕೆ ಸಹಕರಿಸಿದವರು ನಮ್ಮ ಕೇಂದ್ರ ಕಾನೂನು ಸಚಿವರೇ ಎಂಬುದೀಗ ಬಹಿರಂಗಗೊಂಡಿದೆ. ಇಂತಹ ವಿಷಯಗಳಲ್ಲಿ ಸಾರ್ವಭೌಮತ್ವ ಹೊಂದಿರುವುದೆಂದು ಹೇಳಲಾದ ಸಿ.ಬಿ.ಐ.ಯನ್ನೇ ಯಾಮಾರಿಸಿ ಈ 'ಅಪರಾಧಿ ರಕ್ಷಣೆ'ಯ ಕೃತ್ಯವನ್ನೆಸಗಲಾಗಿದೆ ಎಂದರೆ, ನಮ್ಮ ರಾಜಕಾರಣದ ನೈತಿಕತೆ ಯಾವ ಮಟ್ಟಕ್ಕೆ ಕುಸಿದಿರಬೇಡ! ಹಾಗಾಗಿಯೇ ಇರಬೇಕು, ಆತ್ಯಂತಿಕವಾಗಿ ದೇಶವನ್ನೇ ಮಾರಲು ಹೊರಟಿರುವ ಜಾಗತೀಕರಣಕ್ಕೆ ಎಲ್ಲ ಕಡೆಯಿಂದಲೂ ಇಷ್ಟೊಂದು ಬೆಂಬಲ!
Comments
ಉ: ಜಾಗತೀಕರಣವೂ, ನಾಗರಿಕ ಪರಮಾಣು ಒಪ್ಪಂದವೂ...