ಕಜ್ಜಿಯ ಕಥೆ

ಕಜ್ಜಿಯ ಕಥೆ

ಬರಹ

ಅಜ್ಜ ಮುತ್ತಜ್ಜ ಅವರಜ್ಜರಿಗು
ಹೆಜ್ಜೆ ಹೆಜ್ಜೆಗು ಕಾಡಿ ಕನಲಿಸಿದ
ಕಜ್ಜಿಯ ಕಥೆಯಿದನಾಲಿಸಿ ಕೇಳಿರಿ ಜನರೆಲ್ಲ
ಅಜರುದ್ರಾದಿ ದೇವಗಳು
ಕಜ್ಜಿಯುಪಟಳದಿ ನೊಂದು
ಹೆಜ್ಜೇನು ಕಡಿದಂತಾಗಿರಬಹುದು ಹಿಂದಣಲಿ. ೧

ಇದು ಒಂದು ಕ್ರಿಮಿಸೂಕ್ಷ್ಮಾಣು
ಬದುಕುವದ ಕಲಿತಿಹುದು
ಮೇದು ಚರ್ಮದೊಂದು ಪದರ ಹಗಲಿರುಳು
ಪದರ ಪದರವಾಗಿಹ ಚರ್ಮದ
ಹದವಾಗಿಹ ಹೊರಪದರವದು
ಹಾದಿಯಾಗಿಹುದು ಅದರೋಟದಾಟಕೆ. ೨

ಉಣ್ಣೆಯ ಜಾತಿಗೆ ಸೇರಿಹುದು
ಕಣ್ಣಿಗೆ ಕಾಣಿಸದು ಸುಲಭದಲಿ
ಹೆಣ್ಣು ಗಂಡೆಂಬ ಭೇಧವಿರದದರೋಡಾಟಕೆ
ಬಣ್ಣ ಬಣ್ಣದ ಚರ್ಮವಿದು
ಹಣ್ಣಾಗಿರುವ ಚರ್ಮವಿದೆಂದು
ಉಣ್ಣೆ ಭೇಧವೆಣಿಸದು ತಾನತೀತ ಸಣ್ಣ ತನಕೆ ೩

ಮೇಲಿನಿಂ ತಟ್ಟಿದಂತಿಹ ದೇಹ
ಕಾಲೆರಡು ಒಂದೊಂದು ಕಡೆ
ಕಾಲ ತುದಿಯಲಿ ಇಕ್ಕಳದ ಹಿಡಿತ
ಬಿಲವ ಕೊರೆಯಲಪ್ಪಂತ
ಮೇಲೆ ಕೋರೆದಾಡೆಗಳು
ಮೆಲ್ಲಲನುಕೂಲ ಚರ್ಮದ ಪದರಗಳ. ೪

ಚರ್ಮವನು ಮೆಲ್ಲುವುದು ತಾ
ಕರ್ಮವದು ಬಿಲವ ಕೊರೆ ಕೊರೆದು
ಮರ್ಮದಲಿ ಬೀಜಗಳ ಸುರಿಸುತ್ತ ಹಗಲಿರುಳು
ಚರ್ಮವೊಂದೆ ಅದರ ಊಟ
ಚರ್ಮದಲೆ ಅದರ ಓಡಾಟ
ಚರ್ಮವನು ಬಿಟ್ಟಿಹದು ಇದು ಅದರ ವಾಟ. ೫

ಬಡವ ಬಲ್ಲಿದ ಕಡುಜಾಣ
ದಡ್ಡ ಹೆಡ್ಡ ಅವರಿವರ
ಒಡಲೆಂದು ಮುನಿಸಿಲ್ಲ, ಸರಿಸಮರು ಎಲ್ಲ
ಬಡ್ಡಿ ಸಾಲಕೆ ಕೊಡುವ
ದೊಡ್ಡ ಧನಿಕನ ತೆರದಿ
ಸಡ್ಡು ಹೊಡೆದಿತ್ತಿಹುದು ಉಪಟಳವ ೬

ಬೆರಳುಗಳ ಸಂದುಗಳು
ಕೊರಳಿನಿಂದಡಿಯಿರುವ ದೇಹ
ಮಾರನ ತಾಣವದು ಬಲು ಪ್ರೀತಿಯದಕೆ
ತರುಣಿಯರ ಮೊಲೆಯೂಟ
ಕಿರು ಕೂಸಿನ ಕೆನ್ನೆಯಂಗಳದಾಟ
ಬರಗೆಟ್ಟ ದೇವರಿಗೆ ಪರ್ವಮಾಡಿಸಿದಂತೆ. ೭

ಮೊದಲು ಕಾಣಿಸಿತು ಕೆರೆತದಲಿ
ಬಾಧೆಯದು ವಿಪರೀತ ಮುಸ್ಸಂಜೆಯಲಿ
ಹದವರಿತು ಕೆರೆದರೂ ನೀಗದದು ಹಗಲಿರುಳು
ವಿಧವಿಧದ ಗುಳ್ಳೆಗಳು
ಒಂದೊಂದಾಗಿ ಅವತರಿಸಿದವು
ಅದಕಿಲ್ಲ ಮುಕ್ತಿ, ಕೆರೆತವೊಂದೆ ಯುಕ್ತಿ. ೮

ಹತ್ತು ಹನ್ನೆರಡು ಉಣ್ಣೆಗಳು
ಹತ್ತಿದೊಡೆ ಸಾಕು ದೇಹದೊಳು
ಕುತ್ತು ಬಂದಿತ್ತು, ಹೊತ್ತು ಕಳೆಯಿತು ಕೆರೆಯುತಲಿ
ಬಿತ್ತಿದವು ಸಂತಾನಬೀಜವನು
ಹತ್ತು ದಿನಗಳು ಕಳೆದಿರಲು
ಹುತ್ತದಂತಾಗಿತ್ತು ದೇಹ ಉಣ್ಣೆ ಮರಿಗಳಿಗೆ. ೯

ಮರಿ ಬೆಳೆದು ಬಲಿತಾಗ
ಬರಿ ತನ್ನ ಸಂಕುಲದ
ನೂರಾರು ಜೀವಿಗಳ ಸೃಷ್ಟಿ ಮಾಡಿದವು
ಕೆರೆತವೊಂದೆ ಯುಕ್ತಿ
ಕೆರೆತದಿಂದಲೆ ಮುಕ್ತಿ
ಕೆರೆತವೊಂದೆ ದಿನ ರಾತ್ರಿಯಾಗಿತ್ತು ಚಿಂತೆ. ೧೦

ಸಂಕಷ್ಟಗಳು ಬಂದಡರಿದವು
ಬಿಂಕ ಬಿನ್ನಾಣವಡಗಿದವು
ಮಂಕಾಗಿ ಹೋದ ರೋಗಿ ಉಣ್ಣೆಯೊಡನಾಟದಲಿ
ಹೂಂಕರಿಸಿದವು ಮಿಣಿಜೀವಿಗಳು
ಅಂಕುರಿಸಿದವು ಗಾಯಗಳು
ಅಂಕದ ಪರದೆ ಜಾರಿತ್ತು ಜನರೊಡನಾಟಕೆ. ೧೧

ಅಳಿದವು ರಾಜ್ಯಗಳು ಕಜ್ಜಿಯಲಿ
ಗೋಳಿನ ಕೆರೆತಗಳೆದ್ದು ಸೈನ್ಯದಲಿ
ಗಾಳಿಗೋಪುರವಾಯ್ತು ಯುದ್ಧೋತ್ಸಾಹ ಯೋಧರಲಿ
ಕೇಳಿದರೆ ಬಲು ಅಚ್ಚರಿಯ
ತಿಳಿದವರು ಹೇಳುವರು ಕತೆ
ಅಳಿದರಾಜರ ಗೋಳ ಕಜ್ಜಿಯುಪಟಳದಿ. ೧೨

ತರುವುದು ಮಿಣಿಜೀವಿ ಕಾಟ
ಊರುವುದು ಇಸುಬಿನ ಸಂಕಟ
ತುರಿಕೆಯಲಿ ಮಾನಸಿಕ ತುಮುಲ ಹೊಯ್ದಾಟ
ಭಾರಿ ಬೇಸರವ ತರುವುದು
ಬೇರೆ ದಾರಿಯ ಕಾಣದಲೆ
ಕೊರಳ ಕುಣಿಕೆಗೊಪ್ಪಿಸುವಂತಾಗುವುದು. ೧೩

ಆದರೇನು, ಅದರಾಟ ನಡೆಯದು
ಬೆದರದಲೆ ಚರ್ಮವೈದ್ಯರಲಿ ಸಾರೆ
ಸಾದರದ ಚಿಕಿತ್ಸೆಯಲಿ ಅದರಂತ್ಯವಿಹುದು. ೧೪

ಡಾ.ವಿಜಯಶಂಕರ ಮೇಟಿಕುರ್ಕೆ