ಅನಿಸುತಿದೆ ಯಾಕೋ ಇಂದು...
ಬೆಂಗಳೂರಿನಿಂದ ರಜೆ ಮುಗಿಸಿ ಹಿಂತಿರುಗಿ ಸುಮಾರು ವಾರವಾಯ್ತು. ಮನೆಯಲ್ಲಿ ತೆರೆದಿರುವ ಸೂಟುಕೇಸು ನೋಡುತ್ತಾ ಏನೋ ಒಂಥರ ಡಿಪ್ರೆಶನ್. ಅಯ್ಯೋ, ಹೋಗಿಬಂದಿದ್ದು ಆಗೇ ಹೋಯ್ತೇ ಎಂಬ ವ್ಯಥೆ. ಅಲ್ಲಿಯವರೊಡನೆ ಬೆರೆತು ಕಳೆದ ಕ್ಷಣಗಳ ನೆನಪು. ಹೀಗೆ ಬಾಧೆ ಪಡುವ ಬದಲು ಯಾಕೆ ಸುಮ್ಮನೆ ವಾಪಸ್ಸು ಹೋಗಿಬಿಡಬಾರದು? ಏನಿದೆ ಈ ಸುಡುಗಾಡು ನೆಲದಲ್ಲಿ ಅಂತಹ ಮೋಡಿ?
ಬೆಂಗಳೂರಿನಲ್ಲಿರುವ ಬಂಧುಗಳು ಅಲ್ಲಿನ ಕಟ್ಟುಪಾಡುಗಳ ಜೊತೆ ಸೆಣಸುತ್ತಾ ಹಾಗೆಯೇ ಅಲ್ಲಿನ ಜೀವನಕ್ಕೆ ಒಗ್ಗಿಕೊಂಡೂ ಇದ್ದಾರೆ. ಪರದೇಶಕ್ಕೆ ಕೋಟಿ ರೂಪಾಯಿ ಕೊಟ್ಟರೂ ಬರಲಾರೆ ಎನ್ನುವ ಅಭಿಮತ. ಅದು ಸರಿ, ಬೆಂಗಳೂರಿನಲ್ಲಿ ಈಗ ದುಡ್ಡು ಕೊಟ್ಟರೆ ಸಿಗದಿರುವ ಸೌಲಭ್ಯ ಯಾವುದು? ಹಾಗಿದ್ದಲ್ಲಿ, ನಾನ್ಯಾಕೆ ಅಲ್ಲಿಗೆ ಹೋಗಲಾರೆ? ಟ್ರಾಫಿಕ್ಕು, ಪೊಲ್ಲ್ಯುಶನ್ನು, ಅದೂ, ಇದೂ, ಕುಂಟು ನೆಪಗಳು. ಹೀಗೆ ನಾನೊಬ್ಬಳೇ ಅಲ್ಲ, ಇಲ್ಲಿ ನನ್ನಂತೆ ನೂರಾರು ತ್ರಿಶಂಕು ಸ್ಥಿತಿಯಲ್ಲಿರುವ ಪರದೇಶಿಗಳು. ಇಲ್ಲಿ ಕೆಲಸದವರು ಸಿಗೊಲ್ಲ, ತುಂಬಾ ಚಳಿ ದೇಶ, ಒಂಟಿತನ ಕಾಡುತ್ತೆ ಅಂತ ಗೊಣಗುತ್ತಲೇ ಇರುತ್ತಾರೆ. ಹಾಗಾದರೆ ಮುಚ್ಕೊಂಡು ವಾಪಸ್ಸು ಹೋಗಿ ಎಂದೊಡನೆಯೇ, ಇಲ್ಲ ಜಪ್ಪಯ್ಯ ಹೋಗಲಾರೆ ಎಂಬ ಉತ್ತರ!
ಅಮೇರಿಕಕ್ಕೆ ಬಂದವರಾದರೂ ನೋಡಿ, ಇಲ್ಲಿನ ಬದುಕಿನಲ್ಲಿ ಸುಳಿವೇ ಸಿಗದಂತೆ ಸೇರಿ ಹೋಗುತ್ತಾರಾ? ಇಲ್ಲವೇ ಇಲ್ಲ. ಆ ಕೂಟ, ಈ ಸಂಸ್ಥೆ, ಅಂತ ಭಾರತೀಯವಾಗಿ ಎನೇ ಕಂಡ್ರೂ ಅದಕ್ಕೆ ತಗಲ್ಹಾಕ್ಕೋತಾರೆ. ಸರಿ, ಅಲ್ಲಿ ಭಾರತೀಯ ಅಡುಗೆ, ಸಂಸ್ಕೃತಿ ಅಂತ ಹೇಳ್ಕೊಂಡು ಮಕ್ಕಳನ್ನು ಭಾರತೀಯರ ತರ ಬೆಳೆಸೋದಕ್ಕೆ ಪ್ರಯತ್ನಪಡ್ತಾರೆ!!! ಹಾಗಾದ್ರೆ, ಭಾರತವನ್ನು ತೊರೆದು ಬಂದಿದ್ದು ಯಾಕೆ?
ಮತ್ತೆ ಇಲ್ಲಿಂದ ಬೆಂಗಳೂರಿಗೆ ವಾಪಸ್ಸು ಹೋದವರ ಕತೆ ಕೇಳಿ. ಅಲ್ಲೇ ಒಂದು ಎನ್.ಆರ್.ಐ. ಕಾಲೋನಿ ಮಾಡ್ಕೊಂಡು, ಅಲ್ಲಿನ ಲೋಕಲ್ ಜನಕ್ಕೂ ನಮಗೂ ಸಂಬಂಧವೇ ಬೇಡ ಅನ್ನೋ ರೀತಿ ಬದುಕೋದಿಕ್ಕೆ ಶುರು ಮಾಡ್ತಾರೆ! ಅವರ ಮಕ್ಕಳೂ ಸಹ ಹೋಗೋದು ಇಂಟರ್ನ್ಯಾಷನಲ್ ಸ್ಕೂಲ್ಗೆನೇ. ಅಲ್ಲಿ ಸ್ಕೂಲ್ನಲ್ಲಿ, ರಾಕ್ ಮ್ಯುಸಿಕ್ಕು, ಫ್ರೆಂಚ್ ಲೆಸನ್ನ್ಸು ಅಂತ ಫಾರಿನ್ ನಂಟು ಇಟ್ಕೋತಾರೆ. ಹಾಗಾದ್ರೆ, ಅಲ್ ಹೋಗಿದ್ ಯಾಕೆ?
ಯಾಕೋ ಹೇಳ್ತೀನಿ ಕೇಳಿ, ಈ ಜೆಟ್ ಲ್ಯಾಗ್ ಒಬ್ಬೊಬ್ಬರಿಗೆ ಒಂಥರ affect ಮಾಡುತ್ತೆ. ನನ್ನ ಕೈಯಲ್ಲಿ ಹೀಗೆಲ್ಲಾ ಬರೆಸುತ್ತಿದೆ :-) ಮೇಬಿ ನಾನು ಇದೆಲ್ಲಾ ರಗಳೆ ಬದಿಗಿಟ್ಟು, ಹುರಿಗಾಳು ಮೆಲ್ಲುತ್ತಾ, ಊರಿಂದ ತಂದ ಹೊಸ ಸಿ.ಡಿ. ಕೇಳುತ್ತಾ, ಸೂಟುಕೇಸು ಖಾಲಿ ಮಾಡೋದೇ ಒಳ್ಳೇದು ಅನ್ಸತ್ತೆ.
Comments
ಉ: ಅನಿಸುತಿದೆ ಯಾಕೋ ಇಂದು...