ಮೇಲೆ-ಕೆಳಗೆ

ಮೇಲೆ-ಕೆಳಗೆ

ಬರಹ

ಅದೇನೋ ನಿಜ
ಮಹಡಿ ಮೆಟ್ಟಿಲನ್ನೇರಿ ಮೇಲೆ ನಿಂತವರಿಗೆ
ಎಲ್ಲಾ ಗೊತ್ತಾಗುತ್ತದೆ
ಎಲ್ಲಾ ಕಾಣುತ್ತದೆ

ನಮ್ಮ ಕತೆ ಬೇರೆ
ನಾವೋ ಸುಂದರ ಭವಿಷ್ಯದ ಒತ್ತೆಯಾಳುಗಳು
ಬೀದಿಯ ಕಸ ಗುಡಿಸುವವರು
ಮೆಟ್ಟಿಲನ್ನೇರಿದವರು ನಮ್ಮ ಕಣ್ಣಿಗೆ ಆಗಾಗ ಬೀಳುವರು
ಮಾತನಾಡಬೇಡವೆಂಬಂತೆ ತುಟಿಯ ಮೇಲೆ ಬೆರಳಿಟ್ಟುಕೊಂಡಿರುವರು

ನಮಗೋ ತಾಳ್ಮೆ ಹೆಚ್ಚು
ಭಾನವಾರ ಬಂದರೆ ಸಾಕು
ನಮ್ಮ ಹೆಂಡಿರು ಅಂಗಿಗೆ ತೇಪೆ ಹಾಕುತ್ತಾರೆ
ಈ ವಾರ ಸೀಮೆ ಎಣ್ಣೆ ಸಿಗುವುದೋ ಎಂದು ಪರದಾಡುತ್ತಾರೆ
ಉಪೇಂದ್ರ ರವಿಚಂದ್ರರ ಬಗ್ಗೆ ಕನಸು ಕಾಣುತ್ತಾರೆ
ಕತ್ತಲಿಳಿದಾಗ ನಮ್ಮೊಡನೆ ಸೇಂದಿಬಾಟಲು ಎತ್ತುತ್ತಾರೆ

ನಾವು ಮುಷ್ಠಿ ಬಿಗಿಹಿಡಿದೆತ್ತಿ ಭಾಷಣಮಾಡುವರಲ್ಲ
ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿ
ಮಾತಾಡಿ ಮಾತಾಡಿ ಗೆಳೆಯರೇ ಎದ್ದೇಳಿ ಕ್ರಾಂತಿ ಮಾಡಿ ಅನ್ನುವವರಲ್ಲ

ಈ ಅಜ್ಜಿ ಕತೆ ಕೇಳಿ ಕೇಳಿ ಸಾಕಾಗಿದೆ:
“ಗುಡಿಸಲುಗಳು ಗುಡುಗುತಿವೆ
ಬಂಗಲೆಗಳು ನಡುಗುತಿವೆ.
ಮಹಡಿ ಮಹಲುಗಳಿಗೆ ನುಗ್ಗುವೆವು.
ಬಿರುಗಾಳಿಯಂತೆ ಬೀಸುವೆವು
ಮೇಲೇರುವೆವು, ಮಹಡಿ
ಮೇಲಿರುವ ತಲೆಗಳ ತರಗೆಲೆಗಳಂತೆ ಉರುಳಿಸುವೆವು
ಆ ಎತ್ತರದಲಿ ನಿಂತು ನೋಡುವೆವು
ಎಂಥ ಭವಿಷ್ಯ
ಎಂಥ ಶೂನ್ಯ”

ತಲೆಗಳನುರುಳಿಸುವ ಆಸೆ ನಮಗಿಲ್ಲ.
ಉರುಳಿದ ತಲೆಗಳು ಮತ್ತೆ ಬೆಳೆಯುವುದು,
ಅದು ಬಲು ಸುಲಭವಯ್ಯಾ,
ಮೇಲಿನ ಒಂದೋ ಮೂರೋ ತಲೆಗಳು ಆಳುವವಯ್ಯಾ.
ಇಲ್ಲಿ ಮೆಟ್ಟಿಲ ಕೆಳಗೆ ಪೊರಕೆಗಳು, ಕಸದ ಗಾಡಿಗಳು ಕಂಗಾಲಾಗಿ
ಹಾಗೇ ಉಳಿಯುವುದಯ್ಯಾ.

ಆಗೀಗ ಕನಸು ಕಾಣುವೆವು
ಮೇಲಿನವರು ಕೆಳಗಿಳಿದು ಬಂದಂತೆ
ಬೀಡಿ ಎಳೆಯುತ್ತ, ಎಲೆ ಅಡಕೆ ಮೆಲ್ಲುತ್ತಾ
ಕುಳಿತ ನಮ್ಮೊಡನೆ ಮಾತಾಡಿದಂತೆ
--ಹೇಳುವರು ಅವರು
“ನೋಡಿರಯ್ಯಾ, ಈ ಗೋಡೆ ಮೇಲೆ ಬರೆದಿರೋದೆಲ್ಲ ಸುಳ್ಳು
ಈ ಕರಪತ್ರ ಹೇಳುವುದೆಲ್ಲ ಸುಳ್ಳು
ನಮಗೆ ಗೊತ್ತಿರುವ ಸತ್ಯ ಹೇಳಲಾರೆವು ಹೇಳದಿರಲಾರೆವು
ಸುಮ್ಮನೆ ತುಟಿ ಬಿಗಿದು ಸಹಿಸಿಕೊಳ್ಳುತ್ತಿದ್ದೇವೆ
ಈ ಅಧಿಕಾರದ
ಈ ಸಂಪತ್ತಿನ
ಈ ಸುಖದ ಮುಳ್ಳಿನ ಕಿರೀಟವನ್ನು.
ನಮಗೆ ಸುಖವಿಲ್ಲ
ನಮಗೆ ನೆಮ್ಮದಿಯಿಲ್ಲ
ನಿಮ್ಮೊಡನೆ ಇದ್ದು ನಿಮ್ಮಂತಾಗುವ ಆಸೆ ಇದೆ ನಮಗೆ.”

ಇದೆಲ್ಲ ಬರಿಯ ಕನಸು ಅನ್ನಿ.
ನಿಜವಾದೀತು ಆಗದೆ ಹೋದೀತು.
ಅದಕ್ಕೇ ನಾವು ಈ ಫುಟ್‌ಪಾತು
ಈ ಚರಂಡಿ ಪಕ್ಕದ ಜೋಪಡಿ
ಇವನ್ನು ಜೋಪಾನ ಮಾಡಿಕೊಂಡಿದ್ದೇವೆ
ಇಲ್ಲೇ ಬದುಕು ಬಿತ್ತಿ ಬೆಳೆಯುತ್ತ ಇದ್ದೇವೆ.

ಹಗೂರ ತಲೆ
ಕಿವಿಯ ಹಿಂದೆ ಬೀಡಿ ಚೂರು
ಆಸೆಯ ಒಂದು ಹನಿಯೂ ಇರದ ಹೃದಯ ಹೊತ್ತು
ದಿನ ದೂಡುತ್ತಿದ್ದೇವೆ.

ಇದು Zbigniew Herbert ಎಂಬ ಪೋಲೆಂಡ್ ದೇಶದ ಕವಿಯ ಕವಿತೆಯೊಂದರ ಸ್ಥೂಲ ಅನುವಾದ. ಕನ್ನಡದ ಬಹುತೇಕ ಬಂಡಾಯ ಧೋರಣೆಯ ಕವಿತೆಗಳು ಪ್ರತಿಪಾದಿಸುವ ಸುಳ್ಳುಗಳ ಬಲೂನಿಗೆ ಸೂಜಿ ಚುಚ್ಚುವಂತಿದೆ ಇದು. ಆದರೆ ದಾರುಣ ವಾಸ್ತವನ್ನು ಹಗುರವೆಂಬಂತೆ ತೋರುವ ಮಾತುಗಳಲ್ಲಿ ಹಿಡಿದಿಟ್ಟಿದೆ.