ಆಸ್ಪತ್ರೆಯ ಕಿಟಕಿ
(ಅಂತರ್ಜಾಲದಲ್ಲಿ ತೇಲಿ ಬಂದ ಒಂದು ಪುಟದ ಇಂಗ್ಲಿಷ್ ಕಥೆಯ ರೂಪಾಂತರ)
ಆಸ್ಪತ್ರೆಯ ಜನರಲ್ ವಾರ್ಡು ಎಂದರೆ ಮೊದಲಿಗೆ ನಮ್ಮ ಕಣ್ಣಿಗೆ ಕಾಣುವುದು ಸಾಲಾಗಿ ಜೋಡಿಸಿದ ಬಿಳಿ ಮಂಚಗಳು, ಅವುಗಳ ಮೇಲೆ ಮಲಗಿರುವ ರೋಗಿಗಳು, ಬಿಳಿ ಹೊದಿಕೆ, ಕೆಂಪು ಕಂಬಳಿ, ರೋಗನಿದಾನದ ವಿವರಪಟ್ಟಿ, ಬಾಟಲಿಯಿಂದ ನಳಿಕೆಯ ಮೂಲಕ ನಿಧಾನವಾಗಿ ರೋಗಿಯ ಮೈಗೆ ಇಳಿಯುತ್ತಿರುವ ಗ್ಲೂಕೋಸು, ಮಂಚದ ಪಕ್ಕದ ಸಣ್ಣ ಕಪಾಟು, ಅದರ ಮೇಲೆ ಥರ್ಮಾಸ್ ಫ್ಲಾಸ್ಕು, ಕಾಫಿಲೋಟ, ಬ್ರೆಡ್ಡು. ಕೆಲ ರೋಗಿಗಳು ನೋವಿನಿಂದ ನರಳುತ್ತಿದ್ದರೆ, ಇನ್ನು ಕೆಲವರು ಆರಾಮವಾಗಿ ಆಸ್ಪತ್ರೆಗೆ ಹೊಂದಿಕೊಂಡಿದ್ದಾರೆ ಒಂದಿಬ್ಬರು ತಮ್ಮ ಮಂಚದಿಂದ ಬೇರೊಂದು ಮಂಚದ ಬಳಿ ಬಂದು ಕುಳಿತು ಹರಟೆಯಲ್ಲಿ ತೊಡಗಿದ್ದಾರೆ. ಇನ್ನು ರೋಗಿಗಳನ್ನು ನೋಡಲು ಬರುವ ಹಿತೈಷಿಗಳ ದಂಡು ಬಂದರಂತೂ ಆ ವಾರ್ಡು ಒಂದು ವಠಾರವಾಗುತ್ತದೆ. ಪರಸ್ಪರ ಕುಶಲೋಪರಿ, ಊರು, ಮನೆ, ಮಕ್ಕಳು, ಮದುವೆ, ಆಸ್ತಿಪಾಸ್ತಿ ಒಟ್ಟಿನಲ್ಲಿ ಏನೆಲ್ಲ ವಿವರಗಳನ್ನು ಅಲ್ಲಿ ಕಲೆಹಾಕಬಹುದು. ಆದರೆ ಒಂದು ವಿಷಯ ಮಾತ್ರ ಸತ್ಯ, ಆಸ್ಪತ್ರೆಯ ವಾರ್ಡುಗಳಲ್ಲಿ ಇಷ್ಟೆಲ್ಲ ಜನ ಸೇರಿ ಏನೆಲ್ಲ ಮಾತುಕತೆಯಾಡಿದರೂ ಅಲ್ಲಿ ಜಗಳವೆಂಬುದೇ ಇರುವುದಿಲ್ಲ. ಜಗಳ ಮಾಡಲು ಎರಡು ವಿರುದ್ಧ ಅನಿಸಿಕೆಗಳಿರಬೇಕಲ್ಲ. ಆದರೆ ರೋಗಿಗಳೂ ಸೇರಿದಂತೆ ಬಂದವರೆಲ್ಲರೂ ಸಮಾನ ಹೃದಯಿಗಳೇ ಆಗಿರುವುದರಿಂದ ಅಲ್ಲಿ ಜಗಳಕ್ಕೇ ಆಸ್ಪದವೇ ಇಲ್ಲ ಬಿಡಿ. ಜಗಳವೇನಿದ್ದರೂ ಆಸ್ಪತ್ರೆಯ ವೈದ್ಯರ ಮೇಲೆ, ನರ್ಸುಗಳ ಮೇಲೆ ಇಲ್ಲವೇ ಇನ್ಯಾರೋ ಸಿಬ್ಬಂದಿಯ ಮೇಲೆ ಮಾತ್ರ.
ಆದರೆ ಸ್ಪೆಷಲ್ ವಾರ್ಡಿನ ಬಿಂಕ ಬಿಗುಮಾನಗಳೇ ಬೇರೆ. ಜನರಲ್ ವಾರ್ಡಿನ ಗಜಿಬಿಜಿ ಇಲ್ಲಲ್ಲ. ಅಲ್ಲಿ ಎರಡು ಮಂಚಗಳಿದ್ದರೂ ಸಹ ರೋಗಿಗಳಾಗಲೀ ಬಂಧುಗಳಾಗಲೀ ತಾವಾಯಿತು ತಮ್ಮ ಪಾಡಾಯಿತು ಎಂಬಂತಿರುತ್ತಾರೆ. ಅಲ್ಲಿ ಡಿಗ್ನಿಟಿಯ ಪ್ರಶ್ನೆ ಬರುತ್ತದೆ. ಆದ್ದರಿಂದ ಅಲ್ಲಿ ಮೌನದ್ದೇ ಕಾರುಬಾರು.
ಹೀಗೆ ಒಂದು ಆಸ್ಪತ್ರೆಯ ವಿಶೇಷ ಕೊಠಡಿಯಲ್ಲಿ ಎರಡು ಮಂಚಗಳು. ಒಂದು ದಿನ ಆ ಕೊಠಡಿಗೆ ಮರಣಾವಸ್ಥೆ ತಲುಪಿ ದಿನವಿಡೀ ಮಲಗಿಯೇ ಇರಬೇಕಿದ್ದ ಇಬ್ಬರು ವಯಸ್ಸಾದ ರೋಗಿಗಳನ್ನು ತಂದು ಮಲಗಿಸಿದರು. ಇಬ್ಬರೂ ತುಂಬಾ ಚಿಂತಾಜನಕ ಸ್ಥಿತಿಯಲ್ಲಿದ್ದರು. ಒಬ್ಬಾತನಿಗೆ ಕುತ್ತಿಗೆಯ ಮೂಳೆ ಮುರಿದಿತ್ತು, ಇನ್ನೊಬ್ಬಾತನಿಗೂ ಅಂಥದೇ ಬೇರೊಂದು ತೊಂದರೆ, ಹಾಗಾಗಿ ಇಬ್ಬರಿಗೂ ಮಲಗಿದ್ದಲ್ಲಿಯೇ ಔಷಧೋಪಚಾರ ನಡೆದಿತ್ತು. ಅವರಲ್ಲಿ ಎರಡನೆಯ ರೋಗಿ ಮಾತ್ರ ತನ್ನ ಶ್ವಾಸಕೋಶದಲ್ಲಿ ಸೇರಿಕೊಳ್ಳುವ ನೀರನ್ನು ಬಸಿಯಲಿಕ್ಕಾಗಿ ದಿನದಲ್ಲಿ ಒಂದು ತಾಸು ಎತ್ತಿ ಕೂಡಿಸುತ್ತಿದ್ದರು.
ಆ ಕೊಠಡಿಯಲ್ಲಿ ಒಂದು ರೀತಿಯ ಭಾರವಾದ ನಿಶಬ್ದ ವಿರಮಿಸಿತ್ತು. ಆ ಕೊಠಡಿಗೆ ಸಂದರ್ಶಕರಾರೂ ಬರುತ್ತಿರಲಿಲ್ಲ. ಎಂದೋ ಒಮ್ಮೆ ದಾದಿ ಬಂದು ರೋಗಿಗಳತ್ತ ನೋಡಿ ಹೊದಿಕೆ ಸರಿಪಡಿಸಿ ಏನೂ ಮಾತನಾಡದೆ ಹೊರಟುಬಿಡುತ್ತಿದ್ದಳು. ಇನ್ನುಳಿದಂತೆ ಅಲ್ಲಿ ಭಯಂಕರ ಮೌನ ಆವರಿಸಿತ್ತು.
ನಿಧಾನವಾಗಿ ಆ ರೋಗಿಗಳು ಪರಸ್ಪರ ಪರಿಚಯ ಮಾಡಿಕೊಂಡರು. ವಿಚಿತ್ರವೆಂದರೆ ಅವರ ಮಾತುಗಳೆಲ್ಲವೂ ಸಾವಿನ ಕುರಿತೇ ಇದ್ದವು. ಆ ಕೊಠಡಿಯಲ್ಲಿ ಸಾವಿನ ನಿರೀಕ್ಷೆಯಿತ್ತು. ಒಂದು ರೀತಿಯಲ್ಲಿ ಅದು ಸಾವಿನ ಮನೆಯಂತೆಯೇ ಇತ್ತು. ಕ್ರಮೇಣ ಆ ಎರಡನೆಯವನಿಗೆ ಈ ಸಾವಿನ ಚಿಂತನೆಯಿಂದ ಹೊರಬರಬೇಕೆಂದು ಅನ್ನಿಸಿತು.
ಆ ಕೊಠಡಿಯಲ್ಲಿ ಒಂದೇ ಒಂದು ಕಿಟಕಿಯಿತ್ತು. ಶ್ವಾಸಕೋಶದ ಸ್ವಚ್ಛತೆಗಾಗಿ ಆ ರೋಗಿಯನ್ನು ಎತ್ತಿ ಕೂಡಿಸಿದಾಗ ಅವನು ಆ ಕಿಟಕಿಯಿಂದಾಚೆ ದೃಷ್ಟಿ ಹಾಯಿಸುತ್ತಿದ್ದ. ಅಲ್ಲಿ ತನಗೆ ಕಾಣುತ್ತಿದ್ದ ಹೊರಗಿನ ಪ್ರಪಂಚದ ಬಗ್ಗೆ ತನ್ನ ನೆರೆಯಾತ ರೋಗಿಗೆ ವಿವರಿಸುತ್ತಾ ಆ ಕೋಣೆಯೊಳಗೆ ಭಾವನೆಗಳನ್ನು ತುಂಬಿದ.
ಕಿಟಕಿಯಿಂದಾಚೆ ಕಾಣುವ ಸುಂದರ ಉದ್ಯಾನ, ಗಿಡಮರಗಳಲ್ಲಿ ಅರಳಿದ್ದ ಹೂಗಳು, ಹಕ್ಕಿಗಳ ಕಲರವ, ತೋಳುಗಳ ಬೆಸೆದು ನಡೆದಾಡುತ್ತಿರುವ ಯುವಜೋಡಿ, ತಳ್ಳುಗಾಡಿಯಲ್ಲಿ ಎಳೆಕಂದನನ್ನು ಕೊಂಡೊಯ್ಯುತ್ತಿರುವ ತರುಣಿ, ಐಸ್ಕ್ಯಾಂಡಿ ಚೀಪುತ್ತಿರುವ ಚಿಣ್ಣರು, ಕೈಜಾರಿದ ಬೆಲೂನಿನ ಹಿಂದೆ ಓಡುತ್ತಿರುವ ಪುಟ್ಟ ಹುಡುಗಿ, ತಿಳಿಗೊಳದಲ್ಲಿ ತೇಲುತ್ತಿರುವ ಹಂಸಗಳು, ಕಾಗದದ ದೋಣಿಗಳನ್ನು ನೀರಮೇಲೆ ತೇಲಿಸುತ್ತಿರುವ ಮಕ್ಕಳು ಇವನ್ನೆಲ್ಲ ಆತ ವರ್ಣಿಸುತ್ತಿದ್ದರೆ, ಪಾಪ ! ಕುತ್ತಿಗೆ ಮುರಿದು ಏಳಲಾಗದ ಸ್ಥಿತಿಯಲ್ಲಿ ಪವಡಿಸಿದ್ದ ಆ ಇನ್ನೊಬ್ಬ ರೋಗಿಗೆ ಭಾವನೆಗಳು ಪುಟಿದೇಳುತ್ತಿದ್ದವು. ಆತ ಮಲಗಿದಲ್ಲಿಯೇ ಕಣ್ಣು ಮುಚ್ಚಿಕೊಂಡು ಆ ದೃಶ್ಯಗಳನ್ನು ಆಸ್ವಾದಿಸುತ್ತಿದ್ದ.
ಅವರಿಬ್ಬರೂ ತಮ್ಮ ಬಾಲ್ಯ, ತಂದೆತಾಯಿಯರು, ಗೆಳೆಯರು ಇತ್ಯಾದಿಗಳ ಬಗ್ಗೆ ಮಾತನಾಡುತ್ತಿದ್ದರು. ತಾವು ಓದಿದ ಶಾಲೆಗಳ ಬಗ್ಗೆ, ಶಿಕ್ಷಕರ ಬಗ್ಗೆ ಮಾತನಾಡುತ್ತಾ ಇಬ್ಬರೂ ಸರ್ಕಾರದ ಕೆಲಸಕ್ಕೆ ಸೇರಿದ ಕುರಿತೂ ಅಲ್ಲಿನ ರಸಮಯ ಸನ್ನಿವೇಶಗಳ ಕುರಿತೂ ಹಂಚಿಕೊಳ್ಳುತ್ತಿದ್ದರು.
ನಿಜವಾಗಿಯೂ ಆ ಒಂದು ಗಂಟೆ ಹೇಗೆ ಸರಿದುಹೋಗುತ್ತಿತ್ತೋ ಏನೋ, ಆ ಒಂದು ಗಂಟೆ ವೇಳೆಗಾಗಿ ಮತ್ತೊಂದು ದಿನ ಕಾಯಬೇಕಿತ್ತು. ಏಳಲಾಗದ ಸ್ಥಿತಿಯಲ್ಲಿದ್ದ ವ್ಯಕ್ತಿ ಆ ಒಂದು ಗಂಟೆಗಾಗಿಯೇ ಕಾತರಿಸುತ್ತಿದ್ದ. ಹೀಗೆಯೇ ಹಲವಾರು ದಿನಗಳು ಸರಿದುಹೋದವು.
ಒಂದು ದಿನ ಅಲ್ಲಿ ಹಾದುಹೋಗುತ್ತಿದ್ದ ಜಾನಪದಜಾತ್ರೆಯ ಬಗ್ಗೆ ಆ ಕಿಟಕಿಯಾತ ವಿವರಿಸುತ್ತಿದ್ದ. ಕೀಲುಕುದುರೆಗಳು, ಸೋಮನಕುಣಿತ, ಪಟದಕುಣಿತ, ಡೊಳ್ಳುಕುಣಿತ, ಗೊರವರಕುಣಿತ, ಕಲಾವಿದರ ವೇಷಭೂಷಣಗಳು, ಡೊಳ್ಳು ತಮಟೆ ನಗಾರಿ ಚಂಡಮದ್ದಲೆಯ ಲಯಬದ್ಧ ಸದ್ದು, ಹಾದಿಯ ಇಕ್ಕೆಲಗಳಲ್ಲೂ ನಿಂತು ಕೈಬೀಸುತ್ತಿರುವ ಜನಸ್ತೋಮ . . . ಮಲಗಿದ್ದ ವ್ಯಕ್ತಿಗೆ ಯಾವ ಸದ್ದು ಕೇಳಿಸುತ್ತಿಲ್ಲವಾದರೂ ಆ ವೀಕ್ಷಕ ವಿವರಣೆಯಿಂದ ಎಲ್ಲವೂ ಒಳಗಣ್ಣಿಗೆ ನಿಚ್ಚಳವಾಗಿ ತೋರುತ್ತಿತ್ತು. ಹೊಸ ನಿರೀಕ್ಷೆಯ ಕಾರಣದಿಂದ ಆತ ಕ್ರಮೇಣ ಗುಣವಾಗತೊಡಗಿದ. ಅವನ ದೇಹದಲ್ಲಿ ಹೊಸಚೈತನ್ಯ ತುಂಬುತ್ತಿತ್ತು.
ದಾದಿ ಒಂದು ಬೆಳಗ್ಗೆ ರೋಗಿಗಳ ಮೈ ಒರೆಸಲು ನೀರು ತಂದಾಗ ಆ ಕಿಟಕಿಯ ಮನುಷ್ಯ ಚಿರನಿದ್ರೆಗೆ ಶರಣಾಗಿದ್ದ. ದುಃಖಭಾವದಿಂದ ಆಕೆ ಅವನಮುಖದ ಮೇಲೆ ಮುಸುಕೆಳೆದು ಆಳುಗಳನ್ನು ಕರೆದು ಶವವನ್ನು ತೆರವುಗೊಳಿಸಿದಳು.
ಇವೆಲ್ಲ ಮುಗಿದ ನಂತರ ಆ ಇನ್ನೊಬ್ಬ ರೋಗಿಯು ದಾದಿಯನ್ನು ಕುರಿತು ತನ್ನ ಮಂಚವನ್ನು ಆ ಕಿಟಕಿಯ ಬದಿಗೆ ಸರಿಸುವಂತೆ ವಿನಂತಿಸಿದ. ಆಕೆ ಸಂತೋಷದಿಂದ ಒಪ್ಪಿ ಮಂಚವನ್ನು ಸರಿಸಿ ತೃಪ್ತಿಯಾಯಿತೇ ಎನ್ನುತ್ತಾ ಮಂದಹಾಸ ಬೀರಿ ಹೋದಳು.
ಏಳಲಾಗದ ಸ್ಥಿತಿಯಲ್ಲಿದ್ದ ಆ ವ್ಯಕ್ತಿಗೆ ಆ ಕಿಟಕಿಯಿಂದಾಚೆಗಿನ ಪ್ರಪಂಚವನ್ನು ಕಾಣಬೇಕೆನ್ನುವ ತವಕದಿಂದ ಹೊಸ ಶಕ್ತಿ ಬಂದಂತಾಗಿತ್ತು. ಮೆಲ್ಲನೆ ಆತ ಬಲಮಗ್ಗುಲಿಗೆ ಹೊರಳಲೆತ್ನಿಸಿದ. ನಿಧಾನವಾಗಿ ಸ್ವಲ್ಪಸ್ವಲ್ಪವೇ ಎದ್ದ. ಆಶ್ಚರ್ಯ! ಅವನ ಕುತ್ತಿಗೆ ಎಲುಬಿಗೆ ಬಲ ಬಂದಿತ್ತು. ಆತ ತನ್ನ ಕುತ್ತಿಗೆಯನ್ನು ಅತ್ತಿತ್ತ ಅಲುಗಾಡಿಸಿದ, ಏನೂ ನೋವೆನಿಸಲಿಲ್ಲ, ಸರಾಗವಾಗಿ ಆತ ತಲೆಯಾಡಿಸಬಹುದಾಗಿತ್ತು. ಕಿಟಕಿಯಿಂದಾಚೆ ನೋಡಿ ಹೊರಗಿನ ಪ್ರಪಂಚವನ್ನು ಕಣ್ಣು ತುಂಬಿಕೊಳ್ಳಬೇಕೆಂಬ ಆತನ ಬಹುನಿರೀಕ್ಷೆಯ ಕನಸು ಇಂದು ನನಸಾಗಲಿತ್ತು.
ಕಿಟಕಿಯ ಹೊರಗೆ ಅವನು ದೃಷ್ಟಿ ಹಾಯಿಸಿದ. ಆದರೆ . . ಆದರೆ . . ಅಲ್ಲಿ ಬಿಳಿ ಗೋಡೆಯ ಹೊರತು ಇನ್ನೇನೂ ಕಾಣುತ್ತಿರಲಿಲ್ಲ. ಆ ಮನುಷ್ಯನಿಗೆ ತಳಮಳವಾಯಿತು. ಮತ್ತೆ ಮತ್ತೆ ದೃಷ್ಟಿಸಿ ನೋಡಿದ. ಊಹೂಂ ಅದು ಬರೀ ಗೋಡೆಯಷ್ಟೆ, ಇನ್ನೇನೂ ಅಲ್ಲಿರಲಿಲ್ಲ. ಆತನ ಕನಸುಗಳ ಕಾಣ್ಕೆಗೆ ನಿರಾಶೆಯ ಗೋಡೆ ಅಡ್ಡಬಂದಿತ್ತು.
ದಾದಿಯನ್ನು ಕೇಳಿದಾಗ ಆಕೆ ಹೇಳಿದ್ದಿಷ್ಟು. "ನಿಜ ಹೇಳಬೇಕೆಂದರೆ ಅಲ್ಲಿ ಗೋಡೆಯ ಹೊರತು ಇನ್ನೇನೂ ಇಲ್ಲ. ಮತ್ತೊಂದು ಸಂಗತಿಯೆಂದರೆ ನಿಮಗೆ ಇಷ್ಟು ದಿನವೂ ಆ ದೃಶ್ಯಗಳನ್ನು ವರ್ಣರಂಜಿತವಾಗಿ ವಿವರಿಸುತ್ತಿದ್ದನಲ್ಲ ಆ ಮನುಷ್ಯ ಕುರುಡನಾಗಿದ್ದ. ಈ ಗೋಡೆಯನ್ನೂ ಆತ ಕಂಡಿರಲಾರ. ನೀವು ಗುಣಹೊಂದಿದ್ದು ಆತನ ಮಾತುಗಳಿಂದ, ಆತನ ವರ್ಣನೆಯಿಂದಲೇ ಹೊರತು ನಮ್ಮ ಔಷಧಿಗಳಿಂದಲ್ಲ."
ಹೌದಲ್ಲವೇ, ಕಾಣದ ನಿರೀಕ್ಷೆಯೇ ನಮ್ಮ ಬದುಕನ್ನು ನಡೆಸುತ್ತೆ.