ಚಿದಂಬರ ರಹಸ್ಯ-ಕವನ
ಕವನ-ಚಿದಂಬರ ರಹಸ್ಯ
ತೆರೆಯ ತೆರೆಯದೆಲೆ ತುಡಿಯುತಿದೆ
ಒಲವಿನೊಸುಗೆಯ ಅನಿಸು-ಮುನಿಸು
ನಸುನಗೆಯ ವಿಪರ್ಯಾಸ ಮಿಸುಕು ಮನಸಿನುತ್ಕಟತೆ
ವ್ಯಸನದೊಳಗಿಟ್ಟು
ತೆರೆಯದಾ ತೆರೆಯ ಹಿಂದೆ
ಚಿದಂಬರ ರಹಸ್ಯ !!
ಅಂದಿಗೆಯ ಅಂದದಲಿ, ಬೆಳ್ಳಿಕಾಲ್ಗೆಜ್ಜೆಯಲಿ
ಅಂದದಂಬರದ ಅಪ್ಪುಗೆಯಲ್ಲಿ
ಚಿನ್ನದಾ ನಡುಪಟ್ಟಿ ವಕ್ಷದೋತರಕೆ ಹರಳು-ವಜ್ರ
ನೀಳಬೆರಳುಗಳಿಗೆ ಮೆರಗಿಟ್ಟ ಉಂಗುರಗಳು
ಕರಿಮೇಘದಚ್ಛ ಕುರುಳು
ಅಂಬರದ ಕಂಗಳನರಿಯಲಾರೆನು-ತೆರೆಯು
ತೆರೆಯದಾ ತೆರೆಯ ಹಿಂದೆ
ಚಿದಂಬರ ರಹಸ್ಯ !!
ಸ್ನೇಹವದೋ ? ಪ್ರೇಮವದೋ? ಕರುಣೆಯೋ? ಕನಿಕರವೋ?
ಸಂಕಲಿಸಲಾರೆನು ಪ್ರಕೃತಿ ಪರ್ಇಯ
ಮೊಗೆಯಿಡುವ ಪರಿಭಾವ ಫ್ಯೂತ್ಕಾರ-ಚೀತ್ಕಾರ
ಪರಿಕಲ್ಪನೆಗೂ ನಿಲುಕದೇ ಮೀರುವಾಗ
ಭಾವಗಳನರಿಯಲಾರೆನು-ತೆರೆಯು
ತೆರೆಯದಾ ತೆರೆಯ ಹಿಂದೆ
ಚಿದಂಬರ ರಹಸ್ಯ!!
ತೆರೆಯ ಹಿಂದಿಹನಾರೋ? ತೆರೆಯ ಮುಂದಾರೋ?
ತೆರೆಯೆಲ್ಲಿಹದೋ? ತೆರೆಯಾವುದೋ?
ಯಾವುದೀ ಸ್ಥಿತಿ ವಸ್ಥು ಜಿಜ್ನಾಸೆ
ಕನಕದಲಿ ಕೃಶವಾಗಿ ಚಿತ್ ಭಾವ ದಿಶೆಯಾಗಿ
ತೆರೆ ತೆರೆದರೂ ಅನಂತ ದರ್ಶನದಲ್ಲಿ
ಚಿದಂಬರ ರಹಸ್ಯ!!
ಎಸ್.ಶಾಮಸುಂದರ.
Rating