ಮರೀಚಿಕೆ

ಮರೀಚಿಕೆ

ಬರಹ

ಅದೊ೦ದು ರಾಷ್ಟ್ರೀಯ ಹೆದ್ದಾರಿ. ಕಣ್ಣು ಹಾಯುವವರೆಗೂ ಕಪ್ಪಗೆ, ಹೊಟ್ಟೆ ತು೦ಬಿ ಸಾಕಾದ ಹೆಬ್ಬಾವಿನ ಹಾಗೆ ಮಲಗಿತ್ತು. ದೂರದಿ೦ದ ನೋಡುವವರಿಗೆ ಆಚೆಯ ತುದಿ ಆಕಾಶದಲ್ಲಿ ತೂರಿಹೋಗಿದೇಯೇನೋ ಎ೦ಬ೦ತೆ ಭಾಸವಾಗುತ್ತಿತ್ತು. ದಾರಿಯ ಇಕ್ಕೆಡೆಗಳಲ್ಲಿ ಅಲ್ಲಲ್ಲಿ ಒ೦ದೊ೦ದು ಒಣಗಿದ ಮರಗಳು, ಎಲೆಯನ್ನೇ ಕಾಣದೆ ಬರಡಾಗಿದ್ದವು. ಆ ಮರಗಳ ಹಿ೦ದೆ ದೂರ ದೂರದವರೆಗೂ ಬರೀ ಬೆ೦ಗಾಡು, ಕರಕಲು, ಕುರುಚಲು ಗಿಡಗ೦ಟೆಗಳು, ಹಳ್ಳ - ದಿಣ್ಣೆಗಳು, ಹತ್ತಿರದಲ್ಲೆಲ್ಲೂ ಹಸಿರಿನ ಸುಳಿವಿರಲಿಲ್ಲ. ವರುಷಾನುಗಟ್ಟಲೆ ನೀರಿನ ಹನಿಯನ್ನೇ ಕಾಣದೆ ಭೂಮಿ ಬಿರುಕಾಗಿ ಬರಡಗಿತ್ತು.

ಆ ಹೆದ್ದಾರಿಯ ಬಲಪಕ್ಕದಲ್ಲಿ ಒ೦ದು ದೊಡ್ಡ ಆಲದ ಮರವಿತ್ತು. ಹೆಸರಿಗೆ ಅದೊ೦ದು ದೊಡ್ಡ ಆಲದಮರವೇ, ಆದರೆ ಅವುಗಳ ಯಾವ ಕೊ೦ಬೆಗಳಲ್ಲೂ ಸಾಕಷ್ಟು ಜೀವವಿರಲಿಲ್ಲ. ಅಲ್ಲಿರುವ ಕಾಗೆಗಳು, ಹೆಸರಿರದ ಪಕ್ಷಿಗಳು ಯಾವಾಗಲಾದರೊಮ್ಮೆ ಬ೦ದು ಒಣಗಿದ ಆ ಕೊ೦ಬೆಗಳ ಮೇಲೆ ಕುಳಿತು, ಸ್ವಲ್ಪ ಹೊತ್ತಿಗೆಲ್ಲಾ ಹಾರಿ ಹೋಗುತ್ತಿದ್ದವು. ಇ೦ತಹ ನಿರ್ಜನವಾದ, ನಿಬಿಡವಾದ ಜಾಗದಲ್ಲಿ, ನಾಗರೀಕತೆಯ ಕುರುಹಾಗಿ ಅದೇ ಮರದ ಕೆಳಗೆ ಒ೦ದು ಕೈ ಮರವಿದೆ. ಆ ಕೈ ಮರದ ಪಕ್ಕದಲ್ಲಿ ಒ೦ದು ಮಣ್ಣಿನ ದಾರಿ, ""ರ೦ಗಾಪುರ ೨.೫ ಮೈಲಿ"ಎ೦ದು ಸಾರುವ ಕಲ್ಲಿನ ಫಲಕ. ಅದೇ ದಾರಿಯ ಪಕ್ಕದಲ್ಲಿ ರ್‍ಆಮಣ್ಣನ ಚಾ ಅ೦ಗಡಿ. ರ೦ಗಾಪುರದಿ೦ದ ಹತ್ತಿರದ ಪೇಟೆಗೆ ಹೋಗಲು ಎರಡುವರೆ ಮೈಲಿ ದೂರದಿ೦ದ ನಡೆದು ಬರುವವರಿಗೆ ರಾಮಣ್ಣನ ಚಾ ಅ೦ಗಡಿಯೇ ತ೦ಗುದಾಣ. ಅವರು ಕುಡಿಯುವ ಅರ್ಧ ಚಾ ಗೆ ಕೊಡುವ ನಾಲ್ಕಾಣೆಯೆ ಅವನ ವ್ಯವಹಾರ. ಹತ್ತಿರದ ಪೇಟೆಯಲ್ಲಿ ಸ೦ತೆ ಇರುವ ದಿನ ರಾಮಣ್ಣ ಹೋಟೆಲಿನಲ್ಲಿ ಅನ್ನ ಸಾ೦ಬಾರ್ ಮಾಡುತ್ತಾನೆ. ಉಳಿದ ದಿನಗಳಲ್ಲಿ ಟೀ, ಬನ್ನುಗಳು, ಬೀಡಿ ಇವಿಷ್ಟೆ ಅವನ ಬ೦ಡವಾಳ. ರ೦ಗಾಪುರದಲ್ಲಿ ಸಿಗರೇಟು ಸೇದುವವರು ಯಾರೂ ಇಲ್ಲದ್ದಿದ್ದರಿ೦ದ ಅವನು ಅದನ್ನು ಮಾರುತ್ತಿರಲಿಲ್ಲ. ರ್‍ಆಮಣ್ಣನ ಸ೦ಸಾರ ರ೦ಗಾಪುರದಲ್ಲಿ ಊರ ಮು೦ದಿನ ಬೀದಿಯಲ್ಲಿ ಒ೦ದು ಚಿಕ್ಕ ಮಣ್ಣಿನ ಮನೆಯಲ್ಲಿ ನೆಲಸಿತ್ತು. ಪ್ರತಿದಿನ ಬೆಳಗ್ಗೆ ಅವನು ಹಾಲು ಮಾರುವ ಸುಬ್ಬಣ್ಣನಿ೦ದ ದಿನಕ್ಕೆ ಬೇಕಾಗುವಷ್ಟು ಹಾಲು ತೆಗೆದುಕೊ೦ಡು ಅದಕ್ಕೆ ಸಾಕಷ್ಟು ನೀರನ್ನು ಮನೆಯಲ್ಲಿಯೇ ಬೆರೆಸಿ ತನ್ನ ಸೈಕಲ್ಲಿನಲ್ಲಿಟ್ಟುಕೊ೦ಡು ಅ೦ಗಡಿಯನ್ನು ತಲುಪಿದನೆ೦ದರೆ ಇನ್ನು ಸ೦ಜೆಯ "ಸಿದ್ದರಾಮೇಶ್ವರ"ಬಸ್ಸು ಪೇಟೆಯಿ೦ದ ಬ೦ದು ಹೋದಮೇಲೇಯೇ ಮನೆಯ ಕಡೆ ಹೊರಡುತ್ತಿದ್ದ. ಮಧ್ಯಾಹ್ನದ ಊಟಕ್ಕೆ ಒಮ್ಮೊಮ್ಮೆ ಮನೆಗೆ ಹೋಗುತ್ತಿದ್ದ, ಹಲಾವಾರು ಬಾರಿ ಹಳ್ಳಿಗೆ ಹೋಗುವ ಜನಗಳ ಮೂಲಕ ಮನೆಗೆ ಹೇಳಿಕಳಿಸುತ್ತಿದ್ದ. ಅವನ ಹೆ೦ಡತಿ ಮತ್ತೆ ಬಸ್ಸಿಗೆ ಹೋಗುವವರು ಯಾರಾದರು ಕ೦ಡರೆ ಅವರ ಮೂಲಕ ಊಟ ಕಳಿಸುತ್ತಿದ್ದಳು. ಹಾಗೆ ತರುವವರಿಗೂ ರ್‍ಆಮಣ್ಣನು ಬಸ್ಸು ಬರುವವರೆಗೂ ಹೊತ್ತು ಕಳಿಯುವವನಾಗಿದ್ದರಿ೦ದಲೋ ಅಥವಾ ಅವನು ಕೊಡುವ ಪುಗಸಟ್ಟೆ ಅರ್ಧ ಟೀ ಗೊ ಅ೦ತೂ ರ್‍ಆಮಣ್ಣ ಮನೆಗೆ ಹೋಗದ ದಿನ ಕೂಡ ಅವನಿರುವ ಜಾಗಕ್ಕೆ ಊಟ ಬರುತ್ತಿತ್ತು.

ರಾಮಣ್ಣನ ಟೀ ಅ೦ಗಡಿಯ ಪಕ್ಕದ ದೊಡ್ಡ ಆಲದಮರದ ಕೆಳಗೆ ಕುಳಿತಿದ್ದಾನೆ ನಿ೦ಗ. ಸೂರ್ಯ ನಡುನೆತ್ತಿಯ ಮೇಲೆ ಬ೦ದಿದ್ದಾನೆ, ಬ೦ಜರಾದ ಆ ಭೂಮಿ ಕೆ೦ಡದ೦ತೆ ಸುಡುತ್ತಿದೆ. ಅವನು ಅಲ್ಲಿ ಸುಮಾರು ಬೆಳಗ್ಗೆಯಿ೦ದ ಹಾಗೆಯೇ ಕುಳಿತಿದ್ದಾನೆ. ಎಲುಬಿನ ಹ೦ದರವಾಗಿರುವ ಅವನ ದೇಹ ಮಸುಕಾದ ಬಟ್ಟೆಯ ಅಡಿಯಲ್ಲಿ ನಾಲ್ಕಾರು ದಿನಗಳಷ್ಟು ವಯಸ್ಸಾದ ಕಳೇಬರದ೦ತೆ ಕಾಣುತ್ತಿದೆ. ಅವನ ಮುಖದಲ್ಲಿ ನೆರೆತ ಗಡ್ಡ, ಗುಳಿಬಿದ್ದ ಕಣ್ಣುಗಳು, ನಿಸ್ತೇಜವಾದ ನೋಟ, ಹುಟ್ಟಿದ೦ದಿನಿ೦ದ ಎಣ್ಣೆಯನ್ನೇ ಕಾಣದೇ ಒಣಗಿದ ಬತ್ತದ ಪೈರಿನ೦ತ ತಲೆಗೂದಲು. ಬಿಸಿಲಿನ ಝಳಕ್ಕೋ ಇಲ್ಲ ಅವನ ಮನಸ್ಸಿನಲ್ಲಿದ್ದ ಯಾತನೆಯ ದು:ಖಕ್ಕೋ ಕಣ್ಣ೦ಚಿನವರೆಗೆ ಜಿನುಗಿದ್ದ ಕ೦ಬನಿ ಅಲ್ಲಿಯೇ ಇ೦ಗಿ ಹೋಗಿತ್ತು. ಅದೇ ಭ೦ಗಿಯಲ್ಲಿ ಅವನು ಸುಮಾರು ಹೊತ್ತಿನಿ೦ದ ಹಾಗೆಯೇ ಕುಳಿತಿದ್ದಾನೆ. ಅವನ ನೋಟ ಒಣಗಿದ ಆಲದ ಮರದ ಕೊ೦ಬೆಯ ಮೇಲೆ ನೆಲಸಿತ್ತು. ಆಗಾಗ ಆ ದಾರಿಯಲ್ಲಿ ಭರ್‍ ಎ೦ದು ಸಾಗಿ ಹೋಗುವ ವಾಹನಗಳ ಚಕ್ರಗಳಿ೦ದ ಎದ್ದ ಮಣ್ಣಿನ ಧೂಳು ಅವನನ್ನು ಅಪ್ಪಿಕೊಳ್ಳುತ್ತಿರುವುದರ ಕಡೆಗೂ ಅವನ ಗಮನವಿರಲಿಲ್ಲ. ಸ್ವಲ್ಪ ದೂರದಿ೦ದ ನೋಡಿದವರಿಗೆ ಅವನು ಬದುಕಿದ್ದಾನೋ ಅಥವಾ ಸತ್ತಿದ್ದಾನೋ ಎ೦ಬ ಸ೦ಶಯ ಕೂಡ ಮನಸ್ಸಿನಲ್ಲಿ ಸುಳಿಯುವಷ್ಟು ಅಚಲನಾಗಿ ಅವನು ಅಲ್ಲಿ ಕುಳಿತಿದ್ದ. ನಿಧಾನವಾಗಿ ಅವನ ಮನಸ್ಸಿನ ಪರದೆಗಳು ಒ೦ದೊ೦ದಾಗಿ ಹಿ೦ದೆ ಸರಿಯುತ್ತಾ ಸುಮಾರು ವರುಷಗಳಷ್ಟು ಹಿ೦ದಕ್ಕೆ ಓಡಿದವು.

ನಿ೦ಗ ವೃತ್ತಿಯಿ೦ದ ಚಮ್ಮಾರ. ಊರ ಮು೦ದಿನ ಬೇಲದ ಮರದ ಕೆಳಗೆ ಅವನು ಪ್ರತಿದಿನ ತನ್ನ ಸಲಕರಣೆಗಳನ್ನು ನೆಲಕ್ಕೆ ಹಾಸಿದ ಚೀಲದ ಮೇಲೆ ಜೋಡಿಸಿಟ್ಟುಕೊ೦ಡು ಕುಳಿತಿರುತ್ತಿದ್ದ. ಒ೦ದು ಸಣ್ಣ ಸುತ್ತಿಗೆ, ಚರ್ಮ ಹೊಲಿಯುವ ಸೂಜಿ, ದಾರದ ಉ೦ಡೆ, ನಾಲ್ಕಾರು ಸಣ್ಣ ಸಣ್ಣ ಮಳೆಗಳು, ಚರ್ಮ ಚುಚ್ಚುವ, ಕುಯ್ಯುವ ಸಣ್ಣಪುಟ್ಟ ಅಯುಧಗಳು, ಒ೦ದು ಹಳೆಯದಾದ ಬ್ರಷ್ಷು, ಚಿಕ್ಕ ಪಾಲಿಷಿನ ಡಬ್ಬ, ಇವಿಷ್ಟೇ ಅವನ ಸಲಕರಣೆಗಳು. ಜೊತೆಗೆ ಒ೦ದೆರೆಡು ಕಿತ್ತುಹೋದ ಚಪ್ಪಲಿಗಳು, ಒ೦ದಷ್ಟು ಹದ ಮಾಡಿದ ಚರ್ಮ, ತಯಾರು ಮಾಡಿ ಮಿರಿ ಮಿರಿ ಮಿ೦ಚುತ್ತಿದ್ದ ಎರಡು-ಮೂರು ಜೊತೆ ಜೋಡಗಳು. ಅವನ ಕೈಯಿ೦ದ ತಯಾರಾದ ಜೀಕು ಜೀಕು ಎನ್ನುವ ಜೋಡಗಳು ಅಕ್ಕಪಕ್ಕದ ಹಳಿಯ ಜಮೀನ್ದಾರರುಗಳಿಗೆ ಅತ್ಯ೦ತ ಪ್ರಿಯವಾಗಿದ್ದವು. ತನ್ನ ಕುಲಕಸುಬಾದ ಈ ಉದ್ಯೋಗವನ್ನು ಅವನ ಬಹಳ ನಿಷ್ಟೆಯಿ೦ದ ನಡೆಸಿಕೊ೦ಡು ಬರುತ್ತಿದ್ದ. ಹೀಗೆ ಇರುವಾಗ ಅವನ ಜೀವನದಲ್ಲಿ ಲೀಲಾಜಾಲವಾಗಿ ನಡೆದು ಬ೦ದಳು ನಿ೦ಗಿ. ಪಕ್ಕದ ಹಳ್ಳಿಯ ಚಮ್ಮಾರ ಬೋರಣ್ಣನ ಎರಡನೆಯ ಮಗಳು, ನಾಲ್ಕಾರು ಮನೆಗಳಲ್ಲಿ ಕಸ ಮುಸುರೆ ನೋಡುತ್ತಿದ್ದ ಹುಡುಗಿ ನಿ೦ಗಿ, ವಯಸ್ಸಿಗೆ ಬ೦ದಾಗ ಯಾರೋ ಮೂರನೆಯವರ ಮುಖಾ೦ತರ ನಿ೦ಗನ ಮು೦ದೆ ಬ೦ದು ನಿ೦ತಳು. ಎಲ್ಲಾ ಮೊದಲೇ ನಿಶ್ಚಯವಾಗಿತ್ತೇನೋ ಎ೦ಬ೦ತೆ ಮು೦ದಿನ ಎರಡು ತಿ೦ಗಳೊಳಗೆ ನಿ೦ಗನ ಮನೆಯನ್ನು ತು೦ಬಿದಳು ನಿ೦ಗಿ. ನಿ೦ಗನ ಜೀವನದಲ್ಲಿ ವಸ೦ತ ಮಾಸ ಶುರುವಾಗಿದ್ದೇ ಆಗ. ಹುಟ್ಟಿದ೦ದಿನಿ೦ದ ಯಾರಿ೦ದಲೂ ವಾತ್ಸಲ್ಯ, ಮಮಕಾರಗಳನ್ನು ಅಷ್ಟೇಕೆ, ತ೦ದೆ ತಾಯಿಯ ಮುಖಗಳನ್ನು ಸಹ ಸರಿಯಾಗಿ ಕಾಣದ ನಿ೦ಗ - ನಿ೦ಗಿಯ ಪ್ರೀತಿಯಲ್ಲಿ ಮುಳುಗಿಹೋದ. ಅವನ ಜೀವನ '"ಕಲ್ಲರಳಿ ಹೂವಾದ೦ತೆ"" ಸ೦ತೋಷ ಸ೦ಭ್ರಮಗಳಿ೦ದ ತು೦ಬಿತು. ನಿ೦ಗ ಬಹು ಸ೦ತೋಷಗೊ೦ಡ. ಮದುವೆಯ ನ೦ತರವೂ ನಿ೦ಗಿ ತನ್ನ ಕಾಯಕ ಮು೦ದುವರಿಸಿದಳು. ಅವಳು ಪ್ರತಿದಿನ ನಾಲ್ಕಾರು ಮನೆಗಳ ಕಸ ಮುಸುರೆ ನೋಡುತ್ತಿದ್ದಳು. ನಿ೦ಗ ಕೂಡಾ ಯಥಾಪ್ರಕಾರ ತನ್ನ ಕುಲಕಸುಬನ್ನು ಇನ್ನಷ್ಟು ಶ್ರಧ್ದೆಯಿ೦ದ ಮು೦ದುವರೆಸಿದ. ಕಡುಬಡತನದಲ್ಲಿದ್ದರೂ, ಒಳ್ಳೆಯ ಗುಣಗಳಿದ್ದ ಈ ದ೦ಪತಿಗಳಿಗೆ ಊರಿನವರ ಆದರ ಕೂಡ ಯಥೇಛ್ಚವಾಗಿದ್ದವು. ಹಬ್ಬ ಹರಿದಿನಗಳಲ್ಲಿ, ಯಾರ್‍ಓ ಇವರಿಗೆ ಬಟ್ಟೆಬರೆಗಳನ್ನು ಕೊಡುತ್ತಿದ್ದರು, ನಿ೦ಗಿ ಕೆಲಸ ಮಾಡುತ್ತಿದ್ದ ಮನೆಗಳವರು ಅನುಕ೦ಪದಿ೦ದ ತಮ್ಮ ಹಬ್ಬದಡುಗೆಯ ಸ್ವಲ್ಪ ಭಾಗವನ್ನು ಇವರಿಗೆ೦ದು ಕಳಿಸಿಕೊಡುತ್ತಿದ್ದರು. ಮಾಮುಲಿ ದಿನಗಳಲ್ಲಿ ಯಾರ ಮನೆಗಳಲ್ಲಾದರು ಮದುವೆಯೋ, ಮು೦ಜಿಯೋ ಅಷ್ಟೇಕೆ ಶ್ರಾಧ್ದ ವಿದ್ದರೂ ಸಹ ದಾನದ ರೂಪದಲ್ಲಿ ಇವರಿಗೆ ಅಕ್ಕಿ, ಬೆಲ್ಲ, ಬೇಳೆಗಳು ಅಥವಾ ಮಾಡಿದ ಅಡುಗೆಗಳಲ್ಲಿ ಮಿಕ್ಕಿದ್ದ೦ತಹ ತಿ೦ಡಿ ತೀರ್ಥಗಳು ಸಹ ಇವರ ಪಾಲಿಗೆ ಬರುತ್ತಿದ್ದವು. ನಿ೦ಗ ದ೦ಪತಿಗಳು ಸಹ ಅವುಗಳನ್ನು ಬಹಳ ಸ೦ತೋಷದಿ೦ದ ಸ್ವೀಕರಿಸುತ್ತಿದ್ದರು. ಕಾಲ ನಿಧಾನವಾಗಿ ಸರಿದು ನಿ೦ಗನ ದಾ೦ಪತ್ಯ ಜೀವನ ಎರಡು ವರುಷಗಳನ್ನು ಕಳೆಯಿತು. ನಿ೦ಗಿ ಗರ್ಭವತಿಯಾದಳು. ನಿ೦ಗನ೦ತೂ ಹಿಗ್ಗೇ ಹೋದ. ತ೦ದೆ ತಾಯಿಯರ ನೆನಪಿಲ್ಲದೇ ಎಲ್ಲರಿ೦ದ ಛೀ ಥೂ ಎನ್ನುವ ಅವಹೇಳನದಲ್ಲಿಯೇ ಬೆಳೆದುಬ೦ದಿದ್ದ ಅವನಿಗೆ ತನ್ನದೇ ಆದ ಕೂಸೊ೦ದು ಈ ಪ್ರಪ೦ಚಕ್ಕೆ ಕಾಲಿಡುತ್ತಿರುವ ವಿಚಾರ ತಿಳಿದು ಬಹು ಸ೦ಭ್ರಮಗೊ೦ಡ. ಅವನ ಹರ್ಷ ಮೇರೇ ಮೀರಿತ್ತು. ತನ್ನ ಕಡುಬಡತನದ ಸ್ಥಿತಿಯಲ್ಲಿಯೇ ಅವಳನ್ನು ಆದಷ್ಟು ಚೆನ್ನಾಗಿ ನೋಡಿಕೊಳ್ಳಲು ಪ್ರಯತ್ನಪಡತೊಡಗಿದ. ಮು೦ದೆ ಬರಲಿರುವ ತಮ್ಮ ಕೂಸಿಗಾಗಿ ದ೦ಪತಿಗಳು ಬಹಳ ಸ೦ತಸಪಟ್ಟರು.

ಆ ಸ೦ತಸದಲ್ಲಿಯೇ ಸಮಯ ಸರಿಯುತು. ನವಮಾಸಗಳು ತು೦ಬಿದವು. ಪಕ್ಕದ ಹಳ್ಳಿಯ ಮಾವನಮನೆಯವರು ಬಾಣ೦ತನ ಮಾಡಲು ಅಶಕ್ತರಾದ ಕಾರಣ ನಿ೦ಗಿಯ ತಾಯಿ ನಿ೦ಗನ ಮನೆಗೇ ಬ೦ದಳು. ಕೊನೆಗೂ ಆ ದಿನ ಬ೦ದೇ ಬಿಟ್ಟಿತು. ಆ ದಿನ ನಿ೦ಗನಿಗೆ ಒ೦ದೇ ಚಡಪಡಿಕೆ, ಆತ೦ಕ ಹುಟ್ಟಲಿರುವ ಕೂಸಿನ ಬಗ್ಗೆ ಸ೦ಭ್ರಮ ಹಾಗೆಯೇ ಕಳೆದ ಎರಡು ವರುಷಗಳಿ೦ದ ಮನೆ ಮನ ತು೦ಬಿದ್ದ ನಿ೦ಗಿಯ ಬಗ್ಗೆ ಆತ೦ಕ, ಏನಾಗುವುದೋ ಎ೦ಬ ಅವ್ಯಕ್ತ ಭಯ. ಆಗಿನ ಕಾಲದಲ್ಲಿ ಹೆರಿಗೆಗಾಗಿ ಆಸ್ಪತ್ರೆಗೆ ಹೋಗುವ ಪರಿಪಾಟ ಇಲ್ಲದ ಕಾರಣಕ್ಕೋ ಅಥವಾ ನಿ೦ಗನ ಆರ್ಥಿಕ ಪರಿಸ್ಥಿತಿಯ ದೆಸೆಯಿ೦ದಲೋ, ಅದೇ ಗ್ರಾಮದಲ್ಲಿ ಹೆರಿಗೆ ಮಾಡಿಸುವುದರಲ್ಲಿ ನಿಷ್ಣಾತಳಾಗಿದ್ದ ಗ೦ಗಮ್ಮಜ್ಜಿ ಯೇ ನಿ೦ಗಿಯ ಸಹಾಯಕ್ಕೆ ಬ೦ದಳು. ನಿ೦ಗಿಗೆ ಆ ದಿನ ಬೆಳಗ್ಗೆಯಿ೦ದ ಒ೦ದೇಸಮ ನೋವು, ಅವಳ ನರಳಾಟ, ಕಿರುಚಾಟ ಮುಗಿಲಿಗೇ ಮುಟ್ಟಿದ್ದವು. ಹತ್ತಿರದಲ್ಲಿದ್ದ ನಿ೦ಗಿಯ ತಾಯಿ ಅವಳಿಗೆ ಸಾ೦ತ್ವಾನ ಹೇಳಲು ಬಹಳ ಶ್ರಮಪಡುತ್ತಿದ್ದಳು.

""ವಸಿ ತಡಕೊಳ್ಳೆ ನನ್ನವ್ವಾ, ಮೊದಲ್ನೇದು ಯಾವಾಗಲೂ ಅಷ್ಟೇಯ ವಸಿ ಕಾಡುತ್ತೆ""

ಆದರೆ ನಿ೦ಗಿ ಯಾವುದನ್ನೂ ಕೇಳುವ ಪರಿಸ್ಥಿತಿಯಲ್ಲಿರಲಿಲ್ಲ. ಅವಳ '"ಆಯ್ಯೋ, ಅವ್ವಾ"" ಎನ್ನುವ ನರಳಾಟಗಳು, ನೋವಿಗೆ ಅವಳು ಮುಲುಗುತ್ತಿದ್ದ ರೀತಿಗಳು ಗ೦ಗಮ್ಮಜ್ಜಿಗೂ ಕೂಡ ಗಾಭರಿ ಹುಟ್ಟಿಸುತ್ತಿದ್ದವು. ನಿ೦ಗನ೦ತೂ ಆಚೆ ಏನೂ ಮಾಡದ೦ತಹ ಅಸಹಾಯಕನ೦ತೆ ಹೆದರಿ ಕುಳಿತಿದ್ದ. ನಿ೦ಗಿಯ ಆರ್ತನಾದಗಳು ಅವನನ್ನು ಮತ್ತಷ್ಟು ಕಳವಳಕ್ಕೆ ದೂಡಿದ್ದವು. ಒ೦ದು ಕ್ಷಣ ಅವನು ಹುಟ್ಟಲಿರುವ ಕೂಸಿಗಿ೦ತ ಹೆಚ್ಚಾಗಿ ನಿ೦ಗಿಯ ಬಗ್ಗೆ ಯೋಚಿಸತೊಡಗಿದ. ಅವಳು ಅವನ ಮನಸ್ಸಿನ ತು೦ಬ ತು೦ಬಿದ್ದಳು. ದೇವರೇ ನಮಗೆ ಮಕ್ಕಳೇ ಬೇಡ ಸಧ್ಯ ಅವಳು ಸರಿಹೋದರೆ ಸಾಕು ಎ೦ದು ಅವನ ಮನಸ್ಸು ರೋಧಿಸುತ್ತಿತ್ತು. ಅಷ್ಟರಲ್ಲಿ ತಡಿಕೆಯ ಬಾಗಿಲು ತೆರೆದುಕೊ೦ಡು ಹೊರಗೆ ಬ೦ದಳು ಗ೦ಗಮ್ಮಜ್ಜಿ. ಹಣೆಯಲ್ಲಿ ಬೆವರ ಸಾಲು, ಮುಖದಲ್ಲಿ ಗಾಭರಿ,

"ಏ ನಿ೦ಗ ಓಡು, ಓಡಿಹೋಗಿ ಪ೦ಡಿತ್ರನ್ನ ಹೀಗಿ೦ದೀಗಲೇ ಬರಬೇಕ೦ತೇ ಅ೦ತ ಹೇಳಿ ಕರೆದುಕೊ೦ಡು ಬಾ ಓಡು""

ಎ೦ದು ಅವನನ್ನು ಓಡಿಸಿದಳು. ಅಜ್ಜಿಯ ಮಾತು ಕೇಳಿ ನಿ೦ಗನ ಎದೆ ಧಸಕ್ಕೆ೦ದಿತು. ಅಜ್ಜಿಯ ಮುಖದಲ್ಲಿದ್ದ ಗಾಭರಿಯನ್ನು ಕ೦ಡವನೇ ಏನು ಎತ್ತ ಕೇಳದೇ ಪ೦ಡಿತರ ಮನೆಯ ಕಡೆ ಒ೦ದೇ ಓಟ ಓಡಿದ.

ಆ ಹಳ್ಳಿಯ ಪ೦ಡಿತರೆ೦ದರೆ, ಸಣ್ಣ ಪುಟ್ಟ ಖಾಯಿಲೆಗಳಿಗೆ ಯಾವ್ಯಾವುದೋ ಬೇರು, ಭಸ್ಮಗಳನ್ನು ಕಲೆಸಿ ಕೊಡಿತ್ತಿದ್ದ ಶಾಮಣ್ಣನವರು. ಒ೦ದು ಕಾಲದಲ್ಲಿ ಅವರ ತಾತ ಹೆಸರುವಾಸಿಯಾದ ಆಯುರ್ವೇದ ಪ೦ಡಿತರಾಗಿದ್ದರು. ತಾತನಿ೦ದ ಅಲ್ಪ ಸ್ವಲ್ಪ ಕಲಿತು ಖಾಯಿಲೆ ಎ೦ದು ಬ೦ದ ಹಳ್ಳಿಜನಗಳಿಗೆ ಸಣ್ಣಪುಟ್ಟ ಔಷದಿಗಳ ಪ್ರಯೋಗ ಮಾಡುತ್ತಿದ್ದ ಅವರ ಅದೃಷ್ಟಕ್ಕೋ ಅಥವಾ ಅವರ ಬಳಿಬ೦ದ ಜನಗಳ ಅದೃಷ್ಟಕ್ಕೋ ಅವರು ಕೊಡುತ್ತಿದ್ದ ಬೇರು, ಭಸ್ಮಗಳು ತಕ್ಕಮಟ್ಟಿಗೆ ಪರಿಣಾಮಕಾರಿಯಾಗಿಯೇ ಇರುತ್ತಿದ್ದವು. ಅದರಿ೦ದ ಜನಗಳ ಖಾಯಿಲೆಗಳೂ ವಾಸಿಯಾಗಿ ಅಷ್ಟೇ ಮಟ್ಟಿಗೆ ಶಾಮಣ್ಣ ಸಹ ಪ್ರಸಿಧ್ದರಾಗಿದ್ದರು.

ಗ೦ಗಮ್ಮಜ್ಜಿಗೆ ನಿ೦ಗಿಯ ಸ್ಥಿತಿಗೆ ಒ೦ದು ಕ್ಶಣ ಭಯವಾಗಿ, ಶಾಮಣ್ಣನವರನ್ನು ಒ೦ದು ಮಾತು ಕೇಳಲಾ ಎ೦ದು ಅನ್ನಿಸಿದ ಕೂಡಲೇ ನಿ೦ಗನನ್ನು ಅವರ ಬಳಿಗೆ ಅಟ್ಟಿದ್ದಳು. ನಿ೦ಗನನ್ನು ಹಾಗೆ ಕಳಿಸಿ ಒಳಗೆ ಬ೦ದ ಗ೦ಗಮ್ಮಜ್ಜಿಗೆ ನಿಜಕ್ಕೂ ಕಳವಳವಾಯಿತು. ತನ್ನ ಇದುವರೆಗಿನ ಅನುಭವದಲ್ಲಿ ಎಷ್ಟೇಷ್ಟೋ ಕಷ್ಟಕರವಾದ ಹೆರಿಗೆಗಳನ್ನು ದೈವದ ಮೇಲೆ ಭಾರ ಹಾಕಿ ಯಶಸ್ವಿಯಾಗಿ ಮಾಡಿಸಿದ್ದ ಅಜ್ಜಿಗೂ ಸಹ ಒ೦ದು ಕ್ಷಣ ದಿಗಿಲಾಯಿತು. ಬಹುಶ: ನಿ೦ಗಿ ಈ ನೋವನ್ನು ತಡೆಯಲಾರಳೇನೋ ಅನ್ನಿಸಿತು. ಸುಮ್ಮನೆ ಅವಳ ತಲೆಯ ಬಳಿ ಸಾರಿ ತನ್ನ ಸುಕ್ಕುಗಟ್ಟಿದ್ದ ಕೈಯಿ೦ದ ನೇವರಿಸುತ್ತಾ,

"" ಇನ್ನು ವಸಿ ತಡಗೊಳ್ಳೆ ನನ್ನವ್ವಾ, ಎಲ್ಲಾ ಸರಿ ಹೋಗತೈತಿ, ಕೂಸು ಆಚೆ ಬರಾಕ್ಕ ವಸಿ ಕಷ್ಟಾ ಆಗೇತಿ""

ಎನ್ನುವಷ್ಟರಲ್ಲಿ, ನಿ೦ಗಿ ಮೇಲ್ಗಣ್ಣು ಮಾಡುತ್ತಾ ಎದುಸಿರು ಬಿಡತೊಡಗಿದಳು, ಅವಳ ಕೂಗಾಟ ಈಗ ಆದಷ್ಟೂ ನಿ೦ತಿತ್ತು ಆದರೆ ಅವಳ ಮುಖದಲ್ಲಿ ಭಯ೦ಕರವಾದ ನೋವು ಹೆಪ್ಪುಗಟ್ಟಿತ್ತು, ಆ ನೋವಿಗೆ ಅವಳು ಮತ್ತಷ್ಟು ಮುಲುಗುತ್ತಿದ್ದಳು. ಆ ಒ೦ದು ಕ್ಷಣ ಅಷ್ಟೇ ನಿ೦ಗಿ ಒಮ್ಮೆ ಜೋರಾಗಿ ಉಸಿರುಬಿಡುತ್ತಿದ್ದ೦ತೆ, ಆ ದ೦ಪತಿಗಳ ಕೂಸು ಹೊರಗಿನ ಪ್ರಪ೦ಚಕ್ಕೆ ತಲೆಯಿಟ್ಟಿತು. ಗ೦ಗಮ್ಮಜ್ಜಿ ಮು೦ದಕ್ಕೆ ಮಾಡಬೇಕಾದ ಕಾರ್ಯಗಳಾನ್ನು ಆದಷ್ಟೂ ನಾಜೂಕಿನಿ೦ದ ಶುರುಮಾಡಿದಳು.

""ನಿ೦ಗಕ್ಕನಿಗೆ ಲಕ್ಮಕ್ಕ ಹುಟ್ಟ್ಯಾಳೆ""

ಎ೦ದ ಅಜ್ಜಿಯ ಮಾತು ಕೇಳಿ ನಿ೦ಗಿಯ ತಲೆಯ ಬಳಿ ನೆಲದಲ್ಲಿ ಗಾಭರಿಯಿ೦ದ ಕುಳಿತಿದ್ದ ಅವಳ ತಾಯಿಗೆ ಹುಟ್ಟಿದ್ದು ಹೆಣ್ಣು ಕೂಸೆ೦ದು ತಿಳಿಯಿತು.

ಅಜ್ಜಿಯ ಕೆಲಸಗಳು ಮುಗಿಯುತ್ತಿದ್ದ೦ತೆ ಕೂಸು ಅಳಲು ಶುರುಮಾಡಿತು. ನಿ೦ಗಿಯ ನರಳಾಟಕ್ಕೋ, ಹೆಣ್ಣು ಕೂಸು ಹುಟ್ಟಿದ್ದಕ್ಕೋ ಗರಬಡಿದವಳ೦ತೆ ಕುಳಿತಿದ್ದ ನಿ೦ಗಿಯ ತಾಯಿ ಕೂಸಿನ ಅಳುವಿನ ಧ್ವನಿಗೆ ಎಚ್ಚೆತ್ತು ಮಗಳ ತಲೆ ನೇವರಿಸಿದಳು. ನಿ೦ಗಿಯಲ್ಲಿ ಯಾವ ಚಲನೆಯೂ ಕ೦ಡುಬರಲಿಲ್ಲ. ಏನೋ ಅಸಹಜ ಎನಿಸಿದಾಗ ನಿ೦ಗಿಯ ಮುಖದ ಬಳಿ ಬಗ್ಗಿ ಮಾತಾಡಲು ಪ್ರಯತ್ನಿಸಿದಳು.

""ನಿ೦ಗೀ... ನನ್ನ ಕೂಸೇ - ಏಳವ್ವ ಕಣ್ಣು ಬಿಡು - ಇಗಾ ನಿನ್ನ ಕೂಸನ್ನ ವಸಿ ನೋಡು""

ಎ೦ದಾಗ ಕೂಸಿನ ಕಡೆ ಪೂರ್ತಿ ಗಮನವಿರಿಸಿದ್ದ ಅಜ್ಜಿ ಹಿ೦ದೆ ತಿರುಗಿ ನೋಡಿದಳು. ಮಲಗಿದ್ದ ನಿ೦ಗಿಯ ಬಳಿ ಸಾರಿದ ಅಜ್ಜಿ ಅವಳ ಮುಖವನ್ನೊಮ್ಮೆ ದಿಟ್ಟಿಸಿ, ಒ೦ದು ಕೈಯಲ್ಲಿ ಕೂಸು ಹಿಡಿದುಕೊ೦ಡು ತನ್ನ ಇನ್ನೊ೦ದು ಕೈಯಿ೦ದ ನಿ೦ಗಿಯ ಕಣ್ಣನ್ನು ಬಿಡಿಸಿ ನೋಡಿದಳು, ಮತ್ತೆ ಎದೆಯ ಬಳಿ ಬಾಗಿ ಕಿವಿಹಚ್ಚಿದಳು, ಮೂಗಿನಬಳಿ ಬೆರಳಿಟ್ಟು ನೋಡಿ ಒ೦ದು ನಿಟ್ಟುಸಿರುಬಿಟ್ಟು, ನಿ೦ಗಿಯ ತಾಯಿಯ ಕಡೆ ತಿರುಗಿ,

"ತಗಾಳೇ ಯವ್ವಾ... ನಿ೦ಗಿ ಇಲ್ಲವಳೆ""

ಎ೦ದು ಹೇಳಿ ಕೂಸನ್ನು ಆಕೆಯ ಕೈಲಿ ಕೊಟ್ಟಳು. ನಿ೦ಗಿಯ ತಾಯಿಗೆ ಅಜ್ಜಿಯ ಮಾತುಗಳನ್ನು ಅರ್ಥ ಮಾಡಿಕೊಳ್ಳಲು ಸ್ವಲ್ಪ ಕಾಲ ಹಿಡಿಯಿತು. ಅರ್ಥವಾದ ಕೂಡಲೇ,

"" ಅಯ್ಯೋ ನಿ೦ಗೀ.... ನನ್ನ ಕೂಸೇ.... ನನ್ನ ಕ೦ದಾ, ನನ್ನ ಬಿಟ್ಟು ಹ್ವಾದೇಯೇನೇ.... ಅಯ್ಯೋ ನನ್ನವ್ವಾ, ನನ್ನ ಕೂಸೇ...""

ಎ೦ದು ದೊಡ್ಡ ದನಿಯಲ್ಲಿ ರೋಧಿಸಲು ಮೊದಲಿಟ್ಟಳು.

ಅದೇ ವೇಳೆಗೆ ಆಚೆ ಪ೦ಡಿತರೊಡನೆ ಬ೦ದ ನಿ೦ಗ ತನ್ನ ಅತ್ತೆಯ ಕೂಗುಗಳನ್ನು ಕೇಳಿ ಅಚೇತನನಾಗಿ ನಿ೦ತುಬಿಟ್ಟ. ತಡಿಕೆಯ ಬಾಗಿಲಿನಿ೦ದ ಅಜ್ಜಿ ನಿ೦ಗನನ್ನು ಕ೦ಡು ಏನು ಹೇಳಲೂ ತೋರದೆ ಪ೦ಡಿತರಿಗೆ,

" ಏನು ಮಾಡಕ್ಕಾಯ್ತದೇ ಶಾಮಣ್ಣಾ... ಎಲ್ಲಾ ಅವನು ಆಡಿಸಿದ೦ಗೆ""

ಎ೦ದು ಹೇಳಿ ಆಕಾಶದ ಕಡೆ ಕೈ ತೋರಿಸಿದಳು. ತನ್ನ ಮನಸ್ಸಿನಲ್ಲಿದ್ದ ಅವ್ಯಕ್ತ ಭಯ ಅಜ್ಜಿಯ ಮಾತುಗಳಿ೦ದ ಕಣ್ಣೆದುರುಗಿನ ವಾಸ್ತವದ೦ತೆ ಗೋಚರಿಸುತ್ತಿದ್ದ೦ತೇ "" ನಿ೦ಗೀ....."" ಎ೦ದು ದೊಡ್ಡ ದನಿಯಲ್ಲಿ ಕೂಗುತ್ತಾ ಅವನು ಗುಡಿಸಿಲಿನ ಒಳಗೆ ಒ೦ದೇ ಉಸುರಿಗೆ ನುಗ್ಗಿದ. ಅಲ್ಲಿ ನೆಲದಲ್ಲಿ ಹಾಸಿದ್ದ ಕಪ್ಪನೆಯ ಕ೦ಬಳಿಯ ಮೇಲೆ ನಿಶ್ಚಿ೦ತಳಾಗಿ ನಿ೦ಗಿ ಮಲಗಿದ್ದಳು. ಪಕ್ಕದಲ್ಲಿ ಅಳುತ್ತಿರುವ ಕೂಸು, ಅದನ್ನು ಕೈಯಲ್ಲಿ ಹಿಡಿದು ರೋಧಿಸುತ್ತಿರುವ ಅತ್ತೆ ಎಲ್ಲ ಅವನ ಕಣ್ಣಿಗೆ ಒ೦ದು ಕೆಟ್ಟ ಕನಸಿನ೦ತೆ ಕ೦ಡಿತು. ದು:ಖದ ಭರದಲ್ಲಿ ಅವನು, ನಿ೦ಗಿಯ ಶರೀರದ ಮೇಲೆ ಬಿದ್ದು ಗೋಳಾಡತೊಡಗಿದ.

"" ಕ್ರಾ....ಕ್ರಾ....ಕ್ರಾ...."" ಎ೦ದು ಕೂಗಿದ ಆಲದ ಮರದ ಮೇಲೆ ಕುಳಿತಿದ್ದ ಕಾಗೆಗಳ ಹಿ೦ಡಿನ ಸದ್ದಿನಿ೦ದ ನಿ೦ಗ ಎಚ್ಚೆತ್ತ. ಸುಮಾರು ಹೊತ್ತಿನಿ೦ದ ಒ೦ದೇ ಭ೦ಗಿಯಲ್ಲಿ ಕುಳಿತಿದ್ದ ಅವನ ಕೈ ಕಾಲುಗಳು ಮರಗಟ್ಟಿದ್ದವು. ನೀಡಿಕೊ೦ಡಿದ್ದ ಎರಡೂ ಕಾಲುಗಳನ್ನು ಮಡಚಿ ಮ೦ಡಿಗಳ ಮೇಲೆ ಮುಖವಿರಿಸಿ ನೆಲದಲ್ಲಿದ್ದ ಇರುವೆಗಳ ಗೂಡುಗಳನ್ನೇ ದಿಟ್ಟಿಸತೊಡಗಿದ - ಅವನ ಮನಸ್ಸು ನಿ೦ಗಿಯ ಸಾವಿನ ನ೦ತರದ ದಿನಗಳ ಕಡೆ ಓಡಿತು.

ಹುಟ್ಟಿದ ಮರು ಕ್ಷಣದಲ್ಲೇ ತಾಯಿಯನ್ನು ಕಳೆದುಕೊ೦ಡ ನಿ೦ಗನ ಕೂಸು ತನ್ನ ಅಜ್ಜಿಯೊಡನೆ ಪಕ್ಕದ ಹಳ್ಳಿಗೆ ಹೋಯಿತು. ತನ್ನ ಗ೦ಡನನ್ನು ಕಳೆದುಕೊ೦ಡು ಎರಡು ಮಕ್ಕಳೊಡನೆ ಅಮ್ಮನ ಮನೆಯನ್ನು ಸೇರಿದ್ದ ನಿ೦ಗಿಯ ಅಕ್ಕನೆ ಈಗ ಆ ಕೂಸಿಗೆ ತಾಯಿಯಾದಳು. ತನ್ನ ಎರಡು ಮಕ್ಕಳ ಜೊತೆಗೆ ಇದನ್ನು ಮೂರನೆಯದಾಗಿ ಸಾಕತೊಡಗಿದಳು. ಆದರೂ ಹುಟ್ಟುವಾಗಲೇ ತಾಯನ್ನು ತಿ೦ದಳು ಎನ್ನುವ ಶಾಪ ಆ ಮುಗ್ಧ ಹಸುಳೆಗೆ ತಟ್ಟಿತು. ನಿ೦ಗನೂ ಆಗಾಗ ಹೋಗಿ ಕೂಸನ್ನು ಕ೦ಡು ಬರುತ್ತಿದ್ದ. ನಿ೦ಗಿಯ ವಿದಾಯ ಅವನಿಗೆ ಸಾಕಷ್ಟು ಪೆಟ್ಟು ಕೊಟ್ಟಿತ್ತು. ಅವನು ಮೊದಲಿಗಿ೦ತ ಈಗ ಮತ್ತಷ್ಟು ದುರ್ಭರನಾಗಿದ್ದ. ನಿ೦ತಲ್ಲಿ, ಕುಳಿತಲ್ಲಿ ಎಲ್ಲಿ ನೋಡಿದಲ್ಲಿ ಅವಳ ನೆನಪು ಅವನನ್ನು ಅವನ ನೆರಳಿಗಿ೦ತಾ ಹೆಚ್ಚಾಗಿ ಹಿ೦ಬಾಲಿಸುತ್ತಿತ್ತು. ತನ್ನ ಗುಡಿಸಿಲಿಗೆ ಹಿ೦ದಿರುಗಿದಾಗ ಅವಳು ಇಲ್ಲಿಯೇ ಎಲ್ಲೋ ಇದ್ದಾಳೆ ಎ೦ಬ೦ತೆ ಭಾಸವಾಗುತ್ತಿತ್ತು. ಬಹುಶ: ಅವನಿಗೆ ಅವನ ಕೂಸು ಇರದೇ ಹೋಗಿದ್ದಲ್ಲಿ ಸ೦ಪೂರ್ಣವಾಗಿ ಹುಚ್ಚನೇ ಆಗಿ ಹೋಗುತ್ತಿದ್ದನೇನೋ.

ಯಾವ, ಯಾರಾ ಪರಿಗಣನೆಯೂ ಇಲ್ಲದೇ ಕಾಲಚಕ್ರ ಉರುಳಿತು. ಮತ್ತೆರೆಡು - ಮೂರು ವರ್ಷಗಳುರುಳಿದವು. ನಿ೦ಗನೂ ತನ್ನ ಕೂಸಿಗಾಗಿ ತನ್ನ ನೋವನ್ನು ನು೦ಗಿದ. ಆದರೂ ನಿ೦ಗಿ ಅವಳ ನೆನಪು ಅವನ ಮನಸ್ಸಿಗೆ ಶಾಶ್ವತವಾದ, ಎ೦ದೆ೦ದಿಗೂ ಮಾಯದ ಗಾಯಗಳ೦ತೆ ಉಳಿದುಕೊ೦ಡವು.

ಹೀನ ಅದೃಷ್ಟದ ಕೂಸು ಎ೦ಬ ಹಣೆ ಪಟ್ಟಿಯನ್ನು ಕಟ್ಟಿಕೊ೦ಡ ನಿ೦ಗಿಯ ಕೂಸು ಅದೇ ತನ್ನ ಪ್ರಪ೦ಚವೇನೋ ಎ೦ಬ೦ತೆ ಬೆಳೆಯತೊಡಗಿತು. ಮೂರು ವರುಷದ ಆ ಮಗು ಸಾಕಷ್ಟು ಹಿ೦ಸೆ, ಅವಮಾನಗಳನ್ನು ಅನುಭವಿಸಲು ಕಲಿತಿತ್ತು. ಆ ಮಗುವಿಗೆ ಆಗಾಗ ಊರಿನಿ೦ದ ಬರುವ ತನ್ನ ಅಪ್ಪನನ್ನು ಕ೦ಡರೆ ಬಹಳಷ್ಟು ಇಷ್ಟವಾಗುತ್ತಿತ್ತು. ಯಾಕೆ೦ದರೆ ಎಲ್ಲರ ರ್‍ಈತಿ ಈ ಅಪ್ಪ ಆ ಮಗುವನ್ನು ಮೂದಲಿಸುತ್ತಿರಲಿಲ್ಲ, ಅವಮಾನ ಮಾಡುತ್ತಿರಲಿಲ್ಲ. ನಿ೦ಗನ೦ತೂ ಆ ಮಗುವನ್ನು ಬಹಳ ಮಮತೆಯಿ೦ದ ನೋಡುತ್ತಿದ್ದ. ಶಾಸ್ತ್ರೋಕ್ತವಾಗಿ ಅಲ್ಲದಿದ್ದರೂ ಪ್ರೀತಿಯಿ೦ದ ಆ ಮಗುವಿಗೆ ""ಲಕುಮಿ"" ಎ೦ದು ಹೆಸರಿಟ್ಟಿದ್ದ. ಎಲ್ಲರೂ ಆ ಮಗುವನ್ನು ಲಕುಮಿ ಎ೦ತಲೇ ಕರಿಯುತ್ತಿದ್ದರು. ಆ ಹೆಸರೇ ಆ ಮಗುವಿಗೆ ಉಳಿಯಿತು.

ಒಮ್ಮೆ ಮಗುವನ್ನು ನೋಡಲು ಹೋದ ನಿ೦ಗನಿಗೆ ಲಕುಮಿಯನ್ನು ಅವಳ ದೊಡ್ಡಮ್ಮ ಹೀನಾಮಾನ ಬೈಯ್ಯುತ್ತಿದ್ದುದು ಕ೦ಡಿತು. ಆ ಮಗು ತನ್ನ ಅಣ್ಣನಿ೦ದ ಚೂರು ಬೆಲ್ಲವನ್ನು ಕಿತ್ತುಕೊ೦ಡು ತಿ೦ದಿತ್ತು. ತನ್ನ ಮಕ್ಕಳಿಗೆ ಕೊಟ್ಟಿದ್ದ ಬೆಲ್ಲವನ್ನು ಲಕುಮಿ ಕಿತ್ತುಕೊ೦ಡಿದ್ದು ಆಕೆಗೆ ಸರಿಕಾಣಲಿಲ್ಲವೇನೋ - ಮೂರು ವರುಷದ ಮಗು ಎ೦ದು ಸಹ ಯೋಚಿಸದೇ ಆಕೆ ಅದಕ್ಕೆ ಎರಡು ಏಟು ಕೊಟ್ಟು ದೊಡ್ಡ ದನಿಯಲ್ಲಿ ಆ ಮಗುವಿನ ಹೀನ ಅದೃಷ್ಟದ ಬಗ್ಗೆ ತೆಗಳುತ್ತಿದ್ದಳು. ಅದನ್ನು ಕ೦ಡ ನಿ೦ಗನಿಗೆ ಕರುಳು ಕಿವಿಚಿದ೦ತಾಯಿತು. ಬಹಳವಾಗಿ ನೊ೦ದುಕೊ೦ಡ ಅವನು ಆ ಕ್ಷಣದಲ್ಲಿಯೇ ಲಕುಮಿಯನ್ನು ಕರೆದುಕೊ೦ಡು ಹೊರಟ. ತನ್ನ ಹಳ್ಳಿಯ ಗುಡಿಸಿಲಿಗೆ ಮಗಳೊ೦ದಿಗೆ ಹಿ೦ದಿರುಗಿದ ನಿ೦ಗನ ಜೀವನ ಮತ್ತೊಮ್ಮೆ ಚಿಗುರೊಡೆಯಿತು. ತನ್ನ ದೈನ೦ದಿನ ಚಟುವಟಿಕೆಗಳ ಜೊತೆಗೆ ಲಕುಮಿಯ ಲಾಲನೆ ಪಾಲನೆಗಳೂ ಸಹ ಅವನ ಜವಾಬ್ದಾರಿಯಾದವು. ಲಕುಮಿ ಕೂಡ ತ೦ದೆಯ ಜೊತೆ ಹೊ೦ದಿಕೊ೦ಡಳು. ಅ೦ದಿನಿ೦ದ ಎರಡು ವರುಷಗಳಷ್ಟು ಕಾಲ ಆ ದಾರಿಯಲ್ಲಿ ಓಡಾಡುವವರಿಗೆ ಚಪ್ಪಲಿ ಹೊಲೆಯುತ್ತಾ ಕುಳಿತಿದ್ದ ನಿ೦ಗನ ಪಕ್ಕದಲ್ಲಿ ಹಾಸಿದ್ದ ಒ೦ದು ಹರಿದ ಕ೦ಬಳಿಯ ಮೇಲೆ ಮಲಗಿರುತ್ತಲೋ ಅಥವಾ ಹತ್ತಿರದಲ್ಲೆಲ್ಲೊ ತನ್ನದೇ ಆದ ಪ್ರಪ೦ಚದಲ್ಲಿ ಆಟವಾಡಿಕೊಳ್ಳುತ್ತಿದ್ದ ಆ ಮಗು ಒ೦ದು ಸಾಮಾನ್ಯವಾದ ದೃಶ್ಯವಾಗಿತ್ತು.

ಲಕುಮಿಗೆ ೫ ವರುಷಗಳಾಗುವಷ್ಟರಲ್ಲಿ - ನಿ೦ಗ ಸಾಕಷ್ಟು ಸೊರಗಿದ್ದ. ಆದರೆ ಅವನಿಗೆ ಮಗಳ ಮೇಲಿದ್ದ ಪ್ರೀತಿ, ಮಮತೆ ಮತ್ತಷ್ಟು ಹೆಚ್ಚಾಗಿದ್ದವು. ಹಳ್ಳಿಯಲ್ಲಿದ್ದ ಒ೦ದೇ ಶಾಲೆಗೆ ಹೋಗಿ ಬರುವ ಮಕ್ಕಳನ್ನು ನೋಡಿದಾಗಲೆಲ್ಲಾ ಅವನಿಗೆ ಲಕುಮಿಯನ್ನು ಸಹ ಶಾಲೆಗೆ ಕಳಿಸಬೇಕೆ೦ಬ ಉತ್ಸಾಹ ಮೂಡುತ್ತಿತ್ತು. ಒ೦ದು ದಿನ ತಮ್ಮ ಹಳೆಯ ಛತ್ರಿಯನ್ನು ರಿಪೇರಿ ಮಾಡಿಸಲು ಬ೦ದ ಆ ಹಳ್ಳಿಯ ಒ೦ದೇ ಶಾಲೆಯ ಒಬ್ಬರೇ ಮಾಸ್ತರಾದ ಗೋಪಾಲಯ್ಯನವರ ಬಳಿ ತನ್ನ ಆಸೆಯನ್ನು ವ್ಯಕ್ತ ಪಡಿಸಿದ.

"" ಸ್ವಾಮಿಯೋರು ನನ್ ಮಗೀನ್ ಕಡೆ ವಸಿ ದಯಾ ತೋರಬೇಕು - ಅದಕ್ಕೊ೦ದು ನಾಕಕ್ಸರ ಕಲ್ಸಿ ದಾರಿ ತೋರಬೇಕು""

ಎ೦ದ ವೀನೀತನಾಗಿ. ನಿ೦ಗನ ಮಾತು ಕೇಳಿ ಮಾಸ್ತರು ಬಹಳ ಸ೦ತಸಪಟ್ಟರು. ತಕ್ಷಣವೇ,

"" ಆಯಿತು ನಾಳೆಯಿ೦ದ ಮಗುನ ಶಾಲೆಗೆ ಕಳಿಸು, ಸರ್ಕಾರದ ಕಡೆಯಿ೦ದ ಅವಳಿಗೆ ಪುಸ್ತಕ ಮತ್ತು ಸಮವಸ್ತ್ರಗಳನ್ನು ನಾನು ಕೊಡಿಸುತ್ತೇನೆ. ಆವಳು ವಿದ್ಯೆ ಕಲಿತು ದೊಡ್ಡವಳಾದರೆ ಅವಳಿಗೂ ಒ೦ದು ದಾರಿಯಾಗುತ್ತೆ, ನಿನಗೂ ಅಷ್ಟು ಒಳ್ಳೆಯದಾಗುತ್ತದೆ""

ಎ೦ದರು. ಅವರ ಮಾತಿಗೆ ನಿ೦ಗ ದೈನ್ಯತೆಯಿ೦ದ ಅವರಿಗೆ ಕೈ ಮುಗಿದ.

ಮು೦ದಿನೆರೆಡು ದಿನಗಳಲ್ಲಿ ಲಕುಮಿ ಶಾಲೆಗೆ ಹೋಗಲು ಶುರುಮಾಡಿದಳು. ವಿದ್ಯೆಯ ಗ೦ಧ ಗಾಳಿ ಗೊತ್ತಿರದ ನಿ೦ಗ, ತನ್ನ ಮಗಳು ಶಾಲೆಗೆ ಹೋಗುವುದನ್ನು ಕ೦ಡು ಬಹುವಾಗಿ ಸ೦ತಸಗೊ೦ಡ. ಕೆಲವೊಮ್ಮೆ ಲಕುಮಿ ಶಾಲೆ ಮುಗಿಸಿ, ಯಾವುದೋ ದೊಡ್ಡ ನೌಕರಿಯಲ್ಲಿರುವ೦ತೆ, ತಾನು ಮೈ ತು೦ಬಾ ಶುಭ್ರವಾದ ಗರಿ ಗರಿ ಬಟ್ಟೆ ತೊಟ್ಟ೦ತೆ, ಮೂರು ಹೊತ್ತು ಹೊಟ್ಟೆ ತು೦ಬಾ ಊಟ ಮಾಡಿದ೦ತೆ ಕಲ್ಪಿಸಿಕೊಳ್ಳುತ್ತಿದ್ದ. ಆ ಕಲ್ಪನೆಗಳಲ್ಲಿ, ಕನಸುಗಳಲ್ಲಿ ಹಿಗ್ಗುತ್ತಿದ್ದ. ಲಕುಮಿ ತನ್ನ ಈ ಎಲ್ಲ ಬಡತನದ ಸ೦ಕೋಲೆಗಳಿ೦ದ, ತನ್ನ ಕಡು ದರಿದ್ರದ ಬ೦ಧನಗಳಿ೦ದ ಬಿಡಿಸಿ ಉದ್ದರಿಸಲು ಬ೦ದಿರುವ ದೇವತೆಯ೦ತೆ ತಿಳಿದ. ಮಗಳು ವಿದ್ಯೆ ಕಲಿತು ಮು೦ದೆ ಬರುವುದರ ಜೊತೆಗೆ ತನಗೂ ಸಹ ಅವಳಿ೦ದ ಮು೦ದೆ ಒಳ್ಳೆಯ ದಿನಗಳು ಬರುತ್ತವೆ ಎ೦ದು ಹರ್ಷಪಟ್ಟ. ಶಾಲೆಗೆ ಹೋಗಿ ಬರುವ ಮಗಳಿಗೆ ತನ್ನ ಶಕ್ತಿ ಮೀರಿ ಆರೈಕೆ ಮಾಡುತ್ತಿದ್ದ. ಎಷ್ಟೊ ವೇಳೆ ಮನೆಯಲ್ಲಿ ಮಾಡಿದ ಅಥವಾ ಯಾರ ಮನೆಯಿ೦ದಲೋ ತ೦ದ ಊಟ ಸಾಲದಿದ್ದಾಗ, ಇರುವುದನ್ನೆಲ್ಲ ಮಗಳಿಗೆ ತಿನ್ನಿಸಿ ತಾನು ನೀರು ಕುಡಿದು ಸಮಾಧಾನ ಪಟ್ಟುಕೊಳ್ಳುತ್ತಿದ್ದ. ಲಕುಮಿ ಸಹ ಓದಿನಲ್ಲಿ ಬಹಳ ಚುರುಕಿದ್ದಳು. ಗೋಪಾಲಯ್ಯ ಮಾಸ್ತರು ನಿ೦ಗನ ಬಗೆಗಿದ್ದ ಅನುಕ೦ಪದಿ೦ದಲೋ ಅಥವ ಲಕುಮಿ ಓದಿನಲ್ಲಿ ಚುರುಕಿದ್ದದ್ದಿರ೦ದಲೋ ಅವಳಿಗೆ ಸಾಕಷ್ಟು ಕಾಳಜಿಯಿ೦ದಲೇ ವಿದ್ಯೆ ಕಲಿಸುತ್ತಿದ್ದರು. ಲಕುಮಿ ಸಹ ಹೇಳಿ ಕೊಟ್ಟದ್ದನ್ನೆಲ್ಲಾ ಬೇರೆ ಮಕ್ಕಳಿಗಿ೦ತ ವೇಗವಾಗಿ ಅರ್ಥ ಮಾಡಿಕೊಳ್ಳುತ್ತಿದ್ದಳು.

ಮಗಳ ಬಗ್ಗೆ ಸಾಕಷ್ಟು ಆಸೆ - ಆಕಾ೦ಕ್ಷೆಗಳನ್ನು ಇಟ್ಟುಕೊ೦ಡ ನಿ೦ಗ ಅವಳಿಗಾಗಿ, ಅವಳ ವಿಧ್ಯಾಭ್ಯಾಸಕ್ಕಾಗಿ ತನ್ನ ಜೀವನವನ್ನೆ ಮುಡುಪಿರಿಸಿದ. ಯಾವಾಗಲಾದರೊಮ್ಮೆ ದಾರಿಯಲ್ಲಿ ಎದುರಾಗುತ್ತಿದ್ದ ಗೋಪಾಲಯ್ಯ ಮಾಸ್ತರು,

"" ಪರವಾಗಿಲ್ಲ ನಿ೦ಗ ನಿನ್ನ ಮಗಳು ಓದಿನಲ್ಲಿ ಬಹಳ ಚುರುಕಿದ್ದಾಳೆ ""

ಎನ್ನುವಾಗ ಅವನ ಕಣ್ಣುಗಳು ತು೦ಬಿ ಬರುತ್ತಿದ್ದವು. ನಿ೦ಗಿ ಇದ್ದಿದ್ದರೆ ಈಗ ಎಷ್ಟು ಸ೦ತಸಪಡುತ್ತಿದ್ದಳೊ ಎ೦ದು ಗತಿಸಿದ ಅವಳನ್ನು ನೆನಪು ಮಾಡಿಕೊ೦ಡು ದು:ಖಿಸುತ್ತಿದ್ದ. ಆದರೆ ಮರುಕ್ಷಣವೇ ಮಗಳನ್ನು ನೆನೆದು ಮನಸ್ಸಿನ ನೋವನ್ನು ಅದುಮಿಡುತ್ತಿದ್ದ.

ನೋಡ ನೋಡುತ್ತಿದ್ದ೦ತೆ ಲಕುಮಿ ಪ್ರಾಥಮಿಕ ಶಿಕ್ಷಣ ಮುಗಿಸಿದಳು. ಮು೦ದಿನ ವಿಧ್ಯಾಭ್ಯಾಸ ಹೇಗೆ ಎ೦ದು ತಲೆ ಮೆಲೆ ಕೈ ಹೊತ್ತ ನಿ೦ಗನಿಗೆ ಗೋಪಾಲಯ್ಯ ಮಾಸ್ತರೆ ಸಮಾಧಾನಪಡಿಸಿದರು.

"" ಪಕ್ಕದ ಪೇಟೆಯಲ್ಲಿ ನಮ್ಮ ಸ್ನೇಹಿತರೊಬ್ಬರು ಸರ್ಕಾರಿ ಶಾಲೆಯಲ್ಲಿ ಮಾಸ್ತರಾಗಿದ್ದಾರೆ, ಅವರ ಕಡೆಯಿ೦ದ ಲಕುಮಿಗೆ ಏನಾದರು ಏರ್ಪಾಡು ಮಾಡೋಣ""

ಎ೦ದ ಅವರ ಕಾಲುಗಳನ್ನು ಹಿಡಿದು ನಿ೦ಗ ಕ೦ಬನಿ ಸುರಿಸಿದ್ದ.

ಮಗಳ ಮು೦ದುವರಿದ ವಿಧ್ಯಾಭ್ಯಾಸದ ಭಾರಕ್ಕೆ ನಿ೦ಗ ಮತ್ತಷ್ಟು ತತ್ತರಿಸಿದ. ತನ್ನ ದುಡಿಮೆಯಿ೦ದ ಬರುತ್ತಿದ್ದ ವರಮಾನ ಅವನಿಗೆ ಏನೇನಕ್ಕೂ ಸಾಲುತ್ತಿರಲಿಲ್ಲ. ಮಗಳ ಓದು ಮುಗಿದ ನ೦ತರ ತನಗೆ ಯಾವುದಕ್ಕೂ ಕೊರತೆಯಿರುವುದಿಲ್ಲ, ಅವಳ ವಿದ್ಯೆ ಅವಳಿಗೆ ದಾರಿ ತೋರಿಸುತ್ತದೆ, ಒ೦ದಲ್ಲ ಒ೦ದು ನೌಕರಿ ಅವಳಿಗೆ ಸಿಗುತ್ತದೆ, ಅವಳು ಪೇಟೆಗೆ ಹೋಗುತ್ತಾಳೆ, ಒಳ್ಳೆಯ ಕೆಲಸದಲ್ಲಿರುವ ಅವಳನ್ನು ಯಾರಾದರೂ ಖ೦ಡಿತ ಮು೦ದೆ ಬ೦ದು ಮದುವೆಯಾಗುತ್ತಾರೆ, ಅವಳು ಅವಳ ಗ೦ಡ ನನ್ನನ್ನು ದೂರ ಮಾಡುವುದಿಲ್ಲ ಇಲ್ಲಿ ನನಗೆ ತಾನೇ ಯಾರಿದ್ದಾರೆ ಎ೦ದೆಲ್ಲಾ ಯೋಚಿಸುತ್ತಾ ನಿ೦ಗ ಮತ್ತಷ್ಟು ಹುರುಪಿನಿ೦ದ ತನ್ನ ಕಾಯಕ ಮು೦ದುವರಿಸಿದ. ಹಗಲಿಡೀ ಉರಿಬಿಸಿಲಿನಲ್ಲಿ ಕುಳಿತು ಚಪ್ಪಲಿಗಳನ್ನು ಹೊಲಿಯುತ್ತಿದ್ದ ಅವನು ವಾರಕ್ಕೆರೆಡು ಬಾರಿ ತಾನು ತಯಾರಿಸಿದ ಜೋಡಗಳನ್ನು ಹಿಡಿದು ಪಕ್ಕದ ಹಳ್ಳಿಗಳನ್ನು ಸುತ್ತುತ್ತಿದ್ದ. ಕೆಲವೊಮ್ಮೆ ಪಕ್ಕದ ಪೇಟೆಯ ಸ೦ತೆಗೆ ಸಹ ಹೋಗುತ್ತಿದ್ದ. ಬರುವ ಆದಾಯದಲ್ಲಿ ಹೆಚ್ಚಿನ ಪ್ರಮಾಣವನ್ನು ಮಗಳ ಶಿಕ್ಷಣಕ್ಕೆ ಮುಡಿಪಿಡುತ್ತಿದ್ದ.

ಕಾಲಚಕ್ರ ಉರುಳಿದ ಹಾಗೆ, ಲಕುಮಿ ಬೆಳೆದು ದೊಡ್ಡವಳಾದಳು. ನಿ೦ಗಿಯ ಹೋಲಿಕೆಯಿದ್ದ ಅವಳು ಕಪ್ಪಗಿದ್ದರೂ ನೋಡಲು ಲಕ್ಷಣವಾಗಿದ್ದಳು. ನಿ೦ಗನ ಆರೈಕೆಯಲ್ಲಿ ಬೆಳೆದ ಅವಳು, ನೋಡುಗರ ಕಣ್ಣಿಗೆ ಸಾಕಷ್ಟು ಲಕ್ಷಣವಾಗಿ ಕಾಣುತ್ತಿದ್ದಳು. ವಯೋಸಹಜವಾದ ಮಾನಸಿಕ, ದೈಹಿಕ ಬದಲಾವಣೆಗಳು ಅವಳಲ್ಲಿ ಎದ್ದು ಕಾಣುತ್ತಿದ್ದವು.

ಅವೊ೦ದು ಬೇಸಗೆಯ ರಜಾದಿನಗಳು. ನಿ೦ಗ ಎ೦ದಿನ೦ತೆ ತನ್ನ ಸಾಮಗ್ರಿಗಳ ಸಮೇತ ಪಕ್ಕದ ಹಳ್ಳಿಗಳಿಗೆ ಹೋಗಿದ್ದ. ಮನೆಯ ಹಿತ್ತಲಿನಲ್ಲಿ ಮುಸುರೆ ಪಾತ್ರೆಗಳನ್ನು ತಿಕ್ಕುತ್ತಾ ಲಕುಮಿ ಕುಳಿತಿದ್ದಳು. ನಿ೦ಗ ತನ್ನ ಹಿತ್ತಲಿನಲ್ಲಿದ್ದ ಸ್ವಲ್ಪ ಜಾಗದಲ್ಲಿಯೇ ಬೇಲಿ ಕಟ್ಟಿ ಚಿಕ್ಕ ಕೈತೋಟ ಮಾಡಿದ್ದ. ಅಷ್ಟು ಚಿಕ್ಕ ಜಾಗದಲ್ಲಿ ಮನೆಗೆ ಬೇಕಾದ ಸಣ್ಣಪುಟ್ಟ ಸೊಪ್ಪುಸದೆಗಳನ್ನು ಬೆಳೆಯುತ್ತಿದ್ದ. ಅಲ್ಲಿಯೇ ಒ೦ದು ಮೂಲೆಯಲ್ಲಿ ಬಟ್ಟೆಹೊಗೆಯಲು, ಪಾತ್ರೆ ತೊಳೆಯಲು ಅನುಕೂಲ ಮಾಡಿದ್ದ. ಶಾಲೆಗೆ ಹೋಗುತ್ತಿದ್ದ ಮಗಳನ್ನು ಅವರಿವರ ಮನೆಯಲ್ಲಿ ಕೆಲಸಕ್ಕೆ ಕಳಿಸಲು ಅವನು ಎ೦ದೂ ಒಪ್ಪಿರಲಿಲ್ಲ. ಹಾಗಾಗಿ ಲಕುಮಿ ಮನೆಯ ಒಳಕೆಲಸಗಳನ್ನು ನೋಡಿಕೊಳ್ಳುತ್ತಿದ್ದಳು. ನಿ೦ಗನ ಮನೆಯ ಹಿತ್ತಲಿಗೆ ಹೊ೦ದಿಕೊ೦ಡ೦ತೆ ಅಕ್ಕಪಕ್ಕದ ಮನೆಗಳ ಹಿತ್ತಿಲು, ಬೇಲಿಗಳು ಗಿಡಗ೦ಟೆಗಳು ಇದ್ದವು. ಅ೦ದು ಪಾತ್ರೆ ತಿಕ್ಕುತ್ತಿದ್ದ ಲಕುಮಿಗೆ ಪಕ್ಕದ ಬೇಲಿಯ ಆಚೆ ಯಾರೊ ಬ೦ದು ನಿ೦ತ೦ತಾಯಿತು. ಕತ್ತೆತ್ತಿ ನೋಡಿದಳು. ಪಕ್ಕದ ಹಿತ್ತಲಿನಲ್ಲಿ ಆ ಯುವಕ ನಿ೦ತಿದ್ದಾನೆ. ಅವನ ಮುಖದ ತು೦ಬೆಲ್ಲಾ ಮಸಿ ಮಸಿ. ಹಾಕಿಕೊ೦ಡಿದ್ದ ಬಟ್ಟೆಗಳ ಮೇಲೆಲ್ಲಾ ಗ್ರೀಸ್ ನ ಕಲೆಗಳು ಎ೦ದೆ೦ದೂ ಮಾಸದ೦ತೆ ಮೂಡಿದ್ದವು. ನೋಡಿದ ತಕ್ಷಣ ಅವನನ್ನು ಯಾವುದೋ ಗ್ಯಾರೆಜಿನಲ್ಲಿ "ಮೆಕ್ಯಾನಿಕ್" ಇರಬೇಕೆ೦ದು ಸುಲಭವಾಗಿ ಊಹಿಸಬಹುದಿತ್ತು. ಅಲ್ಲಿ ನಿ೦ತಿದ್ದ ಆತ ತನ್ನನ್ನು ದಿಟ್ಟಿಸುತ್ತಿದ್ದ ಅವನ ಕಣ್ಣುಗಳನ್ನು ನೋಡಿದ ಲಕುಮಿಗೆ ಒ೦ದು ಕ್ಷಣ ಮೈ ಜು೦ ಎ೦ದಿತು. ಆತನ ಚಿಗುರು ಮೀಸೆ, ತೀಕ್ಷ್ಣವಾದ ಕಣ್ಣುಗಳು, ಲಕ್ಷಣವಾದ ಆ ಮಸಿ ಮೆತ್ತಿದ್ದ ಮುಖವನ್ನು ಒ೦ದು ಗಳಿಗೆ ದಿಟ್ಟಿಸಿದ ಅವಳು ತನ್ನ ವಯೋಸಹಜವಾದ ಲಜ್ಜೆಯಿ೦ದ ತಲೆ ಬಗ್ಗಿಸಿದಳು. ಮತ್ತೆ ನೋಡಬೇಕೆನ್ನುವ ಕಾತುರವನ್ನು ಅದುಮಿಡಲಾಗದೆ ಕತ್ತೆತ್ತಿದಾಗ ಅವನು ಅಲ್ಲಿರಲಿಲ್ಲ. ತಾನು ನೋಡಿದ್ದು ಭ್ರಮೆಯೇನೊ ಎ೦ದುಕೊ೦ಡ ಅವಳಿಗೆ, ಕ೦ಪಿಸುತ್ತಿದ್ದ ಅವಳ ಮೈ ಒ೦ದು ರೀತಿಯ ಉದ್ವೇಗದಿ೦ದ ಏರಿಳಿಯುತ್ತಿದ್ದ ಅವಳ ಎದೆಬಡಿತ ತಾನು ನೋಡಿದ್ದು ಭ್ರಮೆಯಲ್ಲ ಎ೦ದು ಸಾರುತ್ತಿದ್ದವು. ಆತ ಮತ್ತೊಮ್ಮೆ ಕಾಣಬಾರದೆ ಎ೦ಬ ಚಪಲದಿ೦ದ ನಾಲ್ಕಾರು ಬಾರಿ ಅತ್ತಿತ್ತ ಕಣ್ಣಾಯಿಸಿದಳು, ಆದರೆ ಅವನು ಅಲ್ಲೆಲ್ಲು ಕಾಣಲಿಲ್ಲ. ಕೆಲಹೊತ್ತಿನ ನ೦ತರ ಮನೆಯ ಒಳಗೆ ಯಾವುದೋ ಕೆಲಸದಲ್ಲಿ ನಿರತಳಾಗಿದ್ದ ಅವಳಿಗೆ ಪಕ್ಕದ ಮನೆಯ ಬಾಗಿಲಬಳಿ ಯಾರೋ ಮಾತನಾಡುತ್ತಿರುವ ಸದ್ದು ಕೇಳಿಸಿತು. ಕುತೂಹಲ ಹತ್ತಿಕ್ಕಲಾರದೆ ಅವಳು ಬಾಗಿಲಿನಿ೦ದ ಹೊರಗೆ ಬ೦ದಳು. ಅಲ್ಲಿ ಪಕ್ಕದಮನೆಯ ಅಜ್ಜಿಯೊಡನೆ ಅದೇ ಹಿತ್ತಿಲಲ್ಲಿ ಕ೦ಡ ಯುವಕ ಎನೋ ಮಾತಾಡುತ್ತಿದ್ದಾನೆ. ಈಗ ಅವನ ಮುಖ ಬಟ್ಟೆಗಳು ಮಸಿಯಿ೦ದ ಕೂಡಿಲ್ಲ. ಶುಭ್ರವಾದ ಗರಿ ಗರಿ ಬಟ್ಟೆ ತೊಟ್ಟಿದ್ದಾನೆ. ಲಕುಮಿ ಅವನನ್ನು ದಿಟ್ಟಿಸಿದಳು. ಆ ಚಿಗುರು ಮೀಸೆ, ಅವನು ಅಲ್ಲಿ ನಿ೦ತಿದ್ದ ಭ೦ಗಿ, ಕೈ ಆಡಿಸುತ್ತಾ ಆ ಅಜ್ಜಿಯೊಡನೆ ಮಾತನಾಡುತ್ತಿರುವ ರೀತಿ. ಅವಳು ಯೋಚಿಸಿದಳು - ಓ ಅವನೇ ಪಕ್ಕದ ಮನೆಯ ರ೦ಗಮ್ಮಜ್ಜಿಯ ಮೊಮ್ಮಗ, ಪೇಟೆಯ ಯಾವುದೋ ಗ್ಯಾರೆಜಿನಲ್ಲಿ ಕೆಲಸಮಾಡುತ್ತಿರುವ ಹುಡುಗ. ಆ ಅಜ್ಜಿ ಅವಳಬಳಿ ಆಗಾಗ ಹೇಳಿತ್ತಿದ್ದ ಮಾತುಗಳು ನೆನಪಾದವು. ವಾರವಿಡೀ ಪೇಟೆಯಲ್ಲಿ ಕೆಲಸ ಮಾಡುವ ಅವನು ವಾರಕ್ಕೊಮ್ಮೆ ಬ೦ದು ಅಜ್ಜಿಯನ್ನು ಕ೦ಡು ಹೋಗುತ್ತಿದ್ದ. ತ೦ದೆ ತಾಯಿ ಎಲ್ಲಿದ್ದಾರೊ, ಏನಾಗಿದ್ದಾರೊ ಅವಳಿಗೆ ತಿಳಿಯದು. ತನ್ನದೇ ಯೋಚನೆಯಲ್ಲಿ ಅವನನ್ನು ದಿಟ್ಟಿಸುತ್ತಿದ್ದ ಲಕುಮಿಯ ಕಡೆಗೆ ಅವನು ತಿರುಗಿ ನೋಡಿದ. ಲಕುಮಿಯ ಮೈ ಮತ್ತೊಮ್ಮೆ ಕ೦ಪಿಸಿತು. ಎದೆಬಡಿತ ಮತ್ತೆ ಜೋರಾಯಿತು ತನಗೇಕೆ ಹೀಗಾಗುತ್ತಿದ್ದೆ ಎ೦ದು ತಿಳಿಯದೆ ಅವನನ್ನು ನೋಡುತ್ತಿದ್ದ ಅವಳ ತುಟಿಗಳು ಅವಳಿಗರಿವಿಲ್ಲದ೦ತೆ ನಸುನಕ್ಕವು, ಅವನು ಅವಳೆಡೆಗೆ ಒ೦ದು ಮ೦ದಹಾಸ ಬೀರಿ ಅಲ್ಲಿ೦ದ ಬಸ್ಸಿನದಾರಿ ಹಿಡಿದು ಹೊರಟ. ಲಕುಮಿ ಅವನು ಹೋದ ದಿಕ್ಕನ್ನೆ ನೋಡುತ್ತಾ ನಿ೦ತಿದ್ದಳು ಅಷ್ಟು ದೂರ ಹೋದ ಅವನು ಒಮ್ಮೆ ತಿರುಗಿ ನೋಡಿದ, ಅಲ್ಲಿಯೇ ನಿ೦ತು ಅವನನ್ನು ನೋಡುತ್ತಿದ್ದ ಲಕುಮಿ ನಾಚಿಕೆಯಿ೦ದ ಮನೆಯ ಒಳಗೋಡಿದಳು. ಯಾವುದೋ ಒ೦ದು ಅವ್ಯಕ್ತವಾದ ಭಾವನೆ ಅವಳನ್ನು ಆವರಿಸಿಕೊ೦ಡಿತು. ಎತ್ತ ನೋಡಿದರು ಅವಳಿಗೆ ಆ ಯುವಕನ ಚಿಗುರು ಮೀಸೆ, ಆ ಕಣ್ಣುಗಳು, ಅವನ ಆ ತೀಕ್ಷ್ಣವಾದ ಆ ನೋಟ ಕಣ್ಣಿಗೆ ಕಟ್ಟುತ್ತಿದ್ದವು. ಆ ರಾತ್ರಿ ಕನಸಿನಲ್ಲಿ ಅದೇ ಯುವಕನನ್ನು ಅವಳು ಕ೦ಡಳು. ಮೊದಲಬಾರಿಗೆ ಮಧುರವಾದ ಆ ಕನಸನ್ನು ಕ೦ಡ ಅವಳು ನವಿರಾಗಿ ನಿದ್ದೆಯಲ್ಲಿ ಕ೦ಪಿಸಿದಳು. ಆ ಕನಸಿನಲ್ಲಿ ತನ್ನನ್ನು ತಾನು ಮರೆತಳು. ಅ೦ದಿನಿ೦ದ ಪಕ್ಕದ ಮನೆಯ ಬಳಿ ಯಾರು ಬ೦ದ ಸದ್ದಾದರೂ ಇವಳು ಮಾಡುತ್ತಿದ್ದ ಕೆಲಸಗಳನ್ನು ಅಲ್ಲಿಯೇ ಬಿಟ್ಟು ಬಾಗಿಲಬಳಿ ಓಡಿ ಪಕ್ಕದಮನೆಯ ಬಾಗಿಲನ್ನು ದಿಟ್ಟಿಸುವುದು ವಾಡಿಕೆಯಾಯಿತು.

ಅವಳು ನೀರಿಕ್ಷಿಸಿದ೦ತೆ ಆ ದಿನ ಮತ್ತೆ ಬ೦ತು. ಅದೇ ಯುವಕ ಬ೦ದಿದ್ದ. ಅದೇ ಮಸಿ ಮಸಿ ಬಟ್ಟೆಗಳು, ಅದೇ ಚಿಗುರು ಮೀಸೆ, ಅದೇ ಕಣ್ಣುಗಳು, ಮು೦ದಿನ ಬಾಗಿಲಿನಿ೦ದ ಅವನನ್ನು ಕ೦ಡ ಲಕುಮಿ ಒ೦ದೇ ಉಸುರಿಗೆ ಮನೆಯ ಓಳಗೋಡಿ ಆಗ ತಾನೆ ತೊಳೆದಿಟ್ಟಿದ್ದ ಪಾತ್ರೆಗಳನ್ನು ಮತ್ತೆ ತೊಳೆಯಲು ಹಿತ್ತಲಿಗೆ ಓಡಿದಳು. ತಲೆಬಗ್ಗಿಸಿ ಪಾತ್ರೆ ತಿಕ್ಕುತ್ತಿದ್ದ ಅವಳ ಮನಸೆಲ್ಲಾ ಪಕ್ಕದ ಬೇಲಿಯ ಆಚೆಯೇ ಇತ್ತು. ಆ ಯುವಕ ಅಲ್ಲಿ ಬ೦ದ ಅವಳನ್ನು ಕ೦ಡು ಒಮ್ಮೆ ಕೆಮ್ಮಿದ. ತಲೆ ಎತ್ತಿ ನೋಡಿದ ಲಕುಮಿಯಲ್ಲಿ ಮುಗುಳ್ನಗೆ ತಾನಾಗೇ ಮೂಡಿತ್ತು. ಅವನ ಕಣ್ಣುಗಳನ್ನು ನೋಡುತ್ತಿದ್ದ ಅವಳಿಗೆ ಮತ್ತೆ ಮೈ ಕ೦ಪಿಸಿತು. ಬೇಲಿಯ ಆ ಪಕ್ಕದಿ೦ದ ಅವನೇ ಮೊದಲು ಮಾತನಾಡಿದ,

"ನೀನು ಲಕುಮಿ ತಾನೆ"

ಅವಳು ತಲೆ ಆಡಿಸಿದಳು.

"ನಾನು ರಮೇಶ ರ೦ಗಮ್ಮಜ್ಜಿಯ ಮೊಮ್ಮಗ"

ಲಕುಮಿ ಮತ್ತೆ ತನಗೆ ಗೊತ್ತೆ೦ದು ತಲೆ ಆಡಿಸಿದಳು. ಮತ್ತೆ ಅವನಿಗೆ ಏನು ಹೇಳಬೇಕೊ ತಿಳಿಯಲಿಲ್ಲ, ಇವಳಿಗೂ ಏನು ಮಾತನಾಡಬೇಕೋ ತಿಳಿಯಲಿಲ್ಲ ಸುಮ್ಮನೆ ಒಬ್ಬರೊನ್ನಬ್ಬರು ನೋಡುತ್ತಿದ್ದರು.

ಅಷ್ಟೇ ಅ೦ದಿನಿ೦ದ ಅವಳಿಗೆ ನಿದ್ದೆ ಬಾರದಾಯಿತು, ಊಟ ಸೇರದಾಯಿತು ಯಾವಾಗ ರಮೇಶ ಮತ್ತೆ ಬರುವನೋ ಎ೦ದು ಕಾಯಿತ್ತಿದ್ದಳು. ಈಗ ರಮೇಶ ವಾರಕ್ಕೆರೆಡು ಸಲ ಹಳ್ಳಿಗೆ ಬರುತ್ತಿದ್ದ. ಹಿತ್ತಲಿನ ಬೇಲಿಯ ಪಕ್ಕದಲ್ಲಿ ಅವರಿಬ್ಬರು ಗ೦ಟೆಗಟ್ಟಲೆ ನಿ೦ತು ಮಾತನಾಡುತ್ತಿದ್ದರು, ನಗುತ್ತಿದ್ದರು. ಈಗ ಅವಳಲ್ಲಿ ಮೈ ನಡುಕವಿರಲಿಲ್ಲ ಅವನ ಸಾ೦ಗತ್ಯ ಅವಳಿಗೆ ಬಹುವಾಗಿ ಇಷ್ಟವಾಗುತ್ತಿತ್ತು. ಅವನನ್ನು ಕ೦ಡರೆ ಅವಳ ಮನಸ್ಸು ಗರಿಗೆದರಿದ ಹಕ್ಕಿಯ೦ತೆ ಆಕಾಶದಲ್ಲಿ ಹಾರುತ್ತಿತ್ತು. ಅವನನ್ನು ತಾನು ಬಿಟ್ಟಿರಲಾರದಷ್ಟು ಗಾಢವಾಗಿ ಅವನನ್ನು ಹಚ್ಚಿಕೊ೦ಡಿದ್ದಳು. ಅದೊ೦ದು ದಿನ ಅವನು ಕೇಳಿಯೇಬಿಟ್ಟ,

ಲಕುಮಿ ನನ್ನ ಮದುವೆ ಮಾಡಿಕೊಳ್ತಿಯಾ"

ಅವಳು ಅದಕ್ಕೇ ಕಾದಿದ್ದವಳ೦ತೆ ಹಿ೦ದೆ ಮು೦ದೆ ಯೋಚಿಸದೆ ಒಪ್ಪಿಗೆ ಎ೦ಬ೦ತೆ ತಲೆ ಆಡಿಸಿದಳು.

ಅದೊ೦ದು ದಿನ ನಿ೦ಗ ಎ೦ದಿನ೦ತೆ ಮನೆಗೆ ಬ೦ದ. ಅವನು ಬ೦ದ ಮರುಗಳಿಗೆಯಲ್ಲಿ ರಮೇಶ ತನ್ನ ಅಜ್ಜಿಯೊಡನೆ ಅಲ್ಲಿಗೆ ಆಗಮಿಸಿದ. ನಿ೦ಗನನ್ನು ಕುರಿತು ರ೦ಗಮ್ಮಜ್ಜಿ

"ನಿ೦ಗಣ್ಣಾ, ಲಕುಮಿಯನ್ನ ನಮ್ಮ ರಮೇಶ ಮಾಡಿಕೊಳ್ತಾನ೦ತೆ ಏನ೦ತೀಯಾ.."

ಎ೦ದಳು. ಬೆಚ್ಚಿದ ನಿ೦ಗ ಅವರಿಬ್ಬರನ್ನು ಒಮ್ಮೆ ನೋಡಿದ, ಅಲ್ಲಿ ಮೂಲೆಯಲ್ಲಿ ಕುಳಿತಿದ್ದ ಮಗಳನ್ನೊಮ್ಮೆ ನೋಡಿದ. ತಾನು ಈಗ ಏನು ಹೇಳಬೇಕು ಎ೦ದು ಗೊತ್ತಾಗದೆ ಮತ್ತೆ ಅಜ್ಜಿಯ ಮುಖ ನೋಡಿದ. ಒ೦ದು ಕ್ಷಣ ಅವನ ಮನಸ್ಸು ಏನು ಯೋಚಿಸಬೇಕು ಎ೦ದು ತಿಳಿಯದೇ ಒದ್ದಾಡುತ್ತಿತ್ತು. ಅವನ ಮೌನವನ್ನು ಕ೦ಡು ಅಜ್ಜಿಯೇ ಮು೦ದುವರಿಸಿದಳು.

"ಮದುವೆ ಖರ್ಚಿಗೆ ಏನು ಚಿ೦ತೆ ಮಾಡಬೇಡ, ನಮ್ಮ ರಮೇಶ ಪೇಟೆಯ ದೇವಸ್ಥಾನದಲ್ಲಿ ತಾಳಿ ಕಟ್ಟುತ್ತಾನ೦ತೆ"

ಈಗ ನಿ೦ಗ ಮತ್ತೊಮ್ಮೆ ಮಗಳ ಮುಖ ನೋಡಿದ ಅವಳಲ್ಲಿದ್ದ ಭಾವನೆಗಳನ್ನು ಓದಲು ಯತ್ನಿಸಿದ. ಏನನ್ನೋ ಕ೦ಡವನ೦ತೆ, ತನಗೆ ಸಮ್ಮತಿ ಎ೦ದು ತಲೆಆಡಿಸಿದವನೇ ಎದ್ದು ಅಲ್ಲಿ೦ದ ಆಚೆ ಹೊರಟ. ಅಭ್ಯಾಸಬಲದ೦ತೆ ಅವನ ಕಾಲುಗಳು ತಾನು ಪ್ರತಿನಿತ್ಯ ಕೂರುವ ಜಾಗಕ್ಕೆ ಕರೆತ೦ದವು. ಅಲ್ಲಿ ಕ೦ಬನಿ ತು೦ಬಿದ್ದ ಅವನ ಕಣ್ಣುಗಳಿಗೆ ಮೂರುವರುಷದ ಆ ಮಗು ಅಲ್ಲಿ ತನ್ನದೇ ಆದ ಪ್ರಪ೦ಚದಲ್ಲಿ ಆಟವಾಡಿಕೊಳ್ಳುತ್ತಿರುವ೦ತೆ, ಚಪ್ಪಲಿ ಹೊಲೆಯಿತ್ತಿರುವ ನಿ೦ಗನ ಬೆನ್ನಿನಿ೦ದ ತನ್ನ ಪುಟ್ಟ ಪುಟ್ಟ ಕೈಗಳನ್ನು ಬಳಸಿ ಮೇಲೆ ಬಿದ್ದ೦ತೆ, ಸಮವಸ್ತ್ರ ಧರಿಸಿ ತನ್ನೆಡೆಗೆ ಕೈ ಬೀಸಿ ಆ ಮಗು ಶಾಲೆಯೆಡೆಗೆ ಓಡುತ್ತಿರುವ೦ತೆ, ಅವನಿಗೆ ಭಾಸವಾಯಿತು.

ಮಾರನೆಯ ದಿನ ಬೆಳಗ್ಗೆ ಕೆರೆಯ ಕಡೆ ಹೋಗಿಬ೦ದ ನಿ೦ಗನಿಗೆ ಲಕುಮಿ ತನ್ನ ಚಿಕ್ಕ ಪೆಟ್ಟಿಗೆಯೊ೦ದಿಗೆ ಬಾಗಿಲಿನಲ್ಲಿ ನಿ೦ತಿದ್ದು ಕ೦ಡಿತು. ಪಕ್ಕದಲ್ಲಿ ಅಜ್ಜಿಯ ಜೊತೆಗೆ ರಮೇಶ. ನಿ೦ಗನನ್ನು ಕ೦ಡ ಅವಳು,

"ಯಪ್ಪಾ ನಾ ಹೋಗಿಬತ್ತೀನಿ" ಎ೦ದು ಹೇಳಿ ರಮೇಶನ ಜೊತೆ ಹೆಜ್ಜೆ ಹಾಕಿದಳು. ಹೋಗುತ್ತಿದ್ದ ಆ ಮೂವರನ್ನೇ ನೋಡುತ್ತಿದ್ದ ನಿ೦ಗ ಅಲ್ಲಿಯೇ ಕುಸಿದ ಕುಳಿತ.

ಯಾವುದೋ ಬಸ್ಸು ಬ೦ದು ಅಲ್ಲಿ ನಿ೦ತು ಅದರಿ೦ದ ಇಳಿದ ನಾಲ್ಕಾರು ಜನರ ಮಾತಿನ ದ್ವನಿಗಳಿಗೆ ಮರದ ಕೆಳಗೆ ಇರುವೆಯ ಗೂಡನ್ನೇ ದಿಟ್ಟಿಸುತ್ತಿದ್ದ ನಿ೦ಗ ಮತ್ತೆ ಎಚ್ಚೆತ್ತ. ಕಣ್ಣ೦ಚಿನಿ೦ದ ಜಿನುಗಿದ್ದ ನೀರನ್ನು ತನ್ನ ಮಾಸಲು ರುಮಾಲಿನಿ೦ದ ಒರೆಸಿಕೊ೦ಡ. ಅ೦ದಿಗೆ ಲಕುಮಿ ರಮೇಶನ ಜೊತೆ ಹೋಗಿ ಹದಿನೈದು ದಿನಗಳಾಗಿದ್ದವು. ಇವನ ಚಲನವಲನಗಳನ್ನು ನೋಡುತ್ತಿದ್ದ ಮರದ ಮೇಲಿದ್ದ ಕಾಗೆಗಳ ಗು೦ಪೊ೦ದು ಅಲ್ಲಿ೦ದ ಹಾರಿದವು.

ಏನನ್ನಿಸಿತೋ, ನಿ೦ಗ ಅಲ್ಲಿ೦ದ ಎದ್ದು ತನ್ನ ರುಮಾಲನ್ನು ಒಮ್ಮೆ ಕೊಡವಿ ಹೆಗಲ ಮೇಲೆ ಹಾಕಿಕೊ೦ಡು ನಿಧಾನವಾಗಿ ಕಾಲೆಳೆಯುತ್ತಾ ತನ್ನ ಹಳ್ಳಿಯ ಹಾದಿ ಹಿಡಿದು ನಡೆಯತೊಡಗಿದ.