ಬ್ಯಾಗೇಜ್ ಪ್ರಕರಣ

ಬ್ಯಾಗೇಜ್ ಪ್ರಕರಣ

ಲಂಡನ್ನಿನಿಂದ ಮುಂಬೈಗೆ, ಅಲ್ಲಿಂದ ಬೆಂಗಳೂರಿಗೆ ಇಳಿದರೆ ನಮ್ಮ ಮೇನ್ ಬ್ಯಾಗೇಜ್ ಮಿಸ್ಸಿಂಗ್! ಕಂಕುಳಲ್ಲಿ ಮಗುವನ್ನು, ಕೈಯಲ್ಲಿ ಹೆಂಡತಿಯನ್ನು ಹಿಡಿದುಕೊಂಡು ೧೮ ಗಂಟೆ ನಿದ್ದೆಯಿಲ್ಲದಿದ್ದರೂ ಖುಷಿಯಿಂದ ನಮ್ಮ ಕನ್ನಡ ನೆಲಕ್ಕೆ ಇಳಿದರೆ, ಶುರುವಾಯಿತೇ ರಾದ್ಧಾಂತ ಎಂದು ಕೆಂಡಾಮಂಡಲ (ಅಂದ್ರೇನು ಅಂತ ಕೇಳಬೇಡಿ) ಕೋಪ ಬಂದು, ಅಲ್ಲಿನ ಸ್ಟಾಫ್ ಗೆ ಎಗ್ಗಾ ಮುಗ್ಗಾ ಉಗಿದೆ, ಕನ್ನಡ-ಇಂಗ್ಲೀಷು ಎರಡೂ ಸೇರಿಸಿ. ಪಾಪ ಇಬ್ಬರೂ ಸ್ಟಾಫ್ ಗಳು ನೀರಿಳಿದರು. ಅಲ್ಲಿ ಇಲ್ಲಿ ಫೋನಿಸಿ, ನಮ್ಮ ಲಗೇಜು ಇನ್ನೊಂದು ವಿಮಾನದಲ್ಲಿ ಹೊರಟಿದೆಯೆಂದೂ, ನಮಗೆ ಕಂಪ್ಲಿಮೆಂಟರಿ ಬ್ರೇಕ್ ಫಾಸ್ಟ್ ಕೊಡುವುದಾಗಿಯೂ, ಮೈಸೂರಿಗೆ ಅವರ ಖರ್ಚಿನಲ್ಲೇ ನಮ್ಮ ಬ್ಯಾಗೇಜ್ ಸಮೇತ ಬಿಟ್ಟುಕೊಡುವುದಾಗಿಯೂ ಹೇಳಿ - ಹಾಗೇ ಮಾಡಿದರು. ಅಷ್ಟಾದರೂ ನನ್ನ ಕೋಪ ಆರಲೇ ಇಲ್ಲ.

ಇದೆಲ್ಲ ಆದ ಮೇಲೆ ಯೋಚಿಸಿದೆ: ಇದೇ ರೀತಿ ಲಂಡನ್ನಿನ ಹೀತ್ರೋ ಏರ್ಪೋರ್ಟಿನಲ್ಲಿ ಆಗಿದ್ದರೆ, ನಾನು ರೇಗಲು ಶುರು ಮಾಡುತ್ತಿರುವಂತೆಯೇ, 'Why are you shouting at me?' ಎಂದು ನನ್ನ ಮೇಲೇ ರೇಗುತ್ತಿದ್ದರು. ನಾನು ಇನ್ನೂ ರೇಗಲು ಶುರುವಚ್ಚಿಕೊಂಡರೆ, assault on staff ಎಂದು ನನ್ನನು ವಿಚಾರಣೆಗೆ ಒಳಪಡಿಸುತ್ತಿದ್ದರು. ನಾನು ರೇಗದೇ ಸೌಮ್ಯವಾಗಿಯೇ ಕೇಳಿದೆ ಎಂದಿಟ್ಟುಕೊಳ್ಳಿ, ಆಗ ಅವರು ಒಂದು ಪೇಪರ್ ಕೊಟ್ಟು ಒಂದು ಲಿಖಿತ ಅರ್ಜಿ ಬರೆಯಲು ಹೇಳುತ್ತಿದ್ದರು. ನನ್ನ ಬ್ಯಾಗೇಜು ನೆಕ್ಸ್ಟ್ ಫ್ಲೈಟಿನಲ್ಲಿ ಬರುತ್ತಿರುವಂತೆಯೇ, ನನಗೆ ಫೋನಿಸಿ ಯಾ ಈಮೇಲಿಸಿ ಕಳಿಸುತ್ತೇನೆ, ಬಂದು ತೆಗೆದುಕೊಂಡು ಹೋಗಿ ಎನ್ನುತ್ತಿದ್ದರು. ನಾನು ತೆಪ್ಪಗೆ ತಿ.. ಮುಚ್ಚಿಕೊಂಡು ನನ್ನ ಬ್ಯಾಗೇಜು ಬರುವುದನ್ನು ಕಾಯುತ್ತ ಅಲ್ಲೇ ಕೂತಿರುತ್ತಿದ್ದೆ, ಅಲ್ಲವೇ?

Rating
No votes yet

Comments