ಮುಯ್ಯಿಗೆ ಮುಯ್ಯಿ
ಮಗು ಬಿತ್ತು. ಅಳತೊಡಗಿತು. ಅಮ್ಮ ಓಡಿ ಬಂದಳು, ಮಗುವನ್ನು ಎತ್ತಿಕೊಂಡು ಮುದ್ದಿಸತೊಡಗಿದಳು.
"ಅಮ್ಮಾ... ಆಯೀ" ಎಂದು ಅಳುತ್ತಿತ್ತು ಮಗು.
"ಆಯಿ ಆಯ್ತಾ ನನ್ನ ಬಾಬುಗೇ... ಎಲ್ಲಿ ಆಯ್ತು ನೋಡುವ ತೋರಿಸು" ಎಂದಳು ಅಮ್ಮ
ಮಗು ತಲೆ ಮುಟ್ಟಿ ತೋರಿಸಿತು. ಅಮ್ಮ ಮಗುವಿನ ತಲೆಗೆ ಮುತ್ತಿಟ್ಟಳು, "ಆಯಿ ಹೋಯ್ತು" ಅಂದಳು
ಮಗು ಅಳು ನಿಲ್ಲಿಸಲಿಲ್ಲ, "ಆಯೀ... ಆಯೀ" ರಾಗ ಎಳೆಯುತ್ತಿತ್ತು
"ಅಳಬೇಡ ನನ್ನ ಕಂದ, ಯಾರು ನಿಂಗೆ ಆಯಿ ಮಾಡಿದವ್ರು? ಈ ನೆಲ ಅಲ್ವ? ಆಯ್ತು ಈ ನೆಲಕ್ಕೆ ಹಚ್ಚ ಮಾಡ್ತೇನೆ. ಹಚ್ಚ, ಹಚ್ಚ" ನೆಲಕ್ಕೆ ಎರಡು ಸಾರಿ ಕೈಯಿಂದ ಹೊಡೆದಂತೆ ಮಾಡಿದಳು ಅಮ್ಮ
ಮಗು ಅಳು ನಿಲ್ಲಿಸಿ ಕಿಲ ಕಿಲ ನಗತೊಡಗಿತು
ಇದು ಒಂದು ಮನೆಯ ಕಥೆ ಅಲ್ಲ, ಪ್ರತಿ ಮನೆಯಲ್ಲೂ ಇದೇ.
ಈಗ ಹೇಳಿ, ಮನುಷ್ಯರಲ್ಲಿ ಸೇಡಿನ ಬೀಜ ಬಿತ್ತುವವರಾರು?
ಎಳೆ ವಯಸ್ಸಲ್ಲಿ ಪ್ರತೀಕಾರದ ಮನೋಭಾವನೆ ಮೂಡಿಸುವವರಾರು?
ನಮಗೆ ನೋವುಂಟು ಮಾಡಿದವರಿಗೆ ಪ್ರತಿಯಾಗಿ ನೋವುಂಟು ಮಾಡುವುದೇ ಸರಿ, ಅದರಿಂದ ನಮ್ಮ ನೋವು ಸರಿ ಹೋಗುತ್ತದೆ ಎಂದು ಹೇಳಿಕೊಡುವವರಾರು?
ನಮ್ಮ ಕಾಲಿಗೆ ನಾವೇ ಕೊಡಲಿ ಹೊಡೆದುಕೊಳ್ಳುತ್ತಿದ್ದೇವೆ......