ಸಂಜೆ ಬೆಳಕಲ್ಲಿ ಹಳೆಮನೆ, ಓಣಿ, ಒಳದಾರಿಗಳು

ಸಂಜೆ ಬೆಳಕಲ್ಲಿ ಹಳೆಮನೆ, ಓಣಿ, ಒಳದಾರಿಗಳು

ಸಿಡ್ನಿ ಹಾರ್ಬರಿನ ತಟ.

ಸಂಜೆ ಬೆಳಕಲ್ಲಿ "ಜಗದ್ವಿಖ್ಯಾತ" ಬ್ರಿಡ್ಜು ಭವನಗಳನ್ನು ಕಣ್ಣೆವೆಯಿಕ್ಕದೆ ನೋಡುತ್ತಾರೆ ಮಂದಿ. ಕೊರಳಿಂದ ನೇತಾಡುವ ಕಣ್ಣುಗಳಲ್ಲಿ ಅದನ್ನೆಲ್ಲಾ ಸೆರೆಹಿಡಿಯುವ ಮಂದಿ. ಅವರಿಗೆಲ್ಲ ತೊಂದರೆಯಾಗದ ಹಾಗೆ; ಅವರ "ವೀಕ್ಷಣೆ"ಗೆ ಅಡ್ಡಬಾರದ ಹಾಗೆ; ಅವರನ್ನೆಲ್ಲಾ ಅಲ್ಲೇ ಬಿಟ್ಟು ಮೆಲ್ಲನೆ ಹಿಂದು ಹಿಂದಕ್ಕೆ ಸರಿಯಬೇಕು. ಪಕ್ಕದಲ್ಲೇ ಬಚ್ಚಿಟ್ಟುಕೊಂಡಿರುವ ಹಳೆಮನೆ, ಓಣಿ, ಒಳದಾರಿಗಳ ಮಗ್ಗುಲಿಗೆ.

ಮೊದಮೊದಲು ವಲಸಿಗರು ಬಂದಿಳಿದ ಎಡೆ ಇವು. ಇನ್ನೂ ಹಲವಾರು ಹಳೆಮನೆಗಳು ಕಾಲ ಬದಲಾದರೂ ಮರೆತು ಹಾಗೇ ನಿಂತಿವೆ. ಅಂದಿನ ವಲಸಿಗರು ಹೊಸ ಊರನ್ನು ಹೊಕ್ಕ ಉನ್ಮಾದದಲ್ಲಿ ಅಲೆದ ಓಣಿಗಳ ಪಕ್ಕದಲ್ಲೆ. ಸಣ್ಣ ಬಿಗುಮಾನದಿಂದ ಸಂಜೆ ಬೆಳಕನ್ನ ಬೇಕಾದಷ್ಟೇ ಒಳಬಿಟ್ಟುಕೊಂಡು ನಲಿಯುತ್ತದೆ.

 

ಮುಖ್ಯ ಬೀದಿಗಳ ಕಣ್ಣು ತಪ್ಪಿಸಿ ಒಳಗೊಳಗೆ ಒಳದಾರಿಗಳು ಕದ್ದು ಮುಚ್ಚಿ ಸಂಜೆಯಲ್ಲಿ ಸಣ್ಣಗೆ ಹಾಡುತ್ತವೆ. ಏರು ಪೇರಿನ ಸಂದಿಗಳ ಮೆಟ್ಟಿಲು ಹತ್ತಿ ಇಳಿವಾಗ ಆ ಹಾಡಿನ ಗುನುಗು, ತಾಳ ಕೇಳುತ್ತದೆ.

ಹೇಗಾದರೂ ಮಾಡಿ ಹೊಸ ರೂಪಕ್ಕೊಗಿಸುವ ಹಟ ಕೂಡ ಕಾಣುತ್ತದೆ. ಹಟ ಗೆದ್ದ ಕಡೆ ಕೆಲವು ಹೊಸ ರೂಪಗಳ ಮೇಲೆ ಸಂಜೆ ಬಿಸಿಲಿನ ಮೂರನೇ ಪ್ರತಿಫಲನ ಕಣ್ಣಿಗೆ ಹಿತವಾಗಿ ಮಿನುಗುತ್ತದೆ. ಹಟ ನೋಡಿ ನಗುವಂತೆ.

 

ಮರೆಯಲಾಗದು ಇದು.
ಊರ ಒಡಲಲ್ಲಿ ಬೆಚ್ಚಗೆ ಮಲಗಿರುವ ಎಡೆಗಳು ಇವು.
ಊರಿನ ಒಳರೂಪ ಇವು.
ಹಳೆರೂಪ ಇವು.
ಬೆಳವಣಿಗೆಯ ತಳರೂಪ ಇವು.
Rating
No votes yet

Comments