ನಿಮ್ಮ ಮನೆ ನೀವೇ ವಿನ್ಯಾಸ ಮಾಡಿ!

ನಿಮ್ಮ ಮನೆ ನೀವೇ ವಿನ್ಯಾಸ ಮಾಡಿ!

ಬರಹ

(ಇ-ಲೋಕ-41)(24/9/2007)

ಉದಯವಾಣಿ
 ಮನೆ ವಿನ್ಯಾಸ ಮಾಡುವುದು ನಮಗೇ ಸಾಧ್ಯವಿದ್ದರೆ,ಇಂಜಿನಿಯರ್ ಬಳಿಗೆ ಮನೆಯ ಪ್ಲಾನ್ ಹಿಡಿದುಕೊಂಡೇ ಹೊಗುತ್ತಿದ್ದೆವಲ್ಲವೇ? ಈಗದು ಸುಲಭ ಸಾಧ್ಯ.ಫ್ಲೋರ್‌ಪ್ಲಾನರ್.ಕಾಂ(floorplanner.com) ಎನ್ನುವ ಅಂತರ್ಜಾಲ ತಾಣದಲ್ಲಿ ಮನೆಯ ವಿನ್ಯಾಸ ಮಾಡುವ ತಂತ್ರಾಂಶ ಲಭ್ಯವಿದೆ. ಇದನ್ನು ಬಳಸಲು ಕಂಪ್ಯೂಟರಿನ ಬ್ರೌಸರ್ ಮಾತ್ರಾ ಸಾಕು.ಮನೆಯ ವಿನ್ಯಾಸ ಮಾಡುವುದು ಮಕ್ಕಳಾಟದಷ್ಟು ಸುಲಭ. ಇದರಲ್ಲಿ ವಿವಿಧ ಬಗೆಯ ಗೋಡೆಗಳು,ನೆಲ ಹಾಸು,ಕಿಟಕಿಗಳು,ಬಾಗಿಲುಗಳು ಲಭ್ಯವಿವೆ. ಇವನ್ನು ಎಳೆದು ಬೇಕಾದಲ್ಲಿ ಇಟ್ಟರೆ ಮುಗಿಯಿತು. ಬಣ್ಣಗಳ ಬದಲಾವಣೆ,ನೆಲಹಾಸಿನ ವಿನ್ಯಾಸ,ಬಣ್ಣ ಬದಲಾವಣೆ ಇವೆಲ್ಲಾ ಮಾಡಿ ನೋಡಬಹುದು.ಖುಷಿಯಾಗದಿದ್ದರೆ,ಅವೆಲ್ಲವನ್ನೂ ಬದಲಿಸಬಹುದು. ಸದ್ಯ ಎರಡು ಆಯಾಮದ ಚಿತ್ರಗಳನ್ನು ಮಾತ್ರಾ ರಚಿಸಬಹುದು. ಆದರೆ ಮುಂದೆ ಮೂರು ಆಯಾಮದ ಮನೆ ವಿನ್ಯಾಸವನ್ನು ರಚಿಸಿ,ಅದರ ಚಂದವನ್ನು ಸವಿಯುವ ಅವಕಾಶ ಸಿಗಲಿದೆ.ಐದು ವಿನ್ಯಾಸ ಉಚಿತವಾಗಿ ಮಾಡಲು ಸಾಧ್ಯ. ಅದರೆ ಹೆಚ್ಚಿನ ವಿನ್ಯಾಸ ಮಾಡಲು ಶುಲ್ಕ ಪಾವತಿಸಬೇಕು.ಈ ಅಂತರ್ಜಾಲ ತಾಣಕ್ಕೆ ಸುಮಾರು ಒಂದು ಲಕ್ಷ ನೋಂದಾಯಿತ ಸದಸ್ಯರಿದ್ದಾರೆ.
 MyDesignIn ಮತ್ತು Plan3D ಅಂತರ್ಜಾಲ ತಾಣಗಳೂ ಇದೇ ರೀತಿಯ ಸೌಲಭ್ಯ ಒದಗಿಸುತ್ತವೆ.ಈ ಪೈಕಿ ಎರಡನೆಯದು ಮೂರು ಆಯಾಮದ ಮನೆಯ ವಿನ್ಯಾಸಗಳನ್ನು ರಚಿಸಲು ಅನುವು ಮಾಡುತ್ತವೆ.
ಮನಸ್ಸನ್ನೋದುವ ತಂತ್ರಾಂಶ
 ಮಾಸ್ಕೋದ ಸೈಕೋಟೆಕ್ನೋಲಾಜಿ ಸಂಸ್ಥೆಯಲ್ಲಿ ಜನರ ಮನಸ್ಸನ್ನೋದುವ ಸಾಧನವಿದೆ.ಗುಹೆಯಂತಹ ಕೋಣೆಯಲ್ಲಿ ಕಂಪ್ಯೂಟರ್ ಇರಿಸಿದ ಮೇಜಿದೆ.ದಂತವೈದ್ಯರ ಬಳಿಯಿರುವ ಕುರ್ಚಿಯಂತಹ ಕುರ್ಚಿಯನ್ನು ಇದರ ಮುಂದೆ ಇರಿಸಲಾಗಿದೆ.ಯಾರ ಮನಸ್ಸನ್ನು ಅರಿಯ ಬೇಕಿದೆಯೋ,ಅವರನ್ನು ಕುರ್ಚಿಯಲ್ಲಿ ಕೂಡಿಸಲಾಗುತ್ತದೆ.ಕೋಣೆಯಲ್ಲಿ ಏಕಾಂತವಿರುತ್ತದೆ.ಕುರ್ಚಿಯಲ್ಲಿ ಕುಳಿತವನ ಮುಂದಿನ ಕಂಪ್ಯೂಟರ್ ಪರದೆಯ ಮೇಲೆ ಅಮೆರಿಕಾದ ವರ್ಲ್ಡ್ ಟ್ರೇಡ್ ಸೆಂಟರ್, ಒಸಾಮಾ ಬಿನ್ ಲಾಡೆನ್ ಮುಂತಾದ ಚಿತ್ರಗಳು ಮೂಡುತ್ತವೆ.ಚಿತ್ರಗಳಿಗೆ ವ್ಯಕ್ತಿಯ ಪ್ರತಿಕ್ರಿಯೆಯನ್ನು ಗುಂಡಿಯೊಂದನ್ನು ಅದುಮುವ ಮೂಲಕ ವ್ಯಕ್ತ ಪಡಿಸುತ್ತಾನೆ. ಇಷ್ಟೇ ಸಾಕಾಗುತ್ತದೆ. ವ್ಯಕ್ತಿಯು ಭಯೋತ್ಪಾದಕ ಹಿನ್ನೆಲೆಯವನೇ ಎಂಬುದು ಕಂಪ್ಯೂಟರಿಗೆ ಗೊತ್ತಾಗಿ ಬಿಡುತ್ತದೆ.ಕಂಪ್ಯೂಟರಿನಲ್ಲಿ ಅನುಸ್ಥಾಪಿತವಾದ ವಿಶೇಷ ತಂತ್ರಾಂಶವೊಂದು ವ್ಯಕ್ತಿಯ ಭಾವನೆಗಳನ್ನು ಗ್ರಹಿಸಿಬಿಡುತ್ತದೆ. ಈ ತಂತ್ರಾಂಶವನ್ನು ಇಗೋರ್ ಸ್ಮಿರನೋವ್ ಎನ್ನುವ ರಶ್ಯನ್ ವಿಜ್ಞಾನಿಯ ಸಂಶೋಧನೆಯನ್ನು ಅಳವಡಿಸಿಕೊಂಡಿದೆ.ಮನಶ್ಶಾಸ್ತ್ರದ ಬಗ್ಗೆ ಆತನ ಸಂಶೋಧನೆಯಿಂದ ಹೊರ ಹೊಮ್ಮಿದ ವಿಷಯಗಳು ವಿವಾದಗ್ರಸ್ತವಂತೆ. ಆದರೆ ಈ ತಂತ್ರಾಂಶ ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ಸು ಪಡೆದಿದೆ ಎಂದು,ಸಂಸ್ಥೆಯನ್ನು ನಡೆಸುತ್ತಿರುವ ರುಸಲ್ಕಿನಾ ಹೇಳುತ್ತಾರೆ. ಈಕೆ ವಿಜ್ಞಾನಿ ಇಗೋರ್ ಸ್ಮಿರನೋವ್‍ನ ಪತ್ನಿ. ತಂತ್ರಾಂಶವನ್ನು ಮೈಂಡ್‍ರೀಡರ್ ಎಂದು ಹೆಸರಿಸಲಾಗಿದೆ.ಅಮೆರಿಕಾದ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ತಪಾಸಣೆಗೆ ಈ ವಿಧಾನವನ್ನು ಬಳಸಲು ಭದ್ರತಾ ಇಲಾಖೆ ನಿರ್ಧರಿಸಿದೆ.

ಉಲ್ಕೆಯಿಂದ ಕಾಯಿಲೆ?
 ಪೆರುವಿನಲ್ಲಿ ಉಲ್ಕೆಯೊಂದು ಬಿತ್ತು. ಇದು ಬಿದ್ದ ರಭಸಕ್ಕೆ ದೊಡ್ದ ಕೊರಕಲು ನಿರ್ಮಾಣವಾಗಿದೆ. ಅದರ ಶಾಖಕ್ಕೆ ನೀರು ಕಾಯ್ದು ಅನಿಲ ಹೊರಹೊಮ್ಮಿತು.ಈ ಅನಿಲವನ್ನು ಉಸಿರಾಡಿದ್ದಕೋ ಏನೋ ಸುಮಾರು ಇನ್ನೂರು ಜನ ತಲೆನೋವು,ವಾಂತಿ ಮತ್ತು ಉಸಿರಾಟದ ತೊಂದರೆಗಳನ್ನು ಅನುಭವಿಸಿದರಂತೆ.ವಿಜ್ಞಾನಿಗಳು ಉಲ್ಕಾಪಾತವಾದದ್ದು ಹೌದು ಎನ್ನುತ್ತಾರಾದರೂ,ಕಾಯಿಲೆಗೂ ಇದಕ್ಕೂ ಥಳಕು ಹಾಕಲು ಒಪ್ಪುತ್ತಿಲ್ಲ. ಅದರೂ ಉಲ್ಕೆಯಿಂದ ಹೊರಟ ವಿಷಾನಿಲದಿಂದ ಈ ತೊಂದರೆಗಳು ಉಂಟಾಗಿರುವುದು ಸಾಧ್ಯ ಎಂದು ಹೇಳುತ್ತಾರೆ.
ಅಂಧರಿಗೂ "ಕಾಣಿಸುವ" ಮಿಥ್ಯಾ ಜಗತ್ತು
 ಅಂತರ್ಜಾಲದಲ್ಲಿ ಪ್ರತ್ಯೇಕ ಮಿಥ್ಯಾ ಜಗತ್ತು ಲಭ್ಯವಿದೆ.ಇದರಲ್ಲಿ ಅಲೆದಾಡುವುದು,ಪರಸ್ಪರ ಕಲೆಯುವುದು ಈಗಿನ ಯುವಕರ ಹವ್ಯಾಸ.ಇಂತಹ ಮಿಥ್ಯಾ ಜಗತ್ತಿನಲ್ಲಿ ಅಲೆದಾಡಲು ನಮ್ಮ ಮುಂದೆ ಆ ಜಗತ್ತಿನ ದೃಶ್ಯಗಳು ಕಾಣಿಸಿಕೊಳ್ಳಬೇಕು ತಾನೇ? ಆದರೆ ಅಂಧರಿಗೆ ಇಂತಹ ಅನುಭವ ಸಿಗದು.ಐ.ಬಿ.ಎಂ. ಕಂಪೆನಿಯ ಸಂಶೋಧಕರು ಅಂಧರೂ "ಕಾಣುವ" ವಿಶೇಷ ಪರಿಣಾಮಗಳನ್ನು ಸಂಗೀತ ಮತ್ತು ಶಬ್ದದ ಮುಖೇನ ತರಿಸುವ ಪ್ರಯತ್ನವನ್ನು ಸಂಶೋಧಕರು ಮಾಡಿದ್ದಾರೆ.ಮಿಥ್ಯಾ ಜಗತ್ತಿನ ಮರಗಿಡಗಳ ಎಲೆಗಳು ಗಾಳಿಗೆ ತೊನೆಯುವಾಗ ಉಂಟಾಗುವ ಶಬ್ದ,ನೀರಿನ ಜುಳುಜುಳು ನಿನಾದ, ಹೀಗೆ ವಿವಿಧ ಪರಿಣಾಮಗಳನ್ನು ಸಮರ್ಥವಾಗಿ ಮೂಡಿಸಿ,ಕಣ್ಣಿಲ್ಲದವರಿಗೂ ಮಿಥ್ಯಾ ಜಗತ್ತಿನ ಅನುಭವ ಆಗುವಂತೆ ಮಾಡಲು ಪ್ರಯತ್ನಿಸಿದ್ದಾರೆ.ಈ ತಂತ್ರಾಂಶವನ್ನು ಅಭಿವೃದ್ಧಿಸಿ ಪಡಿಸಲು ಹಲವಾರು ಅಂಧರ ಸಹಾಯ ಪಡೆಯಲಾಗಿರುವುದು ವಿಶೇಷ.
ಸುನೀತಾ ವಿಲಿಯಮ್ಸ್ ಭಾರತದಲ್ಲಿ
 ಬಾಹ್ಯಾಕಾಶಯಾನಿ,ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಭಾರತಕ್ಕೆ ಒಂದು ವಾರದ ಭೇಟಿ ನೀಡುತ್ತಿದ್ದಾರೆ.ಗುಜರಾತಿಗೆ ಆಗಮಿಸಿ,ಗಾಂಧಿಯವರ ಆಶ್ರಮಕ್ಕೆ ಭೇಟಿ ನೀಡಿದ ಅವರು ತಮ್ಮ ಪ್ರವಾಸದ ಹೆಚ್ಚಿನ ಅವಧಿಯನ್ನು ಗುಜರಾತಿನಲ್ಲೆ ಕಳೆಯಲಿದ್ದಾರಂತೆ.ಬಾಹ್ಯಾಕಾಶದಲ್ಲಿ ಅತಿ ದೀರ್ಘ ಕಾಲ ವಾಸಿಸಿದ ದಾಖಲೆ ಆಕೆಯ ಹೆಸರಿನಲ್ಲೇ ಇದೆ.
*ಅಶೋಕ್‍ಕುಮಾರ್ ಎ.