ಕನ್ನಡ ಭಾಷೆಯ ಬಳಕೆ ಮತ್ತು ಅನುವಾದದ ಬಗ್ಗೆ ಒಂದಿಷ್ಟು..

ಕನ್ನಡ ಭಾಷೆಯ ಬಳಕೆ ಮತ್ತು ಅನುವಾದದ ಬಗ್ಗೆ ಒಂದಿಷ್ಟು..

ಸೂರ್ಯ ಎಂಬ ಪದವನ್ನೇ  ತಗೆದುಕೊಳ್ಳಿ. ರ್ಯ ಕ್ಕೆ ಬದಲಾಗಿ ರ ಕ್ಕೆ ಯ ಒತ್ತು ಕೊಡುವುದು ಸರಿಯಲ್ಲ.  ಏಕೆನ್ನುತ್ತೀರಾ-  ಸೂರ್ಯ – ಈ ಪದದಲ್ಲಿ ಗಮನಿಸಿದರೆ ನಾವು ಯ ಅಕ್ಷರವನ್ನು ಸಂಪೂರ್ಣವಾಗಿ ಉಚ್ಛರಿಸುತ್ತೇವೆ. ಜೊತೆಗೆ ರ ಅಕ್ಷರವನ್ನು ಅರೆ ಉಚ್ಛರಿಸುತ್ತೇವೆ ಅದಕ್ಕಾಗಿಯೆ ಅರ್ಕಾವೊತ್ತಲ್ಲವೇ...
ಶುಭಾಷಯಗಳು  ತಪ್ಪು.  “ಶುಭಾಶಯಗಳು” ಸರಿ.   ನಾವು ಆಶಯ ಎಂದು ಉಚ್ಛರಿಸುವಾಗ ಸ್ವರಲಾಲಿತ್ಯ ಅದೆಷ್ಟು ಮಧುರ! ಆಷಯ ಎನ್ನಲಾರೆವಲ್ಲ ಕರ್ಕಷವಾಗಿ. ಆದ್ದರಿಂದಲೇ ‘ಶುಭಾಶಯ’ ಸರಿ.
ಹಾರ್ಧಿಕ ಶುಭಾಷಯಗಳು ಇದೂ ಕೂಡ ತಪ್ಪು.   “ಹಾರ್ದಿಕ ಶುಭಾಶಯಗಳು”ಸರಿ.
ಪ್ರಶಸ್ತಿ ಪ್ರಧಾನ – ಇಲ್ಲಿ ಪ್ರಧಾನ ತಪ್ಪಾಗಿದೆ.  ಯಾಕೆಂದರೆ, ನೋಡಿ ದಾನದಲ್ಲಿ ಪ್ರದಾನ ವಾದ್ದು “ಪ್ರಶಸ್ತಿ ಪ್ರದಾನ” ಸರಿ. 
ಪ್ರಧಾನ ಮಂತ್ರಿ ಅಥವಾ ಪ್ರಧಾನ ಕಛೇರಿ ಇತ್ಯಾದಿ ಬಳಸಿದಾಗ ಧಾ ಸೂಕ್ತ.
ಹೀಗೆ ಇತ್ತೀಚೆಗೆ ಕನ್ನಡ ನಾಮ ಫಲಕಗಳನ್ನು ನೋಡುತ್ತಿದ್ದರೆ  ಇನ್ನೂ ಬಹಳ ಶಬ್ದಗಳು ಸಿಗುತ್ತದೆ.

ಇನ್ನು ಅನುವಾದದ ಬಗ್ಗೆ -

ನನ್ನ ಅಭಿಪ್ರಾಯದಲ್ಲಿ  ಇಂಗ್ಷೀಷ್‌ನ ಪದ ಪದ ಜಗ್ಗುತ್ತಾ ಅನುವಾದಮಾಡುವುದಕ್ಕಿಂತ,  ಕನ್ನಡ ಭಾಷೆಯಲ್ಲಿ ಸಾಮಾನ್ಯವಾಗಿ ನಾವು ನಮಗಿಂತ ಹಿರಿಯರಿಗೆ ಪತ್ರ ಬರೆಯುವಾಗ, ಪತ್ರದದ ಆರಂಭದಲ್ಲಿ, ಕೊನೆಯಲ್ಲಿ  ಮುಗಿಸುವುದು ಹೇಗೆ ರೂಢಿಯಲ್ಲಿದೆ ಎಂಬುದೇ ಮುಖ್ಯ. 
ಇಂತಿ ವಂದನೆಗಳೊಂದಿಗೆ,
ಇಂತಿ ನಮಸ್ಕಾರಗಳು,
ಇಂತಿ ನಿಮ್ಮ ಶ್ರೇಯೋಭಿಲಾಷಿ,
Regards ಗೆ ಪರ್ಯಾಯವಾಗಿ, ಗೌರವ ಪೂರ್ವಕವಾಗಿ  ಎನ್ನಬಹುದೇ ಹೊರತು  ಒಂದೇ ಪದ ಹುಡುಕುವುದಲ್ಲ.
ಹಾಗೆಯೆ E-Mail ಕೂಡ. ಇಲೆಕ್ಟ್ರಾನಿಕ್  ಅಂಚೆ ಎನ್ನಬಹುದು. ವಿದ್ಯುನ್ಮಾನ ಅಂಚೆ ಎನ್ನಬಹುದುದಾದರೂ ‘ಇಲೆಕ್ಟ್ರಾನಿಕ್’ ಎಂಬ ಪದ ಒಬ್ಬ ಅನಕ್ಷರಸ್ಥ ಹಳ್ಳಿಯವನ ಆಡುಭಾಷೆಯಲ್ಲಿಯೊ ಸರಾಗ ಬೆರೆತಿರುವಾಗ ಅವನಿಗೆ ಇಲೆಕ್ಷ್ರಾನಿಕ್ ಉಪಕರಣ ಕಂಪ್ಯೂಟರ್  ಮೊಲಕ ಕಳುಹಿಸುವ ಅಂಚೆ ಎಂದು ತಿಳಿದಿರುವಾಗ “ವಿದ್ಯುನ್ಮಾನ” ಎಂದರೆ ಅವನು ತಲೆಕೆರೆದುಕೊಂಡಾನು. ಅಂಚೆ ಆತನಿಗೆ ಬಹಳ ಹಳೆಯ ಸರಳ ಶಬ್ದವಾಗಿರುತ್ತದೆ. ಭಾಷೆಯು ಮನುಷ್ಯ ಮನುಷ್ಯರ ನಡುವಣ ಸಂವಹನ ಮಾಧ್ಯಮವಷ್ಟೇ. ಅಲ್ಲದೇ, ಪ್ರತಿಯೊಂದು ಭಾಷೆಗೂ ಅದರದೇ ಆದ ಸ್ವರ ಲಾಲಿತ್ಯವಿದೆ. ಹಾಗೂ ಬಳಕೆಯಲ್ಲಿ ಹಿಂದಿನಿಂದಲೂ ತನ್ನದೇ ರೀತಿಯಲ್ಲಿ, ಬರವಣಿಗೆಯಲ್ಲಿಯೊ ತನ್ನದೇ ರೂಢಿಗತ ಶೈಲಿಯಲ್ಲಿ ಅದು ಕಂಡು ಬರುತ್ತದೆ.   ಓದುವ ಆಡುಮಾತಿನ ಉಚ್ಛಾರಣೆಯಲ್ಲಿಯೊ ಇವೆಲ್ಲ ಗಮನಕ್ಕೆ ಬರುತ್ತದೆ.  ಇಂಗ್ಷೀಷ್ ಅಂತೂ ಭಾರತೀಯರ ಉಚ್ಛಾರಕ್ಕೂ ಅಮೆರಿಕನ್ನರ ಉಚ್ಛಾರಕ್ಕೂ ಬಹಳ ಅಂತರವಿದೆಯಾದರೂ ಭಾರತೀಯರ ಇಂಗ್ಷೀಷ್ ಸಾಹಿತ್ಯವೂ ಕೂಡ ತನ್ನದೇ ಸ್ಥಾನ ಪಡೆದುಕೊಂಡು ಹೆಸರಾಗಿದೆಯಲ್ಲ! ಆದ್ದರಿಂದ, ಅನುವಾದಕ್ಕಾಗಿ ಅನುವಾದವಲ್ಲ. ಅನುವಾದವೆಂಬುದೂ ಆ ಭಾಷೆಯಲ್ಲಿ ಅಂತರ್ಗತವಾದ ಸಹಜ ಧ್ವನಿಯಾಗಿ ಬರಬೇಕು.
-ರೈಟರ್ ಶಿವರಾಂ

Rating
No votes yet

Comments