ಜೀವನವ್ಯಾಪಾರ - ನಾವು ಏಕೆ ಓದುತ್ತಿರಬೇಕು?

ಜೀವನವ್ಯಾಪಾರ - ನಾವು ಏಕೆ ಓದುತ್ತಿರಬೇಕು?

ವ್ಯಾಪಾರಿ ಇವತ್ತು ಆದ ವ್ಯಾಪಾರ - ಟರ್ನ್ ಓವರ್ ಎಷ್ಟೆಂದು ನೋಡುತ್ತಾನೆಯೇ ಹೊರತು ಲಾಭ-ಹಾನಿ ಲೆಕ್ಕಾಚಾರ ಮಾಡುವದಿಲ್ಲ ; ಇವತ್ತು ಬಂದ ಹಣವನ್ನು ಎನಿಸಿ ಅದೆಲ್ಲ ಲಾಭವೇ ಎಂಬಂತೆ ಸಂತೋಷಪಡುತ್ತಾನಂತೆ . ಹೀಗೆ ಬಾಳನ್ನು ನೋಡುವ ದೃಷ್ಟಿ ಎರಡಿವೆ . ಒಂದು - ವಿಕ್ರಯದ ಮೊತ್ತ ನೋಡಿ ಸಂತಸಪಡುವ ದೃಷ್ಟಿ . ಆತ ಲಾಭವನ್ನು ಗಣಿಸುವದಿಲ್ಲ . ಅಂಗಡಿಯಲ್ಲಿ ಹಗಲೆಲ್ಲ ಗಿರಾಕಿ ತುಂಬಿರಬೇಕು , ವ್ಯಾಪಾರವಾಗಬೇಕು . ಲೋಕದ ತತ್ವಜ್ನಾನಿಗಳು ಅಕೌಂಟಂಟರಂತೆ . ಎಲ್ಲವನ್ನು ಸಂಶಯದಿಂದ ನೋಡಿ , ವ್ಯವಹಾರಕ್ಕೆಲ್ಲ ಆಧಾರ ಕೇಳಿ ವ್ಯಾಪಾರದಲ್ಲಿ ಲಾಭವಿಲ್ಲೆಂದು ನಿರ್ವಿಕಾರವಾಗಿ ಹೇಳುವರು . ನಿಮ್ಮ ಆನಂದಕ್ಕೆ ಪ್ರಮಾಣ ಬೇಡುವರು . ಸವಕಳಿ ತೆಗೆಯುವರು , ದೋಷಗಳನ್ನು ಎತ್ತಿ ತೋರಿಸುವರು.

... ಜೀವನದಲ್ಲಿ ಟರ್ನ್ ಓವರ್ ಕಡೆ ದೃಷ್ಟಿ ಇರುವದಾದರೆ ಅದನ್ನು ಹೆಚ್ಚಿಸಿಕೊಂಡು ಸಂತಸಪಡಲು ಅನೇಕ ದಾರಿಗಳಿವೆ. ಬಾಳುವದೆಂದರೆ ಒಂದು ವಿಧವಾದ ಚಿನ್ನ ತೆಗೆವ ಕೆಲಸ . ಟನ್ನುಗಟ್ಟಲೆ ಅದಿರನ್ನು ತೆಗೆದು ಸ್ವಚ್ಚಗೊಳಿಸಿದರೆ ತೊಲೆಗಳ ಲೆಕ್ಕದಲ್ಲಿ ಬಂಗಾರ ಹೊರಟೀತು . ಆದರೆ ಬಂಗಾರವನ್ನು ಟಂಕಸಾಲೆಗಳಂತೆ ಗಟ್ಟಿಗಳ ರೂಪದಲ್ಲಿ ದೇವರು ಇಟ್ಟಿಲ್ಲ . ಚಿನ್ನ ಪಡೆಯಲು ಒಂದೇ ದಾರಿ - ರಾಶಿಗಟ್ಟಲೆ ಕಲ್ಲು ಮಣ್ಣು ಅಗದು , ಒಡೆದು . ಕುಸಿಸುವದು , ತೊಲೆಯುವದು , ಸೋಸುವದು , ಸಂಸ್ಕರಿಸುವದು . ಲಾಂಗೂಲಾಚಾರ್ಯರನ್ನು ಕೇಳಿದರೆ  ಚಿನ್ನ   ಬರಿ ನೆಪ ಮಾತ್ರ ; ಅಗೆಯುವ ಸಾಹಸವೇ ಮುಖ್ಯ . ಬಾಳಿನಲ್ಲೂ ಹಾಗೆಯೇ ಆನಂದ, ಸುಖ ನೆಪ ಮಾತ್ರ ; ಅದರ ಬೇಟೆಯೇ ನಿಜವಾದ ಜೀವನ . --- ಇದು ಲಾಂಗೂಲಾಚಾರ್ಯ ರ ಹರಟೆಗಳ ಸಂಗ್ರಹ- ಇವರೇ ಲಾಂಗೂಲಾಚಾರ್ಯರು - ಪುಸ್ತಕದಲ್ಲಿ ನನಗೆ ಸಿಕ್ಕಿದ್ದು . -- ಇನ್ನೂರು ಪುಟ ಓದಿದಾಗ ಸಿಕ್ಕ ಒಂದೆರಡು ಪುಟಗಳು . ಈ ಎರಡು ಪುಟದ ವಿಚಾರ ನಮಗೆ ದಕ್ಕುವದು ಇನ್ನೂರು ಪುಟ ಓದಿದಾಗ , ಎಲ್ಲೋ ಒಂದೆಡೆ . ಈಗ ನನಗನಿಸಿತು . ನಮ್ಮ ಓದೂ ಹಾಗೆಯೇ ! ಅಲ್ಲವೇ ? ಎಲ್ಲೋ ಒಂದೆಡೆ ಒಳ್ಳೆಯ ಓದು ಪಡೆಯಲು ಎಷ್ಟೋ ಪುಟ ಓದಬೇಕು ಅಲ್ಲವೇ ? ಅದಕ್ಕಾಗಿ ಓದುತ್ತಿರಬೇಕು !

Rating
No votes yet

Comments