ಹನುಮಾನ್ - ಹಿಂದುವೋ? ಮುಸಲ್ಮಾನನೋ?

Submitted by Ennares on Mon, 10/01/2007 - 14:30

(ಮೂಲ: ಎಲ್ಲಿಯೋ ಕೇಳಿದ್ದು.)

ನಿನ್ನೆ ಮೊನ್ನೆಯ ಮಾತು. ಪ್ರಧಾನಿ ಮನಮೋಹನ್ ಸಿಂಗ್‍ರವರ ಸರ್ಕಾರ ರಾಮಾಯಣ ನಡಿಯಲೇ ಇಲ್ಲ, ರಾಮ ಸೇತುವೆ ಇಲ್ಲವೇ ಇಲ್ಲ ಎಂದು ಸುಪ್ರೀಮ್ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದು ನೀವೆಲ್ಲ ಕೇಳಿದಿರಷ್ಟೆ?

ಮೊದಲೂ ಒಂದು ಬಾರಿ ಶ್ರೀ ಮನಮೋಹನ್ ಸಿಂಗ್ ಇಂತಹುದೇ ಕೆಲಸ ಮಾಡಿದ್ದರಂತೆ. ಮುಂದೆ ಓದಿ ನೋಡಿ. ನಿಮಗೇ ವೇದ್ಯವಾಗುತ್ತೆ.

ರಾಮಜನ್ಮಭೂಮಿಯಲ್ಲಿ ಬಾಬರನ ಮಸೀದಿ ಉರುಳಿದ ಕೆಲವೇ ದಿನಗಳ ನಂತರ ವಿಶ್ವ ಹಿಂದೂ ಪರಿಷತ್ ಬೆಂಬಲ ಪಡೆದ ಹಿಂದುಗಳ ಗುಂಪೊಂದು ಆ ಜಾಗದಲ್ಲಿ ರಾಮ ಮಂದಿರ ನಿರ್ಮಿಸಲು ಅನುಮತಿ ಬೇಡುವ ಮನವಿ ಸಲ್ಲಿಸಲು ಆಗಿನ ಪ್ರಧಾನ ಮಂತ್ರಿಗಳಾದ ನರಸಿಂಹರಾವ್ ಬಳಿ ಹೋಗಲು ನಿಶ್ಚಯಿಸಿತು. ಇದರ ಸುಳಿವಾದೊಡನೆಯೆ ದೆಹಲಿಯ ಜುಮ್ಮಾ ಮಸೀದಿಯ ಇಮಾಮರ ನೆತೃತ್ವದಲ್ಲಿ ಮುಸಲ್ಮಾನರ ಗುಂಪು ಕೂಡ ಉರುಳಿದ ಮಸೀದಿಯ ಪುನರ್ನಿರ್ಮಾಣದ ಆಗ್ರಹ ಮಾಡುವ ಉದ್ದೇಶ್ಯದಿಂದ ಪ್ರಧಾನಿಯವರ ಮನೆಗೆ ಲಗ್ಗೆ ಹಾಕಿತು.

ಎಂದೂ ನಿರ್ಧಾರ ತೊಗೊಳ್ಳಲಾರದ ರಾಯರು, ಎರಡೂ ಬಣಗಳ ಅಹವಾಲನ್ನು ಕೇಳಿ ಇಕ್ಕಟ್ಟಿಗೆ ಸಿಕ್ಕಿ , ನುಣಿಚಿಕೊಳ್ಳುವ ಹಾಗೂ ಸ್ವಲ್ಪ ಕಾಲಾವಕಾಶ ಕಲ್ಪಿಸಲು ಉಪಾಯ ಹುಡುಕಿದರು. ತಮ್ಮ ಏನೇ ನಿರ್ಧಾರವು ಆರ್ಕೆಯಲಾಜಿಕಲ್ ಸರ್ವೆ ಆಫ್ ಇಂಡಿಯಾದವರಿಂದ ಆ ಸ್ಥಳದ ಉತ್ಖನನ ನಡಿಸಿದ ನಂತರ ಅಲ್ಲಿ ಸಿಕ್ಕಬಹುದಾದ ಪ್ರಮಾಣಗಳ ಆಧಾರದ ಮೇಲೆ ಅವಲಂಬಿಸುತ್ತದೆ. ಅಲ್ಲಿಯ ವರೆಗೂ ತಾಳ್ಮೆಯಿಂದಿರಿ ಎಂದು ಸ್ಪಷ್ಟ ಪಡಿಸಿದರು.

ಆರ್ಕೆಯಲಾಜಿಕಲ್ ಸರ್ವೆ ಆಫ್ ಇಂಡಿಯಾದವರು ಅಗೆಯಲು ಪ್ರಾರಂಭಿಸಿದ ಹಲವು ದಿನಗಳ ನಂತರ ಅಲ್ಲಿ ಹೂತಿಕೊಂಡಿದ್ದ ಹನುಮಾನ್ ವಿಗ್ರಹವೊಂದು ದೊರಕಿದೆ ಎಂಬ ವರದಿ ಪ್ರಕಟವಾಗುತ್ತಿದ್ದಂತೆಯೆ ಹಿಂದುಗಳು ಜಯ ನಮಗೇ ಎಂದು ಸಂತೋಷದಿಂದ ಕುಣಿದು ಕುಪ್ಪಳಿಸಲಾರಂಭಿಸಿದರು.

ಇತ್ತಕಡೆ, ಮುಸಲ್ಮಾನರ ತಂಡದವರು ಕೂಡ ಹನುಮಾನ್ ಹೆಸರೇ ಸೂಚಿಸುವಂತೆ ಮುಸಲ್ಮಾನನೆಂದೂ, ಅವನ ವಿಗ್ರಹ ಅಲ್ಲಿದ್ದದ್ದು, ಮಸೀದಿಯ ಪುನರ್ನಿರ್ಮಾಣಕ್ಕೆ ಪುರಾವೆ ಕೊಟ್ಟಂತಿವೆ ಎಂದು ಸಂಭ್ರಮಿಸಲು ಆರಂಭಿಸಿದರು. ಕಾರಣ, ಉಸ್ಮಾನ್, ರಹಮಾನ್, ಸುಲೇಮಾನ್, ಹನುಮಾನ್ ಎಲ್ಲವೂ ಮುಸ್ಲಿಮರ ಹೆಸರುಗಳು ಎಂದು ಅವರ ವಾದ.

ಬೆದರಿ ಕಂಗಾಲಾದ ನರಸಿಂಹರಾಯರಿಗೆ ಏನು ಮಾಡಬೇಕೋ ತೋಚದಿದ್ದಾಗ, ಅವರ ಆಪ್ತ ಕಾರ್ಯದರ್ಶಿಗಳ ಸಲಹೆಯ ಮೇರೆಗೆ ಎರಡೂ ಬಣದವರನ್ನು ಕರೆದು “ ನೋಡಿ, ಇದೊಂದು ಬಹಳ ಜಟಿಲವಾದ ಪ್ರಶ್ನೆ. ನಿರ್ಣಯ ಮಾಡುವ ಮುನ್ನ ಬಹಳ ವಿವೇಚನೆಯಿಂದ ಸಂಶೋಧನೆ ಮಾಡಿ ಮುನ್ನಡೆಯಬೇಕಾಗಿದೆ. ನಮ್ಮ ಪಾರ್ಟಿಯಲ್ಲಿಯ ಅತಿ ಮೇಧಾವಿ ಶ್ರೀ ಮನಮೋಹನ್ ಸಿಂಗ್ ಈ ಕಾರ್ಯಕ್ಕೆ ಸೂಕ್ತ ವ್ಯಕ್ತಿ. ನೀವೆಲ್ಲರೂ ಅವರ ಮುಂದೆ ನಿಮ್ಮ ಸಾಕ್ಷಿ ಪುರಾವೆಗಳನ್ನು ಮಂಡಿಸಿ. ಅವರ ಅಭಿಪ್ರಾಯ ಅರಿತ ನಂತರ ನಿರ್ಧಾರ ಮಾಡುತ್ತೇನೆ.” ಎಂದು ಹೇಳಿ ತಮಗೆ ಬಂದ ಸಂಕಟವನ್ನು ಬಡಪಾಯಿ ಸಿಂಗ್ರವರ ತಲೆಗೆ ಅಂಟಿಸಿ ಸದ್ಯಕ್ಕಂತೂ ಬಚಾವಾದರು.

ಪಾಪ ಪ್ರಾಧ್ಯಾಪಕ ಮನಮೋಹನ್ ಸಿಂಗ್ರವರು ಅನೇಕ ದಿನಗಳ ಕಾಲ ರಾಮಾಯಣದ ಎಲ್ಲ ರೂಪಗಳ (ತುಳಸಿ; ವಾಲ್ಮೀಕಿ, ಕಂಬ, ಇತರೆ ಇತರೆ… ) ಅಧ್ಯಯನ ಮಾಡಿದ ನಂತರ ಕೊರಾನ್, ಬಾಬರ್ನಾಮ ಮತ್ತು ಇತರೇ ಪರ್ಷಿಯನ್ ಗ್ರಂಥಗಳ ಕೂಲಂಕಷ ತನಿಖೆ ನಡೆಸಿದರು. ಅನೇಕ ಪಂಡಿತರುಗಳ, ವಿದ್ವಾಂಸರುಗಳ ಜೊತೆಗೇ ಎರಡೂ ಬಣದವರ ವಾದ ವಿವಾದಗಳನ್ನೆಲ್ಲ ತಾಳ್ಮೆಯಿಂದ ಕೇಳಿ ಕೊನೆಗೂ ಒಂದು ನಿರ್ಧಾರಕ್ಕೆ ಬಂದು ತಮ್ಮ ಅಭಿಪ್ರಾಯವನ್ನು ನರಸಿಂಹರಾಯರಿಗೆ ತಿಳಿಸಿದರು.

ಅವರ ಪ್ರಕಾರ ಹನುಮಾನ್ ಹಿಂದುವೂ ಅಲ್ಲ! ಮುಸಲ್ಮಾನನೂ ಅಲ್ಲ! ಕಕ್ಕಾಬಿಕ್ಕಿಯಾಗಿ ಗಾಬರಿಯಿಂದ ಅವರ ಕಡೆ ನೋಡಿದ ರಾಯರಿಗೆ ಶ್ರೀ ಮನಮೋಹನ್ ಸಿಂಗ್ ಹೇಳಿದ್ದು ಹೀಗೆ. “ ನೋಡಿ ಸ್ವಾಮಿ. ಯಾರದೋ ಹೆಂಡತಿಯನ್ನು ಹುಡುಕಲು ಹೊರಟು, ತನ್ನ ಬಾಲಕ್ಕೇ ಬೆಂಕಿ ಹಚ್ಚಿಕೊಂಡು, ಬೇರಾರದೋ ಮನೆಮಠ ಸುಟ್ಟು ಹಾಕುವಂಥ ವ್ಯಕ್ತಿ ಒಬ್ಬ ಸರ್ದಾರ್ಜಿಯಲ್ಲದೆ ಮತ್ಯಾರು ಆಗಿರಲು ಸಾಧ್ಯ? ನೀವೆ ಯೋಚಿಸಿ! ಹಿಂದುವೂ ಅಲ್ಲ. ಮುಸಲ್ಮಾನನೂ ಅಲ್ಲ! ಅವನು ಹನುಮಾನ್ ಸಿಂಗ್. ನೀವು ಸುಮ್ಮನೆ ಆ ಜಾಗದಲ್ಲಿ ಒಂದು ಗುರುದ್ವಾರ ಕಟ್ಟಿಸಿಬಿಡಿ. ಈ ಗೊಂದಲ ತಾನೇ ನಿಂತು ಹೋಗತ್ತೆ.”

ನರಸಿಂಹರಾಯರ ಮುಖ ನೋಡುವಂತಿತ್ತು.

***********************************************************

Rating
No votes yet

Comments