ಬಾಲ್ಯದ ಸೊಗಸು
ಬರಹ
ಬಾಲ್ಯದ ಸೊಗಸು
**********
ಹೋಗದೇಕೆ ನನ್ನ ಬದುಕು
ಮರಳಿ ಮತ್ತೆ ಬಾಲ್ಯಕೆ ?
ಹೊಳೆಯದೇಕೆ ಚುಕ್ಕಿ ಬೆಳಕು
ಮುಗ್ಧ ಮನದ ಲಾಸ್ಯಕೆ?
ಅರಳದೇಕೆ ಮೊಲ್ಲೆ ಮೊಗ್ಗು
ಜಡೆಗೆ ಮಾಲೆಯಾಗಲು?
ನುಡಿಯದೇಕೆ ತಾಯಿ ಕೊರಳು
ಜೋಜೋ ಲಾಲಿ ಹಾಡಲು?
ಉಲಿಯದೇಕೆ ಗೆಜ್ಜೆ ಪಲುಕು
ಊರಿ ನಡೆವ ಹೆಜ್ಜೆಗು?
ಒಲಿಯದೇಕೆ ಮಮತೆ ಮೆಲುಕು
ಹಠವ ಹಿಡಿದ ರಚ್ಚೆಗು?
ರುಚಿಸದೇಕೆ ತಿಂಡಿ ಹಲವು
ತಾಯಿ ಗುಟುಕ ಸೊಗಸಿಗೆ?
ಚಿಗುರದೇಕೆ ಮತ್ತೆ ಚೆಲುವು
ಸುಕ್ಕು ಬಿದ್ದ ಬದುಕಿಗೆ?
-೦-