ಶ್ರೀಹರಿ ಸೊಳ್ಳೆ ಕಾಟದಿಂದ ತಪ್ಪಿಸಿಕೊಂಡಿದ್ದು ಹೇಗೆ?

ಶ್ರೀಹರಿ ಸೊಳ್ಳೆ ಕಾಟದಿಂದ ತಪ್ಪಿಸಿಕೊಂಡಿದ್ದು ಹೇಗೆ?

ಈ ಬಾರಿಯ ವಿಚಿತ್ರಾನ್ನದಲ್ಲಿ, ಶ್ರೀವತ್ಸ ಜೋಷಿಯವರು ಸೊಳ್ಳಾಯಣ ವನ್ನು ಮುಂದಿಟ್ಟಿದ್ದಾರೆ. ರಾಮ ಇದ್ದದ್ದು ನಿಜವೋ ಸುಳ್ಳೋ, ಆದರೆ ರಾಮಾಯಣ ಇರುವುದಂತೂ ನಿಜ. ರಾಮನನ್ನು ಕಂಡವರು ಈಗ ಯಾರೂ ಇಲ್ಲ. ಆದರೆ, ಸೊಳ್ಳೆಗಳನ್ನು ಕಾಣದವರುಂಟೇ? ಇದ್ದನೋ ಇಲ್ಲವೋ ತಿಳಿಯದ ಅಂತಹ ರಾಮನಂತಹ ರಾಮನಿಗೆ, ವಾಲ್ಮೀಕಿ ೨೪೦೦೦ ಶ್ಲೋಕಗಳ ರಾಮಾಯಣವನ್ನು ರಚಿಸಿದ ಮೇಲೆ, ಸರ್ವವ್ಯಾಪಿ ಸೊಳ್ಳೆಗಳ ಮೇಲೆ್ ಒಂದು ಮಹಾಕಾವ್ಯ ಇಲ್ಲದಿದ್ದರೆ, ಒಂದು ಕಾದಂಬರಿ ಇಲ್ಲದಿದ್ದರೆ, ಒಂದು ಅಂಕಣಬರಹವನ್ನಾದರೂ ಬರೆಯಬೇಕೆಂಬ ಬಯಕೆ ಅವರದಿರಬಹುದು.

ಅದೇನೇ ಇರಲಿ. ಅವರು ಅನ್ನಮಯ್ಯ ಒಂದು ಕೀರ್ತನೆಯಲ್ಲಿ ಬೆಳಗಾಗ ಹಾವಿನ ಹೆಡೆಯೇ ಸೊಳ್ಳೆಗಳಿಂದ ಕಾಯುವ ತೆರೆ (ಸೊಳ್ಳೆ ಪರದೆ ಎನ್ನಿ) ಆಗಿರುವ ಶ್ರೀಹರಿಗೆ ಹಾಲುಣಿಸುವುದನ್ನು ನೆನೆದಿದ್ದಾರೆ. ಇದು ನಿಜವಾಗಲೂ ಒಳ್ಳೆಯ ಶೋಧವೇ. ಬೇರೆ ದಾಸರ ಪದಗಳಲ್ಲಿ ಸೊಳ್ಳೆಯ ಉಲ್ಲೇಖ ಇರಬಹುದು - ಆದರೆ ಸೊಳ್ಳೆಯ ಪರದೆಯ ವಿಷಯ ನಾನೆಂದೂ ಕಂಡದ್ದು ನೆನಪಿಲ್ಲ. ಹಾಗಿದ್ದರೆ, ಸೊಳ್ಳೆಪರದೆ ಎಂಬುದು ತೆಲುಗರ ಅವಿಷ್ಕಾರವೇ? ಇದು ಖಂಡಿತ ಯಾರಾದರೂ ಡಾಕ್ಟರೇಟ್ ತೆಗೆದುಕೊಳ್ಳಲು ಮಾಡಬಹುದಾದ ಸಂಶೋಧನಾ ವಿಷಯದಂತೆ ತೋರುತ್ತಿದೆ ನನಗೆ! ಆದರೆ ಸದ್ಯಕ್ಕೆ ನನಗೆ ಅಂತಹ ಉದ್ದೇಶವಾಗಲೀ, ಅಥವಾ ಅದನ್ನು ಕೈಗೆತ್ತಿಕೊಳ್ಳಲು ಸಮಯವಾಗಲೀ ಇಲ್ಲ. ಆದ್ದರಿಂದ, ಇಲ್ಲಿಗೇ ಬಿಟ್ಟುಬಿಡುತ್ತೇನೆ.

ಅನ್ನಮಯ್ಯನ ಶ್ರೀಹರಿಯನ್ನು, ಭಕ್ತಕೋಟಿಯ ಕಷ್ಟಕೋಟಲೆಗಳನ್ನು ನಿವಾರಿಸಲು, ಸೊಳ್ಳೆಪರದೆಯಂತಿರುವ ಆದಿಶೇಷನ ಹೆಡೆಯನ್ನು ಸರಿಸಿ, ಹೊರಗೆ ಬಾ ಎನ್ನುವುದು ವಿಚಿತ್ರಾನ್ನದ ಭಟ್ಟರಿಗೆ ಸ್ವಲ್ಪ ಆಶ್ಚರ್ಯವಾಗಿ ಕಂಡಿದೆ ಎನಿಸುತ್ತೆ. ಆದರೆ, ನನಗೇನೋ ಅದಂತೂ ಬಹಳ ಸಹಜವೇ ಅನ್ನಿಸ್ತಾ ಇದೆ. ಯಾಕಂತೀರಾ? ನಿಜ ಹೇಳಬೇಕೆಂದರೆ, ಶ್ರೀಹರಿ ಕ್ಷೀರಸಾಗರಕ್ಕೆ ಹೋಗಿ ಹಾವಿನ ಹಾಸಿಗೆಯ ಮೇಲೆ ಮಲಗಿದ್ದೇ, ಹುಳುಹುಪ್ಪಟೆಗಳ ಕಾಟ ತಪ್ಪಿಸ್ಕೊಳ್ಳೋದಿಕ್ಕೆ. ಅದ್‍ಹೇಗೆ ಅಷ್ಟು ಖಾತ್ರಿಯಾಗಿ ಹೇಳ್ತೀಯಾ ಅಂತೀರಾ? ನನ್ನ ಹತ್ತಿರ ಪುರಾವೆ ಇದೆ ಸ್ವಾಮೀ!

ಇಲ್ಲಿ ನೋಡಿ ಒಂದು ಸಂಸ್ಕೃತ ಸುಭಾಷಿತ:

ಕಮಲೇ ಕಮಲಾ ಶೇತೇ

ಹರಃ ಶೇತೇ ಹಿಮಾಲಯೇ

ಕ್ಷೀರಾಬ್ದೌ ಚ ಹರಿಃ ಶೇತೇ

ಮನ್ಯೇ ಮತ್ಕುಣ ಶಂಕಯಾ!

ಅಂದರೆ,

ಕಮಲದಲೇ ಮಲಗುವಳು ಲಕುಮಿ

ಶಿವ ಮಲಗುವನು ಹಿಮಾಲಯದಲಿ

ಪಾಲ್ಹಡಲೇ ಪವಡಿಸುವನು ಹರಿ;

ಬಯಸಿರಬೇಕು, ಹುಳುಹುಪ್ಪಟೆಗಳಿಂ ಬಿಡುಗಡೆ!

ನೋಡಿದ್ರಲ್ಲ! ಹರಿ ಹಾಲ್ಗಡಲಿಗೆ ಹೋಗಿದ್ದೇ ಹುಳುಹುಪ್ಪಟೆ, ಕ್ರಿಮಿಕೀಟಗಳಿಗೆ ಹೆದರಿ; ಅವುಗಳಿಂದ ತಪ್ಪಿಸ್ಕೊಳೋದಿಕ್ಕೆ ಅಂತ. ಅಲ್ಲಿ ಹೋದಮೇಲೆ ಏನಾಯ್ತು? ಹದಿನಾಲ್ಕೂ ಲೋಕಗಳನ್ನು ವ್ಯಾಪಿಸಿರುವ ಸೊಳ್ಳೆರಾಯರು ಅಲ್ಲೂ ಪ್ರತ್ಯಕ್ಷರಾಗಿರಬೇಕು. ಮಲಗಿರುವ ಹಾವಿನ ಹೆಡೆಯನ್ನು ಬಿಟ್ಟು, ಪಾಪ, ಹರಿಗೆ ತಾನೇ ಇನ್ನೇನಿತ್ತು? ಲಕ್ಷ್ಮಿಯ ಸೀರೆ ಸೆರಗಿನಿಂದಾದರೂ, ಸ್ವಲ್ಪ ಗಾಳಿ ಬೀಸಿಕೊಂಡು ಸೊಳ್ಳೆ ಓಡಿಸೋಣ ಅಂದರೆ, ಆ ಮಹಾರಾಯ್ತಿ ಮೊದಲೇ ಕಮಲದೊಳಗೆ ಸೇರಿದ್ದಾಳೆ. ರಾತ್ರಿ ಹೊತ್ತು ಕಮಲ ಮುದುಡುವುದೂ ಗೊತ್ತಿರುವ ಸಂಗತಿಯೇ. ಇನ್ನು, ಅವಳ ಸೆರಗಿನ ವಿಷಯ ದೂರವೇ. ಅಲ್ಲವೇ? ಅದಕ್ಕೇ ಪಾಪ, ವಿಷ್ಣು ಹಾವಿನ ಹೆಡೆಯನ್ನೇ ಸೊಳ್ಳೆ ಪರದೆಯನ್ನಾಗಿಸಿಕೊಂಡರೆ, ಆದು ತೀರಾ ಸಹಜಾ ಅಂತೀನಿ ನಾನು.

ನೀವೇನಂತೀರಾ?

-ಹಂಸಾನಂದಿ

Rating
No votes yet