ಶಿಕ್ಷಕರಿಗೆ ವಿದ್ಯಾರ್ಥಿಗಳಿಂದ ಶಿಕ್ಷಣ

ಶಿಕ್ಷಕರಿಗೆ ವಿದ್ಯಾರ್ಥಿಗಳಿಂದ ಶಿಕ್ಷಣ

ಬರಹ

ಉದಯವಾಣಿ 

(ಇ-ಲೋಕ-43)(09/10/2007)

ಸೆಲ್‍ಪೋನ್,ಡಿವಿಡಿ,ಲ್ಯಾಪ್‍ಟಾಪ್ ಅಂತಹ ಆಧುನಿಕ ಸಾಧನಗಳನ್ನು ಬಳಸುವುದರಲ್ಲಿ ಇಂದಿನ ತರುಣ ಜನಾಂಗ ಹಳಬರಿಗಿಂತ ಹೆಚ್ಚು ಪಳಗಿರುತ್ತಾರೆ.ಅವರು ಯಾವುದೇ ಗಾಬರಿ,ಆತಂಕಗಳಿಲ್ಲದೆ ಸಾಧನಗಳನ್ನು ಬಳಸುತ್ತಾರಾದ್ದರಿಂದ ಅದರ ಬಳಕೆ ಅವರಿಗೆ ಸಹಜವಾಗುತ್ತದೆ.ಇಂಗ್ಲೆಂಡಿನ ಓಕ್‍ಲ್ಯಾಂಡ್ ವಿಶ್ವವಿದ್ಯಾಲಯದವರು ಇದನ್ನು ಮನಗಂಡು ಮೂವತ್ತಕ್ಕೂ ಅಧಿಕ ವಿದ್ಯಾರ್ಥಿಗಳನ್ನು,ಶಿಕ್ಷಕರಿಗೆ ಸಾಧನಗಳ ಬಳಕೆಯಲ್ಲಿ ನೆರವು ನೀಡುವ ಇ-ಮೆಂಟರ್ ಹುದ್ದೆಗಳಿಗೆ ನೇಮಿಸಿದೆ.ಇವರಿಗೆ ಲ್ಯಾಪ್‍ಟಾಪ್,ನಿಸ್ತಂತು ಕಂಪ್ಯೂಟರ್ ಜಾಲದ ಬಳಕೆ,ಇಲೆಕ್ಟ್ರಾನಿಕ್ ಬೋರ್ಡುಗಳ ಬಳಕೆ ಮತ್ತು ಎಲ್.ಸಿ.ಡಿ. ಪ್ರೊಜೆಕ್ಟರುಗಳ ಬಳಕೆಯಲ್ಲಿ ತರಬೇತು ನೀಡಲಾಗುತ್ತದೆ.ವಿಶ್ವವಿದ್ಯಾಲಯವು ನಾಲ್ಕು ಲಕ್ಷ ಪೌಂಡ್ ಹೂಡಿಕೆ ಮಾಡಿ ಆಧುನಿಕ ಸವಲತ್ತುಗಳನ್ನು ಪಡೆದುಕೊಂಡಿದೆ.ಇದರ ಬಳಕೆಯಲ್ಲಿ ಶಿಕ್ಷಕರಿಗೆ ತೊಂದರೆ ಎದುರಾದಾಗಲೆಲ್ಲಾ ಇ-ಮೆಂಟರುಗಳು ಅವರಿಗೆ ನೆರವೀಯುತ್ತಾರೆ.ಬಳಕೆಯನ್ನು ಸುಗಮಗೊಳಿಸುತ್ತಾರೆ.ಹೀಗಾಗಿ ವಿವಿಯ ಕ್ಯಾಂಪಸ್ಸಿನಲ್ಲಿ ಮಾಹಿತಿ

ತಂತ್ರಜ್ಞಾನ ಮತ್ತು ಸಂವಹನ ಸಾಧನಗಳ ಬಳಕೆ ದಕ್ಷ ರೀತಿಯಿಂದ ನಡೆದು,ವಿದ್ಯಾರ್ಥಿ ಸಮುದಾಯಕ್ಕೆ ಅವುಗಳ ಲಾಭ ತಲುಪುತ್ತಿವೆ. ವೈದ್ಯಕೀಯ ದಾಖಲೆಗಳನ್ನು ಸಂಗ್ರಹಿಸಿಡಲು ವೆಬ್‍ಸೈಟ್ http://www.healthvault.com ಎನ್ನುವುದು ಮೈಕ್ರೊಸಾಫ್ಟ್ ಕಂಪೆನಿಯ ಹೊಸ ಅಂತರ್ಜಾಲ ತಾಣ. ಈ ತಾಣವು ಜನರ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿ,ಪರೀಕ್ಷೆಯ ವರದಿಗಳನ್ನು ಅಂತರ್ಜಾಲದಲ್ಲಿಡಲು ಅನುಕೂಲ ಕಲ್ಪಿಸಿರುವ ತಾಣವಾಗಿದೆ.ಇಲ್ಲಿ ನೋಂದಾಯಿಸಿಕೊಂಡವರೆಲ್ಲರೂ ತಮ್ಮ ಎಕ್ಸ್‍ರೇ,ರಕ್ತ ಪರೀಕ್ಷೆಯ ವರದಿಗಳು ಮತ್ತಿತರ ಪರೀಕ್ಷೆಗಳ ವರದಿಗಳನ್ನು ಸಂಗಹಿಸಿಡಬಹುದು.ಮಾಹಿತಿಯು ಬೇಕಾದಾಗ ಒಂದೆಡೆ ಸಿಗುವ ಅನುಕೂಲವಿದೆ. ಓರ್ವನಿಗೆ ಸಂಬಂಧಿಸಿದ ಮಾಹಿತಿಗಳು ಆತ ಬಯಸಿದವರಿಗೆ ಮಾತ್ರಾ ದೊರೆಯುತ್ತವೆ. ಯಾರು ಯಾರೋ ವ್ಯಕ್ತಿಯ ಮಾಹಿತಿಗಳನ್ನು ನೋಡದಂತಹ ಭದ್ರತೆಯ ಖಾತರಿಯನ್ನು ಮೈಕ್ರೋಸಾಪ್ಟ್ ನೀಡಿದೆ.ಇಂತಹ ಆನ್‍ಲೈನ್ ವ್ಯವಸ್ಥೆಯನ್ನು ಜನರಿಗೆ ಒದಗಿಸಲು ಗೂಗಲ್,ಯಾಹೂ ಅಂತಹ ಕಂಪೆನಿಗಳೂ ಪ್ರಯತ್ನಿಸುತ್ತಿವೆಯಾದರೂ,ಮೈಕ್ರೋಸಾಫ್ಟ್ ಅವನ್ನು ಹಿಮ್ಮೆಟ್ಟಿಸಿ ತಾನೇ ಸೌಲಭ್ಯವನ್ನು ಮೊದಲಾಗಿ ಒದಗಿಸಿದೆ.ಡಿಜಿಟಲ್ ಮಾಹಿತಿಯನ್ನು ತಾಣದಲ್ಲಿರಿಸುವುದರಿಂದ ವರದಿಗಳನ್ನು ಮೊದಲಾಗಿ ಡಿಜಿಟಲ್ ರೂಪಕ್ಕೆ ಬದಲಿಸಬೇಕಾಗುತ್ತದೆ.ಇದರಲ್ಲಿ ಸದ್ಯ ಸರ್ವರೂ ಒಪ್ಪಿಕೊಂಡ ಒಂದು ಮಾನಕದ ಅಭಿವೃದ್ಧಿ ಆಗದಿರುವುದು ಒಂದು ತೊಡಕು. ಹೀಗಾದಾಗ ಒಂದು ತಾಣದ ವರದಿಗಳನ್ನು ಇನ್ನೊಂದು ತಾಣವು ಬಳಸಿಕೊಳ್ಳುವುದು ಸಮಸ್ಯೆಯಾಗುತ್ತದೆ.ಜತೆಗೆ ವೈದ್ಯರುಗಳು ಇನ್ನೂ ಕಂಪ್ಯೂಟರ್ ಬಳಕೆಗೆ ಒಗ್ಗಿಕೊಳ್ಳದೆ ಕಾಗದಪತ್ರಗಳ ಕಾಲದಲ್ಲೇ ಇರುವುದು ಇಂತಹ ಆನ್‍ಲೈನ್ ವ್ಯವಸ್ಥೆಯ ಸಮರ್ಥ ಬಳಕೆಗೆ ತಡೆಯಾಗಿದೆ.ತಾಣವು ಜಾಹೀರಾತು ಆದಾಯದ ಮೂಲಕ ನಡೆಯುತ್ತಿದೆ.

ಜಪಾನ್‍ನ ಉಪಗ್ರಹದ ಚಂದ್ರಯಾನ

 ನಾವು ಚಂದ್ರಾಯಾನದ ರೂಪುರೇಶೆ ತಯಾರಿಸುತ್ತಿರುವಂತೆ ಜಪಾನ್ ತನ್ನ ಉಪಗ್ರವನ್ನು ಚಂದ್ರನತ್ತ ಕಳುಹಿಸಿದೆ.ಸೆಪ್ಟೆಂಬರ್ ಹದಿನಾಲ್ಕರಂದು ಚಂದ್ರನತ್ತ ಸಾಗಿದ ಉಪಗ್ರಹ ಇತ್ತೀಚೆಗೆ ಚಂದ್ರನ ಸುತ್ತು ಗಿರಕಿ ಹಾಕಲು ಶುರು ಮಾಡಿದೆಯಂತೆ.ಉಪಗ್ರಹ ಕಳುಹಿಸಿದ ಮಾಹಿತಿ ಚಂದ್ರನ ಬಗ್ಗೆ ಹೆಚ್ಚಿನ ಸಂಗತಿ ಅರಿಯಲು ಬಳಕೆಯಾಗಲಿದೆ.ಅತ್ತ ಚೀನಾವೂ ಚಂದ್ರಯಾನದ ತಯಾರಿ ನಡೆಸಿದ್ದು,ಈ ವರ್ಷದ ಕೊನೆಯ ವೇಳೆಗೆ ಚಂದ್ರನತ್ತ ಉಪಗ್ರಹ ಕಳುಹಿಸುವ ಪಣ ತೊಟ್ಟಿದೆ.

"ಚಾರ್ಜು"ರಹಿತ ಚಾರ್ಜರುಗಳು!

ಲ್ಯಾಪ್‍ಟಾಪ್,ಸೆಲ್‍ಪೋನ್,ಪಿಡಿಎ,ಐಪಾಡ್ ಇಂತಹ ಬ್ಯಾಟರಿ ಆಧಾರಿತ ಸಾಧನಗಳ ಬಳಕೆ ಅತಿಯಾಗಿರುವುದು ಹೌದಲ್ಲ?ಅದರ ಜತೆಗೆ ಪ್ರವಾಸಿಗಳು ಇವನ್ನು ತಮ್ಮ ಪ್ರವಾಸದ ವೇಳೆ ಬಳಸಿಕೊಳುವುದೂ ಹೆಚ್ಚಿದೆ.ವಿಮಾನದಲ್ಲಿ ಹಾರಾಡುವ ಪ್ರವಾಸಿಗಳ ಪೈಕಿ ಶೇಕಡಾ ಎಂಭತ್ತು ಜನರ ಬಳಿ ಇಂತಹ ಸಾಧನಗಳು ಇರುತ್ತವೆ.ಅವರು ವಿಮಾನದ ರದ್ದತಿಯಿಂದಲೋ,ವಿಳಂಬವಾಗುವುದರಿಂದಲೋ ವಿಮಾನ ನಿಲ್ದಾಣಗಳಲ್ಲಿ ಕಾಯಬೇಕಾಗಿ ಬಂದಾಗ ಸಾಧನಗಳ ಬ್ಯಾಟರಿ ಖಾಲಿಯಾಗಿ,ಅವುಗಳನ್ನು ಮರುಪೂರಣಗೊಳಿಸುವ ಅಗತ್ಯ ಬಂದೇ ಬರುತ್ತದೆ. ಈಗ ಅಮೇರಿಕಾದ ವಿಮಾನ ನಿಲ್ದಾಣಗಳಲ್ಲಿ ಸಾಧನಗಳನ್ನು ಚಾರ್ಜ್ ಮಾಡುವ ಸೌಲಭ್ಯ ಇರುವ ಕಿಯೋಸ್ಕ್‍ಗಳು ಸಾಮಾನ್ಯವಾಗಿವೆಯಂತೆ.ಜನರು ಈ ಸೇವೆಗೆ ಶುಲ್ಕ ಪಾವತಿಸಲು ಬಯಸರು ಎನ್ನುವುದನ್ನು ಮನಗಂಡು ಈ ಸೇವೆಯನ್ನು ಉಚಿತವಾಗಿಯೇ ನೀಡುವ ಪರಿಪಾಟ ಇದೆ. ಅಲ್ಲೊಂದು ಇಲ್ಲೊಂದು ವೆಂಡಿಂಗ್ ಯಂತ್ರಗಳಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ನಾಲ್ಕೂವರೆ ಡಾಲರು ಪಾವತಿಸಿ,ಲ್ಯಾಪ್‍ಟಾಪ್ ಚಾರ್ಜ್ ಮಾಡುವ ವ್ಯವಸ್ಥೆಯನ್ನೂ ಒದಗಿಸುವುದೂ ನಡೆದಿದೆ.ತಿಂಗಳಿಗೆ ದಶಲಕ್ಷ ಜನರು ಓಡಾಡುವ ವಿಮಾನ ನಿಲ್ದಾಣಗಳಲ್ಲಿ ಕಿಯೋಸ್ಕ್‍ಗಳ ಸಂಖ್ಯೆಯು ಅಗತ್ಯ ಪ್ರಮಾಣಕ್ಕೆ ಮುಟ್ಟಲು ಮಾತ್ರಾ ಇನ್ನೂ ಸಮಯ ಬೇಕಾದೀತು.

ಅಣುಶಕ್ತಿ ದುಬಾರಿಯೇ?

 ಭಾರತದ ಮೊದಲ ಅಣುಶಕ್ತಿ ಉತ್ಪಾದಿಸುವ ತಾರಾಪುರ ಸ್ಥಾವರದಲ್ಲೀಗ ಪ್ರತಿ ಯುನಿಟ್ ವಿದ್ಯುಚ್ಚಕ್ತಿ ಉತ್ಪಾದನೆಗೆ ಬರುವ ಖರ್ಚು ಒಂದು ರೂಪಾಯಿಗೂ ಕಡಿಮೆ.ಕಲ್ಪಾಕಮ್,ಕಾಕ್ರಪಾರ ಮತ್ತು ನರೋರಾ ಸ್ಥಾವರಗಳಲ್ಲಿ ಯುನಿಟ್ ವಿದ್ಯುತ್‍ಗೆ ಖರ್ಚು ಎರಡು ರೂಪಾಯಿಗಳು.ಕೈಗಾ,ರಾಜಾಸ್ಥಾನದ ಅಣುಶಕ್ತಿ ಕೇಂದ್ರಗಳು ಹೊಸದಾಗಿ ಸ್ಥಾಪಿತವಾದವು.ಅವುಗಳ ನಿರ್ಮಾಣ ವೆಚ್ಚ ಹೆಚ್ಚಾದ್ದರಿಂದ ಯುನಿಟ್ ವಿದ್ಯುತ್ ಮೂರು ರುಪಾಯಿಯಷ್ಟು ದುಬಾರಿ.ಮುಂದೆ ನಮ್ಮಲ್ಲಿ ಸ್ಥಾಪನೆಯಾಗಲಿರುವ ಸ್ಥಾವರಗಳು ಎರಡೂವರೆ ರೂಪಾಯಿ ಬೆಲೆಯಲ್ಲಿ ವಿದ್ಯುದುತ್ಪಾದಿಸಬಹುದು ಎಂದು ಅಂದಾಜು.ಪ್ರಾನ್ಸ್ ತನ್ನ ವಿದ್ಯುಚ್ಚಕ್ತಿಯ ಅಗತ್ಯದ ಶೇಕಡಾ ಎಂಭತ್ತು ಅಂಶವನ್ನು ಅಣು ಮೂಲದಿಂದ ಪಡೆದರೂ,ಅಲ್ಲಿ ಯುರೋಪಿನ ದೇಶಗಳ ಪೈಕಿಯೇ ಅತಿ ಕಡಿಮೆ ಬೆಲೆಯಲ್ಲಿ ವಿದ್ಯುತ್ ಸಿಗುತ್ತದಂತೆ.ಚೀನಾವು ಕಲ್ಲಿದ್ದಲನ್ನು ಅತ್ಯಧಿಕ ಪ್ರಮಾಣದಲ್ಲಿ ಉತ್ಪಾದಿಸುತ್ತದೆಯಾದರೂ,ಅಣುಶಕ್ತಿಯ ಬಳಕೆಯತ್ತ ಗಮನಹರಿಸಿದೆ.

*ಅಶೋಕ್‍ಕುಮಾರ್ ಎ