ಪಲಾಯನವಾದ

ಪಲಾಯನವಾದ

ಬರಹ

ಓಡಿ, ಓಡೋಡಿ
ಪೊದೆಗಳೆನ್ನದೆ ನುಸುಳಿ
ಬಸವಳಿದು ಉಸ್ಸೆಂದ, ಬೆವರು
ಮೈಯ ತುಂಬಾ

ದಾಟಿ
ಅಡ್ಡ ಗೋಡೆಯನು,
ಕಾಡು ಗುಡ್ಡ
ಮಲಗಿದ್ದವೆಲ್ಲ ಅಡ್ಡಡ್ಡ

ಬಿಡುತ್ತಿಲ್ಲ,
ಬೆನ್ನಟ್ಟಿ ಬರುತಿದೆ
ನೆರಳದು, ಅಲ್ಲಲ್ಲ
ಸಮಸ್ಯೆಯ ಉರುಳದು

ಮುಂದೋಡುತಿರೆ ಅವನು
ತಗ್ಗಿ ಬಗ್ಗಿ
ಹಿಂದಿಂದ ಮುನ್ನುಗ್ಗಿ
ಬರುತಿವೆ
ಮುಗಿಲ ಕವಿದ ಕಾರ್ಮುಗಿಲು

ಅವನ ಹಿಮ್ಮೆಟ್ಟಿಸಿ
ಬೆತ್ತಲೆ ಕತ್ತಲಲೂ
ಬರುತಿಹನು ಬೆನ್ನಟ್ಟಿಸಿ
ಮುಗಿಲು ಮುಡಿದ ಚಂದ್ರ

ನಿಂತು ಉಸಿರೆಳೆದ
ಕೂತ, ಮಾತಿಲ್ಲದೆ
ಹಾಗೆ ಬರಿದೆ
ಇಲ್ಲ ನಿದ್ದೆ, ಸಮಯ
ಮೈ, ಮನಸಿಗೆಲ್ಲಿದೆ?

ಟಪ ಟಪ ಸದ್ದು
ಓಡಿದನು ಎದ್ದು ಬಿದ್ದು
ಹೊಟ್ಟೆ ಹಸಿವಿನ
ಕೂಗಿಗೂ ಬೆಚ್ಚಿ ಬಿದ್ದು

ಓಡುತಿದ್ದರೇನು
ಬಂತು
ಎದುರಿಸದೆ ಎದೆಯೊಡ್ಡಿ
ನಿದ್ದೆ, ನೆಮ್ಮದಿಯಿಲ್ಲ
ಮಾಡಿ ಬರಿ ಪಲಾಯನ