ವಿನಾಶ ಕಾಲೇ ವಿಪರೀತ ಬುದ್ಧಿ!
ವಿನಾಶ ಕಾಲೇ ವಿಪರೀತ ಬುದ್ಧಿ!
ಇತಿಹಾಸ, ಪುರಾಣ ಹಾಗೂ ಅಶ್ಲೀಲ ರಾಜಕಾರಣ
ಇಪ್ಪತ್ತು-ಇಪ್ಪತ್ತು ವಿಶ್ವಕಪ್ ಕ್ರಿಕೆಟ್ನ ಅಂತಿಮ ಪಂದ್ಯದ ದಿನ ಕೌಟುಂಬಿಕ ಸಮಾರಂಭವೊಂದಕ್ಕಾಗಿ ಹಾಸನಕ್ಕೆ ಹೋಗಿದ್ದ ನಾನು ಶಿವಮೊಗ್ಗಕ್ಕೆ ವಾಪಸಾಗುತ್ತಿದ್ದೆ. ಕ್ರಿಕೆಟ್ ಅಭಿಮಾನಿಯಾದ ನನಗೆ ಇಪ್ಪತ್ತು - ಇಪ್ಪತ್ತು ಕ್ರಿಕೆಟ್ ಬಗ್ಗೆ ಅಷ್ಟೇನೂ ಉತ್ಸಾಹವಿಲ್ಲದಿದ್ದರೂ, ಭಾರತ ಅಂತಿಮ ಪಂದ್ಯ ಆಡುವ ಸಡಗರದ ಹಿನ್ನೆಲೆಯಲ್ಲಿ ಪಂದ್ಯವನ್ನು ನೋಡಲಾಗದ ಬೇಸರ ಪ್ರಯಾಣದುದ್ದಕ್ಕೂ ಕಾಡುತ್ತಿತ್ತು. ದಾರಿ ಮಧ್ಯೆ ಭದ್ರಾವತಿಯಲ್ಲಿ, ನಮ್ಮೊಡನೆ ಹಾಸನಕ್ಕೆ ಬಂದಿದ್ದ ನಮ್ಮ ಗೆಳೆಯರೊಬ್ಬರ ಪತ್ನಿಯನ್ನು ಇಳಿಸಲು ಅವರ ಮನೆ ಬಳಿ ಹೋದಾಗ, ಪಂದ್ಯದ ಕೊನೇ ಓವರ್ ಆರಂಭವಾಗಿತ್ತು. ಬೀದಿ ತುಂಬ ಘನ ಮೌನ. ಮನೆಯೊಳಗೆ ಕಾಲಿಡುತ್ತಿದ್ದಂತೆ, ಹಾಹಾಕಾರ! ಜೊಗೀಂದರ್ ಶರ್ಮನ ಮೊದಲನೇ ಚೆಂಡಿನಲ್ಲೇ ಮಿಸ್ಬಿಹ್- ಉಲ್ - ಹಕ್ ಸಿಕ್ಸರ್ ಎತ್ತಿದ್ದ. ನನ್ನ ಸ್ನೇಹಿತರ ಮಗ ಕುಸಿದು ಕೂತ. ಮುಂದಿನ ಚೆಂಡನ್ನು ಹಕ್ 'ಅಶ್ರಫುಲ್' ಮಾಡಲು ಹೋಗಿ ಶ್ರೀಶಾಂತ್ಗೆ ಕ್ಯಾಚಿತ್ತಾಗ, ನಮ್ಮ ಹುಡುಗನ ಹುಚ್ಚು ನರ್ತನ ಸ್ಫೋಟಿಸಿತು! ನನಗೂ ಸಂತೋಷದ ಉನ್ಮಾದ! ಮನೆಯ ಹೊರಗಿಂದ ಪಟಾಕಿಗಳ ಕಿವಿಗಡಚಿಕ್ಕುವ ಸದ್ದು. ಅದರ ಹಿಂದೆಯೇ 'ಬೋಲೋ ಭಾರತ್ ಮಾತಾಕಿ ಜೈ' ಎಂಬ ಘೋಷಣೆಗಳ ಅಬ್ಬರ. ಯಾರದೀ ಅಬ್ಬರವೆಂದು ಹೊರಗೆ ಬಂದು ನೋಡಿದರೆ, ಆ ಬೀದಿಯ ಚಿನ್ನ - ಬೆಳ್ಳಿ ಅಂಗಡಿಗಳ ಕೆಲಸಗಾರರು ಘೋಷಣೆ ಕೂಗುತ್ತಾ ಹುಚ್ಚೆದ್ದು ಕುಣಿಯುತ್ತಿದ್ದಾರೆ!
ಈ ಹಿಂದೆ ಭಾರತ ಗೆದ್ದಾಗ ಪಟಾಕಿಗಳ ಸದ್ದು ಕೇಳುತ್ತಿತ್ತಷ್ಟೆ. 'ಭಾರತ ಮಾತಾಕಿ ಜೈ'ನಂತಹ ಘೋಷಣೆಗಳು ಕೇಳಿ ಬಂದಿರಲಿಲ್ಲ. ಇದೇನು ಹೀಗೆ ಎಂದು ಗೆಳೆಯರ ಮನೆಯವರನ್ನು ಕೇಳಿದೆ. ಅವರು ಮೆಲುದನಿಯಲ್ಲಿ, ಎದುರಿಗೆ ಮೂರ್‍ನಾಲ್ಕು ಮುಸ್ಲಿಮರ ಮನೆಯಿದೆ ಎಂದರು. ನನಗೆ ಗೆಲುವಿನ ಸಂತೋಷ, ಉನ್ಮಾದಗಳೆಲ್ಲ್ಲ ಇಳಿದು ಹೋದವು. ಸಂತೋಷವನ್ನೂ ವಿಕ್ಷಿಪ್ತಗೊಳಿಸುವ ವಾತಾವರಣ ಸೃಷ್ಟಿಯಾಗಿರುವ ಬೇಸರದಲ್ಲಿ ಕಾರ್ ಹತ್ತಿ ಶಿವಮೊಗ್ಗಕ್ಕೆ ಹೊರಟೆ.. ಶಿವಮೊಗ್ಗ ನಗರವನ್ನು ಪ್ರವೇಶಿಸುತ್ತಿದ್ದಂತೆ, ರಸ್ತೆಗಳಲ್ಲಿ ಪಟಾಕಿ, ಹೂ-ಕುಂಡಗಳ ಸಂಭ್ರಮ! ಗೋಪಿ ವೃತ್ತದಲ್ಲಿ ಪಡ್ಡೆ ಹುಡುಗರ ನರ್ತನ... ಮಾರನೆಯ ದಿನದ ಹಿಂದೂ ಮಹಾ ಸಭಾದ ಗಣಪತಿ ವಿಸರ್ಜನೆಯ ತಯ್ಯಾರಿ ಇಂದೇ ಆರಂಭವಾದಂತಿತ್ತು. ಸಂಘ ಪರಿವಾರದವರಿಂದ, ಇನ್ನರೆಡು ದಿನಗಳಲ್ಲಿ ನಡೆಯಬೇಕಿದ್ದ ನಗರ ಸಭೆ ಚುನಾವಣೆಗೆ ಈ ಗೆಲುವನ್ನು ಬಳಸಿಕೊಳ್ಳುವ ಪ್ರಯತ್ನವೋ ಎಂಬಂತೆ, ನರ್ತನ ಮಾಡುತ್ತಿದ್ದ ಹಲವಾರು ಹುಡುಗರ ತಲೆಗಳ ಸುತ್ತ ಕೇಸರಿ ಪಟ್ಟಿ ಎದ್ದು ಕಾಣುವಂತಿತ್ತು, ಮುಂದೆ ಮನೆ ಕಡೆ ಹೊರಟರೆ, ಕೇಸರಿ ಪಟ್ಟಿ ಕಟ್ಟಿಕೊಂಡ ಇನ್ನೊಂದು ಗುಂಪು ಜೈಕಾರ ಹಾಕುತ್ತಾ ಎದುರಾಯಿತು. ಅವರು 'ಭಾರತ್ ಮಾತಾಕಿ ಜೈ' ಎಂದಷ್ಟೇ ಕೂಗುತ್ತಿರಲಿಲ್ಲ. 'ಹಿಂದೂಸ್ತಾನ್ ಜಿಂದಾಬಾದ್, ಪಾಕಿಸ್ತಾನ್ ಮುರ್ದಾಬಾದ್' ಎಂದೂ ಕೂಗುತ್ತಿದ್ದರು! ನನಗೆ ಆಶ್ಚರ್ಯವೂ, ಜಿಗುಪ್ಸೆಯೂ ಒಟ್ಟಿಗೇ ಉಂಟಾದವು. ಇದೇನು ಕ್ರೀಡೆಯೋ, ಯುದ್ಧವೋ; ಅಂತಿಮ ಪಂದ್ಯ ಪಾಕಿಸ್ತಾನದ ವಿರುದ್ಧವಾಗಿರದಿದ್ದರೆ, ನಿಜವಾಗಿ ಇಷ್ಟೆಲ್ಲ ಬೀದಿ ಸಂಭ್ರಮ - ಘೋಷಣೆಗಳು ಇರುತ್ತಿದ್ದವೇ ಎಂದು ಯೋಚಿಸುತ್ತ ಖಿನ್ನನಾಗಿ ಮನೆ ಸೇರಿದೆ.
ಅಲ್ಲಿ ಅವಸರದಲ್ಲಿ ಟಿ.ವಿ. ಹಾಕಿದರೆ, ಪಾಕಿಸ್ತಾನದ ನಾಯಕ ಷೋಯಬ್ ಮಲ್ಲಿಕ್ ತನ್ನ ತಂಡ ಸೋತಿದ್ದಕ್ಕಾಗಿ ಇಡೀ ಜಗತ್ತಿನ ಮುಸ್ಲಿಮರ ಕ್ಷಮೆ ಕೋರುತ್ತಿದ್ದ ದೃಶ್ಯ ಪುನಃಪ್ರಸಾರವಾಗುತ್ತಿತ್ತು! ಮಲ್ಲಿಕ್ನ ಮುಟ್ಠಾಳತನ ನೋಡಿ ತಲೆ ತಿರುಗಿದಂತಾಯಿತು. ಸುಮ್ಮನೆ ಹೋಗಿ ಮಲಗಿಕೊಂಡೆ. ನಿದ್ದೆ ಹತ್ತಲಿಲ್ಲ. ಭಾರತದಲ್ಲಿನ ಕೋಮುವಾದಿ ರಾಜಕಾರಣವನ್ನು ನಾವು ಚರ್ಚಿಸಿದಾಗಲೆಲ್ಲ, ಖಂಡನೆಗೊಳಗಾಗುವುದು ಹಿಂದೂ ಕೋಮುವಾದವೇ. ಆದರೆ, ಈಗ ಕಾಣಬರುತ್ತಿರುವ ಹಿಂದೂ ಕೋಮುವಾದಕ್ಕೆ ಸ್ವತಂತ್ರ ಅಸ್ತಿತ್ವ ಇದೆಯೇ? ಶೋಯಬ್ ಪ್ರಕರಣ ಸ್ಪಷ್ಟವಾಗಿ ಸೂಚಿಸುತ್ತಿರುವಂತೆ, ಭಾರತದಲ್ಲಿನ ಕೋಮುವಾದವನ್ನು ಇಡೀ ಭಾರತೀಯ ಉಪಖಂಡದ ಕೋಮುವಾದದ ಭಾಗವಾಗಿಯೇ - ಇತ್ತೀಚಿನ ದಿನಗಳಲ್ಲಂತೂ, ಅಮೆರಿಕಾದ ಕ್ರಿಶ್ಚಿಯನ್ನರ ನವ ಸಂಪ್ರದಾಯವಾದವೂ (Neo conservatism) ಸೇರಿದಂತೆ, ಜಾಗತಿಕ ಕೋಮುವಾದದ ನೆಲೆಯಲ್ಲಿಯೇ - ಗ್ರಹಿಸಬೇಕೇ ಹೊರತು, ಬಿಡಿಯಾಗಿ ನೋಡುವಂತಿಲ್ಲವಾಗಿದೆ. ಅದು ನಮ್ಮನ್ನು ಈಗ ಕೆಲವರು ವಾದಿಸುತ್ತಿರುವಂತೆ, ಭಾರತದಲ್ಲಿ ಹಿಂದೂಗಳದ್ದು (ಸಾಮಾಜಿಕವಾಗಿ ಅಪಾಯಕಾರಿಯಾದ) ಕೋಮುವಾದವಾದರೆ, ಮುಸ್ಲಿಮರದ್ದು (ಅವರ ಧರ್ಮಕ್ಕಷ್ಟೇ ಸಂಬಂಧಪಟ್ಟ) ಮೂಲಭೂತವಾದವಷ್ಟೆ ಎಂಬ ಶುದ್ಧ ತರ್ಕದ ತಪ್ಪು ತೀರ್ಮಾನಗಳಿಗೆ ಒಯ್ಯುತ್ತದೆ.
ನಮ್ಮ ಬಹಳಷ್ಟು ಎಡಪಂಥೀಯರಿಗೆ, ವಾಸ್ತವಕ್ಕಿಂತ ತಮ್ಮ ಎಡಪಂಥೀಯತೆಯೇ ಮುಖ್ಯವಾಗಿ, ತಮ್ಮ ಶುದ್ಧ ತರ್ಕಾಚಾರಗಳಲ್ಲಿ ಮುಳುಗಿ ಹೋಗಿದ್ದಾರೆ. ಇದರಿಂದಾಗಿ ಅವರು ಜನ ಸಾಮಾನ್ಯರ ಬಹಳಷ್ಟು ಮಂದಿಯ ಕಣ್ಣಿನಲ್ಲಿ 'ಕಳ್ಳ'ರೂ, 'ಸುಳ್ಳ'ರೂ ಆಗಿ ಕಾಣತೊಡಗಿದ್ದಾರೆ. ಹಾಗಾಗಿಯೇ, ಆದ್ವಾನಿ ಮತ್ತು ಅವರ ಬಳಗ ತನ್ನ ಕೋಮುವಾದವನ್ನು ಸಮರ್ಥಿಸಿಕೊಳ್ಳಲು, 'ಖೋಟಾ ಸೆಕ್ಯುಲಿಸ್ಟರು' ಎಂಬ ಪದ ಪ್ರಯೋಗ ಮಾಡಿದಾಗಿನಿಂದ, ಅದು ಈ ದೇಶದ ರಾಜಕೀಯ ಚರ್ಚೆಯ ಬಹು ವಿಶ್ವಾಸಾರ್ಹ ಪದ ಪ್ರಯೋಗವಾಗಿ ಬಳಕೆಯಾಗುತ್ತಿದೆ. ನನ್ನ ಎಡಪಂಥೀಯ ಗೆಳೆಯರು ಒಪ್ಪಲಿ, ಬಿಡಲಿ; ಕೋಮುವಾದಿ ರಾಜಕಾರಣ ಭಾರತದ ರಾಜಕಾರಣದಲ್ಲಿ ಅಧಿಕೃತ ಸ್ಥಾನಮಾನ ಗಳಿಸಿಕೊಳ್ಳುತ್ತಿರುವ ಇತ್ತೀಚಿನ ದಿನಗಳಲ್ಲಿ ಎಚ್ಚೆತುಕೊಂಡಂತೆ ಅವರು, ತಾವು ಖೋಟಾ ಸೆಕ್ಯುಲರಿಸ್ಟರಲ್ಲವೆಂದು ಸಾಬೀತು ಮಾಡಲು ಪ್ರಜ್ಞಾಪೂರ್ವಕವಾದ ಪ್ರಾಮಾಣಿಕ ಹಾಗೂ ಗಂಭೀರ ಪ್ರಯತ್ನಗಳನ್ನಾರಂಭಿಸಿದ್ದಾರೆ! ಇದರಿಂದಲಾದರೂ ಕೋಮುವಾದ ಕುರಿತ ಚರ್ಚೆ ಒಂದು ಸಮತೋಲನಕ್ಕೆ ಬಂದು, ಕೋಮುವಾದಿ ವಿರೋಧಿ ರಾಜಕಾರಣಕ್ಕೆ ಇನ್ನಷ್ಟು ಬಲ ಬರಲಿ ಎಂದು ಆಶಿಸಬಹುದಾಗಿದೆ.
ಏಕೆಂದರೆ, ಇಂದು ಬಹು ಚರ್ಚಿತವಾಗುತ್ತಿರುವ, ಕೆಲವೆಡೆ ರಾಜಕೀಯ 'ಘರ್ಷಣೆ'ಗಳಿಗೆ ಕಾರಣವಾಗುತ್ತಿರುವ 'ರಾಮಸೇತು' ವಿವಾದ ಕೋಮುವಾದಿ ರಾಜಕಾರಣಕ್ಕೆ ಎಡೆ ಮಾಡಿಕೊಡುತ್ತಿರುವ ಪರಿಯನ್ನೇ ಗಮನಿಸಿ. ಇನ್ನೇನು ಭಾರತೀಯ ರಾಜಕಾರಣದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದೇನೆಂದುಕೊಳ್ಳುವ ಹೊತ್ತಿಗೆ ಅಧಿಕಾರ ಕಳೆದುಕೊಂಡ ದಿಗ್ಭ್ರಮೆಯಿಂದ ಈಗ ತಾನೇ ಹೊರಬಂದು, ಮತ್ತೆ 'ವಿಶ್ವಾಸಾರ್ಹತೆ' ಗಳಿಸಿಕೊಳ್ಳಲು ಭಾರತೀಯ ಜನತಾ ಪಕ್ಷ ಸಕಲ ಪ್ರಯತ್ನಗಳನ್ನೂ ಮಾಡುತ್ತಿದ್ದಾಗ, ಅದರ ನೆರವಿಗೆ ಬಂದಂತೆ ಕಾಂಗ್ರೆಸ್ ರಾಮಸೇತು ವಿವಾದದ ಬಗ್ಗೆ ಸುಪ್ರೀಂ ಕೋರ್ಟಿನಲ್ಲಿ ಸಂಪೂರ್ಣ ಅವಿವೇಕದ್ದು ಎನಿಸುವ ಅಫಿಡಿವಿಟ್ ಸಲ್ಲಿಸಿತು. ರಾಮಾಯಣಕ್ಕಾಗಲೀ, ರಾಮನಿಗಾಗಲೀ, ಐತಿಹಾಸಿಕ ಅಸ್ತಿತ್ವವಿಲ್ಲ ಎಂಬ ವಾದ 'ಶಾಸ್ತ್ರೀಯ' ಚರ್ಚೆಯ ವೇದಿಕೆಗಳಲ್ಲಿ ಸಂಗತವಾಗಬಹುದಾದರೂ, ಜನ ಸಾಮಾನ್ಯರ ಭಾವನಾತ್ಮಕ ನೆಲೆಯಲ್ಲಿ ಅದು ಋಣಾತ್ಮಕ ಪರಿಣಾಮಗಳನ್ನಷ್ಟೇ ಉಂಟುಮಾಡುವಂತಹುದು. ರಾಮಾಯಣ ಮಹಾಭಾರತಗಳು ಭಾರತದ ಸುಪ್ತ ಮನಸ್ಸನ್ನು ಹೊಕ್ಕು, ಅನೇಕ 'ಮೌಲ್ಯ'ಗಳನ್ನು ನಿರ್ಮಿಸಿದೆ. ಅವುಗಳನ್ನು ಪ್ರಶ್ನಿಸುವುದೂ ಸೇರಿದಂತೆ, ಅವುಗಳೊಡನೆ ಸಂವಾದಿಸುವಾಗ ತರ್ಕ ಶುದ್ಧತೆಯೊಂದೇ ಸಾಲದಾಗುತ್ತದೆ. ಲೋಹಿಯಾ ಹೇಳಿದಂತೆ, ರಾಮ - ಕೃಷ್ಣ - ಶಿವರು ಭಾರತೀಯ ಮನಸ್ಸಿನಲ್ಲಿ ಮತ ಧರ್ಮಗಳನ್ನು ಮೀರಿದ ಆಂತರಂಗಿಕ ಮೂರ್ತಿಗಳಾಗಿ ನಮ್ಮ ಸಂಸ್ಕೃತಿಯನ್ನು ಸೇರಿಹೋಗಿದ್ದಾರೆ.
ಕಾಂಗ್ರೆಸ್ ತನಗೆ ಗೊತ್ತಿಲ್ಲದೇ ಆದ ತಪ್ಪನ್ನು ಬೇಷರತ್ತಾಗಿ ಒಪ್ಪಿಕೊಂಡು, ಅಫಿಡವಿಟ್ಟನ್ನು ಹಿಂತೆಗೆದುಕೊಳ್ಳುವ ಮೂಲಕ ಸಂಘ ಪರಿವಾರದವರ ಆಟಾಟೋಪಕ್ಕೆ ಕಡಿವಾಣ ಹಾಕಿತಾದರೂ, ಕರುಣಾನಿಧಿಯವರು ರಾಮನ ಬಗ್ಗೆ 'ಆತ ಸೇತುವೆ ಕಟ್ಟಲು ಯಾವ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದ್ದ?' ಎಂಬ ಅಗ್ಗದ ಪ್ರಶ್ನೆಯನ್ನು ಕೇಳುತ್ತಾ; ಇದರಿಂದ ಪ್ರಚೋದಿತರಾದ ಸಂಘ ಪರಿವಾರಿಗಳನ್ನು, 'ರಾಮನೊಬ್ಬ ಕುಡುಕ' ಎಂದು ಹೇಳಿ ಕೆಣಕುತ್ತ, ಹಳೆಯ ದ್ರಾವಿಡ ಚಳುವಳಿಯ 'ರಾಮ ವಿರೋಧಿ' ಕಾರ್ಯಕ್ರಮಗಳ ದಿನಗಳಿಗೆ ಹಿಂದಿರುಗುವ ಪ್ರಯತ್ನ ಮಾಡಿದ್ದಾರೆ. ರಾಮನ ಗುಣಾವಗುಣಗಳ ಬಗ್ಗೆ ಕಾವ್ಯಾಧಾರಿತವಾಗಿಯೇ ಮಾತನಾಡ ಹೊರಟರೆ, ಕರುಣಾನಿಧಿಗಿಂತ ಕಟುವಾಗಿ ರಾಮನ ವಿರುದ್ಧ ಮಾತನಾಡಲು ಸಾಕಷ್ಟು ಪುರಾವೆಗಳು ಸಿಗುತ್ತವೆ. ಭಾರತೀಯ ಪರಂಪರೆ ಬಗ್ಗೆ ವಸ್ತುನಿಷ್ಠ ವಿಮರ್ಶೆ ಮಾಡಬಲ್ಲವರಾಗಿದ್ದ ನಮ್ಮ ಎ.ಎನ್. ಮೂರ್ತಿರಾಯರಂಥ ಸುಸಂಸ್ಕೃತರೇ ವಾಲ್ಮೀಕಿಯ ರಾಮನ ಬಗ್ಗೆ ಜಿಗುಪ್ಸೆ ಪಟ್ಟುಕೊಂಡು, ಭವಭೂತಿ ಸೃಷ್ಟಿಸಿದ ರಾಮನಿಲ್ಲದಿದ್ದರೆ ರಾಮ ನಮ್ಮ ನೆನಪಿಗೂ ಅರ್ಹನಾಗುತ್ತಿರಲಿಲ್ಲ ಎಂದಿದ್ದಾರೆಂದರೆ? ಆದರೆ ಕರುಣಾನಿಧಿ ಮಾತನಾಡುತ್ತಿರುವುದೇ ಬೇರೆ ನೆಲೆಯಲ್ಲಿ. ಆರ್ಯ - ದ್ರಾವಿಡ ಜನಾಂಗೀಯ ವೈಮನಸ್ಯದ ನೆನಪನ್ನು ಕೆಣಕುವ ಅಗ್ಗದ ರಾಜಕಾರಣದ ನೆಲೆಯಲ್ಲಿ.
ರಾಮನನ್ನು ಕುಡುಕನೆಂದು (ಕುಡುಕತನಕ್ಕಲ್ಲ್ಲದಿದ್ದರೂ, ಸುರಾಪಾನ ಹಾಗೂ ಗೋಮಾಂಸ ಭಕ್ಷಣೆಗೆ ಸಂಬಂಧಿಸಿದಂತೆ ವಾಲ್ಮೀಕಿ ರಾಮಾಯಣದಲ್ಲೇ ಸಾಕಷ್ಟು ಸಾಕ್ಷ್ಯಗಳಿವೆಯಾದರೂ) ಇಂದಿನ ನೈತಿಕ ನೆಲೆಯಲ್ಲಿ ರಾಮನನ್ನು ಮೌಲ್ಯೀಕರಿಸಲು ಹೊರಟಿರುವ; ಇತ್ತೀಚಿನವರೆಗೆ ಸಂಘ ಪರಿವಾರಿಗಳ ಜೊತೆಗೇ ಕುಳಿತು ಲಾಭಾಧಾರಿತ ರಾಜಕಾರಣ ಮಾಡಿದ ಕರುಣಾನಿಧಿಗೆ ಯಾವ ನೈತಿಕ ನೆಲೆ ಇದೆ? ಸರಳ ಜೀವಿಗಳೂ, ಜನಪರ ಹೋರಾಟಗಾರರೂ, ಪ್ರಜಾಪ್ರಭುತ್ವವಾದಿಗಳೂ ಆಗಿದ್ದ ಪೆರಿಯಾರರೋ, ಅಣ್ಣಾದುರೈಗಳೋ ಈ ಟೀಕೆಯ ಮಾತುಗಳನ್ನಾಡಿದ್ದರೆ, ಅದಕ್ಕೊಂದು ಪ್ರಸ್ತುತೆ, ಅರ್ಥ, ಸಾಂದರ್ಭಿಕತೆ ಇರುತ್ತಿತ್ತು, ಇತ್ತು ಕೂಡ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ, ನಿರ್ಲಜ್ಜ ಕುಟುಂಬ ರಾಜಕಾರಣ ಹಾಗೂ ಆ ಮೂಲಕ ಗಳಿಸಿರುವ ಅಪಾರ ಪ್ರಮಾಣದ ಆಸ್ತಿಯ ಅಡಿಗೆ ಸಿಕ್ಕಿಸಿ ಅಣಕಕ್ಕೀಡು ಮಾಡುತ್ತಿರುವ ಕರುಣಾನಿಧಿ ಈ ಮಾತುಗಳನ್ನು ಆಡಿದರೆ, ಅದು ನೈತಿಕ ದಿವಾಳಿತನದ ಪ್ರತೀಕ ಮಾತ್ರವಾದೀತು!
ಇಂತಹ ಸಮಯ ಸಾಧಕ ರಾಜಕಾರಣದಿಂದಾಗಿ, ಸಂಶೋಧಕರ, ವಿದ್ವಾಂಸರ, ತಂತ್ರಜ್ಞರ ನೆಲೆಯಲ್ಲಿ ತೀರ್ಮಾನವಾಗಬೇಕಾದ ವಿಷಯಗಳು ಅನಗತ್ಯವಾಗಿ ಬೀದಿ ಬದಿಯ ಜನರ ಬೇಜವಾಬ್ದಾರಿ ಚರ್ಚೆಗೆ, ಭಾವೋನ್ಮಾದಕ್ಕೆ ಕಾರಣವಾಗಿ ವಿಕಾರಗೊಳ್ಳುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಹದಿನೈದು ವರ್ಷಗಳ ಹಿಂದಿನ ರಥಯಾತ್ರೆಯ ಸಮಯದಲ್ಲಿ ಅದ್ವಾನಿ ಸೇರಿದಂತೆ ಅನೇಕ ಬಿ.ಜೆ.ಪಿ. ನಾಯಕರು ಕಿರೀಟ ಇಟ್ಟುಕೊಂಡು ಬಾಣ ಬಿಡುವ ದೃಶ್ಯ ನೋಡಿ ಜಿಗುಪ್ಸೆಗೊಂಡಿದ್ದ ನನಗೆ, ಮೊನ್ನೆ ಟಿ.ವಿ.ವಾಹಿನಿಯೊಂದು ರಾಮಸೇತು ವಿವಾದ ಕುರಿತ ಸುದ್ದಿ ಪ್ರಸಾರದ ಮಧ್ಯೆ ಸೋನಿಯಾ ಗಾಂಧಿಯವರೂ (ಬಹುಶಃ ರಾಮಲೀಲಾ ಸಂದರ್ಭದಲ್ಲಿ) ಕಿರೀಟ ಇಟ್ಟುಕೊಂಡು ಹಲ್ಕಿರಿಯುತ್ತಾ ಬಾಣ ಬಿಡುತ್ತಿರುವ ದೃಶ್ಯ ತೋರಿಸಿದಾಗ ಇನ್ನಷ್ಟು ಜಿಗುಪ್ಸೆಯಾಯಿತು. ರಾಮಾಯಣದ ನಾಟಕಗಳನ್ನು ನೋಡಿ ಪಟ್ಟ ಸಂತೋಷವೆಲ್ಲ, ಇಂತಹ ದೃಶ್ಯಗಳನ್ನು ನೋಡಿದಾಗ ಕದಡಿ ಹೋಗುತ್ತದೆ.
ರಾಮಾಯಣ ಒಂದು ಆದಿ ಹಾಡುಗಬ್ಬವಾಗಿದ್ದು, ವಾಲ್ಮೀಕಿ ಅದನ್ನು ಸಂಗ್ರಹಿಸಿ, ಸಂಪಾದಿಸಿ, ಕ್ರಿ.ಪೂ. 400ರಿಂದ 200ರ ಮಧ್ಯೆ 12 ಸಾವಿರ ಶ್ಲೋಕಗಳ ರೂಪದಲ್ಲಿ ರಚಿಸಿದನೆಂದು ಇತಿಹಾಸಕಾರರು ಹೇಳುತ್ತಾರೆ. ಆದರೆ, ವಾಲ್ಮೀಕಿ ರಾಮಾಯಣ ಕೂಡ ಕಾಲಾನುಕ್ರಮದಲ್ಲಿ ಪ್ರಕ್ಷಿಪ್ತಗೊಂಡು, ವಾಲ್ಮೀಕಿಯ ಸಾಹಿತ್ಯ ಶೈಲಿ ಹಾಗೂ ಕಥಾ ದೃಷ್ಟಿಗೆ ಹೊಂದದ ಬಾಲಕಾಂಡ ಹಾಗೂ ಉತ್ತರಕಾಂಡ ನಂತರ ಸೇರಿಕೊಂಡಿವೆ ಎಂಬ ಪ್ರತೀತಿಯೂ ಇದೆ. ಜೊತೆಯಲ್ಲೇ ಅನೇಕ ಭಾಷೆ ಹಾಗೂ ಸಂಸ್ಕೃತಿಗಳಲ್ಲಿ ರಾಮಾಯಾಣದ ಅನೇಕ ಆವೃತ್ತಿಗಳು ರಚಿತಗೊಳ್ಳುತ್ತಾ, ಮೌಖಿಕ ಪರಂಪರೆಗೆ ಸೇರಿಕೊಳ್ಳುತ್ತಾ ಬಂದಿವೆ. ಇವುಗಳಲ್ಲಿ ರಾಮ - ಸೀತೆ - ಲಕ್ಷಣ - ರಾವಣರ ಸಂಬಂಧಗಳು ಹಾಗೂ ಇವರ ಪಾತ್ರ ನಿರೂಪಣೆಗಳು ವೈವಿಧ್ಯಮಯ ನೆಲೆಯಲ್ಲಿ ಇವೆ. ಮುಖ್ಯವಾಗಿ ರಾಮಾಯಣ ಕಥೆಯ ಈ ಆವರ್ತನದ ಕೇಂದ್ರ ಸೀತೆಯಾಗಿದ್ದು, ರಾಮ - ರಾವಣ - ಲಕ್ಷಣರ ಪಾತ್ರಗಳ ಶೀಲ ಈ ಕೇಂದ್ರ ಪಾತ್ರದ ಸುತ್ತಲೇ ನಿರೂಪಣೆಗೊಳ್ಳುವುದನ್ನು ನಾವು ಈ ವಿವಿಧ ರಾಮಾಯಣಗಳಲ್ಲಿ ನೋಡಬಹುದು. ಇಂತಹ ಹಲವು ರಾಮಾಯಣಗಳಲ್ಲಿ ರಾಮ - ಲಕ್ಷಣ - ಸೀತೆಯರು ಸೋದರ - ಸೋದರಿಯರಾಗಿ, ಸೀತೆ ರಾವಣನ ಮಗಳಾಗಿ, ಲಕ್ಷಣ - ಸೀತೆ ಗಂಡ - ಹೆಂಡತಿಯಾಗಿ ನಿರೂಪಿತವಾಗಿದ್ದಾರೆಯಷ್ಟೇ ಅಲ್ಲ; ಲಂಕೆ ಪ್ರಚಲಿತ ನಂಬಿಕೆಗೆ ವಿರುದ್ಧವಾಗಿ, ಮಧ್ಯಭಾರತದಲ್ಲಿ ಸರೋವರಗಳಿಂದ ಆವೃತವಾಗಿದ್ದ ಗೊಂಡಸ್ತಾನವೇ ಆಗಿತ್ತು ಎಂದು ಬಲವಾಗಿ ಸೂಚಿಸುವ ವರ್ಣನೆಗಳೂ ಕಂಡುಬರುತ್ತವೆ.
ಸ್ವತಃ ವಾಲ್ಮೀಕಿ ರಾಮಾಯಣದಲ್ಲೇ ಅನೇಕ ಪ್ರಸಂಗಗಳಲ್ಲಿ - ನಿರ್ಣಾಯಕವಾಗಿ ಅಗ್ನಿ ಪ್ರವೇಶ ಪ್ರಸಂಗದಲ್ಲಿ- ಸೀತೆಯ ಬಗ್ಗೆ ಕಟು ನಿರ್ಲಕ್ಷದಿಂದಷ್ಟೇ ಅಲ್ಲ, ಇಂದಿನ ನೈತಿಕತೆಯ ನೆಲೆಯಲ್ಲೂ ಅಶ್ಲೀಲವೆನಿಸುವಷ್ಟು ಅಸಭ್ಯಕರವಾದ ಮಾತುಗಳನ್ನಾಡಿ, ತನ್ನ ವೈಯುಕ್ತಿಕ 'ಮರ್ಯಾದೆ'ಯ ಮುಂದೆ, ದಾಂಪತ್ಯವೂ ಸೇರಿದಂತೆ ಮಿಕ್ಕೆಲ್ಲ ಮೌಲ್ಯಗಳೂ ತಿರಸ್ಕಾರ್ಹವೆಂಬಂತೆ ವರ್ತಿಸುವ ರಾಮ ಚಿತ್ರಿತನಾಗಿದ್ದಾನೆ. ಹಾಗೆ ನೋಡಿದರೆ, ಹದಿನೈದು - ಹದಿನಾರನೇ ಶತಮಾನದ ತುಳಸಿ ರಾಮಾಯಣದ ಹೊತ್ತಿಗಷ್ಟೇ ಇತಿಹಾಸದ ಏಳುಬೀಳುಗಳಲ್ಲಿ ರಾಮನ ವೈದಿಕೀಕರಣ ಸಂಪೂರ್ಣವಾಗಿ; ರಾಮಾಯಣ ಸಂಪೂರ್ಣ ರಾಮಮಯವಾಗಿ, ದೈವತ್ವ ಆರೋಪಿಸಿಕೊಂಡ 'ಮರ್ಯಾದಾ ಪುರುಷೋತ್ತಮ' ಸೃಷ್ಟಿಯಾದದ್ದು. ಹೀಗಾಗಿ ರಾಮಾಯಣವು ವಿವಿಧ ಆವೃತ್ತಿಗಳ ಮೂಲಕ ತನ್ನ ಐತಿಹಾಸಿಕತೆಯನ್ನು ಕಳೆದುಕೊಂಡು ಪುರಾಣವಾಗಿ ಮಾರ್ಪಾಡಾಗಿ, ಇತಿಹಾಸದ ಸಂಸ್ಕೃತೀಕರಣದ ಪ್ರಕ್ರಿಯೆಯ ಮೂಲಕ ಒಂದು ಧಾರ್ಮಿಕ ಗ್ರಂಥದ ಮಾನ್ಯತೆ ಪಡೆದುಕೊಂಡಿದೆ. ಇದರ ಮುಂದುವರಿಕೆಯಾಗಿಯೇ, ವಾಲ್ಮೀಕಿ ರಾಮಾಯಣದ ಆಧುನಿಕ ಭಾಷಾನುವಾದಗಳೂ ತುಳಸೀ ರಾಮಾಯಣದ ಹಾದಿ ಹಿಡಿದು (ಉದಾಹರಣೆಗೆ ಕನ್ನಡದಲ್ಲಿ ಡಿವಿಜಿ, ರಂಗನಾಥ ಶರ್ಮ, ಶ್ರೀನಿವಾಸ ಅಯ್ಯಂಗಾರ್ರ ಅನುವಾದಗಳು) ರಾಮನ ಮರ್ಯಾದೆಯನ್ನು ಕಾಪಾಡಲು ಹೋಗಿ, ಅನುವಾದ ಮರ್ಯಾದೆಯನ್ನೇ ಉಲ್ಲಂಘಿಸಿವೆ!
ರಾಮನನ್ನು ಈ ದೇಶದ ಸಾಂಸ್ಕೃತಿಕ ನಾಯಕ ಎಂದೆಲ್ಲ ಬಿಂಬಿಸಿ ವೋಟಿನ ರಾಜಕಾರಣ ಮಾಡುತ್ತಿರುವ ಸಂಘ ಪರಿವಾರಕ್ಕೆ ರಾಮಾಯಣದ ಈ ಚರಿತ್ರೆಯೇ ಗೊತ್ತಿದ್ದಂತಿಲ್ಲ. ಹಾಗಾಗಿಯೇ ಅದೀಗ, ತಾನೇ ಆರಂಭಿಸಿದ 'ರಾಮಸೇತು' ಯೋಜನೆಯನ್ನು ವಿರೋಧಿಸುವ ವಿತಂಡವಾದ ಮಂಡಿಸುತ್ತಿದೆ. ರಾಮಾಯಣ ಭಾರತೀಯ ಮನಸ್ಸಿನ ಅವಿಭಾಜ್ಯ ಅಂಗವಾಗಿದೆ ನಿಜ; ಆದರೆ ಈಗಾಗಲೇ ವಿವರಿಸಿರುವಂತೆ ಏಕ ರೂಪಿಯಾಗಲ್ಲ. ಭಾರತದಲ್ಲಷ್ಟೇ ಅಲ್ಲ, ದಕ್ಷಿಣ ಏಷ್ಯಾದ ತುಂಬಾ ಪ್ರಚಲಿತವಿರುವ ರಾಮಾಯಣ ಅಭಿವ್ಯಕ್ತಿಗೊಂಡಿರುವುದು ನೂರಾರು ಸಾಂಸ್ಕೃತಿಕ, ಧಾರ್ಮಿಕ ಆವೃತ್ತಿಗಳಲ್ಲಿ. ಸಂಘ ಪರಿವಾರ ಇಂದು ತನ್ನ ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ಭಾರತದ ಬಹುಮುಖಿ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತಿದ್ದ ಈ ನೂರಾರು ಆವೃತ್ತಿಗಳನ್ನು ಏಕಮುಖಿ ಸಂಸ್ಕೃತಿ ಮಾದರಿಗೆ ಅಳವಡಿಸಿದ ಪಠ್ಯದಂತಿರುವ ತುಳಸೀ ರಾಮಾಯಣವನ್ನು. ಹಾಗಾಗಿ ಕಾಲಾನುಕ್ರಮದಲ್ಲಿ ಕೆಲಸ ಮಾಡಿದ ಏಕಮುಖಿ ಸಂಸ್ಕೃತಿ ಸ್ಥಾಪನೆಯ ರಾಜಕೀಯ ಹುನ್ನಾರಗಳೇ ಇಂದು ಸಂಘ ಪರಿವಾರದವರ ಪಾಲಿಗೆ ಪವಿತ್ರ ರಾಜಕಾರಣವಾಗಿ ಮಾರ್ಪಟ್ಟಿದೆ.
ಈ ಎಲ್ಲದರ ಹಿನ್ನೆಲೆಯಲ್ಲಿ ಇಂದು 'ರಾಮಸೇತು' ಬಗ್ಗೆ ಚರ್ಚಿಸುವುದೆಂದರೆ, ಸಂಸ್ಕೃತೀಕರಣವೆಂಬ ಧಾರ್ಮಿಕ ರಾಜಕಾರಣದ ಬಗ್ಗೆ ಚರ್ಚಿಸುವುದೇ ಆಗಿದೆ, ನಿಜ. ಆದರೆ ಈ ಚರ್ಚೆಯನ್ನು ಸಾಂಸ್ಕೃತಿಕ ಸಮೀಪೀಕರಣಕ್ಕಾಗಿ (ಉದಾ: ಕುವೆಂಪು ಅವರ ಶ್ರೀರಾಮಾಯಣ ದರ್ಶನ) ಬಳಸದೆ, ಎರಡೂ ಪಕ್ಷಗಳು ತತ್ಕಾಲೀನ ರಾಜಕೀಯ ಲಾಭಕ್ಕಾಗಿ ಬಳಸುತ್ತಿರುವುದನ್ನು ನೋಡಿದರೆ, ನಾವಿನ್ನೂ ಮಾನಸಿಕವಾಗಿ ಪುರಾಣ ಕಾಲದಿಂದೀಚೆಗೆ ಬಂದಿಲ್ಲ ಎನಿಸುತ್ತದೆ. ವ್ಯಾವಹಾರಿಕವಾಗಿ ರಾಮಸೇತು ಯೋಜನೆ ದೇಶಕ್ಕೆ ಪ್ರಯೋಜನಕಾರಿ ಎನಿಸಿದರೆ, ಜನಸಾಮಾನ್ಯರ ಭಾವನಾತ್ಮಕತೆಯನ್ನು ವೃಥಾ ಕೆರಳಿಸದೆ ಹಾಗೂ ಸಾಗರದ ಜೀವ - ಪರಿಸರವನ್ನು ಭಂಗಗೊಳಿಸದೆ ಅದನ್ನು ಕೈಗೆತ್ತಿಕೊಳ್ಳುವುದು ಒಳ್ಳೆಯದು. ಏಕೆಂದರೆ, ರಾಮಸೇತು ಎಂದು ನಂಬಲಾಗಿರುವ ಸಂರಚನೆ ಮಾನವ ನಿರ್ಮಿತವಾಗಿರದೆ, ಪ್ರಾಕೃತಿಕವಾಗಿ ಸೃಷ್ಟಿಯಾಗಿರುವ ಮರಳು ದಿಬ್ಬಗಳಾಗಿವೆ ಎಂಬುದನ್ನು, ಈಗಾಗಲೇ ರಾಮಸೇತುವಾದಿಗಳ ಸರ್ಕಾರವೇ ಪ್ರಾಯೋಜಸಿದ ವೈಜ್ಞಾನಿಕ ಅಧ್ಯಯನಗಳು ಹೇಳುತ್ತಿವೆ!
ಆದರೆ ನಮ್ಮ ರಾಜಕಾರಣ ವಿಜ್ಞಾನ, ವಿಚಾರ, ನೈತಿಕತೆ ಯಾವುದನ್ನೂ ಲೆಕ್ಕಿಸದೆ, ನಿರ್ಭಿಡವಾಗಿ ಹಾಗೂ ನಗ್ನವಾಗಿ ಅವಕಾಶವಾದಿಯಾಗತೊಡಗಿದೆ. ಕರ್ನಾಟಕದ ರಾಜಕಾರಣವನ್ನೇ ನೋಡಿ. ಅಕ್ಟೋಬರ್ 2ರಂದು ಅಧಿಕಾರ ಖಚಿತ ಎಂದೇ ಕೊನೇ ದಿನದವರೆಗೂ ಹೇಳಿಕೊಂಡು ಬರುತ್ತಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿಯವರು, ಆ ದಿನ ಹತ್ತಿರವಾಗುತ್ತಿದ್ದಂತೆ ಅಂದೇ ಹಸ್ತಾಂತರವಾಗಬೇಕೆಂಬ ಕಾನೂನಿಲ್ಲ ಎನ್ನತೊಡಗಿದರು. ದೋಸ್ತಿ ಪಕ್ಷದ ಸಚಿವರು ರಾಜೀನಾಮೆ ನೀಡಿದೊಡನೆ ಜನತೆಗಾಗಿ ತಾನು ವಚನ ಭ್ರಷ್ಟನಾಗಲೂ ಸಿದ್ಧ ಎನ್ನತೊಡಗಿದ್ದಾರೆ... ಕನಾಟಕದ ಬಹುಪಾಲು ಜನ - ಅವರೆಲ್ಲರೂ ಬಿಜೆಪಿ ಪರವಿಲ್ಲದಿದ್ದರೂ - ಅಧಿಕಾರ ಹಸ್ತಾಂತರ ಮಾಡುವುದು ಜೆ.ಡಿ.(ಎಸ್)ನ ನೈತಿಕ ಜವಾಬ್ದಾರಿ ಎಂದು ಹಲವು ವೇದಿಕೆಗಳ ಮೂಲಕ ಹೇಳುತ್ತಿದ್ದರೆ, ಇವರು ಅದೇ ಜನತೆಯ ಹೆಸರಲ್ಲಿ ವಚನ ಭ್ರಷ್ಟತೆಯನ್ನು ಒಂದು ಆದರ್ಶದ ವಿಷಯವನ್ನಾಗಿ ಮಾಡಲು ವೀರಾವೇಶದಿಂದ ಹೊರಟಿದ್ದಾರೆ! ನೈತಿಕತೆಎನ್ನುವುದು ಇದಕ್ಕಿಂತ ವಿಕ್ಷಿಪ್ತಗೊಳ್ಳಲಾರದು. ವಿನಾಶ ಕಾಲೇ ವಿಪರೀತ ಬುದ್ಧಿ!
ತನ್ನ ನಾಯಕತ್ವದಲ್ಲಷ್ಟೇ ಕರ್ನಾಟಕ ಅಭಿವೃದ್ಧಿ ಕಂಡಿತೆಂಬ ಭ್ರಮೆಯಲ್ಲಿ ಕುಮಾರಸ್ವಾಮಿ ತಮ್ಮನ್ನು ತಾನೇ ಅಟ್ಟಕ್ಕೇರಿಸಿಕೊಂಡು ಜನತೆಯ ಕಣ್ಣಲ್ಲಿ 'ಖಳ'ರೆನ್ನಿಸಿಕೊಳ್ಳುತ್ತಿದ್ದಾರೆ. ಹಾಗೇ, ಐವ್ವತ್ತು ವರ್ಷಗಳ ಕರ್ನಾಟಕ ರಾಜಕಾರಣದಲ್ಲಿ ಐದು ವರ್ಷಗಳ ರಾಜಕೀಯ ಅನುಭವವೂ ಇಲ್ಲದ ಇವರು ರಾಜ್ಯದ ಈವೆರೆಗಿನ ಅಭಿವೃದ್ಧಿಯಲ್ಲಿ ತಮ್ಮ ಸರ್ಕಾರದ 20 ತಿಂಗಳುಗಳ ಅವಧಿಯ ಪಾಲು ತೀರಾ ನಗಣ್ಯ ಎಂಬುದನ್ನು ಅರಿಯದೆ ಹಾಗೂ ಸಮ್ಮಿಶ್ರ ಸರ್ಕಾರದ ಧರ್ಮವನ್ನೇ ಮರೆತು; ಈ ಸರ್ಕಾರ ಏನಾದರೂ ಗಣನೀಯ ಸಾಧನೆ ಮಾಡಿದ್ದರೆ, ಅದಕ್ಕೆಲ್ಲ ತಾನೇ ಕಾರಣನೆಂದು ಹೇಳಿಕೊಳ್ಳುವ ಮೂಲಕ ಆತ್ಮಘಾತುಕ ರಾಜಕಾರಣಕ್ಕೂ ಇಳಿದಿದ್ದಾರೆ! ಹಾಗೆ ನೋಡಿದರೆ, ಇವರ ಸಚಿವ ಸಂಪುಟ ಬಹುಶಃ ಕರ್ನಾಟಕ ಕಂಡ ಅತ್ಯಂತ ಕಳಪೆ, ಅದಕ್ಷ ಹಾಗೂ ಭ್ರಷ್ಟ ಸಂಪುಟವಾಗಿದೆ. ಶೀಲವೇ ಇಲ್ಲದ ಪ್ರಗತಿಯನ್ನು ಪ್ರಗತಿಯೆಂದು ಕರೆಯಲಾದೀತೆ?
ದುಃಖದ ಸಂಗತಿಯೆಂದರೆ, ಜೆ.ಡಿ.(ಎಸ್) ಪಕ್ಷದಲ್ಲಿ ಅದರ ನಾಯಕತ್ವಕ್ಕೆ ನೀವು ಮಾಡುತ್ತಿರುವುದು ತಪ್ಪು, ದ್ರೋಹ, ಅನೈತಿಕ ಹಾಗೂ ಜನ ಇದನ್ನು ಒಪ್ಪುವುದಿಲ್ಲ ಎಂದು ಹೇಳುವವರು ಒಬ್ಬರೂ ಇಲ್ಲವಾದಂತಾಗಿರುವುದು, ಹಾಗಾಗಿಯೇ, ಈಗ ಅದೊಂದು ನೈತಿಕವಾಗಿ ದಿವಾಳಿ ಎದ್ದ ಪಕ್ಷ ಎನಿಸಿಕೊಂಡಿರುವುದು. ಅದರ ವರಿಷ್ಠ ನಾಯಕ ದೇವೇಗೌಡರ ಕಪಟ ನಾಟಕ ಸೂತ್ರಧಾರತ್ವದ ಬಗ್ಗೆ ಹೆಚ್ಚಿಗೆ ಹೇಳುವ ಅಗತ್ಯವಿಲ್ಲ. ಹೇಳಿದಷ್ಟೂ, ಹೇಳಿದವರ ನಾಲಗೆ ಮಲಿನಗೊಳ್ಳುವಷ್ಟು ಅವರು ಅಂಡ - ಭಂಡ ರಾಜಕಾರಣಕ್ಕೆ ಇನ್ನೊಂದು ಹೆಸರಾಗಿದ್ದಾರೆ. (ಬಹುಶಃ ಇದೆಲ್ಲದರ 'ತಯ್ಯಾರಿ'ಗಾಗಿಯೇ ಅವರು ಆಗಾಗ್ಗೆ ತಮಿಳ್ನಾಡಿನ ನವಗ್ರಹ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆಂದು ಕಾಣುತ್ತದೆ!) ಆದರೆ ಎಂ.ಪಿ.ಪ್ರಕಾಶ್, ಡಿ.ಮಂಜುನಾಥ್ರಂತಹ ಹಿರಿಯ ನಾಯಕರ ಸ್ಥಿತಿ ನೋಡಿ. ಬಿಜೆಪಿಯೊಂದಿಗೆ ಅಧಿಕಾರ ಹಂಚಿಕೊಂಡಾಗ, ಆ ಪಕ್ಷವನ್ನು ಕೋಮುವಾದಿ ಎಂದು ಕರೆಯಲಾಗದು ಎಂದು ತಮ್ಮ ಅಪಾರ ರಾಜಕೀಯ ಅನುಭವದ ಆಧಾರದ ಮೇಲೆ ತೀರ್ಪು ನೀಡಿದ್ದ ಪ್ರಕಾಶರು ಈಗ, ಬಿಜೆಪಿ ಹಿಂಸೆ ಹರಡುವ ಪಕ್ಷ ಎಂದು ಆರೋಪಿಸುತ್ತಿದ್ದಾರೆ. ಇದು ಅಪ್ಪಟ ತಲೆಹಿಡುಕ ರಾಜಕಾರಣವಲ್ಲದೆ ಮತ್ತೇನಲ್ಲ. ಇನ್ನು ಮುದಿ ಮಂಜುನಾಥರೋ, ಬಹುಕಾಲ ಸಚಿವ ಸಂಪುಟದಿಂದ ಹೊರಗಿದ್ದು ಆರ್ಥಿಕವಾಗಿ ಹೈರಾಣಾಗಿ, ಆದಷ್ಟು ಬೇಗ ಅಧಿಕಾರ ಸ್ಥಾನ ಪಡೆಯುವ ತರಾತುರಿಯಲ್ಲಿರುವ ಕಾರಣ, ಮೌನವಾಗಿರುವುದು ಲೇಸೆಂದು ಬಗೆದಿದ್ದಾರೆ ಎಂದೆನಿಸುತ್ತದೆ!
ಇನ್ನು ಅಸಂಬದ್ಧವನ್ನೇ ವ್ಯಾಕರಣಬದ್ಧವಾಗಿ ಮಾತನಾಡಿ ಅದಕ್ಕೆ ದೇವೇಗೌಡರಂತಹ ರಾಜಕೀಯ ಪಂಡಿತರಿಂದ ಮಾನ್ಯತೆ ದೊರಕಿಸಿಕೊಟ್ಟಿರುವ ವೈ.ಎಸ್.ವಿ.ದತ್ತ ಎಂಬ 'ಭಾಷಾ ತಜ್ಞ', ಬಿಜೆಪಿಯೊಂದಿಗೆ ಮೈತ್ರಿ ಮುರಿದಿಕೊಳ್ಳುವ ಮೂಲಕ ತಮ್ಮ ಪಕ್ಷ ಪಾಪ ಪರಿಹಾರ ಮಾಡಿಕೊಳ್ಳುತ್ತಿದೆ ಎಂದಿದ್ದಾರೆ. ಅಧಿಕಾರ ಹಸ್ತಾಂತರದ ಕೊನೆ ದಿನದವರೆಗೆ ಪಾಪವೆನಿಸದಿದ್ದದ್ದು, ಈಗ ಪಾಪವೆನ್ನಿಸತೊಡಗಿದ್ದರೆ ಇವರ 'ಪಾಪ ಪ್ರಜ್ಞೆ' ಎಷ್ಟು ಕೊಳೆತು ಹೋಗಿರಬೇಕು! ಕುಮಾರಸ್ವಾಮಿಯವರಲ್ಲಿ, ತಮ್ಮ ಉಪಮುಖ್ಯಮಂತ್ರಿಯನ್ನು ತಮ್ಮ ಪಕ್ಷದವರೇ ಆದ ಸಚಿವರೊಬ್ಬರು ತಮ್ಮೆದುರಿನಲ್ಲೇ ವಿಧಾನ ಸಭೆಯಲ್ಲಿ ಅಸಮರ್ಥ, ಮುಖ್ಯಮಂತ್ರಿಯಾಗಲು ಯೋಗ್ಯರಲ್ಲ ಎಂದಾಗ ಇಲ್ಲದೇ ಹೋದ 'ರಾಜಕೀಯ ಮರ್ಯಾದೆ'ಯ ಪ್ರಜ್ಞೆ ಬಳ್ಳಾರಿಯಲ್ಲಿ ಬಿಜೆಪಿ ಸಚಿವರೊಬ್ಬರು ತಮ್ಮ ಮೇಲೆ ಕೊಲೆ ಆರೋಪ (ಅದನ್ನವರು ಹಿಂತೆಗೆದುಕೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೇಲೂ) ಮಾಡಿದೊಡನೆ ಜಾಗ್ರತವಾಗುತ್ತದೆ! ಜನಾರ್ದನ ರೆಡ್ಡಿಯ 150 ಕೋಟಿ ರೂಪಾಯಿಗಳ ಲಂಚ ಆರೋಪ ಕಾಡತೊಡಗುತ್ತದೆ! ಕಳ್ಳನಿಗೊಂದು ಪಿಳ್ಳೆ ನೆವ ಎಂಬಂತೆ, ಇದು ಅಪ್ಪ - ಮಕ್ಕಳಿಬ್ಬರಿಗೂ ಅಧಿಕಾರ ಹಸ್ತಾಂತರದ ಬಗ್ಗೆ ಕೊನೇ ನಿಮಿಷದಲ್ಲಿ ತರಲೆ ತೆಗೆಯಲು ಕಾರಣವಾಗುತ್ತದೆ. ಆಟದ ನಿಯಮಗಳ ಬಗೆಗೆ ಗೌರವವೇ ಇಲ್ಲದೆ, ತನ್ನ ಅನುಕೂಲಕ್ಕೆ ತಕ್ಕಂತೆ ಅವನ್ನು ಬದಲಾಯಿಸಿಕೊಂಡು 'ಆಟ'ವಾಡಲೆಣಿಸುವ ಭಂಡರ ರಾಜಕಾರಣವಿದು. ಕರ್ನಾಟಕದ ರಾಜಕಾರಣ ಹಿಂದೆಂದೂ ಇಷ್ಟು ಅಶ್ಲೀಲವಾಗಿರಲಿಕ್ಕಿಲ್ಲ.
ಇದಕ್ಕೆ ಎಲ್ಲ ಪಕ್ಷಗಳ ಕೊಡುಗೆ ಇದೆ ಎಂಬುದೇ ಈ ಸಂದರ್ಭದ ನಿಜವಾದ ದುರಂತ. ಬಿಜೆಪಿಯಂತೂ ತನ್ನ ಅಧಿಕಾರದ ಹಪಾಹಪಿಯಲ್ಲಿ, ಜೆ.ಡಿ.(ಎಸ್) ತಾನು ಅಧಿಕಾರ ಹಂಚಿಕೊಂಡಿದ್ದ ಕಾಂಗ್ರೆಸ್ಸಿನ ಮುಖ್ಯಮಂತ್ರಿಯನ್ನು ಆಟ ಆಡಿಸುತ್ತಿದ್ದ ಪರಿ ಹಾಗೂ ಅಂದಿನ ಉಪ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ತಹಬಂದಿಗೆ ತರಲು ತನ್ನ ಮೊದಲ ಮೈತ್ರಿಯನ್ನು ಮುರಿದುಕೊಂಡ ರೀತಿಯನ್ನು ಗಮನಿಸಿಯೂ, ಆ ಪಕ್ಷದೊಂದಿಗೆ ಅದರ ಷರತ್ತುಗಳ ಮೇಲೇ ದೋಸ್ತಿ ಮಾಡಿಕೊಂಡಿತು. ಅತಿ ದೊಡ್ಡ ಶಾಸಕಾಂಗ ಪಕ್ಷವನ್ನು ಹೊಂದಿದ್ದೂ ಸರ್ಕಾರದಲ್ಲಿ ಕಿರಿಯ ಪಾಲುದಾರನಾಗಿ ಸೇರಿಕೊಂಡಿತು. ಇದೆಲ್ಲದಕ್ಕೆ ಹುಂಬತನವಷ್ಟೇ ಕಾರಣವಲ್ಲ. ಅದು ಅವಕಾಶವಾದಿ ರಾಜಕಾರಣ ಕೂಡಾ. ಅದರ ಫಲವನ್ನು ಈಗ ಬಿಜೆಪಿ ಅನುಭವಿಸುತ್ತಿದೆ. ಹಾಗೇ, ಕಳೆದ ವಿಧಾನ ಸಭಾ ಚುನಾವಣೆಗಳಲ್ಲಿ ಹೀನಾಯ ಸೋಲು ಅನುಭವಿಸಿ ಜನತೆಯಿಂದ ತಿರಸ್ಕೃತವಾದ ಕಾಂಗ್ರೆಸ್, ವಿರೋಧ ಪಕ್ಷವಾಗಿ ಕೂರುವ ರಾಜಕೀಯ ವಿವೇಕವನ್ನಾಗಲೀ, ಮರ್ಯಾದೆಯನ್ನಾಗಲೀ ತೋರಲಿಲ್ಲ. ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವ ನೆಪದಲ್ಲಿ ಅದು ಜೆ.ಡಿ.(ಎಸ್)ನೊಂದಿಗೆ ಮೈತ್ರಿ ಮಾಡಿಕೊಂಡು ಆತ್ಮ ಗೌರವವೇ ಇಲ್ಲದಂತಹ ಅತ್ಯಂತ ಅಪಮಾನಕಾರಿ ರೀತಿಯಲ್ಲಿ ಅಧಿಕಾರ ನಡೆಸಿ, ತನ್ನ ಅಳಿದುಳಿದಿದ್ದ ವಿಶ್ವಾಸಾರ್ಹತೆಯನ್ನೂ ಕಳೆದುಕೊಂಡಿತು. ಆ ಮೂಲಕ ಕರ್ನಾಟಕದಲ್ಲಿ ಸಾಮಂತಶಾಹಿ ಕುಟುಂಬ ರಾಜಕಾರಣ ಹಾಗೂ ಸಂಕುಚಿತ ಕೋಮುವಾದಿ ರಾಜಕಾರಣಗಳಿಗೆ ಪರ್ಯಾಯವೇ ಇಲ್ಲದಂತೆ ಮಾಡಿದೆ.
ಇದೆಲ್ಲದರ ಹೊಣೆಯನ್ನು ಸಿದ್ಧರಾಮಯ್ಯನವರೇ ಹೊರಬೇಕಿದೆ. ಅವರು ತಮ್ಮ ಆಲಸಿ, ಬೇಜವಾಬ್ದಾರಿ ಹಾಗೂ ಸುಲಭ ರಾಜಕಾರಣದ ಮೂಲಕ ಕರ್ನಾಟಕದ ರಾಜಕೀಯ ಇತಿಹಾಸ ತಮಗೆ ನೀಡಿದ ಪಾತ್ರವನ್ನು ಧೈರ್ಯದಿಂದ, ವಿವೇಕದಿಂದ ನಿರ್ವಹಿಸದೇ ಹೋಗಿ ಇಂದಿನ ಈ ರಾಜಕೀಯ ದುಃಸ್ಥಿತಿಗೆ ಕಾರಣರಾಗಿದ್ದಾರೆ. ಹಾಗಾಗಿಯೇ ಇಂದು ರಾಜಕೀಯವಾಗಿ ಹೆಚ್ಚು ನಷ್ಟಕ್ಕೊಳಗಾಗಿರುವವರು ಹಾಗೂ ಹೆಚ್ಚು ಅನಾಥರಾಗಿರುವವರು ಅವರೇ ಆಗಿದ್ದಾರೆ. ಇದೆಲ್ಲದರ ಫಲವೆಂದರೆ, ಕರ್ನಾಟಕದ ಇಂದಿನ ಇಡೀ ರಾಜಕಾರಣ ಬಿಜೆಪಿ ಕೇಂದ್ರಿತವಾಗುತ್ತಿದ್ದು, ಅದರ ಲಾಭವನ್ನು ಮುಂದಿನ ದಿನಗಳಲ್ಲಿ ಬಿಜೆಪಿಯೇ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ದುರದೃಷ್ಟಕರ.
* * *
ಈ ಬರಹವನ್ನು ಬರೆದು ಮುಗಿಸುವ ಹೊತ್ತಿಗೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ರಾಜ್ಯಪಾಲರು ಶಿಫಾರಸ್ ಮಾಡಿರುವ ಸುದ್ದಿ ಬಂದಿದೆ. ಇದಕ್ಕೆ ಮುನ್ನ ಸೃಷ್ಟಿಯಾಗಿದ್ದ ಗೊಂದಲದ ಹಿನ್ನೆಲೆಯಲ್ಲಿ ಸದ್ಯಕ್ಕೆ ರಾಜ್ಯಪಾಲರಿಗೆ ಬಹುಶಃ ಇದನ್ನು ಬಿಟ್ಟು ಬೇರೆ ಪರ್ಯಾಯವಿರಲಿಲ್ಲವೇನೋ! ಜೊತೆಗೆ, ರಾಜ್ಯಪಾಲರು ತಮ್ಮ ಈ ನಿರ್ಧಾರದ ಮೂಲಕ ಕರ್ನಾಟಕದ ರಾಜಕಾರಣ ಈವರೆಗೆ ಕಂಡುದದನ್ನು ಮೀರಿಸುವಂತಹ ಅಸಹ್ಯಕರ ಹಂತ ಮುಟ್ಟುವುದನ್ನು ತಪ್ಪಿಸಿದ್ದಾರೆಂದು ಎಂದು ಕಾಣುತ್ತದೆ. ಏಕೆಂದರೆ, ಜೆ.ಡಿ.(ಎಸ್) ಹಾಗೂ ಬಿಜೆಪಿ ಪಕ್ಷಗಳ ಮುಖಂಡರಿಬ್ಬರೂ ಒಂದೆರಡು ದಿನಗಳಿಂದ ಪರಸ್ಪರರ ವಿರುದ್ಧ ಮಾಡಿದ್ದ ವಾಂತಿಗಳನ್ನು ತಾವೇ ವಾಪಸ್ ಬಾಚಿ ತಿನ್ನುವ ಕೆಲಸಕ್ಕೆ ಸಿದ್ಧವಾಗುತ್ತಿದ್ದ ಸುದ್ದಿಗಳು ಬಂದಿದ್ದವು. ಬಹುಶಃ ಕುಮಾರ ಸ್ವಾಮಿಯವರ ವಿರುದ್ಧವಿರುವ 150 ಕೋಟಿ ರೂಪಾಯಿಗಳ ಗಣಿ ಲಂಚ ಹಗರಣ ಸರ್ವೋನ್ನತ ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿರುವ ಆತಂಕದ ಹಿನ್ನೆಲೆಯಲ್ಲಿ, ಬಿಜೆಪಿಯನ್ನು ಬೆದರಿಸಿ ಮಣಿಸುವ ತನ್ನ ಕೊನೆಯ ಪ್ರಯತ್ನವೂ ವಿಫಲವಾದ ನಂತರ, ಸ್ವತಃ ಜೆ.ಡಿ.(ಎಸ್) ತಾನೇ ಬಿಜೆಪಿಗೆ ಮಣಿಯಲು ಸಿದ್ಧತೆ ನಡೆಸಿತ್ತೆಂದು ತೋರುತ್ತದೆ!
ಅಧಿಕಾರವನ್ನು ಬಿಜೆಪಿಗೆ ವಹಿಸಿ ಕೊಡುವ ಅದರ ಈ ಸಲಹೆ, ಈವರೆಗೆ ಯೋಜನಾಬದ್ಧವಾಗಿ ಕಟ್ಟಲಾಗಿದ್ದ ಕುಮಾರಸ್ವಾಮಿಯವರ ಬಿಂಬವನ್ನು ದೀರ್ಘ ಕಾಲಿಕ ರಾಜಕಾರಣದ ದೃಷ್ಟಿಯಿಂದ ರಕ್ಷಿಸಿಕೊಳ್ಳುವ ಹಾಗೂ ದಿನೇ ದಿನೇ ಹೆಚ್ಚುತ್ತಿದ್ದ ಜನರ ಸಹಾನುಭೂತಿಯಿಂದಾಗಿ ಹೊಸ ಪ್ರಕಾಶ ಪಡೆಯುತ್ತಿದ್ದ ಯಡಿಯೂರಪ್ಪನವರ ಬಿಂಬವನ್ನು ಮಂಕುಗೊಳಿಸುವ ಅಪ್ಪ - ಮಕ್ಕಳ ಮತ್ತೊಂದು ರಾಜಕೀಯ ನಾಟಕವೂ ಆಗಿದ್ದಲ್ಲಿ ಆಶ್ಚರ್ಯವಿಲ್ಲ.(ಯಡಿಯೂರಪ್ಪನವರೂ ಈ ಬಲೆಗೆ ಬಿದ್ದು ತಮ್ಮ ಧರ್ಮಯುದ್ಧವನ್ನು ತುಮಕೂರಿನಲ್ಲಿ ಅರ್ಧಕ್ಕೇ ಬಿಟ್ಟು ಬೆಂಗಳೂರಿಗೆ ಓಡೋಡಿ ಬಂದಿದ್ದರಲ್ಲ!) ಕುಮಾರಸ್ವಾಮಿಯವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡ ರೀತಿ ಹಾಗೂ ಈ ಇಡೀ ಅಧಿಕಾರ ಹಸ್ತಾಂತರ ನಾಟಕದ ಎಲ್ಲ ಅಸಹ್ಯಗಳನ್ನೂ, ತಪ್ಪು - ಒಪ್ಪುಗಳನ್ನೂ ವಿಧಿಯಾಟದ ಮಡಿಲಿಗೆ ಹಾಕಿ ತಮ್ಮನ್ನು ದುರಂತ ನಾಯಕನಂತೆ ಗದ್ಗದಿತರಾಗಿ ಬಿಂಬಿಸಿಕೊಂಡ ರೀತಿ, ಇಂತಹ ರಾಜಕೀಯ ನಾಟಕದ ರಚನೆಯನ್ನು ಪುಷ್ಟೀಕರಿಸುವಂತೆಯೇ ಇತ್ತು!
ಅಂದಹಾಗೆ: ಅಧಿಕಾರ ಹಸ್ತಾಂತರ ಇಲ್ಲ ಎಂದು ಖಚಿತವಾದೊಡನೆ ಸಿದ್ಧಗಂಗಾ ಶ್ರೀಗಳಿಗೆ ಆರೋಗ್ಯ ಬಿಗಡಾಯಿಸಿ, ದಸರಾ ಉತ್ಸವದ ಉದ್ಘಾಟನೆ ತಮ್ಮಿಂದ ಸಾಧ್ಯವಿಲ್ಲ ಎಂದಿದ್ದಾರೆ. ಆದರೆ ಅಧಿಕಾರ ಹಸ್ತಾಂತರ ಯಡಿಯೂರಪ್ಪನವರಿಂದ ಕುಮಾರಸ್ವಾಮಿಯವರಿಗೆ ಆಗುವಂತಿದ್ದರೆ ಹಾಗೂ ಯಡಿಯೂರಪ್ಪ ಕುಮಾರಸ್ವಾಮಿಯವರಂತೆ ವರ್ತಿಸಿದ್ದರೆ ಸಿದ್ಧಗಂಗಾ ಶ್ರೀಗಳಿಗೆ ಹೀಗೆ ಅರೋಗ್ಯ ಹಠಾತ್ ಬಿಗಡಾಯಿಸುತ್ತಿತ್ತೇ?
ಅದೇನೇ ಇರಲಿ, ಇದೇ ಹೊತ್ತಿಗೆ ಉತ್ಸಾಹದಿಂದ ಪುಟಿದೆದ್ದಿರುವ ಬಾಲ ಗಂಗಾಧರನಾಥ ಸ್ವಾಮಿಗಳು ಸರ್ಕಾರ ಸಂಪರ್ಕಿಸಿದೊಡನೆ ಉದ್ಘಾಟನೆಗೆ ಬೇಷರತ್ ಒಪ್ಪಿದ್ದಾರಂತೆ! ಅಲ್ಲದೆ, ಅಧಿಕಾರ ಹಸ್ತಾಂತರ ಸಂಬಂಧ ಬಂಡೆದ್ದಿರುವ ಜೆ.ಡಿ.(ಎಸ್) ಶಾಸಕರು ಹಾಗೂ ಕಾರ್ಯಕರ್ತರೆಲ್ಲ ಲಿಂಗಾಯ್ತರೇ ಆಗಿದ್ದಾರೆ ಎಂಬುದನ್ನೂ ಇಲ್ಲಿ ಗಮನಿಸಬೇಕು. ಅಂದರೆ, ಅಧಿಕಾರ ವಂಚಿತರಾಗಿರುವ ಬಿಜೆಪಿಯವರು ಈಗ ಘೋಷಿಸಿರುವ ಧರ್ಮಯುದ್ಧವು ನಿಜವಾಗಿ ಜಾತಿಯುದ್ಧವೇ ಆಗಿದೆ! ಹೀಗಾಗಿ, ಕುಮಾರಸ್ವಾಮಿ - ಯಡಿಯೂರಪ್ಪ ಜೋಡಿ ತನ್ನ ಬಲ ಪ್ರದರ್ಶನ ರಾಜಕಾರಣದಿಂದ ಇನ್ನೇನನ್ನು ಮಾಡಿರದಿದ್ದರೂ, ಕರ್ನಾಟಕದ ರಾಜಕಾರಣವನ್ನು ಐವ್ವತ್ತು ವರ್ಷಗಳಷ್ಟು ಹಿಂದಕ್ಕೆ ತಳ್ಳಿದೆಯಷ್ಟೆ...
ಹಿಂದೂಗಳಲ್ಲಿ ಒಗ್ಗಟ್ಟಿಲ್ಲ ಎಂದು ಸಾಮಾನ್ಯ ಹಿಂದೂ ಜನರ ವಿರುದ್ಧ ಒಂದೇ ಸಮನೆ ಹೊಡೆದುಕೊಳ್ಳುವ ಬಿಜೆಪಿಯವರಿಗೆ ಈ ಒಗ್ಗಟ್ಟು ಏಕೆ ಸಾಧ್ಯವಾಗಿಲ್ಲ ಎಂಬುದು ಈಗಲಾದರೂ ಅರ್ಥವಾದೀತೇ?
- ಡಿ.ಎಸ್.ನಾಗಭೂಷಣ