ಮರಳಿ ಬರಲಿದೆ ಸಮಾಜವಾದ!

ಮರಳಿ ಬರಲಿದೆ ಸಮಾಜವಾದ!

ಮರಳಿ ಬರಲಿದೆ ಸಮಾಜವಾದ!
ಪುಸ್ತಕದ ಈ ಶೀರ್ಷಿಕೆಯೇ ಕೆಲವರಿಗೆ ವಿನೋದವನ್ನುಂಟು ಮಾಡಬಹುದು. ಸಮಾಜವಾದದ ಕಾಲದಿಂದ ಬಹುದೂರ ಸಾಗಿ ಬಂದು ಆ ದಿನಗಳ ಕಷ್ಟ ಕಾರ್ಪಣ್ಯಗಳ ಬಗೆಗೆ ಜನ ನಿಟ್ಟುಸಿರು ಬಿಡುತ್ತಿರುವಾಗ, ಈಗ ಮತ್ತೆ ಸಮಾಜವಾದ ಮರಳಿ ಬರಲಿದೆ ಎನ್ನಲು ಎಷ್ಟು ಧೈರ್ಯಬೇಕು ಎಂದು ಇಂತಹವರು ಆಶ್ಚರ್ಯವನ್ನೂ ಪಡಬಹುದು! ಆದರೆ ಸಮಾಜವಾದದ ಸೋಲನ್ನು ಘೋಷಿಸುತ್ತ ನಮ್ಮನ್ನು ಆವರಿಸುತ್ತ ಬಂದ ಜಾಗತೀಕರಣದ ಪರಿಣಾಮಗಳು ಕ್ರಮೇಣ ಅನಾವರಣಗೊಳ್ಳುತ್ತ ಹೋಗುತ್ತಿರುವ ಹಾಗೆ, `ಲೈಸೆನ್ಸ್ - ಪರ್ಮಿಟ್ ರಾಜ್ಯ'ಕ್ಕೆ ಬದಲಿಯಾಗಿ ಮುಕ್ತ ಸ್ಪರ್ಧೆಯ ಆರ್ಥಿಕತೆಯನ್ನು ಸ್ವಾಗತಿಸಿದವರ ಮಧ್ಯದಿಂದಲೇ ನಿಧಾನವಾಗಿ ಜಾಗತೀಕರಣ ಉಂಟು ಮಾಡುತ್ತಿರುವ ಸಾಮಾಜಿಕ ಅನಾಹುತಗಳ ಬಗ್ಗೆ ಆತಂಕದ, ಎಚ್ಚರಿಕೆಯ ಮಾತುಗಳು ಕೇಳಿ ಬರುತ್ತಿವೆ. ಜಾಗತೀಕರಣ, ಸ್ಥಗಿತಗೊಂಡ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುವ ದೃಷ್ಟಿಯಿಂದ ಮುಂದುವರಿದ ದೇಶಗಳು (ಗುಂಪು-8ರ ರಾಷ್ಟ್ರಗಳು) ಅಂತಾರಾಷ್ಟ್ರೀಯ ವ್ಯಾಪಾರದ ಮೇಲಿನ ನಿರ್ಬಂಧಗಳನ್ನು ಸಡಿಲಗೊಳಿಸಿಕೊಳ್ಳಲು ನಡೆಸಿದ ಒಂದು ಜಾಗತಿಕ ಯೋಜನೆಯಾಗಿದ್ದು; ಇದರ ಭಾಗವಾಗಿಯೇ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಮೂಲಕ ಹರಿಸುತ್ತಿರುವ ಹಣದ ಹೊಳೆ, ಈ ಯೋಜನೆಗೆ ಅನುಕೂಲ ಪರಿಸ್ಥಿತಿ ನಿರ್ಮಾಣ ಮಾಡಿಕೊಳ್ಳುವ ಹುನ್ನಾರ ಮಾತ್ರವಾಗಿದೆ ಎಂಬ ಅರಿವು ಈಗ ಕೆಲವರಲ್ಲಾದರೂ ಉಂಟಾಗ ತೊಡಗಿದೆ.
ಹಾಗಾಗಿಯೇ, ಜಾಗತೀಕರಣದ ಆರ್ಥಿಕ ನೀತಿಯನ್ನು ತುಂಬು ಉತ್ಸಾಹದಿಂದ ಜಾರಿಗೆ ತಂದ ನಮ್ಮ ಆಡಳಿತಗಾರರು ಚುನಾವಣೆಗಳಲ್ಲಿ ತಿರಸ್ಕೃತಗೊಂಡ ನಂತರ, `ಮಾನವೀಯ ಮುಖ'ದ ಜಾಗತೀಕರಣದ ಮಾತುಗಳನ್ನಾಡತೊಡಗಿದ್ದಾರೆ! `ಸಾಮಾನ್ಯ ಮನುಷ್ಯ'ನ ಒಳಿತನ್ನು ಗಮನದಲ್ಲಿಟ್ಟುಕೊಂಡು `ಅಭಿವೃದ್ಧಿ'ಯನ್ನು ಸಾಧಿಸುವ ಸಾಮಾಜಿಕ ಎಚ್ಚರವನ್ನು ತಮ್ಮ ಆಡಳಿತದಲ್ಲಿ ಸಾಧಿಸಿಕೊಳ್ಳುವ ಒಲವು ತೋರಿದ್ದಾರೆ. ಹಾಗೇ, ಜಾಗತೀಕರಣದ ಹತ್ತು ವರ್ಷಗಳು ಉಂಟು ಮಾಡಿದ ಆರ್ಥಿಕ ಅಶ್ಲೀಲತೆ, ಆಡಂಬರಗಳ ದ್ವೀಪಗಳ ಬಗ್ಗೆ ಜಿಗುಪ್ಸೆ ವ್ಯಕ್ತಪಡಿಸುತ್ತಿದ್ದಾರೆ. ಲಕ್ಷಾಂತರ ಜನ ರೈತರ ಆತ್ಮಹತ್ಯೆ, ಆದಿವಾಸಿ ಜನರ ಬೃಹತ್ ಪ್ರಮಾಣದ ನಿರ್ವಸತೀಕರಣ ಹಾಗೂ ಬಡತನ ಮತ್ತು ಶ್ರೀಮಂತಿಕೆಗಳ ನಡುವೆ ಹೆಚ್ಚುತ್ತಿರುವ ಅಂತರದ ಸಮಸ್ಯೆಗಳಿಗೆ ತಮ್ಮ ಅಭಿವೃದ್ಧಿ ನೀತಿಯಲ್ಲಿ ಪರಿಹಾರ ಕಾಣದೆ ಕಂಗಾಲಾಗಿದ್ದಾರೆ. ಹೆಚ್ಚುತ್ತಿರುವ ಸಾಮಾಜಿಕ ಅಶಾಂತಿ ಹಾಗೂ ಅಪರಾಧಗಳ ವೈವಿಧ್ಯತೆಯಿಂದ ಆತಂಕಗೊಂಡಿದ್ದಾರೆ. ಆದರೂ, ಅಭಿವೃದ್ಧಿಯ ಬೇರೆ ದಾರಿಯೇ ಇಲ್ಲದವರಂತೆ, ಈ ಸಮಸ್ಯೆಗಳಿಗೆ ಹಲವು ರೀತಿಯ ಪ್ಯಾಕೇಜ್ಗಳ ಪ್ರಕಟಣೆ, ವಿಶೇಷ ಕರ್ತವ್ಯ-ದಳಗಳ ರಚನೆ ಮುಂತಾದ ತಾತ್ಕಾಲಿಕ ಉಪಶಮನ ಕ್ರಮಗಳನ್ನು ಕೈಗೊಂಡು, ವಿದೇಶಿ ಬಂಡವಾಳ ಆಧಾರಿತ `ಅಭಿವೃದ್ಧಿ' ಕಲ್ಪನೆಯನ್ನು ನೆಚ್ಚಿಕೊಂಡೇ ಮುಂದುವರೆದಿದ್ದಾರೆ. ಬಹುಪಾಲು ಜನ ಕೂಡಾ ಈ ತಾತ್ಕಾಲಿಕ ಉಪಶಮನ ಕ್ರಮಗಳಿಂದ ತೃಪ್ತಗೊಂಡವರಂತೆ, ಈಗ ಕೆಲವರಿಗಷ್ಟೆ ಲಭ್ಯವಾಗುತ್ತಿರುವ ಜಾಗತೀಕರಣದ `ಅನುಕೂಲ'ಗಳು ತಮ್ಮ ಕಡೆಗೂ ಹರಿದು ಬರುವ ದಿನಗಳು ದೂರವಿಲ್ಲ ಎಂಬ ನಿರೀಕ್ಷೆಯಲ್ಲಿ ಕಾಯುತ್ತಿರುವಂತೆ ತೋರುತ್ತದೆ. ಆದರೆ ಈ ನಿರೀಕ್ಷೆ ಸುಳ್ಳಾಗುವ ಎಲ್ಲ ಲಕ್ಷಣಗಳೂ ಕಾಣತೊಡಗಿವೆ.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪರ್ಯಾಯ ಅಭಿವೃದ್ಧಿ ನೀತಿ ಹಾಗೂ ಮಾದರಿಗಳ ಅನ್ವೇಷಣೆ, ದೇಶದಲ್ಲಿ ಈಗ ಹೆಚ್ಚು ತುರ್ತಿನಿಂದ ನಡೆದಿದೆ. ಕೆಲವು, ಜನಾಂದೋಲನ ರೂಪದಲ್ಲಿ ನಡೆದಿದ್ದರೆ; ಮತ್ತೆ ಕೆಲವು ತಾತ್ವಿಕ ಪುನರನ್ವೇಷಣೆಯ ರೂಪದಲ್ಲಿ ನಡೆದಿವೆ. ಹಾಗೆ ನೋಡಿದರೆ; ಜಾಗತಿಕ ಮಟ್ಟದಲ್ಲಿಯೇ, ಜಾಗತೀಕರಣ ಉಂಟು ಮಾಡುತ್ತಿರುವ ಅಸಮ ಅಭಿವೃದ್ಧಿ, ಅಶ್ಲೀಲ ಗ್ರಾಹಕವಾದ, ಜನಾಂಗೀಯ ದ್ವೇಷ, ದುರಾಕ್ರಮಣದ ರಾಜಕಾರಣ ಹಾಗೂ ಜೀವ ಪರಿಸರದ ವಿನಾಶ ಮುಂತಾದ ಅನಾಹುತಗಳ ವಿರುದ್ಧ ಎಚ್ಚರಿಸುವ `ಇನ್ನೊಂದು ಜಗತ್ತು ಸಾಧ್ಯ' ಎಂಬ ಆಂದೋಲನವೊಂದು ಆರಂಭವಾಗಿದೆ. ಹಿಂದುಳಿದ ಮತ್ತು ಮುಂದುವರಿದ ದೇಶಗಳೆಂಬ ಭೇದ ಭಾವಗಳಿಲ್ಲದೆ ಜಗತ್ತಿನ ಎಲ್ಲ ದೇಶಗಳ ಜನರೂ ಈ ಆಂದೋಲನದಲ್ಲಿ ಪಾಲ್ಗೊಂಡು ಪರ್ಯಾಯ ಅಭಿವೃದ್ಧಿ ನೀತಿ - ಮಾದರಿಗಳ ಚರ್ಚೆಯಲ್ಲಿ ತೊಡಗಿದ್ದಾರೆ. ಹೀಗೆ `ವಿಶ್ವ ಸಾಮಾಜಿಕ ವೇದಿಕೆ' ಎಂಬ ಹೊಸ ಅಂತಾರಾಷ್ಟ್ರೀಯ ವೇದಿಕೆಯಡಿ ಸಮಾಜವಾದ ಕುರಿತಂತೆ ಪುನರಾಲೋಚನೆ ಆರಂಭವಾಗಿದೆ.
ಅಂದ ಮಾತ್ರಕ್ಕೆ ಇದು ಹಳೆಯ ಸಮಾಜದ ಪುನರಾಗಮನದ ಪ್ರಯತ್ನಗಳೆಂದು ಯಾರಾದರೂ ಭಾವಿಸಿದರೆ ತಪ್ಪು. ಬದಲಾಗಿ ಸಮಾಜವಾದ ಮುನ್ನೋಡಿದ್ದ ಶಾಂತಿಯುತ ಸಹ ಬಾಳ್ವೆಯ ಅಭಿವೃದ್ಧಿ ಮಾದರಿಗಳ ವೈಫಲ್ಯವನ್ನು ವಿಶ್ಲೇಷಿಸಿ, ಈವರೆಗಿನ ಅನುಭವಗಳ ಬೆಳಕಿನಲ್ಲಿ ಅದರ ಕೊರತೆಗಳನ್ನು ತುಂಬುವ ಮೂಲಕ; ಅದನ್ನು ಇಂದಿನ ಬದುಕಿನ ಸವಾಲುಗಳನ್ನು ಎದುರಿಸಲು ಹೇಗೆ ಸಿದ್ಧಗೊಳಿಸಬಹುದು ಎಂಬುದರ ಪರಿಶೀಲನೆಯ ಪ್ರಯತ್ನವಿದು. ಈ ದೃಷ್ಟಿಯಿಂದ ಮಾರ್ಕ್ಸ್ವಾದಿ ಆ‌ರ್ಥಿಕ ಸಮಾಜವಾದಕ್ಕಿಂತ ಭಿನ್ನವಾಗಿ, ಗಾಂಧೀಜಿಯ ಅಹಿಂಸಾತ್ಮಕ ಸಾಮಾಜಿಕ ದರ್ಶನದ ಆಧಾರದ ಮೇಲೆ ಕಟ್ಟಿಕೊಂಡ ಭಾರತೀಯ ಸಮಾಜವಾದ ಪ್ರತಿಪಾದಿಸಿದ; ಮಧ್ಯಮ ಮಾರ್ಗದ ಜೀವನ ದೃಷ್ಟಿಯ ಅಭಿವೃದ್ಧಿ ಮಾದರಿಗಳ ಬಗ್ಗೆ ಇಂದು ಚರ್ಚೆ ಹೆಚ್ಚು ಅರ್ಥಪೂರ್ಣವೆನಿಸೀತು - ವಿಶೇಷವಾಗಿ ಇಂದಿನ ಭಾರತೀಯ ಸಂದರ್ಭದಲ್ಲಿ. ಏಕೆಂದರೆ ಜಗತ್ತು ತಿರಸ್ಕರಿಸುವ ಆರ್ಥಿಕ ಸಮಾಜವಾದಕ್ಕೆ ಪರ್ಯಾಯವಾಗಿ ರೂಪಿತವಾಗಿದ್ದ ಈ `ಸಾಂಸ್ಕೃತಿಕ' ಸಮಾಜವಾದ, ಇಂದು ಜಾಗತೀಕರಣ ಉಂಟು ಮಾಡುತ್ತಿರುವ ಎಲ್ಲ ಅನಾಹುತಗಳನ್ನು ಮುನ್ನೋಡಿಯೇ ತನ್ನ ತಾತ್ವಿಕತೆಯನ್ನು, ಅಭಿವೃದ್ಧಿ ಮಾದರಿಯನ್ನು ರೂಪಿಸಿಕೊಂಡಿತ್ತು. ಆದರೆ ಚರಿತ್ರೆಯ ಆಕಸ್ಮಿಕಗಳ, ಜನಪ್ರಿಯ ರಾಜಕಾರಣದ ಆಕರ್ಷಣೆಗಳ ಹಾಗೂ ನಾಯಕರ ವೈಯುಕ್ತಿಕ ದೌರ್ಬಲ್ಯಗಳ ಕಾರಣಗಳಿಂದಾಗಿ ಈ ಆಂದೋಲನ ಜನಮನದಲ್ಲಿ ಭದ್ರವಾಗಿ ಬೇರು ಬಿಡಲಿಲ್ಲ.
ಅಂದಿನ ನೆಹರೂ ಕೇಂದ್ರಿತ ರಾಜಕಾರಣದ ವಿರುದ್ಧ ಬಂಡೆದ್ದ ಈ ಸಮಾಜವಾದಿ ಆಂದೋಲನ, ಲೋಹಿಯಾ ನೇತೃತ್ವದಲ್ಲಿ ಒಂದು ಸೃಜನಶೀಲ ವೈಚಾರಿಕ ಆಂದೋಲನವಾಗಿ ಮಾತ್ರ ಯಶಸ್ವಿಯಾಗಿ, ಅವರ ಅಕಾಲಿಕ ಮರಣದಿಂದಾಗಿ ತನ್ನ ಕಾರ್ಯಶೀಲತೆಯನ್ನು ಸಾಬೀತು ಪಡಿಸುವಲ್ಲಿ ಸೋತು ಹೋಯಿತು. ಆದರೆ ಇಂದು ಸಮಾಜವಾದವೆಂದರೆ ನೆಹರೂರಿಂದ ಹಿಡಿದು ಇಂದಿರಾಗಾಂಧಿಯವರ ಆಡಳಿತ ಕಾಲದವರೆಗೆ ಜಾರಿಯಲ್ಲಿದ್ದ ಮಿಶ್ರ ಅರ್ಥವ್ಯವಸ್ಥೆಯ ಎಡಬಿಡಂಗಿ ಸಮಾಜವಾದವೇ ಎಂದಾಗಿ, ಅದರ ವೈಫಲ್ಯವನ್ನು ಇಡಿಯಾಗಿ ಭಾರತೀಯ ಸಮಾಜವಾದಿ ಚಳುವಳಿಯ ತಲೆಯ ಮೇಲೆ ಹೊರಿಸಲಾಗುತ್ತಿದೆ. ಭಾರತದಲ್ಲಿ ನೆಹರೂ ಪ್ರಯೋಗ ಮಾಡಿದ ಮತ್ತು ಇಂದಿರಾಗಾಂಧಿಯವರು ಮುಂದುವರಿಸಿದ ಸಮಾಜವಾದವೇ ಬೇರೆ ಎಂಬ ರಾಜಕೀಯ ಅರಿವಿಲ್ಲದೆಯೇ, ಸಮಾಜವಾದವನ್ನು ಕುರುಡು ಕುರುಡಾಗಿ ಲೈಸೆನ್ಸ್ - ಪರ್ಮಿಟ್ ರಾಜ್ಯ ಎಂದು ಕರೆಯಲಾಗುತ್ತಿದೆ. ಆಚಾರ್ಯ ನರೇಂದ್ರ ದೇವ, ಜಯಪ್ರಕಾಶ ನಾರಾಯಣ ಹಾಗೂ ಡಾ.ರಾಮಮನೋಹರ ಲೋಹಿಯಾ ರೂಪಿಸಿದ ಸಮಾಜವಾದವು ಮಾರ್ಕ್ಸ್ ವಾದಿ ಸಮಾಜವಾದ ಹಾಗೂ ಬ್ರಿಟನ್ನಿನ ಲೇಬರ್ ಪಕ್ಷದ ಸಮಾಜವಾದಕ್ಕಿಂತ (ಅಥವಾ ಪಶ್ಚಿಮ ಯೂರೋಪಿನ `ಕಲ್ಯಾಣ ರಾಜ್ಯ' ಮಾದರಿಯ ಸಮಾಜವಾದಕ್ಕಿಂತ) ತೀರಾ ಭಿನ್ನವಾಗಿದ್ದು, ಲೌಕಿಕ ಹಾಗೂ ಅಧ್ಯಾತ್ಮಿಕ ನೆಲೆಗಳೆರಡರಲ್ಲೂ ಮನುಷ್ಯನನ್ನು ರೂಪಿಸುವಂತಹ ರಾಜಕಾರಣವನ್ನು ನೆಮ್ಮಿಕೊಂಡಿದ್ದಾಗಿತ್ತು. ಹಾಗಾಗಿ ಇಂದು ಸಾಂಸ್ಕೃತಿಕ ಸಮಾಜವಾದದ ಪುನರನ್ವೇಷಣೆ ಅತ್ಯಗತ್ಯವಾಗಿದೆ. ಈ ದೃಷ್ಟಿಯಿಂದ ಲೋಹಿಯಾರ `ಕಾಲದ ಜೊತೆ ಹೆಜ್ಜೆ ಹಾಕುವಾಗ ನಾನು ಒಂದೆರಡು ಹೆಜ್ಜೆ ಮುಂದೆ ಹೋಗಿ ಬಿಟ್ಟಿರುವೆನೇನೋ.... ಆದರೆ ಒಂದಲ್ಲ ಒಂದು ದಿನ ದೇಶ ನನ್ನ ಮಾತನ್ನು ಕೇಳಲೇಬೇಕಾಗುತ್ತದೆ....!' ಎಂಬ ಮಾತು ಇಲ್ಲಿ ಅರ್ಥಪೂರ್ಣವಾಗಿ ಅನುರಣಿಸುತ್ತದೆ.
ಹಾಗಾಗಿ, `ಮರಳಿ ಬರಲಿದೆ ಸಮಾಜವಾದ!' ಎಂಬ ಈ ಪುಸ್ತಕದ ಶೀರ್ಷಿಕೆ ಹೊಸ ಅರ್ಥ(Value)ವನ್ನೇ ಪಡೆಯುತ್ತದಲ್ಲದೆ, ಹೊಸ ರಾಜಕೀಯ ಸಂದರ್ಭ(Perspective)ವನ್ನು ಸೃಷ್ಟಿಸುತ್ತದೆ ಎಂದು ನಾನು ಭಾವಿಸಿದ್ದೇನೆ. ಇಲ್ಲಿನ ಲೇಖನಗಳು ಈ ಹೊಸ ಅರ್ಥವನ್ನು, ಹೊಸ ರಾಜಕೀಯ ಸಂದರ್ಭವನ್ನು ಸ್ಪಷ್ಟಪಡಿಸುವ, ವಿಷದೀಕರಿಸುವ ಪ್ರಯತ್ನಗಳನ್ನು ಮಾಡುತ್ತವೆ. ಆ ಮೂಲಕ ಈ ಪುಸ್ತಕ ಸಮಾಜವಾದಿ ಚಳುವಳಿಯ ವಸ್ತುನಿಷ್ಠ ವಿಮರ್ಶೆಮಾಡುವುದಲ್ಲದೆ, ಸಮಾಜವಾದಿಗಳ ವೈಯುಕ್ತಿಕ ಹಾಗೂ ರಾಜಕೀಯ ವರ್ತನೆಗಳನ್ನು ಕಟು ವಿಮರ್ಶೆಗೆ ಒಳಪಡಿಸುತ್ತದೆ. ಹಾಗೇ ಈ ವಿಮರ್ಶೆಯನ್ನು ಆಧಾರವಾಗಿಟ್ಟುಕೊಂಡು, ವರ್ತಮಾನದ ಸವಾಲುಗಳನ್ನು ಎದುರಿಸುತ್ತಾ ಹೊಸ ಸಮಾಜವಾದವನ್ನು ಕಟ್ಟಲು ಅಗತ್ಯವಾದ ವೈಚಾರಿಕ ಆಕೃತಿಗಳ ಹೊಳಹು ನೀಡಲು ಯತ್ನಿಸುತ್ತದೆ. ಹಾಗಾಗಿಯೇ ಇಲ್ಲಿನ ಲೇಖನಗಳನ್ನು ಸಮಕಾಲೀನ ಸಮಾಜವಾದಿ ಚಿಂತನೆಗಳು ಎಂದು ಕರೆಯಲಾಗಿದೆ. `ಲೋಹಿಯಾ ಸಮಾಜವಾದ : ಮುಂದೇನು?' ಎಂಬ ಲೇಖನವನ್ನು ಪುಸ್ತಕದ ಒಟ್ಟಾರೆ ಪರಿಣಾಮದ ಕ್ರೋಢೀಕರಣದ ದೃಷ್ಟಿಯಿಂದ ಕೊನೆಯಲ್ಲಿ ಪ್ರಸ್ತುತಪಡಿಸಲಾಗಿದೆಯಾದರೂ, ಅದು ಪುಸ್ತಕದುದ್ದಕ್ಕೂ ಲಾಳಿಯಾಡುತ್ತಾ ಎಲ್ಲ ಲೇಖನಗಳಿಂದ ನೂಲು ಪಡೆದು, ಹೊಸ ಸಮಾಜವಾದದ ನೇಯ್ಗೆಗೆ ಪ್ರಯತ್ನಿಸುವುದನ್ನು ಓದುಗರು ಗಮನಿಸಬಹುದು. ಹಿಂದೂ ಮತ್ತು ಬೌದ್ಧ ಧರ್ಮಗಳ ನಡುವಣ ಸಂಬಂಧವನ್ನು ಕುರಿತ ಇಲ್ಲಿನ ಲೇಖನ ಪ್ರಸ್ತುತವಾಗುವುದೇ ಈ ನೆಲೆಯಲ್ಲಿ.
ಇಂದು ಕರ್ನಾಟಕದಲ್ಲಿ ಸಮಾಜವಾದಿ ಚಳುವಳಿ ಎಂಬುದಿಲ್ಲ. ಆದರೆ ಸಮಾಜವಾದಿ ಚಳುವಳಿಯ ದಟ್ಟ ಸ್ಮೃತಿ ಇದೆ. ಅದರಿಂದ ಸ್ಫೂರ್ತಿ ಪಡೆದೇ, ಅದರ ಮೇಲೆ ಆಸೆ ಇಟ್ಟೇ ಇಲ್ಲಿನ ಲೇಖನಗಳನ್ನು ಬರೆಯಲಾಗಿದೆ. ಇಂದಿನ ಜಾಗತೀಕರಣದ ಇಕ್ಕಟ್ಟಿನ ಸಂದರ್ಭದಲ್ಲಿ ಸಮಾಜವಾದಿ ಚಳುವಳಿ ಯಾವುದಾದರೊಂದು ರೂಪದಲ್ಲಿ ಚಿಗುರೊಡೆಯಲೇಬೇಕು ಎಂಬ ನಂಬಿಕೆ ಈ ಪುಸ್ತಕದ ಪ್ರಕಟಣೆಗೆ ಕಾರಣವಾಗಿದೆ. ಕಾವೇರಿ ಚಳುವಳಿ ಹಾಗೂ ಕನ್ನಡ ಕಟ್ಟುವ ಕಾಯಕ ಕುರಿತ ಇಲ್ಲಿನ ಎರಡು ಲೇಖನಗಳು ಭಾರತೀಯ ಸಮಾಜವಾದದ ಎರಡು ಮುಖ್ಯ ಆಧಾರ ಸ್ತಂಭಗಳಾದ ರಾಜಕೀಯ ಅಧಿಕಾರದ ವಿಕೇಂದ್ರೀಕರಣ ಹಾಗೂ ಭಾರತೀಯ ಭಾಷಾ ಆಂದೋಲನವನ್ನು ಗಮನದಲ್ಲಿಟ್ಟುಕೊಂಡು ಈ ಸಂಗ್ರಹದಲ್ಲಿ ಅಳವಡಿಸಿಕೊಳ್ಳಲಾಗಿದೆ. ನನ್ನ ನಾಲ್ಕು ಹಳೆಯ ಲೇಖನಗಳನ್ನು ಇಲ್ಲಿ ಸೇರಿಸಿಕೊಂಡಿರುವುದೂ ಈ ದೃಷ್ಟಿಯಿಂದಲೇ - ಭಾರತೀಯ ಸಮಾಜವಾದದ ಸಮಗ್ರ ಸಂಶ್ಲೇಷಣೆಗಾಗಿ. ಕೊನೆಯಲ್ಲಿ ನೀಡಲಾಗಿರುವ ಪ್ರಶ್ನೋತ್ತರ ರೂಪದ ಎರಡು ಅನುಬಂಧಗಳು ಈ ಸಂಶ್ಲೇಷಣೆಗೆ ಪೂರಕವಾಗಿವೆ ಎಂದುಕೊಂಡಿದ್ದೇನೆ. ಹಾಗೂ, ಇಲ್ಲಿನ ಲೇಖನಗಳನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಬರೆದವಾದ್ದರಿಂದ ಕೆಲವು ವಿಷಯಗಳು ಅಲ್ಲಲ್ಲಿ ಪುನರಾವರ್ತನೆ ಆಗಿದ್ದರೆ, ಓದುಗರ ಕ್ಷಮೆ ಇರಲಿ.
ಅಂದಹಾಗೆ: ಇದು ಸಮಾಜವಾದಿ ಆಂದೋಲನ ದಾರಿ ತಪ್ಪಿದ ಬಗೆಯನ್ನು ದಿ.ಕಿಷನ್ ಪಟ್ನಾಯಕ್ರು ಒಂದು ಹಾಸ್ಯ ಪ್ರಸಂಗದ ಮೂಲಕ ವಿಷದೀಕರಿಸಿದ್ದು ಹೀಗೆ: ಲೋಹಿಯಾ ನಿಧನಾನಂತರ ಮುಂಬೈನಲ್ಲಿ ಸಮಾಜವಾದಿ ಯುವಜನ ಸಭಾದ ಆಧಿವೇಶನ ನಡೆದಿತ್ತಂತೆ. ರಾಜನಾರಾಯಣ್ ಎಂಬ ವರ್ಣರಂಜಿತ ವ್ಯಕ್ತಿತ್ವದ ಹಿರಿಯ ನಾಯಕ ತಮ್ಮ ಭಾಷಣದಲ್ಲ್ತಿ, ಈಚಿನ ವಿದ್ಯಾರ್ಥಿಗಳಲ್ಲಿ ಹೋರಾಟದ ಮನೋಭಾವ ಕುಗ್ಗುತ್ತಿರುವ ಬಗ್ಗೆ ಆತಂಕ ವ್ಯಕ್ತ ಪಡಿಸುತ್ತಾ, 'ನಮ್ಮ ಕಾಲದಲ್ಲಿ ನೋಡಿ, ಗಾಂಧೀಜಿ ಭಾರತ ಬಿಟ್ಟು ಚಳುವಳಿಗೆ ಕರೆ ಕೊಟ್ಟೊಡನೆ ವಿದ್ಯಾರ್ಥಿಗಳಾಗಿದ್ದ ನಾವು ನಮ್ಮ ಪುಸ್ತಕಗಳನ್ನು ಮುಚ್ಚಿಟ್ಟು ಬೀದಿಗಿಳಿದೆವು' ಎಂದು ಹೆಮ್ಮೆಯಿಂದ ಹೇಳಿದರಂತೆ. ತಕ್ಷಣ ಸಭೆಯ ಹಿಂಭಾಗದಿಂದ ಒಂದು ಧ್ವನಿ ಇದಕ್ಕೆ ಹೀಗೆ ಪ್ರತಿಕ್ರಿಯಿಸಿತಂತೆ:'ಅಂದು ಮುಚ್ಚಿಟ್ಟ ಪುಸ್ತಕವನ್ನು ನೀವು ಮತ್ತೆ ತೆರೆದೇ ಇಲ್ಲ ಎಂದು ಕಾಣುತ್ತದೆ!'
(ಇದೇ 14ರಂದು ಬೆಳಿಗ್ಗೆ ಶಿವಮೊಗ್ಗದ ಕಮಲಾ ನೆಹರೂ ಕಾಲೇಜಿನ ಕುವೆಂಪು ಸಭಾಂಗಣದಲ್ಲಿಲ್ಲಿ ಬಿಡುಗಡೆಯಾಗಲಿರುವ ಡಿ.ಎಸ್.ನಾಗಭೂಷಣ ಅವರ 'ಮರಳಿ ಬರಲಿದೆ ಸಮಾಜವಾದ!' ಪುಸ್ತಕದ ಲೇಖಕನ ಮಾತುಗಳಿಂದ ಆಯ್ದ ಭಾಗಗಳು. ಪ್ರಕಟಣೆ: ಲೋಹಿಯಾ ಪ್ರಕಾಶನ, ಬಳ್ಳಾರಿ; ಬಿಡುಗಡೆ: ಡಾ|| ಯು.ಆರ್ ಅನಂತಮೂರ್ತಿ; ಅಧ್ಯಕ್ಷತೆ: ಕಡಿದಾಳು ಶಾಮಣ್ಣ; ಪುಸ್ತಕದ ಬಗ್ಗೆ ಮಾತನಾಡುವವರು: ಪ್ರೊ|| ಎಚ್ ಗೋವಿಂದಯ್ಯ)

Rating
No votes yet