ಓ ಮನಸೇ...
ಈಗಲೂ ಅವರು ಆ ಕಾಡಿನ ನಡುವೆ ಎನ್ನಬಹುದಾದ ಒಂಟಿ ಮನೆಯಲ್ಲಿ ಹೆಂಡತಿ ಮತ್ತು ಮಗನೊಂದಿಗೆ ಇದ್ದಾರೆ. ದೊಡ್ಡ ಮನೆ, ಎಕರೆಗಟ್ಟಲೆ ಅಡಿಕೆ ತೋಟ, ಆಳು ಕಾಳು, ಓಡಾಟಕ್ಕೆ ಕಾರು ಎಲ್ಲ ಇದೆ. ವಯಸ್ಸಾಯಿತು, ಸುಮಾರು ಎಪ್ಪತ್ತರ ಹತ್ತಿರ ಹತ್ತಿರ ಅನಿಸುತ್ತದೆ. ಒಮ್ಮೆ ಅವರ ಪ್ರೀತಿಯ ವ್ಯಕ್ತಿಯೊಬ್ಬರ ಜೊತೆ ಅವರ ಮನೆಗೆ ಹೋಗಿದ್ದೆ, ಒಂದು ರಾತ್ರಿ ಅವರಲ್ಲೇ ನಿಂತಿದ್ದೆ ಕೂಡ. ಹಬ್ಬದಡಿಗೆ ಮಾಡಿ, ಬಡಿಸಿ ಖುಶಿಪಟ್ಟಿದ್ದರು, ಆ ದಂಪತಿ ಮತ್ತು ಮಗ. ರಾತ್ರಿಯೆಲ್ಲ ಕೂತು ಅದೂ ಇದೂ ಹರಟಿದ್ದೆವು. ಅಂತರಂಗದಲ್ಲಿ ತೀರ ಒಂಟಿಯಾದ, ತುಂಬ ಸೂಕ್ಷ್ಮ ಸಂವೇದನೆಗಳ ಮನುಷ್ಯ, ಭಾವುಕ.
ಆನಂತರ ಹೀಗೇ, ಆಗಾಗ ಫೋನು ಮಾಡಿ ಮಾತನಾಡುವುದು, ಅವರು ಮಂಗಳೂರಿಗೆ ಬಂದಾಗ ನಾನು ಹೋಗಿ ಭೇಟಿಯಾಗುವುದು, ಮದುವೆ ಮುಂಜಿಗಳೆಂದರೆ, ಸಭೆ ಸಮಾರಂಭಗಳೆಂದರೆ ವಿಚಿತ್ರ ರೇಜಿಗೆಯಿದ್ದ ಅವರೂ ನಾನೂ ಹೊರಗೆ ಕಾರಿನಲ್ಲೇ ಕೂತು ಅದೂ ಇದೂ ಮಾತನಾಡಿ ಬರುವುದು ಎಲ್ಲ ಇತ್ತು. ಪ್ರತಿಸಲವೂ ವಿದಾಯ ಹೇಳುವ ಮೊದಲು ಕಾಗದ ಬರೆಯಿರಿ ಅಂತಲೋ ಬರೆಯುತ್ತೇನೆ ಅಂತಲೋ ಮಾತು ಮುಗಿಸುತ್ತಿದ್ದುದು ಅವರು. ಈಗ ಯಾರು ಕಾಗದ ಬರೆಯುತ್ತಾರೆ, ಅಲ್ಲವ? ಈಮೇಲ್ ಆದರೆ ಸ್ವಲ್ಪ ಸುಲಭ. ಆಫೀಸಿನ ಕೆಲಸದ ನಡುವೆಯೇ ಎರಡು ಸಾಲು ಎಳೆದು ಕಳಿಸಿಬಿಡಬಹುದು. ಪತ್ರ ಬರೆಯುವುದು ಕಷ್ಟ ಅನಿಸಹತ್ತಿದೆ. ಆದರೆ ಇವರ ಬಳಿ ಆಯ್ತು ಬರೆಯುತ್ತೇನೆ ಎಂದ ಮೇಲೆ ಬರೆಯದೇ ಇರುವುದು ಕೂಡ ಒಂದು ಸಂಕಟವಾಗಿ ಬಿಡುತ್ತದೆ. ಅದರಿಂದ ತಪ್ಪಿಸಿಕೊಳ್ಳಲಿಕ್ಕಾದರೂ ಬರೆಯಲು ಕೂರುತ್ತೇನೆ. ಆದರೆ ಎಂಥ ಕಷ್ಟ, ಬರೆಯಲಿಕ್ಕೆ ಏನೂ ಇಲ್ಲದೆ ಪತ್ರ ಬರೆಯುವುದು! ಕೊನೆಗೆ ಪತ್ರಿಕೆಯಲ್ಲಿ ಇತ್ತೀಚೆಗೆ ಓದಿದ ಕತೆಗಳು, ಲೇಖನಗಳು, ಇಷ್ಟವಾದ ಕಾದಂಬರಿ, ಪುಸ್ತಕ ಎಂದೆಲ್ಲ ಬರೆಯಲು ತೊಡಗಿದರೆ ಅದು ಅನುದ್ದಿಶ್ಯ ಉದ್ದವಾಗಿ ಬಿಡುತ್ತದೆ! ಆದರೆ ಇಲ್ಲಿ ಸಂಪಾದಕರ "ಒಂದೇ ಪುಟದ ಮಿತಿಯಲ್ಲಿರಲಿ" ಎಂಬ ನಿರ್ದೇಶವಿಲ್ಲದಿರುವುದರಿಂದ ಮತ್ತು ಅವರಿಗೂ ಇದರಲ್ಲೆಲ್ಲ ಆಸಕ್ತಿ ಇರುವುದರಿಂದ ತೊಂದರೆಯೇನಿಲ್ಲ ಬಿಡಿ.
ಹೇಳಲು ಹೊರಟಿದ್ದು ಇದನ್ನೆಲ್ಲ ಅಲ್ಲ. ಮೊನ್ನೆ ಭಾನುವಾರ, ಇನ್ನೂ ಮುಂಜಾನೆ ಎನ್ನಬಹುದಾದ ರೀತಿ ಮೋಡ ಮುಸುಕಿದ್ದ ಬೆಳಗ್ಗೆ ಇವರು ಇದ್ದಕ್ಕಿದ್ದ ಹಾಗೆ ಫೋನ್ ಮಾಡಿದರು. ಅವರ ಆತ್ಮೀಯ ಮಿತ್ರರೊಬ್ಬರು, ಬಾಲ್ಯದ ಗೆಳೆಯ, ಸರಿ ಸುಮಾರು ಅವರದೇ ವಯಸ್ಸಿನವರು, ಎಲ್ಲೋ ವಿದೇಶದಲ್ಲಿ ಉಪನ್ಯಾಸಕನ ಕೆಲಸ ಸಿಕ್ಕಿ ಹೊರಟು ಹೋದ ವಿಷಯ ತಿಳಿಸಿದರು. ನನಗೇನೂ ಅನಿಸದಿದ್ದರೂ ಹೌದ ಎಂದೆ. ಇಲ್ಲೇ ಇರುವಾಗ ವಾರಕ್ಕೊಮ್ಮೆಯಾದರೂ ಫೋನ್ ಮಾಡುತ್ತಿದ್ದರು, ಆಗಾಗ ಪತ್ರವನ್ನೂ ಬರೆಯುತ್ತಿದ್ದರು ಎಂದರು. ಮುಂದುವರಿದು, ಇನ್ನು ಮೇಲೆ ಅದೂ ಇಲ್ಲ ಎಂದರು. ಆ ಧ್ವನಿ ಸಣ್ಣದಾಗಿತ್ತು.
ಏನೆಲ್ಲ ಇತ್ತು ಆ ಕೊನೆಯ ಮಾತಿನಲ್ಲಿ ಎನ್ನುವುದು ನಮಗಿಬ್ಬರಿಗೇ ಗೊತ್ತು ಬಹುಷಃ. ಇನ್ನು ಮೇಲೆ ಅದೂ ಇಲ್ಲ! ಅದೊಂದೇ ಇದ್ದಿದ್ದು ಎನ್ನುವ ಅರ್ಥವಿಲ್ಲವೆ ಅದರಲ್ಲಿ? ಅಥವಾ ಆ ಮನುಷ್ಯನ ಅಸ್ತಿತ್ವ ಇವರ ಪ್ರಜ್ಞೆಗೆ ಬರುತ್ತಿದ್ದುದೇ ಅದೊಂದರಿಂದ ಎನ್ನಿ. ಇನ್ನು ಅದೂ ಇಲ್ಲವೆಂದರೆ ಏನರ್ಥ? ಇಷ್ಟಕ್ಕೂ ಇವರ ಆ ಮಿತ್ರ ಇದ್ದಿದ್ದು ಉತ್ತರ ಭಾರತದ ಒಂದು ನಗರದಲ್ಲಿ. ಆದರೂ ಅದು ಇವರಿಗೆ ಇಲ್ಲೇ ಅನಿಸಿತ್ತು! ವಿದೇಶ ಮಾತ್ರ ಇಲ್ಲೇ ಅನಿಸುವುದಿಲ್ಲ. ಯಾಕೆಂದರೆ, ಇನ್ನು ವಾರಕ್ಕೊಮ್ಮೆ ಫೋನ್ ಬರುವ ಸಂಭವವಿಲ್ಲ.
ತನ್ನ ಅಕ್ಕನನ್ನು ಕಳೆದುಕೊಂಡ ಮಧ್ಯವಯಸ್ಕರೊಬ್ಬರು ನನಗೆ ಎಸ್ಸೆಮ್ಮೆಸ್ ಬರೆದಿದ್ದರು, ಅಕ್ಕನ ಜೊತೆ ಕಳೆದ ಬಾಲ್ಯದ ಕ್ಷಣಗಳೆಲ್ಲ ಈಗ, ಬೆಂಗಳೂರಿಗೆ ಹೊರಟ ರಾತ್ರಿಯ ಸುವಿಹಾರಿ ಬಸ್ಸಿನಲ್ಲಿ ಒಬ್ಬನೇ ಕೂತ ಒಂಟಿ ಹೊತ್ತಿನಲ್ಲಿ ಮನಸ್ಸಿನ ಮೇಲೆ ಧಾಳಿ ಮಾಡುತ್ತಿವೆ. ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂಬ ಒಂದು ಮಾತನ್ನೇ ಆಧಾರವಾಗಿಟ್ಟುಕೊಂಡು ನಾವೆಲ್ಲ ಅವಳನ್ನು ಮರೆತೇ ಬಿಟ್ಟವರ ಹಾಗೆ ಇದ್ದುಬಿಟ್ಟೆವು ನೋಡು, ಅದೆಲ್ಲ ಈಗ ನೆನಪಾಗಹತ್ತಿದೆ....
ಆದರೆ ವಿಚಿತ್ರ ನೋಡಿ, ನಮ್ಮ ಎಷ್ಟೋ ಆತ್ಮೀಯರು ಸದಾ ಕಾಲ ನಮ್ಮೆದುರೇ ಇರುವುದಿಲ್ಲ. ಅವರು ಎಲ್ಲೋ ನಾವೆಲ್ಲೋ ಇರುವುದೇ ಹೆಚ್ಚು. ಮತ್ತೆ ತೀರ ಜೊತೆಗೇ ಇರುವವರ ಮೇಲೆ ನಮ್ಮ ಅವಲಂಬನ ನಮಗೆ ತಿಳಿಯುವುದೂ ನಾವು ಅವರಿಂದ ದೂರ ದೂರ ಹೊರಟು ನಿಂತಾಗಲೇ. ಆದರೂ ಆ ದೂರವಿರುವ ವ್ಯಕ್ತಿ, ನಮ್ಮ ನೆನಪುಗಳಲ್ಲಿ ನಮ್ಮನ್ನು ಕಾಡುತ್ತ ಇದ್ದರೆ, ಅವನೋ ಅವಳೋ ಸದ್ಯ ಹತ್ತಿರದಲ್ಲೇ ಇಲ್ಲ ಎಂಬುದೇ ಒಂದು ನೋವಾಗಿ ಬಿಟ್ಟರೆ ಹೊರತು, ಕಣ್ಣೆದುರಿಲ್ಲದ ವ್ಯಕ್ತಿಗಾಗಿಯೇ ನಾವು ಹಂಬಲಿಸುವುದು ಕಡಿಮೆ. ಇದ್ದಾರೆ ಎಲ್ಲೋ ಎಂಬ ಸಮಾಧಾನ ಅಥವಾ ಜೊತೆಯಲ್ಲೇ ಇಲ್ಲವಲ್ಲ ಎಂಬ ನೋವು ಇಲ್ಲದಿರುವುದೇ ಅಂಥ ನಿಶ್ಚಿಂತೆಗೆ ಕಾರಣ. ಹಾಗೆ ಬರೇ ಒಂದು ಹಲೋ ಎಂಬ ಧ್ವನಿಯಾಗಿ, ಪತ್ರದ ಅಕ್ಷರಗಳಾಗಿ ನಮ್ಮ ಮಟ್ಟಿಗೆ ಜೀವಂತ ಇರುವ ವ್ಯಕ್ತಿಗಳು ನಮ್ಮ ಬದುಕಿನಲ್ಲಿ ಇಲ್ಲವೆ? ಆ ವ್ಯಕ್ತಿ ನಿಜಕ್ಕೂ ಈ ಕ್ಷಣ ಜೀವಂತವಾಗಿ ಉಸಿರಾಡುತ್ತ ಇದೆಯೇ ಎಂದರೆ ಪ್ರಮಾಣ ಮಾಡಿ ಹೇಳುವಷ್ಟು ಖಾತ್ರಿ ನಮಗಿಲ್ಲದಿದ್ದರೂ ಇದ್ದಾನೆ ಎಂಬ ವಿಶ್ವಾಸ ಹುಟ್ಟಲು ಕಾರಣ ಆ ಹಲೋ, ಅಥವಾ ಆ ಪತ್ರದಲ್ಲಿನ ಅಕ್ಷರಗಳು! ವಿಚಿತ್ರ ಅನಿಸುವುದಿಲ್ಲವೇ? ಅದೇ ವ್ಯಕ್ತಿ ಸತ್ತ ಎಂದು ತಿಳಿಯಿತೆನ್ನಿ. ಆಗ ನೋವು ತಪ್ಪಿದ್ದಲ್ಲ ಅಲ್ಲವೆ? ಕಣ್ಣೆದುರಿಗಿಲ್ಲದ ಆತ್ಮೀಯ ವ್ಯಕ್ತಿ ಇನ್ನೆಲ್ಲೋ ಇದ್ದಾನೆ ಅಥವಾ ಇಲ್ಲ ಎಂಬುದನ್ನು ನಮ್ಮ ಪ್ರಜ್ಞೆ ಗುರುತಿಸುವ, ಗುರುತಿಸಿ ಅದನ್ನು ನೋವಾಗಿಸುವ ಬಗೆ ಇದು.
ಇದನ್ನೂ ಬಿಡಿ. ಮನುಷ್ಯನ ಆಳದ ಒಂಟಿತನ ನನ್ನನ್ನು, ನಿಮ್ಮನ್ನು ತಟ್ಟುತ್ತದೆ. ಒಬ್ಬರೇ ಇರುತ್ತ ಎಲ್ಲವೂ (ಎಲ್ಲರೂ) ತನ್ನಲ್ಲೇ ಇದೆ ಎಂದುಕೊಳ್ಳುವುದು ಏಕಾಂತವಂತೆ. ಯಾರೂ ಇಲ್ಲ ಯಾರೂ ಇಲ್ಲ ಎಂದು ಗೈರು ಅನುಭವಿಸುತ್ತ ಕೊರಗುವುದು ಒಂಟಿತನವಂತೆ. ಎಲ್ಲ ಇದ್ದರೂ ಈ ಒಂಟಿತನ ಮನುಷ್ಯನನ್ನು ಕಾಡುತ್ತ ಇರುವುದು ಸಾಧ್ಯ. ವಯಸ್ಸಾದಂತೆ ಇದು ಹೆಚ್ಚಾಗುವುದೆ? ಬರೇ ಮದುವೆಯಾಗದವರಲ್ಲಿ, ಮದುವೆಯಾಗಿ ಸಂಗಾತಿಯನ್ನು, ಮಕ್ಕಳನ್ನು ಕಳಕೊಂಡವರಲ್ಲಿ ಇದು ಹೆಚ್ಚು ಅಂತೇನೂ ಭಾವಿಸಬೇಕಿಲ್ಲ. ಹೇಳಿದೆನಲ್ಲ, ಎಲ್ಲ ಇದ್ದೂ...
ಮನುಷ್ಯನ ಅಸ್ತಿತ್ವ ಇರುವುದೇ ನಮ್ಮ ಭಾವನೆಗಳಲ್ಲಿ, ನೆನಪುಗಳಲ್ಲಿ ಅನಿಸುವುದಿಲ್ಲವೆ? ನಿಮ್ಮ ಮನಸ್ಸಿನಲ್ಲಿ ಇಲ್ಲದ ಮೇಲೆ ಆ ವ್ಯಕ್ತಿ ನಿಮ್ಮ ಮಟ್ಟಿಗೆ ಇದ್ದೂ ಇಲ್ಲದ ಹಾಗೇ ಅಲ್ಲವೆ? ನಿಮ್ಮ ಮನಸ್ಸಿನಲ್ಲಿ ಇದ್ದ ಮೇಲೆ ಆ ವ್ಯಕ್ತಿ ಇಲ್ಲವಾಗುವುದು ಹೇಗೆ? ಇನ್ನೂ ಇದ್ದಾನೆಂದೇ ಅರ್ಥವಲ್ಲವೆ?
ಆ ಮನುಷ್ಯ ಕೇಳುತ್ತಿರುವುದೂ ಅದೇ, ನಿಮ್ಮ ಮನಸ್ಸಿನಲ್ಲಿ ಒಂದಷ್ಟು ಜಾಗ...ಸ್ವಲ್ಪ ಸೂಕ್ಷ್ಮವಾಗಿ ಆಲಿಸಿದರೆ ನಮ್ಮೊಳಗೂ ಅಂಥ ಒಂದು ಬೇಡಿಕೆ ಇರುವಂತೆ ಅನಿಸುವುದಿಲ್ಲವೆ?