ಮಹಿಳಾ ಸಾಹಿತ್ಯ ಯಾಕೆ ಹೀಗಿದೆ?
"ಮಾನಸ" ಎಂಬ ಹೆಸರಿನಿಂದ ಒಂದು ಮಾಸಪತ್ರಿಕೆ ನನಗೆ ತಿಳಿದಂತೆ ಸುಮಾರು ೧೯೯೮ರಿಂದಲೂ ಬರುತ್ತಾ ಇತ್ತು. ಕಳೆದ ಎರಡು ವರ್ಷದ ಹಿಂದೆ ಅದು ಇದ್ದಕ್ಕಿದ್ದಂತೆ ನಿಂತು ಹೋಯಿತು. ಇದೀಗ ಮತ್ತೆ "ನಮ್ಮ ಮಾನಸ" ಎಂಬ ಹೆಸರಿನಿಂದ ಮತ್ತಷ್ಟು ಮೈತುಂಬಿಕೊಂಡು, ಹೊಸ ಗುರುತ್ವವನ್ನೂ ಮೈಗೂಡಿಸಿಕೊಂಡು ಹೊರಬರುತ್ತಿದೆ. ಈಚಿನ ಕೆಲವು ಸಂಚಿಕೆಗಳಲ್ಲಿ ಕಾಣಿಸಿಕೊಂಡ ಬರಹಗಾರರ ಹೆಸರು ಗಮನಿಸಿದರೆ ಇದು ನಿಮಗೇ ಅರ್ಥವಾದೀತು: ನೀಲಾಂಜನ ಬಿಸ್ವಾಸ್, ಎಚ್ ಎಸ್ ದೊರೆಸ್ವಾಮಿ, ಡಾ.ಚಂದ್ರಮತಿ ಸೋಂದಾ, ಎನ್ ಎಸ್ ಶ್ರೀಧರ ಮೂರ್ತಿ, ಪ್ರತಿಭಾ ನಂದಕುಮಾರ್, ಮಲತಿ ಬೇಳೂರು, ಕೋ.ಚೆನ್ನಬಸಪ್ಪ, ಡಾ.ಪಿ.ಚಂದ್ರಿಕಾ, ಎಸ್ ಮಾಲತಿ ಸಾಗರ, ಡಾ. ನಿರಂಜನ ವಾನಳ್ಳಿ, ವಿ.ಗಾಯತ್ರಿ, ಪ್ರೊ.ಎಂ.ಎಚ್ ಕೃಷ್ಣಯ್ಯ, ಯು.ಮಹೇಶ್ವರಿ, ಸಿ.ಜಿ.ಮಂಜುಳಾ, ಬಿ.ಎಸ್.ಪೂರ್ಣಿಮಾ, ಕಮಲಾ ಭಾಸಿನ್, ಮಮತಾ ಜಿ.ಸಾಗರ, ಕೆ.ಸತ್ಯನಾರಾಯಣ ಇತ್ಯಾದಿ. ರಾಜೇಶ್ವರಿ ಎಚ್ ಎಸ್ ನಿರ್ವಹಿಸುತ್ತಿರುವ ಈ ಪತ್ರಿಕೆಯ ಹಿಂದೆ ಹಲವರಿದ್ದಾರೆ. ವೆಂ. ವನಜ ಬೇರೆ ಭಾಷೆಗಳ ಮಹತ್ವದ ಲೇಖನಗಳನ್ನು ಕನ್ನಡಕ್ಕೆ ತರುತ್ತಿದ್ದಾರೆ. (ವಾರ್ಷಿಕ ಚಂದಾ ಕೇವಲ ನೂರು ರೂಪಾಯಿ. ವಿಳಾಸ: ನಮ್ಮ ಮಾನಸ, ೧೧೪/೫, ೯ನೆಯ ತಿರುವು, ೨ನೆಯ ಮುಖ್ಯ ರಸ್ತೆ, ಚಾಮರಾಜ ಪೇಟೆ, ಬೆಂಗಳೂರು- ೫೬೦ ೦೧೮)
ಈ ಬಾರಿಯ "ನಮ್ಮ ಮಾನಸ"ದಲ್ಲಿ ಖ್ಯಾತ ಕತೆಗಾರ ಕೆ. ಸತ್ಯನಾರಾಯಣ ಮಹಿಳಾ ಸಾಹಿತ್ಯದ ಕೆಲವು ಸಂಗತಿಗಳತ್ತ ಗಮನ ಸೆಳೆಯುವ ಒಂದು ಲೇಖನ ಬರೆದಿದ್ದಾರೆ. ಹೊಸ ಕಾಲದ ಬರಹಗಾರ್ತಿಯರಿಂದ ಹೂವಯ್ಯ, ರಾಮ, ಲಚ್ಚ, ಗುತ್ತಿ, ಚೋಮನಂಥ ಬಹುಕಾಲ ನೆನಪಿನಲ್ಲಿ ಉಳಿಯಬಲ್ಲ, ಹಾಗೆ ಉಳಿದು ಕ್ರಮೇಣ ನಮ್ಮ ನಡುವಿನ ಜೀವಂತ ವ್ಯಕ್ತಿಗಳೇ ಆಗಬಲ್ಲಂಥ ಗಟ್ಟಿ ಪಾತ್ರಗಳು ಸೃಷ್ಟಿಯಾಗಿಲ್ಲ - ಯಾಕಿರಬಹುದು ಎಂಬ ಒಂದು ಬಗೆಯ ಸ್ವಗತದ ಹಾಗೆ ಕೇಳಿಕೊಂಡ, ಮೆಲುದನಿಯ ಜಿಜ್ಞಾಸೆ ಇಲ್ಲಿದೆ. ಇದೇ ಸಂಚಿಕೆಯಲ್ಲಿ ಡಾ.ಪಿ. ಚಂದ್ರಿಕಾ ಈ ಜಿಜ್ಞಾಸೆಗೆ ತಮ್ಮ ಅನಿಸಿಕೆಗಳ ಸಾಥ್ ನೀಡಿದ್ದಾರೆ. ಅಭಿನವ ಹೊರತಂದ ಪುಸ್ತಕಗಳನ್ನು ಗಮನಿಸಿದವರಿಗೆ ಪಿ. ಚಂದ್ರಿಕಾ ಗೊತ್ತು. ಚಂದ್ರಿಕಾ ಅವರಿಗೆ ಮಹಿಳಾ ಸಾಹಿತ್ಯ ಎನ್ನುವುದು ಪುರುಷ ಸಾಹಿತ್ಯವನ್ನು ಮಾದರಿಯಾಗಿಟ್ಟುಕೊಂಡು, ಅದು ತುಳಿದ ಹಾದಿಯಲ್ಲೇ ಸಾಗಬೇಕೆಂಬ ಪುರುಷ- ನಿರೀಕ್ಷೆಯ ಕುರಿತೇ ಸಹಮತವಿಲ್ಲ. ಹೊಸ ಕಾಲದ ಬರಹಗಾರ್ತಿಯರು ಇಂಥ ಮಾದರಿಗಳಿಲ್ಲದೆ ಸ್ವತಂತ್ರವಾಗಿ ಸಾಕಷ್ಟು ಗಟ್ಟಿಯಾದ ಕೃತಿಗಳನ್ನು ಕೊಟ್ಟಿದ್ದಾರೆಂದು ಅವರು ಬರೆಯುತ್ತಾರೆ. ಈ ಚರ್ಚೆ ಕುತೂಹಲಕರವಾಗಿದೆ ಯಾಕೆಂದರೆ ಈ ಇಬ್ಬರ ಗಮನಿಸುವಿಕೆಯಲ್ಲೂ ಸತ್ಯಗಳಿವೆ, ತೀರ್ಮಾನಗಳಿಲ್ಲ. ಹಾಗೆಯೇ ಈ ಸಂವಾದ ಎಲ್ಲರಿಗೂ ಮುಕ್ತವಾಗಿರುವುದರಿಂದ ನಮ್ಮ ಸಂಪದದ ಓದುಗರು, ಸದಸ್ಯರು ಇದನ್ನು ಗಮನಿಸಲಿ, ಚರ್ಚಿಸಲಿ ಎಂದು ನನಗೆ ಆಸೆ.
ನಮ್ಮ ಮಹತ್ವದ ಕತೆಗಾರ ವಿವೇಕ ಶಾನಭಾಗ ತರುತ್ತಿರುವ "ದೇಶಕಾಲ" ತ್ರೈಮಾಸಿಕದ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ ಅನಿಸುತ್ತದೆ. ಅದನ್ನು ಹಲವರು ಬೇರೆ ಬೇರೆ ಕಾರಣಗಳಿಗಾಗಿ ದೂರವಿಟ್ಟರೂ ವಿವೇಕ್ ಮಾತ್ರ ಅಕ್ಷರ ಮತ್ತು ಚನ್ನಕೇಶವರ ಜೊತೆ ಬಹಳ ಅಕ್ಕರಾಸ್ತೆಯಿಂದ ಅದನ್ನು ರೂಪಿಸುತ್ತ, ಏಕಾಂಗಿಯಾಗಿ ಹೆಣಗುತ್ತಲೇ ಇದ್ದಾರೆ. ಅದನ್ನು ಕಾರ್ಪೊರೇಟ್ ಪತ್ರಿಕೆ ಎಂದು ಮೂದಲಿಸುವವರು ದೇಶಕಾಲದ ಹಿಂದೆ ಇರುವುದು ಕೇವಲ ಸರಳ ಸಹಜ ವ್ಯಕ್ತಿತ್ವದ ಕೆಲವೇ ಮಂದಿಯ ತೆರೆದ ಮನಸ್ಸು ಎಂಬುದನ್ನು ಅರಿತರೆ ಬಹುಷಃ ಸ್ವಲ್ಪವಾದರೂ ಒಳ್ಳೆಯದಿತ್ತು. ಇರಲಿ. ಈ ಬಾರಿಯ "ದೇಶಕಾಲ"ದಲ್ಲಿ ಕುಸುಮಾಕರ ದೇವರಗೆಣ್ಣೂರರ ಸಂದರ್ಶನವಿದೆ. ಕೆಲವರಿಗಾದರೂ ಈ ಹೆಸರಿನ ಪರಿಚಯ ಇರಬಹುದು ಅಂತ ಆಸೆ. ನವ್ಯ ಕಾಲಘಟ್ಟದಲ್ಲೇ ಬರೆಯತೊಡಗಿದ, ಲಂಕೇಶ್, ಅನಂತಮೂರ್ತಿ ಸಾಲಿನಲ್ಲೇ ಬರಬೇಕಿದ್ದ ಹೆಸರಿದು. ಬಹು ಮುಖ್ಯವಾದ ಕೆಲವು ಕಾದಂಬರಿಗಳನ್ನು ಅವರು ಬರೆದಿದ್ದಾರೆ. ನಾಲ್ಕನೆಯ ಆಯಾಮ, ನಿರಿಂದ್ರಿಯ, ಬಯಲ ಬಸಿರು ಮತ್ತು ಪರಿಘ. "ದೇಶಕಾಲ"ದ ಮುವ್ವತ್ತಕ್ಕೂ ಹೆಚ್ಚಿನ ಪುಟಗಳಲ್ಲಿ ಹರಡಿಕೊಂಡಿರುವ ಈ ವಿಸ್ತೃತ ಸಂದರ್ಶನ ಬಹುಷಃ ಈ ದಿನಗಳಲ್ಲಿ ಬಹಳ ಅಪರೂಪದ ವಿದ್ಯಮಾನವೇ ಸರಿ. ಹಿಂದೆಲ್ಲ ನಮ್ಮ ತರಂಗ, ಸುಧಾಗಳ ಮುಖಪುಟದಲ್ಲಿ ಹೆಸರಾಂತ ಸಾಹಿತಿಗಳು ಕಾಣಿಸಿಕೊಳ್ಳುವುದಿತ್ತು. ಅವರ ಸಂದರ್ಶನ, ಪರಿಚಯ ಇತ್ಯಾದಿಗಳು ಹತ್ತು ಹದಿನೈದು ಪುಟಗಳ ತುಂಬ, ಫೋಟೋಗಳ ಸಮೇತ ಇರುತ್ತಿದ್ದವು. ಆದರೆ ಈಗ ಪತ್ರಿಕೆಗಳಿಗೆ ಅಂಥ ವಿಚಾರಗಳಲ್ಲಿ ಆಸಕ್ತಿಯಿಲ್ಲ. ಯಾಕೆಂದರೆ ಅದಕ್ಕೆಲ್ಲ ಈಗ ಮಾರ್ಕೆಟ್ ಇಲ್ಲ!
ಕಳೆದ ವರ್ಷ ನಮ್ಮ ಕುಂದಾಪುರದ ವಸಂತ ಬನ್ನಾಡಿಯವರು "ದೇಶಕಾಲ"ದ ಮಾದರಿಯಲ್ಲೇ "ಶಬ್ದಗುಣ" ಎಂಬ ಒಂದು ಅರೆ ವಾರ್ಷಿಕ ಪತ್ರಿಕೆ ತಂದರು. ಅದರಲ್ಲಿ ಇದೇ ತರ ಎಚ್ ಎಸ್ ಶಿವಪ್ರಕಾಶ್ ಮತ್ತು ತಿರುಮಲೇಶರ ವಿಸ್ತೃತ ಸಂದರ್ಶನಗಳ ಅರ್ಧಭಾಗ ಪ್ರಕಟವಾದ ನೆನಪು. ತುಂಬ ಮೌಲಿಕವಾದ ಸಂದರ್ಶನವಾಗಿತ್ತದು. ಆದರೆ ವಿಪರ್ಯಾಸವೆಂದರೆ ಅದರ ಮುಂದಿನ ಭಾಗ ಬರಲೇ ಇಲ್ಲ. ಅರೆವಾರ್ಷಿಕ ಪತ್ರಿಕೆ ಪೂರ್ಣಾಯುಸ್ಸು ಬರಲಿಲ್ಲ. ಇದನ್ನು ಕನ್ನಡದ ಶಬ್ದಗುಣವೆನ್ನಬೇಕೆ, ಕನ್ನಡಿಗರ ಅಭಿಮಾನ ಇಷ್ಟೇ ಎನ್ನಬೇಕೆ?
ಮತ್ತೆ ಕುಸುಮಾಕರರ ಸಂದರ್ಶನಕ್ಕೆ ಬರುತ್ತೇನೆ. ಇಲ್ಲಿ ಅವರು ತಮ್ಮ ತೀರಿ ಹೋದ ಪತ್ನಿಯ ಡಾಯರಿಯ ಆಧಾರದ ಮೇಲೆ "ಭಾವನಿ" ಎಂಬ ಹೆಸರಿನ ಒಂದು ಹೊಸ ಕಾದಂಬರಿಯನ್ನು ಬರೆಯುತ್ತಿರುವುದಾಗಿ ಹೇಳಿದ್ದಾರೆ. ಗಾಂಧಿ ಮತ್ತು ಕಸ್ತೂರಬಾ ನಡುವೆ ಆಹಾರ, ಒಡವೆ, ಬಟ್ಟೆಬರೆ, ದಿನಚರಿಗಳ ಬಗ್ಗೆ ಎಂಥೆಂಥ ಮನಸ್ತಾಪಗಳು, ಭಿನ್ನಾಭಿಪ್ರಾಯಗಳೆಲ್ಲ ಇದ್ದವೊ ಬಲ್ಲವರೇ ಬಲ್ಲರು. ಗಾಂಧಿಯ ನಿಕಟವರ್ತಿಯಾಗಿದ್ದ ತಮ್ಮ ತಂದೆಯಿಂದಲೂ ಸಾಕಷ್ಟು ವಿಚಾರ ತಿಳಿದಿದ್ದ ಕುಸುಮಾಕರರ ಕಾದಂಬರಿ ಆ ದಾಂಪತ್ಯದ ಕನ್ನಡಿ ಕೂಡ ಆಗಿ ಮೂಡುವುದು ಸಾಧ್ಯವಿದೆ! ಅದೇನೇ ಇದ್ದರೂ ಇಲ್ಲಿ, ಕುಸುಮಾಕರರು ತಮ್ಮ ಪತ್ನಿಯ ಕುರಿತೇ ಹೇಳಿರುವ ಕೆಲವು ಮಾತುಗಳು, ಅವರ ಆತ್ಮವಿಮರ್ಶೆ ಮತ್ತು ಈ ತರದ ಆತ್ಮವಿಮರ್ಶೆಯಿಂದೇನೂ ತಾವು ನಡೆದುಕೊಂಡ ರೀತಿಗೆ ಸಮಜಾಯಿಸಿ ಸಿಗದೆಂಬ ಅರಿವಿದ್ದೇ ಅವರು ತೆರೆದುಕೊಂಡಿರುವ ರೀತಿ ನಿಜಕ್ಕೂ ಕುತೂಹಲಕರವಾಗಿದೆ.
ಮಹಿಳಾ ಸ್ವಾತಂತ್ರ್ಯ, ಮಹಿಳಾ ಸಾಹಿತ್ಯ ಎಂದೆಲ್ಲ ಯೋಚಿಸುವಾಗ ಈ ಸಂದರ್ಶನವನ್ನೂ ನಾವು ಗಮನಿಸಬೇಕು ಅನಿಸುತ್ತದೆ. ಯಾಕೆಂದರೆ ಇದು ನಾವು ನೀವು ನಮ್ಮ ನಮ್ಮ ಮನೆಗಳಲ್ಲಿ ನಮ್ಮ ಹೆಂಡತಿಯನ್ನು, ಅಕ್ಕ, ತಂಗಿ, ತಾಯಿ, ಮಗಳು ಎಂದೆಲ್ಲ ಇರುವ ಸ್ತ್ರೀಯರನ್ನು ಹೇಗೆ ನಡೆಸಿಕೊಳ್ಳುತ್ತೇವೆ, ಎಷ್ಟನ್ನು ಅವರ ಜೊತೆ ಹಂಚಿಕೊಳ್ಳುತ್ತೇವೆ, ಎಷ್ಟರ ಮಟ್ಟಿಗೆ ನಮ್ಮ ಮನೋರಂಜನೆ, ತಿರುಗಾಟ, ದುಂದು, ಜ್ಞಾನಸಂಗ್ರಹಗಳ ವಿಚಾರದಲ್ಲಿ ಅವರನ್ನು ನಮ್ಮ ಜೊತೆಗೇ ಕೊಂಡೊಯ್ಯುತ್ತೇವೆ ಎಂಬೆಲ್ಲ ಪ್ರಶ್ನೆಗಳ ಎದುರು ನಮ್ಮನ್ನು ಕ್ಷಣಕಾಲವಾದರೂ ನಿಲ್ಲಿಸುತ್ತದೆ. ಅಲ್ಲೆಲ್ಲ ಅವರಿಗೆ ಸಲ್ಲಬೇಕಾದುದಕ್ಕೆ ನಾವೇ ತಿಳಿದೋ, ತಿಳಿಯದೆಯೋ, ಅಸಡ್ಡೆಯಿಂದಲೋ, ಧೂರ್ತತನದಿಂದಲೋ ಅಡ್ಡ ನಿಂತಿರುತ್ತ ಅವರ ಸಾಹಿತ್ಯದಲ್ಲಿ, ಕಲೆಯಲ್ಲಿ ಪರಿಪೂರ್ಣತ್ವವನ್ನು ನಿರೀಕ್ಷಿಸುವುದು ಕೂಡ ಒಂದು ಬಗೆಯ ಅನ್ಯಾಯವೇ. ಆದರೆ ಸ್ತ್ರೀ ಇದನ್ನು ಮೀರಿ ನಿಲ್ಲಬಲ್ಲವಳು, ನಿಂತವಳು. ಹಾಗಾಗಿ ಅವಳ ಸಾಧನೆ ಈ ಎಲ್ಲ ತೊಡಕಿನೆಡೆಯಿಂದ ಎದ್ದು ಬಂದಿರುವಂಥದ್ದು ಎಂಬುದನ್ನು ವಿಶೇಷತಃ ಗಮನಿಸಬೇಕಾಗುತ್ತದೆ. ಹಾಗಾಗಿಯೇ ಇಲ್ಲಿ ಅವಳ ಅಭಿವ್ಯಕ್ತಿಗೆ ಮಾನದಂಡಗಳನ್ನು, ಮಾದರಿಗಳನ್ನು ಹೇಳುವ ಹಕ್ಕು ಯಾರಿಗೂ ಇಲ್ಲ ಎನ್ನುವುದರಲ್ಲಿ ತಥ್ಯವಿದೆ. ಆದರೆ ಸತ್ಯನಾರಾಯಣ ಅದನ್ನು ಮಾಡಿಲ್ಲ ಎಂಬುದನ್ನು ಗಮನಿಸಬೇಕು. ಸತ್ಯನಾರಾಯಣರು ಎತ್ತಿರುವ ಜಿಜ್ಞಾಸೆಯಲ್ಲೂ ಹುರುಳಿದೆ ಮತ್ತು ಬರೇ ಅದರಲ್ಲಿನ ಪುರುಷ ಧ್ವನಿಯನ್ನು ಮುಂದೆ ಮಾಡುವುದರಿಂದ ಒಟ್ಟಾರ್‍ಎ ಸಾಹಿತ್ಯಕ್ಕೆ ಅನ್ಯಾಯವಾಗಬಾರದಲ್ಲ! ಕೆ. ಸತ್ಯನಾರಾಯಣ ಮತ್ತು ಪಿ. ಚಂದ್ರಿಕಾ ಇಬ್ಬರೂ ಸರಿಯಾಗಿಯೇ ಬರೆದಿದ್ದಾರೆ. ಯಾಕೆಂದರೆ, ಈ ವಿಚಾರಕ್ಕೇ ಮೂಲಭೂತವಾಗಿ ಹಲವು ಮುಖಗಳಿವೆ, ಎಲ್ಲವನ್ನೂ ಸಮಾಧಾನದಿಂದ ಗಮನಿಸುತ್ತ ಹೋಗಬೇಕಿದೆ. ಹಾಗೆ ಮಾಡುವುದರಿಂದ ಸಾಹಿತ್ಯಕ್ಕೆ ಮಾತ್ರವಲ್ಲ ಒಟ್ಟಾರೆಯಾಗಿ ಮನುಷ್ಯನೇ ತನ್ನನ್ನು ತಾನು ತಿದ್ದಿಕೊಳ್ಳುವುದಕ್ಕೆ ಅದು ಸಹಾಯಕವಾಗುವುದು ಸಾಧ್ಯವಿದೆ.
Comments
ಉ: ಮಹಿಳಾ ಸಾಹಿತ್ಯ ಯಾಕೆ ಹೀಗಿದೆ?