ಕನ್ನಡ ಅಕ್ಷರದಲ್ಲಿ ಅಂತರ್ಜಾಲ ವೆಬ್‍ಸೈಟ್ ಹೆಸರು ಸಾಧ್ಯವೇ?
(ಇ-ಲೋಕ-44)(16/10/2007)
ಅಂತರ್ಜಾಲದಲ್ಲಿ ಕನ್ನಡ ಬಳಕೆ ಹೆಚ್ಚಿ,sampada.netನಂತಹ ತಾಣಗಳಲ್ಲಿ ಜನರು ಕನ್ನಡದಲ್ಲೇ ಮುಕ್ತವಾಗಿ ಚರ್ಚಿಸಲು ಸಾಧ್ಯವಾಗಿರುವುದು ಯುನಿಕೋಡ್ ಎನ್ನುವ ಶಿಷ್ಟತೆಯ ಕೊಡುಗೆ.ಆದರೆ sampada.netವನ್ನು ಸಂಪದ.ನೆಟ್ ಎಂದೇ ಬಳಸಲು ಸಾಧ್ಯವಾಗಿಲ್ಲ. ಇಂತಹ ಬದಲಾವಣೆಯೂ ಸದ್ಯೋಭವಿಷ್ಯತ್ತಿನಲ್ಲಿ ಸಾಧ್ಯ.Internet Corporation for Assigned Names and Numbers (ICANN) ಎನ್ನುವ ಸಂಸ್ಥೆ ಅಂತರ್ಜಾಲವನ್ನು ನಿಯಂತ್ರಿಸುತ್ತಿದೆ. ಸಂಪೂರ್ಣವಾಗಿ ಇಂಗ್ಲಿಷ್ ಅಲ್ಲದ ಭಾಷೆಯಲ್ಲಿರುವ ಅಂತರ್ಜಾಲ ತಾಣದ ಹೆಸರಿನ ಬಳಕೆ ಸಾಧ್ಯವೇ ಎನ್ನುವುದರ ಬಗ್ಗೆ ಹಲವಾರು ಪರೀಕ್ಷೆಗಳು ಈ ವಾರದಲ್ಲಿ ನಡೆಯಲಿವೆ.ಸದ್ಯ ಅನ್ಯಭಾಷೆಯ ಪದಗಳನ್ನು ಬಳಸಲು ಅನುಮತಿ ಕೊಟ್ಟಿದ್ದರೂ,.com, .net ಇಂತಹ ಅಂತ್ಯಾಕ್ಷರಗಳು ಇಂಗ್ಲಿಷ್‍ನಲೇ ಇರುವುದು ಅನಿವಾರ್ಯ.
ಚೀನಾ,ಸೌದಿ ಅರೇಬಿಯಾ,ರಷ್ಯಾ ಇಂತಹ ದೇಶಗಳು ಪೂರ್ಣವಾಗಿ ಅನ್ಯಭಾಷೆಯಲ್ಲಿರುವ ಅಂತರ್ಜಾಲ ವಿಳಾಸವನ್ನು ಬಳಸುತ್ತಿವೆಯಾದರೂ,ಈ ವಿಳಾಸಗಳು ಆ ದೇಶದ ಒಳಗೆ ಮಾತ್ರಾ ಲಭ್ಯವಿವೆ.ಅಂದರೆ ಆ ದೇಶಗಳು ತಮ್ಮದೇ ಆದ ಅಂತರ್ಜಾಲವನ್ನು ನಿರ್ಮಿಸಿಕೊಂಡಿವೆ. ಹೀಗೆ ಪ್ರತಿ ದೇಶವೂ ಮಾಡಿದರೆ,ಅಂತರ್ಜಾಲವೆನ್ನುವುದು,ಅಖಂಡವಾಗಿರದೆ,ಪ್ರತ್ಯೇಕ ಪ್ರತ್ಯೇಕ ಭಾಗಗಳಾಗಿ ಬಿಡುವ ಅಪಾಯವಿದೆ.ಆದುದರಿಂದ ಒಂದೇ ಅಂತರ್ಜಾಲವನ್ನು ಉಳಿಸಿಕೊಳ್ಳಬೇಕಾದರೆ ಯಾವುದೇ ಭಾಷೆಯ ಲಿಪಿಯಲ್ಲಿ ಇರುವ ಅಂತರ್ಜಾಲ ವಿಳಾಸವನ್ನು ಬಳಸಲು ಅನುಕೂಲ ಕಲ್ಪಿಸುವುದು ಅನಿವಾರ್ಯವಾಗಿದೆ.
ಸದ್ದಿಲ್ಲದ ಕಂಪ್ಯೂಟರ್ ಬೇಕಾಗಿದೆ
ಹೆಚ್ಚಿನ ಕಂಪ್ಯೂಟರುಗಳು ಕೆಲಸ ಮಾಡುವಾಗ ಸುಮಾರು ನಲುವತ್ತು ಡೆಸಿಬೆಲ್ ಸದ್ದು ಮಾಡುತ್ತವೆ ಎನ್ನುವುದನ್ನು ಗಮನಿಸಿದ್ದೀರಾ?ಕಂಪ್ಯೂಟರನ್ನು ತಂಪಾಗಿರಿಸಲು ಬಳಕೆಯಾಗುವ ಫ್ಯಾನ್,ಡಿವಿಡಿ ಡ್ರೈವ್ ಮತ್ತು ಹಾರ್ಡ್‍ಡಿಸ್ಕಿನ ಡ್ರೈವ್ ಇವೆಲ್ಲವೂ ತಿರುಗುವ ಭಾಗಗಳಾದ್ದರಿಂದ ಸದ್ದು ಮಾಡುತ್ತವೆ.ಕಚೇರಿಯಲ್ಲಿ ಇತರ ಶಬ್ದಮಾಲಿನ್ಯ ಇರುವುದು ಸಾಮಾನ್ಯ. ಹೀಗಾಗಿ ಕಂಪ್ಯೂಟರ್ ಸದ್ದು ಅದರಲ್ಲಿ ಉಡುಗಿ ಹೋಗಿ,ಸದ್ದು ಮಾಡುವುದು ಗಮನಕ್ಕೆ ಬರದಿರಬಹುದು. ಆದರೆ ಮನೆಯಲ್ಲಿ ಬಳಸುವ ಕಂಪ್ಯೂಟರಿನ ಸದ್ದು ಇಲ್ಲವೇ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಬಳಕೆಯಾಗುವ ಕಂಪ್ಯೂಟರ್ ಸದ್ದು ಎದ್ದು ಕೇಳಿಸುತ್ತದೆ. ರೆಕಾರ್ಡಿಂಗ್‍ನಲ್ಲಿ ಕಂಪ್ಯೂಟರ್ ಸದ್ದು ಅನಪೇಕ್ಷಿತ ಕೂಡಾ.ಕಂಪ್ಯೂಟರಿನ ಸದ್ದಡಗಿಸಲು ನಿಧಾನ ತಿರುಗುವ ಫ್ಯಾನ್ ಬಳಕೆ ಅನಿವಾರ್ಯ. ಆದರೆ ಇದರಿಂದ ಕಂಪ್ಯೂಟರಿನ ತಂಪುಗೊಳಿಸುವ ವ್ಯವಸ್ಥೆಗೆ ತೊಂದರೆಯಾಗದಿರ ಬೇಕಾದರೆ,ಗಾಳಿಯು ಸರಾಗವಾಗಿ ಓಡಾಡಲು ವ್ಯವಸ್ಥೆ ಕಲ್ಪಿಸಬೇಕಾಗುತ್ತದೆ.ಹಾಗೆಯೇ ಡಿಸ್ಕ್ ಡ್ರೈವ್‍ಗಳಲ್ಲಿ ಗ್ಯಾಸ್ಕೆಟ್ ಬಳಸಬೇಕು.ಬಿಸಿಯೇರುವ ಕಂಪ್ಯೂಟರ್ ಚಿಪ್‍ಗಳಿಂದ ಶಾಖವನ್ನು ಹೊರಗೆ ಸಾಗಿಸಲು ಹೀಟ್‍ಸಿಂಕ್ ಎಂದು ಕರೆಯಲಾಗುವ ಶಾಖವನ್ನು ಹೊರಗಿನ ವಾತಾವರಣಕ್ಕೆ ಬಿಟ್ಟುಕೊಡುವ ಲೋಹದ ಹಾಳೆಗಳ ಬಳಕೆ ಮಾಡಿಯೂ ಸದ್ದಡಗಿಸಲು ಸಾಧ್ಯ.
ಕ್ಯೂಟ್ ಕಾರುಗಳು
ಜಪಾನಿನ ಕಾರು ತಯಾರಕರಾದ ಹೊಂಡ,ಟೊಯೋಟ ಮತ್ತು ನಿಸಾನ್ ಕಂಪೆನಿಗಳು ಹೊಸ ತಲೆಮಾರಿನ ಕಾರುಗಳ ವಿನ್ಯಾಸವನ್ನು ಸಿದ್ಧ ಪಡಿಸಿವೆ.ಹೊಸ ಕಾರುಗಳು ಎತ್ತರವಾಗಿ,ರಬ್ಬರಿನ ಮೇಲ್ಮೈ ಹೊದಿಕೆ ಹೊಂದಿವೆ.ಇವುಗಳು ತಮ್ಮ ಸ್ಥಿತಿಯನ್ನು ಸೂಚಿಸಲು ಬೇರೆ ಬೇರೆ ವರ್ಣದ ಬೆಳಕನ್ನು ಹೊರಚೆಲ್ಲಿ ಬಣ್ಣ ಬದಲಿಸುವ ಸಾಮರ್ಥ್ಯ ಪಡೆದಿವೆ.ಇದರಿಂದ ಕಾರಿನ ಹೊರಗಡೆಯಿರುವ್ವರಿಗೆ ಸಂಕೇತಗಳನ್ನು ನೀಡಬಹುದು.ಕಾರಿನ ಒಳಗೆ ಕೋಣೆಯಲ್ಲಿ ಕುಳಿತ ಅನುಭವ ಸಿಗುವಂತೆ ವಿನ್ಯಾಸವಿದೆ.ಇದರ ಸೀಟುಗಳು ದೇಹವನ್ನು ಆರಾಮವಿರಿಸುವ ರೀತಿಯಿದೆ.ಕಾರುಗಳು ಪರಿಸರಕ್ಕೆ ಹಾನಿ ತರುವ ವಾಹನಗಳೆಂಬ ಹಣೆಪಟ್ಟಿಯನ್ನು ತೊರೆದು,ಬಳಕೆದಾರರಿಗೆ ಉತ್ತಮ ಸಂಗಾತಿಯಾಗಿ ಕಾಣಿಸುವಂತೆ ಮಾಡುವುದೇ ಕಾರು ತಯಾರಕರ ಉದ್ದೇಶವಾಗಿದೆ. ಇಂತಹ "ಮುದ್ದು" ಕಾರುಗಳು ರಸ್ತೆಯಲ್ಲಿ ಓಡಾಡಲು ಇನ್ನೂ ಕೆಲ ಕಾಲ ಕಾಯಬೇಕಾದೀತು.
ಶೋಧಪಟು "ಗೂಗಲ್"
ಅಂತರ್ಜಾಲದಲ್ಲಿ ನಮಗೆ ಬೇಕಾದ ಮಾಹಿತಿಗೆ ಹುಡುಕಲು ಯಾವ ಅಂತರ್ಜಾಲ ತಾಣ ಸೂಕ್ತವೆಂಬ ಹುಡುಕಾಟ ಅಗತ್ಯವೇ ಇಲ್ಲ. ಶೋಧ ಕಾರ್ಯಕ್ಕೆ ಅನ್ವರ್ಥನಾಮವಾಗಿ ಗೂಗಲ್ ಹೊರಹೊಮ್ಮಿದೆ.ಆಗಸ್ಟ್ ತಿಂಗಳ ವಿವರಗಳನ್ನೇ ತೆಗೆದುಕೊಂಡರೆ,ಎಪ್ಪತ್ತೈದು ಕೋಟಿ ಅಂತರ್ಜಾಲ ಬಳಕೆದಾರರು ಅರುವತ್ತೊಂದು ಬಿಲಿಯನ್ ಶೋಧಕಾರ್ಯಗಳನ್ನು ಕೈಗೊಂಡರು.ಅವುಗಳ ಪೈಕಿ ಅರೆವಾಸಿ ಅಂದರೆ ಮೂವತ್ತೇಳು ಬಿಲಿಯನ್ ಶೋಧಗಳು ಗೂಗಲ್ ತಾಣದ ಮೂಲಕವೇ ನಡೆದಿವೆ.ಯಾಹೂ ನಂತರದ ಸ್ಥಾನದಲ್ಲಿದ್ದು ಎಂಟೂವರೆ ಬಿಲಿಯನ್ ಬಳಕೆದಾರರಿಗೆ ಶೋಧಿಸಿ ಕೊಟ್ಟಿದೆ.ನಂತರದ ಸ್ಥಾನ ಚೀನಾದ ತಾಣ ಬೈದು.ಕಾಂ ಪಡೆದಿದೆ.ಇದು ಮೂರು ಬಿಲಿಯನ್ ಗ್ರಾಹಕರನ್ನು ಹೊಂದಿತ್ತು.ಮೈಕ್ರೋಸಾಫ್ಟ್ ಶೋಧ ಪುಟ ಎರಡು ಬಿಲಿಯನ್ ಗ್ರಾಹಕರನ್ನಷ್ಟೇ ಸೆಳೆಯಿತು.
ವಿದ್ಯಾರ್ಥಿಗಳ ತರಬೇತಿಗೆ ಐಬಿಎಂ,ಗೂಗಲ್ ಸಹಾಯ
ಅಂತರ್ಜಾಲದ ತಾಣಗಳಲ್ಲಿ ಮಿಲಿಯಗಟ್ಟಲೆ ಜನರು ವ್ಯವಹರಿಸುತ್ತಾರೆ.ಇಂತಹ ತಾಣಗಳನ್ನು ನಿರ್ವಹಿಸುವ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಿ ಅವನ್ನು ಪರೀಕ್ಷೆಗೊಡ್ಡಲು ಕಾಲೇಜುಗಳ ಪ್ರಯೋಗಾಲಯಗಳು ಉಪಯೋಗಕ್ಕೆ ಬಾರವು.ವಿದ್ಯಾರ್ಥಿಗಳು ಅಂತಹ "ವಾತಾವರಣ"ದಲ್ಲಿ ಕೆಲಸ ಮಾಡುವ ತರಬೇತಿ ನೀಡಲು ಐಬಿಎಂ ಮತ್ತು ಗೂಗಲ್ ನಿರ್ಧರಿಸಿವೆ.ಎಂಐಟಿ,ಸ್ಟಾನ್‍ಫರ್ಡ್ ವಿಶ್ವವಿದ್ಯಾಲಯ,ಕ್ಯಾಲಿಫೊರ್ನಿಯಾದ ವಿವಿಗಳ ವಿದ್ಯಾರ್ಥಿಗಳಿಗೆ ಇಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಲಿದೆ.ಪ್ರಯೋಗಾಲಯದಲ್ಲಿ ಸಾವಿರದ ಆರುನೂರು ಕಂಪ್ಯೂಟರುಗಳು,ಸಾವಿರಾರು ಸಂಸ್ಕಾರಕಗಳು,ಸಂಕೀರ್ಣ ತಂತ್ರಾಂಶಗಳ ಲೈಬ್ರೇರಿ ಮತ್ತು ದತ್ತಾಂಶ ಲಭ್ಯವಾಗಲಿದೆ.ಯೋಜನೆಯ ವೆಚ್ಚ ಮೂವತ್ತು ಮಿಲಿಯನ್ ಡಾಲರುಗಳು.
*ಅಶೋಕ್‍ಕುಮಾರ್ ಎ