ಬೆಂಗಳೂರಿನ ನೆಲ

ಬೆಂಗಳೂರಿನ ನೆಲ

ಬೆಂಗಳೂರಿನ ದಾರಿಯಲ್ಲಿ ಸಿಕ್ಕುವ ಸಿಂಗಪುರವೋ, ಕೌಲಾಲಂಪುರವೋ ಬಂದು ಮುಟ್ಟುವವರೆಗೂ ಎಲ್ಲಾ ಯಾಂತ್ರಿಕವಾಗಿ ಆಗತ್ತೆ. ಸಿಡ್ನಿಯಲ್ಲಿ ಬ್ಯಾಗೇಜ್ ಚಕಿನ್, ಸಿಂಗಪುರದಲ್ಲಿ ಇಳಿದು, ಏರ್ಪೋರ್ಟ್‌ ಸುತ್ತಿ, ಮತ್ತೆ ವಿಮಾನ ಹತ್ತುವುದು ಎಲ್ಲ. ಆದರೆ ಅಲ್ಲಿಂದ ಮತ್ತೆ ವಿಮಾನದಲ್ಲಿ ಹಾರುವಾಗ, ನೆಲ ನನ್ನಿಂದ ದೂರ ಸರಿಯುವಾಗ ಅಲ್ಲಿಯವರೆಗಿದ್ದ ಯಾಂತ್ರಿಕತೆ ಮಾಯವಾಗಿ ಒಂದು ರೀತಿಯ ಮಾಂತ್ರಿಕತೆ, ಭಾವುಕತೆ ಆವರಿಸಿಕೊಳ್ಳುವುದು ಪ್ರತಿ ಸಲದ ಅನುಭವ.

ಈ ಸಲವೂ ಸಿಂಗಪುರದಿಂದ ವಿಮಾನ ಮೇಲೇರುತ್ತಿದ್ದಂತೆ ವಿಚಿತ್ರವಾಗಿ ಕವಿಯುವ ಈ ಭಾವ ಏನು ಅಂತ ಪ್ರತಿಸಲದಂತೆ ನೋಡಿಕೊಳ್ಳುತ್ತೇನೆ. ನಾನೀಗ ಇಲ್ಲಿ ಬಿಡುತ್ತಿರುವ ನೆಲವನ್ನ ಮತ್ತೆ ಮುಟ್ಟುವುದು ಇಂಡಿಯಾದಲ್ಲಿ, ನನ್ನ ಪ್ರೀತಿಯ ಬೆಂಗಳೂರಲ್ಲಿ ಅನ್ನುವುದು ದಟ್ಟವಾಗಿ ಸುತ್ತಿಕೊಂಡಿತು. ಎರಡೆರಡು ವರ್ಷಕ್ಕೊಮ್ಮೆ ಬರುತ್ತಿದ್ದರೂ ಇದೇನು ಹೀಗೆ ಅಂತ ತಿಳಿಯುವುದಿಲ್ಲ.

ನೆಲದಲ್ಲಿ ರಾತ್ರಿ ದೀಪಗಳ ಚುಕ್ಕೆಯಲ್ಲಿ ಹರಡಿಕೊಂಡಿರುವ ಬೆಂಗಳೂರು ಪ್ರತಿಸಲವೂ ಸುಂದರವಾಗಿ ಕಾಣತ್ತೆ. ಪಿಳಿಪಿಳಿಸುವ ದೀಪದಲ್ಲಿ ಈಗೀಗ ಬಿಳಿ ಮತ್ತು ಕಿತ್ತಳೆ ಬಣ್ಣ ಕೂಡಿಕೊಂಡಿದೆ. ವಿಮಾನ ಇಳಿಯುತ್ತಿದ್ದಂತೆ ಕಾಣುವ ರಸ್ತೆಗಳಲ್ಲಿ ಓಡಾಡುವ ವಾಹನಗಳು ಕೂಡ ಸಣ್ಣ ಮಗುವಿನಂತೆ ಒಳಗೊಳಗೇ ರೋಮಾಂಚನ ಬೆಂಗಳೂರನ್ನು ತಬ್ಬಿಕೊಳ್ಳುವಂತೆ ವಿಮಾನ ನೇರವಾಗಿ ಆ ದೀಪಗಳ ರಾಶಿಯ ನಡುವೇ ಇಳಿಯುತ್ತದೆ, ನೆಲ ಮುಟ್ಟುತ್ತದೆ, ತೆವಳಿ ಬಂದು ನಿಲ್ಲುತ್ತದೆ. ಇವೆಲ್ಲಾ ಏನನ್ನೋ ಎದುರು ನೋಡುತ್ತಿರುವ ಕಾತರದಲ್ಲಿ ತುಂಬಾ ದೀರ್ಘ ಅನಿಸುತ್ತಿದೆ.

ಹೊರಗೆ ಮಳೆಯಲ್ಲಿ ತೇವವಾದ ನೆಲ ಏರ್ಪೋರ್ಟಿನ ದೊಡ್ಡ ದೊಡ್ಡ ದೀಪಗಳ ಬೆಳಕಲ್ಲಿ ಮಿರಿಮಿರಿ ಮಿಂಚುತ್ತಿದ್ದೆ. ಇಳಿಯುವ ಕಾತರ. ವಿಮಾನಕ್ಕೆ ಸಿಕ್ಕಿಸಿದ ತೂಬಿಗೆ ಕಾಲಿಡುತ್ತಿದ್ದಂತೆ ತೂಬಿನ ಮಾಡು ತೂತಾಗಿ ಮಳೆಯ ನೀರು ದಳದಳ ಎಂದು ಸುರಿಯುತ್ತಿದೆ. ಅಲ್ಲಿ ಕಾಲಿಟ್ಟು ಜಾರದಿರಲಿ ಎಂದು ದಿನಪತ್ರಿಕೆಯ ಹಾಳೆಗಳನ್ನೆಲ್ಲಾ ಹರಡಿದ್ದಾರೆ. ಅದು ಇನ್ನೂ ಪಿತಪಿತ ಮಾಡಿಬಿಟ್ಟಿದೆ. ಒಳಗೊಳಗೇ ನಗುತ್ತೇನೆ. ಭಾವುಕನಾಗಿರಲು ಬೆಂಗಳೂರು ಬಿಡುವುದಿಲ್ಲ. ಇಮ್ಮಿಗ್ರೇಷನ್‌ನವ ಕಣ್ಣಿಗೆ ಕಣ್ಣು ಕೊಡಲಿಲ್ಲ. ಕನ್ನಡದಲ್ಲಿ ಮಾತಾಡಲು ಸಿಕ್ಕುವ ಮೊದಲಿಗ. ಮಾತಾಡಲಿಲ್ಲ. ಕ್ಷಣದಲ್ಲಿ ಪಾಸ್‌ಪೋರ್ಟ್ ಗುದ್ದಿ ನನ್ನತ್ತ ತಳ್ಳಿ ನನ್ನ ಹಿಂದಿನವರನ್ನು ಕೈಬೀಸಿ ಕರೆದ. ಥ್ಯಾಂಕ್ಸ್ ಹೇಳಿ ಹೊರ ಬಂದೆ.

ಅಲ್ಲಿಂದ ಕೆಳಗಿಳಿಯುವ ಎಸ್ಕಲೇಟರ್‍ ಕೆಟ್ಟಿರಬೇಕು. ಆದರೆ ಅದರ ತುಂಬಾ ಮತ್ತು ಪಕ್ಕದ ಮೆಟ್ಟಿಲ ತುಂಬಾ ಜನ. ಏನೋ ಅನಾಹುತ ಆದವರಂತೆ ತುಂಬಿಕೊಂಡಿದ್ದರು. ಓಹೋ. ಕೆಳಗೆ ಹಾಲಿನಲ್ಲಿ ಕಿಕ್ಕಿರಿದಿರುವ ಜನ. ಸ್ಥಳವಿಲ್ಲ. ಅದಕ್ಕೆ ಎಸ್ಕೆಲೇಟರ್‍ ಆರಿಸಿದ್ದಾರೆ. ಮನೆಯವರನ್ನು ಕಾಣುವ ಕಾತರದ ಕೊನೆಯ ಕ್ಷಣಗಳು. ಸುಲಭವಲ್ಲ. ತಿಣಕಿ, ತೂರಿ, ಹಾರಿ, ನನ್ನ ಸಾಮಾನು ಪಡೆದು ಹೊರಬಂದೆ.

ಹೌದು ಬೆಂಗಳೂರು ಭಾವುಕನಾಗಿರಲು ಬಿಡುವುದಿಲ್ಲ. ಒಳಗೊಳಗೇ ಪ್ರೀತಿಯಿಂದ ನಕ್ಕೆ.

Rating
No votes yet

Comments