ನವರಾತ್ರಿಯ ಏಳನೇ ದಿನ

ನವರಾತ್ರಿಯ ಏಳನೇ ದಿನ

ಇವತ್ತು ನವರಾತ್ರಿಯ ಏಳನೇ ದಿನ. ಈ ದಿನ ತಲಕಾವೇರಿಯಲ್ಲಿ ತೀರ್ಥೋದ್ಭವವಾಗುವ ತುಲಾ ಸಂಕ್ರಮಣವೂ ಹೌದು. ನೃಪತುಂಗನ ಕಾಲದಿಂದಲೂ, ಕನ್ನಡನಾಡು ಕಾವೇರಿಯಿಂದ ಗೋದಾವರಿಯವರೆಗೆ ಎಂಬ ಹೇಳಿಕೆ ಇದೆ. ಕಾವೇರಿ ಕನ್ನಡಿಗರಿಗೆ, ಅದರಲ್ಲೂ ದಕ್ಷಿಣ ಕರ್ನಾಟಕದ ಭಾಗದವರಿಗೆ ಜೀವನದಿ ಎಂಬುದರಲ್ಲಿ ಎರಡುಮಾತಿಲ್ಲ. ಕಾವೇರಿ ಮತ್ತೆ ಅದಕ್ಕೆ ಸೇರಿಕೊಳ್ಳುವ ನದಿಗಳಾದ ಹೇಮಾವತಿ, ಲಕ್ಷ್ಮಣತೀರ್ಥ, ಶಿಂಷಾ, ಅರ್ಕಾವತಿ, ಕಣ್ವಾ, ಹಾರಂಗಿ ಮೊದಲಾದುವು ಮೈಸೂರು,ಹಾಸನ,ಕೊಡಗು, ಮಂಡ್ಯ, ತುಮಕೂರು, ಚಿಕ್ಕಮಗಳೂರು,ಬೆಂಗಳೂರು ಮತ್ತು ಚಾಮರಾಜನಗರ ಜಿಲ್ಲೆಗಳ ಬಹುಪಾಲು ಭೂಮಿಗೆ ನೀರುಣಿಸುತ್ತವೆ. ಇಂತಹ ಮಹಾತಾಯಿ ಕಾವೇರಿಗೆ ಇಂದು ಮೊದಲು ನಮಿಸೋಣ.

ಇವತ್ತು ಈ ಮೊದಲ ಆರು ದಿನಕ್ಕಿಂತ ಸ್ವಲ್ಪ ಬೇರೆ. ಬೇರೆ ಸಂಗೀತಗಾರರು ಹಾಡಿದ, ದೇವಿಯ ಬಗ್ಗೆಯ ರಚನೆಯ ಕೊಂಡಿಗಳನ್ನು ಕೊಡುವ ಬದಲು ಇವತ್ತು ಒಂದು ಬದಲಾವಣೆ ಮಾಡಿದ್ದೇನೆ. ಕನ್ನಡದ ಮೂರು ಕವಿಗಳು ಸರಸ್ವತಿಯ ಬಗ್ಗೆ ಮಾಡಿರುವ ಸ್ತುತಿಯನ್ನು, ಹವ್ಯಾಸಿ ಸಂಗೀತಾಭ್ಯಾಸಿಯೊಬ್ಬರ ಕಂಠದಲ್ಲಿ ಕೇಳಿಸುವೆ. ಇದಕ್ಕೆ ಕಾರಣ, ಕನ್ನಡಕ್ಕೂ-ಕಾವೇರಿಗೂ ಇರುವ ಬಿಡಿಸದ ನಂಟು. ಹಾಗಾಗಿ, ಕಾವೇರಿ ಸಂಕ್ರಮಣದ ದಿನ ಒಂದಲ್ಲ, ಮೂರು ಕನ್ನಡ ರಚನೆಗಳು ಇವತ್ತು ಇಲ್ಲಿ ಕೇಳಿ ಬರುತ್ತಿವೆ. ಇವಕ್ಕೆ ಹಿನ್ನಲೆ ವಾದ್ಯಗಳ ಅಲಂಕಾರವಿಲ್ಲ. ಆದರೂ ಪರವಾಗಿಲ್ಲ, ಎನ್ನುವ ಭಾವನೆ ನನ್ನದು.

ಮೊದಲಿಗೆ ಕನ್ನಡದ ಮೊದಲ ಕಾವ್ಯ ಕವಿರಾಜ ಮಾರ್ಗದಿಂದ ಆಯ್ದ ಸರಸ್ವತೀ ಸ್ತುತಿಯಾದ ಒಂದು ಕಂದಪದ್ಯ:

ಶ್ರೀ ವಿಶದವರ್ಣೆ ಮಧುರಾ

ರಾವೋಚಿತೆ ಚತುರ ರುಚಿರ ಪದರಚನೆ ಚಿರಂ

ದೇವಿ ಸರಸ್ವತಿ ಹಂಸೀ

ಭಾವದಿ ಕೂರ್ತು ನೆಲೆಗೊಳ್ಗೆ ಮನ್ಮಾನಸದೊಳ್

ಇದನ್ನು ಹಾಡಿರುವುದನ್ನು ಇಲ್ಲಿ ಕೇಳಬಹುದು.

http://boomp3.com/m/841f5e96fb86

ಶ್ರೀ ವಿಶದವರ್ಣೆ - ರಾಗ ವಲಜಿ

ಅಂದ ಹಾಗೆ, ಈ ವಲಜಿ ರಾಗವೂ, ಕರ್ನಾಟಕ ಸಂಗೀತಕ್ಕೆ, ಮುತ್ತಯ್ಯ ಭಾಗವತರ ಕೊಡುಗೆಯೇ. ಅವರ ಬಗ್ಗೆ ಕೆಲವು ದಿನಗಳ ಹಿಂದೆ ಬರೆದಿದ್ದೆ.

ಈಗ, ಎರಡನೆಯದಾಗಿ, ಒಂದು ಷಟ್ಪದಿ. ಕುಮಾರವ್ಯಾಸ ಭಾರತದ ಪೀಠಿಕಾ ಸಂಧಿಯಿಂದ ಸರಸ್ವತಿಯ ಪ್ರಾರ್ಥನೆ:

ವಾರಿಜಾಸನೆ ಸಕಲಶಾಸ್ತ್ರ ವಿ

ಚಾರದುದ್ಭವೆ ವಚನ ರಚನೋ

ದ್ಧಾರೆ ಶ್ರುತಿ ಪೌರಾಣದಾಗಮ ಸಿದ್ಧಿದಾಯಕಿಯೇ

ಶೌರಿ ಸುರಪತಿ ಸಕಲ ಮುನಿವರ

ಸೂರಿಗಳಿಗನುಪಮದ ಯುಕುತಿಯೆ

ಶಾರದೆಯೆ ನರ್ತಿಸುಗೆ ನಲಿದೊಲಿದೆಮ್ಮ ಜಿಹ್ವೆಯಲಿ

ಇದನ್ನು, ಕರ್ನಾಟಕದ ಸಾಂಪ್ರದಾಯಿಕ ಗಮಕ ಕಲಾಶೈಲಿಯಲ್ಲಿ ಕೇಳಿ:

ವಾರಿಜಾಸನೆ - ರಾಗ ಸರಸ್ವತಿ

ಮೂರನೆಯದಾಗಿ, ಕನಕದಾಸರು ಮಾಡಿರುವ, ಮಾತಿನ ದೇವತೆ ಶಾರದೆಯ ಮೇಲಿನ ಒಂದು ದೇವರನಾಮ:

ವರವ ಕೊಡು ಎನಗೆ ವಾಗ್ದೇವಿ ನಿನ್ನ

ಚರಣ ಕಮಲಂಗಳ ದಯಮಾಡು ದೇವೀ || ಪಲ್ಲವಿ||

ಶಶಿಮುಖದ ನಸುನಗೆಯ ಬಾಲೇ!

ಎಸೆವ ಕರ್ಣದ ಮುತ್ತಿನ ಓಲೇ

ನಸುವ ಸುಪಲ್ಲ ಗುಣಶೀಲೇ ದೇವೀ

ಬಿಸಜಾಕ್ಷಿ ಎನ್ನ ಹೃದಯದಲಿ ನಿಂದು  ||ಚರಣ ೧||

ರವಿ ಕೋಟಿ ತೇಜ ಪ್ರಕಾಶೇ ಸದಾ

ಕವಿ ಜನ ಹೃತ್ಕಮಲ ವಾಸೇ

ಅವಿರಳಪುರಿ ಕಾಗಿನೆಲೆಯಾದಿ ಕೇ-

ಶವನ ಸುತನಿಗೆ ಸನ್ನುತ ರಾಣಿವಾಸೇ || ಚರಣ ೨||

ಇದನ್ನು ನೀವು ಇಲ್ಲಿ ಕೇಳಬಹುದು:

ವರವ ಕೊಡು - ಕನಕದಾಸರ ರಚನೆ - ರಾಗ: ರಂಜನಿ

ಇಷ್ಟು ದಿವಸದ ಸಂಪ್ರದಾಯವನ್ನು ಮುರಿಯದೆ, ಇವತ್ತಿನ ಸ್ವಾತಿ ತಿರುನಾಳ್ ಮಹಾರಾಜರ ನವರಾತ್ರಿ ಕೃತಿ ಯಾವುದು ಎನ್ನುವುದನ್ನೂ ಹೇಳಿಬಿಡುತ್ತೇನೆ. ಅದು ಶುದ್ಧಸಾವೇರಿ ರಾಗದಲ್ಲಿರುವ ಜನನಿ ಪಾಹಿ ಸದಾ ಎಂಬ ರಚನೆ. ಅದನ್ನು ನೀವು ಇಲ್ಲಿ ಕ್ಲಿಕ್ಕಿಸಿ ಕೇಳಬಹುದು.

-ಹಂಸಾನಂದಿ

Rating
No votes yet

Comments