'ನಮಸ್ಕಾರ'- ಡಾ. ಎಚ್. ಎಸ್. ರಾಘವೆಂದ್ರರಾವ್, ರವರ ಸಾಹಿತ್ಯ ವಿಮರ್ಶೆ.
ಈ ಪುಸ್ತಕದಲ್ಲಿನ ಶ್ರೀ. ಯಶವಂತ ಚಿತ್ತಾಲರ ಲೇಖನದಲ್ಲಿನ ಒಂದು ಕೃತಿಯ ಬಗ್ಗೆ, "ನಮಸ್ಕಾರ" ದಲ್ಲಿ ರಾಯರು ಹೇಗೆಬರೆದಿದ್ದಾರೆಯೋ ಹಾಗೆಯೇ ಟೈಪಿಸಿ ಓದುಗರಿಗಾಗಿ ಇಲ್ಲಿ ಕೊಟ್ಟಿದ್ದೇನೆ. ಅದರ ರಸ ಸ್ವಾದಿಸಬೇಕಾಗಿ ಕಳಕಳಿಯ ಪ್ರಾರ್ಥನೆ.
ಎಚ್. ಎಸ್. ಆರ್ ರವರ , ಸಾಹಿತ್ಯ-ಪ್ರೀತಿ ಮತ್ತು ಜೀವನ-ಪ್ರೀತಿ, ಒಂದೇ ಮೂಲದಿಂದ ಬಂದವುಗಳು. ವಿದ್ವಾಂಸರ ಸಾಧನೆಯ ಸತ್ಯಗಳನ್ನು ಅರಸುವ ಸಾಹಿತ್ಯದ ಹಲವು ಪ್ರಾಕಾರಗಳ ವಶಿಷ್ಟ್ಯತೆ ಹಾಗೂ ಕಾಣ್ಗೆಗಳನ್ನು ಗುರುತಿಸುವ ಹಲವು ಲೇಖಕರ ಕೃತಿಗಳನ್ನು ತಮ್ಮ "ನಮಸ್ಕಾರ," ದಲ್ಲಿ ದಾಖಲಿಸಿದ್ದಾರೆ. ಅದರಲ್ಲಿ ಶ್ರೀ ಯಶವಂತ ಚಿತ್ತಾಲರ ಸಮಗ್ರ ಕೃತಿಗಳ ಒಳನೋಟದ ಒಂದು ವಿಮರ್ಶಾ-ಲೇಖನವಿದೆ. ಅದರ ಒಂದು ತುಣುಕನ್ನು ಮಾತ್ರ ಇಲ್ಲಿ ಕೊಟ್ಟಿದೆ.
ನನ್ನ ಆತ್ಮೀಯ ಸುಪ್ರಸಿದ್ಧ ಕಾದಂಬರಿಕಾರ ಗೆಳೆಯರಲ್ಲಿ, ರಾಘವೆಂದ್ರರಾಯರು ಒಬ್ಬರು. ನಾನೂ ಅವರು ಒಂದೇ ವಯಸ್ಸಿನವರೆಂದು ಹೇಳುವುದನ್ನು ಬಿಟ್ಟರೆ, ನನಗೂ ಅವರಿಗೂ ಇರುವ ಬೌದ್ಧಿಕ ಅಂತರ- ಇರುವೆಯಿಂದ ಆನೆಗಿರುವಷ್ಟು. ಇಷ್ಟು ವಿಶಯ ; ನಮ್ಮಿಬ್ಬರ ಬಗ್ಗೆ, ಸಾಕಲ್ಲವೇ.
ಯಶವಂತ ಚಿತ್ತಾಲ : ಬದುಕು ಬರಹ. ಪುಟ. ೨೨೪.
"ಸಾಹಿತ್ಯದ ಸಪ್ತಧಾತುಗಳು" :
ಶ್ರೀ. ಯಶವಂತ ಚಿತ್ತಾಲರು, ತಮ್ಮ ೨೦ ವರ್ಷಗಳ ಅವಧಿಯಲ್ಲಿ ಬರೆದಿರುವ ಪ್ರಬಂಧ, ಲೇಖನ, ಸಾರ, ವಿಮರ್ಶೆಗಳಿಂದ ಆಯ್ದಿರುವ, ೯ ಬರಹಗಳ ಸಂಕಲನ. ಇಲ್ಲಿ ಕೊಟ್ಟಿರುವ ಪ್ರಮುಖ ಲೇಖನಗಳು ಮೂರು. "ಸಾಹಿತ್ಯದ ಕಾರ್ಯ", "ಹೃದಯವುಳ್ಳಹಾದಿಯಲ್ಲಿ", [ನಾನು ಲೇಖಕನಾಗಿ ಬೆಳೆದುಬಂದರೀತಿ] ಮತ್ತು "ಸೃಜನ ಪ್ರಕ್ರಿಯೆ". ಮೂರು ಸಮಕಾಲೀನ ಕಾದಂಬರಿಗಳಲ್ಲಿ ಇವು ಪರಸ್ಪರ ಪೂರಕವಾದ ಮೂರು ನೆಲೆಗಳನ್ನು ಒಳಗೊಳ್ಳುತ್ತವೆ.
ಮೊದಲನೆಯದು ಸಾಹಿತ್ಯದ ಅನನ್ಯತೆ ಮತ್ತು ಈ ಮೂಲಕವೇ ಅದು ಬೀರಬಹುದಾದ ಪರಿಣಾಮಗಳನ್ನೂ ಬಹಳ ಆರ್ತವಾಗಿ ಪ್ರತಿಭೆ ಪಾಂಡಿತ್ಯಗಳ ಸಮತೋಲನದಲ್ಲಿ ಚರ್ಚಿಸುವ ಬರಹ. ಇದು ದೇಶಕಾಲ ಬದ್ಧವೆನಿಸದ ತಾತ್ವಿಕ ಚರ್ಚೆ.
ಎರಡನೆಯದು, ಸಂವೇದನಶೀಲವಾದ ಲೇಖಕನೊಬ್ಬ ತನ್ನ ಬರವಣಿಗೆಯ ಇತಿಹಾಸವನ್ನು ತನ್ನ ಭಾಷೆಯಲ್ಲಿ ಅದೇಕಾಲದ ಸಾಹಿತ್ಯವು ಕ್ರಮಿಸಿದ ಹಾದಿಯ ಸಂಗಡ ಇಟ್ಟುನೊಡುವ ಅಂತರಂಗ ಪರಿವೀಕ್ಷಣೆ. ಇಲ್ಲಿ ದಾಖಲೆ ಮಾಡುತ್ತಿರುವ ಮನಸ್ಸು ದಾಖಲೆಯಾಗುತ್ತಿರುವ ಜಗತ್ತನ್ನು ಮಾರ್ಪಾಡುಮಾಡುತ್ತಿರುವ ಬಗೆ ಹೇಗೆ ಎನ್ನುವ ಪ್ರಶ್ನೆಯು ಕೇವಲ ತುಂಟ ಕುತೂಹಲವಲ್ಲ. ಆದರೆ, ಈ ಕೃತಿ ಕನ್ನಡದಮಟ್ಟಿಗೆ ನಿಜವಾಗಿಯೂ ಅಪೂರ್ವವಾದುದು.
ಮೂರನೆಯ ಲೇಖನದಲ್ಲಿ "ಮುಸ್ಸಂಜೆ"ಯ ಕಥಾಪ್ರಸಂಗವು [ಲಂಕೇಶ್], "ಅವಸ್ಥೆ," [ಅನಂತಮೂರ್ತಿ], ಮತ್ತು "ಸೃಷ್ಟಿ" [ಶಾಂತಿನಾಥ ದೇಸಾಯಿ] ಕಾದಂಬರಿಗಳನ್ನು ತನ್ನ ಸಾಹಿತ್ಯದ ತಿಳುವಳಿಕೆಯ ಬೆಳಕಿನಲ್ಲಿ ನೋಡುವ ವಿಮರ್ಶಕ ಪ್ರಯತ್ನ. ಕಾರಣಗಳನು ನೀಡುತ್ತಾ ೩ ಕೃತಿಗಳನ್ನು ಕುರಿತ ಅಸಮಾಧಾನಗಳನ್ನು ಮಂಡಿಸಲಾಗಿದೆ. ಚಿತ್ತಾಲರು ವಿಜ್ಞಾನದ ಹಾಗೂ ಸಮಾಜಶಾಸ್ತ್ರಗಳ ಗಂಭೀರ ವಿದ್ಯಾರ್ಥಿಯಾಗಿರುವುದರಿಂದ ಅವರ ಬರವಣಿಗೆಗೆ ವಿಶಿಷ್ಟ ಆಯಾಮಗಳು ಒದಗಿ ಬರುತ್ತವೆ.
ಚಿತ್ತಾಲರ ಈ ಬಗೆಯ ವಿಚಾರಗಳು ಹಾಗೂ, "ಶಿಕಾರಿ", "ಕಥೆಯಾದಳು ಹುಡುಗಿ," ಮುಂತಾದ ಕೃತಿಗಳು ಹೊಸಗನ್ನಡ ಸಾಹಿತ್ಯ ಚರಿತ್ರೆಯ ಇತಿಹಾಸದ ನಿರ್ಣಾಯಕವಾದ ಹಂತದಲ್ಲಿ ಮೂಡಿಬಂದವುಗಳು. ಅಂದು ದಲಿತ ಬಂಡಾಯ ಚಳುವಳಿಗಳು ನವ್ಯದ ಜೊತೆಯಲ್ಲಿ ವಾಗ್ವಾದದಲ್ಲಿ ತೊಡಗಿಕೊಂಡು 'ಸಾಹಿತ್ಯ,'ದ ಸಾಮಾಜಿಕ ನೆಲೆಗಳನ್ನು ಕುರಿತ ವಿಭಿನ್ನ ವಿಚಾರಗಳನ್ನು ಮಂಡಿಸುತ್ತಿದ್ದವು. ಆಗ, ಸಾಹಿತ್ಯದಿಂದ ಏನು ಸಾದ್ಯ ಎನೂ ಸಾಧ್ಯವಿಲ್ಲ ? ಅದರ ಶಕ್ತಿಯಾವುದು ? ಸಾಹಿತ್ಯಕ ಸೃಜನಶೀಲತೆಯ ಸ್ವರೂಪವೇನು ? ಮುಂತಾದ ವಿಷಯಗಳನ್ನು ತೀವ್ರವಾದ ರೂಪಕನಿಷ್ಠ, ಭಾವಗೀತಾತ್ಮಕ ಶೈಲಿಯಲ್ಲಿ ಪರಿಶೀಲಿಸಿದ ಚಿತ್ತಾಲರ ಬರಹಗಳು, ತುಂಬಾ ಪರಿಣಾಮಕಾರಿಯಾಗಿದ್ದವು.
ಅವರು ಸಾಹಿತ್ಯದ ಅನನ್ಯತೆಯ ಬಗ್ಗೆ ಹೇಳುವಾಗಲೂ ಸಾಹಿತ್ಯದ ಸಾಮಜಿಕ ನೆಲೆಯನ್ನು ನಿರಾಕರಿಸಲಿಲ್ಲ. ಅಂಥ ಕೆಲವು ವಿಚಾರಗಳು ಇಂದಿಗೂ ಮೌಲಿಕವೇ. ಸಾಹಿತ್ಯವನ್ನು ಕುರಿತ ಹಾದಿಬದಿಯ ಮಾತುಕತೆಗಳೋ ವ್ಯಕ್ತಿಕೇಂದ್ರಿತ ಕಸ ಎಸೆತಗಳೋ ತಾವೇ ತಾವಾಗಿರುವ ಈ ದಿನಗಳಲ್ಲಿ ಎಪ್ಪತ್ತು ದಾಟಿರುವ ಚಿತ್ತಾಲರ ಚಿಂತನ ಪರತೆ ಮತ್ತು ಭಾವನಾತ್ಮಕ ಕಾಳಜಿಗಳು ಬೆರಗು ಮತ್ತು ಸಮಾಧಾನಗಳನ್ನು ಉಂಟುಮಾಡುತ್ತವೆ. ಅವರ ವಿಚಾರಗಳನ್ನು ಚರ್ಚೆಗೆ ಒಳಗುಮಾಡುವಾಗಲೂ ಈ ಗೌರವ ಮುಕ್ಕಾಗುವುದಿಲ್ಲ.
(ಈ ಅನುಬಂಧವು ಮೂಲಲೇಖನಕ್ಕೆ ಪೂರಕವಾಗಿ ರೂಪಿತವಾಗಿದೆ. ಈಚೆಗೆ ಪ್ರಕಟವಾಗಿರುವ ಸಾಲುದೀಪಗಳು, ಕೃತಿಯ ಎರಡನೆಯ ಆವೃತ್ತಿಯಲ್ಲಿ ಪ್ರಕಟವಾದ ಈ ಬರಹವನ್ನು ಪಸ್ತುತ ಕೃತಿಗೆಂದೇ ಪರಿಷ್ಕರಿಸಲಾಗಿದೆ.)