ನವರಾತ್ರಿಯ ಒಂಬತ್ತನೆಯ ದಿನ
ಇವತ್ತು ನವರಾತ್ರಿಯ ಒಂಬತ್ತನೆಯ ದಿವಸ. ಮಹಾನವಮಿ. ಆಯುಧಪೂಜೆ. ಎಷ್ಟೋ ಕನ್ನಡಿಗರಿಗೆ ಸರಸ್ವತೀ ಪೂಜೆಯೂ ಇಂದೇ. ಇವತ್ತು ಕರ್ನಾಟಕದ ಒಬ್ಬ ವಾಗ್ಗೇಯಕಾರರ ರಚನೆ ನೋಡೋಣ.
ಮೈಸೂರು ವಾಸುದೇವಾಚಾರ್ಯರು ೨೦ನೇ ಶತಮಾನದಲ್ಲಿನ ಒಬ್ಬ ಪ್ರಮುಖ ವಾಗ್ಗೇಯಕಾರರು. ತ್ಯಾಗರಾಜರ ಪರಂಪರೆಯನ್ನು ಮುಂದುವರೆಸಿಕೊಂಡು ಬಂದು ಸುಮಾರು ೩೦೦ಕ್ಕೂ ಹೆಚ್ಚು ರಚನೆಗಳನ್ನು ಹೆಚ್ಚಾಗಿ ತೆಲುಗು ಮತ್ತು ಸಂಸ್ಕೃತದಲ್ಲಿ ಮಾಡಿದ್ದಾರೆ, ಕಚೇರಿಗಳಲ್ಲಿ ಕೇಳಬಹುದಾದ ರಚನೆಗಳನ್ನೇ ಲೆಕ್ಕಕ್ಕೆ ತೆಗೆದುಕೊಂಡರೆ, ಕರ್ನಾಟಕದ ನೆಲದಲ್ಲಿ ಮೂಡಿಬಂದ ಕೃತಿಗಳಲ್ಲಿ ಇವರದ್ದು ದೊಡ್ಡ ಪಾಲು ಇರುತ್ತದೆ ಎನ್ನಬಹುದು.
ಕನಕಪುರದಲ್ಲಿ ಹುಟ್ಟಿದ ವಾಸುದೇವಾಚಾರ್ಯರು ತಮ್ಮ ಜೀವನದ ಬಹುಪಾಲು ಭಾಗವನ್ನು ಮೈಸೂರಿನ ಒಡೆಯರ ಆಶ್ರಯದಲ್ಲಿ ಕಳೆದರು. ಅಷ್ಟೇ ಅಲ್ಲ, ಮೈಸೂರಿನ ಕೊನೆಯ ದೊರೆ ಜಯಚಾಮರಾಜೇಂದ್ರ ಒಡೆಯರಿಗೆ ಇವರು ಸಂಗೀತಗುರುಗಳು ಕೂಡ. ತಮ್ಮ ರಚನೆಗಳಲ್ಲಿ ವಾಸುದೇವ ಎಂಬ ಅಂಕಿತವನ್ನು ಇಟ್ಟಿರುತ್ತಾರೆ. ಅಭಿನವ ತ್ಯಾಗರಾಜರೆಂದೇ ಪ್ರಸಿದ್ಧರಾದ ವಾಸುದೇವಾಚಾರ್ಯರು ಬರಹಗಾರರು ಕೂಡಾ. ಸಂಗೀತ ಕ್ಷೇತ್ರದಲ್ಲಿ ತಮ್ಮ ಅನುಭವವನ್ನು ’ನಾ ಕಂಡ ಕಲಾವಿದರು’ ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾರೆ.
ತಮ್ಮ ಗುರುಗಳಾದ ವಾಸುದೇವಾಚಾರ್ಯರ ಬಗ್ಗೆ ಜಯಚಾಮರಾಜ ಒಡೆಯರು ಮಾತಾಡಿರುವ ಧ್ವನಿಮುದ್ರಿಕೆಯೊಂದು ಇಲ್ಲಿದೆ. ಕೇಳಿ.