ನವರಾತ್ರಿಯ ಹತ್ತನೇ ದಿನ

ನವರಾತ್ರಿಯ ಹತ್ತನೇ ದಿನ

ಇಂದು ನವರಾತ್ರಿಯ ಹತ್ತನೇ, ಹಾಗೂ ಕಡೆಯ ದಿವಸ. ವಿಜಯ ದಶಮಿ. ರಾಮ ರಾವಣನನ್ನು ಕೊಂದು, ವಿಜಯ ಪಡೆದ ದಿನವೆಂದೂ, ದೇವಿ ಚಾಮುಂಡೇಶ್ವರಿ ಮಹಿಷಾಸುರನನ್ನು ಸಂಹರಿಸಿದ ದಿನವೆಂದೂ ನಾವು ಈ ದಿನವನ್ನು ಆಚರಿಸುತ್ತೇವೆ.

ನೆನ್ನೆ ವಾಸುದೇವಾಚಾರ್ಯರ ಬಗ್ಗೆ ಹೇಳುವಾಗ, ಅವರ ಪ್ರಸಿದ್ಧ ಶಿಷ್ಯರೊಬ್ಬರನ್ನು ಹೆಸರಿಸಿದ್ದೆ. ಹೌದು, ಇವತ್ತು ಆ ಶಿಷ್ಯರ ರಚನೆಯನ್ನೇ ನಾನು ಕೇಳಿಸುವುದು. ಮೈಸೂರು ರಾಜ್ಯದ ಕಡೆಯ ದೊರೆಗಳಾದ ಜಯಚಾಮರಾಜೇಂದ್ರ ಒಡೆಯರು ಒಬ್ಬ ಪ್ರತಿಭಾನ್ವಿತ ಸಂಗೀತಗಾರರು, ವಾಗ್ಗೇಯಕಾರರೂ ಆಗಿದ್ದರೆಂಬುದು ಹೆಚ್ಚಾಗಿ ಜನಕ್ಕೆ ತಿಳಿದಿಲ್ಲದಿರುವುದು ದೌರ್ಭಾಗ್ಯವೇ ಸರಿ.

ಜಯಚಾಮರಾಜೇಂದ್ರ ಒಡೆಯರು ಮೊದಲು ಕಲಿತದ್ದು ಪಾಶ್ಚಾತ್ಯ ಸಂಗೀತ. ಲಂಡನ್ನಿನ್ಸ್ ಟ್ರಿನಿಟಿ ಕಾಲೇಜಿನಲ್ಲಿ ಪಿಯಾನೋ ವಿದ್ಯಾರ್ಥಿಗಳಿಗೆ ದೊರೆಯಬಹುದದ ಅತಿ ಹೆಚ್ಚಿನ ಪ್ರಶಸ್ತಿಗಳನ್ನು ಪಡೆದು ಅವರು ಹೊರಬಂದರು. ಪಟ್ಟವೇರಿದ ಮೇಲೆ, ಸುಮಾರು ಆರು ವರ್ಷ ಕಾಲ ವಾಸುದೇವಾಚಾರ್ಯರಲ್ಲಿ ಕರ್ನಾಟಕ ಸಂಗೀತದ ಅಭ್ಯಾಸ ಮಾಡಿದರು. ೧೯೪೫ ರಿಂದ ೧೯೪೭ರ ವರೆಗೆ ಸುಮಾರು ಎರಡುವರ್ಷಗಳ ಅವಧಿಯಲ್ಲಿ ತೊಂಬತ್ತನಾಕು ಕೃತಿಗಳನ್ನು ರಚಿಸಿದ್ದಾರೆ ಒಡೆಯರು. ತಮ್ಮ ರಚನೆಗಳನ್ನು ಇವರು ಮೊದಲು ಪಿಯಾನೋದಲ್ಲೇ ನುಡಿಸಿ, ಅದನ್ನು ತಿದ್ದಿ ತೀಡಿ, ನಂತರ ತಮ್ಮ ಗುರುಗಳಿಗೂ, ಹಾಗೂ ಅರಮನೆಯ ಇತರ ವಿದ್ವಾಂಸರಿಗೂ ಕೇಳಿಸಿ, ಅವರ ಅಭಿಪ್ರಾಯವನ್ನು ಕೇಳಿ, ನಂತರ ತಮ್ಮ ಕೃತಿಗಳಿಗೆ ಪೂರ್ಣಸ್ವರೂಪವನ್ನು ಕೊಡುತ್ತಿದ್ದ ವಿಷಯವನ್ನು ಇವರನ್ನು ಹತ್ತಿರದಿಂದ ನೋಡಿದ ಸಂಗೀತವಿದ್ವಾಂಸರು ಹೇಳಿದ್ದಾರೆ.

ಇವರ ಕೃತಿಸಮೂಹದಲ್ಲಿ ಗಮನಿಸಬೇಕಾದ ಅಂಶವೆಂದರೆ, ಇವರು ಒಂದು ರಾಗದಲ್ಲಿ ಕೇವಲ ಒಂದೇ ರಚನೆ ಮಾಡಿದ್ದಾರೆ. ಅಂದರೆ ೯೪ ರಚನೆಗಳಿಗೂ ಬೇರೆ ಬೇರೆ ರಾಗಗಳನ್ನೇ ಬಳಸಿದ್ದಾರೆ. ಇನ್ಯಾವ ವಾಗ್ಗೇಯಕಾರರೂ ಈ ಮೊದಲು ಹಾಗೆ ರಚಿಸಿರುವುದು ದಾಖಲಾಗಿಲ್ಲ.

ಒಡೆಯರ ರಚನೆಗಳನ್ನಾಧರಿಸಿದ ಆಕಾಶವಾಣಿ ಕಾರ್ಯಕ್ರಮದಿಂದ ಸ್ಬಲ್ಪ ವಿವರಣೆ ಇಲ್ಲಿ ಕೇಳಿ:

ಒಡೆಯರಾಳಿದ ಮೈಸೂರಿನ ಅಧಿದೇವತೆ ಚಾಮುಂಡೇಶ್ವರಿ. ಒಡೆಯರು ಆಳಿದ್ದು ಕನ್ನಡ ನಾಡನ್ನು. ಇವೆರಡಕ್ಕೂ ಹೊಂದುವಂತೆ, ಇಂದು ನಾನು ಆಯ್ದಿರುವ ರಚನೆ ಜಯಚಾಮರಾಜ ಒಡೆಯರು ರಚಿಸಿರುವ ಕನ್ನಡ ರಾಗದ ಕೃತಿ - ಶ್ರೀ ಚಾಮುಂಡೇಶ್ವರಿ ದೇವಿ ಎಂಬುದು. ಹೌದು, ಕನ್ನಡ ಎಂಬುದೊಂದು ಮಾತ್ರವೇ, ಒಂದು ನಾಡು, ಒಂದು ನುಡಿ ಮತ್ತು ಒಂದು ರಾಗ ಈ ಎಲ್ಲಕ್ಕೂ ಸರಿಹೋಗಬಲ್ಲ ಹೆಸರು.
ಇದನ್ನು ನೀವು ಈ ಕೆಳಗಿನ ಕೊಂಡಿಗಳಲ್ಲಿ ಕೇಳಬಹುದು:
ಒಡೆಯರು ಶ್ರೀವಿದ್ಯಾ ಉಪಾಸಕರಾಗಿದ್ದು, ತಮ್ಮ ರಚನೆಗಳಲ್ಲಿ ಶ್ರೀವಿದ್ಯಾ ಎಂಬ ಅಂಕಿತವನ್ನು ಬಳಸಿದ್ದಾರೆ. ಅವರಿಗೆ ಶ್ರೀವಿದ್ಯೆಯ ದೀಕ್ಷೆ ದೊರೆತಾಗ ಅವರಿಗೆ ಚಿತ್ಪ್ರಭಾನಂದ ಎಂಬ ದೀಕ್ಷಾನಾಮವನ್ನು ಇಡಲಾಗಿತ್ತು. ಕೆಲವು ರಚನೆಗಳಲ್ಲಿ, ಚಿತ್ಪ್ರಭಾನಂದ ಎಂಬ ಮುದ್ರೆಯೂ ಕಂಡುಬರುತ್ತದೆ. ಜಯಚಾಮರಾಜ ಒಡೆಯರ ಎಲ್ಲ ರಚನೆಗಳೂ ಸಂಸ್ಕೃತ ಭಾಷೆಯಲ್ಲಿವೆ. ಮುತ್ತುಸ್ವಾಮಿ ದೀಕ್ಷಿತರ ಶೈಲಿಯನ್ನು ಹೋಲುವ, ಇವರ ಶೈಲಿ, ಅಷ್ಟು ಸರಳವಲ್ಲದಿದ್ದರೂ, ರಸಭರಿತವಾದದ್ದು.
ಮೈಸೂರಿನಲ್ಲಿ, ಜಂಬೂಸವಾರಿಯಲ್ಲಿ ಚಾಮುಂಡೇಶ್ವರಿಯ ಮೆರವಣಿಗೆ ಹೋಗುವ ಈ ದಿನ, ಒಡೆಯರು ರಚಿಸಿದ ಚಾಮುಂಡೇಶ್ವರಿಯ ಮೇಲಿನ ಕೃತಿ, ಈ ಸರಣಿಗೆ ಸರಿಯಾದ ಮಂಗಳವೆಂದು ನನ್ನ ಅನಿಸಿಕೆ.
ಈ ಬರಹಗಳಿಗೆ ಪ್ರತ್ಯಕ್ಷವಾಗಿ, ಮತ್ತು ಪರೋಕ್ಷವಾಗಿ  ಕಾರಣರಾದ ರಸಿಕ ಫೋರಮ್ (www.rasikas.org) ಗೆಳೆಯರನ್ನು ನಾನು ಇಲ್ಲಿ ನೆನೆಯುತ್ತೇನೆ. ಹಾಗೇ ಇನ್ನು ಕೆಲವೆಡೆ ನಾನು ಉಪಯೋಗಿಸಿರುವ ಕೊಂಡಿಗಳಿರುವ ಸಂಗೀತಪ್ರಿಯ.ಆರ್ಗ್  (www.sangeethapriya.org) ಗೂ,  ಮ್ಯೂಸಿಕ್ ಇಂಡಿಯಾ ಆನ್‍ಲೈನ್ (www.musicindiaonline.com) ತಾಣಕ್ಕೂ ನನ್ನ ಧನ್ಯವಾದಗಳು ಸಲ್ಲುತ್ತವೆ.
ದೇವೀ ನವರಾತ್ರಿಯ ಸಮಯದಲ್ಲಿ, ಈ ಲೇಖನಗಳನ್ನು ಬರೆಯಲು ಸಾಧ್ಯವಾದದ್ದು ನನ್ನ ಭಾಗ್ಯವೇ ಎಂದು ನನ್ನ ಭಾವನೆ. ಶ್ರೀ ಚಾಮುಂಡೇಶ್ವರಿ ದೇವಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ, ಎಲ್ಲೆಡೆ ಶಾಂತಿ ನೆಲೆಸಲಿ ಎಂದು ಕೇಳಿಕೊಳ್ಳುತ್ತಾ ಈ "ನವರಾತ್ರಿಯ ದಿನಗಳು" ಮಾಲಿಕೆಯನ್ನು ಮುಗಿಸುತ್ತಿದ್ದೇನೆ.
ಎಲ್ಲರಿಗೂ ನಮಸ್ಕಾರ.
-ಹಂಸಾನಂದಿ
Rating
No votes yet

Comments