ವಾಸನೆಯ ಮೂಲಕ ಅಪಾಯ ಗ್ರಹಿಸುವ ಆನೆಗಳು

ವಾಸನೆಯ ಮೂಲಕ ಅಪಾಯ ಗ್ರಹಿಸುವ ಆನೆಗಳು

ಬರಹ

ಉದಯವಾಣಿ

(ಇ-ಲೋಕ-45)(23/10/2007) 

ಆನೆಗಳು ತಮಗೆ ಅಪಾಯ ತರುವ ಜನರನ್ನು ವಾಸನೆಯಿಂದ ಗುರುತಿಸುವುದು ಪ್ರಯೋಗಗಳಿಂದ ದೃಡ ಪಟ್ಟಿದೆ. ಸೈಂಟ್ ಆಂಡ್ರೂ ವಿಶ್ವವಿದ್ಯಾಲಯದ ಸಂಶೋಧಕರ ಅಧ್ಯಯನದಿಂದ ಈ ಅಂಶ ತಿಳಿದು ಬಂದಿದೆ. ಆಫ್ರಿಕಾದ ಮಸಾಯಿ ಬುಡಕಟ್ಟು ಜನರು ಆನೆಗಳನ್ನು ಬೇಟೆಯಾಡುವುದು ಸಾಮಾನ್ಯ.ಅವರು ಧರಿಸಿದ ಉಡುಗೆಯನ್ನು ಇತರರು ಧರಿಸಿ ಬಂದಾಗ, ಅಲ್ಲಿನ ಆನೆಗಳು ಅಪಾಯಕ್ಕೆ ಸಿಲುಕಿದಾಗ ತೋರುವ ನಡವಳಿಕೆಯನ್ನು ತೋರಿದುವು.ಆನೆಗಳು ತಾವಿದ್ದ ಸ್ಥಳದಿಂದ ಧಾವಿಸಿ,ಬಹು ದೂರ ಓಡಿ ನಂತರವಷ್ಟೇ ಸುಧಾರಿಸಿಕೊಳ್ಳಲು ನಿಂತವು.ಕೃಷಿ ಕಾರ್ಯದಲ್ಲಿ ತೊಡಗಿರುವ ಕಂಬಾ ಜನಾಂಗದ ಜನರು ಧರಿಸಿದ ಉಡುಗೆ ಧರಿಸಿದ ಜನರು ಆನೆಗಳಿದ್ದಲ್ಲಿಗೆ ಬಂದಾಗ ಆನೆಗಳು ಯಾವುದೇ ತೀವ್ರ ಪ್ರತಿಕ್ರಿಯೆ ತೋರದೆ ತಣ್ಣಗಿದ್ದುವು.ಆನೆಗಳು ಉಡುಗೆಯ ಬಣ್ಣವನ್ನು ಗುರುತಿಸುವುದೂ ಸಿದ್ಧವಾಗಿದೆ.ಕೆಂಪು ಬಣ್ಣದ ಉಡುಗೆಯ ಜನರು ಬಂದಾಗ ರೋಷಾವೇಶ ತೋರುವ ಆನೆಗಳು ಬಿಳಿಯುಡುಗೆಗೆ ಹೆಚ್ಚಿನ ಪ್ರತಿಕ್ರಿಯೆ ತೋರಲಿಲ್ಲ.ಮಸಾಯಿ ಜನರು ಹೆಚ್ಚಾಗಿ ಕೆಂಪುಡುಗೆಯುಡುವುದೇ ಇದಕ್ಕೆ ಕಾರಣವಿರಬೇಕು.

ವಿಮಾನಗಳು ಹೊರಸೂಸುವ ಅಂಗಾರಾಮ್ಲ ಹಡಗುಗಳ ಹೊರಸೂಸುವಿಕೆಗಿಂತ ಹೆಚ್ಚೇ?

 ಆರು ವರ್ಷಗಳ ಹಿಂದೆ ವಿಮಾನಗಳು ಹೊರ ಸೂಸುವ ಅಂಗಾರಾಮ್ಲದ ಪ್ರಮಾಣವನ್ನು ಹಡಗುಗಳು ಹೊರ ಸೂಸುವ ಅಂಗಾರಾಮ್ಲದ ಪ್ರಮಾಣಕ್ಕೆ ಹೋಲಿಸಿದಾಗ ಅವೆರಡೂ ಹೆಚ್ಚು ಕಡಿಮೆ ಸರಿಯಾಗಿದ್ದುದು ಕಂಡು ಬಂತು. ಈಗ ಜಗತ್ತಿನ ಸಾಗರಗಳಲ್ಲಿ ಓಡಾಡುವ ಹಡಗುಗಳ ಸಂಖ್ಯೆ ಸರಿಸುಮಾರು ತೊಂಭತ್ತು ಸಾವಿರವಂತೆ.ಇತ್ತೀಚೆಗೆ ಅವು ಹೊರಬಿಡುವ ಅಂಗಾರಾಮ್ಲದ ಪ್ರಮಾಣವನ್ನು ಅಂದಾಜು ಮಾಡಿದಾಗ, ಹಡಗುಗಳು ವಿಮಾನಗಳು ಹೊರಸೂಸುವ ಅಂಗಾರಾಮ್ಲದ ಆರು ಪಟ್ಟು ಹೆಚ್ಚು ಅನಿಲವನ್ನು ವಾತಾವರಣಕ್ಕೆ ಹೊರಸೂಸುವುದು ತಿಳಿಯಿತು. ಕಳೆದ ದಶಕದಲ್ಲಿ ಸರಕು ಸಾಗಾಟದ ಹಡಗುಗಳ ಸಂಖ್ಯೆ ಏರಿರುವುದು ಮಾತ್ರಾ ಈ ಹೆಚ್ಚಿನ ಪರಿಸರ ಮಾಲಿನ್ಯಕ್ಕೆ ಕಾರಣವಲ್ಲವಂತೆ. ಬದಲಾಗಿ ಬೇಗನೆ ಸರಕು ಸಾಗಿಸಲು ಹಡಗುಗಳು ಹೆಚ್ಚು ಇಂಧನ ಬಳಸಿ ವೇಗವಾಗಿ ಸಾಗುವುದು ಹೆಚ್ಚಿನ ಮಾಲಿನ್ಯಕ್ಕೆ ಕಾರಣವಾಗಿದೆ.ಅಂಗಾರಾಮ್ಲವು ವಾತಾವರಣದ ಶಾಖವನ್ನು ಹಿಡಿದಿಟ್ಟು ವಾತಾವರಣದ ಉಷ್ಣತೆಯನ್ನು ಏರಿಸಲು ಕಾರಣವಾಗುತ್ತದೆ.ಆದುದರಿಂದ ಹೆಚ್ಚು ಮಾಲಿನ್ಯಕ್ಕೆ ಕಾರಣವಾಗುವ ಹಡಗುಗಳ ಬಗ್ಗೆ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಹೆಚ್ಚುತ್ತಿದೆ.

 ಬಯಸದೇ ಬರುವ ಆಡಿಯೊ ಸಂದೇಶ ಹೊಸ ತಲೆನೋವು!

 ಮಿಂಚೋಲೆಯಲ್ಲಿ ಬಯಸದೇ ಬರುವ ಅನಗತ್ಯ ಪ್ರಚಾರ ಸಂದೇಶಗಳನ್ನು ನಿವಾರಿಸುವುದು ಇ-ಮೇಲ್ ಬಳಕೆದಾರರಿಗೆ ದೊಡ್ಡ ತಲೆನೋವು. ಇತ್ತೀಚೆಗೆ ಅಂತಹ ಸಂದೇಶಗಳಲ್ಲಿ ಧ್ವನಿ ಸಂದೇಶಗಳು ಬರುವುದು ಸಾಮಾನ್ಯವಾಗಿದೆಯಂತೆ. ಎಂಪಿತ್ರೀ ಎನ್ನುವ ಒಂದು ವಿಧದ ಧ್ವನಿ ಕಡತಗಳು ಸಂದೇಶದ ಜತೆಗೆ ಬರುತ್ತದೆ.ಖ್ಯಾತ ಗಾಯಕ,ನಟರ ಧ್ವನಿಮುದ್ರಿಕೆ ಎನ್ನುವ ಹೆಸರು ಹೊತ್ತು ಧ್ವನಿ ಸಂದೇಶ ಬಂದಾಗ,ಜನರು ಅವನ್ನು ನುಡಿಸದೆ ಕಿತ್ತು ಹಾಕಲು ಮನಸ್ಸು ಮಾಡರು ತಾನೇ?ಇದನ್ನೇ ಬಂಡವಾಳ ಮಾಡಿಕೊಂಡು ಕೆಲವು ಕಂಪೆನಿಗಳು ತಮ್ಮ ಕಂಪೆನಿಯ ಪ್ರಚಾರ ಸಂದೇಶಗಳ ಧ್ವನಿ ಕಡತಗಳನ್ನು ಸಾವಿರಾರು ಜನರಿಗೆ ಕಳುಹಿಸುತ್ತವೆ.ಜನರು ಅವನ್ನು ನುಡಿಸಿದಾಗ ನಿರೀಕ್ಷಿಸಿದ ಗಾಯಕರ ಹಾಡಿನ ಬದಲು ಯಾವುದೋ ಕಂಪೆನಿಯ ಉತ್ಪನ್ನದ ಪ್ರಚಾರ ಕೇಳಿಸುತ್ತದೆ.ತಮ್ಮ ಕಂಪೆನಿ ಭಾರೀ ಲಾಭ ಗಳಿಸಲಿದೆ. ಅದರ ಶೇರು ಖರೀದಿಸಿ ಎನ್ನುವ ವಿಜ್ಞಾಪನೆಗಳೂ ಕೇಳಿ ಬರುವುದು ಸಾಮಾನ್ಯವಂತೆ.ಎಂಪಿತ್ರೀ ಕಡತಗಳು ವೈರಸ್ ಭಯವನ್ನೂ ಹೊಂದಿಲ್ಲದಿರುವುದರಿಂದ ಅವನ್ನು ಕಿತ್ತು ಹಾಕದೆ,ನುಡಿಸಿನೋಡುವ ಚಪಲಕ್ಕೆ ಕಾರಣವಾಗುತ್ತವೆ.ಈ ಹೊಸ ವಿಧದ ಸ್ಪಾಮ್ ಕಾಟದಿಂದ ಮುಕ್ತಿ ಹೇಗೆ ಎನ್ನುವುದು ಅಂತರ್ಜಾಲದ ನಿರ್ವಾಹಕರ ಹೊಸ ತಲೆನೋವು.

ಇಂಟೆಲ್ ಲಾಭ: ಲ್ಯಾಪ್‍ಟಾಪ್ ಜನಪ್ರಿಯತೆ ಕಾರಣ

 ಜಗತ್ತಿನ ದೊಡ್ಡ ಕಂಪ್ಯೂಟರ್ ಚಿಪ್ ತಯಾರಕ ಕಂಪೆನಿ ಇಂಟೆಲ್ ಪ್ರಸಕ್ತ ಅರ್ಧವಾರ್ಷಿಕ ಅವಧಿಯಲ್ಲಿ ಗಳಿಸಿದ ಲಾಭ ಸುಮಾರು ಎರಡು ಬಿಲಿಯನ್ ಡಾಲರು.ಕಳೆದ ವರ್ಷದ ಇದೇ ಅವಧಿಯಲ್ಲಿ ಗಳಿಸಿದ ಲಾಭಕ್ಕೆ ಹೋಲಿಸಿದರೆ ಲಾಭದ ಪ್ರಮಾಣ ಶೇಕಡಾ ನಲ್ವತ್ತಮೂರು ಹೆಚ್ಚು.ಲ್ಯಾಪ್‍ಟಾಪ್‍ಗಳು ಜನಪ್ರಿಯವಾಗಿರುವ ಈ ದಿನಗಳಲ್ಲಿ ಇಂಟೆಲ್ ತಯಾರಿಸಿದ ಲ್ಯಾಪ್‍ಟಾಪ್ ಸಂಸ್ಕಾರಕ ಚಿಪ್‍ಗಳಿಗೆ ಬೇಡಿಕೆ ಭಾರೀ ಹೆಚ್ಚಾಗಿರುವುದು ಈ ಹೆಚ್ಚಿನ ಲಾಭದ ಹಿಂದಿನ ಗುಟ್ಟು ಎನ್ನುವುದು ವಿಶ್ಲೇಷಕರ ವಿವರಣೆ.

 ನೋಕಿಯಾದ ಹಿಡಿಗಾತ್ರದ ಕಂಪ್ಯೂಟರ್

 ಲ್ಯಾಪ್‍ಟಾಪ್‍ಗಳನ್ನೂ ಹಿಡಿದುಕೊಂಡು ಓಡಾಡುವುದು ಪ್ರಯಾಸ ಎನಿಸುವ ಮಟ್ಟಕ್ಕೆ ಬಂದಿರುವ ಜನ ಸಮುದಾಯಕ್ಕಾಗಿ ನೋಕಿಯಾ ಹಿಡಿಗಾತ್ರದ ಕಂಪ್ಯೂಟರ್ ತಯಾರಿಸಿದೆ. ಸುಮಾರು ಐನೂರು ಡಾಲರು ಬೆಲೆಯ ಈ ಸಾಧನ ಮುಂದಿನ ತಿಂಗಳು ಅಮೆರಿಕಾದಲ್ಲಿ ಲಭ್ಯವಾಗಬಹುದು. ಇದನ್ನು ನಿಸ್ತಂತು ಮೂಲಕ ಅಂತರ್ಜಾಲಕ್ಕೆ ಸಂಪರ್ಕಿಸಬಹುದು. ಸಣ್ಣ ಕೀಲಿ ಮಣೆಯೂ ಇದರಲ್ಲಿ ಲಭ್ಯ. ಸಾಧನದ ತೆರೆ ಸ್ಪರ್ಶ ಸಂವೇದಿ.ಐಫೋನ್ ಸಾಧನವನ್ನು ಇದು ಹೋಲುತ್ತದಾದರೂ,ಫೋನ್ ಸೌಲಭ್ಯ ಇದರಲ್ಲಿಲ್ಲ.ನಿಸ್ತಂತು ಜಾಲ ಇಲ್ಲದೆಡೆ ಮೊಬೈಲ್ ಪೋನಿನ ಬ್ಲೂಟೂತ್ ಮಾಧ್ಯಮದ ಮೂಲಕ ಇದನ್ನು ಅಂತರ್ಜಾಲಕ್ಕೆ ಸಂಪರ್ಕಿಸಬೇಕಾಗುತ್ತದೆ.ಇದರ ನಿರ್ವಹಣಾ ವ್ಯವಸ್ಥೆ ತಂತ್ರಾಂಶವನ್ನು ಅಳವಡಿಸಿರಲಾಗುತ್ತದೆ.ಜತೆಗೆ ವಿಡಿಯೋ ಸೆರೆ ಹಿಡಿಯಲು ವೆಬ್‍ಕ್ಯಾಮ್ ಇದೆ. ವಿಡಿಯೋ ಪಟ್ಟಾಂಗ,ಅಂತರ್ಜಾಲ ಫೋನ್ ಕರೆ ಮಾಡುವ ವ್ಯವಸ್ಥೆ ಇದರಲ್ಲಿ ಲಭ್ಯವಿದೆ. ಜಾಗತಿಕ ಸ್ಥಾನ ಗುರುತಿಸುವ ವ್ಯವಸ್ಥೆ(ಜಿಪಿಎಸ್)ಯೂ ಇದರಲ್ಲಿರುವುದು ಮತ್ತೊಂದು ಧನಾತ್ಮಕ ಅಂಶ.ವ್ಯಕ್ತಿಯಿರುವ ಸ್ಥಳದ ನಕಾಶೆ ತೋರಿಸುವ, ಅತನಿಗೆ ಸಾರಿಗೆ ವ್ಯವಸ್ಥೆಯ ಬಗ್ಗೆ ಮಾರ್ಗದರ್ಶನ ಮಾಡುವ,ಅಗತ್ಯ ಸೇವೆಗಳೆಲ್ಲಿ ಲಭ್ಯವೆಂದು ತಿಳಿಸುವಂತಹ ಮಾಹಿತಿ ಒದಗಿಸುವ ಸೌಕರ್ಯಗಲನ್ನು ಈ ಹಿಡಿಕಂಪ್ಯೂಟರ್ ಮೂಲಕ ಒದಗಿಸುವುದು ಸುಲಭ.ನೋಕಿಯಾN810 ಈ ಸಾಧನದ ಹೆಸರು. *ಅಶೋಕ್‍ಕುಮಾರ್ ಎ