ಛಠ್ ಪೂಜೆ
ನನ್ನ ಸ್ನೇಹಿತ ಭರತೇಂದು ಕುಮಾರ್ ದಾಸ್ ಮೂಲತ: ಬಿಹಾರಿನವನು. ಅವನು ನನ್ನ ಅಂತರ್ಜಾಲ ತಾಣ ನೋಡಿ, ಏ! ನನ್ನ ಬಗ್ಗೆಯೂ ಒಂದು ಲೇಖನ ಬರೆಯೋ ಅಂತ ಕೇಳಿದ. ಅಲ್ಲಪ್ಪ, ನಿನಗೆ ಕನ್ನಡ ಓದೋದಿಕ್ಕೆ ಬರೋದಿಲ್ಲ ( ಮಾತನಾಡಿದರೆ ಸ್ವಲ್ಪ ಸ್ವಲ್ಪ ಅರ್ಥ ಮಾಡಿಕೊಳ್ಳುತ್ತಾನೆ ) ನಾನು ಏನು ಬರೆದೆ ಅಂತ ನಿನಗೆ ಹೇಗೆ ಗೊತ್ತಾಗತ್ತೆ ಮತ್ತು ಹಾಗೆ ನಿನ್ನ ಬಗ್ಗೆ ಬರೆಯುವುದರಿಂದ ನಿನಗೇನು ಪ್ರಯೋಜನ ಎಂದು ಕೇಳಿದೆ. ಅದಕ್ಕೆ ಅವನಂದದ್ದು, ಅಲ್ಲ ಸಾಹಿತ್ಯ ಲೋಕದಲ್ಲಿ ಕನ್ನಡ ಒಳ್ಳೆಯ ಹೆಸರು ಮಾಡಿದೆ, ನಿನ್ನ ಲೇಖನಗಳೂ ಆಗಾಗ್ಯೆ ಬರ್ತಿವೆ. ಆಮೇಲೆ ನನ್ನ ಬಗ್ಗೆಯೇ ನೀನೊಂದು ಕಥೆ ಬರೆದರೂ ಬರೆದು ಬಿಡ್ತೀಯೇ, ನೀನು ಅಪಾಯಕಾರಿ ಮನುಷ್ಯ. ನನ್ನ ಬಗ್ಗೆ ಮೊದಲೇ ಒಂದು ಬರೆದು ಬಿಡೋ ಎಂದು ದುಂಬಾಲು ಬಿದ್ದ.
ಸರಿ, ಇವನ ಬಗ್ಗೆ ನಾನೇನು ಬರೆಯಲಿ, ಎಂದು ಯೋಚಿಸ್ತಿದ್ದಾಗ, ಅವನೇ ಲೇ! ನನ್ನ ಊರಿನ ಬಗ್ಗೆ ಕೇಳೋ, ನಮ್ಮ ಹಬ್ಬಗಳ ಬಗ್ಗೆ ಕೇಳೋ, ಹೇಳ್ತೀನಿ ಅದನ್ನೇ ನೀನು ಬರೆಯುವಿಯಂತೆ ಎಂದುಬಿಡೋದೇ. ಸರಿ ಹೇಳಪ್ಪ, ಅದೂ ಒಂದು ಆಗಿ ಬಿಡಲಿ ಎಂದು ಹೇಳಿದೆ. ಅವನು ಹೇಳಿದ್ದನ್ನು ನಿಮ್ಮ ಮುಂದೆ ಇಡುತ್ತಿರುವೆ.
ದಾಸ್‍ನ ಊರು ಉತ್ತರ ಬಿಹಾರದ ಧರಭಂಗ ಜಿಲ್ಲೆಯಲ್ಲಿರುವ ಒಂದು ಹಳ್ಳಿ. ಅದು ನೇಪಾಳದ ಗಡಿಯಿಂದ ೪೦ ಕಿಲೋಮೀಟರುಗಳು ದೂರದಲ್ಲಿದೆ. ಇಲ್ಲಿಯ ಹೆಚ್ಚಿನ ಜನರು ಬೇಸಾಯವನ್ನೇ ತಮ್ಮ ಜೀವನಕ್ಕೆ ನಂಬಿರುವವರು. ಈ ಕ್ಷೇತ್ರದಿಂದ ಹೆಚ್ಚಿನ ಐ ಎ ಎಸ್ ಮತ್ತು ಐ ಪಿ ಎಸ್ ಆಫೀಸರುಗಳು ಬಂದಿರುವರು ಮತ್ತು ಬರುತ್ತಿರುವರು. ಇಲ್ಲಿಯವರು ಪದವಿ ಪಡೆದ ನಂತರ ಹೆಚ್ಚಿನ ವಿದ್ಯಾಭ್ಯಾಸವನ್ನು ದೆಹಲಿಯಲ್ಲಿ ಮಾಡುವರು. ಇದಕ್ಕೆ ಕಾರಣ ಗೊತ್ತೇ ಇದೆ. ದೇಶದ ಈ ಭಾಗವು ಎಲ್ಲ ಸ್ತರಗಳಲ್ಲೂ ಹಿಂದುಳಿದಿದೆ.
ಇನ್ನೊಂದು ಮಜವಾದ ವಿಷಯವೆಂದರೆ, ಇವರು ಶ್ರೀ ರಾಮನನ್ನು ದೇವರೆಂದು ಪರಿಗಣಿಸುವುದಿಲ್ಲ. ಏಕೆಂದರೆ ಶ್ರೀರಾಮ ಇವರಿಗೆ ಅಳಿಯ ಮತ್ತು ಸೀತಾಮಾತೆ ಮನೆ ಮಗಳು. ಇವರಾಡುವ ಭಾಷೆ ಹಿಂದಿಯಲ್ಲ. ಮೈಥಿಲಿ. ಹೇಗೆ ಉತ್ತರ ಪ್ರದೇಶದಲ್ಲಿ ಭೋಜಪುರಿ ಪ್ರಚಲಿತವೋ ಹಾಗೆಯೇ ಬಿಹಾರದಲ್ಲಿ ಮೈಥಿಲಿ ಭಾಷೆಯು ಪ್ರಚಲಿತ. ಮೊದಲು ಈ ಪ್ರದೇಶವನ್ನು ಮಿಥಿಲಾ ದೇಶವೆನ್ನುತ್ತಿದ್ದರು. ಈ ಭಾಷೆಗೆ ಪ್ರತ್ಯೇಕವಾದ ಲಿಪಿಯಿಲ್ಲ. ದೇವನಾಗರಿ ಲಿಪಿಯನ್ನೇ ಬಳಸುವರು.
ಇನ್ನು ಇಲ್ಲಿ ಎಲ್ಲ ಬಗೆಯ ಹಬ್ಬಗಳನ್ನೂ ಆಚರಿಸುವರು. ಆದರೆ ವಿಶೇಷವಾದ ಒಂದು ಹಬ್ಬ, ದೇಶದ ಬೇರೆಲ್ಲಿಯೂ ಅಷ್ಟಾಗಿ ವಿಶೇಷವಲ್ಲದ್ದು ಅಂದರೆ ಛಠ್ ಪೂಜೆ.
ಇದೆಂತಹದ್ದಪ್ಪ ಛಠ್ ಪೂಜೆ ಅಂತ ಅಂದ್ಕೊಳ್ತಿದ್ದೆ. ಟಿವಿಯಲ್ಲಿ ನೋಡಿದ ಚಿತ್ರದಲ್ಲಿ ನದಿಯಲ್ಲಿ ಮೊರದ ಬಾಗಿನ ಬಿಡುವುದನ್ನು ನೋಡಿ - ಇದು ತೆಲುಗು ಪದವೇ ಎಂಬ ಅನುಮಾನ ಬಂದಿತ್ತು. ತೆಲುಗುವಿನಲ್ಲಿ ಮೊರಕ್ಕೆ ಚಾಟ್ಲು ಎನ್ನುವರು. ಆದರೆ ಈ ಪದ ಅದರಿಂದ ಬಂದದ್ದಲ್ಲ. ಅಥವಾ ಹಿಂದಿಯ ಛತ್ ನಿಂದ ಬಂದ ಪದವೋ? ಛತ್ ಎಂದರೆ ಛಾವಣಿ. ಆದರೆ ಈ ವ್ರತ ( ಹಬ್ಬ ಅನ್ನುವುದಕ್ಕಾಗುವುದಿಲ್ಲ, ಏಕೆಂದರೆ ದಿನ ಮತ್ತು ರಾತ್ರಿ - ೨೪ ಘಂಟೆಗಳೂ ಉಪವಾಸ ಇರುವರು ) ಬರುವುದು ದೀಪಾವಳಿ ಅಮಾವಾಸ್ಯೆಯ ನಂತರದ ಆರನೆಯ ದಿನ. ಗೊತ್ತಾಯಿತಲ್ಲ ಇದು ಷಷ್ಠಿ ಪೂಜೆ.
ಈ ವ್ರತದ ಬಗ್ಗೆ ಒಂದೆರಡು ಮಾತುಗಳು. ಈ ಒಂದು ರಾತ್ರಿ ಮತ್ತು ಒಂದು ದಿನ ವ್ರತಾರ್ಥಿಗಳು ಗಂಗಾ ನದಿಯ ದಡದಲ್ಲೇ ಇರುವರು. ಅಂದು ಕಟ್ಟುಪವಾಸ ಮಾಡುವರು. ಅಂದು ಬೆಳಗಿನಲ್ಲೇ ಭಕ್ತರು ಗಂಗೆಯಲ್ಲಿ ಮಿಂದು ಮನೆಯಲ್ಲಿ ನೈವೇದ್ಯ ಅರ್ಪಿಸಲು ಗಂಗೆಯ ನೀರನ್ನು ಮನೆಗೆ ತರುವರು. ನೈವೇದ್ಯಕ್ಕೆಂದು ಅರ್ಪಿಸಲು ಖೀರು ( ಪಾಯಸ ), ಪೂರಿ ಮತ್ತು ಬಾಳೆಹಣ್ಣುಗಳನ್ನು ಇಡುವರು. ಬೆಳಗ್ಗೆ ನೈವೇದ್ಯವನ್ನು ತಯಾರಿಸಿ ಸಂಜೆಗೆ ಸೂರ್ಯ ಮುಳುಗುವ ವೇಳೆಯಲ್ಲಿ ನದಿಯ ದಡದಲ್ಲಿ ಸೂರ್ಯದೇವರಿಗೆ ನೈವೇದ್ಯವನ್ನು ಅರ್ಪಿಸುವರು. ರಾತ್ರಿಯಾದೊಡನೆ ಮನೆಗೆ ಬಂದು ಕಬ್ಬಿನ ಜಲ್ಲೆಯಲ್ಲಿ ಚಪ್ಪರವನ್ನು ನಿರ್ಮಿಸಿ ಅದರಲ್ಲಿ ಮಣ್ಣಿನ ಆನೆಯನ್ನು ಮಾಡಿಟ್ಟು ಹಣತೆಗಳಲ್ಲಿ ದೀಪವನ್ನು ಹಚ್ಚಿಟ್ಟು ನೈವೇದ್ಯವನ್ನು ಅರ್ಪಿಸುವರು. ನಂತರ ಅಗ್ನಿ ದೇವನನ್ನು ಆರಾಧಿಸುವರು. ನಸುಕಿನ ಸೂರ್ಯೋದಯಕ್ಕೆ ಮುನ್ನ ನದೀ ದಡಕ್ಕೆ ಹೋಗಿ ಸೂರ್ಯನಿಗೆ ನೈವೇದ್ಯವನ್ನು ಅರ್ಪಿಸಿ, ನಂತರ ತಾವು ಅದನ್ನು ಪ್ರಸಾದವೆಂದು ಸ್ವೀಕರಿಸುವರು.
ಹೊಸದಾಗಿ ಮದುವೆಯಾದ ಹೆಣ್ಣುಮಗಳನ್ನು ಮನೆಗೆ ಕರೆಸಿ, ದೀಪಾವಳಿಯ ನಂತರ ಈ ಛಠ್ ಪೂಜೆಯನ್ನು ಮಾಡಿಸಿ ಮಗಳಿಗೆ ಮತ್ತು ಅಳಿಯನಿಗೆ ಉಡುಗೊರೆಯನ್ನು ನೀಡುವರು.