ರಾಜ್ಯೋತ್ಸವ ಆಚರಿಸಲು ಕನ್ನಡ ಟೈಪಿಸಿ: ಗೂಗಲ್ ಕೊಡುಗೆ

ರಾಜ್ಯೋತ್ಸವ ಆಚರಿಸಲು ಕನ್ನಡ ಟೈಪಿಸಿ: ಗೂಗಲ್ ಕೊಡುಗೆ

ಬರಹ

Udayavani

(ಇ-ಲೋಕ-46)(29/10/2007)

ಅಂತರ್ಜಾಲದಲ್ಲಿ ಕನ್ನಡ ಟೈಪಿಸುವುದೀಗ ಚಿಟಿಕೆ ಹೊಡೆದಷ್ಟೇ ಸುಲಭ.ತಂತ್ರಜ್ಞಾನವನ್ನು ಜನರ ಸಮೀಪಕ್ಕೆ ತರಲು ಹಲವಾರು ಸಂಶೋಧನೆಗಳನ್ನು ಮಾಡುತ್ತಿರುವ ಗೂಗಲ್, ಭಾರತೀಯ ಭಾಷೆಗಳನ್ನು ಟೈಪಿಸುವುದನ್ನು ಸುಲಭವಾಗಿಸುವ ಆನ್‍ಲೈನ್ ಸೇವೆ ಒದಗಿಸಲಾರಂಭಿಸಿದೆ.ಗೂಗಲ್ ಇಂಡಿಕ್ ಟ್ರಾನ್ಸಿಲಿಟರೇಷನ್ ಎಂಬ ನೂತನ ಶೋಧನೆಯು ಜನರಿಗೆ http://www.google.com/transliterate/indic/Kannada# ಪುಟದಲ್ಲಿ ಲಭ್ಯ. ಕನ್ನಡ,ಮಲೆಯಾಳಮ್,ಹಿಂದಿ,ತಮಿಳು ಮತ್ತು ತೆಲುಗು ಈ ಭಾಷೆಗಳಲ್ಲೂ ಟೈಪಿಸಬಹುದು. ಪುಟದಲ್ಲಿ ನೀಡಿರುವ ಅಂಕಣದಲ್ಲಿ ಆಂಗ್ಲ ಭಾಷೆಯಲ್ಲಿ ಕನ್ನಡ ಪದ ಬರೆದಂತೆ ಟೈಪಿಸಿ ಸ್ಪೇಸ್ ಕೀಲಿ ಮಣೆ ಒತ್ತಿದರೆ ಪದ ಕನ್ನಡವಾಗುತ್ತದೆ. ನೀವು ಇಚ್ಛಿಸಿದ ಪದ ಬರದಿದ್ದರೆ, ಪದದ ಮೇಲೆ ಕ್ಲಿಕ್ಕಿಸಿದರೆ, ಇತರ ಆಯ್ಕೆಗಳು ಕಾಣಿಸಿಕೊಳ್ಳುತ್ತವೆ.ಇವುಗಳ ಪೈಕಿ ಬೇಕಾದ್ದನ್ನು ಆಯ್ದು ಕೊಳ್ಳಬಹುದು.ಬರಹದಂತಹ ತಂತ್ರಾಂಶಕ್ಕಿಂತ ಇದರ ಬಳಕೆ ಸುಲಭ. ನೀವು ಪದವನ್ನು ಪೂರ್ತಿ ಸರಿಯಾಗಿ ಟೈಪಿಸದಿದ್ದರೂ, ಕನ್ನಡ ಪದಗಳು ಮೂಡುತ್ತವೆ.vijnani ಎಂದು ಟೈಪಿಸಿದರೂ ವಿಜ್ಞಾನಿ ಎನ್ನುವ ಪದ ಕಾಣಿಸಿಕೊಳ್ಳುತ್ತದೆ.ಆಂಗ್ಲ ಪದ ಮೂಡಿಸಲು ಕಂಟ್ರೋಲ್ ಮತ್ತು g ಒತ್ತಿದರೆ ಮುಗಿಯಿತು.ಕೀಲಿ ಮಣೆಯ ಚಿತ್ರವೇ ಮೂಡಿ ಬರುವಂತೆ ಮಾಡಿ ಅದರ ಕೀಲಿಯನ್ನು ಕ್ಲಿಕ್ಕಿಸುವ ಮೂಲಕ ಟೈಪಿಸಲೂ ಸಾಧ್ಯ.

ಮನೆ ಮನೆ ಕತೆ

 ಅಪಾರ್ಟ್‍ಮೆಂಟ್‍ಗಳಲ್ಲಿ ವಾಸಿಸುವವರು ತಮ್ಮ ಬಗ್ಗೆ ಹೇಳಿಕೊಳ್ಳಲು,ತಮ್ಮ ಸಮಸ್ಯೆಗಳನ್ನು ಚರ್ಚಿಸಲು,ಚಿತ್ರ,ವಿಡಿಯೋಗಳನ್ನು ಹಂಚಿಕೊಳ್ಳಲು LifeAt.com ಎನ್ನುವ ಅಂತರ್ಜಾಲ ತಾಣ ಇದೆ.ಈ ತಾಣದಲಿ ಅಪಾರ್ಟ್‍ಮೆಂಟ್‍ಗಳವರು ಆರು ಸಾವಿರ ಡಾಲರು ತೆತ್ತು ನೋಂದಾಯಿಸಿಕೊಂಡರೆ, ಪಾಸ್‍ವರ್ಡ್ ಮೂಲಕ ಸುರಕ್ಷತೆ ಒದಗಿಸಿದ ತಾಣ ಸಿಗುತ್ತದೆ.ಇಲ್ಲಿ ಜಾಹೀರಾತುಗಳನ್ನು ಪ್ರಕಟಿಸಬಹುದು.ಸೇವೆಗಳ ಲಭ್ಯತೆ ಬಗ್ಗೆ ಪ್ರಕಟಿಸಬಹುದು. ಕಾರ್ಯಕ್ರಮಗಳ ವಿವರ ನೀಡಬಹುದು.ಸ್ಪರ್ಧೆಗಳನ್ನು ಏರ್ಪಡಿಸಬಹುದು.ಪುಟಗಳಲ್ಲಿ ಸೇರಿಸಿದ ಮಾಹಿತಿಯ ಬಗ್ಗೆ ಲೈಫ್‍ಅಟ್ ತಾಣದ ಉದ್ಯೋಗಿಗಳು ಕಣ್ಣಿಡುತ್ತಾರೆ. ಅಶ್ಲೀಲ,ಅನಪೇಕ್ಷಿತ ಮಾಹಿತಿ ಬಂದರೆ ಕಿತ್ತು ಬಿಡುವ ಮುನ್ನೆಚ್ಚರಿಕೆಯನ್ನು ಇವರು ಕೈಗೊಳ್ಳುತ್ತಾರೆ.ಈಗಾಗಲೇ ನಾಲ್ಕುನೂರು ಕಟ್ಟಡಗಳವರು ಇಲ್ಲಿ ನೋಂದಾಯಿಸಿ ಸಕ್ರಿಯರಾಗಿದ್ದಾರೆ. MeetTheNeighbors.org ಇದೇ ತರಹದ ಸೇವೆ ನೀಡುವ ತಾಣ. ಇದರ ಸೇವೆ ಉಚಿತವಾಗಿಯೇ ಲಭ್ಯ. ಅದ್ದರಿಂದಲೋ ಏನೋ, ಇದರಲ್ಲಿ ಸುಮಾರು ಹತ್ತುಸಾವಿರ ಸದಸ್ಯರಿದ್ದಾರೆ.

ಕಟ್ಟಡದ ಒಳಗೂ ಓಡಾಡಿಸುವ ಎವೆರಿಸ್ಕೇಪ್

 ನಿಮ್ಮೂರಿನ ಮೂರು ಆಯಾಮದ ನಕಾಶೆಗಳನ್ನು ತೋರುವ ಗೂಗಲ್ ಅರ್ಥ್ ಸೇವೆಗೆ ಹೊಸ ಅಧ್ಯಾಯ ಸೇರಿಸುವ ಸಾಹಸಕ್ಕೆ http://www.everyscape.com/ ಇಳಿದಿದೆ.ಇಲ್ಲಿ ಅಮೆರಿಕಾದ ಮಹಾನಗರಗಳ ಮುಖ್ಯಸ್ಥಳಗಳ ನಕಾಶೆ ಸಿಗಲಿದೆ.ಸದ್ಯ ಸ್ಯಾನ್‍ಫ್ರಾನ್ಸಿಸ್ಕೋದ ಯೂನಿಯನ್ ಸ್ಕ್ವೇರ್ ಸ್ಥಳದ ನಕಾಶೆ ಲಭ್ಯ. ಇಲ್ಲಿನ ಕಟ್ಟಡಗಳು ನಿಮ್ಮ ಕಂಪ್ಯೂಟರಿನಲ್ಲಿ ದರ್ಶನವೀಯುತ್ತವೆ.ಕಟ್ಟಡದ ಒಳಗೆ ಪ್ರವೇಶಿಸಿ ನೋಡಲು ಸಾಧ್ಯ.ಅಲ್ಲಿರುವ ಅಂಗಡಿಗಳಲ್ಲಿ ಆನ್‍ಲೈನ್ ಖರೀದಿಯೂ ಸಾಧ್ಯ.

ಆಪಲ್‍ನ ಚಿರತೆ!

 ಮ್ಯಾಕ್ ಕಂಪ್ಯೂಟರುಗಳನ್ನು ಆಪಲ್ ಕಂಪೆನಿ ತಯಾರಿಸುತ್ತದೆ.ಇದರ ಜತೆ ಬಳಕೆಯಾಗುತ್ತಿದ್ದ ಕಾರ್ಯನಿರ್ವಹಣಾ ವ್ಯವಸ್ಥೆ ತಂತ್ರಾಂಶ ಟೈಗರ್. ಮುಂದಿನ ಶುಕ್ರವಾರ ಲೆಪರ್ಡ್ ಎನ್ನುವ ಹೊಚ್ಚ ಹೊಸ ಕಾರ್ಯನಿರ್ವಹಣ ವ್ಯವಸ್ಥೆ ತಂತ್ರಾಂಶ ಬಿಡುಗಡೆಯಾಗಲಿದೆ.ಸುಮಾರು ಮುನ್ನೂರು ಹೊಸ ಸವಲತ್ತುಗಳು ಇದರಲ್ಲಿ ಲಭ್ಯವಂತೆ.ವಿಂಡೋಸ್ ತಂತ್ರಾಂಶ ವಿಸ್ಟಾಕ್ಕಿಂತ ಇದು ಹೆಚ್ಚು ಖುಷಿ ನೀಡಲಿದೆಯೆಂದು ಆಪಲ್ ಕಂಪೆನಿ ಉವಾಚ.ವಿಂಡೋಸ್,ಲೈನಕ್ಸ್ ಮತ್ತು ಲೆಪರ್ಡ್‍ಗಳನ್ನು ಒಂದೇ ಮ್ಯಾಕ್ ಯಂತ್ರದಲ್ಲಿ ಬಳಸುವ ಸಮಾನಾಂತರ ವ್ಯವಸ್ಥೆ ಲಭ್ಯವಿದೆ.

ಸೌರಶಕ್ತಿಚಾಲಿತ ಕಾರುಗಳ ರೇಸು

 ಆಸ್ಟ್ರ್‍ಏಲಿಯಾದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಸೌರಶಕ್ತಿ ಕಾರುಗಳ ರೇಸು ಸ್ಪರ್ಧೆ ನಡೆಯುತ್ತಿದೆ. ಮರುಭೂಮಿ ಪ್ರದೇಶದಲ್ಲಿ ಸಾಗುವ ರೇಸು,ಮೂರು ಸಾವಿರ ಕಿಲೋಮೀಟರ್ ದೂರ ಸಾಗುತ್ತದೆ.ಉತ್ತರ ಆಸ್ಟ್ರೇಲಿಯಾದ ಡಾರ್ವಿನ್ ಎಂಬ ಸ್ಥಳದಲ್ಲಿ ಆರಂಭವಾಗುವ ರೇಸು ದಕ್ಷಿಣ ಆಸ್ಟ್ರೇಲಿಯಾದ ಅಡಿಲೇಡಿನಲ್ಲಿ ಕೊನೆಯಾಗುತ್ತದೆ.ಸಂಪೂರ್ಣವಾಗಿ ಸೌರಶಕ್ತಿಯನ್ನೇ ಬಳಸಿ ಕಾರುಗಳು ಸಾಗಬೇಕು ಎನ್ನುವುದು ಶರತ್ತು.ಕಳೆದ ವರ್ಷದ ರೇಸಿನಲ್ಲಿ ಸರಾಸರಿ ವೇಗ ನೂರಮೂರು ಕಿಲೋಮೀಟರ್ ಸಾಧಿತವಾಗಿದ್ದರೆ,ಅತ್ಯಂತ ಹೆಚ್ಚಿನ ವೇಗವೆಂದರೆ ಪ್ರತಿ ಗಂಟೆಗೆ ನೂರನಲ್ವತ್ತೇಳು ಕಿಲೋಮೀಟರ್.ರೇಸಿನಲ್ಲಿ ಭಾಗವಹಿಸುತ್ತಿರುವ ಕಾರುಗಳು ನಲ್ವತ್ತನಾಲ್ಕು ಸಾವಿರ ಡಾಲರುಗಳಿಂದ ಎರಡುಕಾಲು ಮಿಲಿಯನ್ ಡಾಲರುಗಳಷ್ಟು ದುಬಾರಿಯಾಗಿರುತ್ತವೆ. ಈ ಸ್ಪರ್ಧೆಯಲ್ಲಿ ಸ್ಪರ್ಧಿಗಳ ಬಗ್ಗೆ ಹೆಚ್ಚಿನ ಗಮನ ನೀಡದೆ,ಕಾರುಗಳ ಬಗ್ಗೆಯೇ ಹೆಚ್ಚಿನ ಗಮನ ನೀಡುವುದು ಧನಾತ್ಮಕ ಅಂಶ. ಕಾಡ್ಗಿಚ್ಚು ನಿಯಂತ್ರಣಕ್ಕೆ ಪೈಲಟ್ ರಹಿತ ವಾಹನದ ನೆರವು ದಕ್ಷಿಣ ಕ್ಯಾಲಿಫೊರ್ನಿಯಾದ ಕಾಳ್ಗಿಚ್ಚು ಕಳೆದ ಕೆಲವು ದಿನಗಳಿಂದ ದಳ್ಳುರಿಯಾಗಿ ನಿಯಂತ್ರಣ ಮೀರಿ ಹೋಗಿದೆ. ಇದರ ವಿರುದ್ಧ ಹೋರಾಡಲು ಪೈಲಟ್ ರಹಿತ ವಾಹನಗಳ ಬಳಕೆಯಾಗುತ್ತಿದೆ. ಈ ವಾಹನಗಳು ಕಾಡ್ಗಿಚ್ಚು ಹಬ್ಬಿರುವ ಪ್ರದೇಶದ ಮೇಲೆ ಸಾಗಿ ಚಿತ್ರ ಹಿಡಿದು ಬರುತ್ತವೆ.ಜ್ವಾಲೆಗಳ ದಿಕ್ಕು,ಕಾಡ್ಗಿಚ್ಚು ಹಬ್ಬುತ್ತಿರುವ ರೀತಿಯನ್ನು ಕಂಡು ಕೊಂಡರೆ,ಅದರ ನಿಯಂತ್ರಣ ಸಾಧ್ಯವಷ್ಟೆ?ಈ ವಾಹನವಲ್ಲದೆ ಉಪಗ್ರಹಗಳ ಚಿತ್ರಗಳನ್ನೂ ವಿಜ್ಞಾನಿಗಳು ಬಳಸಿಕೊಳ್ಳುತ್ತಿದ್ದಾರೆ. ಏನೇ ಆದರೂ ಕಾಡ್ಗಿಚ್ಚಿನ ನಿಯಂತ್ರಣ ಹೇಳಿದಷ್ಟು ಸುಲಭವಲ್ಲ. *ಅಶೋಕ್‍ಕುಮಾರ್ ಎ