ಕುಸುಮಾಕರ ದೇವರಗೆಣ್ಣೂರು

ಕುಸುಮಾಕರ ದೇವರಗೆಣ್ಣೂರು

ನಾವೆಲ್ಲ ಹೆಗಲಿಗೆ ಚೀಲ ಸಿಕ್ಕಿಸಿಕೊಂಡು, ಪ್ರೀತಿಯ ಅಮ್ಮ, ತಮ್ಮನನ್ನು ಮನೆಯಲ್ಲೇ ಬಿಟ್ಟು, ಗೊತ್ತೇ ಇಲ್ಲದ ಹುಡುಗರು, ಭಯ ಹುಟ್ಟಿಸುವ ಮಾಸ್ಟ್ರು, ಟೀಚರ್ರು ಎಲ್ಲ ಇರುವ ನಿಗೂಢ ಶಾಲೆಗೆ ಹೋಗತೊಡಗಿದ್ದು, ಕ್ರಮೇಣ ಅದೆಲ್ಲ ನಮಗೆ ಅಭ್ಯಾಸವಾಗಿದ್ದು ಮತ್ತೆ ಅದೇ ಶಾಲೆ ಬಿಟ್ಟು ಹೈಸ್ಕೂಲಿಗೋ ಕಾಲೇಜಿಗೋ ಬೇರೆ ಕಡೆ ಹೋಗಬೇಕಾದಾಗ ಬಿಟ್ಟು ಹೋಗಬೇಕಲ್ಲ ಎಂದು ಅತ್ತಿದ್ದು.....ಎಲ್ಲ ಹಳೆಯ ನೆನಪುಗಳು.

ಅಲ್ಲೆಲ್ಲೋ ನಮಗೆ ಬದುಕಿನ ಸ್ಪರ್ಧಾತ್ಮಕ ಗುಣದ ಅಸ್ಪಷ್ಟ ಪರಿಚಯವಾಗಿರುತ್ತದೆ. ಅದು ಮಾರ್ಕುಗಳ ಲೆಕ್ಕದಲ್ಲಿ, ಆಟದ ತೀರ್ಪುಗಳಲ್ಲಿ, ಸಾಂಸ್ಕೃತಿಕ ಸ್ಪರ್ಧೆಗಳ ಬಹುಮಾನಗಳಲ್ಲಿ ತನ್ನ ಕ್ರೂರ ಹಲ್ಲನ್ನು ಮಸೆದ ಶಬ್ದ ಕೇಳಿಸದಿದ್ದರೂ ಕೇಳಿಸಿದಂತಿರುತ್ತದೆ. ಮುಂದೆ ಉದ್ಯೋಗದ ಬೇಟೆಗೆ ತೊಡಗಿದಾಗ, ಅಲ್ಲಿ ಇಲ್ಲಿ ನಮ್ಮ ಜೊತೆಯವರು ನಮಗಿಂತ ಮುಂದೆ ಸಾಗಿ ಹೋದ ಸುದ್ದಿ ಕೇಳಿದಾಗ, ಕೊನೆಗೂ ಬದುಕಿನ ಹಾದಿ ಬದಲಿಸಲಾಗದ ಮಧ್ಯವಯಸ್ಸಿನಲ್ಲಿ ನಿಂತಿರುವಾಗ ನಮ್ಮದೇ ಓರಗೆಯ ಅವರಿವರ ಯಶಸ್ಸು, ಅಪಯಶಸ್ಸುಗಳನ್ನು ಕಾಣುವಾಗ....

ನಮ್ಮ ವಿದ್ಯಾಭ್ಯಾಸ, ಉದ್ಯೋಗ, ಉಳಿತಾಯ ಎಲ್ಲದರ ಹಿಂದಿರುವ ಸರಳ ಉದ್ದೇಶ ಒಂದೇ, ಚೆನ್ನಾಗಿ ಬದುಕುವುದು. ಆದರೆ ಎಷ್ಟೋ ಮಂದಿಗೆ ಈ ಉದ್ದೇಶವನ್ನು ಸಾಧಿಸುವ ಸಾಧನೆಯ ಹಾದಿಯಲ್ಲಿ ಅದೇ ಮರವೆಯಾಗಿ ಬಿಡುವುದಿದೆ. ಬರೇ ದುಡಿತ ದುಡಿತ ದುಡಿತ, ಅದನ್ನು ಬಿಟ್ಟರೆ ಎಲ್ಲಿ ಹೇಗೆ ಎಷ್ಟು ಹಣ ಹೂಡಿದರೆ ಸೇಫ್, ಎಲ್ಲಿ ಹೆಚ್ಚು ಸಿಗುತ್ತದೆ, ಸ್ವಲ್ಪ ಸಮಯವಿದ್ದರೆ ಬೇರೇನಾದರೂ ಗಳಿಕೆಗೆ ಸಾಧ್ಯವಿದೆಯೆ ಮುಂತಾಗಿ ಯೋಚನೆ. ತಪ್ಪೆಂದು ಹೇಳುತ್ತಿಲ್ಲ. ಇವರ ಪ್ರಕಾರ ಆ ಚೆನ್ನಾಗಿ ಬದುಕುವುದು ಇವತ್ತು, ಈಗ ಅಲ್ಲ. ಮುಂದೆಂದೋ ಒಂದು ದಿನ, ಈ ಸಾಹಸಗಳೆಲ್ಲ ಮುಗಿದ ಮೇಲೆ. ಆದರೆ ಆ ಒಂದು ದಿನ ಎಂದಾದರೂ ಬರುವುದೆ?

ಇವತ್ತು, ಈಗ ಮಾತ್ರ ಇವರು ಆ ಚೆನ್ನಾಗಿ ಬದುಕುವುದಕ್ಕೆ ವೇಳೆಯನ್ನೇ ಮಿಗಿಸುವುದಿಲ್ಲವಲ್ಲ. ಒಂದು ಮನೋರಂಜನೆ, ಓದು, ಸಿನಿಮಾ, ಪ್ರವಾಸ, ಮಾತುಕತೆ, ಸಭೆ, ಸಮಾರಂಭ, ಸರಸ, ವಿನೋದ ಯಾವುದೂ ಇಲ್ಲದ ಬಾಳನ್ನೂ ಕೆಲವರು ಬಾಳುತ್ತಿಲ್ಲವೆ? ಕೆಲವರಿಗೆ ಇದು ಅನಿವಾರ್ಯ. ಒಬ್ಬ ಬಸ್ಸು ಅಥವಾ ಲಾರಿ ಡ್ರೈವರ್, ಅಟೋ ರಿಕ್ಷಾ ಓಡಿಸುವವರು, ಸಣ್ಣಪುಟ್ಟ ವ್ಯಾಪಾರಕ್ಕೆ ಓಡಾಡುವವರು, ಹಗಲು ತೊಡಗುವ ಮುನ್ನ, ಕತ್ತಲು ಆವರಿಸಿದ ಮೇಲೆ ಹೊಸದಾದ ದುಡಿಮೆಯೊಂದರಲ್ಲಿ ವ್ಯಸ್ತರಾಗುವವರು, ಇಂತಿಷ್ಟು ಗಂಟೆಯ ಇಂಥದೇ ದುಡಿಮೆಯೆಂಬ ನಿಶ್ಚಿತವೇ ಇಲ್ಲದವರು....

ಇನ್ನು ಕೆಲವರಿಗೆ ಅನಿವಾರ್ಯ ಅಲ್ಲ ಎನಿಸುತ್ತದೆ, ನಮಗೆ. ಅವರಿಗೆ ಹಾಗನಿಸದಿರಬಹುದಲ್ಲ? ಇವರ ಉದ್ದೇಶವೂ ಅದೇ, ಈಗ ಸ್ವಲ್ಪ ಕಷ್ಟಪಟ್ಟರೇ ಅಲ್ಲವೆ ಮುಂದೆ ಚೆನ್ನಾಗಿ ಬದುಕುವುದಕ್ಕೆ ಸಾಧ್ಯ?

ಕುಸುಮಾಕರ ದೇವರಗೆಣ್ಣೂರರ ಕಾದಂಬರಿ ನಿರಿಂದ್ರಿಯದಲ್ಲಿ ಬರುವ ರೊಳ್ಳಿ ಇಂಥವನು. ಈ ಕಾದಂಬರಿಯನ್ನು ಮತ್ತೊಮ್ಮೆ ಓದಲು ಕಾರಣವಿದೆ. ಕನಸುಗಳು, ರೂಪಕಗಳು, ದೃಷ್ಟಾಂತಗಳು ಇಲ್ಲವೇ ತಮ್ಮ ಓದಿನ ನೆನಪುಗಳಿಂದಲೇ ತಾವು ಹೇಳಬೇಕಾದುದನ್ನು ಹೇಳುವ ಕುಸುಮಾಕರ ದೇವರಗೆಣ್ಣೂರರು ತಮ್ಮ ಇತ್ತೀಚಿನ ಸಂದರ್ಶನದಲ್ಲೂ (ದೇಶಕಾಲದ ಹನ್ನೊಂದನೆಯ ಸಂಚಿಕೆ) ಇದೇ ರೀತಿ ಮಾಡಿರುವುದು ಕುತೂಹಲಕರ. ಇವರ ಅಂತರಂಗವನ್ನು ಸುಮಾರು ಎಂಭತ್ತಕ್ಕೂ ಮಿಕ್ಕಿದ ಪ್ರಶ್ನೆಗಳಲ್ಲಿ ತೆರೆಯಲೆತ್ನಿಸಿದ ರಹಮತ್ ತರೀಕೆರೆಯವರಿಗೆ ಬೇಕಾದ ಉತ್ತರಗಳು ಸಿಕ್ಕಿದವೋ ಇಲ್ಲವೋ, ಜಗತ್ತಿನ ಸಾಹಿತ್ಯವನ್ನೆಲ್ಲ ಒಮ್ಮೆ ಹಾದು ಬಂದ ಅನುಭವವಂತೂ ಆಗಿರಬೇಕು! ಜಿಡ್ಡು ಕೃಷ್ಣಮೂರ್ತಿ, ಓಶೋ, ಮಹಾಭಾರತ, ಭವಭೂತಿ, ಮಹಾತ್ಮಗಾಂಧಿ, ಎರ್ರಿಕ್ ಫ್ರಾಮ್, ರೂಸ್‌ವೆಲ್ಟ್, ಕೆ.ಕೆ.ಹೆಬ್ಬಾರ್, ಹೆಲನ್ ಕೆಲರ್, ವಿಕ್ಟರ್ ಫ್ರ್ಯಾಂಕಲ್, ಬ್ರೆಕ್ಟ್, ಬೆಂಜಮಿನ್ ಫ್ರಾಂಕ್ಲಿನ್, ಥಾಮಸ್ ಹಾಬ್ಸ್, ಎರಿಕ್ ಎರಿಕ್‌ಸನ್, ಬೊಳುವಾರು, ವಿಕ್ಟರ್ ಫ್ರ್ಯಾಂಕಲ್, ಅಗಾಥ ಕ್ರಿಸ್ತಿ, ಕುವೆಂಪು, ಟಾಲ್‌ಸ್ಟಾಯ್, ಕಾರಂತ, ಬೇಂದ್ರೆ, ಅಡಿಗ, ಪಿಕಾಸೊ, ಸತ್ಯಕಾಮ, ಸ್ವಪ್ನಗಳು, ಸೂಡೋ ಕ್ಯಾರಕ್ಟರ್‍ಸ್, ಮನಃಶಾಸ್ತ್ರ, ಗೀತೆ, ಮತಾಂತರ.....ಏನು ಮತ್ತೇನಿಲ್ಲ!! ಬರೇ ಹೆಸರುಗಳಲ್ಲ, ಅಂಥವನ್ನು ಬಿಟ್ಟು, ಏನಾದರೊಂದು ಪ್ರಕರಣ, ಉಪಕತೆ, ಅನುಭವ ಹೇಳುವಾಗ ಅಲ್ಲಿ ಬಂದ ಹೆಸರುಗಳಿವು. ಇನ್ನು ಸಂದರ್ಭಾನುಸಾರ ಬಂದ ಹೆಸರುಗಳು, ಸಂಗತಿಗಳು ಪಟ್ಟಿಮಾಡಲಾಗದಷ್ಟಿವೆ!

ಈ ಸಂದರ್ಶನ ಓದಿದ ಮೇಲೆ ಇನ್ನೇನೂ ಓದಲಾಗಲಿಲ್ಲ. ಅಶೋಕ ಹೆಗಡೆಯವರ ಕತೆ ಓದುವುದಿತ್ತು. ಆಗಲಿಲ್ಲ. ಸ್ವಲ್ಪ ಹೊತ್ತು ಸುಮ್ಮನೇ ಕೂತುಬಿಟ್ಟೆ. ಬದುಕೇ ಗೇಮ್ ಟ್ರುಥ್ ಎನ್ನುತ್ತಾರಲ್ಲ ಇವರು, ಹೌದಲ್ಲವ..... ಆದರೆ ಬದುಕುವಾಗ ಅದನ್ನು ಮರೆಯುವುದೇ ಒಳ್ಳೆಯದಲ್ಲವ...

ತುಂಬ ಹಿಂದೆ ಓದಿದ್ದ ಇವರ ಕಾದಂಬರಿಗಳು ಪರಿಘ, ನಿರಿಂದ್ರಿಯ, ಬಯಲ ಬಸಿರು ಎಲ್ಲವನ್ನೂ ಮತ್ತೊಮ್ಮೆ ಓದಬೇಕೆನಿಸಿತು. ನಿರಿಂದ್ರಿಯದ ಈ ಭಾಗವನ್ನು ಓದಿ:

ಕಿಟಕಿಯಿಂದ ಅವನಿಗೊಂದು ದೃಶ್ಯ ಕಂಡಿತು-

ನಾಲ್ಕೈದು ವರ್ಷದ ಮಕ್ಕಳು ಗುಂಪಾಗಿ ಆಟದಲ್ಲಿ ತೊಡಗಿವೆ. ಅವೆಲ್ಲ ಮಧ್ಯಮ ವರ್ಗದ ಮಕ್ಕಳೇ. ಮೈಮೇಲೆ ಒಳ್ಳೆಯ ಬಟ್ಟೆಗಳನ್ನು ಹಾಕಿಕೊಂಡಿವೆ. ಕಾಲಲ್ಲಿ ಸೊಗಸಾದ ಮೆಟ್ಟುಗಳಿವೆ. ಮೈ ಬಣ್ಣ ಕೆಂಪಾಗಿವೆ. ಹುಡುಗಿಯರ ತಲೆಗೂದಲನ್ನು ನೀಟಾಗಿ ಬಾಬ್ ಮಾಡಲಾಗಿದೆ. ಅವುಗಳದ್ದೇ ಒಂದು ಗುಂಪು. ಅವುಗಳ ಜತೆಯಲ್ಲಿಯೆ ಅವುಗಳ ಓರಗೆಯ ಮಗುವೊಂದಿದೆ. ಅದು ಮುಸುರೆ ತಿಕ್ಕುವವಳ ಮಗು. ಅದಕ್ಕೆ ಮೈಮೇಲೆ ಸೊಗಸಾದ ಬಟ್ಟೆಗಳಿಲ್ಲ. ಇದ್ದ ಬಟ್ಟೆಗಳೂ ತೀರ ಹಳೆಯದಾಗಿವೆ, ಕೊಳೆಯಾಗಿವೆ, ಜೀರ್ಣವಾಗಿವೆ. ಎಣ್ಣೆ ಕಾಣದ ತಲೆ, ಮೈ ಕೂಡ ಕೊಳೆಯಾಗಿದೆ. ಬರಿಗಾಲು. ಅವುಗಳ ಜತೆ ತಾನೂ ನಗುತ್ತಿದೆ. ಕೇಕೆ ಹಾಕುತ್ತಿದೆ. ಆದರೆ ಅವರಲ್ಲಿ ಯಾವ ಸಂಬಂಧವೂ ಇಲ್ಲವಾಗಿದೆ. ಅದರ ನಗುವನ್ನು ಯಾರೂ ಕೇಳುತ್ತಿಲ್ಲ. ಅದರ ಕೇಕೆಯನ್ನು ಯಾರೂ ಗಮನಿಸುತ್ತಿಲ್ಲ. ಅದರ ಮಾತನ್ನು ಯಾರೂ ಕಿವಿಯಲ್ಲಿ ಹಾಕಿಕೊಳ್ಳುತ್ತಿಲ್ಲ. ಆ ಮಕ್ಕಳು ಓಟದ ಪಂದ್ಯವನ್ನಿಟ್ಟವು. ಈಗ ಅವು ಓಡುತ್ತಿವೆ. ಅವುಗಳ ಹಿಂದೆ ಮುಸುರೆಯವಳ ಮಗುವೂ ಓಡುತ್ತಿದೆ. ಎರಡರ ನಡುವೆ ಅಂತರ ಬೆಳೆಯುತ್ತಿದೆ. ಮುಸುರೆಯವಳ ಮಗು ತೀರ ಹಿಂದುಳಿಯಿತು. ಅದು ಏಕಾಕಿಯಾಗಿದೆ....

ಆ ಚಿತ್ರ ಮರೆಯಾಯಿತು. ಆದರೆ ಆ ದೃಶ್ಯ ಮನಸ್ಸಿನಲ್ಲಿ ಒಂದು ಚಿತ್ರವನ್ನು ಲೇಖಿಸಿತು. ಆ ಚಿತ್ರ ವಿಷಾದವನ್ನು ನೀಡಿತು. ಮುಂದೆ ಜನ ಓಡುತ್ತಿದೆ. ತಾನೂ ಓಡುತ್ತಿದ್ದಾನೆ. ತಾನು ದೂರ...ದೂರ...ಹಿಂದೆ....ಹಿಂದೆ ಉಳಿದ. ತನಗೆ ದಣಿವಾಗಿದೆ. ಆದರೂ ಓಡುತ್ತಿದ್ದಾನೆ. ತನ್ನ ಜತೆಯಲ್ಲಿ ಯಾರೂ ಇಲ್ಲ. ತಾನೊಬ್ಬನೇ. ಕಣ್ಣು ಕತ್ತಲಿಸುತ್ತಿವೆ. ಕಾಲು ನೋಯುತ್ತಿವೆ. ತೃಷೆಯಿಂದ ಬಾಯಿ ಒಣಗಿ ಬರುತ್ತಿದೆ. ಈ ಚಿತ್ರವೆಲ್ಲವೂ ಮರೆಯಾಯಿತು. ತಾನು ಮುಂದೆ ಹೊರಟಿದ್ದಾನೆ. ಹಿಂದೆ ಹೆಂಡತಿ, ಅವಳ ಜತೆ ಮೂವರು ತನ್ನ ಮಕ್ಕಳು. ಅವರೂ ತನ್ನನ್ನು ಅನುಸರಿಸುತ್ತಿದ್ದಾರೆ. ಆದರೆ ಅವರಿಗೂ ತನಗೂ ಯಾವ ಸಂಬಂಧವಿಲ್ಲವಾಗಿದೆ. ಅವರು ತನ್ನನ್ನು ದಾಟಿ ಮುಂದೆ ಬಂದರು. ಅವರು ತಮ್ಮ ಮಾತಿನಲ್ಲೇ ಇದ್ದಾರೆ. ತನ್ನನ್ನು ಯಾರೂ ಗಮನಿಸುತ್ತಿಲ್ಲ. ಅವರು ಏನೋ ಮಾತನಾಡಿದರು. ಆದರೆ ಕೇಳಿಸಲಿಲ್ಲ. ಅವರು ದಡದಡ ಹೆಜ್ಜೆ ಹಾಕಿದರು. ತಾನೂ ಹಾಕಿದ. ಆದರೆ ಅವರನ್ನು ಕೂಡಿಕೊಳ್ಳುವುದು ಆಗಲಿಲ್ಲ. ಅವರದೇ ಒಂದು ಗುಂಪು, ತಾನೆ ಒಬ್ಬ. ಇದೇ ಈಗ ಕಂಡ ಏಕಾಕಿಯಾದ ಮುಸುರೆಯವಳ ಮಗುವಿನ ಚಿತ್ರ ಕಣ್ಮುಂದೆ ಬಂತು. ಅದಕ್ಕೂ ತನಗೂ ಸಾಮ್ಯವನ್ನು ಸಂಬಂಧವನ್ನು ಮನಸ್ಸು ಕಲ್ಪಿಸಿತು.

'ನಾನು ಏಕಾಕಿಯಾದೆ, ನಾನು ಒಬ್ಬನೇ ಆದೆ. ನನಗೆ ಯಾರೂ ಜತೆಯಿಲ್ಲ.' ಎಂದು ರೊಳ್ಳಿಯ ಮನಸ್ಸು ಕೂಗಿಕೊಂಡಿತು.

ಬಯಲ ಬಸಿರು ಇದಕ್ಕಿಂತ ಚೆನ್ನಾಗಿರುವ ಕಾದಂಬರಿ. ವ್ಯಕ್ತಿ ತನ್ನ ಅಂತರಂಗದ ಅರಳುವಿಕೆಗೆ ತುಡಿಯುತ್ತ ಧರ್ಮ, ತಂತ್ರ ಮತ್ತು ಯೋಗ ಎಂದೆಲ್ಲ ತಾತ್ವಿಕವಾಗಿ, ಮಾನಸಿಕವಾಗಿ, ದೈಹಿಕವಾಗಿ ತೊಳಲುತ್ತಲೇ ಸುತ್ತ ನಡೆಯುವ ಧರ್ಮ ಮತ್ತು ಶ್ರದ್ಧೆಯ ವ್ಯಾಪಾರವನ್ನು ಗಮನಿಸುತ್ತಲೇ ತನ್ನದೇ ಅರಿವಿಗೆ ವ್ಯತಿರಿಕ್ತವಾಗಿ ವ್ಯಕ್ತಿ ಒಂದು ಸಂಸ್ಥೆಯಾಗುವ, ಅದೇ ಒಂದು ಚಕ್ರವ್ಯೂಹವಾಗುವ ಮತ್ತು ಬಯಲಾವುದು ಆಲಯಯಾವುದು ಎಂಬ ಭ್ರಮೆಯಾಗುವಂಥ ಒಂದು ವಿಲಕ್ಷಣ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಚಿತ್ರಿಸುವ ಕಾದಂಬರಿ ಇದು. ವಿಶ್ವಶಾಂತಿಯ ವಿಕೃತ ಪ್ರಯತ್ನವನ್ನು, ಅಮೆರಿಕ-ರಷ್ಯಾ ಜಿದ್ದಾಜಿದ್ದಿಯನ್ನು, ಜಾಗತೀಕರಣವನ್ನು ತನ್ನೊಡಲಲ್ಲಿ ಇರಿಸಿಕೊಂಡೇ ಈ ಕಾದಂಬರಿ ಅಂತರಂಗ ಶುದ್ಧಿ, ಬಹಿರಂಗ ಶುದ್ಧಿಯ ಪ್ರಶ್ನೆಗಳನ್ನು ಎದುರಿಡುತ್ತದೆ. ಸ್ವಾಮಿ ಅನಿಕೇತಾನಂದ ಮತ್ತು ವಿನಯಾನಂದರ ಪಾತ್ರ ಸೃಷ್ಟಿ, ಅವುಗಳ ಪರಸ್ಪರ ಸಂಬಂಧ ಕೂಡ ತನ್ನ ವಿಲಕ್ಷಣ ಸ್ವರೂಪದಿಂದಲೇ ನೀಡುವ ವಿಡಂಬನೆ ಕುತೂಹಲಕರ. ಕಾದಂಬರಿ ತುಂಬ ಪುಟ್ಟದು, ನೂರು ಪುಟಗಳಷ್ಟು, ಆದರೆ ಇದರ ಹರಹು ಬಹುದೊಡ್ದದು.

ಇದೇ ಕಾದಂಬರಿಯನ್ನು ಕೇಶವ ಮಳಗಿಯವರ ಅಂಗದ ಧರೆ ಮತ್ತು ಪಾರ್ ಲಾಗರ್‌ಕ್ರಿಸ್ಟ್‌ರ ದ ಸಿಬಿಲ್ (ಪ್ರವಾದಿನಿ - ಅನುವಾದ ಡಿ ಆರ್ ಮಿರ್ಜಿ) ಜೊತೆಗೆ ಓದಬೇಕು. ಈ ಸಂಕೀರ್ಣವೂ, ಪರಸ್ಪರ ಸಂಬಂಧವಿದ್ದೂ ತೀರಾ ವೈರುಧ್ಯಮಯವೂ ಆಗಿರುವ ಕಾದಂಬರಿಗಳನ್ನು ಒಟ್ಟೊಟ್ಟಿಗೇ ಓದಿದಾಗ ಬದುಕಿನ ವಿರಾಟ್ ಸ್ವರೂಪವೊಂದು ಕಣ್ಣೆದುರು ನಿಲ್ಲುತ್ತದೆ. ಭಯವಾದರೂ ಅದನ್ನು ದಿಟ್ಟಿಸಿ ನೋಡುವುದರಲ್ಲಿ ಮೈ ಜುಮ್ಮೆನಿಸುವ ಅದ್ಭುತ ದರ್ಶನವಿದೆ!

Rating
No votes yet