ಅಮೃತಬಳ್ಳಿ ಕಷಾಯ - ಜಯಂತ ಕಾಯ್ಕಿಣಿ ಅವರ ಶ್ರೇಷ್ಠ ಕತೆ

ಅಮೃತಬಳ್ಳಿ ಕಷಾಯ - ಜಯಂತ ಕಾಯ್ಕಿಣಿ ಅವರ ಶ್ರೇಷ್ಠ ಕತೆ

ಊರು ಮುಂಬೈ ; ಒಬ್ಬ ಹೆಣ್ಣುಮಗಳು ; ಅವಳು ಮಾಡುವ ಅಮೃತಬಳ್ಳಿ ಕಷಾಯ ಹೆಸರುವಾಸಿ ; ಅದರ ರುಚಿಗೆ ಮರುಳಾಗಿ ಅನಾರೋಗ್ಯದ ಸುಳ್ಳುನೆವ ಹೇಳಿಯಾದರೂ ಕುಡಿದು ಹೋಗುವ ಜನ ; ಗಂಡ ಫೊಟೋ ಫ್ರೇಮ್ ಅಂಗಡಿಯನ್ನು ನಡೆಸುತ್ತಿದ್ದ; ಈಗ ಅವನು ಇಲ್ಲ ; ಮಗನು ಅದನ್ನು ನೋಡಿಕೊಂಡಿದ್ದಾನೆ. ಈ ಹೆಂಗಸು ಪರಿಚಯ ಇರಲಿ ಇಲ್ಲದಿರಲಿ ಇನ್ನೊಬ್ಬರ ತೊಂದರೆಗೆ ತನ್ನ ಸಂಸಾರವನ್ನು ಅಲಕ್ಷಿಸಿಯಾದರೂ ತನ್ನ ಕೈಮೀರಿ ಸಹಾಯ ಮಾಡುವವಳು.

ಫೋಟೋ ಫ್ರೇಮ್ ಅಂಗಡಿಯಲ್ಲಿ ಎಷ್ಟೋ ಜನ ಚೌಕಟ್ಟು ಹಾಕಲು ಹೇಳಿ ತಗೊಂಡು ಹೋಗದೇ ಇದ್ದಾರೆ . ಹೂವು ಹಣ್ಣು , ನಿಸರ್ಗದೃಶ್ಯ , ದೇವರುಗಳ ಚಿತ್ರವನ್ನು ಯಾರಾದರೂ ಅಗ್ಗದ ಬೆಲೆಗೆ ಕೊಂಡಾರು . ಆದರೆ ಕಟ್ಟು ಹಾಕಿದ ಮನುಷ್ಯರ ಚಿತ್ರಗಳನ್ನೇನು ಮಾಡಬೇಕು? ಸಹಾಯಕ್ಕಿರುವ ಹುಡುಗ ಆ ಚಿತ್ರಗಳನ್ನು ಹರಿದು ಹಾಕಿ ಚೌಕಟ್ಟನ್ನು ಬೇರೆ ಚಿತ್ರಗಳಿಗೆ ಬಳಸಬಹುದು ಎಂದರೆ ಈ ಮಗನಿಗೆ ಅದೇಕೋ ಸರಿ ಎನಿಸುವದಿಲ್ಲ . ಒಂದು ಮಾತು ತಾಯಿಯನ್ನು ಕೇಳಿದರಾಯಿತು ಎಂದು ಮನೆಗೆ ಬಂದಾಗ ಅವಳನ್ನು ಕೇಳುವನು . ’ಯಾರ್ಯಾರೋ ಕೆಲಸಕ್ಕೆ ಬರದ ದೇವರ ಚಿತ್ರ ಎಲ್ಲಾ ಇಟ್ಕೊಂಡಿದ್ದೀ ; ಈ ಮನುಷ್ಯರ ಚಿತ್ರಕ್ಕೆ ನಿನ್ನ ಅಂಗಡಿಯಲ್ಲಿ ಜಾಗ ಇಲ್ಲವೇ ? ’ ಎನ್ನುವಳು .

ಮಹಾನಗರದಲ್ಲಿ ಕೋಮು ಗಲಭೆಗಳು ನಡೆದಿವೆ . ಹೆಣಗಳು ಅಲ್ಲಲ್ಲಿ ಬೀಳುತ್ತಿವೆ . ಜನ ಸಂಶಯದಲ್ಲಿ ಇದ್ದಾರೆ . ತಮ್ಮ ಕೋಮು ಗೊತ್ತಾದೀತೆಂದು ಜನ ಒಬ್ಬರನ್ನೊಬ್ಬರು ಹೆಸರು ಹಿಡಿದು ಕರೆಯರು . ಸರಕಾರೀ ಅಸ್ಪತ್ರೆಗಳಲ್ಲಿಡಿ ಹೊಸ ಗಾಯಾಳುಗಳಿಗ ಜಾಗ ಇಲ್ಲ ; ಗಾಯಾಳುಗಳನ್ನು ಹುಡುಕಿಕೊಂಡೂ ಜನ ಅಲ್ಲಿ ಬರುತ್ತಿಲ್ಲ - ತಮ್ಮ ಹಿಂದು ಮುಂದು ಬಯಲಾದೀತೆಂದು ; ಅಲ್ಲಿ ಇರುವ ಜನ ಯಾರೆಂದು ನಂಬುವದು ಹೇಗೆ? ಸಂಬಂಧಿಗಳು ಕರೆದುಕೊಂಡು ಹೋಗಲಿ ಎಂದು ಸರಕಾರದವರು ಅನೌನ್ಸ್ ಮಾಡುತ್ತಿದ್ದಾರೆ .

ಫೋಟೋ ಅಂಗಡಿಯಲ್ಲಿನ ತೆಗೆದುಕೊಂಡು ಹೋಗದೆ ಇರುವ ಒಬ್ಬ ಮುದುಕ , ಒಬ್ಬ ಮುದುಕಿಯ ಫೋಟೋಗಳನ್ನು ನಾಟಕದಲ್ಲಿನ ಮನೆಯ ಕೋಣೆಯ ಗೋಡೆಯ ಮೇಲೆ ಹಾಕಲು ಒಬ್ಬ ನಾಟಕರಂಗದ ಗೆಳೆಯ ತಗೊಂಡು ಹೋಗಿದ್ದಾನೆ.
ಅವರೀಗ ಯಾವ ನಾಟಕದಲ್ಲಿ ಯಾರ ತಂದೆ ತಾಯಿ ಆಗಿದ್ದಾರೋ ಯಾರಿಗೆ ಗೊತ್ತು ?

ಈ ವೇಳೆಯಲ್ಲಿ ತರುಣನೊಬ್ಬ ಒಂದು ವಿಚಿತ್ರ ಕೋರಿಕೆ ಇಟ್ಟುಕೊಂಡು ಫೋಟೋ ಅಂಗಡಿಗಳಿಗೆ ಅಲೆಯುತ್ತಿದ್ದಾನೆ . ಅವನು ಅನಾಥ ; ತನಗೆ ಒಲಿದ ಹೆಣ್ಣನ್ನು ಮದುವೆ ಆಗಬೇಕು . ಅವಳಿಗೆ ಈತನ ಹಿಂಚು ಮುಂಚಿಲ್ಲದ ವಿಶಯ ಗೊತ್ತು. ಆದರೆ ಅವಳ ತಂದೆ ತಾಯಿ ಅದು ಹೇಗೆ ತನ್ನ ಮಗಳನ್ನು ’ ತಂದೆ ತಾಯಿ ಇಲ್ಲದ ಮನುಷ್ಯನಿಗೆ ಮಗಳನ್ನು ಹೇಗೆ ಮದುವೆ ಮಾಡಿ ಕೊಟ್ಟಾರು ? ’ ತನ್ನ ತಂದೆ ತಾಯಿ ಎಂದು ತೋರಿಸಲು ಯಾರಾದರೂ ವಯಸ್ಸಾದವರ ಫೋಟೋಗಳು ಬೇಕಿದೆ. ಕೊನೇ ಪಕ್ಷ ಮುದುಕನ ಫೋಟೋ ಆದರೂ ಬೇಕು ... ’ತಾಯಿ ಯಾರಿಗೇ ಆದರೂ ಇದ್ದೇ ಇರುತ್ತಾಳೆ . ಅದನ್ನು ಪ್ರೂವ್ ಮಾಡುವ ಅಗತ್ಯ ಇಲ್ಲ ; ಅದರೆ ತಂದೆ ಅಂತ ಒಬ್ಬ ಇದ್ದ ಅಂತ ತೋರಿಸಲು ಒಂದು ಫೋಟೋ ಬೇಕೇ ಬೇಕು . ಹೇಗಾದರೂ ಒಂದು ಕೊಡಿ ; ಏನೇ ಬೆಲೆ ಆದರೂ ಕೊಡುತ್ತೇನೆ. ನನ್ನ ಜೀವನವೇ ನಿಮ್ಮ ಕೈಲಿದೆ ’ ಎಂದು ಅಂಗಲಾಚುತ್ತಾನೆ.
ಇದ್ದದ್ದನ್ನು ನಿನ್ನೆ ತಾನೇ ಗೆಳೆಯನಿಗೆ ಕೊಟ್ಟೆ ; ನಿನ್ನೆ ಆದರೂ ಬಂದಿದ್ರೆ ಸಿಗ್ತಿತ್ತು ಅಂತ ಹೇಳಿ .. ಏನೂ ಚಿಂತೆ ಮಾಡಬೇಡ . ಒಂದು ದಿನ ಟೈಮ್ ಕೊಡು ; ಏನಾದರೂ ಮಾಡುವ ಅಂತ ಹೇಳಿ ಆಶ್ವಾಸನೆ ಕೊಟ್ಟು ಕಳಿಸುತ್ತಾನೆ.
ಪರಿಚಯದ ಇನ್ನೊಂದು ಅಂಗಡಿಗೆ ಹೋಗಿ ಕೇಳಿದರೆ ’ ಮೊದಲೇ ಈ ಊರಲ್ಲಿ ಏನೆಲ್ಲ ನಡೆಯುತ್ತಿದೆ ; ಇಂಥ ಲಫಡಾ ಎಲ್ಲ ನಮಗೆ ಯಾಕೆ ಬೇಕು ? ನೀನು ಇಂಥದ್ದರಲ್ಲೆಲ್ಲ ಸಿಕ್ಕಿ
ಹಾಕ್ಕೊಬೇಡ’ ಎಂದು ಆ ಅಂಗಡಿಯವ ಹೇಳುತ್ತಾನೆ..

ನಾಳೆಯವರೆಗೆ ಏನಾದರೂ ವಿಚಾರ ಮಾಡಿದರಾಯಿತು . ಎಂದು ಇವನು ಮನೆಗೆ ಬಂದರೆ ತಾಯಿ ಪ್ಲ್ಯಾಸ್ಟಿಕ್ ಬ್ಯಾಗೊಂದನ್ನು ಹಿಡಿದುಕೊಂಡು ಹೊರಟು ನಿಂತಿದ್ದಾಳೆ .
ಅಲ್ಲಿ ಒಬ್ಬ ಹುಡುಗ ಮಾತಿಲ್ಲದೆ ಮಲಗಿದ್ದಾನೆ . ಅವನ ಹೆಸರು , ವಿಳಾಸ , ಜಾತಿ ಹೇಳುತ್ತಿಲ್ಲ ; ಅವನನ್ನು ನೋಡಲೂ ಯಾರೂ ಬಂದಿಲ್ಲ . ಅವನ ಜತೆಗಿರಲು ಈ ಮಹಾತಾಯಿ ಮಗನಿಗೆ ಅಡಿಗೆ ಮಾಡಿಟ್ಟು ಆ ಹುಡುಗನಿಗೆ ಮಗನು ಬಳಸದಿರುವ ಬಟ್ಟೆ ಬರೆ , ಊಟ ತೆಗೆದುಕೊಂಡು ಹೋಗುತ್ತಿದ್ದಾಳೆ . ಹೋಗುವಾಗ ’ಯಾರಾದರೂ ಬಟ್ಟೆ ಬರೆ ಕೇಳಿದರೆ ನಿಮ್ಮ ಅಪ್ಪನ ಮದುವೆ ಕೋಟನ್ನು ಕೊಟ್ಟುಬಿಡು . ಈ ಚಳಿಗಾಲದಲ್ಲಿ ಯಾರಿಗಾದರೂ ಬೆಚ್ಚಗೆ ಆದೀತು ; ಇಲ್ಲಿ ಸುಮ್ಮನೆ ಟ್ರಂಕಿನಲ್ಲಿ ಕೊಳೆಯುತ್ತಿದೆ’ ಎಂದು ಹೇಳುತ್ತಾಳೆ .

ರಾತ್ರಿ ವಿಚಾರ ಮಾಡಿ ಬೆಳಗಾಗುವದನ್ನೇ ಕಾದು ಅಂಗಡಿಗೆ ಧಾವಿಸುತ್ತಾನೆ . ಅಲ್ಲಿ ಆ ಹುಡುಗ ಅಂಗಡಿ ತೆರೆಯುವದನ್ನೇ ಕಾದುಕೊಂಡಿದ್ದಾನೆ... ಇವನು ಅಂಗಡಿ ತೆಗೆದವನೇ , ಸ್ಟೂಲನ್ನು ಇಟ್ಟುಕೊಂಡು ಅದನ್ನು ಹತ್ತಿ
....
....
....
....
ಅಲ್ಲಿರೋ ಅಪ್ಪನ ಫೋಟೋವನ್ನು ತೆಗೆದು ಕೊಟ್ಟು ಕಳಿಸಿಬಿಡುತ್ತಾನೆ .

----- ಇದು ಜಯಂತ ಕಾಯ್ಕಿಣಿಯವರ ಒಂದು ಅದ್ಭುತ ಕತೆ ... ಇಂಥ ಎಷ್ಟೋ ಕತೆಗಳನ್ನು ಬರೆದಿದ್ದಾರೆ ... ಹೀಗೆಲ್ಲ ಸಂಗ್ರಹವಾಗಿ ಹೇಳಲೂ ಬರುವದಿಲ್ಲ . ನೀವೇ ಓದಬೇಕು ....

Rating
No votes yet