'ಕವಿರಾಜಮಾರ್ಗ'ದಿಂದ ನಾವು ಕಲಿಯಬೇಕಾದುದೇನು?

'ಕವಿರಾಜಮಾರ್ಗ'ದಿಂದ ನಾವು ಕಲಿಯಬೇಕಾದುದೇನು?

ಬರಹ

'ಕವಿರಾಜಮಾರ್ಗ'ದಿಂದ ನಾವು ಕಲಿಯಬೇಕಾದುದೇನು?

ಕೆ.ವಿ.ಸುಬ್ಬಣ್ಣನವರ 'ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು'ಎಂಬ ಹೊತ್ತಿಗೆ ಓದುತ್ತಿದ್ದಾಗ ಹಲವಾರು ಏಡುಗಳ ಹಿಂದೆ ಬರೆದಿರುವ ಈ ಕಬ್ಬ ಇಂದಿಗೂ ಹೊಂದುವಂತುಹುದು ಮತ್ತು ಅಲ್ಲಿ ತಿಳಿಸಿರುವ ವಿಚಾರಗಳು ಎಶ್ಟು ಮೇಲ್ಮಟ್ಟದ್ದು ಎಂಬುದು ಅರಿವಾಯಿತು.

ಕವಿರಾಜಮಾರ್ಗದ ತುಂಬ ಹೆಸರುವಾಸಿಯಾದ ಸಾಲು:-
'ಕಾವೇರಿಯಿಂದಂ-ಆ-ಗೋದಾವರಿವರಮ್-ಇರ್ದ-ನಾಡು-ಅದು-ಆ-ಕನ್ನಡದೊಳ್-ಭಾವಿಸಿದ-ಜನಪದಂ;
(ಇದು)ವಸುಧಾ-ವಲಯ-ವಿಲೀನ,ವಿಶದ,ವಿಶಯ-ವಿಶೇಶಂ;'

ಇಲ್ಲಿ ನಾಡಿನ ಎಲ್ಲೆಯನ್ನು ಗುರುತಿಸಿ ನುಡಿಯ(ಕನ್ನಡ) ಹೆಸರನ್ನು ನಾಡಿಗೂ ಮತ್ತು ಜನಪದಕ್ಕೂ ಕೊಟ್ಟಿದ್ದಾರೆ. ಇಲ್ಲಿ 'ಭಾವಿಸಿದ' ಬದಲು 'ಭವಿಸಿದ' ಎಂದು ಬರಬೇಕಿತ್ತು ಆದರೆ ಚಂದಸ್ಸಿಗೋಸ್ಕರ ಅದನ್ನು ಮಾರ್ಪಾಡು ಮಾಡಿ ಬರೆಯಲಾಗಿದೆ ಎಂದು ಹೇಳುವವರಿದ್ದಾರೆ. ಆಗ ಹೀಗೆ ಅರಿತಯ್ಸಬಹುದು:-
-> ಕನ್ನಡವೆಂಬ ನಾಡಿನಲ್ಲಿ,ನುಡಿಯಲ್ಲಿ ಕನ್ನಡವೆಂಬ ಜನಪದವು(ಬುಡಕಟ್ಟು,ಸಂಸ್ಕ್ರುತಿ,ನಡಾವಳಿ) ಹುಟ್ಟಿ ಅದು ಪ್ರಪಂಚದಲ್ಲಿ ಸೇರಿಕೊಂಡಿದ್ದರೂ ತನ್ನ ನಿಬ್ಬರ/ವಿಶೇಶವನ್ನು ದಿನವೂ ತಿಳಿಯಪಡಿಸುತ್ತಿದೆ.
-> ಕನ್ನಡವೆಂಬ ನಾಡು ನುಡಿಬಲ,ಜನಪದಬಲ ; ಹೀಗೆ ತನ್ನ ಈ ಮೂರು ಬಲಗಳಿಂದ ವಿಶೇಶತೆಯನ್ನು ಪಡೆದು ಜಗತ್ತಿಗೆ ತಿಳಿಸುತ್ತಿದೆ.

ಈಗ ಕೌಟಿಲ್ಯನ 'ಅರ್ಥಶಾಸ್ತ್ರ'ಕ್ಕೆ ಬರೋಣ. ಅದರ ಆರನೇ ಅಧಿಕರಣ(ಮಂಡಲಯೋನಿ)ದಲ್ಲಿರುವ ರಾಜ್ಯದ ಶಕ್ತಿಗಳಾವುವು ಎಂಬುದನ್ನು ಕೌಟಿಲ್ಯ ಹೀಗೆ ಹೇಳಿದ್ದಾನೆ.
"ಬಲಂಶಕ್ತಿಃ...ಶಕ್ತಿಸ್ತ್ರಿವಿಧಾ- ಙ್ಞಾನಬಲಂ ಮಂತ್ರಶಕ್ತಿಃ ಕೋಶದಂಡಬಲಂ ಪ್ರಭುಶಕ್ತಿಃ -ವಿಕ್ರಮಬಲಮುತ್ಸಾಹ ಶಕ್ತಿಃ'.
ಇಲ್ಲಿ ಅವನು ಹೇಳುವಂತೆ 'ರಾಜ್ಯ'ವೆಂಬುದು 'ಮಂತ್ರಿ-ರಾಜ-ವೀರ' ಶಕ್ತಿಗಳ ಕೂಟ. ಇಲ್ಲಿ ಗಮನಿಸಬೇಕಾದುದು ಕೌಟಿಲ್ಯನು ಸಾಮಾನ್ಯ ಜನಬಲದ ಬಗ್ಗೆ ಅತವ ಸಂಸ್ಕ್ರುತಿಯ ಬಗ್ಗೆ ಮಾತಾಡಿಲ್ಲ. ಅಂದರೆ ಇಂದಿಗೂ ಈ ಮೇಲಿನ ಸೂತ್ರ ಒಪ್ಪುತ್ತದೆ ಎಂದು ಹೇಳಲಾಗದು ಮತ್ತು ಇದು ಅಶ್ಟು 'ಡೆಮಕ್ರಾಟಿಕ್' ನಿಲುವು ಎಂಬುದು ಹೇಳಲಾಗುವುದಿಲ್ಲ.

ಈಗ ಮತ್ತೆ 'ಕವಿರಾಜಮಾರ್ಗ'ಕ್ಕೆ ಮರಳಿ ಹೋಗೋಣ.

ಕವಿರಾಜಮಾರ್ಗವು ಒಂದು ರಾಜ್ಯ/ನಾಡು ಕಟ್ಟಲು ತನ್ನದೇ(ತನಗೆ ಗೊತ್ತೋ/ಗೊತ್ತಿಲ್ಲದೆಯೋ) ಒಂದು ಸೂತ್ರವನ್ನು ಕಂಡುಕೊಂಡಿದೆ. ಇಲ್ಲಿ ಕವಿರಾಜಮಾರ್ಗ ಸಕ್ಕದದ ದಟ್ಟವಾದ ನೆರಳಿದ್ದ ಹೊತ್ತಿನಲ್ಲೂ ತನ್ನ ಕನ್ನಡತನದ ಮನಸ್ಸನ್ನು ಚನ್ನಾಗಿ ಬಳಸಿಕೊಂಡಿದೆ ಎಂದು ಅರಿವಾದಾಗ ತುಂಬ ನಲಿವಾಗುತ್ತದೆ.
ಕನ್ನಡವೆಂಬ ನಾಡಿರುವುದೇ (ವಿಶೇಶತೆಯನ್ನು ಪಡೆದಿರುವುದೇ) ಕನ್ನಡವೆಂಬ ನುಡಿಯಿಂದ, ಕನ್ನಡವೆಂಬ ಜನರಿಂದ/ಸಂಸ್ಕ್ರುತಿಯಿಂದ ಮತ್ತು ಕನ್ನಡದ ಅರಸನಾದ ಅಮೋಗವರ್ಶನ ಮುಂದಾಳುತನದ ಬಲದಿಂದ ಹೀಗೆ ನುಡಿ-ಜನ-ಮುಂದಾಳುತನ , ಈ ಮೂರು ಬಲಗಳ ಕೂಟವೇ 'ಕನ್ನಡ'ವೆಂಬ ನಾಡು. ಇಲ್ಲಿ ಅರಸಬಲ/ಮುಂದಾಳುತನ ಯಾಕೆ ಬಂದಿದೆ ಅಂದರೆ ಸಿರಿವಿಜಯನು ಕವಿರಾಜಮಾರ್ಗದಲ್ಲಿ ಎಲ್ಲದಕ್ಕೊ ಮೊದಲು(ದೇವರಿಗಳಿಗೂ ಮೊದಲು) ಅಮೋಗವರುಶನನ್ನು ನೆನೆದಿದ್ದಾನೆ(ಸ್ತುತಿಸಿದ್ದಾನೆ).

ಇಲ್ಲಿ ಗಮನಿಸಬೇಕಾದ ಅಂಶಗಳೇನೆಂದರೆ
--> ಅಮೋಗವರ್ಶನಿಗೂ ಮೊದಲು ಅವನ ತಂದೆ ಗೋವಿಂದರಸ ನಾಡಿನ ಗಡಿಯನ್ನು ಬಡಗಿನ 'ಗಂಗಾ'ಹೊಳೆಯವರೆಗೂ ತೆಗೆದುಕೊಂಡುಹೋಗಿದ್ದನಂತೆ.ಆದರೆ ಅಮೋಗವರುಶನ ಕಾಲದಲ್ಲಿ ಅವೆಲ್ಲ ದಂಗೆಯಿಂದ ಕಳೆದುಕೊಳ್ಳಬೇಕಾಯಿತು. ಆಗ ಅಮೋಗವರುಶನಿಗೆ ದಿಟವಾದ ಕನ್ನಡ ನಾಡು ಎಲ್ಲಿಂದ ಎಲ್ಲಿಯವರೆಗೆ ಇದೆ,ಬರೀ ಅಲ್ಲಿಯವರೆಗೆ ಆಡಳಿತ ನಡೆಸೋಣವೆಂದು ತೀರ್ಮಾನಿಸಿರಬೇಕು. ಆಗ ಅವನಿಗೆ ಈ ಮೇಲಿನ ಸೂತ್ರದ ಅರಿವಾಗಿರಬೇಕು ಎಂದು ಎಣಿಸಬಹುದು.
--> ಕವಿರಾಜಮಾರ್ಗವು 'ಅರ್ಥಶಾಸ್ತ್ರ'ಕ್ಕಿಂತ ಹೆಚ್ಚು ಡೆಮಾಕ್ರಾಟಿಕ್ ನಿಲುವನ್ನು ಹೊಂದಿದೆ ಎಂದು ಹೇಳಬಹುದು. ಜನಬಲವಿಲ್ಲದೆ, ನುಡಿಬಲವಿಲ್ಲದೆ ನಾಡ ಕಟ್ಟಲು ಆಗುವುದಿಲ್ಲ ಎಂಬ ನಿಲುವು ದಿಟವಾಗಲು ಮೆಚ್ಚತಕ್ಕದ್ದು ಮತ್ತು ಇಂದಿಗೂ ಹೊಂದುವಂತಹುದು.

ಇದನ್ನ ಓದಿದ ಮೇಲೆ ಇವತ್ತಿಗೂ ನಮ್ಮ ಕನ್ನಡನಾಡಿಗೆ ಅಮೋಗವರುಶನಂತ ಮುಂದಾಳು ಮತ್ತು ಸಿರಿವಿಜಯನಂತ ಬರಹಗಾರರು ಬೇಕಾಗಿದ್ದರೆ ಎಂಬ ಅನಿಸು ನಿಮ್ಮಲ್ಲಿ ಮೂಡಬಹುದಲ್ಲವೆ?

[ಮೇಲೆ ತಿಳಿಸಿದ ವಿಚಾರಗಳು ಕೆ.ವಿ.ಸುಬ್ಬಣ್ಣನವರದು ಮತ್ತು ಹೊತ್ತಿಗೆ ಓದಿದ ಮೇಲೆ ನನಗೆ ಅನಿಸಿದ ಕೆಲವು ಅಂಶಗಳು ಸೇರಿಕೊಂಡಿವೆ]

ಇನ್ನು ಕೆಲವು ಹೊತ್ತಿಗೆಗಳು

ಮುಳಿಯ ತಿಮ್ಮಪ್ಪಯ್ಯ - ಕವಿರಾಜಮಾರ್ಗ ವಿವೇಕ -ಭಾಗ ೧