ಬೆಂಗಳೂರಿಗೆ ವಿದಾಯ
೩/೧೧/೦೭ ರಾತ್ರಿ ೧೦ ಗಂಟೆ.
ಬೆಂಗಳೂರು ಏರ್ಪೋರ್ಟಿನ ವಿಧಿ ವಿಧಾನಗಳನ್ನೆಲ್ಲಾ ಮುಗಿಸಿ ಕೂತು ನಿಟ್ಟುಸಿರುಬಿಡುತ್ತೇನೆ. ಬರುತ್ತಿದ್ದಂತೆಯೇ ಹೊರಟೂ ಬಿಡುತ್ತಿದ್ದೇನೆ. ಬೆಂಗಳೂರನ್ನು ಬಿಡುತ್ತೇನೆ.
ಬೆಂಗಳೂರಿನ ರಸ್ತೆಯ ಧೂಳು, ಹಳ್ಳಗಳು, ನುಗ್ಗುವ ವಾಹನಗಳು, ಕಿವಿತಿವಿಯುವ ಹಾರ್ನ್ಗಳು, ಜನಜಂಗುಳಿ, ಕೂಗಾಟ, ಕಿರುಚಾಟ, ಉಗಿದಾಟ ಎಲ್ಲವನ್ನು ಬಿಟ್ಟು ನೆಗೆಯುತ್ತಿದ್ದೇನೆ. ವಿದಾಯದ ಬೇಸರ ಮತ್ತು ಎದೆಭಾರ.
ಹೌದು, ಬೆಂಗಳೂರನ್ನು ಬಿಡುತ್ತೇನೆ. ಆದರೆ ನನಗೆ ಗೊತ್ತು ಈ ಬೆಂಗಳೂರು, ನನ್ನನ್ನು ಬಿಡುವುದಿಲ್ಲ. ಒಂದೆರಡು ಮುಕ್ತಾಯ ಕಾಣದ ವ್ಯವಹಾರಗಳು. ಅದರಲ್ಲಿ ಕೆಲವು ಕಾಡುತ್ತದೆ, ಇನ್ನು ಕೆಲವು ಮರೆಯುತ್ತದೆ. ಇದು ಕೂಡ ಎಲ್ಲ ಸಲದ ಹಾಗೇ, ನನಗೆ ಗೊತ್ತು. ಕಾಡುವುದು ದಟ್ಟವಾಗುತ್ತದೆ, ಮರೆತ್ತದ್ದು ಇನ್ನೇನೋ ರೂಪದಲ್ಲಿ ಮತ್ತೆ ಅವತರಿಸುತ್ತದೆ. ಹೌದು ಬೆಂಗಳೂರು ನನ್ನನ್ನು ಬಿಡುವುದಿಲ್ಲ.
ಭೇಟಿಯಾದವರೆಲ್ಲರ ನಲ್ಮೆ, ನಗು, ಉತ್ಸಾಹದ ತುಣುಕುಗಳನ್ನು ಹೊತ್ತು ಹಿಂತಿರುಗುವುದು ಇದೆಯಲ್ಲಾ ಅದು ಸುಖ ಮತ್ತು ಅಸುಖ; ಎರಡನ್ನೂ ಸಮವಾಗಿ ಹೊತ್ತಿಸುತ್ತದೆ. ಮುಂದಿನ ಹತ್ತಾರು ಗಂಟೆಯ ಪ್ರಯಾಣವನ್ನು ಸಹನೀಯ ಮಾಡುತ್ತದೆ.
Comments
ಉ: ಬೆಂಗಳೂರಿಗೆ ವಿದಾಯ