ಒಂದು ದಾರುಣ ಘಟನೆ - ಮನದಾಳದಿಂದ

ಒಂದು ದಾರುಣ ಘಟನೆ - ಮನದಾಳದಿಂದ

ಬರಹ

ಈ ಘಟನೆ ನಡೆದದ್ದು ೧೯೯೩ರಲ್ಲಿ. ಆಗ ತಾನೆ ಮಹಿಳೆಯರಿಗಾಗಿಯೇ ಒಂದು ವಿಶೇಷ ಲೋಕಲ್ ಟ್ರೈನ್ ಅನ್ನು ಪಶ್ಚಿಮ ರೈಲ್ವೇಯವರು ಪ್ರಾರಂಭಿಸಿದ್ದರು. ಆ ಲೋಕಲ್ ಬೆಳಗ್ಗೆ ಕಛೇರಿಗಳ ವೇಳೆಗೆ ಮತ್ತು ಸಂಜೆ ಕಛೇರಿಗಳು ಮುಗಿಯುವ ವೇಳೆಗೆ ಅನುಕೂಲವಾಗುವಂತೆ ಓಡುತ್ತಿತ್ತು. ಅದು ಬೊರಿವಿಲಿ ಮತ್ತು ಚರ್ಚ್‍ಗೇಟ್ ಮಧ್ಯೆ ಓಡಾಡುತ್ತಿತ್ತು.

ಅಂದು ಮಳೆಗಾಲದ ಒಂದು ದಿನ. ಬೆಳಗ್ಗೆಯಿಂದಲೇ ಜಿಟಿ ಜಿಟಿ ಮಳೆ ಬೀಳುತ್ತಿತ್ತು. ಎಂಥಹ ಜೋರುಮಳೆಗೂ ಹೆದರದ ಜನರು ತಮ್ಮ ತಮ್ಮ ಕಾರ್ಯಸ್ಥಾನಗಳಿಗೆ ತೆರಳಿದ್ದರು. ಸಂಜೆ ವಾಪಸ್ಸಾಗುವಾಗ ಮಳೆ ಸ್ವಲ್ಪ ಜಾಸ್ತಿಯಾಗಿತ್ತು. ಬಹುಪಾಲು ಜನರು ಬೇಗ ತಮ್ಮ ತಮ್ಮ ಮನೆಗಳನ್ನು ಸೇರುವ ಹವಣಿಕೆಯಲ್ಲಿದ್ದರು. ಹೆಂಗಸರು ಬೇಗನೇ ಚರ್ಚ್‍ಗೇಟ್ ಸ್ಟೇಷನ್ನಿಗೆ ಬಂದರೂ ತಮಗೇ ನಿರ್ಧರಿಸಿದ ವಿಶೇಷ ಲೋಕಲ್‍ಗಾಗಿ ಕಾಯ್ದರು. ಆ ಲೋಕಲ್ ತನ್ನ ಸಮಯಕ್ಕೆ ಸರಿಯಾಗಿ ಅಂದರೆ ಸಂಜೆಯ ೬.೧೩ಕ್ಕೆ ಚರ್ಚ್‍ಗೇಟ್ ಸ್ಟೇಷನ್ನಿನಿಂದ ಹೊರಟಿತು. ವಿಪರೀತ ಮೋಡ ಕವಿದ ವಾತಾವರಣವಿದ್ದುದರಿಂದ ಮತ್ತು ಗುಡುಗು ಸಿಡಿಲುಗಳ ಭರಾಟೆಯೊಡನೆ ಜೋರಾದ ಮಳೆಯಿಂದಾಗಿ ಈ ಲೋಕಲ್ ಟ್ರೈನ್ ಸ್ವಲ್ಪ ನಿಧಾನವಾಗಿಯೇ ಹೋಗುತ್ತಿತ್ತು. ಈ ಮಧ್ಯೆ ಹಳಿಗಳ ಮೇಲೆ ನೀರು ನಿಂತು ಲೋಕಲ್ ಟ್ರೈನ್‍ಗಳು ಮುಂದೆ ಹೋಗ್ತಿಲ್ಲ ಎಂಬ ಪುಕಾರೂ ಹುಟ್ಟಿಕೊಂಡಿತ್ತು. ಸಾಮಾನ್ಯವಾಗಿ ಹೆಂಗಸರು ಇಂತಹ ಪುಕಾರುಗಳಿಗೆ ಬಹಳ ಬೇಗ ಮನಸೋಲುವರು. ಅವರಿಗಾಗ ಮನೆಯಲ್ಲಿ ತಮಗಾಗಿ ಕಾಯುತ್ತಿರುವ ಮಕ್ಕಳು ಮತ್ತು ವೃದ್ಧರ ನೆನಪಾಗಿ ಮನದಲ್ಲಿ ತಳಮಳ ಉಂಟಾಗುವುದು. ಇದು ಸಹಜ ಪ್ರವೃತ್ತಿ.

ಈ ನಮ್ಮ ಕರಾಳ ಲೋಕಲ್ ನಿಧಾನವಾಗಿಯೇ ಸಾಗುತ್ತಿತ್ತು. ಮುಂಬೈ ಲೋಕಲ್ ಟ್ರೈನ್‍ಗಳ ಬಗೆಗಿನ ಒಂದು ಹಳೆಯ ಜೋಕು ಏನೆಂದರೆ, ಸ್ಲೋ ಟ್ರೈನ್‍ಗಳು ಎಲ್ಲ ಸ್ಟೇಷನ್‍ಗಳಲ್ಲಿ ನಿಂತರೆ, ಫಾಸ್ಟ್ ಟ್ರೈನ್‍ಗಳು ಎಲ್ಲ ಸ್ಟೇಷನ್‍ಗಳ ಮಧ್ಯೆಯಲ್ಲಿ ನಿಲ್ಲುತ್ತವೆ. ಅದೇನೇ ಇರಲಿ ಈ ದಿನ ಸಿಗ್ನಲ್‍ಗಳೂ ಸ್ವಲ್ಪ ತೊಂದರೆ ಕೊಟ್ಟಿದ್ದರಿಂದ ಟ್ರೈನ್‍ಗಳು ಸ್ವಲ್ಪ ನಿಧಾನಕ್ಕೆ ಹೋಗುತ್ತಿದ್ದವು.

ಈ ಮಹಿಳಾ ವಿಶೇಷ ಲೋಕಲ್ ಕಾಂದಿವಿಲಿ ಸ್ಟೇಷನ್ ಬಿಟ್ಟು ಬೊರಿವಿಲಿಗೆ ಹೋಗುತ್ತಿತ್ತು. ಕಾಂದಿವಿಲಿ ಕಡೆಯ ಸ್ಟೇಷನ್ ಆದ ಬೊರಿವಿಲಿಗಿಂತ ಮುಂಚೆ ಬರುವ ಸ್ಟೇಷನ್. ಹಾಗಾಗಿ ಜನಸಂದಣಿ ಬಹಳ ಕಡಿಮೆ ಆಗಿದ್ದಿತು. ಕಾಂದಿವಿಲಿ ರೈಲ್ವೇ ಯಾರ್ಡ್ ದಾಟಿ ಸ್ವಲ್ಪ ಮುಂದೆ ಹೋಗುತ್ತಿದ್ದಾಗ ಸಿಗ್ನಲ್ ಸಿಕ್ಕಿರಲಿಲ್ಲ. ಅದರ ಬಗ್ಗೆ ಪ್ರಯಾಣಿಕರಿಗೆ ಗೊತ್ತಿರಲಿಲ್ಲ. ತಕ್ಷಣ ಟ್ರೈನ್ ನಿಂತಿದ್ದು ಅವರಿಗೆ ಅನುಮಾನಕ್ಕಾಸ್ಪದ ಕೊಟ್ಟಿತ್ತು. ಅದೇ ಸಮಯಕ್ಕೆ ಒಂದು ಬೋಗಿಯ ಕೆಳಗಿನಿಂದ ಹೊಗೆ ಬರಹತ್ತಿತ್ತು. ಆ ಬೋಗಿಯಲ್ಲಿರುವವರೆಲ್ಲರೂ ಹೆಂಗಸರೇ. ಅವರೆಲ್ಲರ ಯೋಚನೆ, ಕೆಲವು ದಿನಗಳ ( ಆಗಸ್ಟ್ ೨೫ ) ಹಿಂದೆಯಷ್ಟೇ ಮುಂಬಯಿಯಲ್ಲಿ ೧೩ ಕಡೆ ಆಗಿದ್ದ ಬಾಂಬ್ ಪ್ರಕರಣಗಳು ಮತ್ತು ಕೆಲ ದಿನಗಳ ಹಿಂದೆ ಮಲಾಡ್ ( ಕಾಂದಿವಿಲಿಗಿಂತ ಮೊದಲು ಬರುವ ಸ್ಟೇಷನ್ ) ಸ್ಟೇಷನ್‍ನಲ್ಲಿ ಲೋಕಲ್ ಟ್ರೈನ್‍ನಲ್ಲಿ ಸಂಭವಿಸಿದ್ದ ಬಾಂಬ್ ಪ್ರಕರಣಗಳ ಕಡೆ ಎಳೆದೊಯ್ದಿತ್ತು. ಅದೇ ವೇಳೆಗೆ ಯಾರೋ ಒಬ್ಬರು ಬೆಂಕಿ ಬೆಂಕಿ ಎಂದು ಕೂಗಿದ್ದರು. ಸರಿ ಇದ್ದವರೆಲ್ಲರೂ ಬಾಗಿಲಿನ ಕಡೆ ಓಡಿದರು. ಹೊರಗಡೆಯಲ್ಲಿ ಪೂರ್ಣವಾಗಿ ಕತ್ತಲಾಗಿದ್ದಿತು. ಕೆಲವು ಹೆಣ್ಣು ಮಕ್ಕಳು ಟ್ರೈನಿನ ಎಡಭಾಗದ ಕಡೆಗೆ ಹಾರಿದರು. ಅವರುಗಳು ಅಲ್ಲಿಯೇ ಪಕ್ಕದಲ್ಲಿದ್ದ ಹೊಂಡದಲ್ಲಿ ಬಿದ್ದರು. ಹಾಗೂ ಅಲ್ಲಿ ಬಹಳವಾಗಿ ಕೆಸರಿದ್ದಿತು. ತಕ್ಷಣವೇ ಅವರುಗಳು 'ಇಲ್ಲಿ ಗಟ್ಟಿ ನೆಲವಿಲ್ಲ' ಎಂದು ಕೂಗಿದ್ದರು. ಇದರಿಂದ ಹೆದರಿದ ಇನ್ನಿತರರು ಬಲಭಾಗಕ್ಕೆ ಹಾರಿದರು. ಬಲಭಾಗದಲ್ಲಿ ವಿರಾರ್-ಬೋರಿವಿಲಿ ಕಡೆಯಿಂದ ಬರುವ ಫಾಸ್ಟ್ ಟ್ರ್‍ಐನ್‍ಗಳ ಹಳಿಯಿದ್ದಿತು. ಆ ಕಡೆ ನೀರು ನಿಂತಿರದಿದ್ದ ಕಾರಣ ಆ ಕಡೆಗೆ ಕೆಲವರು ಹಾರಿದರು. ಅದನ್ನು ನೋಡಿ ಮಿಕ್ಕೆಲ್ಲರೂ ಹಾರಲನುವಾದರು. ಆದರೆ ಎದುರಿನಿಂದ ರಭಸವಾಗಿ ಬರುತ್ತಿದ್ದ ದೈತ್ಯ ಲೋಕಲ್ ಟ್ರೈನ್‍ ಅವರ ಕಣ್ಣಿಗೆ ಬೀಳಲಿಲ್ಲ. ಕೆಲವೇ ಸೆಕೆಂಡುಗಳಲ್ಲಿ ಧಡ್ ಧಡ್ ಎಂಬ ಸದ್ದು. ಇದನ್ನು ಗಮನಿಸಿದ್ದ ಆ ಲೋಕಲ್ ಡ್ರೈವರ್ ತಕ್ಷಣ ಬ್ರೇಕ್ ಹಾಕಿದ್ದ. ಅಷ್ಟು ರಭಸದಿಂದ ಬರುತ್ತಿದ್ದ ಗಾಡಿ ತಕ್ಷಣ ಅಲ್ಲಿಯೇ ನಿಲ್ಲೋಕ್ಕಾಗತ್ಯೇ? ಆ ಫಾಸ್ಟ್ ಲೋಕಲ್ ಕಾಂದಿವಿಲಿ ಸ್ಟೇಷನ್ ಹತ್ತಿರ ನಿಂತಿತು. ಕೆಲವರ ಶವಗಳು ಚಕ್ರಕ್ಕೆ ಸಿಕ್ಕಿ ಅಷ್ಟು ದೂರ ಹೋಗಿ ಬಿದ್ದಿದ್ದಿತ್ತು. ಇನ್ನು ಕೆಲವರು ರಭಸದಿಂದ ಬಂದ ಗಾಡಿಗೆ ಢಿಕ್ಕಿ ಹೊಡೆದು, ಮೈಯಿನ ಮಾಂಸದ ತುಣುಕುಗಳು ಗಾಡಿಯ ಮುಂಭಾಗದಲ್ಲಿ ಅಂಟಿ ಕೊಂಡಿತ್ತು. ಕೆಲವರ ಶವಗಳು ಗಾಡಿಯ ಕೆಳಗೆ. ನೊಡಲಾರದಂತಹ ದಾರುಣ ದೃಶ್ಯವದು. ತಕ್ಷಣ ಸುತ್ತ ಮುತ್ತಲಿನಿದ್ದವರು, ಹತ್ತಿರದ ಸ್ಟೇಷನ್ನಿನಲ್ಲಿದ್ದ ಜನರು, ಹತ್ತಿರದ ಆಸ್ಪತ್ರೆಯ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದರು. ಗಾಯಾಳುಗಳನ್ನು ತಕ್ಷಣ ಆಂಬುಲೆನ್ಸ್‍ಗಳಲ್ಲಿ ಹತ್ತಿರದಲ್ಲಿ ಇದ್ದ ಎಲ್ಲ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಕಳುಹಿಸಿದರು. ಶವಗಳನ್ನು ಹತ್ತಿರದ ಬೊರಿವಿಲಿ ಶವಾಗಾರಕ್ಕೆ ರವಾನಿಸಿದರು. ಅದರಲ್ಲಿ ಎಷ್ಟೋ ಶವಗಳು ಯಾರದೆಂದು ತಿಳಿಯದಷ್ಟು ವಿಕಾರವಾಗಿದ್ದವು. ಕೆಲವರ ಮೈ ಮೇಲಿದ್ದ ಆಭರಣ, ವಸ್ತ್ರಗಳ ಸಹಾಯದಿಂದ ಗುರುತಿಸುತ್ತಿದ್ದರು. ಇಲ್ಲಿ ಕೆಲವರ ಶವಗಳನ್ನು ಗುರುತು ಹಿಡಿಯುವಾಗ ಆಭಾಸವೂ ಆಯಿತು. ಘಟನೆ ನಡೆದ ಸ್ಥಳದಲ್ಲಿ ಸಹಾಯ ಮಾಡಲು ಬಂದವರು ಯಾರದೋ ವಸ್ತ್ರವನ್ನು ಪೂರ್ಣ ವಿವಸ್ತ್ರವಾಗಿದ್ದ ಇನ್ಯಾವುದೊ ಶವದ ಮೇಲೆ ಹಾಕಿದ್ದರು. ಶವ ಸಂಸ್ಕಾರವಾದ ಬಳಿದ ಇದು ತಿಳಿದುಬಂದದ್ದು. ಆಗ ನೆಂಟರಿಷ್ಟರ ಮನಸ್ಸಿಗೆ ಬಹಳವಾಗಿ ನೋವಾಗಿತ್ತು.

ಆಮೇಲೆ ತಿಳಿದು ಬಂದ ವಿಷಯವೆಂದರೆ, ಹೊರಗೆ ಮಳೆ ಬರುತ್ತಿದ್ದ ಕಾರಣ ಹವಾಮಾನದಲ್ಲಿ ಉಷ್ಣತೆ ಕಡಿಮೆಯಾಗಿದ್ದು ಟ್ರೈನಿನ ಚಕ್ರ ಮತ್ತು ಮೋಟಾರಿಗೆ ಸಿಕ್ಕಿಸಿದ್ದ ರಬ್ಬರಿನಿಂದ ಹೊಗೆ ಬಂದದ್ದನ್ನು ಪ್ರಯಾಣಿಕರು ಬೆಂಕಿ ಹೊತ್ತಿಕೊಂಡಿದೆ ಎಂದು ಭಾವಿಸಿದ್ದರು. ವಿಧಿ ಅಂತಹ ವಾತಾವರಣ ನಿರ್ಮಿಸಿದ್ದರೆ ಯಾರೇನು ಮಾಡಲಾದೀತು.

ಎಷ್ಟೋ ಹೆಣ್ಣುಮಕ್ಕಳು ಸಣ್ಣ ಸಣ್ಣ ಮಕ್ಕಳನ್ನು ತೊರೆದಿದ್ದರು. ನಮ್ಮ ಬ್ಯಾಂಕಿನ ಉದ್ಯೋಗಿಯೊಬ್ಬರ ಪತ್ನಿಯೂ ಈ ದುರ್ಮರಣಕ್ಕೀಡಾಗಿದ್ದರು. ಅವರಿಗೆ ಒಂದು ಚಿಕ್ಕ ಗಂಡು ಮಗುವಿದ್ದು, ಅದಕ್ಕೆ ತಾಯಿ ಮರಣ ಹೊಂದಿದ ವಿಷಯವೇ ಗೊತ್ತಾಗಿರಲಿಲ್ಲ. ಒಂದು ವಾರದವರೆವಿಗೂ ರಾತ್ರಿಯ ಹೊತ್ತು ತಾಯಿಗಾಗಿ ಅತ್ತೂ ಅತ್ತೂ ಸುಸ್ತಾಗಿ ಮಲಗುತ್ತಿತ್ತು.

ಇಂತಹ ದಾರುಣ ಕಥೆಯನ್ನು ಯಾರಾದರೂ ಊಹಿಸಲಾದೀತೇ? ವಿಧಿಯ ನಿರ್ಮಿತವೇ ಹಾಗೆ. ಯಾರೂ ಊಹಿಸಲಾರದಷ್ಟು ಘೋರವನ್ನು ಬಾಳಿನಲ್ಲಿ ತೋರಿಸುವುದು. ಆದರೂ ಮಾನವೀಯತೆಯನ್ನು ಮರೆತು ಹಾರಾಡುವುದೇನೂ ಕಡಿಮೆಯಾಗದು.