ಕನ್ನಡ ತಾಯ ನೋಟ

ಕನ್ನಡ ತಾಯ ನೋಟ

ಬರಹ

ಸಂಪದ ಓದುಗರಿಗೆಲ್ಲ ನನ್ನ ನಮಸ್ಕಾರಗಳು.

ಮೊನ್ನೆ ಹೀಗೇ (ನವೆಂಬರ್ ತಿಂಗಳ) ಮಯೂರ ಓದ್ತಾ ಇದ್ದೆ. ಅದರಲ್ಲಿ ಬಿ.ಎಂ.ಶ್ರೀ ಬರೆದ ಒಂದು ಅದ್ಭುತವಾದ ಕವನ ಓದಿದೆ. "ಎಲ್ಲ ಕನ್ನಡಿಗರೂ ಓದಲೇಬೇಕಾದ ಕವನವಿದು" ಅನ್ನಿಸ್ತು.

ಇದೋ ನಿಮ್ಮ ಮುಂದೆ ಆ ಕವನ.

ಕನ್ನಡತಾಯ ನೋಟ

(ಆಯ್ದ ಭಾಗಗಳು)


             -4-
"ಕೇಳಣ್ಣ, ನಾನೊಬ್ಬ ಹಳೆಯ ಮುತ್ತೈದೆ- ಹಿರಿದಾಗಿ
                       ಬಾಳಿದವಳೊಮ್ಮೆ;
ಈಗ ಬಡತನ, ಬಡವೆ, ಬಡವಾದೆ; ಬಡವಾದ
                      ಮಕ್ಕಳನ್ನು ನೋಡಿ,
ಬತ್ತಿ, ಮತ್ತಿಮ್ಮಡಿಯ ಸೊರಗಿನಲಿ ಬಡವಾದೆ-
                        ಸಾವಿಲ್ಲ ನನಗೆ!
ಸಾವಿಲ್ಲ- ಸಾಯುತಿಹೆ; ಹೊಸಮಳೆಗಳಾಗಿ, ನೆಲ
                  ಹೊಸ ಹೊನಲು ಹರಿದು,
ಹೊಸ ಹಮ್ಮು ಹಮ್ಮುತ್ತ, ಎಲ್ಲರೂ ನನ್ನಕ್ಕ
                     ತಂಗಿಯರು- ಚಿಗುರಿ
ಎಲ್ಲರೂ ಚೆಲುವಾದರೆಲ್ಲರೂ ಚಿನ್ನವಾದರು- ನೋಡು,
                            ನೋಡು-
ಆ ಕಡೆಗೆ, ಈ ಕಡೆಗೆ, ತೂಗುವರು ತೊನೆಯುವರು,
                     ಆ ಪೊಂಕ, ಬಿಂಕ!
    ಪೇರೊಕ್ಕಲಾಗಿ ಹಾಡುವರು;
ಅವರ ಮಕ್ಕಳು ಬೆಳೆದು ಕಳೆಗೋಡಿ ಮನೆ ಬೆಳಗಿ
                     ಹಬ್ಬ ಮಾಡುವರು-
    ತಾವ್ ಮೊದಲು ಬದುಕಿ
    ತಾಯ್ ಮೊದಲು ಬದುಕಿ,
ಹೆರರ ಹೊರೆಗಳನಿಳಿಸೆ, ಹೆರರ ಸೆರೆಗಳ ಬಿಡಿಸೆ, ಕಯ್ಯ
                           ನೀಡುವರು
ಆ ಸಯ್ಯು, ಆ ಪುಣ್ಯ ನನಗಿಲ್ಲ; ನನ್ನ ಮಕ್ಕಳಿಗಿಲ್ಲ
                              ಹಬ್ಬ
    ನನ್ನ ಮಕ್ಕಳಿಗಿಲ್ಲ ಹಬ್ಬ;
ಮಳೆ, ಸುಗ್ಗಿ, ಬೆಳೆ, ಬೆಳಕು, ಹಾಡು, ಹಸೆ; ಕೂಗಾಟ,
                        ಕುಣಿದಾಟ, ಪಾಟ;
    ಒಲಿದಾಟ, ನಲಿದಾಟ, ಒಲುಮೆ ಬೀರಾಟ,
ನನ್ನ ಮಕ್ಕಳಿಗಿಲ್ಲ- ನನಗಿಲ್ಲ- ಬಾಳ್ಗೆ ಆ
                          ಅಕ್ಕತಂಗಿಯರು!
    ನಮಗಿಲ್ಲ ಬಾಳು!
ಎಲ್ಲರೂ ಬಾಳುವೆಡೆ ನಮಗೆ ಸಾವೆ?
ಎಲ್ಲರೂ ನಲಿವಕಡೆ ನಮಗೆ ನೋವೆ?

ಏನು ಕವಿಯಿತೊ ಮಂಕು, ಮಕ್ಕಳಿಗೆ! ಯಾರೆರಚಿದರೊ
                         ಬೂದಿ, ಕಾಣೆ,
ನನ್ನನೊಲ್ಲರು ನನ್ನ ಮಕ್ಕಳೇ! ತಾನ್ ಬಾಳಿ, ತಾಯ
                            ಬಾಳಿಸರು.
ಹೆರರ ನುಡಿ, ಹೆರರ ನಡೆ,- ಕೂಗೇ ಕೂಗು;
                        ಹೆರರದೇ ಹೆಮ್ಮೆ!
     ನನ್ನ ಮನೆ ಹಾಳು!
     ನನ್ನ ನುಡಿ ಬೀಳು!
ನನ್ನ ನಾಡಿನಲಿರುಳು; ನನ್ನ ತೋಟವನಗೆವ,
                       ತೆಂಗಡಿಯಿಡುವ,
ತಾವರೆಯ ಕಾಪಿಡುವ, ಮೊಲ್ಲೆ ಮಲ್ಲಿಗೆ ನೆಡುವ,
                      ಆನಂದ ಕೊಡುವ
ಮಕ್ಕಳೆಲ್ಲಿಹರೆನಗೆ,- ಹೆರರೊತ್ತೆ ಗಡಿಬಿಡುತ
                 ಹದುಗುತ್ತ, ನುಗ್ಗೆ ಕುಗ್ಗುತ್ತ,
ಹೆರರ ಕೈ ಕಾಯುತ್ತ, ಸಾಯದೆಯೆ ಬದುಕದೆಯೆ ಬಾಳ
                          ನೂಕುವೆನು"

            -5-
ಅರಿದೆನರಿದೆನು ಮಾತನಾಡುವಳದಾರೆಂದು; ಕನ್ನಡದ
                             ತಾಯಿ!
ನಮ್ಮ ಕನ್ನಡ ತಾಯಿ, ತನ್ನ ಹೊಂಬಸಿರಿಂದ ನಮ್ಮನ್ನು
                             ತಂದು,
ನಾವು ಬಿಟ್ಟೊಡೆ ಬಿಡದೆ, ಹಂಬಲಿಸಿ, ಮರುಹುಟ್ಟು
                         ಹಾರೈಸುತಿಹಳು-
ನಾನೆಂದೆ, ಅಳಲನಾರಿಸ ಬಯಸಿ- "ಏಕಮ್ಮ
                      ಇನಿಸೊಂದು ಕೊರಗು?
ಬೇಡಮ್ಮ ಮಕ್ಕಳಲಿ ಇನಿಸೊಂದು ಕಡುಮುನಿಸು-
                         ಬಾರಮ್ಮ ಹರಸು.
ನಿನ್ನ ನಾಡಿನೊಳೇಕೊ ಬೆಳಕು ಮೂಡಿಹುದು- ಜೀವ
                            ಕೂಡಿಹುದು.
ನಿನ್ನ ಮಕ್ಕಳು ನಿದ್ದೆಗಳೆದೆದ್ದ ಸಿಂಹದಂತೇಳುತ್ತ,
                           ಮೊಳಗಿ,
ಕಣಕಿಳಿದು ಪಂಪ ನೃಪತುಂಗರಾ ಮಾತುಗಳ
                       ದಿಟವೆನಿಸುತಿಹರು.
ಸೆರೆಯನೊಕ್ಕಡೆಗೊಗೆದು, ಬಿಡುಗಡೆಯ ಕೈಕೊಂಡು,
                      ಹಳೆ ನೆನಪು ನೆನೆದು,
ಹೊಸ ಕಾಣ್ಕೆಗಳ ಕಂಡು, ಸಾಮ್ರಾಜ್ಯಗಳ ಮತ್ತೆ
                          ಕಟ್ಟುತಿಹರು.
ನಿನ್ನ ನಾಡೊಂದಾಗಿ, ನಿನ್ನ ನುಡಿ ಮೇಲಾಗಿ, ಮನೆ
                             ಮಕ್ಕಳೆಲ್ಲ
     ಪೇರೊಕ್ಕಲಾಗಿ ಪಾಡುವರು!
     ತಾಯ್ ಬದುಕಿ, ತಾವ್ ಬದುಕಿ, ಹೆರರ
                           ಬದುಕಿಪರು!!
ಹಾಳು ಹಂಪೆಯ ನಡುವೆ, ನಡುಕಟ್ಟಿ ಮತ್ತೊಮ್ಮೆ
                        ಮುಡಿಪಾಗಿ ತಾಯ್ಗೆ
     ಭಕ್ತಿಯಲಿ ಜೀವವನು ಸಲಿಸುವರು- ಏಳು!
     ಸಡಗರದ ಆ ಕೂಗ ಕೇಳು;

ನಾಡು ಸಿಂಗರವಾಯ್ತು, ಬೀಡು ಹೆಬ್ಬೆಳಕಾಯ್ತು,
                      ಅದೊ ಹಬ್ಬ ಮೆರೆತ!
ಹೆಣ್ಣ ಚೆಲುವನು ನೋಡು- ಗಂಡು ಗಲಿಗಳ
                    ನೋಡು- ಕಟ್ಟಾಳುಗಳನು.
ರಾಜರನು, ಋಷಿಗಳನು, ಕವಿಗಳನು, ಧೀರರನು-
                         ಕರ್ಮವೀರರನು.
ಹೊಸತ ಹಳತನು ಮಾಡಿ, ಹಳತ ಹೊಸತನು ಮಾಡಿ,
                       ನಾಡೊಂದು ಮೂಡಿ,
ಧರ್ಮ ಸತ್ಯಗಳಿಂದ, ಪ್ರೇಮ ಶಾಂತಿಗಳಿಂದ,
                          ಸ್ವಾತಂತ್ರ್ಯದಿಂದ,
ಸುಖದಿಂದ, ಸೌಂದರ್ಯದಾನಂದದಿಂದೆಲ್ಲ
                         ಸಮದೃಷ್ಟಿಯಿಂದ
ಬಾಳರೇ ನೀ ಬಂದು ನಲಿಸಿದೊಡೆ, ಹರಸಿದೊಡೆ- ಬಾ
                          ತಾಯಿ ಹರಸು.
ತೇರೇರು ಬಾ ತಾಯಿ, ನಿನ್ನ ಸಿಂಹಾಸನವನೇರು
                            ಮತ್ತೊಮ್ಮೆ
ಪಳಮೆಯಲಿ ಪೇರಾಲವನು ನೀನು ಬಿತ್ತಲದು
                      ಮೊಳೆತು, ಮರವಾಗಿ,
ಪಡುವ ಮೂಡಲು ತೆಂಕ ಬಡಗಲೆಡೆ ಕೊಂಬೆಗಳ
                        ನೆಸದೆಸೆದು ಬೀಗಿ,
ಒಂದೇ ಮರವಮರವಾಗಿರ್ಪಂತೆ, ಅಮರವಾಗಿನ್ನುಮದೆ
                              ಇಹುದು
ನಿನ್ನೊಂದು ಕರ್ನಾಟರತ್ನಸಿಂಹಾಸನಂ- ಬಾಳ್ಗೆ, ಅದು
                               ಬೆಳಗೆ
ಕನ್ನಡದ ಮುಡಿಯಾಗಿ, ಕನ್ನಡದ ನುಡಿಯಾಗಿ,
                  ಕನ್ನಡದ ಬಾಳ ಕುಡಿಯಾಗಿ!
     -ಬಾರಮ್ಮ, ಹರಸು."


            -6-

      ನಕ್ಕಳಾ ತಾಯಿ,
ಮುದುಕಿ ಎಳೆಯವಳಾಗಿ, ಮಾಸು ಮಿಂಚಳೆಯಾಗಿ,
                       ಸವೆದ ಮೈ ತುಂಬಿ,
ಕಡಲ ತೆರೆಗಳನುಟ್ಟು, ಬೆಟ್ಟಬಯಲನು ತೊಟ್ಟು,
                       ಅರಿಲ ಮುಡಿಗಿಟ್ಟು,
ಮುಗುಳ್‌ನಗೆಯ ನಸುನಕ್ಕಳಾ ತಾಯಿ, ನನ್ನ ತಲೆಯಲಿ
                     ಕಯ್ಯ ತಾವರೆಯನಿಟ್ಟು,
      ಸುತ್ತಲುಂ ಕಾಣಿಸಿದರೊಡನೆ-
      ಕನ್ನಡದ ಪೊನ್ನಾಡ ಪೆರ್ಮನಡಿಗಳ್!
      ಸಾವನೊಡೆವಾ ಪಾಲ ಸೂಸು ಕಿಡಿಗಳ್!
ಹಿಂದೆ ನೀಡಿದ ಸಾಲು, ಮುಂದೆ ನೀಡಿದ ಸಾಲು,
                     ಕನ್ನಡದ ಕರುಳುಗಳು
                   -ನಡುವೆ ಸಿರಿ ತಾಯ್
      ಭುವನೇಶ್ವರೀದೇವಿ ರಥವನೇರಿದಳು...

            

- ಬಿ.ಎಂ. ಶ್ರೀಕಂಠಯ್ಯ