ಯುದ್ಧ ಮತ್ತು ಶಾಂತಿ...

ಯುದ್ಧ ಮತ್ತು ಶಾಂತಿ...

ಅದು 1811-1812 ನೆ ಇಸವಿಯ ಯೂರೋಪು. ನೆಪೊಲಿಯನ್ನನ ಕಾಲ. ರಷ್ಯ-ಫ್ರಾನ್ಸ್ ಒಕ್ಕೂಟದಿಂದ ಬೇರಾಗಲು ರಷ್ಯ ಬಯಸುತ್ತಿರುತ್ತದೆ. ಅದನ್ನು ಒಪ್ಪದ ಫ್ರಾನ್ಸ್‌ನ ನೆಪೊಲಿಯನ್ ರಷ್ಯಕ್ಕೆ ಬುದ್ಧಿ ಕಲಿಸಲು ಅದರ ಮೇಲೆ ದಾಳಿ ಮಾಡುತ್ತಾನೆ. ರಷ್ಯಾದ ಒಳಗೇ ಅನೇಕ ಕದನಗಳು ನಡೆಯುತ್ತವೆ. ನೆಪೊಲಿಯನ್ನನದು ದೊಡ್ಡ ಸೈನ್ಯ. ಆದರೂ ರಷ್ಯನ್ನರನ್ನು ಸಂಪೂರ್ಣವಾಗಿ ಸೋಲಿಸಲಾಗುವುದಿಲ್ಲ. ನೆಪೊಲಿಯನ್ನನ ಆಕ್ರಮಣ ತಪ್ಪಿಸಿಕೊಳ್ಳಲು ರಷ್ಯನ್ನರು ಮಾಸ್ಕೊ ತೊರೆದು ಗ್ರಾಮೀಣ ಪ್ರದೇಶಗಳಿಗೆ ಓಡಿ ಹೋಗುತ್ತಾರೆ. ಅಂತಿಮ ಯುದ್ಧಕ್ಕೆ ಕಾಯುತ್ತ ನೆಪೊಲಿಯನ್ ಐದು ವಾರಗಳ ಕಾಲ ಮಾಸ್ಕೋ ನಗರದಲ್ಲಿಯೆ ಬೀಡುಬಿಡುತ್ತಾನೆ. ಅಷ್ಟೊತ್ತಿಗೆ ಮಾಸ್ಕೋಗೆ ಬೆಂಕಿ ಬಿದ್ದಿರುತ್ತದೆ. ಮಾಸ್ಕೊ ಕೈಬಿಟ್ಟಿದ್ದರೂ ರಷ್ಯಾದ ಸೇನಾನಾಯಕ ಒಳ್ಳೆಯ ಅವಕಾಶಕ್ಕಾಗಿ ಕಾಯುತ್ತ ಯುದ್ಧಸಿದ್ಧತೆಯಲ್ಲಿ ತೊಡಗಿಕೊಂಡು ಯುದ್ಧವನ್ನು ವಿಳಂಬಿಸುತ್ತಿರುತ್ತಾನೆ. ದಹಿಸುತ್ತಿರುವ ಸ್ಮಶಾನ ಮಾಸ್ಕೋವನ್ನು, ಶಿಸ್ತುತಪ್ಪಿದ ತನ್ನ ಸೈನ್ಯವನ್ನು, ಕೊನೆಗೆ ಫ್ರಾನ್ಸೆ ತನ್ನ ಕೈತಪ್ಪಿಹೋಗುವ ಸ್ಥಿತಿಯನ್ನು ನೋಡಿ ತಲೆಕೆಟ್ಟ ನೆಪೊಲಿಯನ್ ಐದು ವಾರಗಳ ನಂತರ ಮಾಸ್ಕೊ ಬಿಟ್ಟು ಪ್ಯಾರಿಸ್‌ಗೆ ತೆರಳುತ್ತಾನೆ. ಅದು ಭಯಂಕರ ಹಿಮಪಾತದ ಚಳಿಗಾಲ. ಹಿಂದೆಗೆಯುತ್ತಿರುವ ಸೈನ್ಯಕ್ಕೆ ಹಿಂದಿನಿಂದ ಬಂದ ರಷ್ಯನ್ನರು ಅಪಾರ ಹಾನಿ ಮಾಡುತ್ತಾರೆ. ಆರೂವರೆ ಲಕ್ಷ ಸೈನಿಕರನ್ನು ಕಟ್ಟಿಕೊಂಡು ಯುದ್ಧಕ್ಕೆ ಹೋದ ನೆಪೊಲಿಯನ್ ಕೇವಲ ಐದು ತಿಂಗಳ ಆ ಯುದ್ಧದಲ್ಲಿ ಐದೂಮುಕ್ಕಾಲು ಲಕ್ಷ ಸೈನಿಕರನ್ನು ಕಳೆದುಕೊಂಡು ಐವತ್ತು ಸಾವಿರಕ್ಕೂ ಕಮ್ಮಿ ಸೈನಿಕರೊಡನೆ ವಾಪಸು ಮರಳುತ್ತಾನೆ. ಮೊದಲಿಗೆ ಸೋತರೂ ಕೊನೆಗೆ ಗೆದ್ದ ರಷ್ಯನ್ನರು ಕೇವಲ ನಾಲ್ಕು ಲಕ್ಷ ಸೈನಿಕರನ್ನು ಕಳೆದುಕೊಳ್ಳುತ್ತಾರೆ. ಆದರೆ ಸತ್ತ ನಾಗರಿಕರು ಮಾತ್ರ ಲಕ್ಷಾಂತರ.

ಇಂತಹ ಭೀಕರ ಯುದ್ಧದ ಹಿನ್ನೆಲೆಯಲ್ಲಿ ಲಿಯೊ ಟಾಲ್ಸ್‌ಟಾಯ್ ರಚಿಸಿದ ಕೃತಿ "ಯುದ್ಧ ಮತ್ತು ಶಾಂತಿ." ಯಾವ ಮಾನದಂಡ ಉಪಯೋಗಿಸಿದರೂ ಅದು ಒಂದು ಮಹತ್ತರ ಸಾಹಿತ್ಯ ಕೃತಿಯೆ. 1200 ಕ್ಕೂ ಹೆಚ್ಚಿನ ಪುಟಗಳು. ರಷ್ಯ ಮತ್ತು ಫ್ರಾನ್ಸ್‌ನ ವಿಶಾಲ ಐತಿಹಾಸಿಕ ಹರವು ಹೊಂದಿರುವ ಈ ಕಾದಂಬರಿಯಲ್ಲಿ ಇರುವ ಪಾತ್ರಗಳು ಒಟ್ಟು 582 ! ಅವುಗಳಲ್ಲಿ ಸರಿಸುಮಾರು 200 ಪಾತ್ರಗಳು ಕಾಲ್ಪನಿಕವಲ್ಲದ, ಐತಿಹಾಸಿಕ ವ್ಯಕ್ತಿಗಳು. ಒಂದು ರೀತಿಯಲ್ಲಿ ಐತಿಹಾಸಿಕವಲ್ಲದ, ಐತಿಹಾಸಿಕವಾದ, ಮಹಾನ್ ಐತಿಹಾಸಿಕ ಕಾದಂಬರಿ!

ಟಾಲ್ಸ್‌ಟಾಯ್ ಇದನ್ನು (1865-1869) ಒಮ್ಮೆ ಬರೆದು, ನಂತರ ಅನೇಕ ಸಲ ಅದನ್ನು ತಿದ್ದಿತೀಡಿ ಅಂತಿಮ ಆವೃತ್ತಿ ಪ್ರಕಟಿಸುತ್ತಾನೆ. ಈ ಅಂತಿಮ ಪ್ರಕಟನೆಯೆ ಹೆಚ್ಚು ಪ್ರಕಟಣೆಯಲ್ಲಿರುವುದು. ಇಲ್ಲಿಯವರೆಗೆ ಕೇವಲ ಇಂಗ್ಲಿಷ್ ಒಂದಕ್ಕೇ ಇದು ಹತ್ತಕ್ಕೂ ಹೆಚ್ಚಿನ ಸಲ ಬೇರೆಬೇರೆ ಲೇಖಕರಿಂದ ಅನುವಾದಗೊಂಡಿದೆ. ತೀರಾ ಇತ್ತೀಚಿನ ಸುದ್ದಿ ಏನೆಂದರೆ, ಟಾಲ್ಸ್‌ಟಾಯ್‌ನ ಮೊದಲ ಆವೃತ್ತಿಯ "ವಾರ್ ಅಂಡ್ ಪೀಸ್" ಇದೇ ಮೊದಲ ಬಾರಿಗೆ ಇಂಗ್ಲಿಷಿಗೆ ಅನುವಾದಗೊಂಡು ಎರಡು ತಿಂಗಳ ಹಿಂದಷ್ಟೆ ಬಿಡುಗಡೆ ಆಗಿದ್ದರೆ, ಪೂರ್ಣ ಆವೃತ್ತಿಯ ಮತ್ತೊಂದು ಇಂಗ್ಲಿಷ್ ಅನುವಾದ ಕೇವಲ ಎರಡು ವಾರದ ಹಿಂದೆ ಬಿಡುಗಡೆ ಆಗಿದೆ!

ಜೊತೆಜೊತೆಗೆ ಬಿಡುಗಡೆ ಆದ ಬೇರೆಬೇರೆ ಆವೃತ್ತಿಯ ಒಂದೇ ಕಾದಂಬರಿ ಈಗ ಇಂಗ್ಲಿಷ್ ಸಾಹಿತ್ಯ ವಲಯದಲ್ಲಿ ತನ್ನದೆ ಆದ ವಾಗ್ಯುದ್ಧ ಸೃಷ್ಟಿಸಿದ್ದು, ಇತ್ತೀಚಿನ ಅನುವಾದಕರು ಮತ್ತು ಪ್ರಕಾಶಕರು ಒಬ್ಬರಿನ್ನೊಬ್ಬರನ್ನು ಹೀಗಳೆದು ಕೊಳ್ಳುತ್ತಿದ್ದಾರೆ.

ಪೂರ್ಣ ಆವೃತ್ತಿಗಿಂತ 400 ಪುಟಗಳೆ ಕಮ್ಮಿಯಿರುವ ಮೊದಲ ಆವೃತ್ತಿಯ ಅನುವಾದವನ್ನು ಪ್ರಕಟಿಸಿರುವ ಪ್ರಕಾಶಕರು, "ಇದನ್ನು ಟಾಲ್ಸ್‌ಟಾಯ್ ಬರೆದ ಮೊದಲ ಕರಡು ಪ್ರತಿ ಎನ್ನುವ ಹಾಗಿಲ್ಲ. ಇದನ್ನು ಬರೆದು ಮುಗಿಸಿದ ಮೇಲೆ ಟಾಲ್ಸ್‌ಟಾಯ್ ಮುಕ್ತಾಯ ಎಂದು ಬರೆದು ಸಹಿ ಸಹ ಹಾಕಿದ್ದಾನೆ. ಇದೆ ಒರಿಜಿನಲ್ ಆವೃತ್ತಿ" ಎನ್ನುತ್ತಿದ್ದರೆ, ಇದನ್ನು ಇಷ್ಟಪಡದ ವಿರೋಧಿ ಬಣದವರು ಮಾತ್ರ, :ಇಲ್ಲ, ಇಲ್ಲ. ಮೊದಲನೆಯದು ಮೊದಲ ಡ್ರಾಫ್ಟ್ ಅಷ್ಟೆ. ಅಂತಿಮ ಆವೃತ್ತಿಯೆ ಟಾಲ್ಸ್‌ಟಾಯ್ ಸಂಪೂರ್ಣಗೊಳಿಸಿದ ಕಾದಂಬರಿ. ಟಾಲ್ಸ್‌ಟಾಯ್‌ಗೆ ತೃಪ್ತಿ ಆಗಿದ್ದೂ ಈ ಅಂತಿಮ ಆವೃತ್ತಿಯೆ," ಎನ್ನುತ್ತಿದಾರೆ. ಒಂದೆರಡು ವಾರಗಳಿಂದ ಇಂಗ್ಲಿಷಿನ ಸಾಹಿತ್ಯ ಸಂಬಂಧಿ ಸುದ್ಧಿಗಳಲ್ಲಿ ಈ ವಿವಾದ ಪ್ರತಿಧ್ವನಿಸುತ್ತಲೆ ಇದೆ.

ಟಾಲ್ಸ್‌ಟಾಯ್‌ನ ಎರಡು ಮೇರುಕೃತಿಗಳಾದ "ಅನ್ನಾ ಕರೆನಿನಾ" ಮತ್ತು "ಯುದ್ಧ ಮತ್ತು ಶಾಂತಿ" ಯನ್ನು ಕನ್ನಡದ ಹಿರಿಯ ಸಾಹಿತಿ ಮತ್ತು ಮೈಸೂರು ವಿವಿಯ ಮಾಜಿ ಉಪಕುಲಪತಿ ದೇ. ಜವರೇ ಗೌಡರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕುವೆಂಪುರವರ ಪರಮ ಶಿಷ್ಯರಾಗಿದ್ದ ದೇಜಗೌ, ಇತ್ತೀಚಿನ ದಶಕಗಳಲ್ಲಿ ಕುವೆಂಪುರವರ ತತ್ವ-ಸಿದ್ಧಾಂತಗಳಿಗೆ ಎಳ್ಳುನೀರು ಬಿಡಲು ಮನಸು ಮಾಡಿದವರಲ್ಲಿ ಅಗ್ರಗಣ್ಯರು. ಕುವೆಂಪುರವರು ನಿರಾಕರಿಸಿದ್ದ ಜಾತಿವಾದ, ಸ್ವಜನಪಕ್ಷಪಾತ, ಆಡಂಬರಗಳೆ ಇವರಿಗೆ ಪ್ರೀತಿ. ಇವರ ಇತ್ತೀಚಿನ ಕೆಲವು ಚಳವಳಿಗಳಿಗೆ ಕುವೆಂಪುರವರನ್ನು ದ್ವೇಷಿಸುತ್ತಿದ್ದ ಕೋಮುವಾದಿ ಮತಾಂಧರೆಲ್ಲ ಬಂದು ಬೆಂಬಲ ಸೂಚಿಸುತ್ತಿದ್ದಾರೆ ಎಂದರೆ ದೇಜಗೌ ಕುವೆಂಪುರವರಿಂದ ಎಷ್ಟು ದೂರ ಬಂದಿದ್ದಾರೆ ಎನ್ನುವುದು ಗೊತ್ತಾಗುತ್ತದೆ.

ಲೇಖನದ ವಿಡಿಯೊ ಪ್ರಸ್ತುತಿ

ಈ ಹಿನ್ನೆಲೆಯಲ್ಲಿ, "ಯುದ್ಧ ಮತ್ತು ಶಾಂತಿ" ಯ ಮೊದಲ ಆವೃತ್ತಿಯ ಸಣ್ಣ ಪುಸ್ತಕವನ್ನೂ ಕನ್ನಡಕ್ಕೆ ತರಲು ದೇಜಗೌ ತೊಡಗಿಕೊಂಡರೆ ಅದರಿಂದ ಮೈಸೂರಿನ ಸಾಂಸ್ಕೃತಿಕ ಲೋಕಕ್ಕೆ ಮತ್ತು ಕನ್ನಡ "ಶಾಸ್ತ್ರೀಯ" ಸಾಹಿತ್ಯಕ್ಕೆ ಒಳ್ಳೆಯದೆ ಆಗಬಹುದು.

(ವಿಕ್ರಾಂತ ಕರ್ನಾಟಕ - ನವೆಂಬರ್ 16, 2007 ರ ಸಂಚಿಕೆಯಲ್ಲಿನ ಬರಹ)

Rating
No votes yet