ಗಾಂಧಿ ಪುರಾಣ

ಗಾಂಧಿ ಪುರಾಣ

ಸ್ವ ತಂತ್ರ ಭಾರತದ 60ನೇ ವರ್ಷಾಚರಣೆಯ ಸಂದರ್ಭದಲ್ಲಿ ರಾಷ್ಟ್ರಪಿತರೆನಿಸಿದ ಗಾಂಧೀಜಿಯನ್ನು ಆ ಪದವಿಯಿಂದ ಇಳಿಸಲು ಅನೇಕ ವಲಯಗಳಿಂದ ಪ್ರಯತ್ನಗಳು ಆರಂಭವಾಗಿರುವಂತೆ ತೋರುತ್ತದೆ. ಗಾಂಧಿ ಹತರಾದದ್ದೇ, ತಮ್ಮ ಹಿಂದೂ ಧರ್ಮವನ್ನೂ, ಹಿಂದೂ ರಾಷ್ಟ್ರವನ್ನೂ ಮುಸ್ಲಿಮರಿಂದ ಕಾಪಾಡ ಬಯಸಿದ ಮೇಲ್ಜಾತಿ ಹಿತಾಸಕ್ತಿಗಳ ಪ್ರತಿನಿಧಿಯಿಂದ ಎಂಬುದು ಸತ್ಯವಾದರೂ; ಅವರನ್ನು ಮೇಲ್ಜಾತಿ ಹಿತಾಸಕ್ತಿಗಳ ಪ್ರತಿನಿಧಿಯೆಂದೂ, ಮೇಲ್ಜಾತಿಯವರ ಹಿಡಿತದಲ್ಲಿದ್ದ ಮಾಧ್ಯಮಗಳ ಮೂಲಕವೇ ಮಹಾತ್ಮ ಹಾಗೂ ರಾಷ್ಟ್ರಪಿತ ಎಂಬ ಪದವಿಗಳನ್ನು ಪಡೆದು ರಾಷ್ಟ್ರದ ಬಹುಪಾಲು ಜನತೆಗೆ ಮೋಸ ಮಾಡಿದವರೆಂದೂ ಬಿಂಬಿಸುವ 'ಸಂಶೋಧನೆ'ಗಳು ಇತ್ತೀಚೆಗೆ ಆರಂಭವಾಗಿವೆ. ಗಾಂಧಿಯನ್ನು ಕೊಂದವರು ಈಗ ಗಾಂಧಿ ಪ್ರತಿಮೆಯ ಬಳಿಯಿಂದಲೇ ತಮ್ಮ ರಾಜಕೀಯ ಆಂದೋಲನಗಳನ್ನು ಆರಂಭಿಸ ತೊಡಗಬೇಕಾದ ಪರಿಸ್ಥಿತಿ ಉಂಟಾಗಿರುವಾಗ, ಈವರೆಗೆ ಗಾಂಧಿ ವಿರುದ್ಧ ಬರೀ ಆಪಾದನೆಗಳನ್ನು ಮಾಡುತ್ತಿದ್ದ ಜನವೀಗ ಚರಿತ್ರೆಯ ಬಗ್ಗೆ ಹೊಸ ಬೆಳಕು ಚೆಲ್ಲುವ ಪ್ರಯತ್ನಗಳೆಂದು ಹೇಳಿಕೊಳ್ಳುತ್ತಾ ಈ ಸಂಶೋಧನೆಗಳನ್ನು ಮಂಡಿಸುತ್ತಿದ್ದಾರೆ. ಸ್ವಾತಂತ್ರ್ಯ ಚಳುವಳಿಯ ಸಂದರ್ಭದ ಗಾಂಧಿ - ಅಂಬೇಡ್ಕರ್ ಮುಖಾಮುಖಿಯನ್ನು ತಮ್ಮದೇ ಆಕರಗಳು ಹಾಗೂ ವಾದಗಳ ಆಧಾರದ ಮೇಲೆ ಪುನರ್ರೂಪಿಸುತ್ತಿರುವ ಈ ಸಂಶೋಧಕರು, ಗಾಂಧಿಯನ್ನು ಚರಿತ್ರೆಯ ಖಳನಾಯಕನಂತೆ ಚಿತ್ರಿಸುವ ಪ್ರಯತ್ನವೊಂದನ್ನು ನಡೆಸಿದ್ದಾರೆ. ಇದರ ಜೊತೆಗೆ ಈಗ ಗಾಂಧಿ ಒಬ್ಬ ನಿರ್ದಯಿ ಹಾಗೂ ಬೇಜವಾಬ್ದಾರಿ ತಂದೆಯೆಂದು ನಿರೂಪಿಸುವ ನಾಟಕಗಳೂ, ಚಲಚಿತ್ರಗಳೂ, ಬರಹಗಳೂ ಬರತೊಡಗಿವೆ. ಗಾಂಧಿ ವ್ಯಕ್ತಿತ್ವದ ಬೃಹತ್ ಭಿತ್ತಿಯ ಹಿನ್ನೆಲೆಯಲ್ಲಿ ಇದೆನ್ನೆಲ್ಲ ನಿರಾಕರಿಸ ಹೊರಡುವುದು ಹಾಸ್ಯಾಸ್ಪದ ಪ್ರಯತ್ನವಾದೀತಾದರೂ, ಇದೆಲ್ಲದರ ಹಿಂದೆ ಒಂದು ಸಂಘಟಿತ ಪ್ರಯತ್ನವಿರಬಹುದೇ ಎಂಬ ಅನುಮಾನ ಹುಟ್ಟಿಸುವಷ್ಟರ ಮಟ್ಟಿಗೆ ಇದೆಲ್ಲವೂ ಒಟ್ಟಿಗೇ ಆರಂಭವಾಗಿರುವ ಬಗ್ಗೆ ಆಶ್ಚರ್ಯವನ್ನಂತೂ ವ್ಯಕ್ತಪಡಿಸಬಹುದಾಗಿದೆ!

ಈ ಎಲ್ಲದರ ಮಧ್ಯೆ ಗಾಂಧಿಯವರ ಮೊಮ್ಮಗ ಹಾಗೂ ಪ.ಬಂಗಾಳದ ರಾಜ್ಯಪಾಲ ಗೋಪಾಲ ಕೃಷ್ಣ ಗಾಂಧಿ ತಮ್ಮ ತಾತನ ಸಮಗ್ರ ಸಾಹಿತ್ಯವನ್ನೊಮ್ಮೆ ಅವಲೋಕಿಸಿ, ಅವುಗಳಿಂದಾಯ್ದ ಉಲ್ಲೇಖಗಳ ಆಧಾರದ ಮೇಲೇ ಅವರ ವ್ಯಕ್ತಿತ್ವವನ್ನು ಕಟ್ಟಿಕೊಡುವ ಪುಸ್ತಕ ರೂಪದ ಪ್ರಯತ್ನವೊಂದನ್ನು ಮಾಡಿದ್ದಾರೆ. ಆ ಪುಸ್ತಕದ (The Oxford India Gandhi: Essential Writings) ಕೆಲವು ಭಾಗಗಳನ್ನು 'ಔಟ್ ಲುಕ್' ಪತ್ರಿಕೆ ತನ್ನ ಇತ್ತೀಚಿನ ಸಂಚಿಕೆಯೊಂದರಲ್ಲಿ ಪ್ರಕಟಿಸಿದೆ. ಅಲ್ಲಿಂದ ಕೆಲವನ್ನು ಆಯ್ದು ಇಲ್ಲಿ ಅನುವಾದಿಸಿ ಕೊಡುತ್ತಿದ್ದೇನೆ. ಅದಕ್ಕಿಂತ ಮುನ್ನ ಇತೀಚೆಗೆ ನಾನು ಗಾಂಧಿ ಕುರಿತು ಓದಿದ ಕೆಲವು ಲೇಖನಗಳಿಂದ ಆಯ್ದ ಕೆಲವು ಭಾಗಗಳನ್ನೂ, ಪೀಠಿಕೆಯಂತೆ ನೀಡುತ್ತಿದ್ದೇನೆ. ಇದರ ಮೂಲಕ ಗಾಂಧಿ ವಿರುದ್ಧ ಈಗ ಆರಂಭವಾಗುತ್ತಿರುವಂತೆ ತೋರುವ ಅಪಪ್ರಚಾರಕ್ಕೆ ಉತ್ತರ ಕೊಡುವ ಅನುಚಿತ ಪ್ರಯತ್ನವನ್ನಂತೂ ನಾನು ಮಾಡುತ್ತಿಲ್ಲ. ಬದಲಿಗೆ, ಬದುಕಿನ ಸಣ್ಣ - ಸಾಮಾನ್ಯ ವಿವರಗಳಲ್ಲೇ ಗಾಂಧಿ ನಿಜವಾಗಿ ಏನಾಗಿದ್ದರು ಎಂಬುದು ವ್ಯಕ್ತವಾಗಿರುವ ರೀತಿ ನೀತಿಗಳನ್ನು ನಿಮ್ಮೊಂದಿಗೆ ಅರ್ಥ ಮಾಡಿಕೊಳ್ಳಲು ಪ್ರಯತಿಸುತ್ತಿದ್ದೇನೆ. ಹಾಗೇ, ಅಧೋಗತಿ ಮುಟ್ಟಿರುವ ಇಂದಿನ ಕರ್ನಾಟಕದ ರಾಜಕೀಯ ಹಿನ್ನೆಲೆಯಲ್ಲಿಯೂ - ಇದನ್ನು ಆ ಆಧೋಗತಿ ಮುಟ್ಟಿರುವ ರಾಜಕಾರಣಿಗಳು ಯಾರೂ ಓದಲಾರರೆಂಬ ಅನುಮಾನವಿದ್ದರೂ - ಈ ಪುನರ್ನಮನನದ ಪ್ರಯತ್ನ ಪ್ರಸ್ತುತವೆನಿಸಿಕೊಳ್ಳಬಹುದು.

*

ಯು.ಆರ್. ಅನಂತಮೂರ್ತಿಯವರು ಇತ್ತೀಚಿನ ತಮ್ಮ ಬರಹಗಳಲ್ಲಿ ಗಾಂಧಿಯನ್ನು ಇಂದಿನ ಸಂದರ್ಭಕ್ಕೆ ವಿವರಿಸಿಕೊಳ್ಳುವ ಗಂಭೀರ ಪ್ರಯತ್ನಗಳಲ್ಲಿ ತೊಡಗಿದ್ದಾರೆ. ಅವರ 'ರುಜುವಾತು' ಪುಸ್ತಕದ ಒಂದು ಲೇಖನದಲ್ಲಿ ಉಲ್ಲೇಖಿಸಿರುವ ಪು.ತಿನ. ಅವರ ಮಾತು, ಈ ದೃಷ್ಟಿಯಿಂದ ಕುತೂಹಲಕಾರಿಯಾಗಿದೆ:

" ಒಮ್ಮೆ ಕೆಲವು ದಲಿತ ಸ್ನೇಹಿತರು ಕವಿ ಪುತಿನ ಅವರನ್ನು ನೋಡಲು ಹೋಗಿದ್ದರಂತೆ. ಹಣೆಯ ಮೇಲೆ ನಾಮ ಹಾಕಿ ನಿತ್ಯ ತಪ್ಪದೆ ಜಪ ಮಾಡುತ್ತಿದ್ದ ಈ ಶ್ರೀವೈಷ್ಣವ ಕವಿ ಪ್ರೀತಿ ತುಂಬಿದ್ದ ಹೃದಯದ ಮನುಷ್ಯ. ಅವರು 'ನೀವು ಗಾಂಧಿಯನ್ನು ಯಾಕೆ ಬೈಯುತ್ತೀರಿ?' ಅಂತ ದಲಿತರನ್ನು ಕೇಳಿದರಂತೆ. ದಲಿತರು ತಮ್ಮ ಕಾರಣಗಳನ್ನೆಲ್ಲ ಪಟ್ಟಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪುತಿನ 'ಮಹಾತ್ಮ ಗಾಂಧಿ ಈ ದೇಶದಲ್ಲಿ ಹುಟ್ಟದೇ ಇದ್ದಿದ್ದರೆ ಈ ಜಾಗದಲ್ಲಿ ಕೂತು ನಿಮ್ಮ ಜತೆ ಮಾತಾಡುವ ಸಾಧ್ಯತೆಯೇ ನನಗೆ ಇರುತ್ತಿರಲಿಲ್ಲ' ಎಂದರಂತೆ."

ಮುಂದಿನದೂ ಅನಂತಮೂರ್ತಿಯವರ ಇನ್ನೊಂದು ಲೇಖನದಿಂದ ಆಯ್ದ ಉಲ್ಲೇಖವೇ. ಉಡುಪಿಯ ಮಹಾತ್ಮ ಗಾಂಧಿ ಮೆಮೊರಿಯಲ್ ಕಾಲೇಜಿನಲ್ಲಿ ಇತ್ತೀಚೆಗೆ ಗಾಂಧಿ ಅಧ್ಯಯನ ಕೇಂದ್ರ ಉದ್ಘಾಟನೆಯಾದ ಸಂದರ್ಭದಲ್ಲಿ ಮಾಡಲಾದ ಭಾಷಣಗಳು ಹಾಗೂ ನಡೆದ ಚರ್ಚೆಯನ್ನೊಳಗೊಂಡ ಪುಸ್ತಕವೊಂದನ್ನು 'ಇಂದೂ ಇರುವ ಗಾಂಧಿ' ಎಂಬ ಶೀರ್ಷಿಕೆಯಡಿ (ಇದು ಅನಂತಮೂರ್ತಿಯವರ ಉದ್ಘಾಟನಾ ಭಾಷಣದ ಶೀರ್ಷಿಕೆಯೂ ಹೌದು) ಆ ಕಾಲೇಜು ಹೊರತಂದಿದೆ. ಅದರಲ್ಲಿನ ಅನಂತಮೂರ್ತಿಯವರ ಭಾಷಣದ ಒಂದು ಸಣ್ಣ ಭಾಗವನ್ನು (ಇದು ಹೊಸ ವಿಷಯವಲ್ಲದಿದ್ದರೂ, ಸದ್ಯದ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳಬೇಕಾದುದು ಎಂದು) ಇಲ್ಲಿ ಉಲ್ಲೇಖಿಸುತ್ತಿದ್ದೇನೆ:

" ಒಮ್ಮೆ ಅಮೆರಿಕನ್ ಜರ್ನಲಿಸ್ಟ್ ಬಂದು ಗಾಂಧಿಯನ್ನು 'What is your Agenda?' ಅಂತ ಕೇಳುತ್ತಾನೆ. ಏನು ಹೇಳಬೇಕು ಗಾಂಧಿ - 'ರಾಷ್ಟ್ರದಲ್ಲಿ ರಾಜಕೀಯ ಸ್ಥಿತ್ಯಂತರ ನನ್ನ ಅಜೆಂಡಾ' ಅಂತ ಹೇಳಬೇಕು. ಅವನ ಆಶ್ಚರ್ಯಕ್ಕೆ ಗಾಂಧಿ ಅದನ್ನು ಹೇಳುವುದೇ ಇಲ್ಲ. 'My agendas are three. ಮೊದಲನೆಯದು ಹಿಂದೂ ಮುಸ್ಲಿಂ ಯೂನಿಟಿ, ಎರಡನೆಯದು removal of untouchability, ಮೂರನೆಯದು 'ಸ್ವದೇಶಿ'. ನಾಲ್ಕನೆಯದು ಯಾವುದು? ಅವರು ಹೇಳುವುದೇ ಇಲ್ಲ. ಯಾಕೆಂದರೆ, ಇವು ಮೂರೂ ಈಡೇರಿದರೆ ಬ್ರಿಟಿಷರಿಗೆ ಇಲ್ಲಿ ಇರುವ ಅಗತ್ಯವೇ ಇಲ್ಲ."

ಇದೇ ಪುಸ್ತಕದಲ್ಲಿರುವ ಎಂ.ವಿ.ಕಾಮತರ ಒಂದು ನೆನಪನ್ನೂ, ಇನ್ನೊಂದು ಅವರು ನಿರೂಪಿಸಿರುವ ಗಾಂಧೀಜಿ ಬದುಕಿನ ಘಟನೆಯನ್ನೂ ಇಲ್ಲಿ ಉಲ್ಲೇಖಿಸಲೇ ಬೇಕು:

" 1932ರಲ್ಲಿ ಗಾಂಧಿ ಉಪ್ಪಿನ ಸತ್ಯಾಗ್ರಹ ಆರಂಭಿಸಿದ ಕಾಲ. ಮಂಗಳೂರಿನ ಸೇಂಟ್ ಅಲೋಷಿಯಷ್ ಕಾಲೇಜಿನಲ್ಲಿ ಸತ್ಯಾಗ್ರಹಿಯಾಗಿದ್ದ ಉಪನ್ಯಾಸಕನೊಬ್ಬನಿದ್ದ. ಒಂದು ಸಂಜೆ ಆತ ತನ್ನಂತಹ ಹಲವು ಸತ್ಯಾಗ್ರಹಿಗಳ ಜೊತೆಯಲ್ಲಿ ಒಂದು ಕೈಯಲ್ಲಿ ಉಪ್ಪು ಮತ್ರೊಂದು ಕೈಯಲ್ಲಿ ಕಾಂಗ್ರೆಸ್ ಧ್ವಜ ಹಿಡಿದು ಮೆರವಣಿಗೆಯಲ್ಲಿ ಘೋಷಣೆ ಕೂಗುತ್ತಾ ನಡೆದಿದ್ದ. ಆತನನ್ನು ತಡೆದ ಪೋಲಿಸರು ಕೈಗಳಲಿದ್ದುದನ್ನು ಬಿಸಾಕುವಂತೆ ಆಗ್ರಹಿಸಿದರು. ಆತ ನಿರಾಕರಿಸಿದ. ಪೋಲೀಸರು ಆತನ ಎರಡೂ ಕೈಗಳನ್ನು ಲಾಠಿಗಳಿಂದ ಹೇಗೆ ಚಚ್ಚಿ ಹಾಕಿದರೆಂದರೆ ಅವನ ಎರಡೂ ಕೈಗಳು ಬರೀ ಮಾಂಸದ ಮುದ್ದೆಯಾಗಿ ಹೋದವು. ಆತ ಪ್ರಜ್ಞೆ ತಪ್ಪಿ ರಸ್ತೆಯ ಮೇಲೆ ಕುಸಿದು ಬಿದ್ದಾಗಲೂ ಆತನ ಕೈಗಳು ಉಪ್ಪು ಮತ್ತು ಧ್ವಜವನ್ನು ಬಲವಾಗಿ ಹಿಡಿದೇ ಇದ್ದವು.

.......ಒಂದು ದಶಕದ ನಂತರ 1942ರಲ್ಲಿ ಗಾಂಧೀಜಿ 'ಭಾರತ ಬಿಟ್ಟು ತೊಲಗಿ' ಚಳುವಳಿಗೆ ಕರೆ ಕೊಟ್ಟರು. ಆಗಲೂ ಈ ಉಪನ್ಯಾಸಕ ಇದರಲ್ಲಿ ಭಾಗವಹಿಸಿದ. ಈ ಸಂದರ್ಭದಲ್ಲಿ ಪೋಲೀಸರು ಆತನ ಕಾಲುಗಳನ್ನು ಅಕ್ಷರಶಃ ಮುರಿದು ಹಾಕಿದರು. ಆಗಲೂ ಆತ 'ಮಹಾತ್ಮ ಗಾಂಧಿ ಕಿ ಜೈ! ಇನ್ಕ್ವಿಲಾಬ್ ಜಿಂದಾಬಾದ್' ಎಂದು ಕೂಗುತ್ತಲೇ ಇದ್ದ.

ಎಷ್ಟೋ ವರ್ಷಗಳ ನಂತರ ನಾನು 1990ರಲ್ಲಿ ನನ್ನ ಅಂಕಣ ಬರಹವೊಂದರಲ್ಲಿ ಇದನ್ನೆಲ್ಲ ನೆನಪು ಮಾಡಿಕೊಂಡು ಬರೆದಿದ್ದೆ. ಮಾರನೆಯ ದಿನ ನನಗೊಂದು ದೂರವಾಣಿ ಕರೆ ಬಂತು. ನಾನು ಯಾರ ಬಗ್ಗೆ ಬರೆದಿದ್ದನೋ ಆತನ ಕರೆ ಅದು. ಆತ ತಾನು ಬಂದು ನನ್ನನ್ನುಭೇಟಿ ಮಾಡಬಹುದೇ ಎಂದು ಕೇಳಿದ. ನನಗೋ ರೋಮಾಂಚನ. ಮಾರನೆಯ ಸಂಜೆ 5 ಘಂಟೆಗೆ ಬರಲು ಹೇಳಿದೆ ಹಾಗೂ ಆ ನನ್ನ ಅತಿಥಿಯನ್ನು ಸ್ವಾಗತಿಸಲು ನನ್ನ ಗೆಳೆಯರಿಗೆಲ್ಲ ಹೇಳಿ ವ್ಯಾಪಕ ಸಿದ್ಧತೆ ನಡೆಸಿದೆ. ಮಾರನೆಯ ದಿನ ಸಂಜೆ ನಾನು ನನ್ನ ಅತಿಥಿಯನ್ನು ಸಂಭ್ರಮದಿಂದ ಬರಮಾಡಿಕೊಳ್ಳಲು ಮಹಡಿಯಲ್ಲಿದ್ದ ನನ್ನ ಮನೆಯಲ್ಲಿ ಕುತೂಹಲದಿಂದ ಕಾಯುತ್ತಿದ್ದಾಗ ಕರೆಗಂಟೆಯ ಶಬ್ದವಾಯಿತು. ಬಾಗಿಲು ತೆಗೆದರೆ, ಮಹಿಳೆಯೊಬ್ಬರು ಬಾಗಿಲಲ್ಲಿ ನಿಂತಿದ್ದರು. ಅವರು 'ಕಾಮತರೆ, ದಯವಿಟ್ಟು ಕೆಳಗೆ ಬರುವಿರಾ? ನಿಮ್ಮ ಧೀರ ಅತಿಥಿ ಕೆಳಗೆ ಕಾಯುತ್ತಿದ್ದಾರೆ' ಎಂದರು. ನಾನು ಗಾಬರಿಯಾಗಿ 'ಅವರಿಗೆ ಮೇಲೆ ಬರಲು ಸಾಧ್ಯವಿಲ್ಲವೇ?' ಎಂದು ಕೇಳಿದೆ. ಅದಕ್ಕೆ ಆಕೆ 'ಕ್ಷಮಿಸಿ. ಅವರಿಗೆ ಮೆಟ್ಟಿಲು ಹತ್ತುವುದಿರಲಿ, ಏನನ್ನೂ ಆಧಾರವಾಗಿ ಹಿಡಿದುಕೊಳ್ಳಲೂ ಸಾಧ್ಯವಾಗುವುದಿಲ್ಲ. ಅವರು ಸರ್ಕಾರಿ ಅಂಬುಲೆನ್ಸ್ನಲ್ಲಿ ಗಾಲಿ ಕುರ್ಚಿಯಲ್ಲಿ ಕೂತು ನಿಮ್ಮನ್ನು ಕಾಣಲು ಬಂದಿದ್ದಾರೆ' ಎಂದರು.

ನಾನು ನನ್ನ ಬಾಲ್ಯ ಕಾಲದ ನಾಯಕನನ್ನು ಈಗ ಕಣ್ಣಾರೆ ಮತ್ತೆ ನೋಡಲು ದಡ ದಡನೆ ಮೆಟ್ಟಿಲಿಳಿದು ಹೋದೆ. ಮಹಿಳೆ ಹೇಳಿದ್ದು ನಿಜ. ನನ್ನ ನಾಯಕ ಒಂದಿಷ್ಟೂ ಚಲನೆ ಸಾಧ್ಯವಾಗದ ಸ್ಥಿತಿಯಲ್ಲಿದ್ದ. ಆತ. 'ಕಾಮತರೇ, ದಯವಿಟ್ಟು ನನ್ನನ್ನು ಕ್ಷಮಿಸಿ. ನಾನು ಮೇಲೆ ಬರಲಾರೆ. ಆರು ದಶಕಗಳ ಹಿಂದೆ ನಾನು ಮಾಡಿದ್ದನ್ನು ನೆನಪಿಸಿಕೊಂಡು ನೀವು ಬರೆದಿದ್ದುಕ್ಕಾಗಿ ನಿಮಗೆ ಕೃತಜ್ಞತೆ ಹೇಳಲಷ್ಟೇ ಬಂದದ್ದು ನಾನು. ನಿಮ್ಮ ಈ ಬರವಣಿಗೆಗಿಂತ ದೊಡ್ಡ ಗೌರವ ನನಗೆ ಇನ್ನಾವುದಿದೆ? ನನಗಿನ್ನೇನೂ ಬೇಡ' ಎಂದು ಹೊರಟೇ ಬಿಟ್ಟರು. ನಾನು ಕಣ್ಣೀರಿನಿಂದ ಒದ್ದೆಯಾಗಿ ನಿಂತಿದ್ದೆ."

ಕಾಮತರು ಉಲ್ಲೇಖಿಸಿರುವ ಗಾಂಧಿ ಬದುಕಿನ ಘಟನೆ ಎಂದರೆ:

"ಗಾಂಧಿ ದ. ಆಫ್ರಿಕಾದಲ್ಲಿದ್ದಾಗ ಅಲ್ಲಿನ ಭಾರತೀಯರ ನಾಗರಿಕ ಹಕ್ಕುಗಳಿಗಾಗಿ ದೊಡ್ಡ ಹೋರಾಟವನ್ನೇ ಕೈಗೆತ್ತಿಕೊಂಡಿದ್ದರು. ಆ ಸಂದರ್ಭದಲ್ಲಿ ದ. ಆಫ್ರಿಕಾದ ಆಗಿನ ಮುಖ್ಯಸ್ಥ ಜ|| ಸ್ಮಟ್ಸ್ ಅವರನ್ನು ಭೇಟಿಯಾಗಬೇಕಾದ ಸಂದರ್ಭವೊಂದರಲ್ಲಿ ಅವರು 'ನಿಮ್ಮ ಸರ್ಕಾರದ ವಿರುದ್ಧ ಹೋರಾಡಿಯೇ ತೀರುತ್ತೇನೆ' ಎಂದು ಸ್ಪಷ್ಟ ನಿರ್ಧಾರದ, ಆದರೆ ಪ್ರಶಾಂತ ಧ್ವನಿಯಲ್ಲಿ ಹೇಳಿದಾಗ, ಜ|| ಸ್ಮಟ್ಸ್ 'ಇದನ್ನು ಹೇಳಲು ಇಲ್ಲಿಗೆ ಬಂದಿರಾ?' ಎಂದು ಸಿಟ್ಟು ಮತ್ತು ಗಾಬರಿಗಳಲ್ಲಿ ಕೇಳಿದರು. ಗಾಂಧಿ ಅದಕ್ಕೆ ಉತ್ತರ ಕೊಡುವ ಮುನ್ನವೇ, ಅವರಿಗೆ ಪರೋಕ್ಷವಾಗಿ ಇನ್ನು ನೀವು ಹೋಗಬಹುದು ಎನ್ನುವುದನ್ನು ಸೂಚಿಸುವಂತೆ 'ಇನ್ನೇನಾದರೂ ಇದೆಯಾ ನೀವು ಹೇಳುವುದು?' ಎಂದರು. 'ಹೌದು' ಎಂದ ಗಾಂಧಿ ಅವರಿಗೆ ಹೇಳಿದ್ದು: 'ಈ ಹೋರಾಟದಲ್ಲಿ ಗೆಲ್ಲುವುದು ನಾನೇ!' ಕುತೂಹಲ ಚಕಿತರಾದ ಸ್ಮಟ್ಸ್, 'ಅದು ಹೇಗೆ ಸಾಧ್ಯ?' ಎಂದು ವಿಚಾರಿಸಿಕೊಳ್ಳಲು ಯತ್ನಿಸಿದರು. ತಕ್ಷಣವೇ ಗಾಂಧಿ ಉತ್ತರಿಸಿದರು: 'ನಿಮ್ಮ ಸಹಾಯದಿಂದ !'. ಗಾಂಧಿ ಮಾತ್ರ ಇಂತಹ ಉತ್ತರ ಕೊಡಬಲ್ಲವರಾಗಿದ್ದರು."

ಅದೇನೇ ಇರಲಿ, ಗಾಂಧಿ ಮಾತಿನಿಂದ ಜ|| ಸ್ಮಟ್ಸ್ ಮೂರ್ಛೆ ಹೋಗುವುದೊಂದು ಬಾಕಿ ಇತ್ತೇನೋ! ಇದೇ ಪುಸ್ತಕದಲ್ಲಿ ಗಾಂಧಿಯವರ 'ಹಿಂದ್ ಸ್ವರಾಜ್' ಕುರಿತಂತೆ ಒಂದು ಚರ್ಚೆಯೂ ಇದೆ. ಅದರಲ್ಲಿ ಗೆಳೆಯ ಪಟ್ಟಾಭಿರಾಮ ಸೋಮಯಾಜಿ ಹೇಳುವ ಅಹಿಂಸೆ ಕುರಿತ ಗಾಂಧಿ ಸಂಕಥನ ಹೀಗಿದೆ:

"ಭಾರತಕ್ಕೆ ಇನ್ನೇನು ಸ್ವಾತಂತ್ರ್ಯ ಬರುವ ಸಂದರ್ಭದಲ್ಲಿ ಒಬ್ಬ ಅಮೆರಿಕನ್ ಪತ್ರಕರ್ತ ಗಾಂಧಿಯ ಸಂದರ್ಶನ ಮಾಡುತ್ತಾನೆ. ಆಗ ಆತ ಗಾಂಧಿಗೆ ಕೇಳಿದ ಒಂದು ಪ್ರಶ್ನೆ: 'ಸ್ವತಂತ್ರ ಭಾರತಕ್ಕೆ ನಿಮ್ಮ ಮೊದಲ ಅಜೆಂಡಾ ಏನು? ಅಂತ. ಗಾಂಧಿ ಹೇಳುತ್ತಾರೆ, 'ಲ್ಯಾಂಡ್ ರಿಫಾರ್ಮ್' ಅಂತ. ಆ ಅಮೆರಿಕಾದ ಪತ್ರಕರ್ತನಿಗೆ ದಿಗಿಲಾಗುತ್ತದೆ. 'ಭೂಸುಧಾರಣೆಯನ್ನು ಜಾರಿಗೆ ತರಲು ಹೊರಟರೆ, ಇಡೀ ಭಾರತ ಕುರುಕ್ಷೇತ್ರವಾಗಿ ರಣರಂಗವಾಗುವುದಿಲ್ಲವೇ? ಇದು ನಿಮ್ಮ ಅಹಿಂಸಾತ್ಮಕ ತತ್ವಕ್ಕೆ ವಿರೋಧವಲ್ಲವೇ?' ಅಂತ ಆತನ ಪ್ರಶ್ನೆ. ಆಗ ಗಾಂಧಿ, 'ಎಷ್ಟು ದಿವಸ ನಡೆಯಬಹುದು, ಹಿಂಸೆ?' ಹದಿನೈದು ದಿವಸ ನಡೆಯಬಹುದೋ' ಅಂತಾರೆ. ಆ ಮೇಲೆ ಆ ಪತ್ರಕರ್ತ ಕೇಳುತ್ತಾನೆ. 'ಜಮೀನ್ದಾರರು ಬಹಳ ಭೀಕರ ಹಿಂಸೆ ಮಾಡುವ ಸಾಮಥ್ರ್ಯವುಳ್ಳವರು. ಅವರನ್ನು ಎದುರು ಹಾಕಿಕೊಳ್ಳುವುದು ಸಾಧ್ಯವೋ ಅಂತ. ಅದಕ್ಕೆ ಗಾಂಧಿ, 'ಅವರೂ ಯುದ್ಧವನ್ನು ಬಿಟ್ಟು ಪಲಾಯನ ಮಾಡುವ ಮೂಲಕ ಸಹಾಯ ಮಾಡಬಹುದು!' ಅಂತ ಪ್ರತಿಕ್ರಿಯಿಸುತ್ತಾರೆ. ಇದನ್ನು ಯಾಕೆ ಪ್ರಸ್ತಾಪ ಮಾಡಿದೆ ಎಂದರೆ, ಗಾಂಧಿಯ ಅಹಿಂಸೆಯ ಕಲ್ಪನೆಯಲ್ಲಿ ಈ ರೀತಿಯ ಅನಿವಾರ್ಯವಾದ, ನಿವಾರಿಸಿಕೊಳ್ಳಬಹುದಾದ ಹಿಂಸೆಯನ್ನು ಒಳಗೊಳ್ಳಬಹುದಾದ ಸಾಧ್ಯತೆ ಇದೆ. ಅಹಿಂಸೆ ಅನ್ನುವುದು ಕೇವಲ ಎಡಗೆನ್ನೆಗೆ ಹೊಡೆದರೆ ಬಲಗೆನ್ನೆ ಒಡ್ಡುವುದು ಎಂಬ ಮೊದ್ದುತನವಲ್ಲ. ಗಾಂಧಿಯಲ್ಲಿ ದೊಡ್ಡ ದರ್ಶನ ಅದು. ಅವರು ಹೇಳುತ್ತಾರೆ: 'ಯಾರೋ ಒಬ್ಬನ ಹೆಗಲ ಮೇಲೆ ಕೂತು ಸವಾರಿ ಮಾಡಿಕೊಂಡೇ ಜೀವನ ಮಾಡುವುದು ಅಭ್ಯಾಸ ಆಗಿರುವವನಿಗೆ ಒಂದು ದಿನ ಹೊತ್ತುಕೊಂಡಿರುವವನು, ಇನ್ನು ನನ್ನ ಕೈಯಲ್ಲಿ ಆಗುವುದಿಲ್ಲ ಅಂತ ಹೇಳಿ ಕೂತವನನ್ನು ಕೆಳಗೆ ಹೊತ್ತು ಹಾಕುತ್ತಾನೆ. ಬಿದ್ದವನಿಗೆ ತರಚು ಗಾಯಗಳಾಗುತ್ತವೆ. ಅದನ್ನೇ ಹಿಂಸೆ ಎಂದು ಕರೆದರೆ ಹೇಗೆ?' ಅಂತ ಗಾಂಧಿ ಕೇಳುತ್ತಾರೆ. ಈ ದರ್ಶನ ಗಾಂಧಿಗೆ ಸಾಧ್ಯವಾಗಿರುವುದು ಹಿಂಸಾಪಂಥದ ಜೊತೆಗೆ ಅವರು ನಡೆಸಿದ ವಾಗ್ವಾದದ ಮೂಲಕ."
*
ಇನ್ನು ಮುಂದಿರುವುದೆಲ್ಲಾ, ಗಾಂಧಿ ಬರಹಗಳಿಂದಲೇ ಅವರ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಆಯ್ದು ಪ್ರಕಟಿಸಿರುವುದು:

ದರ್ಬಾನ್, 1898:

ಮನೆಯನ್ನು ಪಾಶ್ಚಿಮಾತ್ಯ ಮಾದರಿಯಲ್ಲಿ ಕಟ್ಟಲಾಗಿತ್ತು. ಶೌಚದ ನೀರು ಹೊರ ಹೋಗಲು ದಾರಿಯೇ ಇಲ್ಲವಾಗಿತ್ತು. ಹಾಗಾಗಿ ಪ್ರತಿಯೊಂದು ಕೊಠಡಿಯಲ್ಲೂ ಒಂದು ಮಲದ ಮಡಕೆ ಇಡಲಾಗಿತ್ತು. ಇವುಗಳನ್ನು ತೊಳೆಯುವ ಕೆಲಸವನ್ನು ಸೇವಕರಿಗೆ ಅಥವಾ ಭಂಗಿಗಳಿಗೆ ಬಿಡದೆ, ನಾವೇ ಮಾಡಿಕೊಳ್ಳುತ್ತಿದ್ದೆವು. ಬಹಳ ದಿನಗಳಿಂದ ಮನೆಯಲ್ಲೇ ಇದ್ದು ನಮ್ಮವರೇ ಆದವರು ತಂತಮ್ಮ ಮಡಕೆಗಳನ್ನು ತಾವೇ ಸ್ವಚ್ಛಗೊಳಿಸಿಕೊಳ್ಳುತ್ತಿದ್ದರು. ಆದರೆ ಹೊಸದಾಗಿ ಬಂದ ಕ್ರಿಶ್ಚಿಯನ್ ಗೆಳೆಯರೊಬ್ಬರ ಮಲಗುವ ಕೋಣೆಯನ್ನು ಸ್ವಚ್ಛಗೊಳಿಸುವುದು ನಮ್ಮದೇ ಕರ್ತವ್ಯವಾಗಿತ್ತು. ಇತರರ ಮಲದ ಮಡಕೆಗಳನ್ನು ಸ್ವಚ್ಛಗೊಳಿಸಲು ಅಷ್ಟೇನೂ ಹಿಂಜರಿಯದಿದ್ದ ನನ್ನ ಪತ್ನಿಗೆ ಈ ಅನ್ಯಮತದ ಪಂಚಮನ ಮಡಕೆಯನ್ನು ಸ್ವಚ್ಛಗೊಳಿಸುವುದು ತನಗೆ ಆಗದ ಕೆಲಸವಾಗಿ ಕಂಡಿತು. ತಾನು ಮಾಡುವುದಿರಲಿ, ನಾನು ಮಾಡುವುದೂ ಆಕೆಗೆ ಸಹ್ಯವಾಗಲಿಲ್ಲ. ಕೊನೆಗೆ ಆಕೆಯೇ ಅಂದು ನನ್ನನ್ನು ಶಪಿಸುತ್ತಾ, ದುಃಖದಿಂದ ಕೆಂಪಾದ ಕಣ್ಣುಗಳಿಂದ ಅಶ್ರುಧಾರೆ ಹರಿಸುತ್ತಾ ಕೈಯಲ್ಲಿ ಮಡಕೆ ಹಿಡಿದು ಏಣಿ ಇಳಿಯುತ್ತಿದ್ದ ದೃಶ್ಯ ಇನ್ನೂ ನನಗೆ ಕಣ್ಣಿಗೆ ಕಟ್ಟಿದಂತಿದೆ.

ಆಕೆ ಮಡಕೆಯನ್ನು ಹಿಡಿದು ಹೊರಟಿವುದರಷ್ಟರಿಂದಲೇ ನನಗೆ ಸಮಾಧಾನವೆಂಬುದೇನೂ ಉಂಟಾಗಲಿಲ್ಲ. ಆಕೆ ಅದನ್ನು ಸಂತೋಷದಿಂದ ಮಾಡಬೇಕೆಂದು ನಾನು ಬಯಸಿದ್ದೆ. ಹಾಗಾಗಿ ನಾನು ದನಿ ಎತ್ತರಿಸಿ ಕೂಗಿ ಹೇಳಿದೆ: 'ಈ ತಲೆ ಹರಟೆಯನ್ನು ನನ್ನ ಮನೆಯಲ್ಲಿ ಸಹಿಸಲಾರೆ'

ನನ್ನೀ ಮತುಗಳು ಆಕೆಯನ್ನು ಬಾಣದಂತೆ ಚುಚ್ಚಿದವು. ಅವಳು ನನ್ನತ್ತ ತಿರುಗಿ ಕಿರುಚಿ ಹೇಳಿದಳು: 'ನಿಮ್ಮ ಮನೆಯನ್ನು ನೀವೇ ಇಟ್ಟುಕೊಳ್ಳಿ. ನಾನು ಹೋಗುವೆ'. ನನ್ನ ಮೈ ಮೇಲಿನ ಪ್ರಜ್ಞೆ ಹಾರಿ ಹೋಯಿತು. ನನ್ನಲ್ಲಿ ಕರುಣೆ ಎಂಬುದು ಬತ್ತಿ ಹೋಯಿತು. ನಾನು ಅವಳ ಕೈ ಹಿಡಿದು, ಆ ಅಸಹಾಯಕ ಹೆಂಗಸನ್ನು ಹೊರ ದಬ್ಬಲು ಏಣಿಯ ಎದುರಿಗಿದ್ದ ಬಾಗಿಲ ಕಡೆ ಧಾವಿಸಿದೆ. ಅವಳ ಕೆನ್ನೆಗಳ ಮೇಲೆ ಧಾರಾಕಾರವಾಗಿ ಕಣ್ಣೀರು ಸುರಿಯುತ್ತಿತ್ತು. ಆಕೆ ನನ್ನತ್ತ ಮತ್ತೆ ಕಿರುಚಿ ಹೇಳಿದಳು: 'ನಿಮಗೆ ನಾಚಿಕೆಯಾಗುವುದಿಲ್ಲವೇ? ಎಲ್ಲಿಗೆ ಹೋಗಲಿ ನಾನು? ಯಾರಿದ್ದಾರೆ ನನ್ನವರೆಂಬುವರು ಇಲ್ಲಿ? ನಿಮ್ಮ ಹೆಂಡತಿಯಾದ ಮಾತ್ರಕ್ಕೆ ನಿಮ್ಮ ಎಲ್ಲ ದುಂಡಾವರ್ತಿಗಳನ್ನು ಸಹಿಸಿಕೊಳ್ಳಬೇಕೇ? ಮೊದಲು ಬಾಗಿಲು ಹಾಕಿ. ನನ್ನೊಂದಿಗೆ ಸರಿಯಾಗಿ ನಡೆದುಕೊಳ್ಳುವುದನ್ನು ಕಲಿಯಿರಿ.'
ನಾನು ಏನೂ ಆಗದವನಂತೆ ದಿಟ್ಟನಾಗಿ ನಿಂತಿದ್ದರೂ, ಒಳಗೆ ನಿಜವಾಗಿಯೂ ನಾಚಿಕೆ ಆರಂಭವಾಗಿತ್ತು. ಬಾಗಿಲು ಮುಚ್ಚಿದೆ. ನನ್ನ ಹೆಂಡತಿ ನನ್ನನ್ನು ಬಿಟ್ಟು ಇರಲಾರದವಳಾದರೆ, ನಾನೂ ಅವಳನ್ನು ಬಿಟ್ಟ ಇರಲಾರೆ.

ಕಲ್ಕತ್ತಾ, ಡಿಸೆಂಬರ್, 1901-02
ಕಾಂಗ್ರೆಸ್ ಅಧಿವೇಶನ ಆರಂಭವಾಗಲು ಇನ್ನೂ ಎರಡು ದಿನಗಳು ಬಾಕಿ ಇದ್ದವು. ಸ್ವಲ್ಪ ಅನುಭವ ಗಳಿಸಲು ನಾನು ಕಾಂಗ್ರೆಸ್ ಕಛೇರಿಯಲ್ಲಿ ಸೇವೆ ಸಲ್ಲಿಸಲು ನಿಶ್ಚಯಿಸಿದ್ದೆ. ಬಾಬು ಭೂಪೇಂದ್ರನಾಥ ಬಸು ಹಾಗೂ ಸಾರ್ಜೆಂಟ್ ಘೋಷಾಲ್ ಕಾರ್ಯದರ್ಶಿಗಳಾಗಿದ್ದರು. ನಾನು ಭೂಪೇನ್ ಬಾಬು ಬಳಿ ಹೋಗಿ ನನ್ನ ಉದ್ದೇಶವನ್ನು ತಿಳಿಸಿದೆ. ಅವರು ನನ್ನನ್ನೊಮ್ಮೆ ನೋಡಿ, "ನನ್ನಬಳಿ ಕೆಲಸವಿಲ್ಲ. ಬಹುಶಃ ಘೋಷಾಲ್ ಬಾಬು ನಿಮಗೆ ಸ್ವಲ್ಪ ಕೆಲಸ ಕೊಡಬಹುದು. ಅವರನ್ನು ಕಾಣಿರಿ" ಎಂದರು. ನಾನು ಅವರ ಬಳಿಗೆ ಹೋದೆ. ಅವರು ನನ್ನನ್ನು ಮೇಲಿನಿಂದ ಕೆಳಗಿನವರೆಗೆ ಒಮ್ಮೆ ನೋಡಿ ಮುಗುಳ್ನಗುತ್ತಾ, 'ನಿಮಗೆ ನಾನು ಗುಮಾಸ್ತ ಮಾಡುವಂತಹ ಕೆಲಸ ಕೊಡಬಲ್ಲೆ. ಮಾಡುವಿರಾ?' ಎಂದು ಕೇಳಿದರು.

ನಾನು, "ಖಂಡಿತ. ನನ್ನ ಕೈಯಿಂದ ಆಗದ ಕೆಲಸದ ಹೊರತಾಗಿ ಯಾವ ಕೆಲಸವನ್ನಾದರೂ ಮಾಡಲೆಂದೇ ನಾನಿಲ್ಲಿ ಬಂದಿರುವೆ" ಎಂದೆ.

.....ಸಾ|| ಘೋಷಾಲ್ ತಮ್ಮ ಅಂಗಿಯ ಗುಂಡಿಗಳನ್ನು ತಮ್ಮ ಸೇವಕನಿಂದ ಹಾಕಿಸಿಕೊಳ್ಳುತ್ತಿದ್ದರು. ಹಿರಿಯರ ಬಗೆಗೆ ನನಗೆ ಯಾವಾಗಲೂ ಗೌರವವಿದ್ದುದರಿಂದ, ನಾನು ಆ ಸೇವಕನ ಕೆಲಸ ಮಾಡುವುದಾಗಿ ಹೇಳಿದೆ. ನನಗೆ ಅದು ಇಷ್ಟದ ಕೆಲಸವೂ ಆಗಿತ್ತು. ಇದು ಗೊತ್ತಾದ ಮೇಲೆ ಅವರು ನನ್ನಿಂದ ಇಂತಹ ಅನೇಕ ವೈಯುಕ್ತಿಕ ಸೇವೆಗಳನ್ನು ಪಡೆಯಲು ಹಿಂಜರಿಯಲಿಲ್ಲ. ಬದಲಾಗಿ ಸಂತೋಷ ಪಟ್ಟರು. ತಮ್ಮ ಗುಂಡಿ ಹಾಕಲು ಹೇಳುತ್ತಾ ಅವರು, "ನೋಡಿ, ಕಾಂಗ್ರೆಸ್ ಕಾರ್ಯದರ್ಶಿಗೆ ತನ್ನ ಅಂಗಿಯ ಗುಂಡಿಗಳನ್ನು ಹಾಕಿಕೊಳ್ಳಲೂ ಪುರುಸೊತ್ತಿಲ್ಲದಾಗಿದೆ. ಯಾವಾಗ ನೋಡಿದರೂ ಏನಾದರೂ ಕೆಲಸವಿರುತ್ತದೆ" ಎನ್ನುತ್ತಿದ್ದರು. ಸಾ|| ಘೋಷಾಲರ ಈ ಭೋಳೆತನ ನನ್ನಲ್ಲಿ ಕೊಂಚ ನಗು ಉಕ್ಕಿಸುತ್ತಿತಾದರೂ, ಈ ತರಹದ ಸೇವೆ ಪಡೆಯುತ್ತಿದ್ದ ಕಾರಣದಿಂದಾಗಿ ಅವರ ಬಗ್ಗೆ ನನಗೆ ಬೇಸರವೇನೂ ಆಗಲಿಲ್ಲ.

ಕಾಶಿ, ಫೆಬ್ರವರಿ, 1902
ನಾನು ದರ್ಶನಕ್ಕಾಗಿ ಕಾಶಿ ವಿಶ್ವನಾಥ ಮಂದಿರಕ್ಕೆ ಹೋಗಿದ್ದೆ.... ದಕ್ಷಿಣೆ ಕೊಡಲು ಮನಸ್ಸಿಲ್ಲದಿದ್ದರೂ, ಮೂರು ಕಾಸು ತಟ್ಟೆಗೆ ಹಾಕಿದೆ. ಪಂಡನಿಗೆ ಸಿಟ್ಟು ಬಂದು ಅದನ್ನು ನನ್ನತ್ತ ಎಸೆದು ಬಿಟ್ಟ. ಅಲ್ಲದೆ, 'ನನಗೆ ನೀನು ಮಾಡಿದ ಅವಮಾನ ನಿನ್ನನ್ನು ನೇರವಾಗಿ ನರಕಕ್ಕೇ ಒಯ್ಯುತ್ತದೆ' ಎಂದು ಶಪಿಸಿದ. ಇದನ್ನು ಮನಸ್ಸಿಗೆ ಹಚ್ಚಿಕೊಳ್ಳದ ನಾನು, 'ನನ್ನ ವಿಧೀ ಹೇಗೇ ಇರಲಿ ಮಹಾರಾಜ್, ನೀವು ಬಳಸುತ್ತಿರುವ ಭಾಷೆ ನಿಮಗೆ ಶೋಭಿಸುವುದಿಲ್ಲ' ಎನ್ನುತ್ತಾ, 'ನಿಮಗೆ ಇಷ್ಟವಾದರೆ ಈ ಮೂರು ಕಾಸು ತೆಗೆದುಕೊಳ್ಳಿ. ಇಲ್ಲದೇ ಹೋದರೆ, ಅದನ್ನೂ ನೀವು ಕಳೆದುಕೊಳ್ಳುತ್ತೀರಿ' ಎಂದು ಎಚ್ಚರಿಸಿದೆ.

'ಇಲ್ಲಿಂದ ಮೊದಲು ತೊಲಗು. ನಿನ್ನ ಮೂರು ಕಾಸು ಯಾವನಿಗೆ ಬೇಕು!' ಎಂದು ಕೂಗಿದ ಪಂಡ ನನ್ನಮೇಲೆ ಕೆಟ್ಟ ಬೈಗುಳಗಳ ಸುರಿಮಳೆಯನ್ನೇ ಕರೆದ.

ನಾನು ಅವನು ಎಸೆದಿದ್ದ ಮೂರು ಕಾಸನ್ನು ಎತ್ತಿಕೊಂಡು, 'ಬ್ರಾಹ್ಮಣನಿಗೆ ಆದ ನಷ್ಟ ನನಗಾದ ಉಳಿತಾಯ...' ಎಂದು ಉಲ್ಲಾಸದಿಂದ ನನ್ನ ದಾರಿ ಹಿಡಿದೆ.

ಜೋಹಾನ್ಸ್ಬರ್ಗ, ಫೆಬ್ರುವರಿ2, 1908

ಮಿಲಿ ಗ್ರಹಾಂ ಪೊಲಾಕ್: ಅವನಿಗೆ ಏನು ಬೇಕಂತೆ? ಏನಾದರು ವಿಶೇಷ?

ಮೋಹನದಾಸ ಕರಮಚಂದ ಗಾಂದಿ : ಹೌದು, ಅವನು ನನ್ನನ್ನು ಕೊಲ್ಲ ಬಯಸಿದ್ದ.

ಪೊ: ಕೊಲ್ಲುವುದು? ನಿನ್ನನ್ನು ಕೊಲ್ಲುವುದು? ಭಯಂಕರ! ಅವನಿಗೇನಾದರೂ ಹುಚ್ಚು ಹಿಡಿದಿದೆಯೇ?

ಗಾ: ಇಲ್ಲ, ನಾನು ನಮ್ಮ ಜನತೆಗೆ ಸಂಬಂಧಪಟ್ಟಂತೆ ದೇಶದ್ರೋಹದ ಕೆಲಸ ಮಾಡುತ್ತಿದ್ದೇನೆ ಹಾಗೂ ಸರ್ಕಾರದಲ್ಲಿ ತಲೆ ಹಾಕಿ ಅವರ ವಿರುದ್ಧವೇ ಕೆಲಸ ಮಾಡುತ್ತ ಅವರ ಸ್ನೇಹಿತನಂತೆ, ನಾಯಕನಂತೆ ನಟಿಸುತ್ತಿದ್ದೇನೆ ಎಂದು ಅವನು ಭಾವಿಸಿದ್ದಾನೆ.

ಪೊ: ಅದೇನೇ ಇರಲಿ, ಅದು ದುಷ್ಟತನ ಹಾಗೂ ಭಯಾನಕ. ಅಂತಹ ಮನುಷ್ಯನನ್ನು ಹಾಗೇ ಬಿಡುವುದು ಕ್ಷೇಮವಲ್ಲ. ಆತನನ್ನು ಬಂಧಿಸಬೇಕು. ಅವನನ್ನು ಹಾಗೇ ಹೋಗಲು ಏಕೆ ಬಿಟ್ಟೆ? ಆತ ನಿಜವಾಗಿಯೂ ಹುಚ್ಚನೇ ಇರಬೇಕು.

ಗಾ: ಇಲ್ಲ, ಆತ ಹುಚ್ಚನಲ್ಲ. ತಪ್ಪು ತಿಳುವಳಿಕೆಯವನಷ್ಟೆ. ನೀನೇ ನೋಡಿದೆಯಲ್ಲಾ, ನಾನು ಅವನೊಂದಿಗೆ ಮಾತನಾಡಿದ ಮೇಲೆ ನನ್ನ ಮೇಲೆ ಬಳಸಲು ಇಟ್ಟುಕೊಂಡಿದ್ದ ಚೂರಿಯನ್ನು ನನಗೇ ಕೊಟ್ಟುಬಿಟ್ಟ.

ಪೊ: ಕತ್ತಲಲ್ಲಿ ಅವನು ನಿನ್ನನ್ನು ಇರಿದೇ ಬಿಡುತ್ತಿದ್ದನೇನೋ, ನಾನು....

ಗಾ: ಈ ಬಗ್ಗೆ ಇಷ್ಟೊಂದು ತಲೆ ಕೆಡಿಸಿಕೊಳ್ಳಬೇಡ. ಅವನು ನನ್ನನ್ನು ಕೊಲ್ಲಬಹುದೆಂದುಕೊಂಡಿದ್ದ. ಆದರೆ, ಅವನಿಗೆ ಆ ಧೈರ್ಯವಿರಲಿಲ್ಲ. ನಾನು ಅವನು ತಿಳಿದಷ್ಟು ಕೆಟ್ಟವನಾಗಿದ್ದರೆ, ನಾನು ನಿಜವಾಗಿಯೂ ಸಾವಿಗೆ ಅರ್ಹನೇ. ಈಗ ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಇದು ಮುಗಿದ ಅಧ್ಯಾಯ. ಆ ಮನುಷ್ಯ ನನ್ನ ಮೇಲೆ ಮತ್ತೆ ಆಕ್ರಮಣ ಮಾಡಲಾರನೆಂದೆನಿಸುತ್ತದೆ. ಅವನನ್ನು ದಸ್ತಗಿರಿ ಮಾಡಿಸಲು ನಾನೇನಾದರೂ ಯತ್ನಿಸಿದ್ದರೆ, ಅವನನ್ನು ನನ್ನ ಶತ್ರುವನ್ನಾಗಿ ಮಾಡಿಕೊಳ್ಳುತ್ತಿದ್ದೆನಷ್ಟೆ. ಆದರೆ, ಈಗವನು ನನ್ನ ಸ್ನೇಹಿತನಾಗಿದ್ದಾನೆ.

ಜೊಹಾನ್ಸ್ಬರ್ಗ್, ಮೇ 18, 1911(ಛಗನ್ ಲಾಲ್ಗೆ ಪತ್ರವೊದರಲ್ಲಿ)

ಅವನು (ಹರಿಲಾಲ್) ಸೋಮವಾರ ಸಂಜೆ ತನ್ನ ಮನಸ್ಸಿನಲ್ಲಿ ಇಟ್ಟುಕೊಂಡಿದ್ದೆಲ್ಲವನ್ನೂ ಹೊರಹಾಕಿದ. ಆತನ ಪ್ರಕಾರ ನಾನು ಎಲ್ಲ ನಾಲ್ಕು ಮಕ್ಕಳನ್ನೂ ಲೆಕ್ಕಕ್ಕೇ ಇಟ್ಟಿಲ್ಲದ ಹಾಗೆ; ಅವರ ಯಾವುದೇ ಆಶೋತ್ತರಗಳಿಗೂ ಬೆಲೆ ಕೊಡದೆ, ನಿರ್ದಯಿಯಾಗಿ ದಮನ ಮಾಡಿಟ್ಟಿದ್ದೇನೆ, ಆತ ಈ ಆಪಾದನೆಗಳನ್ನು ಸಂಕೋಚದಿಂದಲೇ, ಆದರೆ ಅತ್ಯಂತ ವಿನೀತನಾಗಿ ಮಾಡಿದ. ಈ ಸಂದರ್ಭದಲ್ಲಿ ಆತನ ಮನಸ್ಸಿನಲ್ಲಿ ಹಣದ ವಿಷಯ ಇರಲೇ ಇಲ್ಲ. ಆವನ ಮಾತುಗಳೆಲ್ಲವೂ ನನ್ನ ಸಾಮಾನ್ಯ ವರ್ತನೆಯ ಬಗ್ಗೆಯೇ ಇತ್ತು. ಇತರ ತಂದೆಯರಂತೆ ನಾನು ನನ್ನ ಮಕ್ಕಳ ಬಗ್ಗೆ ಒಂದು ಒಳ್ಳೆಯ ಮಾತಾಡಿರಲಿಲ್ಲ, ಅವರಿಗಾಗಿ ವಿಶೇಷವಾದುದೇನನ್ನೂ ಮಾಡಿರಲಿಲ್ಲ ಹಾಗೂ ಅವರು ಮತ್ತು ಅವರಮ್ಮ ನನ್ನ ಆದ್ಯತೆಯಲ್ಲಿ ಕೊನೆಯವರಾಗಿದ್ದರು ಎಂಬುದು ಅವನ ಆರೋಪವಾಗಿತ್ತು.

ಫೀನಿಕ್ಸ್, ಮೇ 1913
ದೇವದಾಸ್ ತಾನಿನ್ನು ಕದಿಯುವುದಿಲ್ಲ ಎಂದು ವಚನ ನೀಡಿದ್ದರೂ, ಇನಾಂಡ ಜಲಪಾತದ ಬಳಿ ಕದ್ದ ಸಿಹಿ ನಿಂಬೆಗಳನ್ನು ತಿಂದುಬಿಟ್ಟಿದ್ದ. ಸಿಕ್ಕಿ ಬಿದ್ದಾಗ, ತುಂಬ ಜಾಣನಂತೆ, ಬುದ್ಧಿವಂತಿಕೆಯಿಂದ ಮಾತಾಡತೊಡಗಿದ. ಇದು ನನಗೆ ನೋವನ್ನುಂಟು ಮಾಡಿತು. ಆತ ನೀಡಿದ ನೆಪವಂತೂ ನನ್ನನ್ನು ಘಾಸಿಗೊಳಿಸಿತು. ನಾನು ಯಾವಾಗಲೂ ಅವನನ್ನು ಹೊಡೆಯುತ್ತೀನೇನೋ ಎಂಬಂತೆ, ಆತ ನನ್ನಿಂದ ಏಟು ಬೀಳುವುದೆಂದು ತನ್ನ ತಪ್ಪನ್ನು ಹೇಳಿಕೊಳ್ಳಲಿಲ್ಲವೆಂದು ನುಡಿದ. ಸರಿ, ನಾನು ಅವನಿಗೆ ಬುದ್ಧಿ ಕಲಿಸಲು ನನ್ನ ಕಪಾಳಕ್ಕೇ ಹೊಡೆದುಕೊಳ್ಳಲು ನಿರ್ಧರಿಸಿ ನಾಲ್ಕಾರು ಏಟು ಹಾಕಿಕೊಂಡಾಗ ನನ್ನ ಬಗ್ಗೆಯೇ ನನಗೆ ಎಷ್ಟು ದುಃಖವಾಯಿತೆಂದರೆ, ನನಗೆ ಜೋರಾಗಿ ಅಳುವೇ ಬಂದುಬಿಟ್ಟಿತು.

ಆಗಸ್ಟ್ 10, 1920(ಕಲ್ಲೆನ್ಬ್ಯಾಕ್ಗೆ ಪತ್ರ)
.... ನಾನೀಗ ನನ್ನೊಡನೆ ಆಗಾಗ್ಗೆ ಪ್ರಯಾಣ ಮಾಡುವ ಮಹಿಳೆಯೊಬ್ಬಳೊಂದಿಗೆ ಆತ್ಮೀಯ ಸಂಪರ್ಕದಲ್ಲಿದ್ದೇನೆ. ನಮ್ಮ ಸಂಬಂಧ ವ್ಯಾಖ್ಯಾನವನ್ನು ಮೀರಿದ್ದು. ನಾನು ಆಕೆಯನ್ನು ನನ್ನ ಅಧ್ಯಾತ್ಮಿಕ ಪತ್ನಿ ಎಂದು ಕರೆಯುತ್ತೇನೆ. ನನ್ನ ಸ್ನೇಹಿತನೊಬ್ಬ ಇದನ್ನು ಬೌದ್ಧಿಕ ವಿವಾಹ ಎಂದು ಕರೆದಿದ್ದಾನೆ. ನೀನು ಒಮ್ಮೆ ಆಕೆಯನ್ನು ನೋಡಬೇಕೆಂಬುದು ನನ್ನ ಆಸೆ. ಅವಳ ಆಶ್ರಯದಲ್ಲೇ ನಾನು ಪಂಜಾಬ್ನ ಲಾಹೋರ್ನಲ್ಲಿ ಹಲವು ತಿಂಗಳುಗಳನ್ನು ಕಳೆದಿದ್ದೇನೆ. 'ಬಾ' ಆಶ್ರಮದಲ್ಲಿದ್ದಾಳೆ. ಆಕೆಗೆ ಸಾಕಷ್ಟು ವಯಸ್ಸಾಗಿದೆ; ಆದರೆ ಎಂದಿನಂತೆ ದಿಟ್ಟವಾಗಿಯೇ ಇದ್ದಾಳೆ. ಆಕೆ ನಿನಗೆ ತಿಳಿದಿರುವಂತೆ ತನ್ನ ದೌರ್ಬಲ್ಯ ಹಾಗೂ ಸದ್ಗುಣಗಳ, ಅದೇ ಹೆಂಗಸೇ. ಮಣಿಲಾಲ್ ಮತ್ತು ರಾಮದಾಸ್ ಫೀನಿಕ್ಸ್ನಲ್ಲಿದ್ದು ಇಂಡಿಯನ್ ಒಪಿನಿಯನ್ ನೋಡಿಕೊಳ್ಳುತ್ತಿದ್ದಾರೆ. ಹರಿಲಾಲ್ ಕಲ್ಕತ್ತಾದಲ್ಲಿದ್ದು ತನ್ನ ವ್ಯಾಪಾರ ನೋಡಿಕೊಳ್ಳುತ್ತಿದ್ದಾನೆ. ಅವನ ಹೆಂಡತಿ ಹೋಗಿ ಬಿಟ್ಟಳು. 'ಬಾ' ಅವನ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾಳೆ.

ಏಪ್ರಿಲ್ 30, 1920(ಶ್ರೀಮತಿ ಜಿನ್ನಾಗೆ ಪತ್ರದಲ್ಲಿ)
ಶ್ರೀಯುತ ಜಿನ್ನಾಗೆ ನನ್ನ ನೆನಪು ತಿಳಿಸಿ ಹಾಗೂ ಅವರನ್ನು ಹಿಂದೂಸ್ಥಾನಿ ಅಥವಾ ಗುಜರಾತಿ ಕಲಿಯಲು ಪುಸಲಾಯಿಸಿ. ನಾನು ನಿಮ್ಮ ಸ್ಥಾನದಲ್ಲಿದ್ದಿದ್ದರೆ, ಈ ಹೊತ್ತಿಗೆ ಅವರೊಂದಿಗೆ ಗುಜರಾತಿ ಅಥವಾ ಹಿಂದೂಸ್ಥಾನಿಯಲ್ಲಿ ಮಾತನಾಡಲಾರಂಭಿಸುತ್ತಿದ್ದೆ. ಇದರಿಂದಾಗಿ ನೀವು ನಿಮ್ಮ ಇಂಗ್ಲಿಷ್ನ್ನು ಮರೆಯುವ ಅಥವಾ ನಿಮ್ಮ ನಡುವೆ ತಪ್ಪು ತಿಳುವಳಿಕೆ ಮೂಡುವ ಅಪಾಯವೇನೂ ಇರಲಾರದು. ಹೌದು ತಾನೇ?

ಇದನ್ನು ನೀವು ಮಾಡುವಿರಾ? ನೀವು ನನ್ನ ಬಗ್ಗೆ ಇಟ್ಟುಕೊಂಡಿರುವ ಪ್ರೀತಿಯ ಸಲುವಾಗಿಯಾದರೂ ಮಾಡಿ ಎಂದು ಕೇಳುವೆ.

ಪೂನಾ, ಆಗಸ್ಟ್ 23, 1933
ಗಾಂಧಿ: ಆನಂದ್, ಈ ಸಂದಿಗ್ಧದಲ್ಲಿ ನಾನೇನು ಮಾಡಬಹುದೆಂದು ನಿನಗನ್ನಿಸುತ್ತದೆ? ನನ್ನನ್ನು ಸಾಯಲು ಬಿಡುತ್ತಾರೆಂದು ಭಾವಿಸಿದ್ದೆ. ಹಾಗೆ ನೋಡಿದರೆ, ಅಂತಹ ಸಂದರ್ಭಕ್ಕೆ ನಾನು ಪೂರ್ಣವಾಗಿ ಸಿದ್ಧನಾಗಿದ್ದೆ ಕೂಡ. ಹಾಗಾಗಿಯೇ, ನನ್ನ ಬಿಡುಗಡೆಯ ಹಿಂದಿನ ಒಂದು ದಿನವಷ್ಟೇ ನಾನು ನನ್ನೆಲ್ಲಾ ಸಣ್ಣ ಪುಟ್ಟ ವೈಯುಕ್ತಿಕ ವಸ್ತುಗಳನ್ನು ಆಸ್ಪತ್ರೆಯ ದಾದಿಯರಿಗೆ ಹಾಗೂ ಸಹಾಯಕರಿಗೆ ಕೊಟ್ಟುಬಿಟ್ಟಿದ್ದೆ. ಉಪವಾಸ ಮಾಡಿ ತಂದುಕೊಳ್ಳುವ ನನ್ನ ಸಾವನ್ನು ಜನ ಹೇಗೆ ತೆಗೆದುಕೊಳ್ಳುತ್ತಿದ್ದರೋ ತಿಳಿಯದು.

ಆನಂದ್ ಹಿಂಗೋರಣಿ: ಏಕೆ, ಅದು ಅತ್ಯಂತ ಧೀರೋದಾತ್ತ ಸಾವಾಗಿರುತ್ತಿತ್ತು ಬಾಪು.

ಗಾ: ಛೇ! ಅಸಹ್ಯ. ಅದನ್ನು, ಉಪವಾಸ ಮಾಡಿ ಸಾಯುವುದನ್ನು, ನೀನು ಧೀರೋದಾತ್ತ ಸಾವೆಂದು ಪರಿಗಣಿಸುವೆಯ? ಅದರಲ್ಲಿ ಧೀರತೆ ಎಲ್ಲಿಂದ ಬಂತು? ಆದರೆ ನನ್ನ ಜಾತಕದಲ್ಲಿ ನಾನು ಧೀರನ ಸಾವನ್ನು ಅಪ್ಪುವೆನೆಂದು ಬರೆದಿದೆ ಎಂಬುದು ನಿನಗೆ ಗೊತ್ತಾ?

ಆ: ಆದರೆ ಬಾಪು, ಈ ಉಪವಾಸದ ಸಾವೂ ಧೀರೋದಾತ್ತ ಸಾವೇ. ಉದ್ದೇಶಪೂರ್ವಕವಾಗಿ ಅಂಗುಲ ಅಂಗುಲವಾಗಿ ಸಾವನ್ನು ಎದುರುಗೊಳ್ಳುವುದೇನೂ ಸುಲಭದ ಕೆಲಸವಲ್ಲ.

ಗಾ: ಇಲ್ಲ, ನನಗೆ ಹಾಗೆನ್ನಿಸುವುದಿಲ್ಲ. ನನ್ನ ಸಾವು ನೇಣುಗಂಬದ ಮೇಲೆ ಅಥವಾ ಗುಂಡಿನೆದುರಿಗೇ ಘಟಿಸುವಂತಹುದು. ಅದು ನಿಜವಾಗಿ ಧೀರೋದಾತ್ತ ಸಾವು; ಉಪವಾಸ ಮಾಡುತ್ತಾ ಹಾಸಿಗೆಯಲ್ಲಿ ಸಾಯುವುದಲ್ಲ.

ಜೈನ ಮಂದಿರ, ಮದ್ರಾಸ್, ಡಿಸೆಂಬರ್ 22, 1933
ಈಗ ನಾನು ನನ್ನ ದಂಧೆ ಆರಂಭಿಸುತ್ತಿದ್ದೇನೆ. ನೀವು ದೂರದೂರದ ಸ್ಥಳಗಳಿಗೆ ಹೋಗಿ ಜನರನ್ನು ಲೂಟಿ ಮಾಡಿ ಗಂಟು ಮಾಡಿಕೊಳ್ಳುತ್ತೀರಾ. ನಾನೀಗ ನಿಮ್ಮನ್ನು ಲೂಟಿ ಮಾಡಲು ಹೊರಟಿರುವೆ.

ಪ್ರೇಕ್ಷಕರು ಈ ಹೇಳಿಕೆಯನ್ನು ನಗುತ್ತಾ, ಘೋಷಣೆ ಕೂಗುತ್ತಾ ಸ್ವಾಗತಿಸಿದರು. ದಂತದ ಕರಂಡವೊಂದನ್ನು ಹರಾಜಿಗಿಡುತ್ತಾ, 'ಇದಕ್ಕೆಷ್ಟು ಕೊಡುವಿರಿ?' ಎಂದು ಗಾಂಧಿ ಕೇಳಿದರು.

ಸುಮಾರು 15 ರೂಪಾಯಿ ಬೆಲೆ ಬಾಳುವ ಆ ಕರಂಡಕ್ಕೆ ಮೊದಲ ಸವಾಲಿನಲ್ಲಿ ರಾಮನಾಥ ಗೋಯಂಕಾ 101 ರೂಪಾಯಿಗಳನ್ನು ಕೂಗಿದರು.

'ಮುಂದೆ ಬನ್ನಿ. ಇಲ್ಲಿ ಸೇರಿರುವ ಗುಜರಾತಿಗಳಿಗೆ 101 ರೂಪಾಯಿ ಏನೂನೂ ಅಲ್ಲ!' ಮುಂದಿನ ಕೂಗು 201 ರೂಪಾಯಿಗಳಿಗೇರಿತು.

ಹಾಗಾದರೆ ಕೊಟ್ಟುಬಿಡಲಾ... ಒಂದು ಬಾರಿ... ಎರಡು ಬಾರಿ... ಮೂರನೇ ಬಾರಿ ಎಂದು ನಾನು ಹೇಳುವುದಿಲ್ಲ... ಇನ್ನೂ ಕಾಲ ಮಿಂಚಿಲ್ಲ... ಒಂದೆರಡು ನೂರು ನಿಮಗೆ ಏನೇನೂ ಅಲ್ಲ....

(ಹರಾಜು ಮುಗಿದು ಗಾಂಧಿ ವೇದಿಕೆಯ ಕೆಳಗೆ ಇಳಿಯುತ್ತಿದ್ದಂತೆ ಒಬ್ಬ ಹುಡುಗ ಅವರ ಬಳಿ ಓಡೋಡಿ ಬರುತ್ತಾನೆ)

ಹುಡುಗ: ನಿಮ್ಮ ಸಹಿ ಬೇಕು... ದಯವಿಟ್ಟು ಹಾಕಿ ಕೊಡಿ.

ಗಾ: ನೀನೇನು ಕೊಡುವೆ? ನನಗೆ ರೂಪಾಯಿ ಬೇಕು.

ಹು: ಒಂದು ರೂಪಾಯಿ ಕೊಡುವೆ.

ಗಾ: (ಅವನ ಕಿವಿಯ ಮುರಗಳನ್ನು ನೋಡುತ್ತಾ, ಮುಟ್ಟುತ್ತಾ) ಏನು ಇವು?

ಹು: ನೀವು ಅವುಗಳನ್ನು ತೆಗೆದುಕೊಳ್ಳಬಹುದು.

ಗಾ: ನಿನ್ನ ತಂದೆಯ ಅನುಮತಿ ಇದೆಯಾ?

ಹು: ಅವನ್ನು ನಿಮಗೆ ಕೊಡಲು ಅವರ ಅಭ್ಯಂತರವೇನೂ ಇರಲಾರದು.

ಗಾ: ನಿನಗೆ ಇಷ್ಟೊಂದು ಸ್ವಾತಂತ್ರ್ಯ ಇದೆಯಲ್ಲ! (ಮುರಗಳನ್ನು ಬಿಚ್ಚಿಕೊಂಡು) ನಿನಗಿದು ಅಗತ್ಯವಿಲ್ಲ. ಇನ್ನು ಮುಂದೆಯೂ ಮುರಗಳನ್ನು ಹಾಕಿಕೊಳ್ಳಬೇಡ. ಹೊಸವಕ್ಕಾಗಿ ನಿನ್ನ ತಂದೆಯನ್ನು ಕೇಳಬೇಡ. (ಸಹಿ ಹಾಕಿಕೊಡುತ್ತಾ) ನಿನ್ನ ಹೆಸರೇನು ಮರಿ?

ಹು: ಬಿ.ವಿ.ತಮ್ಮಪ್ಪ.

ಗಾ: ಎಷ್ಟು ವಯಸ್ಸು ನಿನಗೆ?

ಹು: ಹದಿಮೂರು

ಗಾ: ಓ! ಹದಿಮೂರನೇ ವಯಸ್ಸಿಗೇ ನಿನಗೆ ಸ್ವಾತಂತ್ರ್ಯ ದಕ್ಕಿದೆ. ನನಗೆ ಆ ಸೌಭಾಗ್ಯವಿರಲಿಲ್ಲ!

ಕರಾಚಿ, ಜುಲೈ 10, 1934

....ಡಾ|| ಅಂಬೇಡ್ಕರರು ನಮ್ಮಲ್ಲಿ ಹಲವರು ನಾಚಿಕೆ ಪಡುವಷ್ಟು ಬುದ್ಧಿವಂತರು ಹಾಗೂ ಜಾಣರು. ತಮ್ಮ ಚುರುಕಾದ ಬುದ್ಧಿಯಿಂದ ಅವರು ಹಲವು ಜನರ ಹೃದಯವನ್ನು ಮುಟ್ಟಿದ್ದಾರೆ. ಅವರ ತ್ಯಾಗ ತುಂಬ ದೊಡ್ಡದು. ಅವರು ಯಾವಾಗಲೂ ತಮ್ಮ ಕೆಲಸದಲ್ಲಿ ಮಗ್ನರು. ಅವರು ಸರಳ ಜೀವನ ನಡೆಸುವರು. ಅವರು ತಿಂಗಳಿಗೆ ಒಂದೆರಡು ಸಾವಿರ ರೂಪಾಯಿಗಳನ್ನಾದರೂ ಸಂಪಾದಿಸಬಲ್ಲವರು. ಅವರು ಈರೋಪಿಗೆ ಹೋಗಿ ನೆಲಸಲು ಕೂಡ ಸಾಧ್ಯ. ಆದರೆ ಅವರಿಗೆ ಅಲ್ಲಿಗೆ ಹೋಗಲು ಇಷ್ಟವಿಲ್ಲ. ಅವರಿಗೆ ಹರಿಜನರ ಕ್ಷೇಮಾಭ್ಯುಯದ್ದೇ ಚಿಂತೆ. ಆದರೆ ಇಂದು ಸಮಾಜದಲ್ಲಿ ಇಂತಹ ಮನುಷ್ಯನ ಸ್ಥಾನಮಾನವಾದರೂ ಏನು? 'ನಾನು ವಿಧಾನ ಸಭೆ ಅಧಿವೇಶನಕ್ಕೆಂದು ಪೂನಾಗೆ ಹೋದಾಗ, ಇತರರೆಲ್ಲ ಅವರ ಸ್ನೇಹಿತರ ಮನೆಗಳಲ್ಲಿ ತಂಗಿ ತಮ್ಮ ದಿನಭತ್ಯೆಯನ್ನು ಉಳಿಸಿಕೊಳ್ಳುವವರಾರೆ, ನಾನು ಹೋಟೆಲಿನಲ್ಲಿ ತಂಗಿ ಆ ಇಡೀ 10 ರೂಪಾಯಿಗಳನ್ನು ಖರ್ಚು ಮಾಡಿಕೊಳ್ಳಬೇಕಾಗಿದೆ. ನನ್ನನ್ನು ಒಬ್ಬ ಸಹೋದ್ಯೋಗಿಯೆಂದಾಗಲೀ, ಸ್ನೇಹಿತನೆಂದಾಗಲೀ ಒಪ್ಪಿಕೊಳ್ಳುವ ಒಂದು ಹಿಂದೂ ಕುಟುಂಬವೂ ಪೂನಾದಲ್ಲಿ ಇಲ್ಲ' ಎಂದು ಅವರು ಹೇಳುತ್ತಾರೆ. ಯಾರ ಅವಮಾನವಿದು?

ಬಾಂಬೆ, ಜನವರಿ 1936
ನನ್ನ ಜೀವನದ ಅತ್ಯಂತ ಕರಾಳ ದಿನ ನಾನು ಬಾಂಬೆಯಲ್ಲಿದ್ದಾಗ ಸಂಭವಿಸಿತು.... ಅದು ನನ್ನ ಕಾಮುಕತೆ ಇದ್ದಕ್ಕಿದ್ದಂತೆ ಕೆರಳಿದ ಸಮಯ. ನಾನು ಮಲಗಿದ್ದಾಗ, ನನಗೆ ಒಬ್ಬ ಹೆಂಗಸನ್ನು ನೋಡಬೇಕೆನಿಸಿತು. ಸುಮಾರು ನಲವತ್ತು ವರ್ಷಗಳ ಕಾಲ ದೇಹದ ಬಯಕೆಯನ್ನು ಗೆಲ್ಲುವ ಪ್ರಯತ್ನದಲ್ಲಿದ್ದ ಮನುಷ್ಯನಿಗೆ ಇಂತಹ ಭಯಾನಕ ಅನುಭವವಾದಾಗ ತುಂಬಾ ಹಿಂಸೆಯಾಗಲೇ ಬೇಕು. ಅಂತಿಮವಾಗಿ ನಾನು ಈ ಭಾವನೆಯನ್ನು ಗೆದ್ದೆನಾದರೂ, ನನ್ನ ಜೀವನದ ಅತ್ಯಂತ ನಾಚಿಕೆಗೇಡಿನ ಘಳಿಗೆಯೊಂದಿಗೆ ಮುಖಾಮುಖಿಯಾಗಿದ್ದೆ ಹಾಗೂ ನಾನೇನಾದರೂ ಆಗ ಸೋತು ಹೋಗಿದ್ದರೆ, ಅದು ನನ್ನನ್ನು ನಿರ್ನಾಮ ಮಾಡುತ್ತಿತ್ತು.

ಅಂದ ಹಾಗೆ: 'ಗಾಂಧಿ - ಅಂಬೇಡ್ಕರ್' ನಾಟಕವನ್ನು ನಿರ್ದೇಶಿಸಿರುವ ಗೆಳೆಯ ಸಿ.ಬಸವಲಿಂಗಯ್ಯ ಈ ನಾಟಕದಲ್ಲಿ ಅಂಬೇಡ್ಕರ್ ತಮ್ಮನ್ನು ಭೇಟಿ ಮಾಡಿ ಹೋದ ಜಾಗವನ್ನು ಗಾಂಧೀಜಿ (ಯ ಒಳಗಿನ ಮನಸ್ಸು ಎದ್ದು ಬಂದು) ಶುದ್ಧಿ ಮಾಡುವ ದೃಶ್ಯವೊಂದನ್ನು ಕಲ್ಪಿಸಿದ್ದಾರಂತೆ. ಬಸವಲಿಂಗಯ್ಯ ತಮ್ಮ 'ಕ್ರಾಂತಿಕಾರಕ' ಕಲ್ಪನೆಗಳಲ್ಲಿ ಹೀಗೇ ಮುಂದುವರೆದರೆ, ಅವರ ನಿರ್ದೇಶನದ ನಾಟಕಗಳನ್ನು ಆಡುವ ರಂಗಮಂಚಗಳನ್ನು ರಂಗಕರ್ಮಿಗಳ ಸಹಕಾರದೊಂದಿಗೆ ಗಾಂಧಿವಾದಿಗಳು ಹಾಗೂ ಅಂಬೇಡ್ಕರ್ವಾದಿಗಳೂ ಇಬ್ಬರೂ ಸೇರಿ ಶುದ್ಧೀಕರಿಸಲು ಸಿದ್ಧವಾದರೆ ಆಶ್ಚರ್ಯವಿಲ್ಲ!

Rating
No votes yet

Comments