ನಮ್ಮ ಮನೆಯ ದೀಪಾವಳಿ

ನಮ್ಮ ಮನೆಯ ದೀಪಾವಳಿ

ಮತ್ತೊಂದು ದೀಪಾವಳಿ ಸಂದಿದೆ. ನಾವು ವರುಷದಂತೆ ಸರಳ ಸುಂದರವಾಗಿ ಆಚರಿಸಿಕೊಂಡೆವು. ನಮ್ಮಲ್ಲಿ ದೀಪಾವಳಿಯೆಂದರೆ ತುಳಸೀ ಪೂಜೆ, ಗೋಪೂಜೆ, ಊಟ.

ಗೋಪೂಜೆಗಾಗಿ ಬೆಳಗ್ಗೆಯೇ ಹಸುಕರುಗಳೆಲ್ಲವನ್ನು ಮೀಯಿಸಲಾಗುತ್ತದೆ. ಸಂಜೆ ತುಳಸೀ ಕಟ್ಟೆಯ ಸುತ್ತ ಸ್ವಲ್ಪ ಅಲಂಕಾರ ಮಾಡುತ್ತೇವೆ. ಮೊದಲೆಲ್ಲ ರಾತ್ರಿಯ ವೇಳೆ ಸ್ವಲ್ಪ ಪಟಾಕಿ ಸುಡುವುದಿತ್ತು. ವರುಷಗಳ ಹಿಂದೆಯೇ ಅದನ್ನು ತ್ಯಜಿಸಿ ನಾವು ಶಾಂತ ದೀಪಾವಳಿಯನ್ನು ನೆಚ್ಚಿಕೊಂಡಿದ್ದೇವೆ.

ದಶಕಗಳ ಹಿಂದೆ ಕೊಂಡು ತಂದಿದ್ದ ಮಣ್ಣಿನ ಹಣತೆಗಳು ಒಂದೊಂದಾಗಿ ಒಡೆದು ಹೋಗಿ, ಕೆಲವು ವರುಷಗಳ ಹಿಂದೆ ನಾನು ಕೈಯಿಂದ ತಯಾರಿಸಿದ ಸ್ವಲ್ಪ ಒರಟೊರಟಾದ ಹಣತೆಗಳು ಈಗ ಮೆಜಾರಿಟಿಯಲ್ಲಿವೆ. ಅವುಗಳನ್ನು ಅಮ್ಮ ಉರಿಸಿದ್ದೂ, ನಾನು ಚಿತ್ರಿಸಿದ್ದೂ ಆಯಿತು. ನಾನು ದೀಪಾವಳಿಯನ್ನು ಚಿತ್ರಿಸಲೆಂದೇ ಕಿಲೋಗ್ರಾಮ್ ನಷ್ಟು ಭಾರವಿರುವ ನನ್ನ ಟ್ರೈಪಾಡನ್ನು ಹೊತ್ತು ಊರಿಗೆ ತಂದಿದ್ದೇನೆ. ನಾನು ಪೂಜೆಯಲ್ಲಿ ಪಾಲ್ಗೊಳ್ಳುವುದರಿಂದ ಹೆಚ್ಚು ಚಿತ್ರಿಸುವುದರಲ್ಲಿ ನಿರತನಾಗಿದ್ದೆ!.

ಎಂದಿನಂತೆ ತಂದೆ ತಮ್ಮ ಮಾಸಲು ಹಳೆಯ ಕಾಗದಗಳಿಂದ ಮಂತ್ರಗಳನ್ನೋದಿ ತುಳಸೀ ಪೂಜೆ ಮಾಡಿದರು. ಪ್ರತಿ ವರುಷದಂತೆ ಮಂತ್ರಗಳನ್ನು ಹೊಸ ಕಾಗದಕ್ಕೆ ಪ್ರತಿಯಿಳಿಸುವ ನಿರ್ಣಯವನ್ನು ಕೈಗೊಳ್ಳಲಾಯಿತು :)

ಗೋಪೂಜೆಯ ಸಮಯದಲ್ಲಿ ಹೆಚ್ಚುಕಮ್ಮಿ ಅದು ಪೂಜಾವಿಧಿಯ ಅಂಗವೇನೋ ಎಂಬಂತೆ ನನ್ನಮ್ಮ/ಅಜ್ಜಿ ಪಾಲಿಸಿಕೊಂಡು ಬಂದಿರುವ ಕ್ರಮವೊಂದಿದೆ. ಅದೇನೆಂದರೆ, ತಂದೆಯ ಮಂಗಳಾರತಿಯ ಬಳಿಕ ಗೋವುಗಳನ್ನುದ್ದೇಶಿಸಿ 'ಕಾಡ ಸೊಪ್ಪು ತಿಂದು, ತೋಡ ನೀರು ಕುಡಿದು ಸುಖವಾಗಿ ಬಾಳಿರಿ' ಎಂದು ಹರಸುವುದು!. ನನಗೀಗಲೂ ನೆನಪಿದೆ, ನಾನು ಚಿಕ್ಕವನಿದ್ದಾಗ ದೀಪಾವಳಿ ಈ ಹಂತಕ್ಕೆ ಬರುತ್ತಲೂ ಡಿಪ್ರೆಶನ್ ಗೆ ಒಳಗಾಗುತ್ತಿದ್ದೆ. ಏಕೆಂದರೆ, ಆ ಹೊತ್ತಿಗೆ ಪಟಾಕಿಗಳೆಲ್ಲ ಮುಗಿದು, ಪೂಜಾಕಾರ್ಯಗಳೆಲ್ಲವೂ ಮುಗಿದು ಮರುದಿನದ ಶಾಲೆ ನೆನಪಾಗಲು ಶುರುವಾಗುತ್ತಿತ್ತು.

ಊಟದ ಬಳಿಕ ನಾನು ತೆಗೆದ ಚಿತ್ರಗಳನ್ನು ಕಂಪ್ಯೂಟರ್ ನಲ್ಲಿ ನೋಡುವ ಹೊಸ ಕಾರ್ಯಕ್ರಮ ೨ ವರ್ಷಗಳಿಂದ ಸೇರಿಕೊಂಡಿದೆ.

ನಮ್ಮ ನೆರೆಮನೆಯಿಂದ ಬಂದ ಸುದ್ದಿ: ಅವರಲ್ಲಿ ನಿನ್ನೆ ಪಟಾಕಿಯ ಭರಾಟೆ ಸ್ವಲ್ಪ ಜಾಸ್ತಿಯೇ ಇದ್ದುದರಿಂದ ಆಘಾತಗೊಂಡು ಅವರ ನಾಯಿ ಅಸುನೀಗಿದೆ :( ಸಶಬ್ದವಾದ ದೀಪಾವಳಿಯನ್ನು ನಾವೆಂದು ಕೈ ಬಿಡುವೆವೆಂದು ನನಗೆ ಅರ್ಥವಾಗುತ್ತಿಲ್ಲ.

ನಿಮಗೆಲ್ಲರಿಗೆ ಶಾಂತಿ, ನೆಮ್ಮದಿಯ ಬೆಳಕು ಬರಲೆಂದು ಹಾರೈಸುವ,
ವಸಂತ್ ಕಜೆ.

Rating
No votes yet

Comments