ಮಾತಾಡ್ ಮಾತಾಡ್ ಮಲ್ಲಿಗೆ
ಮಲ್ಲಿಗೆ ಇಂಗ್ಲೆಂಡಿನಲ್ಲೂ ಮಾತಾಡಿತು!ಜೊತೆಗೆ ನಾಗತಿಹಳ್ಳಿಯವರೂ ಮಾತಾಡಿದರು!! ಹಾಡುಗಳನ್ನೆಲ್ಲ (ಒಂದನ್ನು ಬಿಟ್ಟು)ಕತ್ತರಿಸಿ, ಇಂಗ್ಲೀಷ್ ಅನುವಾದಗಳನ್ನು (subtitles) ಸೇರಿಸಿ, ಕನ್ನಡಿಗರು-ಯು.ಕೆಯವರು ಇಂಗ್ಲೆಂಡಿನ ರೆಡ್ದಿಂಗ್ನಲ್ಲಿ ನಮಗೆಲ್ಲ ತೋರಿಸಿದರು.
ನಾನೀಗ ಬರೆಯಹೊರಟಿರುವುದು ಖಂಡಿತ ಚಿತ್ರದ ವಿಮರ್ಶೆಯಲ್ಲ. ಇದು ಅನಿವಾಸಿಯಲ್ಲದ ಕನ್ನಡಿಗರಿಗೆ ಹಳೆಯ ಚಿತ್ರ ಮತ್ತು ನಾಗತಿಹಳ್ಳಿಯವರು ಹೇಳಿದಂತೆ ಗಲ್ಲಾಪೆಟ್ಟಿಗೆಯಲ್ಲಿ ಅಷ್ಟೇನೂ ಓಡಿರದ ಚಿತ್ರ. ಈಗಾಗಲೇ ಈ ಚಿತ್ರದ ಬಗ್ಗೆ ಒಳ್ಳೆಯ ಮತ್ತು ಕೆಟ್ಟ ವಿಮರ್ಶೆಗಳು ಪತ್ರಿಕೆಗಳಲ್ಲಿ, ಬ್ಲಾಗುಗಳಲ್ಲಿ ಬಂದಿವೆ.
ಇಲ್ಲಿಯ ಜಾಲಗಳ ಪ್ರಕಾರ ನಾನು ಇರುವ ಊರಿಂದ ಕಾರಿನಲ್ಲಿ ಅಲ್ಲಿಗೆ ತಲುಪಲು ಎರಡೂವರೆ ಗಂಟೆ ಸಾಕು. ಅದಕ್ಕಾಗಿ ಮೂರುವರೆ ಗಂಟೆ ಮೊದಲು ನಾನು ಹೊರಟೆ. ನಾನು ನನ್ನ ಬಾನ್ಸೂಚಿ(satellite navigator)ಯನ್ನು ನಂಬಿಕೊಂಡು ಗೊತ್ತಿಲ್ಲದ ಊರಿಗೆ ಹೊರಟಿದ್ದೆ ತಪ್ಪಾಯಿತು. ನನ್ನ ಗೆಳೆಯ ವಿಶ್ವನಾಥ ಜಂಗಮ(mobile)ದಲ್ಲಿ ದಾರಿ ಹೇಳದಿದ್ದರೆ ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್ಸಾಗುತ್ತಿದ್ದೆ. ನಾನು ಬಂದಾಗ - ರಾಜಸ್ತಾನಿ ರಜಪೂತನಂತೆ ಕಾಣುವ, ಕೆಮ್ಮಣ್ಣು ಬಣ್ಣದ ಗಡ್ಡದ ವಿಷ್ಣುವರ್ಧನ ತನ್ನ ಚೊಚ್ಚಲು ಮಗಳನ್ನು ಡಿ.ಸಿಯೊಡನೆ ಮನಸ್ಸಿಲ್ಲದ
ಮನಸ್ಸಿನಿಂದ ಹರಸುತ್ತಿದ್ದರು. ಸುದೀಪನ ಎಂಟ್ರಿ ಆದಾಗ ಕೆಲವರು ಶಿಳ್ಳೆ ಹೊಡೆದರು (ಸಖತ್ತಾಗಿತ್ತು). ಚಿತ್ರ ಮುಗಿದಾದ ಮೇಲೆ ಎಲ್ಲರೂ ಚಪ್ಪಾಳೆ ತಟ್ಟಿದೆವು.
ನಂತರ ನಾಗತಿಯವರ ಸಿನೆಮಾದ ಒತ್ತಟ್ಟೆ (ಒತ್ತಾಗಿರುವ ತಟ್ಟೆ = compact disc, DVD etc)ಗಳನ್ನೂ, ಪುಸ್ತಕಗಳನ್ನೂ ಕೊಂಡುಕೊಂಡು ಬಂದೆವು. ನಾಗತಿಯವರಿಗೆ ಮೈಸೂರು ಪೇಟ ಹಾಕಿ ಶಾಲು ಹೊದಿಸಿ ಸನ್ಮಾನಿಸಿದರು. ಅದಾದ ಮೇಲೆ ಸಿನಿಮಾದ ಬಗ್ಗೆ ಚರ್ಚೆ ನಡೆಯಿತು!
ನಾನು ಅಗಷ್ಟಿನಲ್ಲಿ ಸ್ವಲ್ಪವೇ ದಿನ ಭಾರತಕ್ಕೆ ಬಂದಾಗ ಈ ಸಿನೆಮಾ ಬಿಡುಗಡೆ ಆಗಿತ್ತು. ಅದರ ಹಾಡುಗಳಲ್ಲಿರುವ ಅಸಹಜತೆ, ರಜಪೂತನಂತೆ ಕಾಣುವ ಕೆಂಚು ಗಡ್ಡದ ವಿಷ್ಣುವರ್ಧನ, ಎಳ್ಳುಕಾಳಿನಷ್ಟೂ ನಟನೆ ಗೊತ್ತಿಲ್ಲದ ಅವನ ಕುಮಾರಿಯರನ್ನು ಟಿವಿಯಲ್ಲಿ ನೋಡಿ ಭಾರತದಲ್ಲಿದ್ದರೂ ಸಿನೆಮಾ ನೋಡಲಿಲ್ಲ. ಇಲ್ಲಿ ನಾನು ಸಿನೆಮಾಕ್ಕೆ ಹೋಗಿದ್ದು ಇಲ್ಲಿನ ಕನ್ನಡಿಗರ ಸಂಘಟನೆಯನ್ನು ಬೆಂಬಲಿಸಲು ಮಾತ್ರ ಆಗಿತ್ತು. ಸಿನೆಮಾ ಕೆಟ್ಟದಾಗಿದ್ದರೂ ನಾನಂದುಕೊಂದಷ್ಟು ಕೆಟ್ಟದಾಗಿರಲಿಲ್ಲವೆನ್ನುವುದೊಂದೇ ಸಮಾಧಾನ. ಚಿತ್ರದಲ್ಲಿ ಸಾಮಾಜಿಕ ಕಳಕಳಿಯಿದೆ, ಆದರೆ ಅದೊಂದರಿಂದ ಮಾತ್ರ ಚಿತ್ರವಾಗುವುದಿಲ್ಲವೇ! ಅದೆಲ್ಲ ಇರಲಿ, ನಾನೇನು ಚಿತ್ರವನ್ನು ವಿಮರ್ಶೆ ಮಾಡುತ್ತಿಲ್ಲವಲ್ಲ!!
ನಾನು ಬರೆಯಹೊರಟಿರುವುದು ಚಿತ್ರದ ಸಾಮಾಜಿಕ ಕಳಕಳಿಯ ಬಗ್ಗೆ (ಸದ್ಯ ವಿಷಯಕ್ಕೆ ಬಂದೆಯಲ್ಲ!): ಜಾಗತೀಕರಣ ನಮ್ಮಂತಹ ದೇಶಗಳ ಮೇಲೆ ಮಾಡುತ್ತಿರುವ ಪರಿಣಾಮಗಳ ಬಗ್ಗೆ ನಾಗತಿಯವರಿಗೆ ನಿಜವಾದ ಕಾಳಜಿಯಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಬಂಡವಾಳಶಾಹಿ ಬಹುರಾಷ್ಟ್ರೀಯ ವರ್ತಕರು ನಮ್ಮಲ್ಲಿನ ಎಲೆ ಅಡಿಕೆ ಬೆಳೆಯುವ ಜಾಗದಲ್ಲಿ ವೆನಿಲಾದ ಅಮಿಷವಡ್ಡುವುದು, ಎಳೆನೀರಿನ ಜಾಗದಲ್ಲಿ ಪೆಪ್ಸಿ-ಕೋಲಾದ ಹೊಳೆ ಹರಿಸುವಿದು - ಚಿತ್ರದಲ್ಲಿ ತೋರಿಸಿರುವಂತೆ ಇದು ಬರೀ ಬಂಡವಾಳಶಾಹಿಗಳ ರಾಜಕಾರಣಿಗಳ ಮಸಲತ್ತಲ್ಲ. ಬಾಲಿವುಡ್ಡಿನ ಶಾರೂಖ್ ಆಗಲೀ, ಕ್ರಿಕೆಟ್ಟಿನ ತೆಂಡುಲ್ಕರ್ ಆಗಲೀ ಏಳೆನೀರಿಗೆ ಕಬ್ಬಿನರಸಕ್ಕೆ ಜಾಹೀರಾತು ಕೊಡುವಿದಿಲ್ಲ. ಅವರಿಗೇನು ದುಡ್ಡಿನ ಬರವೆ? ಮನೆಯಲ್ಲಿ ಮಕ್ಕಳೊಂದಿಗೆ ಇಂಗ್ಲೀಷಿನಲ್ಲಿ ಮಾತಾಡುವ, ಬೆಳೆದ
ಹಳ್ಳಿಯನ್ನು ಬಿಡುತ್ತಿದ್ದಂತೆ ಹಳ್ಳಿಗರನ್ನೆಲ್ಲ ಪೆದ್ದುಗಳಂತೆ ನೋಡುವ, ಎಳೆನೀರು ಕುಡಿಯುವಾಗ ಚೊಕಾಶಿ ಮಾಡಿ ಪೆಪ್ಸಿಯನ್ನು ಮಾತ್ರ ತೆಪ್ಪಗೆ ಹೇಳಿದಷ್ಟು ದುಡ್ಡು ಕೊಟ್ಟು ಕುಡಿಯುವ ನಾವುಗಳೂ ಅಷ್ಟೆ ಹೊಣೆಯೆಂದು ನನ್ನ ಅನಿಸಿಕೆ. ನಮ್ಮಲ್ಲಿ ನಮ್ಮತನದ (ಸಂಸ್ಕೃತಿ, ಆಚಾರ, ವಿಚಾರ, ಭಾಷೆ, ನುಡಿ) ಬಗ್ಗೆ ಅಸಡ್ಡೆ ಬೆಳೆಯುತ್ತಿದೆ, ಪಶ್ಚಿಮದಿಂದ - ಬಂಡವಾಳಶಾಹಿಗಳಿಂದ ಬಂದದ್ದೆಲ್ಲ ಶಂಖದಿಂದ ಬಂದ ತೀರ್ಥವಾಗಿತ್ತಿದೆ. ಈಗಾಗಲೇ ಈ ಪಶ್ಚಿಮ ದೇಶಗಳ ಎಲ್ಲಾ ಊರು ಕೆರಿಗಳು ಒಂದೇ ತರಹ ಆಗಿವೆ (clown towns), ಎಲ್ಲಿ ಹೋದರೂ ಅದೇ Walmart (UK-ASZA), TESCO, McDonalds, KFC, Mark and Spencers...ನಮ್ಮ ನಗರಗಳೂ ಹಾಗಾಗುವ ದಿನ ದೂರವಿಲ್ಲ, ಹಳ್ಳಿಗಲೆಲ್ಲ ನಿರ್ನಾಮವಾಗಿ ಹೊಲ-ಗದ್ದೆಗಳನ್ನೆಲ್ಲ ಬಂಡವಾಳಶಾಹಿಗಳು ಆಳುವ ದಿನ ದೂರವಿಲ್ಲ.
ಮೊನ್ನೆ ಮೊನ್ನೆ, ಅಮೆರಿಕದಲ್ಲಿರುವ ಗೆಳತಿ, ತನ್ನ ಮಕ್ಕಳು ಹ್ಯಲೋವಿನ್ ಡೇ ಬರ್ಜರಿಯಾಗಿ
ಆಚರಿಸಿದ್ದನ್ನು ಹೇಳಿ, ಭಾರತದಲ್ಲೂ ಈಗ ಆ ಹಬ್ಬವನ್ನು ಭರ್ಜರಿಯಾಗಿ ಆಚರಿಸುತ್ತಿದ್ದರಲ್ಲವೇ ಎಂದು ಈಗ ಭಾರತದಲ್ಲಿರುವ ನನ್ನ ಹೆಂಡತಿಯನ್ನು ಕೇಳಿದಳಂತೆ! ನನ್ನ ಹೆಂಡತಿ ಹೇಳಿದಳಂತೆ, ' ಗೊತ್ತಿಲ್ಲಪ್ಪ, ಇಲ್ಲಿ ಹೆಲ್ ಇಲ್ಲ, ಸ್ವರ್ಗವನ್ನು ನೆನಪಿಸುವ ದೀಪಾವಳಿಯ ಸಡಗರದಲ್ಲಿದ್ದೇವೆ'. ಬಹುಶಃ ಆ ಗೆಳತಿಯ ಮಾತುಗಳು ನಿಜವಾಗುವ ದಿನಗಳೂ ದೂರವಿಲ್ಲವೇನೊ?
'ಎಲ್ಲಾ ಮಾಯ, ಇಲ್ಲಿ ನಾವೂ ಮಾಯ, ನೀವೂ ಮಾಯ'
Comments
ಉ: ಮಾತಾಡ್ ಮಾತಾಡ್ ಮಲ್ಲಿಗೆ
In reply to ಉ: ಮಾತಾಡ್ ಮಾತಾಡ್ ಮಲ್ಲಿಗೆ by ಶಿವ
ಉ: ಮಾತಾಡ್ ಮಾತಾಡ್ ಮಲ್ಲಿಗೆ