ಮಹಾ ದರ್ಶನ : ನಿಜವಾಗಿಯೂ ದಿವ್ಯ ದರ್ಶನ
ಇತ್ತೀಚೆಗೆ ನಾನು ದೇವುಡು ನರಸಿಂಹ ಶಾಸ್ತ್ರಿಯವರು ಬರೆದ ಕೊನೆಯ ಗ್ರಂಥವಾದ ’ಮಹಾ ದರ್ಶನ’ ವನ್ನು ಓದಿದೆ. ದೇವುಡು ರವರ ’ಮಹಾ ಕ್ಷತ್ರಿಯ’ ಕೃತಿಗೆ ೧೯೬೨ ರ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ’ಮಹಾ ಬ್ರಾಹ್ಮಣ’ ಅವರ ಇನ್ನೊಂದು ಗ್ರಂಥ. ಇವರ ಕೃತಿಗಳಬಗ್ಗೆ ಬಹಳವಾಗಿ ಕೇಳಿದ್ದ ಹಾಗು ಓದಿದ್ದ ನನಗೆ ಯಾವುದಾದರೂ ಕಾದಂಬರಿಗಳನ್ನು ಓದಬೇಕೆಂದು ಬಹಳದಿನದಿಂದ ಅನ್ನಿಸಿತ್ತು.
’ಮಹಾ ದರ್ಶನ’ ಮಹರ್ಷಿ ಯಾಜ್ಞವಲ್ಕ್ಯರ ಜೀವನ ಚರಿತ್ರೆ. ಆ ಕೃತಿಯನ್ನು ಓದುತ್ತಾ ಹೋದಂತೆ ಯಾವುದೋ ಮಾಯಾಲೋಕದೊಳಗೆ ಪಯಣಿಸಿದ ದಿವ್ಯ ಅನುಭವ. ಪ್ರತಿಯೊಂದು ಘಟನೆಯನ್ನೂ ಕಣ್ಣಿಗೆ ಕಟ್ಟುವಂತೆ ಅವರು ವಿವರಿಸುವ ರೀತಿ, ತರ್ಕಬಧ್ದವಾದ ಉಪದೇಶಗಳು ನಮ್ಮನ್ನು ಚಿಂತನೆಗೆ ಹಚ್ಚುತ್ತವೆ. ಪ್ರಕೃತಿ ಮನುಷ್ಯನ ಸಂಬಂಧವನ್ನು ಅವರು ಎಳೆ ಎಳೆಯಾಗಿ ವರ್ಣಿಸಿದ್ದಾರಾದರೂ ನಮ್ಮಂಥ ಸಾಮಾನ್ಯರಿಗೆ ಇಂತಹ ಬಹಳ ಕ್ಲಿಷ್ಟ ಸೂಕ್ಷ್ಮಗಳು ಅರ್ಥವಾಗುವುದೇ ಇಲ್ಲ. ಬಹುಶಃ ಅಂಥಹ ಮೇಧಾವಿ ದೇವುಡು ರಂಥವರಿಗೆ ಮಾತ್ರ ಇಂತಹ ರಹಸ್ಯಗಳು ಕಲ್ಪನೆಗೂ ಸಿಕ್ಕಿ ವರ್ಣಿಸಲು ಸಾಧ್ಯವಾಗಿರುವುದು ಎಂದೆನಿಸುತ್ತದೆ.
ಕೆಲವು ಉದಾಹರಣೆಗಳನ್ನೇ ನೋಡಿ. "ಪಾತ್ರೆಯ ಹೊರಗೆ ತೊಳೆಯುವುದು ಮಸಿ ಹೋಗಿಸಲಿಕ್ಕೆ, ಒಳಗೆ ತೊಳೆಯುವುದು ಮುಸುರೆ ಹೋಗಿಸಲಿಕ್ಕೆ, ಶರೀರಕ್ಕೂ ಬಹಳಷ್ಟು ಇದೇ ತರ್ಕ ಅನ್ವಯ" ಇಂತಹ ಸಂಭಾಷಣೆಗಳು ಮಗು ಯಾಜ್ಞವಲ್ಕ್ಯ ಮತ್ತು ಅವನ ತಾಯಿಯ ನಡುವೆ ನಡೆಯುವಂಥವು. ಇನ್ನೊಂದು ಸನ್ನಿವೇಶದಲ್ಲಿ ಯಾಜ್ಞವಲ್ಕ್ಯ ಒಂದು ವರ್ಷದ ಕಾಲ ಒಂದು ವ್ರತಾಚರಣೆಯಲ್ಲಿರುತ್ತಾನೆ. ಈ ಅವಧಿಯಲ್ಲಿ ಕೇವಲ ಒಂದು ಹೊತ್ತಿನ ಆಹಾರ ಅದೂ ಮಿತಾಹಾರದಲ್ಲಿರುತ್ತಾನೆ. ’ಇದು ಹೇಗೆ ಸಾಧ್ಯ ಎಂದು ಅವನ ಪತ್ನಿ ಪ್ರಶ್ನಿಸಿದಾಗ ಅವನು ಉತ್ತರಿಸುವ ರೀತಿ ನಿಜಕ್ಕೂ ಅತ್ಯದ್ಭುತ. ಅಗ್ನಿದೇವತೆಗಳ ಕಲ್ಪನೆ ಮತ್ತು ಮನುಷ್ಯರು ಕೇವಲ ನಿಮಿತ್ತ ಮಾತ್ರ ಎಂದು ಒಂದು ಸನ್ನಿವೇಶದ ಮೂಲಕ ಹೇಳಿದ್ದಾರೆ.
ಈ ಕಾದಂಬರಿಯ ಬಗ್ಗೆ ಅಥವಾ ದೇವುಡುರವರ ಇನ್ಯಾವುದಾದರೂ ಕಾದಂಬರಿಯ ಬಗ್ಗೆ ಅಥವಾ ದೇವುಡು ರವರ ಬಗೆಗೆ ಓದುಗರು ವಿಚಾರಗಳನ್ನು ಹಂಚಿಕೊಳ್ಳಬಹುದು.