ಭೀಮನಕಟ್ಟೆ - ವಾರಾಂತ್ಯದ ಪ್ರಯಾಣಕ್ಕೊಂದು ಸುಂದರ ತಾಣ

ಭೀಮನಕಟ್ಟೆ - ವಾರಾಂತ್ಯದ ಪ್ರಯಾಣಕ್ಕೊಂದು ಸುಂದರ ತಾಣ

ಬರಹ

ಭೀಮನ ಕಟ್ಟೆ - ಒಂದು ಪ್ರಶಾಂತ ಹಾಗು ಸುಂದರ ತಾಣಕ್ಕೆ ರಜಾ ದಿನಗಳ ಬೇಟಿ

ಇಂದಿನ ೨೪/೭ರಂತೆ ವಾರವಿಡೀ ದುಡಿಯುವ ಯುವ ಜನತೆಗೆ ಕೊಂಚ ವಿಶ್ರಾಂತಿ ಹಾಗು ಸಂತೋಷದಾಯಕ ಸಮಯ ಅತ್ಯಾವಶ್ಯಕವಾಗಿ ಬೇಕಾದದ್ದೇ. ಅದಕ್ಕಾಗಿ ಅವರು ನಗರದ ಗಡಿಬಿಡಿಯಿಂದ ದೂರ, ಬಹುದೂರ ಹೋಗಿ ದಣಿದ ತಮ್ಮ ದೇಹ ಹಾಗು ಮನಸ್ಸಿಗೆ ಟಾನಿಕ್ಕಿನಂತೆ ಉತ್ತೇಜಕಾರಕ ಸ್ಥಳವನ್ನು ಹುಡುಕುವುದು ಸರ್ವೇ ಸಾಮಾನ್ಯ. ಅಂತಹ ವಿಶ್ರಾಂತಿಯ ಅವಶ್ಯಕತೆಯನ್ನು ಬಯಸಿದಾಗ, ಅವರ ಮನಸ್ಸಿಗೆ ಮೊದಲು ಬರುವುದು ಮಾನವ ನಿರ್ಮಿತವಾದ ಒಂದು ರೆಸಾರ್ಟ್. ರೆಸಾರ್ಟ್ ನೀಡುವ ಬಣ್ಣ ಬಣ್ಣದ ಕರಪತ್ರಗಳು, ಹೊಳೆಯುವ ಹಾಗು ಕಣ್ಣುಕುಕ್ಕುವಂತಹ ಚಿತ್ರಗಳು ಅವರನ್ನು ಬಹಳ ಸುಲಬವಾಗಿ ಮರುಳು ಮಾಡಿಬಿಡುತ್ತವೆ. ಆದರೆ ಆ ಸ್ಥಳವನ್ನು ಅವರು ತಲಪಿದಾಗ ಅವರ ಅರಿವಿಗೆ ಬರುವುದೇನೆಂದರೆ ಜನಜಂಗುಳಿಯಾದ ನಗರದಿಂದ ಅವರು ಬಂದಿರುವುದು ಇನ್ನೊಂದು ಜನಜಾತ್ರೆಯ ಸ್ಥಳಕ್ಕೆ, ಮನಸ್ಸಿಗೆ ಮತ್ತಷ್ಟು ಕಿರಿಕಿರಿಯನ್ನು ತುಂಬಿಕೊಳ್ಳುವುದಕ್ಕೆ ಎಂದು. ಅಲ್ಲಿನ ನಿರ್ಲಕ್ಷ್ಯದಿಂದ ಕೂಡಿದ ಜನಗಳು, ಸಹಿಸಲಸಾಧ್ಯವಾದ ಆತಿಥ್ಯ, ಕೃತಕ ವಾತಾವರಣ, ಡಬ್ಬದ ಆಹಾರಗಳು ಇವುಗಳನ್ನು ಮಾನವ ನಿರ್ಮಿತ ಗಿಡ ಮರಗಳ ತೋಟಗಳಲ್ಲಿ ಕುಳಿತು ಸೇವಿಸುವುದೆಂದರೆ ಅಲ್ಲಿರುವುದಕ್ಕಿಂತಲೂ ತಕ್ಷಣವೇ ತಮ್ಮ ಊರಿಗೆ ಹೋಗಿ ಮತ್ತೆ ಕೆಲಸಕ್ಕೆ ತೊಡಗುವುದೇ ಸರಿ ಎನಿಸುತ್ತದೆ.

"ಭೀಮನಕಟ್ಟೆ"ಯಂತಹ ಸುಂದರ ಹಾಗು ಪ್ರಶಾಂತ ವಾತಾವರಣದ ಪ್ರದೇಶವು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಹತ್ತಿರ ಇದ್ದು, ಮೇಲಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಡುವಂತಿದೆ. ಅಲ್ಲಿಗೆ ಹೋಗಲು, ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಅನುಭವಿಸಲು, ದೈಹಿಕ ಹಾಗು ಮಾನಸಿಕ ಆಲಸ್ಯವನ್ನು ದೂರ ಮಾಡಿಕೊಳ್ಳಲು ಯಾವುದೇ ಕಾಲವಾಗಲೀ, ಕಾರಣವಾಗಲೀ ಬೇಕಿಲ್ಲ.

ತೀರ್ಥಹಳ್ಳಿಯಿಂದ ಕಾರಿನಲ್ಲಿ ೧೫ ನಿಮಿಷಗಳ ಪ್ರಯಾಣವನ್ನು ತೀರ್ಥಹಳ್ಳಿ - ಆಗುಂಬೆ ದಾರಿಯಲ್ಲಿ ಬೆಳೆಸಿದರೆ, ನೀವು ಮೇಲೆ ವಿವರಿಸಿದ ಸುಂದರ ತಾಣವನ್ನು ತಲಪುತ್ತೀರಿ. ಅದು ತುಂಗಾ ನದಿಯ ದಡದಲ್ಲಿದೆ. ಅಲ್ಲಿಗೆ ಅದೃಷ್ಟವಶಾತ್ ಆಧುನೀಕರಣದ ಛಾಯೆಯಾಗಲೀ, ಭೂ ಮಾಫಿಯಾದವರ ಗೃದ್ರ ದೃಷ್ಟಿಯಾಗಲೀ ಬಿದ್ದಿಲ್ಲ. ಆದರೆ, ಅಲ್ಲಿ ರಾತ್ರಿ ಕಳೆಯುವ ಯಾವ ಅನುಕೂಲತೆಯೂ ಇಲ್ಲ. ಅಥವಾ ತಿಂಡಿ ತೀರ್ಥಗಳಿಗಾಗಿ ಯಾವ ಸೌಲಭ್ಯವೂ ಇಲ್ಲ. ಬರುವವರು ರಾತ್ರಿ ತಂಗಬೇಕಾದ ಸಮಯ ಬಂದಲ್ಲಿ, ಹತ್ತಿರದಲ್ಲಿರುವ ತೀರ್ಥಹಳ್ಳಿಯಲ್ಲಿಯೇ ಸೂಕ್ತ ಲಾಡ್ಜಿನಲ್ಲಿ ಸ್ಥಳ ಪಡೆಯಬೇಕು. ಮತ್ತು ತೀರ್ಥಹಳ್ಳಿಯಿಂದಲೇ ತಿಂಡಿ, ಊಟಗಳನ್ನು ಕಟ್ಟಿಸಿಕೊಂಡು ಹೋಗಬೇಕು.

ಇಲ್ಲಿ ತುಂಗಾ ನದಿಯು ಸದಿಯಿಂದ ನಿರಂತರವಾಗಿ ಸುಂದರ ತರುಣಿಯ ನಡಿಗೆಯಂತೆ ಬಳುಕುತ್ತಲೇ ಹರಿಯುತ್ತಿದೆ. ತುಂಗಾ ನದಿಯ ಒಂದು ಬದಿಗೆ ವಜ್ರದಂತೆ ಹೊಳೆಯುವ ಮರಳು ವಿಶಾಲವಾಗಿ ಹರಡಿದ್ದರೆ, ಇನ್ನೊಂದು ಬದಿಯಲ್ಲಿ ಹಚ್ಚ ಹಸುರಿನ ಹಚ್ಚಡವನ್ನು ಹೊದ್ದ ವಿಶಾಲವಾದ ಹಾಗು ಸಮೃದ್ಧವಾದ ಹಸಿರು ಕಾಡು. ಕಾಡಿನ ಎತ್ತರವಾದ ಹಾಗು ಅಬ್ಬಬ್ಬಾ ಎನ್ನುವ ಸೌಂದರ್ಯವನ್ನು ನದಿಯ ನೀರು ಕನ್ನಡಿಯಂತೆ ಪ್ರತಿ ಛಾಯಿಸುತ್ತಾ, ಆಗಾಗ ಏಳುವ ಅಲೆಗಳೊಂದಿಗೆ ಬಿಂಕವನ್ನು ತೋರುವುದನ್ನು ನೋಡುವುದೇ ಒಂದು ಸ್ವರ್ಗದಾಯಕ ಸಂತೋಷ.

ಈ ಸೌಂದರ್ಯಕ್ಕೆ ಮತ್ತಷ್ಟು ಮೆರುಗನ್ನು ನೀಡುವಂತೆ ನೀರಿನಿಂದ ಅಲ್ಲಲ್ಲಿ ತಲೆ ಎತ್ತಿರುವ ಚಿಕ್ಕ ಚಿಕ್ಕ ಬಂಡೆಗಳಮೇಲೆ ಸುಂದರವಾದ ಶಿವ ಲಿಂಗಗಳು ಹಾಗು ನಂದಿ ಮೂರ್ತಿಗಳನ್ನು ಯಾವುದೋ ಅಜ್ಞಾತ ಶಿಲ್ಪಿಯು ಕಡೆದಿದ್ದಾನೆ ಈ ಮೂರ್ತಿಗಳ ಒರಟು ಮೈ ಅಲ್ಲಿನ ಭೀಕರ ಸುಂದರ ವಾತಾವರಣಕ್ಕೆ ದೈವತ್ವದ ಮೆರುಗನ್ನು ನೀಡುತ್ತದೆ. ನಿಮ್ಮ ತಲೆಯು ತಾನೇ ತಾನಾಗಿ ಭಕ್ತಿಯಿಂದ ನಮಸ್ಕಾರಪೂರ್ವಕವಾಗಿ ಬಾಗುವುದರಲ್ಲಿ ಸಂದೇಹವೇ ಇಲ್ಲ.

ದೇಹಕ್ಕೆ ಸುಖವನ್ನು ನೀಡುವ ಸ್ಥಳವು ಮನಸ್ಸಿಗೆ ಮುದ ನೀಡುವುದರಲ್ಲಿಯೂ ಹಿಂದೆ ಬೀಳುವುದಿಲ್ಲ. ನೀವು ಉತ್ಸುಕರಾಗಿದ್ದು, ಈಜು ಬರುತ್ತಿದ್ದರೆ, ನಿಮಗಿಷ್ಟ ಬಂದಂತೆ, ಇಷ್ಟ ಬಂದಷ್ಟು ಹೊತ್ತು ತುಂಗೆಯ ಮಡಿಲಿನಲ್ಲಿ ಮನದುಂಬುವಷ್ಟು ಈಜಬಹುದು. ನಿಮ್ಮ ಅರಿವಿಗೆ ಬಾರದಂತೆಯೇ ದಿನ ಕಳೆದು, ಸಂಜೆಯಾಯಿತಲ್ಲಾ ಎಂಬ ಚಿಂತೆ ಬೇಡ. ಮತ್ತೆ ನಾಳೆಯೊಂದು ಇದ್ದೇ ಇದೆಯಲ್ಲಾ, ಮತ್ತೆ ಬಂದರಾಯಿತು. ದುಡ್ಡಿಲ್ಲ, ಕಾಸಿಲ್ಲ. ಅಲ್ಲಿನ ಸೌಂದರ್ಯವನ್ನು ಮನಸ್ಸಿನಲ್ಲಿ ಸಾಕಷ್ಟು ತುಂಬಿಕೊಳ್ಳಲಾಗಲಿಲ್ಲವಲ್ಲಾ ಎಂದೂ ಚಿಂತಿಸಬೇಕಾಗಿಲ್ಲ. ಅಲ್ಲಿನ ಸೌಂದರ್ಯವನ್ನು ನಿಮ್ಮ ಕ್ಯಾಮೆರಾದಲ್ಲಿ ಮನದಣಿಯುವಷ್ಟು ತುಂಬಿಕೊಂಡು ನಿಮ್ಮೂರಿಗೆ ತೆಗೆದುಕೊಂಡು ಹೋಗಿ, ಬೇಕೆನಿಸಿದಾಗಲೆಲ್ಲಾ ನೋಡುತ್ತಾ ನಿಮ್ಮೂರಿನಲ್ಲಿದ್ದುಕೊಂಡೇ ಭೀಮನಕಟ್ಟೆಯ ದರ್ಶನ ಮಾಡಬಹುದು. ಕುಟುಂಬದ ಸದಸ್ಯರೊಂದಿಗೆ ಸೇರಿ ಮನಸ್ಸನ್ನು ಆಹ್ಲಾದಗೊಳಿಸಿಕೊಳ್ಳಬಹುದು.

ಆದರೆ ಒಂದು ಸಲಹೆ : ನಿಮ್ಮ ಮನದ ಸ್ವಾಸ್ಥ್ಯವನ್ನು ಸುಧಾರಿಸಿಕೊಳ್ಳುವ ಬರದಲ್ಲಿ, ಅಲ್ಲಿನ ಶುದ್ಧತೆ, ಪ್ರಶಾಂತತೆಯನ್ನು ಅರ್ಧಂಬರ್ಧ ತಿಂದ ತಿಂಡಿ ತಿನಿಸುಗಳು, ಪ್ಲಾಸ್ಟಿಕ್ ಬ್ಯಾಗುಗಳು, ಕಾಗದದ ತುಣುಕುಗಳು ಹಾಗು ಬಾಟಲ್ಲುಗಳಿಂದ ಹಾಳು ಮಾಡದಿರಿ. ಅವುಗಳನ್ನು ನಿಮ್ಮೊಡನೆ ಹಿಂದಕ್ಕೆ ತಂದು ತೀರ್ಥಹಳ್ಳಿಯ ಮುನಿಸಿಪಾಲಿಟಿ ಕಸದ ಬುಟ್ಟಿಯಲ್ಲಿ ಹಾಕಿ. ನಿಮ್ಮಂತೆಯೇ ಮನಸ್ಸಿನ ನೆಮ್ಮದಿಯನ್ನು ಅರಸಿ ಬರುವ ಇನ್ನಿತರ ದರ್ಶನಾರ್ಥಿಗಳಿಗೂ ಉತ್ತಮ ಪರಿಸರವನ್ನು ಬಿಟ್ಟುಕೊಡಿ.

ಚಿತ್ರಗಳನ್ನು ಸಂಪದದಲ್ಲಿಯೇ ನೋಡಿ ಸಧ್ಯಕ್ಕೆ ಆನಂದಿಸಿರಿ. ನೋಡಿ ಬಂದು ನನಗೆ ತಿಳಿಸುತೀರಲ್ಲಾ?

ಎ.ವಿ. ನಾಗರಾಜು
ಅಗಿಲೆನಾಗ್ [ಎಟ್] ರಿಡಿಫ್ ಮೇಲ್.ಕಾಂ