ನಂದಿಗ್ರಾಮ: ಹೊಸ ರಾಷ್ಟ್ರೀಯ ಹೋರಾಟಕ್ಕೆ ನಾಂದಿ?
ನಂದಿಗ್ರಾಮ: ಹೊಸ ರಾಷ್ಟ್ರೀಯ ಹೋರಾಟಕ್ಕೆ ನಾಂದಿ?
ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಮಲೇಷಿಯಾದ ಕೈಗಾರಿಕಾ ಸಂಸ್ಥೆಯೊಂದಕ್ಕೆ ರಾಸಾಯನಿಕ ಕೈಗಾರಿಕೆಗಳ ವಸಾಹತುವೊಂದನ್ನು ಸ್ಥಾಪಿಸಲು ರಾಜ್ಯ ಸರ್ಕಾರ ವಿಶೇಷ ಆರ್ಥಿಕ ವಲಯವೊಂದನ್ನು ಒದಗಿಸಿಕೊಡಲು ನಡೆಸಿರುವ ಪ್ರಯತ್ನಗಳನ್ನು, ಅಲ್ಲಿನ ರೈತರು ಈ ಆರ್ಥಿಕ ವಲಯಕ್ಕೆ ಕೃಷಿ ತಮ್ಮ ಭೂಮಿಯನ್ನು ಬಿಟ್ಟುಕೊಡಲು ನಿರಾಕರಿಸುತ್ತಿರುವ ಮೂಲಕ ವಿಫಲಗೊಳಿಸುತ್ತಿರುವುದೇ ಈ ಸತತ ಹಿಂಸಾಚಾರಕ್ಕೆ ಕಾರಣವಾಗಿವೆ. ಕಳೆದ ಮಾರ್ಚ್‌ನಲ್ಲಿ ಪೋಲೀಸ್ ಗೋಲೀಬಾರ್‌ನಲ್ಲಿ ಸತ್ತ 15-20 ಜನರಿಂದ ಆರಂಭವಾದಂತೆ, ಈವರೆಗೆ ಇಲ್ಲಿ ಮತ್ತೆ ಮತ್ತೆ ಭುಗಿಲೇಳುತ್ತಿರುವ ಹಿಂಸಾಚಾರದಲ್ಲಿ ನೂರಕ್ಕೂ ಹೆಚ್ಚು ಜನ ಸತ್ತಿರಬಹುದೆಂದು ಒಂದು ಅಂದಾಜು. ಪ್ರತಿ ಬಾರಿಯ ಹಿಂಸಾಚಾರದಲ್ಲೂ ಅಲ್ಲಿನ ಸರ್ಕಾರದ ನೇತೃತ್ವ ವಹಿಸಿರುವ ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಪೋಲೀಸರ ವೇಷ ಧರಿಸಿ ಅಥವಾ ಪೋಲೀಸರ ಸಹಕಾರದಿಂದ ಈ ಹಿಂಸಾಚಾರ ನಡೆಸುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡುತ್ತಿದ್ದರೆ, ಈ ಬಾರಿ ಪಕ್ಷದ ಕಾರ್ಯಕರ್ತರೇ ಪ್ರತ್ಯಕ್ಷವಾಗಿ ಹಾಗೂ ನೇರವಾಗಿ ಯಾವುದೇ ಎಗ್ಗಿಲ್ಲದೆ, ಬಂದೂಕು - ಬಾಂಬುಗಳಿಂದ ಸಜ್ಜಾಗಿ ನಂದಿಗ್ರಾಮವನ್ನು ಸರ್ಕಾರದ ಉದ್ದೇಶಕ್ಕೆ ವಿರುದ್ಧವಿರುವ ಶಕ್ತಿಗಳಿಂದ ಮುಕ್ತಗೊಳಿಸುವ 'ಸ್ವಚ್ಛತಾ ಕಾರ್ಯಕ್ರಮ'ವನ್ನು ಆರಂಭಿಸಿದ್ದಾರೆಂದು ಹೇಳಲಾಗುತ್ತಿದೆ. ಇದನ್ನು ಪ್ರತಿಭಟಿಸಲು ಅಲ್ಲಿಗೆ ಧಾವಿಸಿದ ನರ್ಮದಾ ಬಚಾವೋ ಆಂದೋಲನದ ಮೇಧಾ ಪಾಟ್ಕರ್ ಸೇರಿದಂತೆ ಹಲವು ಮಾನವ ಹಕ್ಕು ಆಂದೋಲನದ ಕಾರ್ಯಕರ್ತರ ಮೇಲೆ ಇವರು ಹಲ್ಲೆ ನಡೆಸಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ ಈ ಕಾರ್ಯಕ್ರಮ ಸದ್ಯಕ್ಕೆ ಯಶಸ್ವಿಯೂ ಆಗಿದೆ. ಆದರೆ ಈ ಮಧ್ಯೆ ಹತ್ತಾರು ಹೆಣಗಳು ಬಿದ್ದಿವೆ. ನೂರಾರು ಜನ ಪ್ರಾಣಾಂತಿಕವಾಗಿ ಗಾಯಗೊಂಡಿದ್ದಾರೆ. ಅನೇಕ ರೈತ ಕುಟುಂಬಗಳು ಊರನ್ನೇ ತ್ಯಜಿಸಿವೆ. ಮತ್ತೆ ಹಿಂಸಾಚಾರ ಭುಗಿಲೇಳುವ ಎಲ್ಲ ಸಾಧ್ಯತೆಗಳಿವೆ.
ಇದನ್ನೆಲ್ಲ ನೋಡಿ ಇಡೀ ಬಂಗಾಳ ಬೆಚ್ಚಿ ಬಿದ್ದಿದೆ. ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷವನ್ನು ಜನರ ಪಕ್ಷವೆಂದು ಕಳೆದ ಮುವ್ವತ್ತು ವರ್ಷಗಳಿಂದಲೂ ಸತತವಾಗಿ ಗೆಲ್ಲಿಸುತ್ತಾ ಬಂದಿದ್ದ ರಾಜ್ಯದ ಜನ ಈಗ ಪಕ್ಷದ ವಿರುದ್ದ, ಅದರ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದೆ. ಪ್ರಥಮ ಬಾರಿಗೆ ರಾಜ್ಯದಲ್ಲಿ ಈ ಪಕ್ಷದ ನೇತೃತ್ವದ ಎಡರಂಗದ ಭೂಮಿ ನೀತಿಯ ವಿರುದ್ಧ ಕರೆ ಕೊಡಲಾಗಿದ್ದ ಬಂದ್ಗೆ ಜನರ ಪ್ರತಿಕ್ರಿಯೆ ಅಭೂತಪೂರ್ವವಾಗಿದೆ. ಕೊಲ್ಕೊತ್ತಾ ಮಹಾನಗರದ ಜನವಂತೂ ಸಂಪೂರ್ಣ ಬಂದ್ ಆಚರಿಸುವ ಮೂಲಕ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಈವರೆಗೆ ಎಡರಂಗದ ಸರ್ಕಾರಕ್ಕೆ ತನ್ನ ಬೆಂಬಲದ ಮೂಲಕ ಅದಕ್ಕೊಂದು ಘನತೆ ಒದಗಿಸಿದ್ದ ಅಲ್ಲಿನ 'ಭದ್ರಲೋಕ'(ಮಧ್ಯಮ ಹಾಗೂ ಮೇಲ್ಮಧ್ಯಮ ವರ್ಗಗಳ ಬುದ್ಧಿಜೀವಿ ಲೋಕ) ಸರ್ಕಾರ, ಪಕ್ಷದ ಸದ್ಯದ ಹಠಮಾರಿತನ, ಕ್ರೌರ್ಯ ಹಾಗೂ ಉದ್ಧಟತನಗಳ ವಿರುದ್ಧ ತಿರುಗಿ ಬಿದ್ದು ಬೀದಿಗಿಳಿದಿದ್ದಾರೆ. ಪಕ್ಷವನ್ನು ಜನರ ವಿರುದ್ಧ ಹಿಂಸೆಯೆಸಗಿ ಅವರನ್ನು ಹತ್ತಿಕ್ಕಲು ಒಂದು ಅಸ್ತ್ರವನ್ನಾಗಿ ಬಳಸಲು ಹೇಸದ ಸರ್ಕಾರ ತಾತ್ವಿಕವಾಗಿ ಅಧೋಗತಿಯನ್ನು ಮುಟ್ಟಿದೆ ಎಂದು ಅವರು ತೀರ್ಮಾನಿಸಿದಂತಿದೆ. ಹೀಗಾಗಿ ಎಡರಂಗದಲ್ಲಿ ಬಿರುಕಗಳು ಕಾಣಿಸಕೊಳ್ಳತೊಡಗಿವೆ. ಸಿಪಿಐ ಸರ್ಕಾರದ ಉದ್ಧಟತನವನ್ನು ಖಂಡಿಸಿದ್ದರೆ, ಆರ್ಎಸ್ಪಿ ಸರ್ಕಾರದಿಂದ ಹೊರಬರುವ ಆಲೋಚನೆಯಲ್ಲಿದೆ.
ಇದೆಲ್ಲ ಏಕಾಯಿತು? ಹೇಗಾಯಿತು? ರಾಜ್ಯದ ಮುಖ್ಯಮಂತ್ರಿ ಬುದ್ಧದೇವ ಭಟ್ಟಾಚಾರ್ಜಿ ಮಾರ್ಕ್ಸ್ ವಾದಿ ಪಕ್ಷವನ್ನು ಹೊಸ ತಾತ್ವಿಕ ದಿಕ್ಕಿನೆಡೆಗೆ ಒಯ್ಯುವ ಉತ್ಸಾಹದಲ್ಲಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಗಳಲ್ಲಿ ಎಲ್ಲರ ನಿರೀಕ್ಷೆಗಳ ವಿರುದ್ಧ ಅವರಿಗೆ ಜನತೆ ಮೂರನೇ ಎರಡರಷ್ಟು ಬಹುಮತ ನೀಡಿ ಬೆಂಬಲಿಸಿತು. ಇದರಿಂದ ಉತ್ತೇಜಿತರಾಗಿರುವ ಭಟ್ಟಾಚಾರ್ಜಿ ರಾಜ್ಯದಲ್ಲಿ ಅಭಿವೃದ್ಧಿಯ ಹೊಸ ಶಕೆ ಆರಂಭಿಸಿ ಬಂಗಾಳದ ಮಟ್ಟಿಗಾದರೂ ಯುಗಪುರುಷ ನೆನಿಸಿಕೊಳ್ಳುವ ಹಂಬಲದಲ್ಲಿದ್ದಂತಿದೆ. ಹಳೆಯ ಮಾರ್ಕ್ಸ್ ವಾದಿ ತಾತ್ವಿಕ ನಂಬಿಕೆಗಳನ್ನು ನಂಬಿ ಕೂತರೆ ಅದು ಸಾಧ್ಯವಿಲ್ಲ ಎಂಬುದೂ ಅವರಿಗೀಗ ಮನವರಿಕೆಯಾಗಿದೆ: ಖಾಸಗಿ ಬಂಡವಾಳ ಕುರಿತ ಮಾರ್ಕ್ಸ್ ವಾದಿ ನಿಲುವು ಬದಲಾದ ಜಾಗತಿಕ ಸಂದರ್ಭದಲ್ಲಿ ಅವ್ಯಾವಹಾರಿಕ ಎಂದು ಅವರಿಗನ್ನಿಸಿಬಿಟ್ಟಿದೆ. ಆದರೆ ಇವರಿಗನ್ನಿಸಿದ್ದು ಪಕ್ಷದ ಎಲ್ಲರಿಗೂ ಅನ್ನಿಸಿಲ್ಲ! ಅನ್ನಿಸಿದವರು ಹೇಳಿಕೊಳ್ಳುವಂತಿಲ್ಲ. ಏಕೆಂದರೆ, ಇದನ್ನೊಮ್ಮೆ ಒಪ್ಪಿಕೊಂಡುಬಿಟ್ಟರೆ, ಪಕ್ಷದ ತಾತ್ವಿಕ ಅಸ್ತಿವಾರವೇ ಅಲುಗಾಡಿ, ಅದರ ಇತಿಹಾಸ - ಪುರಾಣಗಳೆಲ್ಲವನ್ನೂ ಅಲ್ಲಗೆಳೆಯಬೇಕಾಗುತ್ತದೆ. ಪಕ್ಷದ ಅಸ್ತಿತ್ವವನ್ನೇ ನಿರಚನಗೊಳಿಸಿ ಪಕ್ಷವನ್ನು ಹೊಸದಾಗಿ 'ರಚಿಸ'ಬೇಕಾಗುತ್ತದೆ!. ಆದರೆ ಸದ್ಯದ ಭಾರತೀಯ ರಾಜಕೀಯ ಸಂದರ್ಭದಲ್ಲಿ ಇದು ಒಂದು ದುಸ್ಸಾಹಸವಾಗಿ ಪಕ್ಷದ ನಾಯಕರಿಗೆ ಕಂಡಿದೆ. ಏಕೆಂದರೆ, ಆಗ ಪಕ್ಷದ ತಾತ್ವಿಕ ಭಿನ್ನತೆಯೇ, ಅದು ಈವರೆಗೆ ಹಾಗೂ ಹೀಗೂ ಕಾಪಾಡಿಕೊಂಡು ಬಂದಿರುವ ಕ್ರಾಂತಿಕಾರಕತೆಯ ಬಿಂಬವೇ ಅಳಿಸಿಹೋಗಿ ಅದರ ಅಸ್ತಿತ್ವವೇ ಅನುಮಾನಾಸ್ಪದವಾಗುತ್ತದೆ. ಈ ತೊಳಲಾಟದಲ್ಲಿರುವ ಪಕ್ಷ ತಾತ್ವಿಕವಾಗಿ ಕವಲು ದಾರಿಯಲ್ಲಿದ್ದು, ತನ್ನ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಗೊಂದಲಕ್ಕೆ ಸಿಕ್ಕಿದೆ. ಇದೇ ಪಕ್ಷದ ಕೇರಳದ ಮುಖ್ಯಮಂತ್ರಿ ಅಚ್ಯುತಾನಂದನ್ ಹಳೆಯ ತಾತ್ವಿಕತೆಯನ್ನೇ ಎತ್ತಿ ಹಿಡಿಯುತ್ತಾ, ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧವೇ ಸಮರ ಸಾರಿದ್ದಾರೆ. ಅವರೀಗ 'ಅಭಿವೃದ್ದಿ'ಯ ಹೊಸ ಏಜೆಂಟರಾಗಿರುವ ರಿಯಲ್ ಎಸ್ಟೇಟ್ ಉದ್ಯಮಿಗಳೊಂದಿಗೆ ಪಕ್ಷ ಹೊಂದಿರುವ ಸಖ್ಯವನ್ನು ಎತ್ತಿ ತೋರಿಸಿದ್ದಕ್ಕಾಗಿ ಸ್ವಲ್ಪ ಕಾಲದ ಹಿಂದೆಯಷ್ಟೇ ಅಶಿಸ್ತಿನ ಆಪಾದನೆ ಎದುರಿಸಿ ಪಕ್ಷದ ನೀತಿ ನಿರೂಪಣಾ ವೇದಿಕೆಯಾದ ಪಾಲಿಟ್ ಬ್ಯೂರೋದಿಂದಲೇ ಉಚ್ಛಾಟನೆಯ ಶಿಕ್ಷೆ ಅನುಭವಿಸಬೇಕಾಯಿತು!
ಆದರೆ ಬುದ್ಧಿಜೀವಿ ಎನಿಸಿಕೊಂಡಿರುವ ಬುದ್ಧದೇವರಿಗೆ ಹೊಸ ತಾತ್ವಿಕ ದರ್ಶನವಾದಂತಿದೆ. ಮನುಷ್ಯ ನಾಗರೀಕತೆ ಈಗ ನಿರ್ಣಾಯಕವಾಗಿ ಕೃಷಿ ಸಂಸ್ಕೃತಿ ಘಟ್ಟದಿಂದ ಕೈಗಾರಿಕಾ ಸಂಸ್ಕೃತಿ ಘಟ್ಟಕ್ಕೆ ಹಾದು ಹೋಗುತ್ತಿರುವಂತೆ ಅವರಿಗೆ ಕಾಣಿಸತೊಡಗಿದೆ. ಇದು ಇತಿಹಾದ ಅನಿವಾರ್ಯ ಚಲನೆ. ಇದನ್ನು ಒಪ್ಪಿಕೊಳ್ಳದೇ ಹೋದರೆ ರಾಜ್ಯ, ರಾಷ್ಟ್ರ ಹಿಂದೆ ಬಿದ್ದು ಹೋಗುತ್ತವೆ; ಜನತೆ ಉದ್ಯೋಗಗಳಿಲ್ಲದೆ ಸಂಕಷ್ಟಕ್ಕೀಡಾಗುತ್ತಾರೆ ಎಂದು ಅವರು ಭಾವಿಸತೊಡಗಿದ್ದಾರೆ. ಇದು ಜಾಗತೀಕರಣವಾದಿಗಳು ಕಳೆದೆರಡು - ಮೂರು ದಶಕಗಳಿಂದಲೂ ಹೇಳಿಕೊಂಡು ಬರುತ್ತಿರುವ 'ಸತ್ಯ' ಎಂಬುದನ್ನರಿಯದೆ ಅವರು, ಇದು ತಾನೇ ಈಗಷ್ಟೇ ಕಂಡುಕೊಂಡ ಸತ್ಯವೆಂಬಂತೆ ಅದನ್ನು ಅನುಷ್ಠಾನಗೊಳಿಸಲು ಅವತಾರ ಪುರುಷನ ಆತ್ಮವಿಶ್ವಾಸದೊಂದಿಗೆ ಹಠ ತೊಟ್ಟು ನಿಂತಿದ್ದಾರೆ. ಅವರ ಈ ನಿಲುವಿನಲ್ಲಿ ಸಾಮಾನ್ಯವಾಗಿ ಫ್ಯಾಸಿಸ್ಟ್ರಲ್ಲಿ ಕಾಣುವ ಸರ್ವಜ್ಞತೆಯ ಅಹಂಕಾರ ಎದ್ದು ಕಾಣುತ್ತಿದೆ. ನಂದಿ ಗ್ರಾಮ ವಿಶೇಷ ಆರ್ಥಿಕ ವಲಯದ ವಿರುದ್ಧ ಹೋರಾಟವನ್ನು ಜನತೆಯ ಹೋರಾಟವೆಂದು ಪರಿಗಣಿಸದೆ; ರಾಜ್ಯದ ಕೈಗಾರಿಕಾಭಿವೃದ್ಧಿಯನ್ನು ಸಹಿಸದ (ಏಕೆ?) ನಕ್ಸಲೈಟರು, ತೃಣಮೂಲ ಕಾಂಗ್ರೆಸ್ಸಿಗರು ಸೇರಿದಂತೆ ತಮ್ಮ ರಾಜಕೀಯ ಶತ್ರುಗಳು ನಡೆಸಿರುವ ಪಿತೂರಿ ಎಂದು ನಂಬಿ ಅದನ್ನು ಹೊಸಕಿ ಹಾಕಲು ಕಟಿಬದ್ಧರಾಗಿ ನಿಂತಿರುವ ಬುದ್ಧದೇವ, ತಮ್ಮ ಈ ಉದ್ಧಟತನದಿಂದಾಗಿ ಪ.ಬಂಗಾಳದಲ್ಲಿ ಎಡರಂಗದ ನಿರಂತರ ಆಡಳಿತ ದಾಖಲೆಯನ್ನು ಕೊನೆಗಾಣಿಸುವುದರಲ್ಲಿ ಯಶಸ್ವಿಯಾದರೂ ಆಶ್ಚರ್ಯವಿಲ್ಲ. ಅದು ಪಕ್ಷದ ಹಿತ ದೃಷ್ಟಿಯಿಂದಲೂ, ರಾಷ್ಟ್ರದ ಹಿತ ದೃಷ್ಟಿಯಿಂದಲೂ ಒಳ್ಳೆಯದೇ.
ಯಾಕೆ ಒಳ್ಳೆಯದು ಎಂದರೆ, ಈ ತಳಮಳದಲ್ಲಿ ಮಾರ್ಕ್ಸ್ ವಾದಿ ಪಕ್ಷಕ್ಕೆ ತನ್ನ ತಾತ್ವಿಕತೆಯನ್ನು ಇಡಿಯಾಗಿ ಪುನರ್ಪರಿಶೀಲಿಕೊಳ್ಳುವ ಅವಕಾಶ ಒದಗುತ್ತದೆ. ಸೋವಿಯತ್ ಒಕ್ಕೂಟದ ಪತನವಾದ ನಂತರ ಜಗತ್ತನ್ನು ಅಮೆರಿಕಾ - ಚೀನಾ ಎಂಬ ಎರಡು ಧೃವಗಳ ಜಗತ್ತನ್ನಾಗಿ ನೋಡುವ ಭ್ರಮೆಗೆ ಸಿಲುಕಿ ತನ್ನ ನಿಲುವುಗಳನ್ನು ರೂಪಿಸಿಕೊಳ್ಳುತ್ತಾ ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿರುವ ಈ ಪಕ್ಷ, ತಾತ್ವಿಕವಾಗಿ ದಿವಾಳಿಯ ಅಂಚಿನಲ್ಲಿದ್ದಂತೆ ತೋರುತ್ತಿದೆ. ಭಾರತದ ರಾಜಕಾರಣದಲ್ಲಿ ತಮ್ಮ ನಾಯಕರ ಸರಳ ಬದುಕು ಹಾಗೂ ತನ್ನದೇ ತಾತ್ವಿಕ ಬದ್ಧತೆಗಳಿಂದಾಗಿ, ಬಂಡವಾಳಶಾಹಿಗಳ ಅಂತಿಮ ವಿಜಯ ಯಾತ್ರೆಯಂತಿರುವ ಜಾಗತೀಕರಣದ ವಿರುದ್ಧ ಸಮರ ಸಾರಬಲ್ಲ ನೈತಿಕ ಸಾಮಥ್ರ್ಯವಿರುವ ಏಕೈಕ ರಾಜಕೀಯ ಪಕ್ಷವಾಗಿ ಕಂಡಿರುವ ಈ ಪಕ್ಷ, ಮೂರು ದಶಕಗಳ ನಿರಂತರ ಆಡಳಿತ ಸುಖದಿಂದಾಗಿ ತಾತ್ವಿಕ ಜಡತೆಗೆ ಈಡಾದಂತೆ ತೋರುತ್ತಿದೆ.ಇದರ ನಾಯಕರ ಮನಸ್ಸುಗಳು ತುಕ್ಕು ಹಿಡಿದಿವೆ. ಇದು ಜ್ಯೋತಿ ಬಸು ಎಂಬ ಮಧ್ಯಮ ವರ್ಗಗಳ ಅಭಿರುಚಿಯ ಸುಲಭ ಆಡಳಿತಗಾರನ ಕಾಲಕ್ಕೇ ಆರಂಭವಾಯಿತೆಂದು ಹೇಳಲಾಗುತ್ತದೆ. ಇದರಿಂದಾಗಿ ಜಾಗತೀಕರಣದ ಸಂಕೀರ್ಣ ಪರಿಣಾಮಗಳನ್ನು ಅದರೆಲ್ಲ ಆಳಗಳಲ್ಲಿ ಅರಿಯುವ ಅಧ್ಯಯನ ಶೀಲತೆಯನ್ನೂ, ಸಾಮಾನ್ಯ ಜನತೆಯ ನಾಡಿಮಿಡಿತವನ್ನು ಅರಿಯುವ ಸೂಕ್ಷ್ಮತೆಯನ್ನೂ ಅವರು ಕಳೆದುಕೊಂಡಂತೆ ತೋರುತ್ತದೆ. ಹಾಗಾಗಿಯೇ ವಿಶೇಷ ಆರ್ಥಿಕ ವಲಯ ಯೋಜನೆಯನ್ನು ರಾಷ್ಟ್ರಮಟ್ಟದಲ್ಲಿ ತಾತ್ವಿಕವಾಗಿ ವಿರೋಧಿಸುತ್ತಲೂ, ತಾವು ಆಳುತ್ತಿರುವ ರಾಜ್ಯಗಳಲ್ಲಿ ಅದನ್ನು ಬೆಂಬಲಿಸುವ ದ್ವಂದ್ವಕ್ಕೆ ಸಿಕ್ಕಿದ್ದಾರೆ.
ಬುದ್ಧದೇವ ಭಟ್ಟಾಚಾರ್ಜಿ ಸೇರಿದಂತೆ ಈ ಪಕ್ಷದ ನಾಯಕರಿಗೆ ಕೈಗಾರಿಕೀಕರಣವೆಂದರೆ, ಮಾರ್ಕ್ಸ್ ಪರಿಕಲ್ಪಿಸಿದ್ದ ಐರೋಪ್ಯ ಸಂದರ್ಭದ ಕೈಗಾರಿಕೀಕರಣವೇ ಆಗಿದೆ. ಹಾಗೇ ಕೃಷಿ ಅಥವಾ ಗ್ರಾಮ ಸಂಸ್ಕೃತಿ ಎಂದರೆ ಮಾರ್ಕ್ಸ್ ಕಲ್ಪಿಸಿಕೊಟ್ಟ ಮೌಢ್ಯ - ಮುಟ್ಠಾಳತನಗಳ ಆಡೊಂಬಲವೇ ಆಗಿದೆ. ಜಗತ್ತಿನ ಮಾರ್ಕ್ಸ್ ವಾದಿಗಳು ತಮ್ಮ ಮಣ್ಣಿಗನುಗುಣವಾಗಿ ಮಾರ್ಕ್ಸ್ ವಾದವನ್ನು ಬೆಳೆಸಿದ್ದರೆ,(ಉದಾ: ಈರೋಪ್ ಹಾಗೂ ಲ್ಯಾಟಿನ್ ಅಮೆರಿಕಾದ ಚಿಂತಕರು ಹೋರಾಟಗಾರರು) ಭಾರತದ ಮಾರ್ಕ್ಸ್ ವಾದಿಗಳು ಮಾರ್ಕ್ಸ್ ನ ಐರೋಪ್ಯ ನೋಟ ಕ್ರಮದಲ್ಲೇ ಇನ್ನೂ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿದ್ದಾರೆ. ಹೀಗಾಗಿಯೇ, ಇವರ ಮಾರ್ಕ್ಸ್ ವಾದದಲ್ಲಿ ಸ್ಟಾಲಿನ್ನ ಕ್ರೌರ್ಯದ ಸುಳಿವೂ ಈಗ ಕಾಣತೊಡಗಿದೆ. ಹಾಗೆ ನೋಡಿದರೆ, ಲೋಹಿಯಾ ಹೇಳಿದ ಹಾಗೆ, ಮಾರ್ಕ್ಸ್ ವಾದಿಗಳಿಗೂ ಅವರ ಪ್ರತಿದ್ವಂದ್ವಿಗಳಾದ ಬಂಡವಾಳಶಾಹಿಗಳಿಗೂ ಅಂತಹ ವ್ಯತ್ಯಾಸವೇನಿಲ್ಲ. ಇಬ್ಬರೂ ಬೃಹತ್ ಬಂಡವಾಳದ ಆಧುನಿಕ ಕೈಗಾರಿಕೆಗಳ ಆರಾಧಕರು. ಜಗಳ ಏನಿದ್ದರೂ ಬಂಡವಾಳದ ಸ್ವರೂಪಕ್ಕೆ ಸಂಬಂಧಿಸಿದ್ದಷ್ಟೇ. ಈ ಜಗಳವೂ ಈಗ ಪರಿಹಾರವಾಗಿದೆ: ಚೀನಾವೇ ಈಗ ಆಕರ್ಷಕ ಮಾದರಿಯಾಗಿ ಕಂಡು, ವಿದೇಶಿ ಖಾಸಗಿ ಬಂಡವಾಳವನ್ನು ಭಾರತದ ಕಮ್ಯುನಿಸ್ಟರು ಒಪ್ಪಿಕೊಳ್ಳತೊಡಗಿದ್ದಾರೆ. ಆದರೆ ಚೀನಾದ ಕಮ್ಯುನಿಸ್ಟ್ ಆಡಳಿತಗಾರರಿಗಿರುವ ಸರ್ವಾಧಿಕಾರ ಬಲ ಭಾರತದ ಕಮ್ಯುನಿಸ್ಟರಿಗಿಲ್ಲ, ಇದೂ ಕಮ್ಯುನಿಸಮ್ಮೇ ಎಂದು ಹೇಳಿ ಜನತೆಯ ಬಾಯಿ ಮುಚ್ಚಿಸಲು!
ಬಹುಶಃ ಕಮ್ಯುನಿಸ್ಟ್ ಚಳುವಳಿ ತನ್ನ ಅತ್ಯುತ್ತಮ ದಿನಗಳಲ್ಲಿ ಜನತೆಯ ಮನದಲ್ಲಿ ಬಿತ್ತಿದ್ದ ಜನಪರ ನಂಬಿಕೆಗಳೇ ಇಂದು ನಂದಿಗ್ರಾಮದಲ್ಲಿ ವಿಶೇಷ ಆರ್ಥಿಕ ವಲಯದ ವಿರುದ್ಧ ಜನ ಪ್ರತಿಭಟಿಸಲು ಪ್ರೇರಣೆ ನೀಡಿವೆ! ಜನ ಈಗ ಪಕ್ಷವನ್ನು ಮೀರಿ ಬೆಳೆದಿದ್ದಾರೆ. ಅಂತಹ ಅನಿವಾರ್ಯತೆಯೂ ಈಗ ಉಂಟಾಗಿದೆ. ನೆಲದ ವಾಸನೆ ಬಲ್ಲ ಈ ಜನ, ತತ್ವಕ್ಕೂ ನೆಲದ ವಾಸನೆಗೂ ಸಂಬಂಧವೇ ಕಡಿದು ಹೋಗುತ್ತಿರುವ ಇಂದಿನ ಈ ರಾಜಕಾರಣದ ವಿರುದ್ಧ ಸಹಜವಾಗಿಯೇ ಸಿಡಿದೆದ್ದಿದ್ದಾರೆ. ಭಾರತದ ಹೃದಯವಿರುವುದು ಗ್ರಾಮಗಳಲ್ಲಿ ಎಂಬ ಗಾಂಧೀಜಿ ಅರಿವು ಈಗ ಈ ತೆರನಾಗಿ ಕಮ್ಯುನಿಸ್ಟ್ ನೆಲದಲ್ಲಿ ಸ್ಫೋಟಗೊಳ್ಳುತ್ತಿರುವುದು ಭಾರತದಲ್ಲಿ ಆರಂಭವಾಗಬೇಕಿರುವ ಹೊಸ ರಾಜಕಾರಣದ ದೃಷ್ಟಿಯಿಂದ ತುಂಬಾ ಅರ್ಥಪೂರ್ಣವೇ ಆಗಿದೆ. ಭೂಮಿಯಿಂದ ಹಣ ಬೆಳೆದುಕೊಳ್ಳುವುದನ್ನು ನೋಡಿ ಹೇಗೋ ಸಹಿಸಿಕೊಂಡಿದ್ದ ಭಾರತದ ಜನತೆ, ಈಗ ಭೂಮಿಯನ್ನೇ ಹಣವನ್ನಾಗಿ ಮಾಡಿಕೊಂಡು 'ತಾಯ್ತನ'ದ ಅದರ ಮೂಲ ಪಾವಿತ್ರ್ಯವನ್ನೇ ನಾಶ ಮಾಡಹೊರಟಿರುವ ತಾಯ್ಗಂಡತನದ ವಿರುದ್ಧ ಸೆಟೆದೆದ್ದು, ನಿರ್ಣಾಯಕ ಯುದ್ಧಕ್ಕೆ ಸಿದ್ಧವಾಗುತ್ತಿರುವಂತೆ ತೋರುತ್ತಿದೆ. ಹಾಗಾಗಿ ಇದು ಕೇವಲ ಒಂದು ಸರ್ಕಾರದ ವಿರುದ್ಧ ಅಥವಾ ಒಂದು ರಾಜಕೀಯ ನಿಲುವಿನ ವಿರುದ್ಧ ಆರಂಭವಾಗಿರುವ ಯುದ್ಧವಾಗಿರಲಾರದು. ಇದು ಜಾಗತೀಕರಣವೆಂಬ ಅಶ್ಲೀಲ ಮತ್ತು ಅಪವಿತ್ರ ಪ್ರಗತಿಪರತೆಯ ವಿರುದ್ಧದ ಯುದ್ಧದ ಸಾಂಕೇತಿಕ ಆರಂಭವೂ ಆಗಿರಬಹುದು.
ಏಕೆಂದರೆ, ಇಂದು ಬಂಗಾಳ ಮಾಡಿದ್ದನ್ನು ಭಾರತ ನಾಳೆ ಮಾಡುತ್ತದೆ ಎಂಬ ಹಳೆಯ ಮಾತೊಂದಿದೆ. ಬಂಗಾಳದ ಇಬ್ಭಾಗವೇ ಭಾರತ ರಾಷ್ಟ್ರೀಯ ಹೋರಾಟಕ್ಕೆ ದೊಡ್ಡ ಪ್ರೇರಣೆ ನೀಡಿತೆಂಬುದನ್ನು ನಾವು ಮರೆಯಬಾರದು. ಹಾಗೇ ಭಾಷಾ ರಾಷ್ಟ್ರೀಯತೆಗಳನ್ನೂ ಪುನರುಜ್ಜೀವನಗೊಳಿಸಿತು ಎಂಬುದನ್ನೂ. ಬಂಗಾಳ ಸದಾ ಇಂತಹ ಮೂಲ ಸತ್ಯಗಳ ಹುಡುಕಾಟದಲ್ಲಿರುವ ಮಣ್ಣು. ಅದೀಗ ಯಾವ ಮೂಲ ಸತ್ಯದ ಹುಡುಕಾಟದಲ್ಲಿರಬಹುದು? ಗುಜರಾತ್‌ನಲ್ಲಿ ಮಣ್ಣಾಗಿ ಹೋಗಿರುವ ಗಾಂಧಿ ಸತ್ಯ ಬಂಗಾಳದ ಮಣ್ಣಿನಲ್ಲಿ ಚಿಗುರೊಡೆಯಬಹುದೇ? ಕಾದು ನೋಡಬೇಕು.
Comments
ಉ: ನಂದಿಗ್ರಾಮ: ಹೊಸ ರಾಷ್ಟ್ರೀಯ ಹೋರಾಟಕ್ಕೆ ನಾಂದಿ?
ಉ: ನಂದಿಗ್ರಾಮ: ಹೊಸ ರಾಷ್ಟ್ರೀಯ ಹೋರಾಟಕ್ಕೆ ನಾಂದಿ?