ಪ್ರಹರಿ

ಪ್ರಹರಿ

ಬರಹ

ಪ್ರಹರಿ


ಅರಿವಿಲ್ಲದವನೆಡೆಗೆ ಎಸೆಯದಿರಿ ಹೂವುಗಳ


ಕಲ್ಲಾಗಿ ನಾನಿಹೆನು ಮರೆತಂತೆ ನೆನಹುಗಳ


ಕಾರ್ಗಿಲ್ನ ಅಘಾತ ಮರೆಸಿತ್ತು ಅರಿವುಗಳ


ಕರಟಿಸಿ ಕದಿರೊಡೆದ ಭಾವನೆಯ ಚಿಗುರುಗಳ


 


ಪ್ರಹರಿಯಾದ ನನ್ನಾಸೆ ಅರಳಿತ್ತು ಆಗೊಮ್ಮೆ


ಟಿಸಿಲೊಡೆದ ಭಾವನೆಯ ಚಿಗುರುಗಳ ಕಡೆಗೊಮ್ಮೆ


ಹಸಿರುನೆಲ ತಿಳಿನೀಲದಂಬರದ ರಕ್ಷೆಯಲಿ


ತನ್ನವರ ಸ್ಥಿರನೆಲೆಯ ಸುಖನಗೆಯ ಕಕ್ಷೆಯಲಿ


 


ಸುಡುಸುಡುವ ಬಿಸಿಲಿರಲಿ ಮೈಕೊರೆವ ಚಳಿಯಿರಲಿ


ಬಸಿದ ಕಣ್ಣೀರಿರಲಿ ಹರಿದ ಕೆನ್ನೀರಿರಲಿ


ನೊವಿರಲಿ ನಲಿವಿರಲಿ ತನ್ನವರ ನೆನಪಿನಲಿ


ಕಾವನೀ ಪರಿ ಪ್ರಹರಿ ಬತ್ತದಾವೇಶದಲಿ


 


ಕೊಚ್ಚಿ ಬಿಸುಟರೂ ಸಖರ, ಮತ್ತೆ ತರಿದರೂ ಹಲರ


ಒರಸಿ ನಡೆವರು ಮುಂದೆ ಸೆಲೆಯೊಡೆವ ಕಣ್ಣೀರ


ತಮ್ಮೊಡಲ ಪ್ರಿಯಸಖರ ,ಏಕಾಂಗೀ ಕಳೆವರವ


ಬಿಟ್ಟು ಕೊಡುವರು ಜೀವ, ಕಾಯೆ ತಾಯಿಯ ನೆಲವ


 


ಯಾರದೋ ಸ್ವಾರ್ಥಕ್ಕೆ ಕಾಟ ಸೆಣಸಾಟಕ್ಕೆ


ಸೆಣೆಸಿ ನಿಲುವರು ತಮ್ಮ ಪ್ರಾಣ ಬಲಿದಾನಕ್ಕೆ


ಉಳಿಯೆ ಕಾಯ್ವರು ಮತ್ತೆ ಮಲೆ ಹತ್ತಿ ಗಡಿ ಸುತ್ತೆ


ಅಳಿದುಳಿವ ಕೆಚ್ಚೊಲವು ಇದುವೆ ಪ್ರಹರಿಯ ನಿತ್ತೆ


 


ಮುಗಿಯದೀ ಸೆಣಸಾಟ ಈ ಹೂಟ ಕೆಣಕಾಟ


ಅಳಿದವರ ಮನೆಮನೆಯ ಕಣ್ಣೊರಸೋ ಹೆಣಗಾಟ


ಮತ್ತೆ ದುರ್ಲಭ ಅವರ ಹೆತ್ತೊಡಲ ಸರಸಾಟ


ಪ್ರಹರಿಯಾ ಪ್ರಿಯಜನರ ಹುಸಿನಗೆಯ ಸವಿಯೂಟ


 


ನನಗೀಗ ಬಲುದೂರ ಕರಗುವಾ ಬೆಳ್ಸೆರಗು


ಮಿಡುಕುವಾ ಹಸಿರೆಲೆಯ ಪ್ರಕೃತಿಯ ನಲ್ಸೆರಗು


ಅರಿವಿಲ್ಲದವನೆಡೆಗೆ ಎಸೆಯದಿರಿ ಪುಷ್ಪಗಳ


ಕಲ್ಲಾಗಿ ನಾನಿಹೆನು ಮರೆತಂತೆ ನೆನಹುಗಳ