ಆ ಹಳ್ಳಿಯ ಜೀವನ
ನಾನು ಸಣ್ಣವನಿದ್ದಾಗ ನನ್ನ ತಂದೆಯವರು ಅವರ ಅಣ್ಣ
ತಮ್ಮಂದಿರೊಡನೆ ಹಳ್ಳಿಯಲ್ಲಿ ವಾಸಿಸುತ್ತಿದ್ದರು. ಈಗ ಎಣಿಸಿದರೆ ಆಗಿನ ಹಳ್ಳಿಯ ಜೀವನ
ನಮಗೆಲ್ಲ ತುಂಬಾ ಮಜಾ ತರುವಂತಹದಿದ್ದಿತ್ತು. ಹಳ್ಳಿಯ ಆರೋಗ್ಯಮಯ ವಾತಾವರಣ ಮೈಬಗ್ಗಿಸಿ
ದುಡಿಯಲು ಎಲ್ಲರನ್ನೂ ಪ್ರೆರೇಪಿಸಿ ಅರೋಗ್ಯಮಯ ದೇಹ, ಕೌಟುಂಬಿಕ ಪರಿಸರ ಉಂಟು
ಮಾಡುತ್ತಿತ್ತು. ಆದರೆ ಆಗ ಎಲ್ಲರೂ ಉತ್ತಮರೇ ಎಂದೋ ಅಥವಾ ಎಲ್ಲ ಕಡೆ ನ್ಯಾಯಯುತ ಜೀವನವೇ
ನಡೆಯುತ್ತಿತ್ತು ಅಂತಲ್ಲ. ಅಂದರೆ ಕುಟುಂಬದ ಹಿರಿಯರಿಂದಾಗಿ ಎಲ್ಲರೂ ಹೊಂದಿಕೊಂಡು
ಹೋಗುವುದು ಅನಿವಾರ್ಯವಾಗಿತ್ತು ಅನ್ನಿಸುತ್ತೆ.
ಆಗೆಲ್ಲ ಮಕ್ಕಳು ಹಿರಿಯರು
ಒಬ್ಬರನ್ನೊಬ್ಬರು ಹೊಂದಿಕೊಂಡು, ಅರಿತುಕೊಂಡು, ಸಹಬಾಳ್ವೆ, ಸಹಜೀವನ,ಎನ್ನುವ
ಮಾತುಗಳೆಲ್ಲಾ ಒಂದರ್ಥದಲ್ಲಿ ಸರಿಯಾಗಿಯೇ ಹೊಂದುತ್ತಿದ್ದವು ಆ ಹಳ್ಳಿಯ
ಜೀವನಕ್ಕೆ.ಒಂದೊಮ್ಮೆ ಪರಸ್ಪರ ಏನಾದರೂ ವೈಮನಸ್ಸು ಉಂಟಾಗಿದ್ದರೂ ಹೊರಗಡೆ
ತೋರಿಸಿಕೊಳ್ಳುವಂತಹ ಜಾಯಮಾನ ಇರುವುದಿಲ್ಲವಿತ್ತು.ಹಾಸ್ಯ ಎಲ್ಲದರಲ್ಲಿಯೂ ಹಾಸು
ಹೊಕ್ಕಾಗಿರುತ್ತಿತ್ತು. ನಾನಂತೂ ಹಳ್ಳಿಯ ಜೀವನ ತುಂಬಾನೇ ಅನುಭವಿಸಿದ್ದೆ. ಕೆಲವೊಂದು
ಪ್ರಸಂಗಗಳು ಈಗಲೂ ನೆನಪಿಸಿಕೊಂಡರೆ ನಗುವಿನ ಅಲೆಯೆದ್ದು ನಾನು ಅದರಲ್ಲೇ ಮುಳುಗಿ
ಬಿಡುತ್ತೇನೆ.
1 ನಂಬುಗೆ
ಚಿಕ್ಕವನಿರುವಾಗ ಕೆಲವೊಮ್ಮೆ ದನ ಕರುಗಳನ್ನು ಮೇಯಿಸಲು ಹೋಗಬೇಕಾಗುತ್ತಿತ್ತು. ಅದೂ
ಸ್ಕೂಲಿಂದ ಬಂದ ಮೇಲೆ, ಅಥವಾ ಹಲಕೆಲವೊಮ್ಮೆ ರಜಾ ದಿನಗಳಲ್ಲಿ, ಕೆಲವೊಮ್ಮೆ ಹೀಗೇ
ಜಾಲಿಯಾಗಿ ಓರಗೆಯ ಗೆಳೆಯರೊಡನೆ,ಕೆಲವೊಮ್ಮೆ ಮನೆಯವರೆಲ್ಲಾ ಗದ್ದೆಯ ಕೆಲಸಕ್ಕೆ ಹೋದಾಗ.
ಈ ಘಟನೆ ನಡೆದಾಗ ನಾನು ಚಿಕ್ಕವ, ನನ್ನ ದೊಡ್ಡ ಅಕ್ಕನೊಡನೆ ದನ ಮೇಯಿಸಲು ಹೋದಾಗ ಒಂದು
ತುಡುಗು ದನ ತಪ್ಪಿಸಿಕೊಂಡು ಬಿಟ್ಟಿತು. ಅದರ ಕುತ್ತಿಗೆಯಲ್ಲಿ ಕಟ್ಟಿದ
ಗಂಟೆಯೆಲ್ಲಿಯಾದರೂ ಕೇಳಿಸುತ್ತದೆಯೋ ಅಂತ ನೋಡುವ ಸಲುವಾಗಿ ನಾನು ಅಕ್ಕ ಮತ್ತು ಅವಳ
ಹತ್ತಿರವಿರುವ ದನಗಳನ್ನೆಲ್ಲಾ ಬಿಟ್ಟು, ಹಾಡಿಯ ಕಡೆ ಬಂದೆ. ಆಗಲೇ ಸಂಜೆ ಇಳಿದು
ರಾತ್ರೆಯು ಹಣಿಕುತ್ತಿತ್ತು. ನಾನು ದನದ ಹೆಸರು ಹಿಡಿದು ಕೂಗುತ್ತಾ ಹುಡುಕುತ್ತಿರುವ
ಹೊತ್ತಿಗೇ ಚಿಕ್ಕದಾಗಿ ಮಳೆ ಕೂಡಾ ಹನಿಯಲು ಪ್ರಾರಂಬಿಸಿತು. ಹನಿಯುವ
ಮಳೆ,ಆವರಿಸುತ್ತಿರುವ ಸಂಜೆಗತ್ತಲು, ದನವನ್ನ ಹೇಗಾದರೂ ಮಾಡಿ ಕಂಡು ಹಿಡಿಯುವೆನೆಂಬ
ಛಲ,ಎಲ್ಲವೂ ಸೇರಿ ನನ್ನ ಹಾಡಿಯ(ಸಣ್ಣ ಕಾಡು) ಕಡೆಗೆ ಹೋಗಲು ಪ್ರೆರೇಪಿಸಿದುವು. ಆ
ದನವೇನೋ ಸಿಕ್ಕಿತು , ಅದು ಇನ್ನೂ ಮುಂದೆ ಮುಂದೆ ನಡೆಯುತ್ತಿತ್ತು, ಹೀಗೆ ನಾನೂ ದನವೂ
ಕಾಡಿನ ಮಧ್ಯೆ ಬಂದೆವು, ಆಗಲೇ ಮಳೆಯೂ ಜೋರಾಗಿ ಹನಿಯಲು ಪ್ರಾರಂಬಿಸಿತು, ನಾನು ದನವನ್ನು
ಹಿಂಬಾಲಿಸುತ್ತ ಹಿಂಬಾಲಿಸುತ್ತ ಯಾವ ಕಡೆತಿರುಗಿದೆ, ನಮ್ಮ ಮನೆಯು ಯಾವ ಕಡೆಗೆ ಇದೆ
ಎಂಬುದನ್ನು ಆ ಕ್ಷಣ ಮರೆತು ಬಿಟ್ಟೆ ಮಬ್ಬು ಗತ್ತಲಿನಲ್ಲಿ ಕಾಡಿನ ಮಧ್ಯೆ ದಾರಿ ತಪ್ಪಿ
ಗಾಬರಿಯಾದೆ. ಇನ್ನೇನು ಮಾಡಲಿ ಮನೆಗೆ ಹೇಗೆ ತಲುಪಿಯೇನು? ಎನ್ನುವ ಚಿಂತೆಯಿಂದ
ಮತ್ತಷ್ಟು ಹೆದರಿ ಅಳತೊಡಗಿದೆ.ಕತ್ತಲು, ಗುಡ್ಡಗಾಡು, ಮಳೆ ಈ ಎಲ್ಲದರ ನಡುವೆ ದಾರಿ
ಕೂಡಾ ಮರೆತು ಒಂದು ವಿಚ್Cಇನ್ನ ಪರಿಸ್ಥಿತಿ ಎದುರಾಯಿತು. ಅದೆಲ್ಲದರ ಮಧ್ಯೆ ಅಮ್ಮ
ಯಾವಾಗಲೂ ಹೇಳುತ್ತಿದ್ದ ಸಂಕಟ ಬಂದಾಗ ರಾಮನ ಹೆಸರು ಹೇಳುತ್ತಿದ್ದುದು ನೆನಪಾಗಿ ಆ
ಹೆದರಿಕೆ ಮತ್ತು ಅಳುವಿನ ಮಧ್ಯೆಯೂ ರಾಮ ರಾಮ ಎಂದು ಕೂಗತೊಡಗಿದೆ. ಮನೆ ಬಲಗದೆ ಇರಬಹುದು
ಎಂತ ಬಲಗಡೆ ಸ್ವಲ್ಪ ದೂರ ಹೋಗುವುದು, ನಂಬಿಗೆ ಬರದೇ ಮತ್ತೆ ಹಿಂದೆ ತಿರುಗಿ ಸ್ವಲ್ಪ
ದೂರ ನಡೆಯುವುದು,ಇವುಗಳ ನಡುವೆ ರಾಮ ರಾಮ ಮತ್ತು ಅಳು ಅವ್ಯಾಹತವಾಗಿ ನಡೆಯುತ್ತಿದ್ದವು.
ಆ ದಿನದ ಮಟ್ಟಿಗೆ ಹೇಳುವುದಾದರೆ ಆ ಕತ್ತಲು, ಮಳೆ, ಕಾಡಿನ ದಾರಿಯಲ್ಲಿ 'ರಾಮ' ನೇ ಬಂದ.
ಆತ ಹತ್ತಿರದ ಊರಿನವ, ನಮ್ಮ ಅಜ್ಜ ಎಲ್ಲರಿಗೂ ಬೇಕಾದವರಾದ್ದರಿಂದ ಮಕ್ಕಳೆಲ್ಲರ ಪರಿಚಯ
ಎಲ್ಲರಿಗೂ ಇರುತ್ತಿತ್ತು. ಆತ ಹತ್ತಿರದಿಂದ ನನ್ನ ನೋಡಿದ ಕೂಡಲೇ ಗುರುತುಹಿಡಿದ.
ನನ್ನನ್ನು ತನ್ನ ಹೆಗಲ ಮೇಲೆ ಕುಳ್ಳಿರಿಸಿಕೊಂಡು ತನ್ನ ಮನೆಯ ದಾರಿ ಬಿಟ್ಟು ನಮ್ಮ ಮನೆಯ
ದಾರಿ ಹಿಡಿದ. ನಾನು ಮನೆಗೆ ತಲುಪಿದಾಗಲೇ ಅಪ್ಪ ಅಮ್ಮ ಎಲ್ಲರ ಜೀವದಲ್ಲಿ ಜೀವ
ಬಂತು,ನನ್ನ ಬಿಕ್ಕುವಿಕೆ ಮುಗಿಯುವಾಗ ತಂದೆಯವರ ಬಿಸಿಮಗ್ಗುಲಲ್ಲಿ ಬಿಸಿಬಿಸಿ
ಊಟದೊಂದಿಗೆ ನನ್ನ ಈ ಅನುಭವ ಎಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೆ. ಈ ಅವಶ್ಯಕಥೆಗೆ
ಸರಿಯಾಗಿ ರಾಮ ರಾಮನನ್ನೇ ಕಳುಹಿಸಿಕೊಟ್ಟದ್ದು ಕಾಕತಾಳೀಯ ವಿಷಯವಾದರೂ ಈಗಲೂ ಈ ವಿಷಯ
ಯೋಚನೆಗೆ ಒಂದು ಗ್ರಾಸವಾದುದು ಸುಳ್ಳಲ್ಲ. (14.06.07)
ಸಾವಿನ ಹತ್ತಿರ
ನಮ್ಮ ಕೆಲಸದವರ ಪೈಕಿ ಒಂದು ಸಂಸಾರ ನಮ್ಮ ಹೊಲದ ಒಂದು ಭಾಗದಲ್ಲೇ ಇತ್ತು.
ಅವರೆಲ್ಲರೂ ನಮ್ಮ ಲ್ಲಿಯೇ ಕೆಲಸ ಮಾಡಿಕೊಂಡು ಸಂಸಾರ ನಡೆಸುತ್ತಿದ್ದರು. ಪಿಣಿಯ ಶೀನ
ಮುತ್ತ ಹೀಗೆ ಎಲ್ಲರೂ ನಮ್ಮ ಜತೆ ಹೊಂದಿಕೊಂಡು ಇದ್ದರೂ ಆಗ ಒಡೆಯ ಮತ್ತು ಕೆಲಸದವರ
ನಡುವೆ ಪರದೆ ಇದ್ದರೂ ಅದು ಪ್ರಾಯಶಃ ಸಸ್ಯಾಹಾರ ಮಾಂಸಾಹಾರಗಳ ನಡುವಿನ ಪ್ರಭೇದವೇ
ಆಗಿತ್ತು. ಅವರೆಲ್ಲಾ ಮಾಂಸಾಹಾರಿಗಳಾದ್ದರಿಂದ ಅವರ ಮನೆಯಲ್ಲಿ ನಾವು ಏನನ್ನೂ
ತಿನ್ನುವುದು ಮತ್ತು ಕುಡಿಯುವುದು ನಿಶಿದ್ಧವಾಗಿತ್ತು.ಈ ಕಾರಣಕ್ಕಾಗಿ ಯೇ ಅವರ ಮತ್ತು
ನಮ್ಮ ನಡುವೆ ಒಂದು ರೀತಿಯ (ಮಕ್ಕಳಲ್ಲಿ) ಮತ ಭೇಧವೂ ಇರುತ್ತಿತ್ತು. ಅದರಿಂದಾಗಿ ನಾವು
ಮಕ್ಕಳೇ ಇರುವಾಗ ಅವರದ್ದೇ ಆದ ಕೆಲವು ವಿದ್ಯೆಗಳಲ್ಲಿ ನಾವು ಅವರಿಂದ ಹಿಂದೆ
ಇರುತ್ತಿದ್ದೆವು.ಈಜುವುದೂ ಅಂತಹದ್ದೇ ಒಂದು ವಿದ್ಯೆ ನಮಗೆ ಗೊತ್ತಿಲ್ಲದ ಅವರಿಗೆ ಮಾತ್ರ
ಗೊತ್ತಿರುವ ವಿದ್ಯೆಯಾಗಿತ್ತು.ನನಗಂತೂ ಅದೊಂದು ಮಹಾ ವಿದ್ಯೆಯೆನ್ನಿಸಿ ಅದನ್ನು ಕಲಿಯಲು
ನಾನು ಹಾತೊರೆಯುತ್ತಿದ್ದೆ. ಶೀನನ ಹತ್ತಿರ ನಾನು ಯಾವಾಗಲೂ ಈಜು ಕಲಿಸಿಕೊಡಲು
ಕೇಳಿಕೊಳ್ಳುತ್ತಿದ್ದೆ,ನನ್ನ ಬಹು ಒತ್ತಾಯದಿಂದ ಆತ ನನಗೆ ಕಲಿಸಿಕೊಡಲು ಒಪ್ಪಿದ.ಮುಂದಿನ
ರವಿವಾರ ದನಗಳನ್ನು ಮೈ ತೊಳೆಯಲು ಒಯ್ಯುವ ನೆಪದಲ್ಲಿ ನಾನೂ ಅವನ ಜತೆಗೆ ಹೋಗಿ ಈಜಲು
ಕಲಿಯುವದೆಂತ ನಿಶ್ಚೈಸಿಕೊಂಡೆವು. ಹೀಗೆ ನಾನು ರವಿವಾರ ಶೀನನ ಜತೆಗೆ ಯಾರಿಗೂ
(ಮನೆಯಲ್ಲಿ)ಹೇಳದೇ ಹೊರಟೆ ಶೀನನ ಜತೆಯಲ್ಲಿ ನಮ್ಮ ಮನೆಯಿಂದ ಸರಿ ಸುಮಾರು ಎರಡು
ಎರಡೂವರೆ ಮೈಲು ದೂರದ ನದಿಗೆ ಹೊರಟೆ. ಅದು ಬೇಸಗೆಯ ಪ್ರಾರಂಭವಾದ್ದರಿಂದ ನದಿಯಲ್ಲಿ
ನೀರಿನ ಹರವು ಸ್ವಲ್ಪ ಕಡಿಮೆಯೇ ಇತ್ತು. ಆದರೂ ಅವನು ಆರಿಸಿದ ಜಾಗದಲ್ಲಿ ನೀರು ಸಾಕಷ್ಟು
ಆಳವಾಗಿಯೇ ಇತ್ತು. ನನ್ನನ್ನು ನೀರಿಗೆ ಹೊಂದಿಕೊಳ್ಳಲು ಕಲಿಸಲೋಸುಗ ಆತನೇ ನೀರಲ್ಲಿ
ಧುಮುಕಿ ಈಜುತ್ತಾ ನಾನಾ ರೀತಿಯ ತರದಲ್ಲಿ ಈಜಿ ತೋರಿಸಿದ, ನಂತರ ನನ್ನ ಸರದಿ, ಆತ
ಅದಕ್ಕೆ ತನ್ನದೇ ಆದ ವಿಧಾನವನ್ನ ಆರಿಸಿಕೊಂಡಿದ್ದ. ಆತನು ಲೀಲಾಜಾಲವಾಗಿ ಈಜುತ್ತಿದ್ದ
ಪರಿ ನನ್ನಲ್ಲಿ ಎಷ್ಟು ಪ್ರಚೋದಿಸಿತ್ತೆಂದರೆ ನಾನು ನೀರಿಗಿಳಿದು ಕೈಆಡಿಸಿದರೆ ಸಾಕು
ತನ್ನಿಂದ ತಾನೇ ಈಜು ಬರುತ್ತೆ ಅಂತ ಎಣೆಸಿದ್ದೆ. ಆತ ನನ್ನನ್ನು ತನ್ನ ಬೆನ್ನ
ಮೇಲೇರಿಸಿಕೊಂಡು ಈಸುತ್ತಾ ಹೋಗಿ ನೀರಿನ ಮಡುವಿನ ನಟ್ಟ ನಡುವೆ ನನ್ನನ್ನ ಬಿಟ್ಟು
ನೀರಲ್ಲಿ ಒಮ್ಮೆಲೇ ಮುಳುಗಿದ ಮತ್ತು ಆತ ನೀರಡಿಯಿಂದಲೇ ಬೇರೆ ಜಾಗಕ್ಕೆ ಹೋದ. ನೀರಲ್ಲಿ
ಬೀಳುವುದೇ ಈಜು ಅಂತ ತಿಳಿದ ನಾನು ನನ್ನ ಯೋಚನೆಯೊಂದಿಗೆ ನೀರಲ್ಲಿ ಮುಳುಗಿದೆ, ಮೇಲೆ
ಬರಲಾಗದೇ ಏನಾಗುತ್ತಿದೆ ಎಂತ ತಿಳಿಯುವುದರೊಳಗಾಗಿ ನೀರಲ್ಲಿ ಮುಳುಗೇಳುತ್ತಾ,
ಶ್ವಾಸದೊಟ್ಟಿಗೆ ನೀರನ್ನೂ ಕುಡಿಯುತ್ತಾ,.... ಆಗಲೂ ನನ್ನ ಮರಣ ಹತ್ತಿರ ಬಂತು ಅಂತ
ಎಣಿಸಿ ರಾಮ ರಾಮ ಅಂತ ಜಪ ಮಾಡತೊಡಗಿದೆ. ಇನ್ನೇನು ಮುಗಿಯಿತು ಅಂತ ಎಣಿಸುವಾಗ ಶೀನನ
ಅಣ್ಣ ಪಿಣಿಯ ನನ್ನನ್ನೆತ್ತಿ ದಡ ಸೇರಿಸಿದ, ಮತ್ತು ಎಂತ ದೊಡ್ಡ ಗಂಡಾಂತರವಾಗುತ್ತಿತ್ತು
ಅಂತ ಅವನದ್ದೇ ರೀತಿಯಲ್ಲಿ ವಿವರಿಸಿದ.
ಸಾವಿನ ಬಾಗಿಲು
ನನಗೊಮ್ಮೆ ಅತಿ ಅನಾರೋಗ್ಯದಿಂದಾಗಿ ಐವತ್ತು ಕೇಜಿಯ ಈದೇಹ ಮೂವತ್ತಾಯ್ತು. ಯಾವ
ಆಹಾರವೂ ಸೇರದೇ ತಿಂದದ್ದೆಲ್ಲಾ ವಾಂತಿಯಾಗಿ ದೇಹವು ಮತ್ತಷ್ಟು ದುರ್ಬಲವಾಯ್ತು.
ತಂದೆಯವರಿಗೆ ಡಾಕ್ಟರು ದೊಡ್ಡ ಆಸ್ಪತ್ರೆಗೆ ಸೇರಿಸಲು ಹೇಳಿದರು.ಅಂತೆಯೇ ನನ್ನನ್ನು
ಕುಂದಾಪುರರದ ಸರ್ಕಾರೀ ಆಸ್ಪತ್ರೆಗೆ ಸೇರಿಸಲಾಯ್ತು.ನೀರಿನ ಸೇವನೆಯ ವ್ಯತ್ಯಾಸದಿಂದಾಗಿ
ಟೈೞಾಯಿಡ್, ಲಿವರ್, ಎಲ್ಲಾ ಖಾಯಿಲೆಗಳೂ ಒಟ್ಟಿಗೇ ಬಂದಿದ್ದವು ಅಂತ ಸರ್ಕಾರೀ ಡಾಕ್ಟರು
ಹೇಳಿದರು.ಒಂದು ವಾರ ಅಸ್ಪತ್ರೆಯ ಬೆಡ್ ನಲ್ಲಿಯೇ ಮಲಗಿದ್ದೆ. ಏಳಲೂ ಆಗದಷ್ಟು ನಿತ್ರಾಣ
ಮನೆಯಿಂದ ಸುಮಾರು 28 ಕಿ ಮಿ ದೂರದಲ್ಲಿದ್ದರಿಂದ ದಿನಾ ಸರದಿಯಂತೆ ಅಮ್ಮ ಅಪ್ಪ ಅಣ್ಣ
ಎಲ್ಲರೂ ಬಂದು ರಾತ್ರೆಯಿದ್ದು ದಿನದಲ್ಲಿ ಬದಲಾಗುತ್ತಿದ್ದರು. ಒಂದು ವಾರದ
ಒಉಷದಿಯಿಂದಾಗಿ ನಾನು ಚೇತರಿಸಿಕೊಳ್ಳುತ್ತಿದ್ದೆನಷ್ಟೆ. ಆದಿನ ನನ್ನನ್ನ ನೋಡಲು
ಚಿಕ್ಕಪ್ಪ ಬಂದಿದ್ದರು. ನಾನು ಶೊಉಚಾಲಯಕ್ಕೆ ಹೋಗಬೇಕಾಗಿತ್ತು. ಒಂದು ಕಡೆ ಅಪ್ಪ
ಇನ್ನೊಂದು ಕಡೆ ಚಿಕ್ಕಪ್ಪ ನನ್ನನು ಕೈ ಹಿಡಿದು ನಡೆಸಿಕೊಂಡು ಮೂತ್ರಾಲಯಕ್ಕೆ
ಕರೆತಂದರು, ನಾನು ತಂದೆಯವರಿಗೆ ನೀವು ಇನ್ನು ಬರಬೇಕಾಗಿಲ್ಲವೆಂತಲೂ ನಾನೇ ಒಳಗೆ
ಹೋಗಬಲ್ಲೆನೆಂತಲೂ ಹೇಳಿದೆ,ಒಲ್ಲದ ಮನಸಿನಿಂದ ಅವರು ನನ್ನ ಕೈ ಬಿಟ್ಟರು. ನಾನು ಅವರ ಕೈ
ಬಿಡಿಸಿಕೊಂಡು ಎರಡು ಹೆಜ್ಜೆ ನಡೆದೆ ಅಷ್ಟೆ, ಇನ್ಯಾವುದೂ ನನಗೆ ನೆನಪಿಲ್ಲ,ನಾನು ತಿಳಿ
ನೀಲ ಆಕಾಶದಲ್ಲಿ ಹಗುರವಾಗಿ ಹತ್ತಿಯಂತೆ ಹಾರುತ್ತಿದ್ದೆ, ನೋವು ನಲಿವಿನ, ಸುಖ ದುಖಃ ದ
ಪರಿವಿರದೇ,ಯಾವುದೋ ಒಂದು ಗುರಿಯತ್ತ ನಿಶ್ಚಿತ ಪಯಣ ಅದಾಗಿತ್ತು.ಅಂದರೆ ಸಂಭಂದಗಳ
ಗೋಜಿಲ್ಲದ ಇತಿಮಿತಿಯ ಅರಿವಿಲ್ಲದ ಸುಖಕರ ಪ್ರಯಾಣ ಅದಾಗಿತ್ತು, ಅಷ್ಟರಲ್ಲಿ ಗೋಪೂ ಅಂತ
ಯಾರೋ ಕರೆದ ಹಾಗೆ ಆಗಿ ಕಣ್ತೆರೆದಾಗ ಆಸ್ಪತ್ರೆಯ ಬೆಡ್ ಮೇಲಿದ್ದೆ, ಸುತ್ತಲೂ ಅಪ್ಪಯ್ಯ
ಅಮ್ಮ ಚಿಕ್ಕಪ್ಪ ಎಲ್ಲರೂ ಅಳುತ್ತಲ್ಲಿದ್ದರು. ಅಮ್ಮ ಭಾವಾತಿರೇಕದಿಂದ ಸಂಭ್ರಮ
ಪಟ್ಟಳು.ನಾನು ಸತ್ತೇ ಹೋದೆನೆಂದು ತಿಳಿದುಕೊಂಡಿದ್ದರಂತೆ. ಅಪ್ಪ (ಅವರದ್ದೇ ಆದ
ರೀತಿಯಲ್ಲಿ-ಅಧ್ಯಾತ್ಮ ) ನಾನು ಸಾವಿನಬಾಗಿಲು ತಟ್ಟಿ ಬಂದನೆಂದು ಹೇಳುತ್ತಿದ್ದರು.
ನನ್ನ ಅಂಕಲ್ ಒಬ್ಬರು ಅವರು ಚಿಕ್ಕವರಾಗಿರುವಾಗಿನ ಕೆಲವು ಹಾಸ್ಯ ಪ್ರಸಂಗಗಳನ್ನು ವಿವರಿಸುತ್ತಿದ್ದರು.
ಹಳ್ಳಿಗಳಲ್ಲಿ ರೈತರು ಸಾಮಾನ್ಯವಾಗಿ ಬಯಲು(ಹೊಲ) ಗದ್ದೆಗಳಲ್ಲಿ ಬೆಳೆಗಳನ್ನು(ಕಬ್ಬು,
ಭತ್ತ, ರಾಗಿ, ತರಕಾರಿ ಮುಂತಾದ) ಕಾಡು ಪ್ರಾಣಿಗಳಿಂದ ಕಾಪಾಡಲು ತಾತ್ಕಾಲಿಕವಾಗಿ
ಕಟ್ಟಲ್ಪಟ್ಟ ಶೆಡ್ಡುಗಳನ್ನು ಉಪಯೋಗಿಸುತ್ತಿದ್ದರು. ನೆಲದಿಂದ ಎಂಟು ಹತ್ತು ಅಡಿ
ಎತ್ತರವಾಗಿ ಕಟ್ಟಿದ ಶೆಡ್, ಒಣ ಹುಲ್ಲಿನ ಮಾಡು ಹೊಂದಿದ್ದು,ಕಂಬದ ಮೇಲೆ ಕಟ್ಟಿದ ಚಿಕ್ಕ
ತಡಿಕೆಯ ಮನೆಯ ಹಾಗೇ ಇರುತ್ತಿತ್ತು.ರಾತ್ರೆ ಅಲ್ಲಿ ಮಲಗಲು ಬಂದವರು, ಬೆಳಗಾಗುವ ವರೆಗೆ
ಮೂರ್ನಾಲ್ಕು ಬಾರಿ, ಹಳೆ ಡಬ್ಬದ ಮೇಲೆ ಎರಡು ಕೋಲಿನಿಂದ ಬಲವಾಗಿ ಬಡಿಯುತ್ತಾ,
ಗಟ್ಟಿಯಾಗಿ ಬಾಯಿಗೆ ಬಂದ ಪದ ಹೇಳಿ ಹೋ ಹೋ ಅಂತ ಕೂಗುತ್ತಿದ್ದರು,ಇದರ ಮುಖ್ಯ ಉದ್ದೇಶ
ಕಾಡುಪ್ರಾಣಿಗಳೇನಾದರೂ ಬಂದಿದ್ದರೆ, ಆ ಗಲಾಟೆಯಿಂದಾಗಿ ಹೆದರಿ ಓಡಿಹೋಗಲಿ ಎಂಬುದು.
ನನ್ನ ಅಂಕಲ್ ಗೆಳೆಯರೊಬ್ಬರಿಗೆ ಹೀಗೇ ದಿನಾ ಹಳ್ಳಿಮನೆಯಲ್ಲಿ ಮಲಗಿ ಬಂದು ಮಾಡಿ ಅದೇ
ಅಭ್ಯಾಸವಾಗಿ ಹೋಗಿತ್ತಂತೆ. ಹೀಗಿರುವಾಗ ಅವರ ಮದುವೆಯಾಯ್ತು. ಮದುವೆಯಾಗಿ ಅವರ
ಹೆಂಡತಿಯಮನೆಗೆ ಹೋಗಿದ್ದರಂತೆ, ರಾತ್ರೆ ಅಭ್ಯಾಸ ಬಲದಿಂದ ಕೈಯಲ್ಲೇ ಬೆಡ್ ನ ಹಲಗೆಯನ್ನು
ಬಡಿಯುತ್ತಾ "ಎಂಕಾ, ಶೀನಾ ಎಲ್ಲರೂ ಅಚೆಯಿಂದ ಈಚೆಯಿಂದ ಬನ್ನಿ ಬನ್ನಿ ಹೋ! ಹೋ!!" ಅಂತ
ಕೂಗಿಕೊಂಡರಂತೆ. ಅರ್ಧ ರಾತ್ರಿಯ ನೀರವತೆಯಲ್ಲಿ ಅದೂ ಎಲ್ಲರೂ ನಿದ್ರೆಯ
ಮತ್ತಿನಲ್ಲಿರುವಾಗ ಈ ರೀತಿಯ ಕೂಗು ಕೇಳಿಸಿದರೆ ಯಾರಾದರೂ ಏನು ಎಣಿಸಿಯಾರು?. ಪಕ್ಕದ
ರೂಮಿನಲ್ಲೇ ಮಲಗಿದ್ದ ಅವರ ಮಾವ ರಾತ್ರೆಯ ಇವರ ಗಲಾಟೆಗೆ ಎದ್ದು "ಲೇಯ್ ಯಾವನೋ ಅವ್ನು ?
ಹಾಕಿ ಅವ್ನ ತಲೆ ಮೇಲೆ ನಾಲ್ಕು ಪೆಟ್ಟು" ಅಂತ ಜೋರಾಗಿ ಗರ್ಜಿಸಿದರಂತೆ. ಇವರಿಗೆ ತಾನು
ಇರುವುದು ಹಳ್ಳಿಮನೆಯಲ್ಲಲ್ಲ, ಮಾವನ ಮನೆಯಲ್ಲಿ ಎನ್ನುವುದು ಅರಿವಾಗಿ.....ತುಂಬಾನೇ
ನಾಚಿಕೆಯಲ್ಲಿ ತಲೆತಗ್ಗಿಸಿಕೊಂಡರು. ಈ ಪ್ರಸಂಗವನ್ನು ಈಗಲೂ ಜ್~ಜಾಪಿಸಿಕೊಂಡು
ನಗುತ್ತಿರುತ್ತೇವೆ.