ವಕ್ರನಾದ ಶುಕ್ರ?

ವಕ್ರನಾದ ಶುಕ್ರ?

ಕೆಲವು ದಿನಗಳ ಹಿಂದೆ ಸವಿತೃ ಅವರು ಒಂದು ಪ್ರಶ್ನೆ ಕೇಳಿದರು. ಗ್ರಹಗಳ ವಕ್ರದೃಷ್ಟಿ ಯಾಕೆ ಬೀಳುತ್ತೆ ಅಂತ ಅವರ ಕೇಳಿಕೆ. ಅವರು ಆ ಪ್ರಶ್ನೆ ಕೇಳಿದ್ದು ನನಗೆ ಆಶ್ಚರ್ಯ ಆಯಿತು. ಯಾಕೆ ಗೊತ್ತೇ? ಗ್ರಹಗಳು ವಕ್ರವಾದರೆ, ಸೂರ್ಯನಿಗೇನು ಚಿಂತೆ ಅಲ್ಲವೇ? :) [ಸವಿತೃ, ಸವಿತಾ ಇವೆಲ್ಲ ಸೂರ್ಯನ ಹೆಸರುಗಳೇ!]. ಆಮೇಲನ್ನಿಸಿತು - ಅವರು ಹೀಗೆ ಕೇಳಿದ್ದು ಸರಿಯಾಗೇ ಇದೆ ಅಂತ. ಯಾಕಂದ್ರೆ, ಈ ಗ್ರಹಗಳು ವಕ್ರವಾಗೋದು ಈ ಬಡಪಾಯಿ ಭೂಮಿ (ಅಥವ ಇತರ ಗ್ರಹಗಳ ಮೇಲೆ) ನಿಂತೆ ನೋಡೋರಿಗೆ ಮಾತ್ರ. ಸೂರ್ಯನ ಮೇಲಿಂದ ನಿಂತು ನೋಡಿದರೆ, ವಕ್ರವಾಗೋದು ಸಾಧ್ಯವೇ ಇಲ್ಲ. ಸೂರ್ಯನ ಮೇಲೆ ನಿಂತಂತೂ ನೋಡಕ್ಕಾಗಲ್ಲ, ಇನ್ನು ಬೇರೆ ಗ್ರಹಗಳ ಮೇಲೆ ಯಾರಪ್ಪಾ ಇದಾರೆ ನಿಂತು ನೋಡಕ್ಕೆ ಅನ್ನಬೇಡಿ. ಇವತ್ತಲ್ಲದಿದ್ದರೆ ಇನ್ನೊಂದು ದಿನ ಆ ಪ್ರಯತ್ನವೂ ಯಶಸ್ಸು ಕಾಣುತ್ತೆ ಅನ್ನೋ ನಂಬಿಕೆ ನನ್ನದು.

ಶುಕ್ರನಿಗೆ ವಕ್ರದೃಷ್ಟಿ ಬೀರ್ತಾನೆ ಅನ್ನೊ (ಕು)ಖ್ಯಾತಿ ಅಷ್ಟೇನೂ ಇಲ್ಲ. ಹಾಗೆ ನೋಡಿದರೆ, ಶನಿಗೆ ಆ ಪಟ್ಟ ಸಿದ್ಧವಾಗಿಹೋಗಿದೆ. ರಾಮೇಶ್ವರಕ್ಕೆ ಹೋದ್ರೂ ಶನೀಶ್ವರ ಬಿಡ ಅನ್ನೋ ಗಾದೆ ಕೇಳಿದೀರಲ್ಲ. ಆದ್ರೆ, ನಿಜ ಹೇಳ್ಬೇಕೂಂದ್ರೆ, ಶನಿ ಅಂದ್ರೆ ಒಂದು ಪಾಪದ ಪ್ರಾಣಿ. ಬೇಡ. ಪ್ರಾಣಿ ಅಲ್ಲ. ಪಾಪದ ಗ್ರಹ ಅನ್ನೋಣ. ಅದರ ಹೆಸರಲ್ಲೇ ಅದು ಗೊತ್ತಾಗತ್ತೆ. ಅದು ನಿಜವಾಗಿ ಶನೀಶ್ವರನಲ್ಲ. ಶನೈಶ್ಚರ. ಶನೈ: ಚರತಿ ಅಯಂ ಇತಿ ಶನೈಶ್ಚರಃ. ಈ ಗ್ರಹ ನಿಧಾನವಾಗಿ(ಶನೈ:) ಹೋಗುತ್ತೆ (ಚರತಿ), ಅದಕ್ಕೆ ಅವನು ಶನೈಶ್ಚರ. ಅಷ್ಟೇ. ಆಕಾಶದಲ್ಲಿ ಯಾವುದೇ ಒಂದು ಜಾಗದಿಂದ ಹೊರಟು, ಮತ್ತೆ ಅದೇ ಜಾಗಕ್ಕೆ ಮರಳಿ ಬರೋದಕ್ಕೆ ಶನಿಗೆ ಮೂವತ್ತು ವರ್ಷ ಬೇಕು. ಅದೇ ಕೆಲಸ ಮಾಡೋದಕ್ಕೆ ಗುರುವಿಗೆ ಹನ್ನೆರಡು ವರ್ಷ ಬೇಕು. ಅಂದಹಾಗೆ, ಭಾರತದಲ್ಲಿ ಅರವತ್ತು ವರ್ಷಗಳ ಸಂವತ್ಸರ ಚಕ್ರ ಇದೆಯಲ್ಲ, ಅದು ಇವೆರಡರ ಮೇಲೇ ನಿಂತಿರೋದು. ಉದಾಹರಣೆಗೆ, ಈ ಇವತ್ತು ಶನಿ, ಗುರು ಎರಡೂ, ಆಕಾಶದಲ್ಲಿ ಒಂದಕ್ಕೊಂದಕ್ಕೆ ಹತ್ತಿರವಾಗಿ, ಎರಡೂ, ಜ್ಯೇಷ್ಟಾ ನಕ್ಷತ್ರದ ಹತ್ತಿರ ಇದೆ ಅಂತ ಇಟ್ಟುಕೊಳ್ಳಿ. (ಸುಮ್ಮನೆ ಇಟ್ಟುಕೊಳ್ಳಿ. ಯಾವ ನಕ್ಷತ್ರವಾದರೂ ಆಗಿರಬಹುದು. ಮೇಷ ವೃಷಭವೇ ಮೊದಲಾದ ರಾಶಿಚಕ್ರದಲ್ಲಿ ಅತೀ ಪ್ರಕಾಶಮಾನವಾದ ನಕ್ಷತ್ರ ಜ್ಯೇಷ್ಟಾ. ಅದಕ್ಕೇ ಅದರ ಉದಾಹರಣೆ ತೆಗೆದುಕೊಂಡೆನಷ್ಟೆ. ಇರಲಿ). ಮತ್ತೆ ಸುಮಾರು ಮೂವತ್ತು ವರ್ಷಗಳ ಬಳಿಕ ಶನಿ ಅಲ್ಲೇ ಬಂದಿರುತ್ತಾನೆ. ಹಾಗೇ ಅರವತ್ತು ವರ್ಷಗಳ ನಂತರವೂ ಅಲ್ಲೇ ಇರುತ್ತಾನೆ. ಈ ಅರವತ್ತು ವರ್ಷಗಳಲ್ಲಿ ಗುರು ಆಕಾಶದ ಸುತ್ತ ಐದು ಬಾರಿ ಪ್ರದಕ್ಷಿಣೆ ಮಾಡಿ, ಮತ್ತೆ ಜ್ಯೇಷ್ಟಾ ನಕ್ಷತ್ರದ ಬಳಿಯೇ ಬರುತ್ತಾನೆ. ಹಾಗಾಗಿ, ಪ್ರಭವ ವಿಭವ ಮೊದಲಾದ ಸಂವತ್ಸರ ಚಕ್ರ ಆಕಾಶದಲ್ಲಿ ಗುರುಶನಿಗಳು ಒಟ್ಟಿಗೆ ಕಾಣಿಸಿಕೊಳ್ಳುವ ಘಟನೆಯನ್ನಾಧರಿಸಿದೆ. ತಿಳೀತಲ್ಲ?

ಇದೇನಪ್ಪ? ತಲೆಬರಹ ಇರೋದು ಶುಕ್ರ. ಮಾತೆಲ್ಲ ಶನಿಯದ್ದು ಎನ್ನಬೇಡಿ. ಈಗ ಗ್ರಹಗಳು ವಕ್ರನೋಟ ಯಾಕೆ ಬೀರುತ್ತವೆ ಅಂತ ತಿಳಿದುಕೊಳ್ಳೋಣ. ಗ್ರಹಗಳೆಲ್ಲ ಸೂರ್ಯನ ಸುತ್ತ ಸುತ್ತುತ್ತಿವೆ ಅಂತ ನಮಗೆ ಗೊತ್ತು. ಆದರೆ ಭೂಮಿ ಮೇಲೆ ನಮಗೆ, ಗ್ರಹಗಳು ನಕ್ಷತ್ರಗಳ ಹಿನ್ನೆಲೆಯಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ನಿದಾನವಾಗಿ ಚಲಿಸೋ ಹಾಗೆ ಕಾಣುತ್ತವೆ. ಶನಿ ಜ್ಯೇಷ್ಟಾ ನಕ್ಷತ್ರದಲ್ಲಿದೆ ಎಂದರೆ, ಆಕಾಶದಲ್ಲಿ ಶನಿ ಜ್ಯೇಷ್ಟಾ ನಕ್ಷತ್ರದ ಹತ್ತಿರ ಕಾಣ್ತಾಇದೆ ನಮಗೆ ಎಂದರ್ಥ ಅಷ್ಟೇ. ಆ ನಕ್ಷತ್ರ ಎಷ್ಟೋ ಬೆಳಕಿನ ವರ್ಷಗಳಷ್ಟು ದೂರ ಇರಬಹುದು. ಅದು ನಮಗೀಗ ಬೇಕಿಲ್ಲ. ಕೆಳಗಿನ ಚಿತ್ರ ದಲ್ಲಿ ನೋಡಿ. ನಡುವೆ ಹಳದಿಯ ಗೋಲ ಸೂರ್ಯ. ಸುತ್ತ ಮೂರು ಗ್ರಹಗಳು ಸೂರ್ಯನ ಸುತ್ತ ತಿರುಗುವ ಹಾದಿಯನ್ನ ತೋರಿಸಿದ್ದೀನಿ. ಭೂಮಿಯಿಂದ ಬುಧ, ಶುಕ್ರ (ಭೂಕಕ್ಷೆಯೊಳಗೆ ಸುತ್ತುತ್ತಿರುವ ಗ್ರಹಗಳು), ಮತ್ತೆ ಸೂರ್ಯ ಈ ಮೂರಕ್ಕೂ ಒಂದೊಂದು ಗೆರೆಗಳನ್ನು ಎಳೆದಿದ್ದೇನೆ. ನಮ್ಮ ಕಣ್ಣಿಗೆ, ಆ ಗ್ರಹಗಳು, ಆ ಸಾಲಿನಗುಂಟ ಇರುವ ನಕ್ಷತ್ರಗಳ ಬಳಿ ಇರುವಂತೆ ಭಾಸವಾಗುತ್ತೆ. ಸೂರ್ಯನ ವಿಷಯಕ್ಕೆ ಬಂದರೆ, ಹಗಲು ಯಾವುದೇ ನಕ್ಷತ್ರವು ಕಾಣದೇ ಇದ್ದರೂ, ಪೂರ್ಣಗ್ರಹಣದ ಸಮಯ ಆ ಹಿನ್ನಲೆಯ ನಕ್ಷತ್ರಗಳನ್ನು (ಅದೃಷ್ಟವಿದ್ದವರು, ನನಗೆ ಈ ಜೀವಮಾನದಲ್ಲಿ ಸಿಗುವುದೋ ಗೊತ್ತಿಲ್ಲ!) ಕಾಣಬಹುದು.

apparent motion of planets in the sky

 

ಮುಂದಕ್ಕೆ ಹೋಗುವ ಮೊದಲು ಒಂದೆರಡು ವಿಷಯಗಳನ್ನು ಒದರಿಬಿಡುತ್ತೇನೆ :) ಗ್ರಹಗಳು ಸೂರ್ಯನ ಸುತ್ತ ಅಪ್ರದಕ್ಷಿಣವಾಗಿ, ಅಂದರೆ ಗಡಿಯಾರದ ಮುಳ್ಳು ಸುತ್ತುವ ವಿರುದ್ಧ ದಿಕ್ಕಿನಲ್ಲಿ ಸುತ್ತುತ್ತವೆ. ಆಕಾಶದ ಹಿನ್ನೆಲೆಯಲ್ಲಿ ನಮಗೆ ಇದೇ ಪಶ್ಚಿಮದಿಂದ ಪೂರ್ವ ಎನಿಸುತ್ತದೆ. ಹಾಗಾಗಿ, ಗ್ರಹಗಳು ಸಾಧಾರಣವಾಗಿ ನಮಗೆ ಈ ಚಿತ್ರದಲ್ಲಿ ಬಲಗಡೆಯಿಂದ ಎಡಗಡೆಗೆ ಹೋಗುವಂತೆ ಭಾಸವಾಗುತ್ತವೆ.

ಮೇಲೆ ಏಕೆ ಸಾಧಾರಣವಾಗಿ ಎಂದೆ ಗೊತ್ತೇ? ಕೆಲವೊಮ್ಮೆ ಪಶ್ಚಿಮದಿಂದ ಪೂರ್ವಕ್ಕೆ ಹೋಗುವಂತೆ ಕಾಣುವ ಗ್ರಹಗಳು ತಟಕ್ಕನೆ ಇದ್ದಲ್ಲೇ ನಿಂತಂತೆ, ನಂತರ ಕೆಲವು ದಿನಗಳು ಪೂರ್ವದಿಂದ ಪಶ್ಚಿಮಕ್ಕೆ ಹೋಗುವಂತೆ ಕಾಣುತ್ತವೆ. ಇದೇ ಸ್ಥಿತಿಯನ್ನೇ ಗುರು ವಕ್ರನಾಗಿದ್ದಾನೆ, ಶನಿ ವಕ್ರನಾಗಿದ್ದಾನೆ, ಅಥವ ( ನನ್ನ ತಲೆಬರಹಕ್ಕೆ ಮರ್ಯಾದೆ ಬೇಡವೇ?) ಶುಕ್ರ ವಕ್ರನಾಗಿದ್ದಾನೆ ಎನ್ನುವುದು!

ಈ ವಕ್ರವಾಗುವುದು ಬರೀ ನಮ್ಮ ಕಣ್ಣಿಗೆ, ಆಕಾಶದ ಹಿನ್ನೆಲೆಯಲ್ಲಷ್ಟೇ. ಹಾಗಾಗಿ, ಇದರಿಂದ ಗ್ರಹಗಳ ಸ್ವಭಾವದಲ್ಲೇ ಆಗಲಿ, ಸುತ್ತುವಿಕೆಯಲ್ಲಿ ಆಗಲೀ ಏನೋ ವ್ಯತ್ಯಯವಾಗಿದೆ ಎಂದುಕೊಳ್ಳದಿರಿ. ಹಾಗಾಗಿ, ಇದಕ್ಕೆ ಅದಕ್ಕಿಂತ ಹೆಚ್ಹಿನ (ಫಲಜ್ಯೋತಿಷ್ಯ ಹೇಳುವ) ಅರ್ಥಗಳು ಅನರ್ಥವೇ ಎಂದು ನನಗೆ ಗೊತ್ತು. ಅದನ್ನು ನಂಬುವುದೂ ಬಿಡುವುದೂ ನಿಮಗೆ ಬಿಟ್ಟದ್ದು :)

ಸರಿ. ಈಗ ಚಿತ್ರವೊಂದರ ಸಹಾಯದಿಂದ ಈ ವಕ್ರವಾಗುವಿಕೆಯನ್ನು ಇನ್ನೂ ಸ್ವಲ್ಪ ಚೆನ್ನಾಗಿ ಅರಿತುಕೊಳ್ಳೋಣ.

retrograde motion of venus, as seen from earth

 

ಈ ಮೇಲಿನ ಚಿತ್ರದಲ್ಲಿ, ಒಳಗಿನ ಪಥ ಶುಕ್ರ ಗ್ರಹದ್ದು. ಹೊರಗಿನ ಪಥ ಭೂಮಿಯದ್ದು. ಶುಕ್ರನ ದಾರಿಯಲ್ಲಿ ಬರುವ ಐದು ಸ್ಥಳಗಳನ್ನು ತಿಳಿನೀಲಿ ಬಣ್ಣದ ೧,೨,೩,೪,೫ ಸಂಖ್ಯೆಯಲ್ಲಿ ತೋರಿಸಿದ್ದೇನೆ. ಅದೇ ಸಮಯದಲ್ಲಿ (ಆಯಾ ದಿನಗಳಂದು) ಭೂಮಿ ಇರುವ ಎಡೆಗಳನ್ನು ಹಸಿರುಬಣ್ಣದ ೧,೨,೩,೪,೫ ಅಂಕೆಗಳಲ್ಲಿ ತೋರಿಸಿದ್ದೇನೆ. ಶುಕ್ರ ಸುಮಾರು ೨೨೦ ದಿನಗಳಲ್ಲಿ ಒಂದುಸಲ ಪೂರ್ತಿ ಸೂರ್ಯನ್ನ ಸಿತ್ತಿಬಿಡತ್ತೆ. ಅಷ್ಟು ಹೊತ್ತಿನಲ್ಲಿ ಭೂಮಿ ಸುಮಾರು ಮೂರನೇ ಎರಡು ಭಾಗ ಮಾತ್ರ ತನ್ನ ಕಕ್ಷೆಯಲ್ಲಿ ಸುತ್ತಿರತ್ತೆ. ಅದನ್ನೇ ನಾನು ಚಿತ್ರದಲ್ಲಿ ಅಂದಾಜು ಮಾಡಿ ವಿಷಯದ ವಿವರಣೆಗೆ ಪೂರಕವಾಗಿ ಇರೋ ಹಾಗೆ ತೋರಿಸಿದೀನಿ. ಅಷ್ಟು ಸಾಕು ಈಗ.

ಚಿತ್ರದ ನಟ್ಟನಡುವೆ ಇರುವ ಹಳದಿ ಉಂಡೆ ಸೂರ್ಯ. ಎಡಭಾಗದಲ್ಲಿರುವ ಅರ್ಧ ವೃತ್ತ ಆಗಸ ಎಂದಿಟ್ಟುಕೊಳ್ಳಿ. ಭೂಮಿ ೧ ರಲ್ಲಿದ್ದಾಗ, ಶುಕ್ರನ ಮೇಲೆ ಹೋಗುವಂತೆ ಆಕಾಶಕ್ಕೆ ಒಂದು ಗೆರೆ ಎಳೆದಿದ್ದೇನೆ. ಆಕಾಶದಲ್ಲಿ ಕೇಸರಿ ಬಣ್ಣದ ೧ ಅನ್ನೋ ಜಾಗದಲ್ಲಿ ನಮಗೆ ಶುಕ್ರ ಕಾಣಿಸ್ತಾನೆ. ಅದು ಸುಲಭವಾಗಿ ಗೊತ್ತಾಗತ್ತೆ ಅಲ್ವಾ? ಹಾಗೇ ೨-೩-೪-೫ ರ ಭೂಮಿಯಿಂದ (ಹಸಿರು), ೨,೩,೪,೫ ರ ಶುಕ್ರ (ತಿಳಿನೀಲಿ)ಯ ಮೇಲೆ ಗೆರೆ ಎಳೆಯುತ್ತಾ ಹೋದರೆ, ಅದು ಆಕಾಶದಲ್ಲಿ ೨-೩-೪-೫ (ಕೇಸರಿ) ಈ ಜಾಗಗಳಲ್ಲಿ (ಚಿತ್ರದ ಎಡಬದಿ) ಕಾಣುತ್ತೆ ಅನ್ನೋದೂ ಗೊತ್ತಾಗತ್ತೆ. ಕೇಸರಿ ೧-೨-೩-೪-೫ ನ್ನ ನೀವು ನೋಡಿದ್ರೆ, ಅದು ಆಕಾಶದಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ಹೋಗ್ತಾ ಇದೆ ಅನ್ನೋದೂ ತಿಳಿಯತ್ತೆ. (ಮೊದಲೇ ವಿವರ ಕೊಟ್ಟಿದ್ದೆ ನೋಡಿ). ಇದು ಶುಕ್ರನ ಅವಕ್ರ ನಡೆ. ಇದನ್ನೇ ನಾನು ಒಂದು ಬಾಣದ ಗುರುತು ಹಾಕಿ ತೋರಿಸಿದೀನಿ. (ಚಿತ್ರದಲ್ಲಿ ಅತೀ ಎಡಗಡೆ)

ಈಗ ಭೂಮಿ ಮತ್ತೆ ಶುಕ್ರನ್ನ ೩-೪ ರ ನಡುವೆ ಗಮನಿಸಿ. ಈ ಎರಡು ಎಡೆಗಳ ನಡುವೆ ಏನಾಗಿದೆಯಪ್ಪಾ ಅಂದರೆ, ಭೂಮಿ, ಸೂರ್ಯರ ನಡುವೆ, ಶುಕ್ರ ಹಾದು ಹೋಗ್ತಾ ಇದ್ದಾನೆ. ಇವೆರಡರ ನಡುವೆ, ಎರಡು ಬಿಂದುಗಳನ್ನ (A ಮತ್ತು B) ಭೂಮಿಯ ದಾರಿಯಲ್ಲಿ ಗುರುತಿಸಿದೆ. ಅದೇ ಸಮಯದಲ್ಲಿ, ಶುಕ್ರ ಇರುವ ಎಡೆಗಳನ್ನೂ, ಅವನು ಆಕಾಶದಲ್ಲಿ ಕಾಣುವ ತೋರಿಕೆಯ ಸ್ಥಾನಗಳನ್ನೂ ನೇರಳೆ ಬಣ್ಣದ A,B ಅಕ್ಷರಗಳಲ್ಲಿ ತೋರಿಸಿದೆ.

ಈಗ ೩-೪ ಈ ಭಾಗವನ್ನ ಮತ್ತೆ ಗಮನಿಸೋಣ. ಭೂಮಿ ೩-A-B-೪ ಹೀಗೆ ಹೋಗುವಾಗ, ಶುಕ್ರನೂ ೩-A-B-೪ ಈ ಬಿಂದುಗಳಲ್ಲೇ ಹೋಗ್ತಾನೆ. ಅದೇ ಸಮಯದಲ್ಲಿ ಆಕಾಶದಲ್ಲಿ ಅವನು ೩-A-B-೪ ಈ ಬಿಂದುಗಳಲ್ಲೇ ತೋರ್ತಾನೆ. ಅರರೆ! ಚಿತ್ರ ಇನ್ನೊಂದ್ಸಲ ನೋಡಿ! ೨ ರಿಂದ ಮೂರಕ್ಕೆ ಬಂದ ಶುಕ್ರ, ಮತ್ತೆ A ಬಿಂದುವನ್ನ ಮುಟ್ಟೋದಕ್ಕೆ ಹಿಂದೆ ಹಿಂದಕ್ಕೆ ಹೋಗಿದಾನೆ! ಆಮೇಲೆ ಮತ್ತೆ ತಿರುಗಿ B ಕಡೆಗೆ ಹೊರಳಿ ಆಮೇಲೆ ೪ ನ್ನು ಸೇರಿದಾನೆ. ಅಲ್ವೇ?

ಹೀಗೆ ಶುಕ್ರ ೩ ರಿಂದ A ಗೆ (ಆಕಾಶದಲ್ಲಿ) ಹಿಂದೆ ಹಿಂದೆ ಹೋಗೋದನ್ನೇ ವಕ್ರನಾದ ಶುಕ್ರ ಅನ್ನೋದು. ಇದರಲ್ಲಿ ಇನ್ನೇನೂ ಕರಾಮತ್ತಿಲ್ಲ ಅನ್ನೋದು ಮನದಟ್ಟಾಯ್ತೇ?

ಉದಾಹರಣೆಯಲ್ಲಿ ಶುಕ್ರನನ್ನು ಹೇಳಿದ್ದರೂ, ಇದು ಬೇರೆ ಗ್ರಹಗಳಿಗೂ ಆಗುವ ಸಂಗತಿಯೇ. ಬುಧ, ಶುಕ್ರರಿಗಾದರೆ, ಭೂಮಿ ಸೂರ್ಯರ ನಡುವೆ ಈ ಗ್ರಹಗಳು ಬಂದಾಗ, ಅವು ವಕ್ರಗತಿಯನ್ನ ಹೊಂದುತ್ತವೆ. ಹೊರಗಿನ ಗ್ರಹಗಳಾದ, ಮಂಗಳ ಗುರು ಶನಿಗಳಿಗೋ, ಸೂರ್ಯ ಮತ್ತು ಆಯಾ ಗ್ರಹಗಳ ನಡುವೆ ಭೂಮಿ ಬಂದಾಗ ಅವು ವಕ್ರಗತಿಯನ್ನು ಹೊಂದುತ್ತವೆ. ಎರಡೂ ಕಣ್ಣಿಗಾಗುವ ಭಾಸವೇ ಹೊರತು ಮತ್ತಿನ್ನೇನಿಲ್ಲ.

ಸವಿತೃ ಅವರು ವಕ್ರಗತಿಯ ಜೊತೆ ರಾಹು ಕೇತುಗಳ ಮಾತೂ ಆಡಿದ್ರು. ಮೊದಲೇ ಈ ರಾಹು ಕೇತುಗಳಿಗೆ ವಕ್ರಗ್ರಹಗಳೆಂಬ ಅಪಖ್ಯಾತಿ ಇದೆ. ಆದ್ರೆ, ಅದರ ವಿವರ ಇನ್ನೊಂದು ಸಲ ನೋಡಣ ಅನ್ಸತ್ತೆ.

ವಿವರಣೆ ಅರ್ಥವಾಗೋ ಹಾಗಿದ್ಯಾ ಏನು ಅಂತ ಒಂದೆರಡು ಸಾಲು ಬರೆದು ಎಸೀರಿ ಹಾಗೇ ;) ಮರೆತಿದ್ದೆ. ಚಿತ್ರ ಬರೆದಿರೋದು ನಾನೇ ಸ್ವಾಮೀ. ಇನ್ನೆಲ್ಲಿಂದಲೂ ಎತ್ತಿ ಹಾಕಿರೋದಲ್ಲ!

-ಹಂಸಾನಂದಿ

 

 

 

Rating
No votes yet

Comments