ಬದಲಾಗುತ್ತಿರುವ ಕಚೇರಿ ವಾತಾವರಣ

ಬದಲಾಗುತ್ತಿರುವ ಕಚೇರಿ ವಾತಾವರಣ

ನಮ್ಮಲ್ಲಿ ಕಳೆದ ಇಪ್ಪತ್ತೈದು ಮುವ್ವತ್ತು ವರ್ಷಗಳಿಂದ ದುಡಿಯುತ್ತಿದ್ದ ಕೆಲವು ಹಿರಿಯ ತಲೆಗಳು ನಿವೃತ್ತರಾಗಿ, ಸಣ್ಣ ಒಂದು ಫೇರ್‌ವೆಲ್ ಪಡೆದು ಹೊರಟು ಹೋಗುತ್ತಾರೆ. ಈಚೆಗೆ ಹೀಗೆ ಹೋಗುವವರೇ ಹೆಚ್ಚಾಗುತ್ತಿದ್ದಾರೆ. ಒಳಗೆ ಬರುವವರಿಲ್ಲ. ಬಂದರೂ ಈಗೆಲ್ಲ ಕಾಂಟ್ರಾಕ್ಟ್ ಮೇಲೆ ಬರುವವರು. ಔಟ್ ಸೋರ್ಸಿಂಗ್ ಮೂಲಕ ಬರುವವರು ನಮ್ಮವರಾಗುವುದು ಹಿಂದಿನಂತೆ ಸಾಧ್ಯವಾಗುವುದಿಲ್ಲ. ಇದಕ್ಕೆ ಅನೇಕ ಕಾರಣಗಳೂ ಇವೆ, ಬಿಡಿ. ಈ ನಮ್ಮವರಾಗುವುದು ಎಂದರೇನು? ಸ್ವಲ್ಪ ಯೋಚಿಸಬಹುದು.

ಇವರೆಲ್ಲ ಸುಮಾರು ೧೯೪೭ ಮತ್ತು ಅದಕ್ಕಿಂತ ಹಿಂದೆ ಹುಟ್ಟಿದವರು. ಈಗ ಅರವತ್ತರ ಸನಿಹದ ವಯಸ್ಸು. ಈ ತಲೆಮಾರಿನ ಮಂದಿಗೆ ಕಚೇರಿಗೇ ಒಂದು, ಹವ್ಯಾಸಕ್ಕೇ ಒಂದು, ಮನೆವಾರ್ತೆಗೆ ಒಂದು ಮತ್ತೊಂದು ಎಂಬ ಒಂದರೊಂದಿಗೆ ಇನ್ನೊಂದಕ್ಕೆ ಸಂಬಂಧವೇ ವ್ಯಕ್ತಿತ್ವಗಳಿರಲಿಲ್ಲ. ಇವರ ವ್ಯಕ್ತಿತ್ವ ತೊಡಗಿಕೊಂಡಿರುತ್ತಿದ್ದ ವಿಭಿನ್ನ ಜಗತ್ತುಗಳು, ಈ ಭಿನ್ನ ಭಿನ್ನ ಪಾತ್ರಗಳು ಎಂದೂ ಒಂದಕ್ಕೊಂದು ಸಂಬಂಧವೇ ಇಲ್ಲದ ಸಂಗತಿಗಳಾಗಿರಲಿಲ್ಲ. ಹಾಗೆ ನಮಗೆ ಇವರ ಗಂಡ, ಅವನ ಸ್ವಭಾವ, ಇವರ ಅತ್ತೆ, ಮಕ್ಕಳು, ಅವರ ಗುಣಾವಗುಣಗಳು, ಇವರ ಮನೆಯ ಮದುವೆಯ, ಬಾಣಂತನದ ಸಮಸ್ಯೆಗಳು, ಇವರ ಸಾಲಗಳು ಎಲ್ಲದರ ಬಗ್ಗೆಯೂ ಗೊತ್ತು. ಇವರ ಬೇರೆ ಬೇರೆ ಚಟುವಟಿಕೆಗಳು, ಸಭೆ ಸಮಾರಂಭಗಳು ನಮ್ಮನ್ನು ಒಳಗೊಂಡೇ ರೂಪುಗೊಳ್ಳುತ್ತವೆ. ಸಣ್ಣಪುಟ್ಟ ವ್ಯತ್ಯಾಸಗಳಿದ್ದರೂ ಹೆಚ್ಚಿನ ಎಲ್ಲ ಸಂಗತಿಗಳೂ, ಓಡಾಟಗಳೂ ನಮಗೆ ಗೊತ್ತಿರುತ್ತವೆ. ಇವತ್ತು ಕಛೇರಿಯಲ್ಲಿ ನಿಮ್ಮ ಪಕ್ಕದಲ್ಲೇ ಕುಳಿತಿರುವ ವ್ಯಕ್ತಿಯ ಬಗ್ಗೆ ನಿಮಗೆಷ್ಟು ಗೊತ್ತು ಎನ್ನುವುದಕ್ಕೆ ಸರಳ ಉತ್ತರಗಳಿಲ್ಲ.

ಇವರಿಗೆ ಸಂಸ್ಥೆಯ ಮೇಲೆ ಏನೋ ಒಂದು ಮಮತೆ, ಪ್ರೀತಿ ಎಲ್ಲ ಇರುವುದನ್ನು ಕಾಣಬಹುದು. ನಮ್ಮಲ್ಲಿ ಒಬ್ಬರಿದ್ದರು, ಅವರಿಗೆ ಅಪರೂಪಕ್ಕೆ ನಮ್ಮ ಸಂಸ್ಥೆಯಲ್ಲಿ ರಜಾದಿನದಂದು ನಡೆಯುವ ಕೆಲವು ಕಾರ್ಯಕ್ರಮಗಳಿಗೆ ವಾಲಿಂಟೀರ್ ಡ್ಯೂಟಿ ಹಾಕದಿದ್ದರೆ ಭಯಂಕರ ಸಿಟ್ಟು ಬಂದುಬಿಡುತ್ತಿತ್ತು. ಅದಕ್ಕಿಂತ ಹೆಚ್ಚು ದುಃಖವಾಗುತ್ತಿತ್ತು. ನಾವೆಲ್ಲ ಇರುವುದೊಂದು ಭಾನುವಾರ ಮಾರಾಯ, ಆ ದಿನವೂ ಇಲ್ಲಿಗೇ ಬರಬೇಕೆನ್ನುತ್ತಾರಲ್ಲಯ್ಯಾ ಎಂದು ಗೊಣಗುತ್ತಿರುವಾಗ, ಇವರಿಗೆ ಭಾನುವಾರ ಡ್ಯೂಟಿ ಹಾಕಲಿಲ್ಲ ಎಂದು ನೋವಾಗುತ್ತಿತ್ತು! ಅದೇ ರೀತಿ ಸಂಸ್ಥೆಯ ವಿರುದ್ಧ ಮಾತನಾಡುವಾಗಲೂ ಇವರಲ್ಲಿ ಏನೋ ಒಂದು ಒಳ ಪ್ರೀತಿ, ಕಕ್ಕುಲಾತಿ ಇರುತ್ತಿದ್ದುದನ್ನು ಕಂಡಿದ್ದೇನೆ. ಸಂಬಳ ಕೊಡುತ್ತಾರೆ, ಅದಕ್ಕೆ ದುಡಿಯುತ್ತಿದ್ದೇನೆ ಎಂಬ ನಿರ್ಮಮ, ನಿರ್ಮೋಹದ ಕೂಲಿಯಲ್ಲ ಇವರದು. ಎಲ್ಲದರಲ್ಲೂ ಒಂದು ಮಾನವೀಯ ನೆಲೆಗಟ್ಟಿದೆ, ಪ್ರೀತಿಯಿದೆ. ಎಂಡಿ, ಸಿಈಓ ಮುಂತಾದವರೆಲ್ಲ ಇವರಿಗೆ ಕೇವಲ ಡೆಸಿಗ್ನೇಶನ್ನುಗಳಲ್ಲ, ಮನುಷ್ಯರು. ಮತ್ತು ಅವರೊಂದಿಗೆ ಕೇವಲ ಮನುಷ್ಯರ ನೆಲೆಯಲ್ಲೇ ಮಾತನಾಡಬಲ್ಲರು. ಅವರುಗಳೂ ಹಾಗೆಯೇ ಇದ್ದರು. ನನಗೇ ನೆನಪಿರುವಂತೆ ನನ್ನ ಎಂಡಿ, ಜಿಎಂಗಳಿಗೆಲ್ಲ ನನ್ನ ಬಗ್ಗೆ, ನನ್ನ ಕುಟುಂಬದ ಬಗ್ಗೆ ಎಲ್ಲ ಗೊತ್ತಿತ್ತು. ಅಲ್ಲಿಯೂ ಸುಮಾರು ಏಳು ನೂರು, ಏಳುನೂರ ಐವತ್ತು ಮಂದಿ ನೌಕರರಿದ್ದೆವು. ಸುಮಾರು ನೂರಕ್ಕೂ ಮಿಕ್ಕಿದ ಶಾಖೆಗಳಲ್ಲಿ ಹರಡಿಕೊಂಡಿದ್ದೆವು. ಈ ಎಂಡಿ, ಜಿಎಂಗಳೆಲ್ಲ ಶಾಖೆಗಳಿಗೆ ಹೋದಾಗ ವಿರಾಮವಾಗಿ ಕೂತು ಅದೂ ಇದೂ ಮಾತನಾಡುವುದು, ಅವರ ವೈಯಕ್ತಿಕ ಸಮಸ್ಯೆಗಳನ್ನು ಕೇಳುವುದು, ಅದಕ್ಕೇನಾದರೂ ಪರಿಹಾರ ರೂಪಿಸುವುದು ಮಾಡುತ್ತಿದ್ದರು.

ಇದನ್ನೆಲ್ಲ ಭೂತಕಾಲದ ವಿದ್ಯಮಾನಗಳೆಂದು ನೋಡಬೇಕಿಲ್ಲ. ಇವತ್ತಿಗೂ ಅಲ್ಲಿ ಇಲ್ಲಿ ಇದೆಲ್ಲ ಇದ್ದೇ ಇದೆ. ಹಿಂದೆ ಎಲ್ಲ ಕಡೆಯಲ್ಲೂ ಇದ್ದಿದ್ದು ಇದೇ. ಇವತ್ತು ಹಾಗೇನಿಲ್ಲ, ಅಷ್ಟೇ ವ್ಯತ್ಯಾಸ. ನನ್ನ ಮತ್ತು ನನ್ನ ನಂತರದ ತಲೆಮಾರು ಈ ತರ ಅಲ್ಲ. ಇವತ್ತು ಆನ್‌ಲೈನ್ ಡಾಟಾ ಮ್ಯಾನೇಜ್‌ಮೆಂಟ್ ಕೂಡ ಸಾಧ್ಯ. ಮಂಗಳೂರಿನಲ್ಲಿ ದುಡಿಯುತಿರುವ ವ್ಯಕ್ತಿಯ ಸಂಬಳ, ಸಾರಿಗೆ, ಭತ್ಯೆಯನ್ನು ಕೂಡ ಎಲ್ಲೋ ಆಸ್ಟ್ರೇಲಿಯಾದಲ್ಲಿ ಕೂತ ವ್ಯಕ್ತಿ ಲೆಕ್ಕ ಹಾಕಿ ಬ್ಯಾಂಕಿಗೆ ಹಾಕಲು ಸಾಧ್ಯವಿದೆ. ಬೆಳಿಗ್ಗೆ ಕಷ್ಟದಿಂದ ಎದ್ದು, ಎಲ್ಲಿಲ್ಲದ ಗಡಿಬಿಡಿಯಲ್ಲಿ ದಿನವಾರ್ತೆಯ ಕರ್ಮಕಾಂಡಗಳನ್ನೆಲ್ಲ ಮುಗಿಸಿ, ಶುಚಿಯಾಗದ ಸ್ನಾನ, ಧ್ಯಾನವಾಗದ ಪೂಜೆ, ರುಚಿ ತಿಳಿಯಲು ಸಾಧ್ಯವಿಲ್ಲದ ಟಿಫನ್ ಎಲ್ಲ ಮುಗಿಸಿ, ಮಕ್ಕಳನ್ನು ಹೆತ್ತ ತಪ್ಪಿಗೇ ರೆಡಿ ಮಾಡಿ ಶಾಲೆಯ ವ್ಯಾನಿಗೆ ದಬ್ಬಿ, ದಬ್ಬುವ ಮುನ್ನ ನಮ್ಮ ಕಾಲದಲ್ಲಿ ಹೇಗಿತ್ತು, ನಾವೆಲ್ಲ ಮೈಲುಗಟ್ಟಲೆ ನಡೆದೇ ಶಾಲೆಗೆ ಹೋಗುತ್ತಿದ್ದೆವು, ಹನ್ನೆರಡು ವರ್ಷಕ್ಕೆ ನಾವೇ ಜಡೆ ಹಾಕಿಕೊಳ್ಳುತ್ತಿದ್ದೆವು, ತಮ್ಮಂದಿರ ಕೆಲಸ ಮಾಡಿಕೊಡುತ್ತಿದ್ದೆವು, ಎಂದೆಲ್ಲ ಅವರಿಗೆ ಬೈಯುತ್ತಾ ಕೊರೆದು, ಅದು ಹೇಗೋ ಹೊತ್ತಿನೊಳಗೇ ಆಫೀಸು ತಲುಪಿದರೆ, ತಲುಪಿದ್ದೇ ಸಾಹಸವೆಂಬಂತೆ ಮುಂದಿನ ಅರ್ಧ ಒಂದು ಗಂಟೆ ಏನೂ ಕೆಲಸ ಮಾಡದೆ ಸುಧಾರಿಸಿಕೊಂಡು, ಜೀವನ ಪೂರ್ತಿ ಒಂದೇ ಕಂಪೆನಿಗೆ ದುಡಿದು, ಸಂಜೆ ಐದಾಗುತ್ತಲೇ ಗೋಲೀಬಾರಿಗೆ ಹೆದರಿ ಓಡುವವರ ಹಾಗೆ ಆಫೀಸಿನಿಂದ ಹೊರಬಿದ್ದು....

ಇದೆಲ್ಲ ಮುಂದಿನ ತಲೆಮಾರಿಗೆ ತಮಾಷೆಯಾಗಿ ಕಾಣುವುದು ಸಾಧ್ಯವಿದೆ. ಆಗ ಅವರು ಮನೆಯಲ್ಲೇ ಕೂತು ಹಲವಾರು ಕಂಪೆನಿಗಳ ತುಂಡು ತುಂಡು ಕೆಲಸ ಮಾಡಿಕೊಡುತ್ತ ಸಂಪಾದಿಸುವುದು ಸಾಧ್ಯ. ಅವರಿಗೆ ಈ ಆಫೀಸು, ಅಟೆಂಡೆನ್ಸು, ಮೆಮೊಗಳೆಲ್ಲ ಜೋಕುಗಳಾಗಿ ಕಾಣಿಸಿದರೆ ಅಚ್ಚರಿಯಿಲ್ಲ. ಆಫೀಸಿನಲ್ಲಿ ಕದ್ದು ಕಾದಂಬರಿ ಓದಿದ್ದು, ನಿದ್ದೆ ಮಾಡಿದ್ದು, ಅದಕ್ಕೆ ಬಾಸ್ ಮೈಮೇಲೆ ಬಂದಂತೆ ಕುಣಿದಾಡಿದ್ದು, ಶನಿವಾರ ಮಧ್ಯಾಹ್ನ ಶಾಲೆಯಿಲ್ಲದ ಗ್ರಹಚಾರಕ್ಕೆ ಪುಟ್ಟ ಮಕ್ಕಳೆಲ್ಲ ಆಫೀಸಿನಲ್ಲಿ ಠಿಕಾಣಿ ಹೂಡುತ್ತಿದ್ದುದು, ಅದಕ್ಕೆಲ್ಲ ಕೆಲವರ ಅಸೂಯೆ, ಜಗಳ ಸುರುವಾಗಿದ್ದು... ಎಲ್ಲ ಸಿಲ್ಲಿಯಾಗಿ ಕಾಣಬಹುದು. ಈಗ ಕಲಿಕೆ ಕೂಡ ಆನ್‌ಲೈನ್ ಆಗಿರುತ್ತ ಇದೆಲ್ಲ ಅಸಂಭವ ಸಂಗತಿಗಳಾಗಿ ಕಾಣಿಸಬೇಕಿಲ್ಲ. ಅನೇಕ ಕಡೆ ಈಗಲೇ ಇದು ಬೇರೆ ಬೇರೆ ಬಗೆಯಲ್ಲಿ ನಡೆಯುತ್ತಿದೆ ಕೂಡ.

ಇದೆಲ್ಲದರಿಂದ ನಾವು ಕೆಲವನ್ನು ನಿಶ್ಚಿತವಾಗಿಯೂ ಕಳೆದುಕೊಳ್ಳುತ್ತೇವೆ. ಇವತ್ತು ನಮಗೆ ಕಚೇರಿಗೇ ಸಲ್ಲುವ ಒಂದು ವ್ಯಕ್ತಿತ್ವ ಇದೆ. ಅಲ್ಲಿ ನಮ್ಮ ವೈಯಕ್ತಿಕ ಹವ್ಯಾಸಗಳ, ಸಾಂಸಾರಿಕ ಸಮಸ್ಯೆ, ನೋವು, ನಲಿವುಗಳು ರೂಪಿಸುವ ಒಂದು ವ್ಯಕ್ತಿತ್ವ ಒಳಗೊಳ್ಳುವುದಿಲ್ಲ. ಇವರು ಹಂಚಿಕೊಳ್ಳುವುದಿಲ್ಲ. ಒಂದು ರೀತಿಯಿಂದ ನೋಡಿದರೆ ಇವರಲ್ಲಿ ಗುಟ್ಟು ಹೆಚ್ಚು. ಅದೇನೂ ಗುಟ್ಟೇ ಅಂತಲ್ಲ, ಹಂಚಿಕೊಳ್ಳುವುದಕ್ಕೆ ವೇಳೆಯೂ ಇಲ್ಲ, ಅದಕ್ಕೆ ಯೋಗ್ಯವಾದ ಸ್ನೇಹ ಸಂಬಂಧ ರೂಪಿಸಿಕೊಳ್ಳುವುದೂ ಇಲ್ಲ; ಅದಕ್ಕೆ ಸಮಯವಿಲ್ಲ! ಇನ್ನು ಹೇಳಿಕೊಳ್ಳಬೇಕು ಅಂತ ಅನಿಸುವುದೂ ಇಲ್ಲವೇನೋ! ಆಫೀಸು ದುಡಿಮೆಯ ಆಚೆ ಇವರೊಂದಿಗೆ ಬರುವುದು ಇಲ್ಲವೇ ಇಲ್ಲ ಎನ್ನುವಷ್ಟು ದೂರ ದೂರ. ಹಾಗೆಯೇ ಆಫೀಸಿಗೆ ಇವರು ಪೂರ್ಣ ವ್ಯಕ್ತಿತ್ವದೊಂದಿಗೆ ಬರುವುದೂ ದೂರ ದೂರ.

ಹಿಂದೆಲ್ಲ ಆಫೀಸಿದನ್ನು ಮನೆಗೂ ಮನೆಯದ್ದನ್ನು ಆಫೀಸಿಗೂ ತರಬಾರದು ಎಂದು ಉಪದೇಶ ಕೊಡುವುದಿತ್ತು. ಉಪದೇಶ ಯಾಕಿರುತ್ತಿತ್ತು ಅಂದರೆ ಹಾಗೆ ಆಫೀಸು ಮನೆ ಮಿಕ್ಸಪ್ ಆಗುತ್ತಿತ್ತು, ಮತ್ತೆ ಮತ್ತೆ. ಇವತ್ತು ಅಂಥ ಉಪದೇಶದ ಅಗತ್ಯವೆ ಇಲ್ಲ. ಯಾರೂ ಮಿಕ್ಸಪ್ ಮಾಡುವುದೇ ಇಲ್ಲ ಎನ್ನಬೇಕು!

ಈ ಹಿರಿಯ ತಲೆಮಾರಿನ ಒಬ್ಬೊಬ್ಬರೇ ವಿದಾಯ ಹೇಳಿ ಹೋಗುವ ಹೊತ್ತಿನಲ್ಲಿ ನನಗೆ ಇದೆಲ್ಲ ಮನಸ್ಸಿಗೆ ಬರುತ್ತದೆ. ಇವತ್ತಿನ ನಮ್ಮ ಜೀವನಶೈಲಿಗೆ ಏಕಾಂತದ ಬದುಕು, ದ್ವೀಪದಂತೆ ಇರುವ ಬದುಕು ಹೆಚ್ಚು ಆಪ್ತವಾಗುತ್ತಿದೆಯೇ? ನಮ್ಮ ಮನೆಯ ರಚನೆ, ನಮ್ಮ ಮಕ್ಕಳ ಆಟ, ಪಾಠ ಎಲ್ಲದರಲ್ಲೂ ಈ ಸಾಮುದಾಯಿಕತೆ ದೂರವಾಗುತ್ತಿಲ್ಲವೆ? ಇದು ನಮ್ಮ ಸಾಹಿತ್ಯ, ಕಲೆ, ಅಭಿವ್ಯಕ್ತಿ ಮಾಧ್ಯಮ ಎಲ್ಲದರ ಮೇಲೂ ತನ್ನ ಪರಿಣಾಮ ಬೀರುವುದಿಲ್ಲವೆ? ಆಧುನಿಕ ಮ್ಯಾನ್ ಪವರ್ ಮ್ಯಾನೇಜ್‌ಮೆಂಟ್ ಇದನ್ನೆಲ್ಲ ಗಮನಿಸುತ್ತಿದೆಯೆ, ಔಟ್ ಸೋರ್ಸಿಂಗ್, ಕಾಂಟ್ರಾಕ್ಟ್ ಅಪಾಯಿಂಟ್‌ಮೆಂಟ್ ಅನುಕೂಲಕರ ಎಂದು ನಿಶ್ಚಯಿಸುವಾಗ?

ಅಲ್ಲಲ್ಲಿ ಆಫೀಸಿನ ಮಂದಿಯೆಲ್ಲ ಸೇರಿಕೊಂಡು ಪಿಕ್‌ನಿಕ್ ಹೋಗುತ್ತಿದ್ದಾರೆ. ಕೆಲವು ಆಫೀಸುಗಳಲ್ಲಿ ರಿಕ್ರಿಯೇಶನ್ ಕ್ಲಬ್ಬೋ ಮತ್ತೊಂದೋ ಇದೆ. ಹರಟೆ ಪಟ್ಟಾಂಗ ಕೂಡ ಕೆಲವೆಡೆ ನಡೆಯುತ್ತದೆ. ಇನ್ನು ಕೆಲವು ಐಟಿ ಬಿಟಿ ಕಂಪೆನಿಗಳು ನೌಕರರನ್ನು ರಿಲ್ಯಾಕ್ಸ್ ಆಗಲು ಬೇಕಾದ್ದನ್ನು ಮಾಡಿ ಎಂದು ಹೇಳಿರುವ ಘಟನೆಗಳೂ ಇವೆ! (ಇತ್ತೀಚೆಗೆ ದ ವೀಕ್ ಪತ್ರಿಕೆಯಲ್ಲಿ ಈ ಬಗ್ಗೆ ಕವರ್‌ಸ್ಟೋರಿ ಬಂದಿತ್ತು) ಎಲ್ಲ ಇರುತ್ತ ನಾವು ನಿಧಾನವಾಗಿ ಸಹಜ ವಾತಾವರಣವನ್ನು ಕಛೇರಿಗಳಲ್ಲಿ ಕಳೆದುಕೊಳ್ಳುತ್ತಿರುವುದಂತೂ ಮತ್ತೆ ಮತ್ತೆ ಮನಸ್ಸಿಗೆ ಬರುತ್ತಿರುವ ಸತ್ಯ. ಕಛೇರಿ ಸಂಸ್ಕೃತಿಯೇ ಹೊರಟು ಹೋಗುತ್ತಿರುವ ದಿನಗಳಲ್ಲಿ ಇದೇನು ವಿಶೇಷ ಎನ್ನುತ್ತೀರಾ?

Rating
No votes yet